ಹಿಂಸೆಯ ಕಸ ತೆಗೆಯುವ ಜಲಗಾರರು ಬೇಕಾಗಿದ್ದಾರೆ
ಧರ್ಮದ ಹೆಸರಿನಲ್ಲಿ ಹೊಸದೊಂದು ಕಸವನ್ನು ಸೃಷ್ಟಿಸುವ ಕೆಲಸಕ್ಕೆ ಭಾರತ ಸರಕಾರ ಕೈಹಾಕಿದೆ ಎಂದು ಪರಿಭಾವಿಸಿಕೊಂಡ ಯುವಜನತೆ, ಅದನ್ನು ಗುಡಿಸಿ ಹಾಕುವ ಹಠದಿಂದ ಬೀದಿಗಿಳಿದಿದೆ. 1920ರ ದಶಕದಲ್ಲಿ ಆರಂಭಗೊಂಡ ಸತ್ಯಾಗ್ರಹ ಚಳವಳಿಯ ನೆನಪು, 2020ರಲ್ಲಿ ಅನೇಕರಿಗೆ ಖಚಿತವಾಗಿ ಕಣ್ಣಮುಂದೆ ತಂದಿದೆ. ನೂರು ವರ್ಷದ ಹಿಂದೆ ಲಾಭದ ಹೆಸರಿನಲ್ಲಿ ನಡೆಯುತ್ತಿದ್ದ ಹಿಂಸಾಚಾರ, 2020ರಲ್ಲಿ ‘ಸಂಕುಚಿತ ಸ್ವಹಿತಾಸಕ್ತಿ’ಯ ಹೆಸರಿನಲ್ಲಿ ನಡೆಯತೊಡಗಿದೆ. ಧರ್ಮ, ರಾಷ್ಟ್ರೀಯತೆ, ಭಾಷೆ ಮುಂತಾದ ಸಂಕುಚಿತತೆಗಳು ರಾಶಿ ರಾಶಿ ಕಸವನ್ನು ಸೃಷ್ಟಿಸುತ್ತಿರುವ ಈ ಹೊತ್ತಿನಲ್ಲಿ, ನಮಗೆ ಬೇಕಿರುವುದು ಪ್ರತೀ ಊರಿನಲ್ಲೂ ಬದ್ಧತೆಯಿರುವ ‘ಊರಜಲಗಾರರು’. ಹಗಲಿನ ಸೂರ್ಯೋದಯವನ್ನು ಕಂಡು ಸಂತೋಷಿಸುವ, ರಾತ್ರಿಯ ಚಂದ್ರೋದಯಕ್ಕಾಗಿ ಕಾಯುತ್ತಲೇ ಕಸ ಗುಡಿಸೋ ಕಾಯಕದಲ್ಲಿ ತೊಡಗುವ ‘ಊರಜಲಗಾರರು’ ಸದ್ಯದ ತುರ್ತಾಗಿದ್ದಾರೆ.
2020ರ ವರ್ಷ ಆರಂಭವಾಗಿದೆ. ಇಂದಿಗೆ ನೂರು ವರ್ಷದ ಹಿಂದೆ 1920ರಲ್ಲಿ ಮನುಕುಲವು ಬಡಿದಾಡಿ ಹೊಡೆದಾಡಿ ಬಸವಳಿದು ಕುಳಿತಿತ್ತು. ಮೊದಲ ಮಹಾಯುದ್ಧ ಮುಗಿದಿದ್ದರೂ, ಅದು ಸೃಷ್ಟಿಸಿದ್ದ ಹಿಂಸೆಯ ಕಸದ ರಾಶಿಯಲ್ಲಿ ಜಗವು ಸಿಲುಕಿ ನಲುಗುತ್ತಿತ್ತು. ಒಂದೆಡೆ ಸೋತ ದೇಶಗಳು ಅವಮಾನದಿಂದ ಕುದಿಯುತ್ತಿದ್ದರೆ, ಇನ್ನೊಂದೆಡೆ ಗೆದ್ದ ದೇಶಗಳು ಅಭಿಮಾನದಿಂದ ಬೀಗುತ್ತಿದ್ದವು. ಇವುಗಳ ನಡುವೆ ಭಾರತದ ಉದ್ದಗಲಕ್ಕೂ ಓಡಾಡುತ್ತಿದ್ದ ಗಾಂಧಿ ತುಂಡು ಬಟ್ಟೆ ತೊಡುವ ನಿರ್ಧಾರವನ್ನು ಗಟ್ಟಿಮಾಡಿಕೊಳ್ಳುತ್ತಾ, ಸಂಪೂರ್ಣ ಸ್ವರಾಜ್ಯವೇ ತನ್ನ ಗುರಿಯೆಂದು ಘೋಷಿಸುತ್ತಿದ್ದರು. ಗಾಂಧಿಯು ಮಹಾತ್ಮನಾಗುತ್ತಿದ್ದ ಈ ಕಾಲಘಟ್ಟವು ಇವತ್ತಿಗೆ ಹೆಚ್ಚು ಪ್ರಸ್ತುತವಾಗುತ್ತದೆ.
ಅನ್ಯರಿಗೆ ಸೇರಿದ ಭೂಭಾಗಗಳ ಮೇಲೆ ಒಡೆತನ ಸಾಧಿಸಲು ಯುದ್ಧ ಆರಂಭಿಸಿದ ಐರೋಪ್ಯ ದೇಶಗಳ ಆಸೆಬುರುಕತನವನ್ನು ಮತ್ತು ಅವುಗಳ ಸಮಾಜದಲ್ಲಿ ಬೇರೂರಿದ್ದ ಭಂಡತನವನ್ನು ಹತ್ತಿರದಿಂದ ಗಾಂಧೀಜಿ ನೋಡಿದ್ದರು. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ್ದ ಅವರು ದೇಶದಲ್ಲಿ ಬಡತನದಿಂದ ನರಳುತ್ತಿದ್ದವರನ್ನು ಪ್ರತ್ಯಕ್ಷ ಕಂಡಿದ್ದರು. ದೇಶಗಳ ನಡುವಿನ ಹಿಂಸೆಯ ಕಸದ ರಾಶಿಯ ಹಿಂದೆ ಅಲ್ಲಿನ ಸ್ಥಳೀಯ ಸಮುದಾಯಗಳು ಸೃಷ್ಟಿಸಿರುವ ಕಸವಿರುವುದನ್ನು ಅವರು ಕಂಡಿದ್ದರು. ಬ್ರಿಟಿಷರು ಸೃಷ್ಟಿಸಿರುವ ಬಂಧನದಲ್ಲಿರುವ ಭಾರತೀಯರು ಸ್ವಬಂಧನದಲ್ಲೂ ಇರುವುದು ಅವರಿಗೆ ಅರಿವಾಗಿತ್ತು. ಹಾಗಾಗಿಯೇ ಗಾಂಧಿ ಸ್ವರಾಜ್ಯದ ಕುರಿತು ಚಿಂತಿಸುವ ಮತ್ತು ಅದನ್ನು ಪೂರ್ಣವಾಗಿ ಆಚರಿಸುವ ನಿರ್ಧಾರಕ್ಕೆ ಬಂದಿದ್ದು. ಜಾಗತಿಕ ಸನ್ನಿವೇಶದಲ್ಲಿ ಹಿಂಸೆ ಆಳುತ್ತಿರುವಂತೆ, ಸ್ಥಳೀಯ ಸನ್ನಿವೇಶದಲ್ಲೂ ಹಿಂಸೆ ಆಳುತ್ತಿರುವುದನ್ನು ಅರಿತ ಗಾಂಧೀಜಿಯ ಮುಂದೆ ಇದ್ದ ಅಸ್ತ್ರ ‘ಅಹಿಂಸೆ’ ಮತ್ತು ‘ಸ್ವರಾಜ್ಯ’ದ ಗುರಿ ಮಾತ್ರ. ಮೊದಲಿಗೆ ತಾವು ಉಟ್ಟಿದ್ದ ಬಟ್ಟೆಯ ಬಂಧನದಿಂದ ಬಿಡುಗಡೆ ಪಡೆದ ಗಾಂಧಿ, ಕುವೆಂಪು ಅವರ ‘ಜಲಗಾರ’ ನಾಟಕದ ಜಲಗಾರನಾಗಿ ಬಿಡುತ್ತಾರೆ. ‘‘ಶಿವನ ಗುಡಿಯಿಂದ ಏನು ತಂದಿರಿ?’’ ಎಂದು ಎಲ್ಲರನ್ನೂ ಕೇಳುವ ಜಲಗಾರನಂತೆ ಗಾಂಧಿಯವರು ಲಭ್ಯವಿರುವ ಜ್ಞಾನದ ಬೆಳಕಿನಲ್ಲಿ ಏನು ಕಂಡಿರಿ? ಎಂದು ಪ್ರಶ್ನಿಸ ತೊಡಗುತ್ತಾರೆ. ಇರುವ ಜ್ಞಾನಕ್ಕೆ ಇನ್ನೊಂದಿಷ್ಟು ಸೇರಿಸುವ ಬದಲು, ಅದರ ಮೇಲೆಲ್ಲಾ ಹರಡಿ ನಿಂತಿರುವ ಕಸವನ್ನು ಅಹಿಂಸೆಯೆಂಬ ಪೊರಕೆ ಹಿಡಿದು ಗುಡಿಸಲು ಮುಂದಾಗುತ್ತಾರೆ. ಈ ಕಸವನ್ನು ತೆಗೆಯುತ್ತಲೇ ಅಂದಿನ ಸದ್ಯದ ತುರ್ತಾಗಿದ್ದ ಅನ್ಯರ ಆಳ್ವಿಕೆಯ ರಾಜಕೀಯ ಕಸದಿಂದ ಭಾರತವನ್ನು ಮುಕ್ತಗೊಳಿಸುವ ಕಾಯಕದಲ್ಲೂ ತೊಡಗಿಸಿಕೊಳ್ಳುತ್ತಾರೆ.
ಗುಡಿಸುವುದು ನನ್ನ ದೇವರ ಪೂಜೆ ಎನ್ನುವ ಜಲಗಾರನ ನಿಲುವನ್ನು ಗಾಂಧೀಜಿಯು ಹೊಂದಿದ್ದ ಕಾರಣದಿಂದಲೇ, ದಿಲ್ಲಿಯಲ್ಲಿ ಭಾರತದ ತ್ರಿವರ್ಣಧ್ವಜ ಹಾರುತ್ತಿರುವಾಗ, ದೇಶದ ಮೂಲೆ ಮೂಲೆಯಲ್ಲಿ ಕೊಳೆತು ನಾರುತ್ತಿದ್ದ ಕೋಮುವಾದದ ಕಸವನ್ನು ಗುಡಿಸಿ ಹಾಕಲು ಉಪವಾಸವೆಂಬ ಪೊರಕೆ ಹಿಡಿದು ಕುಳಿತಿದ್ದರು. ಯಾವ ಕಸವನ್ನು ತೆಗೆದು ಹಾಕಲು ಗಾಂಧಿ ಮುಂದಾದರೋ ಅದೇ ಕಸದ ಪ್ರಭಾವಕ್ಕೆ ಸಿಲುಕಿದ್ದವನ ಗುಂಡಿಗೆ ಬಲಿಯಾದರೂ, ಕಸ ತೆಗೆಯುವ ಕಾಯಕದಲ್ಲಿ ತೊಡಗುವವರ ಸಂತತಿ ಅಲ್ಲಿಗೇ ನಿಲ್ಲಲಿಲ್ಲ. ದೂರದ ಅಮೆರಿಕದಲ್ಲಿ ಮಾರ್ಟಿನ್ ಲೂಥರ್‌ಕಿಂಗ್ ಜೂನಿಯರ್ ನೂರಾರು ಮೈಲಿ ನಡೆದು ಕಸ ನಿವಾರಿಸುವ ಕಾರ್ಯದಲ್ಲಿ ತೊಡಗಿದರೆ, ಗಾಂಧಿ ಮಹಾತ್ಮಾ ಎನಿಸಿಕೊಳ್ಳಲು ಅವಕಾಶ ನೀಡಿದ್ದ ದಕ್ಷಿಣ ಆಫ್ರಿಕಾ ದೇಶದ ಜೈಲಿನಲ್ಲಿ 27 ವರ್ಷಗಳ ಕಾಲ ಕುಳಿತ ಮಂಡೇಲಾ ಹಿಂಸೆಯ ಕಸವನ್ನು ಅಹಿಂಸೆಯ ಪೊರಕೆ ಹಿಡಿದೇ ಗುಡಿಸಿ ಹೊರಹಾಕವಲ್ಲಿ ಯಶಗಳಿಸಿದರು. ಕಸಕ್ಕೆ ಒಂದು ಗುಣವಿದೆ. ಅದು ಮತ್ತೆ ಮತ್ತೆ ಸಂಗ್ರಹವಾಗುತ್ತಾ ಸಾಗುತ್ತದೆ. ಹಾಗಾಗಿ ಅದನ್ನು ನಿರಂತರ ಗುಡಿಸಿ ಹಾಕುವ ಕಾರ್ಯ ನಡೆಯುತ್ತಲೇ ಇರಬೇಕಾಗುತ್ತದೆ. ಮೊದಲ ಮಹಾ ಯುದ್ಧದ ಕಸವನ್ನು ನಿವಾರಿಸಿಕೊಳ್ಳುವ ಮೊದಲೇ, ಎರಡನೇ ಮಹಾಯುದ್ಧದ ಕಸವೂ ಸೇರಿಕೊಂಡು ವಿಶ್ವವೇ ಹಿಂಸೆಯ ಕಸದತೊಟ್ಟಿಯಾದಾಗ ಹುಟ್ಟಿಕೊಂಡ ವಿಶ್ವ ಸಂಸ್ಥೆ ತಕ್ಕಮಟ್ಟಿಗೆ 1950 ರಿಂದ 1990ರವರೆಗೆ ಕಸವನ್ನು ಗುಡಿಸುತ್ತಾ ಬಂದಿತ್ತು. ಅಮೆರಿಕ ಮತ್ತು ಸೋವಿಯತ್ ರಶ್ಯ ಒಬ್ಬರ ಮೇಲೊಬ್ಬರು ಕಸ ಎರಚುತ್ತಾ ಇದ್ದರೂ, ವಿಶ್ವ ಸಂಸ್ಥೆಯ ಪೊರಕೆ ಅದನ್ನು ನಿವಾರಿಸುತ್ತಾ ಸಾಗಿತು. 1990ರ ನಂತರ ಇತಿಹಾಸದ ಚಕ್ರ ಮತ್ತೊಂದು ಉರುಳು ಹಾಕಿ, ರಶ್ಯ ಮತ್ತು ಅಮೆರಿಕ ಒಂದಾಗಿ ಇನ್ನಷ್ಟು ಕಸದ ರಾಶಿ ಸೃಷ್ಟಿಯಾಯಿತು. ಇರಾಕಿನ ಹೆಸರಿನಲ್ಲಿ, ಅಫ್ಘಾನಿಸ್ತಾನದ ಹೆಸರಿನಲ್ಲಿ ಮತ್ತಷ್ಟು ಕಸದ ರಾಶಿ ಸೃಷ್ಟಿಯಾಯಿತು. ಇಷ್ಟೆಲ್ಲರ ನಡುವೆಯೂ, ವಿಶ್ವ ಸಂಸ್ಥೆಯ ಪೊರಕೆ ತಕ್ಕಮಟ್ಟಿಗೆ ತನ್ನ ಕಾರ್ಯವನ್ನು ನಿಭಾಯಿಸುತ್ತಲೇ ಇತ್ತು. 2019ರಲ್ಲಿ ಈ ಪೊರಕೆಯೂ ನಿಂತು ಬಿಟ್ಟಿದೆ!
ಹಿಂಸೆಯ ಕಸವೇ ಅದ್ಭುತರಸವೆಂದು ನಂಬುವವರ ಪ್ರತಿನಿಧಿಯಾದ ಟ್ರಂಪ್ ವಿಶ್ವಸಂಸ್ಥೆಯ ದಿನನಿತ್ಯದ ಖರ್ಚಿಗೆ ಹಣ ನೀಡುವುದೇ ತಪ್ಪೆಂದು ಗೊಣಗಿದ್ದೇ ತಡ, ಬಹುತೇಕ ದೇಶಗಳು ತಮ್ಮ ಪಾಲಿನ ದೇಣಿಗೆಯನ್ನು ವಿಶ್ವ ಸಂಸ್ಥೆಗೆ ನೀಡದೆ ಸುಮ್ಮನಾಗಿವೆ. ಪೊರಕೆ ಹಿಡಿಯಬೇಕಿರುವ ಕೈಗಳ ಹೊಟ್ಟೆಗೆ ಹಿಟ್ಟು ಇಲ್ಲದಂತಾಗಿ, ಹಿಂಸೆಯ ಕಸದಿಂದ ವಿಶ್ವವನ್ನು ಮುಕ್ತಗೊಳಿಸುವ ಹೊಣೆ ಹೊತ್ತ ವಿಶ್ವ ಸಂಸ್ಥೆ ಸದ್ಯದ ಸ್ಥಿತಿಯಲ್ಲಿ ನಿಷ್ಪ್ರಯೋಜಕವಾಗಿದೆ. ಆದರೆ ಭೂಮಿಯ ಮೇಲೆ ಕುವೆಂಪು ಅವರ ಜಲಗಾರನಂತಹ ಹಲವು ಊರಜಲಗಾರರು ಇರುವುದರಿಂದ ಕಸ ತೆಗೆಯುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ.
ಗ್ರೆಟಾ ತನ್‌ಬರ್ಗ್‌ನಂತಹ ಹದಿಹರೆಯದ ಹುಡುಗಿ ಪೊರಕೆ ಹಿಡಿದು ಅಭಿವೃದ್ಧಿಯ ಹೆಸರಿನಲ್ಲಿ ಸೃಷ್ಟಿಯಾಗುತ್ತಿರುವ ಕಸವನ್ನು ನಿವಾರಿಸಲು ಯುವಜನರನ್ನು ಒಂದುಗೂಡುವಂತೆ ಪ್ರೇರೇಪಿಸುತ್ತಿದ್ದಾಳೆ. ಒಂದಲ್ಲ ಎರಡಲ್ಲ ಮೂರು ಮಾನಸಿಕ ಅನಾರೋಗ್ಯಗಳ ಕಸದಿಂದ ಪೀಡಿತಳಾಗಿದ್ದ ಗ್ರೆಟಾ, ಇಂದು ಅವುಗಳೆಲ್ಲವನ್ನೂ ಗುಡಿಸಿ ಹೊರಹಾಕಿ, ಜಗದ ಕಸ ತೆಗೆಯುವ ಕಾಯಕದಲ್ಲಿ ತೊಡಗಿಕೊಂಡಿದ್ದಾಳೆ. ‘‘ಹುಸಿಯ ನುಡಿಯಲು ನಿನಗೆಷ್ಟು ಧೈರ್ಯ’’ ಎಂದು ಜಗದ ಬಲಶಾಲಿ ತಾನೆನ್ನುವ ಟ್ರಂಪ್‌ನನ್ನೇ ಪ್ರಶ್ನಿಸುವ ಈಕೆ, ನನ್ನ ಭವಿಷ್ಯಕ್ಕಾಗಿ, ಈಗಿರುವ ಮಾಲಿನ್ಯದ ಕಸ ನಿವಾರಿಸುವ ಹೊಣೆಗಾರಿಕೆ ತನ್ನದು ಎಂದು ಹೊರಟಿದ್ದಾಳೆ. ಈಕೆಯ ಪ್ರಭಾವದಿಂದ ವಿಶ್ವದ ಮೂಲೆ ಮೂಲೆಯಲ್ಲಿ ಸಾವಿರಾರು ಯುವಜಲಗಾರರು ಮಾಲಿನ್ಯದ ಕಸ ಗುಡಿಸಿಹಾಕುವ ಕ್ರಿಯೆಯಲ್ಲಿ ತೊಡಗಿದ್ದಾರೆ.
ಗ್ರೆಟಾಳ ನಡುವೆ ನೆನಪಾಗುವ ಇನ್ನೋರ್ವ ಜಲಗಾರ ಕ್ಲಿಂಟ್‌ಈಸ್ಟ್‌ವುಡ್. ಹಾಲಿವುಡ್ ನಟನಾದ ಈತ, ತನ್ನ ಜನಪ್ರಿಯತೆಯನ್ನು ಪಡೆದುಕೊಂಡಿದ್ದೇ ಹಿಂಸಾತ್ಮಕ ಸಿನೆಮಾಗಳ ಮೂಲಕ. ‘‘ಒಂದು ನೋಟು, ಒಂದು ಗುಂಡು; ಒಂದು ಹೆಣ’’ ಎಂದು ತಣ್ಣಗಿನ ಧ್ವನಿಯಲ್ಲಿ ಹೇಳುತ್ತಾ ಹಣಗಳಿಸಿದ ಈತ, 90 ವರ್ಷದ ತನ್ನ ಇಳಿವಯಸ್ಸಿನಲ್ಲಿ ಹಿಂಸೆಯ ಕಸವನ್ನು ಅಹಿಂಸೆಯ ಪೊರಕೆ ಹಿಡಿದು ಗುಡಿಸಬೇಕು ಎಂಬ ಸಿನೆಮಾಗಳನ್ನು ನಿರ್ಮಿಸುತ್ತಿದ್ದಾನೆ. ಹಿಂಸೆಯ ನಿರಂತರ ವಿಷ ವರ್ತುಲಕ್ಕೆ ಸಿಲುಕುವ ಮಕ್ಕಳ ಭವಿಷ್ಯವನ್ನು ಉಳಿಸಲು ಬಂದೂಕಿಗೆ ಎದೆಯೊಡ್ಡಿ ನಿಲ್ಲುವ ಮುದುಕನ ಪಾತ್ರವನ್ನು ತನ್ನ ಸಿನೆಮಾ ಗ್ರಾಂಡ್‌ಟೋರಿನೋದಲ್ಲಿ ನಿರ್ವಹಿಸುವ ಮೂಲಕ ಈಸ್ಟ್‌ವುಡ್, ಗಾಂಧಿಯ ಕಲ್ಪನೆಯ ದಿಟ ಸತ್ಯಾಗ್ರಹಿಯಾಗಿ ಬಿಡುತ್ತಾನೆ.
ಧರ್ಮದ ಹೆಸರಿನಲ್ಲಿ ಹೊಸದೊಂದು ಕಸವನ್ನು ಸೃಷ್ಟಿಸುವ ಕೆಲಸಕ್ಕೆ ಭಾರತ ಸರಕಾರ ಕೈಹಾಕಿದೆ ಎಂದು ಪರಿಭಾವಿಸಿಕೊಂಡ ಯುವಜನತೆ, ಅದನ್ನು ಗುಡಿಸಿ ಹಾಕುವ ಹಠದಿಂದ ಬೀದಿಗಿಳಿದಿದೆ. 1920ರ ದಶಕದಲ್ಲಿ ಆರಂಭಗೊಂಡ ಸತ್ಯಾಗ್ರಹ ಚಳವಳಿಯ ನೆನಪು, 2020ರಲ್ಲಿ ಅನೇಕರಿಗೆ ಖಚಿತವಾಗಿ ಕಣ್ಣಮುಂದೆ ತಂದಿದೆ. ನೂರು ವರ್ಷದ ಹಿಂದೆ ಲಾಭದ ಹೆಸರಿನಲ್ಲಿ ನಡೆಯುತ್ತಿದ್ದ ಹಿಂಸಾಚಾರ, 2020ರಲ್ಲಿ ‘ಸಂಕುಚಿತ ಸ್ವಹಿತಾಸಕ್ತಿ’ಯ ಹೆಸರಿನಲ್ಲಿ ನಡೆಯತೊಡಗಿದೆ. ಧರ್ಮ, ರಾಷ್ಟ್ರೀಯತೆ, ಭಾಷೆ ಮುಂತಾದ ಸಂಕುಚಿತತೆಗಳು ರಾಶಿ ರಾಶಿ ಕಸವನ್ನು ಸೃಷ್ಟಿಸುತ್ತಿರುವ ಈ ಹೊತ್ತಿನಲ್ಲಿ, ನಮಗೆ ಬೇಕಿರುವುದು ಪ್ರತೀ ಊರಿನಲ್ಲೂ ಬದ್ಧತೆಯಿರುವ ‘ಊರಜಲಗಾರರು’. ಹಗಲಿನ ಸೂರ್ಯೋದಯವನ್ನು ಕಂಡು ಸಂತೋಷಿಸುವ, ರಾತ್ರಿಯ ಚಂದ್ರೋದಯಕ್ಕಾಗಿ ಕಾಯುತ್ತಲೇ ಕಸ ಗುಡಿಸೋ ಕಾಯಕದಲ್ಲಿ ತೊಡಗುವ ‘ಊರಜಲಗಾರರು’ ಸದ್ಯದ ತುರ್ತಾಗಿದ್ದಾರೆ.