varthabharthi


ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ

ಮೊಗವೀರರ ಮಹಾ ಪಯಣ

ವಾರ್ತಾ ಭಾರತಿ : 3 Jan, 2020
ಜಿ.ಪಿ. ಕುಸುಮ

ಮೊಗವೀರರ ಇನ್ನೊಂದು ಬೃಹತ್ ಸಾಧನೆಯೆಂದರೆ ಮೊಗವೀರ ವ್ಯವಸ್ಥಾಪಕ ಮಂಡಳಿ ಸ್ಥಾಪನೆ. ತಾಯ್ನಾಡಿನ ಬಂಧುಗಳ ಸಂಕಷ್ಟಗಳಿಗೆ ಪ್ರಾರಂಭದಿಂದಲೇ ಸಹಾಯಹಸ್ತ ನೀಡುತ್ತಾ ಬಂದ ಮಂಡಳಿಯ ಮುಂಬೈ ನೆಲದಲ್ಲಿ ಸಾಧಿಸಿದ ಸಾಧನೆ ಅಮೋಘವಾದುದು. ಮೊಗವೀರರು ಮುಂಬೈಗೆ ಬರುವಾಗ ಬರಿಗೈಯಲ್ಲಿ, ಅರೆಹೊಟ್ಟೆಯಲ್ಲಿ, ಅರೆಬಟ್ಟೆಯಲ್ಲಿ, ಅನಕ್ಷರಸ್ಥರಾಗಿ ಬಂದರೂ ಅವರ ಹೃದಯ ಸಾಂಸ್ಕೃತಿಕ, ಧಾರ್ಮಿಕವಾಗಿ ಶ್ರೀಮಂತವಾಗಿತ್ತು. ರಕ್ತಗತವಾಗಿದ್ದ ಒಗ್ಗಟ್ಟಿನಿಂದ ಎಲ್ಲರಿಗೂ ಸಹಾಯ ಮಾಡಿದರು. ಮುಂಬೈಯಲ್ಲಿ ಭಜನೆ, ಚೆಂಡಾಟಗಳಿಂದ ಕನ್ನಡಿಗರ ಸಂಘಟನೆಗಳು ಜನಸಾಮಾನ್ಯರ ಬದುಕಿಗೆ ಹ್ತತಿರವಾದವು. ರಾತ್ರಿ ಶಾಲೆಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮೊದಲಿಗೆ ಕ್ರಾಂತಿ ಮಾಡಿದವರು ಮೊಗವೀರರು.

ಸೆಷನ್ ನ್ಯಾಯಾಲಯದಲ್ಲಿ ಸಿಬ್ಬಂದಿಯಾಗಿರುವ ಜಿ.ಪಿ. ಕುಸುಮ ಮುಂಬೈ ಕನ್ನಡ ಲೋಕದಲ್ಲಿ ಚಿರಪರಿಚಿತ ಹೆಸರು. ಮೊಗವೀರ ಪತ್ರಿಕೆಯ ಮಾಜಿ ಸಂಪಾದಕಿಯಾಗಿರುವ ಕುಸುಮ, ಕತೆಗಾರ್ತಿಯಾಗಿ, ಕವಯತ್ರಿಯಾಗಿ ಗುರುತಿಸಿ ಕೊಂಡಿದ್ದಾರೆ. ಒಟ್ಟು ಏಳು ಕೃತಿಗಳು ಪ್ರಕಟಗೊಂಡಿವೆ.

ತುಳುನಾಡು ಹಲವಾರು ಜನಾಂಗಗಳ ನಿವಾಸಕ್ಕೆ ಆಶ್ರಯದಾತವಾಗಿದೆ. ಈ ಜನಾಂಗಗಳಲ್ಲಿ ಮೊಗವೀರ ಜನಾಂಗವೂ ಒಂದು. ಇವರ ಕುಲ ಕಸಬು ಮೀನುಗಾರಿಕೆ. ಮಾತೃಭಾಷೆ ತುಳು. ಮುಂಬೈಯಲ್ಲಿ ಬಾಳಿ ಬೆಳಗಿದ ಕನ್ನಡ ಮರೆಯಾಗಿ ಮತ್ತೆ ಅದನ್ನು ಉಳಿಸಿ ಬೆಳೆಸಲು ಬಂದವರು ಕರ್ನಾಟಕದವರು. ಈ ನಿಟ್ಟಿನಲ್ಲಿ ಆ ಮುಂಬೈ ನಗರದಲ್ಲಿ ಎರಡು ಶತಮಾನಗಳೂ ಮಿಕ್ಕಿದ ದೀರ್ಘಕಾಲದ ಜೀವನಗತಿಯಿರುವ ಮೊಗವೀರರು ಮುಂಬೈಗೆ ಆಗಮಿಸಿದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯವರಲ್ಲಿ ಮೊದಲಿಗರೆಂದು ಗುರುತಿಸಲ್ಪಡುತ್ತಾರೆ. ಯಕ್ಷಗಾನ, ಕುಸ್ತಿಯಂತಹ ಶ್ರೇಷ್ಠ ಮಟ್ಟದ ಕಲೆಯನ್ನು ವಿಶ್ವಕ್ಕೆ ನೀಡಿದ ಶ್ರೇಯಸ್ಸು ಪಡೆದ ಕರ್ನಾಟಕದ ಕರಾವಳಿಯನ್ನು ಬಿಟ್ಟು ಸಾವಿರ ಮೈಲು ದೂರದ ಮುಂಬೈಗೆ ಆಕರ್ಷಿತರಾಗಿ, ಮುಂಬೈಯನ್ನೇ ತಮ್ಮ ಕರ್ಮಭೂಮಿಯನ್ನಾಗಿ ಆಯ್ದುಕೊಂಡು ಉದ್ಯೋಗ, ಶಿಕ್ಷಣ, ಸಾಂಸ್ಕೃತಿಕ ವಲಯಗಳಲ್ಲಿಯ ಅವರ ಸಿಧಿ- ಸಾಧನೆಗಳು ರೋಮಾಂಚನಕಾರಿಯಾದುದು.

ತಾಯ್ನಡಿನಲ್ಲಿರುವ ತಮ್ಮ ಸಾಂಪ್ರದಾಯಿಕ ಸಂಘಟನೆ ಗಳಾದ ಗ್ರಾಮಸಭೆ, ಮೂಲಸ್ಥಾನ ಸಭೆಗಳ ಶಾಖೆಗಳನ್ನು ಮುಂಬೈಯಲ್ಲೂ ಹುಟ್ಟು ಹಾಕಿ ಆ ಮೂಲಕ ಹುಟ್ಟೂರಿನ ಸಂಕಷ್ಟಗಳಲ್ಲಿ, ಪ್ರಗತಿಯಲ್ಲಿ ಸಹಭಾಗಿಗಳಾಗುತ್ತಾ ಬಂದ ಮೊಗವೀರರು ಕರ್ಮಭೂಮಿಯಾದ ಮುಂಬೈ ನಗರದಲ್ಲೂ ಸಂಘಟನೆಯನ್ನು ಮೆರೆದವರು.

ಕ್ರಿ.ಶ. 1808ರಿಂದೀಚೆಗೆ ಮುಂಬೈಯಲ್ಲಿ ನೆಲೆನಿಂತಿರುವ ಮೊಗವೀರರು ಸಾಂಘಿಕ ಸಂಘಟನೆಯ ಮೂಲಕ ತಮ್ಮ ಅಸ್ತಿತ್ವವನ್ನು ಹೊರಜಗತ್ತಿಗೆ ಕಾಣಿಸಿಕೊಂಡವರು. ಈ ಬುಡಕಟ್ಟು ಜನಾಂಗ ಗ್ರಾಮ ಪಂಚಾಯತ್ ಪದ್ಧತಿಯನ್ನು ಘೋಷಿಸಿಕೊಂಡು ಬಂದು ಪ್ರಸಿದ್ಧರಾದವರು. ಸಾಹಸಕ್ಕೆ, ಒಗ್ಗಟ್ಟಿಗೆ ಹೆಸರಾದವರು. ಸಹಬಾಳ್ವೆಯನ್ನು ಅನಾದಿ ಕಾಲದಿಂದಲೂ ಮೈಗೂಡಿಸಿಕೊಂಡು ಬಂದಿರುವ ಈ ಜನಾಂಗವು ಕಾಲಾಂತರದಲ್ಲಿ ಆಧುನಿಕತೆಯನ್ನು ಬರಮಾಡಿಕೊಳ್ಳುತ್ತಾ ತಮ್ಮ ನೆಲೆಗಳನ್ನು ವಿಸ್ತರಿಸಿಕೊಂಡವರು.

ಇಲ್ಲಿ ನೆಲೆನಿಂತ ಮೊಗವೀರರ ಸಾಮಾಜಿಕ, ಸಾಂಸಾರಿಕ, ಸಾಂಸ್ಕೃತಿಕ, ಧಾರ್ಮಿಕ ಜೀವನದ ಸ್ವರೂಪ ಮತ್ತು ವೈಶಿಷ್ಟ, ಅವರು ಮೈಗೂಡಿಸಿಕೊಂಡು ಬಂದಿರುವ ಸಂಸ್ಕಾರ, ಸಂಪ್ರದಾಯ, ಬುಡಕಟ್ಟುಗಳು, ವೃತ್ತಿ, ಸಾಂಘಿಕ ಶಕ್ತಿ, ಗಳಿಸಿದ ಸಿಧಿ ಸಾಧನೆಗಳ, ಸತ್ಯ-ಧರ್ಮ, ನ್ಯಾಯಗಳ ಉಳಿವಿಗಾಗಿ ನಡೆಸಿದ ಹೋರಾಟ, ಅನ್ಯಾಯದ ವಿರುದ್ಧ ತೋರಿದ ಪ್ರತಿಭಟನೆಯ ಸ್ವರೂಪ ಇವೆಲ್ಲವುಗಳ ಮೂಲಕ ಪ್ರಸ್ತುತ ಸ್ಥಿತಿಗತಿಯ ವಿಚಾರವನ್ನು ತಿಳಿಯಬಹುದಾಗಿದೆ. ಮೊಗವೀರರು ಮುಂಬೈಗೆ ವಲಸೆ ಬಂದವರು. ವಲಸೆ ಜಾಗತಿಕ ಮಟ್ಟದಲ್ಲಿ ನಡೆಯುವ ಪ್ರಕ್ರಿಯೆ. ಜೀವನೋಪಾಯದ ಸಾಧನಗಳ ಹುಡುಕಾಟವೇ ವಲಸೆಯ ಮುಖ್ಯ ಉದ್ದೇಶವಾಗಿರುತ್ತದೆ. ಹೊರನಾಡ ಕನ್ನಡಿಗ ಭಾಷೆಯ ಮಟ್ಟಿಗೆ ಸ್ವಾತಂತ್ರವುಳ್ಳವನೂ ಹೌದು. ಸ್ವಭಾಷೆ, ಸಂಸ್ಕೃತಿಯ ಅಭಿಮಾನಿಯಾಗಿದ್ದಲ್ಲಿ ತಾನು ನೆಲೆಸಿದ ನೆಲೆಯಲ್ಲಿ ಸ್ವಭಾಷಿಕರು ಸಿಕ್ಕಾಗ ಅವರೊಂದಿಗೆ ಸೇರಿಕೊಂಡು ಒಂದು ಕೂಟವನ್ನು, ಸಂಘವನ್ನು ಕಟ್ಟಿಕೊಂಡು ಅವರನ್ನು ಒಂದುಗೂಡಿಸಲು ಪ್ರಯತ್ನಿಸುತ್ತಾನೆ.

ಸಮುದ್ರೋತ್ಪತ್ತಿಯಿಂದ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದ ಮೊಗವೀರ ಸಮುದಾಯಕ್ಕೆ ಅದೇ ಸಮುದ್ರ ಮಾರ್ಗ ಮುಂಬೈಯತ್ತ ದಾರಿ ತೋರಿತು. ಈ ನಗರಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದುದರಿಂದ ತಾಯ್ನಿಡಿನ ಕಷ್ಟಕ್ಕಿಂತ ಶ್ರಮದಾಯಕ ಕುಲಕಸಬಿಗಿಂತ ಮುಂಬೈಯಲ್ಲಿ ಉಳಕೊಳ್ಳುವ ವಿಚಾರ ಬಂದಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಮಚ್ವೆ, ಪತ್ತೇಮಾರಿ, ಮಂಜು ಮುಖಾಂತರವೇ ಮೊಗವೀರರು ಈ ಮುಂಬೈ ನಗರವನ್ನು ತಲುಪಿದ್ದರೆನ್ನುವುದನ್ನು ಚರಿತ್ರೆ ಸಾರುತ್ತದೆ. ಹಡಗುಗಳಲ್ಲಿ ಕಲಾಸಿಗಳಾಗಿಯೋ, ಸರಕು ಎತ್ತುವವರಾಗಿಯೋ ಮುಂಬೈ ಸೇರಿದ ಮೊಗವೀರರು ಮುಂಬೈಯಲ್ಲಿ ಬದುಕು ಕಟ್ಟಿಕೊಂಡವರು ಎನ್ನುವುದು ಗಮನಾರ್ಹವಾದುದು.

‘‘ಕ್ರಿ.ಶ.1808ನೇ ಇಸವಿ ಮೊದಲ್ಗೊಂಡು ಮುಂಬೈ ನಗರಕ್ಕೆ ಮಚ್ವೆ, ಮಂಜಿ, ಪತ್ತೇಮಾರಿಗಳ ಮೂಲಕ ಉದ್ಯೋಗ ವೃತ್ತಿಗಳಿಗಾಗಿ ಮೊಗವೀರರು ಬಂದು ನೆಲೆನಿಂತರು’’ ಎನ್ನುವುದನ್ನು ‘ಮೋಗವೀರ ಮಹಾಜನ ಸಭಾ. ಮುಂಬೈ’ ಇವರು ಆಡಳಿತ ಸಭೆಯ ಅನುಮತಿಯಿಂದ 09-12-1940 ರಂದು ಪ್ರಕಟಪಡಿಸಿದ ವಿನಂತಿ ಪತ್ರವೊಂದು ಪುಷ್ಟೀಕರಿಸುತ್ತದೆ. ಇದು ಲಿಖಿತರೂಪದಲ್ಲಿ ದೊರೆಯುವ ದಾಖಲೆಯೂ ಹೌದು. ಇದೇ ವಿನಂತಿ ಪತ್ರದಲ್ಲಿ ಸುಮಾರು ಒಂದು ಶತಮಾನಕ್ಕೆ ಮಿಕ್ಕಿದ ವರುಷಗಳ ಮೊದಲೇ ತಮ್ಮದೊಂದು ಒಕ್ಕಟ್ಟಿನ ‘ಮಂಗಳೂರು ಬಾರಕೂರು (ಮೂರು ಹೋಬಳಿ)’ ಎಂಬ ಪ್ರಾಮುಖ್ಯ ಸಂಸ್ಥೆಯನ್ನು ಇಲ್ಲಿ ಸ್ಥಾಪಿಸಿಕೊಂಡು ಐಕ್ಯಭಾವದಿಂದ ಪರಸ್ಪರ ಸಹಕಾರದಿಂದ ಜಾತಿಹಿತ ಕಾರ್ಯಸಾಧನೆಯನ್ನು ಸಾಧಿಸಿ ಜಾತಿಯ ಮೇಲ್ಮೆಯನ್ನು ಬಯಸಿಕೊಂಡಿದ್ದರು ಎನ್ನುವ ಸಾಲುಗಳು ಮೊಗವೀರರ ವಲಸೆಯ ಕಾಲಘಟ್ಟವನ್ನು ದಾಖಲಿಸುತ್ತದೆ. ಅಂದರೆ ಸಂಘ ಸ್ಥಾಪನೆಯಾಗುವ ಅದೆಷ್ಟೋ ವರ್ಷಗಳ ಹಿಂದೆ ಕ್ರಿ.ಶ. 18ನೇ ಶತಮಾನದ ಉತ್ತರಾರ್ಧದಲ್ಲಿ ಮೊಗವೀರರು ಇಲ್ಲಿ ನೆಲೆಕಂಡುಕೊಂಡಿರಬಹುದು.

ಕ್ರಿ.ಶ. 1840ರ ಸುಮಾರಿಗೆ ‘‘ಮಂಗಳೂರು ಬಾರ್ಕೂರು (ಮೂರು ಹೋಬಳಿ)’’ ಸಂಸ್ಥೆಯನ್ನು ಇಲ್ಲಿ ಕಟ್ಟಿಕೊಂಡು ಅವರು ಕ್ರಿ.ಶ. 1884ರಲ್ಲಿ ‘ಬಾರ್ಕೂರು ಹೋಬಳಿ’ಸಂಸ್ಥೆಯನ್ನು ಹುಟ್ಟುಹಾಕಿದರು.

ಮುಂಬೈಯಲ್ಲಿ ಪ್ರಕಟವಾಗುತ್ತಿದ್ದ ‘ನವಯುಗ’ ಪತ್ರಿಕೆಯ ತಾ. 24-04-1930ರ ಆವೃತ್ತಿಯಲ್ಲಿ ಪ್ರಕಟವಾದ ವರದಿಯೊಂದು ‘ಬಾರ್ಕೂರು ಹೋಬಳಿ’ ಕ್ರಿ.ಶ. 1884ರಲ್ಲಿ 16 ಗ್ರಾಮಸಭೆಗಳ ಮುಂಬೈಯ ಶಾಖೆಗಳಿಂದ (ಪಲಿಮಾರಿನಿಂದ ಪೊಲಿತ್ಯ ತನಕ) ಸ್ಥಾಪಿಸಲ್ಪಟ್ಟಿದೆಯೆಂದು ದಾಖಲಿಸಿದೆ. ಮುಂಬೈಯಲ್ಲಿ ಹೋಬಳಿ ಸಭೆಗಳು ಕ್ರಿಯಾಶೀಲವಾಗಿದ್ದ ಮೊಗವೀರರನ್ನು ಒಗ್ಗೂಡಿಸುವಲ್ಲಿ ಕಾರ್ಯನಿರತವಾಗಿದ್ದವು. ಬಳಿಕ ಈ ಮಾಯಾನಗರಿಯಲ್ಲಿ ‘ಶ್ರೀಮದ್ಭಾರತ ಮಂಡಳಿ’ ಕ್ರಿ.ಶ. 1878ರಲ್ಲಿ ಜನ್ಮತಾಳಿತು. ಮುಂಬೈಯಲ್ಲಿ ಈ ಧಾರ್ಮಿಕ ಸಂಸ್ಥೆಯ ಹೆಸರು ಕೇಳದ ಕನ್ನಡಿಗಲಿಲ್ಲ. ಮುಂಬೈ ಕನ್ನಡಿಗರ ಪ್ರಥಮ ಸಂಸ್ಥೆ. ಸರ್ ದಿನ್‌ಶಾ ಪಿಟಿಟ್ ಕಂಪೆನಿಯ ಕಚೇರಿಯಲ್ಲಿ ಇದರ ಹುಟ್ಟು. ಈ ಸಂಸ್ಥೆಯ ಉದ್ದೇಶ ಮಂಡಳಿಯ ಹಸ್ತಪ್ರತಿಯಲ್ಲಿರುವಂತೆ ‘ಆಪತ್ಕಾಲ’ದಲ್ಲಿ ಅಭಯದೋರುವ ಆಶ್ರಯಸ್ಥಾನವಾಗಿಯೂ ಆಧ್ಯಾತ್ಮಿಕ ವಿಚಾರಸಾರವನ್ನು ಬೋಧಿಸುವ ಧರ್ಮಕ್ಷೇತ್ರವಾಗಿಯೂ ಭಾಗವತ ಪುರಾಣಗಳ ಪುನರ್ವಿಮರ್ಶಕ ಜ್ಞಾನಪೀಠ ಹಾಗೂ ಭಾರತೀಯ ಸನಾತನ ಸಂಸ್ಕೃತಿಯ ಅಧ್ಯಯನ ಶಾಲೆಯಾಗಿಯೂ ‘ಶ್ರೀಮದ್ಭಾರತ ಮಂಡಳಿ’ ಇದೆ. ಎಂದು ಈ ಪ್ರಸಿದ್ಧ ಧರ್ಮಕ್ಷೇತ್ರದ ಸ್ಥಾಪಕ ದಿ.ಕಣ್ಣಂಗಾರು ರಾಮ ಪಂಜೆಯವರು. ಮುಂಬೈ ಸರ್ವ ಮೊಗವೀರರಲ್ಲದೆ ಜಾತಿ ಮತ ಭೇದವಿಲ್ಲದೆ ಇಲ್ಲಿಗೆ ಸರ್ವರೂ ಬಂದು ಹೋಗುತ್ತಾರೆ. ಶ್ರೀ ರಾಮ ಪಂಜೆಯವರು ‘ಶ್ರೀ ಶಂಕರ ಸಂಹಿತೆ’ ( ಕವಿ ಅನಾಮಧೇಯ)ಯನ್ನು ಸಂಗ್ರಹಿಸಿ ಇತರರಿಂದ ಪರಿಷ್ಕರಿಸಿ ಕ್ರಿ.ಶ. 1884ರಲ್ಲಿ ಶಾಕುರದ್ವಾರ ಮುಂಬೈ ಭಾರತೀಯ ಮುದ್ರಣ ಮಂತ್ರಾಲಯದಲ್ಲಿ ಛಾಪಿಸಿದರು’.

ಕ್ರಿ.ಶ. 1889ರಲ್ಲಿ ‘ತುರಂಗ ಭಾರತ’ವನ್ನು ದಿ.ರಾಮ ಪಂಜಿಯವರು ಕೆ.ವೆಂಕಟರಮಣ ಶಾಸ್ತ್ರೀ ಸೂರಿ ಇವರಿಂದ ಪರಿಶೋಧಿಸಿ ಮುಂಬೈ ಭಾರತೀ ಛಾಪಖಾನೆಯಲ್ಲಿ ಛಾಪಿಸಿದರು. ಹೀಗೆ 2 ಬೃಹತ್ ಗ್ರಂಥಗಳು ಶ್ರೀಮದ್ಭಾರತ ಮಂಡಳಿಯಿಂದ ಪ್ರಕಟಿಸಲ್ಪಟ್ಟವು.

ಮೊಗವೀರರ ಇನ್ನೊಂದು ಬೃಹತ್ ಸಾಧನೆಯೆಂದರೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಸ್ಥಾಪನೆ. ತಾಯ್ನಾಡಿನ ಬಂಧುಗಳ ಸಂಕಷ್ಟಗಳಿಗೆ ಪ್ರಾರಂಭದಿಂದಲೇ ಸಹಾಯಹಸ್ತ ನೀಡುತ್ತಾ ಬಂದ ಮಂಡಳಿಯ ಮುಂಬೈ ನೆಲದಲ್ಲಿ ಸಾಧಿಸಿದ ಸಾಧನೆ ಅಮೋಘವಾದುದು. ಮೊಗವೀರರು ಮುಂಬೈಗೆ ಬರುವಾಗ ಬರಿಗೈಯಲ್ಲಿ, ಅರೆಹೊಟ್ಟೆಯಲ್ಲಿ, ಅರೆಬಟ್ಟೆಯಲ್ಲಿ, ಅನಕ್ಷರಸ್ಥರಾಗಿ ಬಂದರೂ ಅವರ ಹೃದಯ ಸಾಂಸ್ಕೃತಿಕ, ಧಾರ್ಮಿಕವಾಗಿ ಶ್ರೀಮಂತವಾಗಿತ್ತು. ರಕ್ತಗತವಾಗಿದ್ದ ಒಗ್ಗಟ್ಟಿನಿಂದ ಎಲ್ಲರಿಗೂ ಸಹಾಯ ಮಾಡಿದರು. ಮುಂಬೈಯಲ್ಲಿ ಭಜನೆ, ಚೆಂಡಾಟಗಳಿಂದ ಆರಂಭವಾದ ಕನ್ನಡಿಗರ ಸಂಘಟನೆಗಳು ಜನಸಾಮಾನ್ಯರ ಬದುಕಿಗೆ ಹ್ತತಿರವಾದದ್ದು. ಅವರಿಂದ ಉದ್ಘಾಟನೆಗೊಂಡ ರಾತ್ರಿ ಶಾಲೆಗಳಿಂದ ಜ್ಞಾನದ ಹಸಿವನ್ನು ಇಂಗಿಸಲು ಶಿಕ್ಷಣ ಕ್ಷೇತ್ರದಲ್ಲಿ ಮೊದಲಿಗೆ ಕ್ರಾಂತಿ ಮಾಡಿದವರು ಮೊಗವೀರರು.

ಮುಂಬೈ ಕನ್ನಡಿಗರ ಸಾಂಸ್ಕೃತಿಕ ಚಟುವಟಿಕೆಗಳಿಗೆ ನಾಂದಿ ಹಾಡಿದ ಶ್ರೀಮದ್ಭಾರತ ಮಂಡಳಿಯು 1881ರಲ್ಲಿ ‘ತುರಂಗ ಭಾರತ’ ಗ್ರಂಥ ಗಳನ್ನು ಪ್ರಕಟಿಸಿದೆ. ಇಲ್ಲಿಂದ ಸ್ಫೂರ್ತಿ ಪಡೆದ ಮೊಗವೀರ ಬಂಧುಗಳು 1902ರಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯನ್ನು ಸ್ಥಾಪನೆ ಮಾಡಿದರು.

ಮುಂಬೈಯಲ್ಲಿ ಕನ್ನಡ ಶಾಲೆಗಳ, ಕನ್ನಡ ಗ್ರಾಂಥಾಲಯಗಳ ಸ್ಥಾಪನೆಗೆ ಪಥಪ್ರದರ್ಶನ ನೀಡಿದ ಕೀರ್ತಿ ಮೊಗವೀರ ವ್ಯವಸ್ಥಾಪಕ ಮಂಡಳಿಗೆ ಸಲ್ಲುತ್ತದೆ. ಇವರು 1908ರಲ್ಲಿ ಕೋಟೆ ಕ್ಷೇತ್ರದಲ್ಲಿ ಪ್ರಾರಂಭಿಸಿದ ಮೊಗವೀರ ಫ್ರೀ ನೈಟ್ ಹೈಸ್ಕೂಲ್ ಕನ್ನಡಿಗರ ಪ್ರಥಮ ರಾತ್ರಿ ಶಾಲೆ ಮಾತ್ರವಲ್ಲದೆ ಅಖಿಲ ಭಾರತದಲ್ಲಿ ರಾತ್ರಿ ಶಾಲೆಗಳ ಪ್ರಾಚೀನತೆಯ ನೆಲೆಯಲ್ಲಿ ಎರಡನೇಯ ಸ್ಥಾನದಲ್ಲಿದೆ. ವಿದ್ಯಾರ್ಥಿಗಳ ಕೊರತೆಯಿಂದ ಮುನ್ನಡೆಯಲಾರದೆ ಅದು ಮುಚ್ಚಿ ಹೋಯಿತು.

ಸ್ತ್ರೀ ಶಿಕ್ಷಣದ ಮಹತ್ವವನ್ನು ಮನಗಂಡು ಮೊಗವೀರ ವ್ಯವಸ್ಥಾಪಕ ಮಂಡಳಿಯು 1930ರಲ್ಲಿ ಸ್ಥಾಪಿಸಿದ ಹೆಣ್ಣು ಮಕ್ಕಳ ಶಾಲೆಯು ಮುಂಬೈ ಕನ್ನಡಿಗರ ಪ್ರಥಮ ಖಾಸಗಿ ಹಗಲು ಶಾಲೆಯಾಗಿದೆ. ಇವರಿಂದಲೇ 1941ರಲ್ಲಿ ಕನ್ನಡ ಬಾಲಕರ ಹಗಲು ಪ್ರಾಥಮಿಕ ಶಾಲೆ ಪ್ರಾರಂಭವಾಯಿತು. ಮುಂದೆ ಈ ಶಾಲೆಗಳನ್ನು ಮುಂಬೈ ಮಹಾನಗರ ಪಾಲಿಕೆಯ ವಶಕ್ಕೆ ಒಪ್ಪಿಸಲಾಯಿತು.

ಶಿಕ್ಷಣ ವಲಯದಲ್ಲಿ ಕ್ರಾಂತಿ ಮಾಡಿದ ಮೊಗವೀರ ವ್ಯವಸ್ಥಾಪಕ ಮಂಡಳಿ:

ಕ್ರಿ.ಶ. 1904ರಲ್ಲೇ ವಿದ್ಯಾರ್ಥಿ ವೇತನ ನೀಡುವ ಯೋಜನೆ ಯನ್ನು ಅನುಷ್ಠಾನಕ್ಕೆ ತರುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕೃಷಿ ಮಾಡತೊಡಗಿತು. ಸಮುದಾಯದಲ್ಲಿದ್ದ ಅಕ್ಷರಜ್ಞಾನದ ಕೊರತೆಯನ್ನು ನೀಗಿಸಲು ಈ ಮೂಲಕ ಅಣಿಯಾಯಿತು. ಮಂಡಳಿಯ ಶಿಕ್ಷಣ ಕ್ಷೇತ್ರದಲ್ಲಿಯ ಅದ್ಭುತ ಸಾಧನೆಯೆಂದರೆ 1908ರಲ್ಲಿ ಮೊಗವೀರ ಧರ್ಮಾರ್ಥ ರಾತ್ರಿ ಶಾಲೆಯನ್ನು ಸ್ಥಾಪಿಸಿರುವುದು, ಅದು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಹಗಲು ದುಡಿದು ಬದುಕುತ್ತಿದ್ದ ವಿದ್ಯಾರ್ಥಿಗಳಿಗೆ ವರದಾನವಾಯಿತು. ಮುಂಬೈ ಪರಿಸರದಲ್ಲಿ ವಿದ್ಯಾದಾನ ಮಾಡುವ ಮಹತ್ಕಾರ್ಯ ಮೊಗವೀರ ವ್ಯವಸ್ಥಾಪಕ ಮಂಡಳಿಯ ಐತಿಹಾಸಿಕ ಸಾಧನೆಯಾಗಿದೆ.

ಮೊಗವೀರ ವ್ಯವಸ್ಥಾಪಕ ಮಂಡಳಿಯ ಪ್ರಮುಖ ಸಾಧನೆಗಳು

   

     1902 ಸ್ಥಾಪನೆ (ಆಗಸ್ಟ್ 9, 1902).

    1904 ವಿದ್ಯಾರ್ಥಿವೇತನದ ಆರಂಭ.

    1908 ಮುಂಬೈಯಲ್ಲಿ ಪ್ರಪ್ರಥಮ ಕನ್ನಡ ರಾತ್ರಿ ಶಾಲೆಯ ಸ್ಥಾಪನೆ 1922 ಮುಂಬೈಯಲ್ಲಿ ಪ್ರಥಮ ‘ಮೊಗವೀರ ಧರ್ಮಾರ್ಥ ವಾಚನಾಲಯ ಮತ್ತು ಪುಸ್ತಕ ಭಂಡಾರ’ದ ಆರಂಭ.

    1927 ರಜತ ಮಹೋತ್ಸವ ಆಚರಣೆ.

    1929 ಸೊಸೈಟಿ ರಿಜಿಸ್ಟ್ರೇಶನ್ ಆ್ಯಕ್ಟ್ 1860ರ ಪ್ರಕಾರ ನೋಂದಾವಣೆ.

    1930 ಮುಂಬೈಯ ಪ್ರಥಮ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಹಗಲು ಶಾಲೆಯ ಸ್ಥಾಪನೆ.

    1938 ಮೊಗವೀರ ರಾತ್ರಿ ಶಾಲೆಯಲ್ಲಿ ಬಾಲವೀರ ದಳದ ಸ್ಥಾಪನೆ. 1939 ಮಂಡಳಿಯ ಮುಖವಾಣಿ ‘ಮೊಗವೀರ’ ತ್ರೈಮಾಸಿಕದ ಪ್ರಕಟನೆ ಆರಂಭ.

    1941 ಗಂಡು ಮಕ್ಕಳಿಗಾಗಿ ಕನ್ನಡ ಪ್ರಾಥಮಿಕ ಶಾಲೆಯ ಸ್ಥಾಪನೆ 1945 ಮೊಗವೀರ ಗಾರ್ಡ್ಸ್ (ಸ್ವಯಂಸೇವಕ ದಳ) ಸ್ಥಾಪನೆ

    1946 ಮುಂಬೈ ಮೊಗವೀರರ ಪ್ರಥಮ ಆರ್ಥಿಕ ಸಂಸ್ಥೆ- ಮೊಗವೀರ ಸಹಕಾರಿ ಬ್ಯಾಂಕಿನ ಸ್ಥಾಪನೆ.

    1947 ವಾಚನಾಲಯ ಮತ್ತು ಪುಸ್ತಕ ಭಂಡಾರ ವಿಭಾಗದ ರಜತ ಮಹೋತ್ಸವ.

    1953 ಮಂಡಳಿಯನ್ನು ಮುಂಬೈ ಪಬ್ಲಿಕ್ ಟ್ರಸ್ಟ್ ಆ್ಯಕ್ಟ್ 1950ರ ಪ್ರಕಾರ ನೋದಾಯಿಸಿದ್ದು.

    1954 ಮಂಡಳಿಯ ಸುವರ್ಣ ಮಹೋತ್ಸವ ಆಚರಣೆ.

    1959 ಮೊಗವೀರ ರಾತ್ರಿ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ.

    1961 ಮೊಗವೀರ ತ್ರೈಮಾಸಿಕವನ್ನು ಮಾಸಿಕವನ್ನಾಗಿ ಪ್ರಾರಭಿಸಿದ್ದು.

    1961 ದಕ್ಷಿಣ ಕನ್ನಡದ ಸುರತ್ಕಲ್‌ನಲ್ಲಿ ಮಹಾಲಕ್ಷ್ಮೀ ಮುದ್ರಣಾಲಯದ ಸ್ಥಾಪನೆ.

    1962 ಮಂಡಳಿಯ ವಜ್ರಮಹೋತ್ಸವ.

    1963 ಮೊಗವೀರರ ಪ್ರಥಮ ಗೃಹ ನಿರ್ಮಾಣ ಸಂಸ್ಥೆ-ಮಹಾಲಕ್ಷ್ಮೀ ಹೌಸಿಂಗ್ ಸೊಸೈಟಿ ಸ್ಥಾಪನೆ.

    1963 ಮಂಗಳೂರಿನಲ್ಲಿ ಶ್ರೀ ಮಹಾಲಕ್ಷ್ಮೀ ಸಾರ್ವಜನಿಕ ಮಂದಿರದ ಸ್ಥಾಪನೆ.

    1970 ಇಂಗ್ಗಿಷ್ ಮಾಧ್ಯಮದ ಹಗಲು ಶಾಲೆ ‘ಮುಕ್ತಾನಂದ ಪ್ರೌಢ ಶಾಲೆ’ಯ ಸ್ಥಾಪನೆ.

    1971 ಮೊಗವೀರ ರಾತ್ರಿ ಪ್ರೌಢ ಶಾಲೆಯ ವಜ್ರ ಮಹೋತ್ಸವ.

    1972 ಮಂಗಳೂರಿನಲ್ಲಿ ಮಹಿಳೆಯರಿಗಾಗಿ ಕೈಗಾರಿಕಾ ಶಾಲೆಯ ಸ್ಥಾಪನೆ.

    1973 ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಮುಂಬೈಯಿಂದ ಅತ್ಯುತ್ತಮ ಕನ್ನಡ ಸಂಸ್ಥೆ’ ಬಿರುದು ಪ್ರದಾನ.

    1978 ಮಂಡಳಿಯ ಪ್ಲಾಟಿನಂ ಜ್ಯುಬಿಲಿಯ ಉದ್ಘಾಟನೆ.

    1989 ‘ಮೊಗವೀರ’ ಮಾಸಿಕದ ಸುವರ್ಣ ಮಹೋತ್ಸವ.

    1992 ಮುಕ್ತಾನಂದ ಹೈಸ್ಕೂಲಿನ ರಜತ ಮಹೋತ್ಸವ.

    1996 ಅಂಧೇರಿಯಲ್ಲಿ ‘ಮೊಗವೀರ ಭವನ’ದ ಉದ್ಘಾಟನೆ.

    1996 ಮದುವೆ ಮಾಹಿತಿ ಕೇಂದ್ರ ಆರಂಭ.

    1999 ‘ಮೊಗವೀರ’ ಮಾಸಿಕದ ವಜ್ರ ಮಹೋತ್ಸವ.

    2001 ಮಂಡಳಿಯ ಪ್ರಥಮ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಉದ್ಘಾಟನೆ.

    2002 ಶತಮಾನೋತ್ಸವ ಆಚರಣೆ- ಮಹಾರಾಷ್ಟ್ರದ ಆಗಿನ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಅವರಿಂದ ಉದ್ಘಾಟನೆ (14-12-2002 ಮತ್ತು 15-12-2002)

    2003 ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ಮಂಡಳಿಯ ಶಾಖೆ ಉದ್ಘಾಟನೆ.

    2004 ವಿವಿಧೋದ್ದೇಶ ಯೋಜನೆಗಳಿಗಾಗಿ ಮಂಗಳೂರಿನಲ್ಲಿ 3.5 ಎಕರೆ ಜಾಗ ಖರೀದಿ.

    2007 ಥಾಣೆ ಜಿಲ್ಲೆಯ ಡೊಂಬಿವಲಿಯಲ್ಲಿ ಮಂಡಳಿಯ ಶಾಖೆ ಉದ್ಘಾಟನೆ.

    2008 MVM junior College of Commerce ಪ್ರಾರಂಭ.

    20-4-2008 ಮಂಗಳೂರಿನ ಮುಕ್ಕದಲ್ಲಿ ಸ್ವಾಸ್ಥ ಸಂರಕ್ಷಣಾ ಕೇಂದ್ರ ಮತ್ತು ಸಮುದಾಯಕ್ಕೆ ಶಂಕುಸ್ಥಾಪನೆ. ಜಿ.ಶಂಕರ್ ಅವರಿಂದ.

    17-8-2008 ಮೊ.ವ್ಯ ಮಂಡಳಿಯ ವಿಶನ್-2010ರ ಮುಂಬೈ ಯೋಜನೆಯ ಪ್ರಥಮ ಹಂತದ ಕಾಮಗಾರಿಗೆ (ಮೊಗವೀರ ಎಜ್ಯುಕೇಶನ್ ಕ್ಯಾಂಪಸ್ ಬಿಲ್ಡಿಂಗ್) ಅಬುಧಾಬಿಯ ಡಾ.ಬಿ. ರಾಘರಾಮ್ ಶೆಟ್ಟಿಯವರಿಂದ ಶಂಕುಸ್ಥಾಪನೆ.

    20-11-2008 ಮೊಗವೀರ ವ್ಯವಸ್ಥಾಪಕ ಮಂಡಳಿಯ ವೆಬ್‌ಸೈಟ್ ಪ್ರಾರಂಭ.

        2009 ವೃತ್ತಿ ಪರ ಶಿಕ್ಷಣಕ್ಕಾಗಿ NIIT ಮತ್ತು Indo American Society ಯೊಡನೆ ಐತಿಹಾಸಿಕ ಒಡಂಬಡಿಕೆ.

     2010 ಹೊರನಾಡಿನಲ್ಲಿ 70 ವರ್ಷದಿಂದ ನಿರಂತರ ಪ್ರಕಟನೆಗೊಳ್ಳುತ್ತಿರುವ ‘ಮೊಗವೀರ’ ಪತ್ರಿಕೆಯ ಕನ್ನಡ- ನಾಡು -ನುಡಿ ಸಾಹಿತ್ಯ- ಸಂಸ್ಕೃತಿ ಸೇವೆಗೆ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಗೌರವ ಪುರಸ್ಕಾರ (ಮಾ- 20).

      2010 BMS ಮತ್ತು BSc- IT ಈ ಉಚ್ಚ ಶಿಕ್ಷಣದ ವಿಭಾಗ ಪ್ರಾರಂಭಿಸಲು ಮಹಾರಾಷ್ಟ್ರ ಸರಕಾರದಿಂದ ಅನುಮತಿ (ಜುಲೈ-15).

    2011 ಮಂಡಳಿಯ 100 ವರ್ಷಕ್ಕೂ ಮಿಕ್ಕಿದ ಸಮಾಜ ಸೇವೆಯನ್ನು ಪರಿಗಣಿಸಿ ಸೇವಾ ಭಾರತಿ (ರಿ) ಸಂಸ್ಥೆಯಿಂದ ಮಂಡಳಿಗೆ ಪ್ರತಿಷ್ಠಿತ ಸಂಘ ಭಾರತಿ ಪ್ರಶಸ್ತಿ (ರಿ) ಸಂಸ್ಥೆಯಿಂದ ಮಂಡಳಿಗೆ ಪ್ರತಿಷ್ಠಿತ ‘ಸಂಘ ಭಾರತಿ ಪ್ರಶಸ್ತಿ’ ಪ್ರದಾನ (ಫೆ-20).

    2011 ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರದ ಘಟಕವು ಮಂಡಳಿಯ ಐತಿಹಾಸಿಕ (100ವರ್ಷ) ಸಮಾಜ ಸೇವೆಗೆ ರಾಜ್ಯ ಕನ್ನಡಿಗರ ಸಾಹಿತ್ಯ ಸಾಂಸ್ಕೃತಿಕ ಸಮಾವೇಶದಲ್ಲಿ (ಜೂನ್-12) ಗೌರವ ಪುರಸ್ಕಾರ.

     2011 ಮಂಡಳಿಯ ಮೀರಾ- ಬಾಯಿಂದರ್ ಶಾಖೆಯ ವಿಧ್ಯುಕ್ತವಾಗಿ ಆರಂಭ (ಜುಲೈ-10).

   2011 ಮಂಡಳಿಯ ಶೈಕ್ಷಣಿಕ ಸಂಕುಲದ ರಸ್ತೆಗೆ ಬೃಹನ್‌ಮುಂಬೈ ಮಹಾನಗರಪಾಲಿಕೆಯು ‘‘ಎಂ.ವಿ.ಎಂ. ಎಜ್ಯುಕೇಶನಲ್ ಕ್ಯಾಂಪಸ್ ಮಾರ್ಗ’’ ಎಂದು ನಾಮಕರಣ ಮಾಡಿದ ಗೌರವ. (ಅಕ್ಟೋಬರ್-1).

    2012 ನವಿಮುಂಬೈ ಪರಿಸರದ ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಚಟುವಟಿಕೆಗೆ ಮಂಡಳಿಯ ನವಿಮುಂಬೈ ಶಾಖೆಯ ಉದ್ಘಾಟನೆ (ಮಾರ್ಚ್-4).

   2012 ಥಾಣೆ ಜಿಲ್ಲೆಯ ವಸಾಯಿಯಲ್ಲಿ ಮಂಡಳಿಯ ನಾಯ್ಗಂವ್ -ವಿರಾರ್ ಶಾಖೆಯ ಉದ್ಘಾಟನೆ (ಆಗಸ್ಟ್-18).

 2012 ಮಂಡಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2012.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)