ಹೋರಾಟದ ‘ವಿಜಯಾ’
ಎಲ್ಲಿ ಶೋಷಣೆ ವಿರೋಧಿ ಹೋರಾಟ, ಸ್ವಾತಂತ್ರ್ಯ ದಮನ ವಿರೋಧಿ ಹೋರಾಟ ನಡೆಯುತ್ತದೋ ಅಲ್ಲೆಲ್ಲ ಮುಂಚೂಣಿಯಲ್ಲಿ ನಮಗೆ ಎದುರಾಗುವ ವಿಜಯಾ ಶೋಷಣೆಗೆ ಸಿಲುಕಿ ನೊಂದ ಮಹಿಳೆ. ಹಾಗೆಂದು ಅವರ ಹೋರಾಟ ಮಹಿಳಾ ವಿಮೋಚನೆಗಷ್ಟೇ ಸೀಮಿತವಾದುದಲ್ಲ. ಅವರು ಎಂದೂ ಸ್ತ್ರೀ ವಿಮೋಚನಾ ಹೋರಾಟಗಾರ್ತಿಯ ಲಾಂಛನವನ್ನು ಹಣೆಗೆ ಅಂಟಿಸಿಕೊಡವರಲ್ಲ. ಆದರೆ ಅವರ ಬದುಕೇ ಸ್ತ್ರೀ ವಿಮೋಚನಾ ಹೋರಾಟದ ರೂಪಕವಿದ್ದಂತಿದೆ.
ಹಣೆ ತುಂಬ ಹಳೆಯ ಮೂರುಕಾಸಿನಗಲದ ದೊಡ್ಡ ಕುಂಕುಮ. ಕೈತುಂಬ ಬಳೆ. ಮೈತುಂಬ ಹೊದ್ದ ಸೆರಗು. ಪೂರ್ವಕಾಲದ ಪುಟ್ಟಕ್ಕನ ವರ್ಚಸ್ಸು, ಹತ್ತು ಜನರ ಮಧ್ಯೆ ಎದ್ದುಕಾಣುವ ವರ್ಚಸ್ಸು. ಅಂತರಂಗದಲ್ಲಿ ಆಧುನಿಕ ಸಂವೇದನೆಗಳಿಗೆ ಮಿಡಿಯುವ ಶುದ್ಧ ಅಂತಃಕರಣದ ಹೃದಯ. ಕೆಲವರಿಗೆ ಪೂರ್ವಕಾಲದ ಪುಟ್ಟಕ್ಕ, ಇನ್ನು ಕೆಲವರಿಗೆ ಹಿರಿಯಕ್ಕ, ಮತ್ತೆ ಹಲವಾರು ಮಂದಿಗೆ ಅಮ್ಮ. ಇವರು ಶ್ರೀಮತಿ ವಿಜಯಾ. ಶೋಷಣೆ, ಅನ್ಯಾಯ, ಅಸಮಾನತೆಗಳ ವಿರುದ್ಧ ಹೋರಾಟ, ಚಳವಳಿಗಳಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಕ್ರಿಯಾವಾದಿ, ಈಗಷ್ಟೇ ಪ್ರಕಟವಾಗಿರುವ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಭಾಜನರಾಗಿರುವ ಲೇಖಕಿ, ಪತ್ರಕರ್ತೆ.
‘ಕುದಿ ಎಸರು’ ವಿಜಯಾ ಅವರಿಗೆ ಪ್ರಶಸ್ತಿ ತಂದುಕೊಟ್ಟಿರುವ ಕೃತಿ, ಅವರ ಆತ್ಮ ಚರಿತ್ರೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಕಷ್ಟಕೋಟಲೆಗಳನ್ನು, ಬವಣೆಗಳನ್ನು ಅನುಭವಿಸಿ, ಆ ನೋವುಗಳನ್ನೆಲ್ಲ ದಿಟ್ಟೆಯಾಗಿ ಎದುರಿಸಿ ಗಟ್ಟಿಯಾದುದನ್ನು ನಿರೂಪಿಸುವ ಆತ್ಮ ಕಥೆ. ಕುಟುಂಬದಲ್ಲಿ ತಂದೆಯ ಶೋಷಣೆ, ಗಂಡನಿಂದ ಲೈಂಗಿಕ ಶೋಷಣೆ ಎಲ್ಲವನ್ನೂ ಅನುಭವಿಸಿ, ಇದರಿಂದ ಹೊರಬಂದು ಹೊಸ ಜೀವನವನ್ನು ಕಟ್ಟಿಕೊಂಡ ವಿಜಯಮ್ಮ ಅವರ ಜೀವನ ಸ್ಫೂರ್ತಿ ನೀಡುವಂತಹದಾಗಿದೆ ಎನ್ನುವುದು ವಿಮರ್ಶಕರ ಮಾತು.
ಎಲ್ಲಿ ಶೋಷಣೆ ವಿರೋಧಿ ಹೋರಾಟ, ಸ್ವಾತಂತ್ರ್ಯ ದಮನ ವಿರೋಧಿ ಹೋರಾಟ ನಡೆಯುತ್ತದೋ ಅಲ್ಲೆಲ್ಲ ಮುಂಚೂಣಿಯಲ್ಲಿ ನಮಗೆ ಎದುರಾಗುವ ವಿಜಯಾ ಶೋಷಣೆಗೆ ಸಿಲುಕಿ ನೊಂದ ಮಹಿಳೆ. ಹಾಗೆಂದು ಅವರ ಹೋರಾಟ ಮಹಿಳಾ ವಿಮೋಚನೆಗಷ್ಟೇ ಸೀಮಿತವಾದುದಲ್ಲ. ಅವರು ಎಂದೂ ಸ್ತ್ರೀ ವಿಮೋಚನಾ ಹೋರಾಟಗಾರ್ತಿಯ ಲಾಂಛನವನ್ನು ಹಣೆಗೆ ಅಂಟಿಸಿಕೊಂಡವರಲ್ಲ. ಆದರೆ ಅವರ ಬದುಕೇ ಸ್ತ್ರೀ ವಿಮೋಚನಾ ಹೋರಾಟದ ರೂಪಕವಿದ್ದಂತಿದೆ.
ವಿಜಯಾ ದಾವಣಗೆರೆ ಮೂಲದವರು. ಶಾಮಭಟ್ಟ-ಸರೋಜಮ್ಮ ದಂಪತಿಯ ಜ್ಯೇಷ್ಠ ಪುತ್ರಿ. ಜನನ 1942, ತೆಲುಗು ಸಂಪ್ರದಾಯನಿಷ್ಠ ಬಡ ಬ್ರಾಹ್ಮನ ಕುಟುಂಬದಲ್ಲಿ. ಹತ್ತನೇ ತರಗತಿ ವರೆಗೆ ಕಿಶೋರಿಯ ವಿದ್ಯಾಭ್ಯಾಸ ದಾವಣಗೆರೆಯಲ್ಲೇ. ಮಗಳಿಗೆ ಬೇಗನೆ ಮದುವೆ ಮಾಡಬೇಕೆಂಬ ತಂದೆಯ ತರದೂದಿನಿಂದಾಗಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ಹದಿನಾಲ್ಕನೆಯ ವಯಸ್ಸಿನಲ್ಲೇ(1956) ಮದುವೆ. ವಿಜಯಾ ಓದಿಗೆ ವಿದಾಯ ಹೇಳಿ ಬೆಂಗಳೂರಿನಲ್ಲಿನ ಗಂಡನ ಮನೆ ಸೇರಿದರು. ಎರಡು ಗಂಡು ಕೂಸುಗಳ ತಾಯಿಯಾದರು. ಗಂಡನ ಮನೆ ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ನೊಂದರು, ಬೆಂದರು. ಕೌಟುಂಬಿಕ ಸಮಸ್ಯೆಗಳ ಜೊತೆ ಯಃಕಶ್ಚಿತ್ ಹೆಣ್ಣೆಂಬ ಅನಾದರಣೆ.ವಿಜಯಾ ಧೃತಿಗೆಡಲಿಲ್ಲ. ಸ್ತ್ರೀ ಆಗಿ ತಮ್ಮ ಘನತೆ, ಗೌರವಗಳನ್ನು ಸಮರ್ಥಿಸಿಕೊಳ್ಳುವ, ಕಾಪಾಡಿಕೊಳ್ಳುವ ಅನಿವಾರ್ಯತೆ ಉಂಟಾದಾಗ, ಸ್ವತಂತ್ರ ಬದುಕಿನ ಕನಸು ಕಾಣುತ್ತಾ ಎರಡು ಮಕ್ಕಳೊಂದಿಗೆ ಗಂಡನ ಮನೆಯಿಂದ ತಮ್ಮದೇ ಮನೆಗೆ ಬಂದರು. ಮುಂದಿನದೆಲ್ಲ ಹೊಸ ಜೀವನದ ಹೋರಾಟಗಾಥೆ.
ವಿಜಯಾ ಮಕ್ಕಳನ್ನು ಶಾಲೆಗೆ ಹಚ್ಚಿ ತಾವೂ ವಿದ್ಯುಕ್ತ ವಿದ್ಯಾಭ್ಯಾಸದಲ್ಲಿ ತೊಡಗಿ ಬಿ.ಎ., ಎಂ.ಎ. ಪಡೆದರು. ಬದುಕು ಕಲಿಸಿದ ಪಾಠಕ್ಕೆ ಪೂರಕವಾಗಿ ಒದಗಿ ಬಂದ ಪದವಿಗಳು. ಬೆಂಗಳೂರಿನ ಹನುಮಂತ ನಗರದಲ್ಲಿ ಮನೆಮಾಡಿದಾಗ ಭವಿಷ್ಯದ ಮುಂದಿನ ದಾರಿ ಅಸ್ಪಷ್ಟ. ಓದಿನೊಂದಿಗೆ ಬೆಳೆದ ಆಸಕ್ತಿ ಹಾಡುಗಾರಿಕೆಯದು. ಚಿಕ್ಕಂದಿನಲ್ಲಿ ಸೋದರಮಾವ ಕಲಿಸಿದ ರಂಗಗೀತೆಗಳು ಸಂಗೀತದಲ್ಲಿ ಆಸಕ್ತಿಯನ್ನು ಕುದುರಿಸಿರಬೇಕು. ಹೀಗೆ ಬೆಳೆದ ಆಸಕ್ತಿಯಿಂದಾಗಿ ಶ್ರೀಮತಿ ಇಂದಿರಾ ಅವರಲ್ಲಿ ಕರ್ನಾಟಕ ಸಂಗೀತ ಕಲಿಯುವ ತಾಲೀಮು ಶುರುವಾಯಿತು. ಇಂದಿರಾ ಅಂದಿನ ಖ್ಯಾತ ನಾಟಕಕಾರ ಎ.ಎಸ್. ಮೂರ್ತಿಯವರ ಪತ್ನಿ. ಮೂರ್ತಿಯವರ ಪರಿಚಯದಿಂದಾಗಿ ಸಾಹಿತ್ಯ, ಕಲೆಗಳ ಬೆಡಗಿನ ಹೊಸ ಲೋಕವೊಂದು ಅವರ ಮುಂದೆ ತೆರೆದುಕೊಂಡಿತು. ಮೂರ್ತಿಯವರ ತಂದೆ ಪ್ರಸಿದ್ಧ ಕಲಾವಿದ ಅ.ನ.ಸುಬ್ಬರಾಯರ ಕಲಾಮಂದಿರದೊಂದಿಗೆ ಒಡನಾಟ ಬೆಳೆಯಿತು. ಜನರೊಡನೆ ಸಂಪರ್ಕ, ಜನರೆದುರು ನಿಂತು ಮಾತನಾಡುವ ಅವಕಾಶಗಳು ಒದಗಿ ಬಂದವು. ಬರೆಯುವ ಉಮೇದೂ ಇದೇ ಕಾಲಕ್ಕೆ ಕೂಡಿಬಂದಿರಬೇಕು.
ಕರ್ನಾಟಕ ಲೇಖಕಿಯರ ಸಂಘ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿತ್ತು.ವಿಜಯಾ ಸ್ಪರ್ಧೆಗೆ ಕಾದಂಬರಿಯೊಂದನ್ನು ಬರೆದು ಕಳುಹಿಸಿ ಲೇಖನ ವ್ಯವಸಾಯದಲ್ಲಿ ಆತ್ಮವಿಶ್ವಾಸ ಗಳಿಸಿಕೊಂಡರು. ಆಗಿನ ಪ್ರಸಿದ್ಧ ಸಾಪ್ರಾಹಿಕ ಪ್ರಜಾಮತದಲ್ಲಿ ಅಂಕಣ ಬರೆಯುತ್ತಾ ಲೇಖಕಿಯಾಗಿ ಬೆಳಕಿಗೆ ಬಂದರು. ಅಂಕಣ ಬರಹ ಪತ್ರಿಕಾ ವ್ಯವಸಾಯ ಪ್ರವೇಶಿಸಲು ಏಣಿಯಾಯಿತು. ಪ್ರಜಾಮತ ವಿಜಯಾ ಅವರನ್ನು ಉಪಸಂಪಾದಕಿಯಾಗಿ ಬರಮಾಡಿಕೊಂಡಿತು. ಮುಂದಿನ ಮೆಟ್ಟಿಲು ‘ಮಲ್ಲಿಗೆ’. ಸಹಾಯಕ ಸಂಪಾದಕರಾಗಿ ‘ಮಲ್ಲಿಗೆ’ ಮಾಸ ಪತ್ರಿಕೆ ಸೇರಿದರು. ಅಲ್ಲಿಂದ ಮುಂದೆ, ಉದಯವಾಣಿ, ತರಂಗ, ತುಷಾರ, ರೂಪತಾರ ಹೀಗೆ ಮಣಿಪಾಲ ಉದ್ಯಮದ ಪತ್ರಿಕೆಗಳಲ್ಲಿ ಹಲವಾರು ವರ್ಷಗಳ ಕಾಲ ಅವ್ಯಾಹತವಾಗಿ ಸಾಗಿತು ವಿಜಯಾ ಅವರ ಪತ್ರಿಕಾ ವ್ಯವಸಾಯ. ಪತ್ತಿಕಾವೃತ್ತಿ ಸಹಜವಾಗಿ ಹಲವಾರು ಲೇಖಕರು, ಕಲಾವಿದರ ಸನಿಹ ಸಂಪರ್ಕ ಉಂಟಾಯಿತು. ಮಾಸ್ತಿಯವರಂತಹ ಹಿರಿಯ ಲೇಖಕರಿಂದ, ನವಪ್ರತಿಭೆಗಳಿಂದ ದೀಪಾವಳಿ ವಿಶೇಷ ಸಂಚಿಕೆಗಳಿಗೆ ಲೇಖನಗಳನ್ನು ಬರೆಸಿದರು. ಪತ್ರಿಕಾ ವ್ಯವಸಾಯ ಹಾಗೂ ಕಲಾವಿದರೊಡನೆ ಸಂಪರ್ಕ ವಿಜಯಾ ಅವರಲ್ಲಿನ ಪ್ರಯೋಗಶೀಲತೆಗೆ ಪುಟ ಕೊಟ್ಟಿರಬೇಕು. ಆ ಕಾಲಕ್ಕೆ ಗಾಂಧಿಬಜಾರಿನಲ್ಲಿದ್ದ ಅನಸು ಕಲಾಮಂದಿರ ಚಿತ್ರಕಲೆಯಲ್ಲದೆ, ಸಾಹಿತ್ಯ, ಸಂಗೀತ, ಚಲನಚಿತ್ರ, ನೃತ್ಯ, ಸೂತ್ರದ ಬೊಂಬೆಯಾಟ ಮೊದಲಾಗಿ ಹಲವಾರು ಕಲಾ ಚಟುವಟಿಕೆಗಳ ಕೇಂದ್ರವಾಗಿತ್ತು. ಸಹಜವಾಗಿಯೇ ವಿಜಯಾ ಕಲಾಮಂದಿರದ ಈ ಚಟುವಟಿಕೆಗಳಿಂದ ಆಕರ್ಷಿತರಾದರು. ಇದು ಅವರ ಪತ್ರಿಕಾ ವೃತ್ತಿ ಹಾಗೂ ಕಲಾಪ್ರವೃತ್ತಿಯ ಬೆಳವಣಿಗೆಗೆ ಸಹಾಯಕವಾಯಿತು.
ವಿಮಾನ ಕಾರ್ಖಾನೆಯ ಉದ್ಯೋಗಿಯಾಗಿ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಎ.ಎಲ್.ಶ್ರೀನಿವಾಸ ಮೂರ್ತಿ ನಾಟಕದಲ್ಲಿ ನಟನಟಿಯರು ಧ್ವನಿಯನ್ನು ಪಳಗಿಸುವ ವಿಷಯದಲ್ಲಿ ಹಾಗೂ ಸೂತ್ರ ಬೊಂಬೆಯಾಟದಲ್ಲಿ ಹೊಸದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿ ಪಡೆದು ಬಂದು ಕಲಾಮಂದಿರದಲ್ಲಿ ಕಲಿತ ವಿದ್ಯೆಯನ್ನು ಪ್ರಯೋಗಿಸುತ್ತಿದ್ದರು. ಸೂತ್ರದ ಬೊಂಬೆಯಾಟ ಕಲೆ ವಿಜಯಾ ಅವರನ್ನು ಸೆಳೆಯಿತು. ಬೊಂಬೆಗಳನ್ನು ತಯಾರಿಸುವುದರಿಂದ ಹಿಡಿದು ಸೂತ್ರ ಆಡಿಸುವವರೆಗೆ, ಅದಕ್ಕೆ ಪೂರಕವಾದ ಧ್ವನಿ, ಸಂಗೀತ, ವೇಷಭೂಷಣಗಳು ಇತ್ಯಾದಿಗಳನ್ನು ಸಜ್ಜುಗೊಳಿಸುವವರೆಗೆ ಹಲವು ಹಂತಗಳಲ್ಲಿ ಸೃಜನಶೀಲ ಕರಕೌಶಲ, ಶ್ರಮದುಡಿಮೆಗಳನ್ನು ಬೇಡುವ ಕಲೆ ಸೂತ್ರದ ಬೊಂಬೆಯಾಟ. ಇದಕ್ಕೆ ಸಿದ್ಧರಾದ ವಿಜಯಾ ಸೂತ್ರದ ಬೊಂಬೆಯಾಟವನ್ನು ಎ.ಎಲ್.ಎಸ್. ಅವರಿಂದ ಕರಗತ ಮಾಡಿಕೊಂಡರು. ‘ಪಪೆಟ್ ಲ್ಯಾಂಡ್’ ಎಂಬ ಬೊಂಬೆಯಾಟದ ತಂಡ ಕಟ್ಟಿದರು. ಜಾನಪದ, ಪುರಾಣ ಕಥೆಗಳ ಜೊತೆಗೆ ಆಧುನಿಕ ನಾಟಕ, ಕಥೆಗಳನ್ನು ಗೊಂಬೆಯಾಟಕ್ಕೆ ಅಳವಡಿಸಿದರು. ಕಾರ್ನಾಡರ ‘ಮಾನಿಷಾದ’, ಗಿರಡ್ಡಿಯವರ ‘ಕನಸುಗಳು’ ಕಥೆ ಮೊದಲಾದ ಆಧುನಿಕರ ಕೃತಿಗಳು ಸೂತ್ರದ ಗೊಂಬೆಯಾಟವಾಗಿ ವಿಜಯಾ ಅವರ ಕರಕೌಶಲದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು. ಇಂತಹ ಪ್ರದರ್ಶನಗಳಿಂದಾಗಿ ‘ಪಪೆಟ್ ಲ್ಯಾಂಡ್’ ಒಂದಷ್ಟು ವರ್ಷಗಳ ಕಾಲ ಕರ್ನಾಟಕದ ವಿವಿಧೆಡೆಗಳಲ್ಲಿ ಪ್ರಚಲಿತಗೊಂಡಿತು.
ಅನ್ಯಾಯ, ಅಸಮಾನತೆ, ಶೋಷಣೆಗಳ ವಿರುದ್ಧ ಹೋರಾಟ ವಿಜಯಾ ಅವರ ಜೀವಸೆಲೆಯ ಮೂಲಧಾತು. ರಂಗಭೂಮಿ ಜೀವಪರ ಹೋರಾಟದ ಸಾಮಾಜಿಕ ಮಾಧ್ಯಮವಾಗಬೇಕು ಎನ್ನುವ ದನಿ ಜೋರಾಗಿದ್ದ ದಿನಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದವರು ವಿಜಯಾ. ನಾಟಕ ಪ್ರೊಸೀನಿಯಂ ದಂತಗೋಪುರವನ್ನು ಬಿಟ್ಟು ಹೊರಬಂದು ಬೀದಿಗಿಳಿದಾಗಲೇ ರಂಗಭೂಮಿ ಸಾಮಾಜಿಕ ಮಾಧ್ಯಮವಾಗಲು ಸಾಧ್ಯ ಎಂಬುದನ್ನು ಮನಗಂಡ ವಿಜಯಾ ಬೀದಿ ನಾಟಕ ರಂಗಭೂಮಿಗೆ ಒಲಿದರು. ತುರ್ತುಪರಿಸ್ಥಿತಿಯ ಸನ್ನಿವೇಶವೂ ಅವರ ಈ ಅಂತರಂಗದ ತುಡಿತಕ್ಕೆ ಸಾಥ್ ನೀಡಿತ್ತು. ನಾಟಕಗಳು ಜನಸಾಮಾನ್ಯರು ಓಡಾಡುವ ಬೀದಿಗಳಲ್ಲಿ ಹುಟ್ಟಬೇಕೆಂದು, ಬೀದಿಯನ್ನೇ ಕೇಂದ್ರವಾಗಿಸಿಕೊಂಡು ನಾಟಕಗಳನ್ನು ಬರೆದರು. ‘ಚಿತ್ರಾ’ ಬೀದಿ ನಾಟಕ ತಂಡ ಹುಟ್ಟಿಕೊಂಡಿತು. ‘ಕೇಳ್ರಪ್ಪೋ ಕೇಳಿ’, ‘ಮುಖವಿಲ್ಲದವರು’, ‘ಬಂದರೋ ಬಂದರು’, ‘ಎಲ್ಲಿದ್ದೇವೆ ನಾವು ಎಲ್ಲಿದ್ದೇವೆ’ ವಿಜಯಾ ಅವರ ಏಳಕ್ಕೂ ಹೆಚ್ಚಿನ ನಾಟಕಗಳಲ್ಲಿ ಪ್ರಮುಖವಾದುವು. ‘ಎಲ್ಲಿದ್ದೇವೆ ನಾವು ಎಲ್ಲಿದ್ದೇವೆ’ ಮಹಿಳಾ ಚಳವಳಿ ದಿನಾಚಾರಣೆಗಾಗಿ ಬರೆದ ನಾಟಕ.
ತಾವು ಕೆಲಸ ಮಾಡುತ್ತಿದ್ದ ಪತ್ರಿಕಾ ಸಂಸ್ಥೆಯಿಂದ ಹೊರಬಂದ ನಂತರ ವಿಜಯಾ ಇಳಾ ಮುದ್ರಣಾಲಯ ಪ್ರಾರಂಭಿಸಿದರು. ಇಳಾ ಮುದ್ರಣ ಅದೊಂದು ಕೇವಲ ಅಚ್ಚಿನ ಮನೆಯಾಗಿರಲಿಲ್ಲ. ಅದು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಿಂದುವಾಗಿತ್ತು. ‘ಅಮ್ಮ’ನ ಪ್ರೋತ್ಸಾಹ, ಅವಕಾಶಗಳ ಪ್ರಲೋಭನೆಯಿಂದಾಗಿ ಅರಳುವ ಪ್ರತಿಭೆಯ ಕಿರಿಯರು ಎಡೆತಾಕುವ ತಾಣವಾಗಿತ್ತು. ಇಳಾ ಮುದ್ರಣದೊಂದಿಗೆ ಪುಸ್ತಕ ಪ್ರಕಾಶನವನ್ನೂ ಪ್ರಾರಂಭಿಸಿದರು.ಜನ ಸಾಹಿತ್ಯ ಪ್ರಕಾಶನದಲ್ಲಿ ಉದಯೋನ್ಮುಖ ಲೇಖಕರು ಹಾಗೂ ಖ್ಯಾತನಾಮರ ಗ್ರಂಥಗಳನ್ನು ಪ್ರಕಟಿಸಿದರು. ಪತ್ರಿಕಾ ವ್ಯವಸಾಯಕ್ಕೆ ವಿಜಯಾ ಅವರ ಮಹತ್ವದ ಕೊಡುಗೆಯೆಂದರೆ ‘ಸಂಕುಲ’ ದ್ವೈಮಾಸಿಕ. ಸೃಜನಶೀಲ ಕಲೆಗಳಿಗೆ ಮೀಸಲಾಗಿದ್ದ ‘ಸಂಕುಲ’ ವಿಜಯಾ ಅವರ ಸಂಪಾದಕತ್ವದಲ್ಲಿ 1993ರಲ್ಲಿ ಬೆಳಕು ಕಂಡಿತು. ಸಾಹಿತ್ಯ, ಸಂಗೀತ, ರಂಗಭೂಮಿ, ನೃತ್ಯ, ವರ್ಣಚಿತ್ರಕಲೆ ಮೊದಲಾದ ಕಲಾ ಪ್ರಕಾರಗಳ, ವಿಶೇಷವಾಗಿ ದೃಶ್ಯ ಮಾಧ್ಯಮಗಳ ಪರಿಚಯ, ವಿಮರ್ಶೆ, ವಿಶ್ಲೇಷಣೆಗಳಿಗೆ ಪ್ರಾಧಾನ್ಯ ನೀಡುತ್ತಿದ್ದ ಒಂದು ವಿಶಿಷ್ಟ ನಮೂನೆಯ ಕಲಾ ಪತ್ರಿಕೆಯಾಗಿ ಸಾಂಸ್ಕೃತಿಕ ವಲಯದ ಗಮನ ಸೆಳೆಯಿತು. ವಿಷಯ ಪರಿಪೂರ್ಣ ಸತ್ವಪೂರ್ಣ ಲೇಖನಗಳು, ಸುಂದರ ವಿನ್ಯಾಸ, ವರ್ಣರಂಜಿತ ಮುದ್ರಣ ‘ಸಂಕುಲ’ದ ವೈಶಿಷ್ಟ್ಯವಾಗಿತ್ತು.
ಎಲ್ಲಾ ಕಲೆಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ಅವುಗಳಲ್ಲಿನ ಸೃಜನಶೀಲ ಪ್ರಕ್ರಿಯೆಯನ್ನು ಚರ್ಚಿಸುತ್ತಲೇ ಆಯ್ದ ಒಂದೊಂದು ಕಲೆಯ ತಲಸ್ಪರ್ಶಿ ವಿಮರ್ಶೆಯನ್ನು ನೀಡುತ್ತಿದ್ದ ‘ಸಂಕುಲ’ ಕನ್ನಡ ನಿಯತಕಾಲಿಕ ಪತ್ರಿಕೋದ್ಯಮದಲ್ಲಿ ಒಂದು ನವೀನ ಪ್ರಯೋಗ. ಪ್ರತಿಯೊಂದು ಸಂಚಿಕೆಯೂ ಒಂದು ಪುಟ್ಟ ಆಕರ ಗ್ರಂಥದಂತೆ ಇರುತ್ತಿತ್ತು. ದೀರ್ಘಕಾಲ ಬಾಳ ಬೇಕಿದ್ದ ‘ಸಂಕುಲ’ ಐದುವರ್ಷಗಳ ಪ್ರಕಟಣೆಯ ನಂತರ ನಿಂತುಹೋಯಿತು. ಅಲ್ಪಾಯುವಾದರೂ ಸಾಂಸ್ಕೃತಿಕ ಪತ್ರಿಕೆಯಾಗಿ ‘ಸಂಕುಲ’ ಒಂದು ದಾಖಲೆ. ನಾಟಕಗಳ ರಚನೆ, ಬೀದಿ ನಾಟಕವನ್ನು ಒಂದು ಚಳವಳಿಯಾಗಿ ಬೆಳೆಸುವ ಕಾಯಕ, ಅಭಿನಯ ತರಂಗ ನಾಟಕ ತರಬೇತಿ ಶಾಲೆಯ ಸ್ಥಾಪನೆ -ಹೀಗೆ ರಂಗಭೂಮಿಯ ವಿವಿಧ ಆಯಾಮಗಳಲ್ಲಿ ಸಕ್ರಿಯರಾಗಿರುವ ವಿಜಯಾ ರಂಗಕೃತಿಯಂತೆ ನಾಟಕದ ಸಾಹಿತ್ಯಕ ಆಯಾಮದ ಅಧ್ಯಯನದಲ್ಲೂ ಆಸಕ್ತರು. ಶ್ರೀರಂಗರ ನಾಟಕಗಳ ವಿಮರ್ಶಾತ್ಮಕ ಅಧ್ಯಯನ ‘ಶ್ರೀರಂಗ-ರಂಗ ಸಾಹಿತ್ಯ’ ಸಂಪ್ರಬಂಧ. ಈ ಕೃತಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೆಟ್ ಗಳಿಸಿ ಡಾ.ವಿಜಯಾ ಆದರು.
‘ಸಣ್ಣ ಕಥೆಯ ಸೊಗಸು’, ‘ಸುದ್ದಿ ಕನ್ನಡಿ’, ‘ನಿಜಧ್ಯಾನ’, ಸತ್ಯಜಿತ್ ರಾಯ್(ವ್ಯಕ್ತಿ ಚಿತ್ರ) ವಿಜಯಾ ಅವರ ಇತರ ಕೃತಿಗಳು. ಇದಲ್ಲದೆ ವಿಜಯಾ ಅವರು ಕನ್ನಡದ ಖ್ಯಾತ ಕಾದಂಬರಿಕಾರರಾದ ವಿ. ಎಂ. ಇನಾಂದಾರ್ ಮತ್ತು ವ್ಯಾಸರಾಯ ಬಲ್ಲಾಳರ ಕಾದಂಬರಿ/ಕಥೆಗಳ ವಿಮರ್ಶಾ ಸಂಪುಟಗಳನ್ನೂ ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಗ್ರಂಥವನ್ನೂ ಸಂಪಾದಿಸಿ ಕೊಟ್ಟಿದ್ದಾರೆ. ಮಹಿಳಾ ಚಳವಳಿ ಅಷ್ಟೇ ಅಲ,್ಲ ಎಲ್ಲಿ ಅನ್ಯಾಯ, ಅಸಮಾನತೆ, ಶೋಷಣೆಗಳ ವಿರುದ್ಧ ಪ್ರತಿಭಟನೆ ಹೋರಾಟ ನಡೆದರೂ ಅಲ್ಲೆಲ್ಲ ಮುಂಚೂಣಿಯಲ್ಲಿ ನಿಂತು ಅದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವಿಜಯಾ ದಣಿವರಿಯದ ಹೋರಾಟಗಾರ್ತಿ. ಸಾಂಸ್ಕೃತಿಕವಾಗಿ ರಂಗಭೂಮಿ, ಚಲನಚಿತ್ರ, ಸಾಹಿತ್ಯ ಇತ್ಯಾದಿ ಕಲಾ ಸಂಘಟನೆಗಳಲ್ಲೂ ಕ್ರಿಯಾಶೀಲರು. ಚಲಚಿತ್ರ ರಸಗ್ರಹಣ ಶಿಬಿರ ಇದ್ದೀತು. ಸುಚಿತ್ರಾ ಸಾಹಿತ್ಯ ಸಂಜೆ, ಸಾಹಿತ್ಯ, ನಾಟಕ, ವಿಚಾರ ಸಂಕಿರಣ ಮೊದಲಾಗಿ ಬೆಂಗಳೂರು ನಗರದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜಯಾ ಅವರ ದನಿ ಪ್ರತ್ಯಕ್ಷವಾಗಿ, ಕೆಲವೊಮ್ಮೆ ನೇಪಥ್ಯದಿಂದ ಸ್ಪಷ್ಟವಾಗಿ ಕೇಳಿ ಬರುತ್ತದೆ. ವಿಜಯಾ ಅವರ ಅವಿರತ ಹೋರಾಟ, ಸಾಂಸ್ಕೃತಿಕ ಕಾಳಜಿಗಳು, ಸಾಧನೆಗಳನ್ನು ಹಿಂಬಾಲಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡಮಿ, ನಾಟಕ ಅಕಾಡಮಿ ಪ್ರಶಸ್ತಿಗಳು, ಮಾಸ್ತಿ ಪ್ರಶಸ್ತಿ, ಲೇಖಕಿಯರ ಸಂಘದ ಪ್ರಶಸ್ತಿ ಅವುಗಳಲ್ಲಿ ಕೆಲವು. ಈಗ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯ ಗರಿ. ವಿಜಯಾ ಅವರಿಗೆ ನೇಸರಾಭಿನಂದನೆಗಳು.