ಆದಿತ್ಯನಾಥ್ ಸರಕಾರದ ಸೇಡಿನ ಆಡಳಿತ
ಪ್ರತಿಭಟನೆಗಿಳಿದಿರುವವರ ವಿರುದ್ಧ ಉತ್ತರಪ್ರದೇಶ ಆಡಳಿತವು ಕಠಿಣವಾದ ಬಲಪ್ರಯೋಗ ಮಾಡುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಧೇಯಕಕ್ಕೆ ಎದುರಾಗಿರುವ ವಿರೋಧವನ್ನು ಕಾನೂನು ಮತ್ತು ಶಿಸ್ತಿನ ವಿಷಯವಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಅವರು, ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗಳಿಗೆ ಹಾನಿಯೆಸಗಿದವರ ವಿರುದ್ಧ ಸೇಡುತೀರಿಸಿ ಕೊಳ್ಳುವ ಸರಕಾರದ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ದಮನಕಾರಕ ಕಾನೂನುಗಳಡಿಯಲ್ಲಿ ‘ಭಯೋತ್ಪಾದಕರು’ ಎಂಬ ಹಣೆಪಟ್ಟಿ ಕಟ್ಟಲ್ಪಟ್ಟ ಅಮಾಯಕರ ಬಿಡುಗಡೆಗಾಗಿ 76 ವರ್ಷ ವಯಸ್ಸಿನ ನ್ಯಾಯವಾದಿ ಮುಹಮ್ಮದ್ ಶುಐಬ್ ಹೋರಾಡುತ್ತಲೇ ಬಂದಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿ ಉತ್ತರಪ್ರದೇಶದ ವಿವಿಧ ನ್ಯಾಯಾಲಯಗಳ ಮೂಲಕ ಅವರು ಹೋರಾಡಿದ ಸಂದರ್ಭದಲ್ಲಿ ಬಲಪಂಥೀಯ ನ್ಯಾಯವಾದಿಗಳಿಂದ ಹಲವಾರು ಬಾರಿ ಹಲ್ಲೆಗಳಿಗೆ ತುತ್ತಾಗುವ ಅಪಾಯಕ್ಕೂ ಅವರು ಒಳಗಾಗಿದ್ದಾರೆ. ಅವರ ಸಮಕಾಲೀನರಾದ ಮಾಜಿ ಪೊಲೀಸ್ ಅಧಿಕಾರಿ ಎಸ್.ಆರ್.ದಾರಾಪುರಿ ಅವರೂ ಮಾನವಹಕ್ಕುಗಳ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ನಿವೃತ್ತಿಯ ಬಳಿಕ ಅವರು ಬರಹಗಾರರೂ ಆಗಿದ್ದಾರೆ. ಆದರೆ ಒಂದು ದಿನ ತಾವಿಬ್ಬರೂ ಕರಾಳ ಕಾನೂನುಗಳ ಅಡಿಯಲ್ಲಿ ಗಲಭೆ ಹಾಗೂ ಅಶಾಂತಿಯನ್ನು ಸೃಷ್ಟಿಸಿದ ಆರೋಪದಲ್ಲಿ ಜೈಲುಪಾಲಾಗಲಿದ್ದೇವೆಯೆಂಬುದನ್ನು ಅವರು ಕಲ್ಪಿಸಿಕೊಂಡಿಯೇ ಇರಲಿಲ್ಲ.
ಆದರೆ ಪ್ರತಿಯೊಬ್ಬರಿಗೂ ತಿಳಿದಿರುವಂತೆ, ಇಂದು ಉತ್ತರಪ್ರದೇಶದಲ್ಲಿ ಶುಐಬ್ ಹಾಗೂ ದಾರಾಪುರಿ ಬಂಧಿತರಾಗಿರುವುದರಲ್ಲಿ ವಿಶೇಷವೇನೂ ಇಲ್ಲ. ಆ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆ ವಿರೋಧಿಸಿ ಜೈಲು ಸೇರಿರುವ ಶ್ರೀಸಾಮಾನ್ಯರು, ನೂರಾರು ಸಾಮಾಜಿಕ-ರಾಜಕೀಯ ಕಾರ್ಯಕರ್ತರ ನಡುವೆ ಇವರಿಬ್ಬರು ಗಮನಾರ್ಹ ವ್ಯಕ್ತಿಗಳಷ್ಟೇ ಆಗಿದ್ದಾರೆ. ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಡಿಸೆಂಬರ್ 19ರ ಬಳಿಕ ವಿದ್ಯಾರ್ಥಿಗಳು ಕೂಡಾ ಬೀದಿಗಿಳಿದ ಪರಿಣಾಮವಾಗಿ ಅದು ಪರಾಕಾಷ್ಠೆಗೆ ತಲುಪಿದೆ.
ಪ್ರತಿಭಟನೆಗಿಳಿದಿರುವವರ ವಿರುದ್ಧ ಉತ್ತರಪ್ರದೇಶ ಆಡಳಿತವು ಕಠಿಣವಾದ ಬಲಪ್ರಯೋಗ ಮಾಡುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಧೇಯಕಕ್ಕೆ ಎದುರಾಗಿರುವ ವಿರೋಧವನ್ನು ಕಾನೂನು ಮತ್ತು ಶಿಸ್ತಿನ ವಿಷಯವಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಅವರು, ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗಳಿಗೆ ಹಾನಿಯೆಸಗಿದವರ ವಿರುದ್ಧ ಸೇಡುತೀರಿಸಿ ಕೊಳ್ಳುವ ಸರಕಾರದ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಈ ಉತ್ತರದ ರಾಜ್ಯದಲ್ಲಿ ಸೇಡು ಯಾವ ರೀತಿಯಲ್ಲಿ ಅನಾವರಣಗೊಳ್ಳುತ್ತಿದೆಯೆಂಬುದಕ್ಕೆ ವಾರಣಾಸಿ ನಗರ ಉತ್ತಮ ಉದಾಹರಣೆಯಾಗಿದೆ. ಇಲ್ಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ 56 ಮಂದಿಯನ್ನು ಹೆಸರಿಸಲಾಗಿದೆ. ಸಾಮಾಜಿಕ ಕಾರ್ಯಕರ್ತರು, ಕಾರ್ಮಿಕ ನಾಯಕರು ಹಾಗೂ ಬನಾರಸ್ ವಿಶ್ವವಿದ್ಯಾನಿಲಯದ 20ಕ್ಕೂ ಅಧಿಕ ವಿದ್ಯಾರ್ಥಿಗಳ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಅವರೆಲ್ಲರ ವಿರುದ್ಧ ಒಟ್ಟಾಗಿ ಭಾರತೀಯ ದಂಡಸಂಹಿತೆಯ ಎಂಟು ಸೆಕ್ಷನ್‌ಗಳಡಿ ದೋಷಾರೋಪ ದಾಖಲಿಸಲಾಗಿದೆ. ಪರಿಸರಪರ ಹೋರಾಟಗಾರರಾದ ಏಕತಾ ಶೇಖರ್ ಹಾಗೂ ರವಿ ಅವರ ಬಂಧನವು, ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಯಂತ್ರದ ಬೇಜವಾಬ್ದಾರಿತನದ ಸೂಚನೆಯಾಗಿದೆ. ಈ ದಂಪತಿಯ ಭೇಟಿ ಮಾಡಲು ಅವರ 14 ವರ್ಷದ ಪುತ್ರಿಗೂ ಅವಕಾಶ ನಿರಾಕರಿಸಲಾಗಿದೆ.
ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆಯು ಕೇವಲ ಶ್ರೀಸಾಮಾನ್ಯರ ಹೆಗಲ ಮೇಲೆ ಮಾತ್ರ ಇರುವುದೇ ಅಥವಾ ಈ ಕಾನೂನು ಮತ್ತು ಸುವ್ಯವಸ್ಥೆಯ ಪ್ರತಿಪಾದಕರಿಗೂ ಅದು ಅನ್ವಯಿಸುವುದಿಲ್ಲವೇ? .
ಉದಾಹರಣೆಗೆ ತಮ್ಮ ಮುಖಗಳನ್ನು ಮರೆಮಾಚಿದ್ದ, ನಾಗರಿಕ ಉಡುಪಿನಲ್ಲಿದ್ದ ದುಷ್ಕರ್ಮಿಗಳು ದೊಂಬಿಯಲ್ಲಿ ತೊಡಗಿದ್ದಲ್ಲದೆ, ಸಿಎಎ ವಿರೋಧಿ ಕಾಯ್ದೆಯನ್ನು ವಿರೋಧಿಸುತ್ತಿದ್ದವರ ಮೇಲೆ ಹಲ್ಲೆ ನಡೆಸಿದಾಗ, ಪೊಲೀಸರು ಕುರುಡರಂತೆ ವರ್ತಿಸಿದ್ದರು.
ಹಲವಾರು ಪ್ರಕರಣಗಳಲ್ಲಿ ಎಳ್ಳಷ್ಟು ಹಿಂಸಾತ್ಮಕ ಘಟನೆಗಳು ನಡೆಯದೇ ಇದ್ದರೂ ಪೊಲೀಸರು ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ನಾಪತ್ತೆಯಾದ ತನ್ನ ಸ್ನೇಹಿತರನ್ನು ಹುಡುಕಲು ಪೊಲೀಸ್ ಠಾಣೆಗೆ ಹೋಗಿದ್ದ ಸಾಮಾಜಿಕ ಕಾರ್ಯಕರ್ತ ದೀಪಕ್ ಕಬೀರ್ ಅವರ ಬಂಧನ ಘಟನೆಯು ದೇಶಾದ್ಯಂತ ದೊಡ್ಡ ಸುದ್ದಿಯಾಯಿತು. ಆದರೆ ಇಂತಹ ಘಟನೆ ನಡೆದಿರುವುದು ಇದೊಂದೇ ಆಗಿರಲಿಲ್ಲ.
ಪೊಲೀಸರು ಹದಿಮೂರು ವರ್ಷದ ಮಕ್ಕಳನ್ನೂ ಬಂಧಿಸದೆ ಬಿಡಲಿಲ್ಲ. ಸಿಎಎ ಪ್ರತಿಭಟನೆ ಬಳಿಕ ಪೊಲೀಸರು ತಮ್ಮನ್ನು ಹಿಗ್ಗಾಮಗ್ಗಾ ಥಳಿಸಿದಂತಹ ಬೆಚ್ಚಿಬೀಳಿಸುವ ವಿವರಗಳನ್ನೇ ಈ ಮಕ್ಕಳು ನೀಡಿದ್ದಾರೆ. ತಮ್ಮನ್ನು ಬಿಡುಗಡೆಗೊಳಿಸುವ ಮುನ್ನ ಪೊಲೀಸರು 48 ತಾಸುಗಳಿಗೂ ಅಧಿಕ ಸಮಯ ಚಿತ್ರಹಿಂಸೆ ನೀಡಿದ್ದಾರೆಂದು ಅವರು ಹೇಳಿದ್ದಾರೆ. ನಿಮಗೆ ಪಾಠ ಕಲಿಸಲು ಬಯಸಿರುವುದಾಗಿ ಪೊಲೀಸರು ತಮಗೆ ಬೆದರಿಕೆ ಹಾಕಿದ್ದಾರೆಂದು ಈ ಬಾಲಕರು ಅಲವತ್ತುಕೊಂಡಿದ್ದಾರೆ.
ಪೊಲೀಸರು ಉನ್ನತವಾದ ತಂತ್ರಗಾರಿಕೆಗಳನ್ನು ಬಳಸಿಕೊಂಡು, ಜನರು ಹಿಂಸಾಚಾರಕ್ಕಿಳಿಯುವಂತೆ ಪ್ರಚೋದಿಸಿದರೆಂಬ ಆರೋಪಗಳನ್ನು ಮುಖ್ಯವಾಹಿನಿಯ ಟಿವಿವಾಹಿನಿಗಳಲ್ಲಿ ಪ್ರಸಾರವಾದ ವೀಡಿಯೋಗಳು ಪುಷ್ಟೀಕರಿಸುತ್ತವೆ. ಪೊಲೀಸರು, ಯಾವುದೇ ಪ್ರಚೋದನೆಯಿಲ್ಲದಿದ್ದರೂ, ಉದ್ದೇಶರಹಿತವಾಗಿ ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯ (ಎಎಂಯು)ದ ಪ್ರವೇಶದ್ವಾರದಲ್ಲಿ ನಿಲ್ಲಿಸಲಾಗಿದ್ದ ಮೋಟಾರ್ ಸೈಕಲ್‌ಗಳನ್ನು ನಾಶಪಡಿಸಿರುವುದನ್ನು ಪ್ರಮುಖ ಸುದ್ದಿವಾಹಿನಿಯೊಂದು ಬಹಿರಂಗಪಡಿಸಿದೆ. ಪೊಲೀಸರು ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ದಾಳಿ ನಡೆಸುವ ಮುನ್ನವೇ ಈ ಘಟನೆ ನಡೆದಿದೆ.
ವಿಶೇಷವಾಗಿ ಮುಸ್ಲಿಮ್ ಸಮುದಾಯದವರ ಮನೆಗಳಿಗೂ ಪೊಲೀಸರು ನುಗ್ಗುತ್ತಿರುವುದು ಕೂಡಾ ಕಂಡುಬಂದಿದೆ. ದುಷ್ಕೃತ್ಯಗಳ ಪುರಾವೆಗಳು ಲಭಿಸದಂತೆ ಮಾಡಲು ಪೊಲೀಸರು ಸಿಸಿಟಿವಿ ಕ್ಯಾಮರಾಗಳನ್ನು ಕೂಡಾ ಒಡೆದುಹಾಕಿದ್ದಾರೆ. ಭಾರೀ ದಾಂಧಲೆ ಮಾಡಿದ ಪೊಲೀಸರು, ಮನೆಗಳನ್ನು ದೋಚಿಹೋಗಿದ್ದಾರೆ. ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಸೂಚನೆ ಇದಾಗಿದೆ. ಸದಾ ಸೌಮ್ಯವಾದಿ ನಿಲುವನ್ನು ಅನುಸರಿಸಿಕೊಂಡು ಬಂದಿದ್ದ ಪತ್ರಿಕೆಯೊಂದು ಕೂಡಾ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ನಡೆಸಿದ ದೌರ್ಜನ್ಯವನ್ನು ಪ್ರಶ್ನಿಸಿತ್ತು.
ರಾಜ್ಯಾದ್ಯಂತ ಪೊಲೀಸರ ದೌರ್ಜನ್ಯಗಳ ನಡುವೆ ಪ್ರತಿಭಟನಾಕಾರರನ್ನು ಆಯ್ದು ಗುರಿಯಾಗಿರಿಸಿರುವ ಕುರಿತಾದ ಪ್ರಶ್ನೆಗಳಿಗೆ ಉತ್ತರವೇ ದೊರೆತಿಲ್ಲವೆಂದು ಆ ಪತ್ರಿಕೆ ಆಕ್ರೋಶ ವ್ಯಕ್ತಪಡಿಸಿತ್ತು.
ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸರು ಎಸಗಿದ ಕೃತ್ಯಗಳ ಕುರಿತಾಗಿ ಉತ್ತರಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ನೋಟಿಸ್ ಜಾರಿಗೊಳಿಸಿದೆ. ರಾಜ್ಯ ಪೊಲೀಸರಿಂದ ನಡೆದಿದೆಯೆನ್ನಲಾದ ಮಾನವಹಕ್ಕು ಉಲ್ಲಂಘನೆಯ ಘಟನೆಗಳ ವಿಚಾರಣೆ ಕೋರಿ ಎನ್‌ಎಚ್‌ಆರ್‌ಸಿಯು ಸಾರ್ವಜನಿಕರಿಂದಲೂ ಅರ್ಜಿಗಳನ್ನು ಸ್ವೀಕರಿಸಿದೆ.
ಯೋಗೇಂದ್ರ ಯಾದವ್, ಕವಿತಾ ಕೃಷ್ಣನ್ ಹಾಗೂ ರಿಯಾದ್ ಅಝೀಂ ಅವರನ್ನೊಳಗೊಂಡ ಸತ್ಯಶೋಧನಾ ತಂಡವು ಇತ್ತೀಚೆಗೆ ಉತ್ತರಪ್ರದೇಶದ ಕೆಲವು ಭಾಗಗಳಲ್ಲಿ ಪ್ರವಾಸ ಕೈಗೊಂಡಿತ್ತು. ಯೋಗಿ ಆದಿತ್ಯನಾಥ್ ಸರಕಾರವು ಉತ್ತರಪ್ರದೇಶದಲ್ಲಿ ಭಯಾನಕತೆ ತಾಂಡವವಾಡುವಂತೆ ಮಾಡಿದೆ ಎಂದು ತಂಡದ ವರದಿ ಹೇಳಿದೆ. ತನಗೆ ಲಭ್ಯವಾದ ಜಿಲ್ಲಾವಾರು ಅಂಕಿಅಂಶಗಳು ಹಾಗೂ ಸಂತ್ರಸ್ತ ಕುಟುಂಬಗಳ ಹೇಳಿಕೆಗಳನ್ನು ವರದಿಯು ಉಲ್ಲೇಖಿಸಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರವು ಬಹಿರಂಗವಾಗಿ ಮುಸ್ಲಿಮರು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಗುರಿಯಿರಿಸಿದೆ ಎಂದರು.
ಉತ್ತರಪ್ರದೇಶದಲ್ಲಿನ ವಿದ್ಯಮಾನಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಡಿ ವಿಶೇಷ ತನಿಖೆ ನಡೆಯುವ ಅಗತ್ಯವಿದೆಯೆಂದು ಸತ್ಯಶೋಧನಾ ತಂಡದ ವರದಿ ಹೇಳಿದೆ. ದೌರ್ಜನ್ಯಗಳನ್ನು ಎಸಗಿದ ಪೊಲೀಸ್ ಅಧಿಕಾರಿಗಳನ್ನು ಅಮಾನತಿನಲ್ಲಿರಿಸುವುದರಿಂದ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಲು ಸಾಧ್ಯವಾಗುವುದು ಎಂದು ಅದು ಪ್ರತಿಪಾದಿಸಿದೆ.
ಇಲ್ಲಿ ಉದ್ಭವಿಸುವ ಪ್ರಶ್ನೆಯೇನೆಂದರೆ, ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಉತ್ತರ ಪ್ರದೇಶವು ಯಾಕೆ ಅತ್ಯಧಿಕ ಹಿಂಸೆ ಹಾಗೂ ಸಾವುಗಳನ್ನು ಕಂಡಿದೆ (ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ). ಸಿಎಎ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿ ಉತ್ತರಪ್ರದೇಶದಲ್ಲೇ ಗರಿಷ್ಠ ಬಂಧನಗಳಾಗಿವೆ. ಯಾವುದೇ ಹಿಂಸಾಚಾರ ನಡೆಯದ ಕಾನ್ಪುರ ನಗರವೊಂದರಲ್ಲೇ ಪೊಲೀಸರು 21,500 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮೊಂಬತ್ತಿ ಮೆರವಣಿಗೆ ನಡೆಸಿದರೆಂಬ ಕ್ಷುಲ್ಲಕ ಕಾರಣಕ್ಕಾಗಿ ಅಲಿಗಡ ಮುಸ್ಲಿಮ್ ವಿವಿಯ 1,200 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
‘‘ಈ ಹಿಂಸಾಚಾರದಲ್ಲಿ ಭಾಗಿಯಾದ ಪ್ರತಿಯೊಬ್ಬ ವ್ಯಕ್ತಿಯ ಆಸ್ತಿಯನ್ನು ವಶಪಡಿಸಿಕೊಳ್ಳಲಾಗುತ್ತದೆ ಹಾಗೂ ಹಾನಿಗೀಡಾದ ಸಾರ್ವಜನಿಕ ಆಸ್ತಿಗೆ ಪರಿಹಾರವನ್ನು ವಸೂಲು ಮಾಡಲು ಅದನ್ನು ಬಳಸಲಾಗುವುದು. ಆರೋಪಿಗಳ ಎಲ್ಲಾ ಮುಖಗಳನ್ನು ಗುರುತಿಸಲಾಗಿದೆ. ಅವರ ಚಹರೆಗಳು ವೀಡಿಯೊಗ್ರಾಫ್ ಹಾಗೂ ಸಿಸಿಟಿವಿ ವೀಡಿಯೊಗಳಲ್ಲಿ ಗೋಚರಿಸಿವೆ. ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಮೂಲಕ ನಾನು ಸೇಡುತೀರಿಸಿ ಕೊಳ್ಳಲಿದ್ದೇನೆ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ’’ ಎಂದವರು ಹೇಳಿದ್ದಾರೆ.
ನಕಲಿ ಎನ್‌ಕೌಂಟರ್‌ಗಳ ಮೂಲಕ ‘ಅಪರಾಧವನ್ನು ಹತ್ತಿಕ್ಕಲು’ ಆದಿತ್ಯನಾಥ್ ಸರಕಾರವು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ ನೀಡಿರುವುದು, ಪಡೆಗಳಿಗೆ ನಿರ್ಭಿಡೆಯ ವಾತಾವರಣವನ್ನು ಸೃಷ್ಟಿಸಿದೆ. ಯೋಗಿ ಸರಕಾರದ ಮೊದಲ 16 ತಿಂಗಳುಗಳಲ್ಲಿ ಅಧಿಕೃತವಾಗಿ 3,026 ಪೊಲೀಸ್ ಎನ್‌ಕೌಂಟರ್‌ಗಳಾಗಿದ್ದವು. ಅವುಗಳಲ್ಲಿ 69 ಮಂದಿ ಕ್ರಿಮಿನಲ್ ಆರೋಪಿಗಳನ್ನು ಹೊಡೆದುರುಳಿಸಲಾಗಿತ್ತು. ಇದನ್ನೇ ತನ್ನ ಸಾಧನೆಯೆಂದು ಆದಿತ್ಯನಾಥ್ ಸರಕಾರ ಬಣ್ಣಿಸಿಕೊಂಡಿತ್ತು.
ಪ್ರತಿಭಟನೆಗಳಲ್ಲಿ ಪಾಲ್ಗೊಂಡ ಶ್ರೀಸಾಮಾನ್ಯರ ಭಾವಚಿತ್ರವಿರುವ ದಂಗೆಕೋರರೆಂದು ಘೋಷಿಸುವ ‘ವಾಂಟೆಡ್’ ಪೋಸ್ಟರ್‌ಗಳನ್ನು ಈಗ ಉ.ಪ್ರ. ಸರಕಾರ ಪ್ರಸಾರ ಮಾಡುತ್ತಿದೆ. ಅವರ ವರ್ತನೆಯ ಬಗ್ಗೆ ವರದಿ ನೀಡಿದಲ್ಲಿ ಸೂಕ್ತ ಬಹುಮಾನ ನೀಡಲಾಗುವುದೆಂದು ಜನರಿಗೆ ಅದು ಮನವಿ ಮಾಡಿದೆ. ಹಿಂಸಾಚಾರ ಹಾಗೂ ಆಸ್ತಿಪಾಸ್ತಿ ನಷ್ಟದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಪ್ರತಿಭಟನಾಕಾರ ಸೊತ್ತುಗಳನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆ ಆರಂಭಗೊಂಡಿದೆ.
ಮುಝಫ್ಫರ್‌ನಗರದಲ್ಲಿ ಸುಮಾರು ಮೂರು ಡಝನ್ ಅಂಗಡಿಗಳಿಗೆ ಬೀಗಮುದ್ರೆ ಜಡಿಯಲಾಗಿದೆ. ಸಾರ್ವಜನಿಕ ಆಸ್ತಿಗೆ ಆದ ನಷ್ಟವನ್ನು ವಸೂಲಿ ಮಾಡಲು ಅಗತ್ಯಬಿದ್ದಲ್ಲಿ ಈ ಅಂಗಡಿಗಳಲ್ಲಿರುವ ಸೊತ್ತುಗಳನ್ನು ಮಾರಾಟ ಮಾಡಲಾಗುವುದು. ಕಾನ್ಪುರದಲ್ಲಿ 28 ಮಂದಿಯನ್ನು ಗಲಭೆಯ ರೂವಾರಿಗಳೆಂದು ಪೊಲೀಸರು ಗುರುತಿಸಿದ್ದಾರೆಂದು ವರದಿ ಹೇಳಿದೆ. ರಾಮ್‌ಪುರದಲ್ಲಿಯೂ ಇತ್ತೀಚೆಗೆ ಪ್ರತಿಭಟನೆ ವೇಳೆ ನಡೆದ ‘ಹಿಂಸಾಚಾರ’ಗಳಿಗೆ ಸಂಬಂಧಿಸಿ ಜಿಲ್ಲಾಡಳಿತವು 28 ಮಂದಿಗೆ ನೋಟಿಸ್ ಜಾರಿಗೊಳಿಸಿದೆ.
ಆದರೆ ಈ ಆದೇಶಗಳನ್ನು ಪ್ರಕಟಿಸುವಾಗ ನ್ಯಾಯಾಂಗದ ದೃಷ್ಟಿಕೋನವನ್ನು ಕಡೆಗಣಿಸಲಾಗಿದೆ. ಆದರೆ ಇದರ ಹಿಂದಿರುವ ನಿಜವಾದ ಗೇಮ್‌ಪ್ಲಾನ್ ಏನೆಂಬುದು ಇಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಯಾವುದೇ ಪ್ರತಿಭಟನೆಗೆ ಕ್ರಿಮಿನಲ್ ಹಾಗೂ ಭಯೋತ್ಪಾದನೆಯ ಹಣೆಪಟ್ಟಿ ಕಟ್ಟಲು ಉ.ಪ್ರ. ಸರಕಾರ ಬಯಸುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯ ಯಂತ್ರದ ಒಂದು ಭಾಗವು ಹಾಗೂ ಬಲಪಂಥೀಯ ದುಷ್ಕರ್ಮಿಗಳ ನಡುವಿನ ನಂಟು ಅಂತ್ಯಗೊಂಡಲ್ಲಿ ಮಾತ್ರ ನಮ್ಮ ದೇಶದ ಪ್ರಜಾಪ್ರಭುತ್ವದ ಭವಿಷ್ಯವನ್ನು ನಿರ್ಧರಿಸಲ್ಪಡಲಿದೆ. ಈ ಮೈತ್ರಿಯು ಮುಂದುವರಿಯಲು ಅವಕಾಶ ದೊರೆಯುವುದೇ ಅಥವಾ ದೇಶದ ಜನತೆ ನಮ್ಮ ಎಲ್ಲಾ ಸಾಮರ್ಥ್ಯವನ್ನು ಬಸಿಕೊಂಡು ಅದರ ವಿರುದ್ಧ ಸವಾಲೆಸೆಯುವುದೇ ಎಂಬುದು ಈಗ ನಮ್ಮ ಮುಂದೆ ಇರುವ ಅತಿ ದೊಡ್ಡ ಪ್ರಶ್ನೆಯಾಗಿದೆ.
ಕೃಪೆ: newsclick.in