ಪೊಲೀಸರ ಪ್ರತಿಯೊಂದು ಗುಂಡು ಸಂವಿಧಾನದೆಡೆಗೆ ಗುರಿಯಿಟ್ಟಿತ್ತು -ಚಂದ್ರಶೇಖರ್ ಆಝಾದ್
ತಿಹಾರ್ ಜೈಲಿನಿಂದ ಬಹಿರಂಗ ಪತ್ರ
ಹೊಸದಿಲ್ಲಿಯಲ್ಲಿ ಡಿಸೆಂಬರ್ 21ರಂದು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಬಂಧಿತರಾದ ದಲಿತ ಹೋರಾಟಗಾರ ಹಾಗೂ ಜೈಭೀಮ್ ಆರ್ಮಿಯ ಅಧ್ಯಕ್ಷ ಚಂದ್ರಶೇಖರ್ ಆಝಾದ್ ತಿಹಾರ್ ಜೈಲಿನಿಂದ ಬರೆದ ಬಹಿರಂಗಪತ್ರದಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ದೇಶದ ಜನತೆಯ ಹಕ್ಕುಗಳಿಗೆ ಸಂಚಕಾರ ತರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆತ್ಮೀಯ ಭಾರತೀಯರೇ
ತಿಹಾರ್ ಜೈಲಿನಿಂದಲೇ ಜೈ ಭೀಮ್, ಜೈ ಸಂವಿಧಾನ ಎಂದು ಹೇಳುತ್ತಿದ್ದೇನೆ.
ನಮ್ಮ ಹೋರಾಟಕ್ಕೆ ಸರಕಾರವು ಪ್ರತಿಕ್ರಿಯಿಸುತ್ತಿರುವ ರೀತಿಯನ್ನು ನೋಡಿದಾಗ, ಸಂವಿಧಾನವು ಎಷ್ಟು ಶಕ್ತಿಯುತವಾದದು ಹಾಗೂ ಅದರಲ್ಲಿ ಬಹುಜನರ ಹಿತಾಸಕ್ತಿ ಎಷ್ಟು ಅಗಾಧವಾಗಿದೆ ಎಂಬುದು ಮನದಟ್ಟಾಗುತ್ತಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಒತ್ತಡದಿಂದಾಗಿ ನರೇಂದ್ರ ಮೋದಿ ಸರಕಾರವು ಎಸ್ಸಿ/ಎಸ್ಟಿ (ದೌರ್ಜನ್ಯಗಳ ತಡೆ) ಕಾಯ್ದೆಯನ್ನು ಅಪ್ರಸಕ್ತಗೊಳಿಸಲು ಯತ್ನಿಸುತ್ತಿದೆ. ಭೀಮ್ ಆರ್ಮಿ ಹಾಗೂ ಇತರ ದಲಿತ ಸಂಘಟನೆಗಳ ಹೋರಾಟದ ಪರಿಣಾಮವಾಗಿ ಕೇಂದ್ರ ಸರಕಾರ ತನ್ನ ಯತ್ನದಿಂದ ಹಿಂದೆ ಸರಿದಿದೆ. ದಿಲ್ಲಿಯಲ್ಲಿ ಸಂತ ಶಿರೋಮಣಿ ರವಿದಾಸ್ ಮಹಾರಾಜ್ ಅವರ ಮಂದಿರವನ್ನು ನೆಲಸಮಗೊಳಿಸಿದಾಗಲೂ ಇಂತಹದ್ದೇ ಸನ್ನಿವೇಶ ಉಂಟಾಗಿತ್ತು. ಬಹುಜನರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದಾರೆ ಹಾಗೂ ಬಹುಜನರ ಹೋರಾಟದ ನೇತೃತ್ವವನ್ನು ವಹಿಸಿದ್ದಕ್ಕಾಗಿ ನನ್ನನ್ನು ಜೈಲಿಗೆ ಕಳುಹಿಸಲಾಯಿತು.
ಮತ್ತೊಮ್ಮೆ ನಾವು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ.
ಬಿಜೆಪಿಯ ಸಂವಿಧಾನ ವಿರೋಧಿ ಸರಕಾರವು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ತಂದಿದೆ. ಈ ಕೆಟ್ಟ ಮಸೂದೆಯು ಮುಸ್ಲಿಮರ ವಿರುದ್ಧವಷ್ಟೇ ಅಲ್ಲ ಎಸ್ಸಿ/ಎಸ್ಟಿ/ಒಬಿಸಿ ಹಾಗೂ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ಪ್ರತಿಯೊಬ್ಬ ಬಹುಜನ ವ್ಯಕ್ತಿಯ ವಿರುದ್ಧವಾದುದಾಗಿದೆ. ಅದರ ವಿರುದ್ಧ ನಾವು ಪ್ರತಿಭಟಿಸಿದ್ದರಿಂದ, ನಾನು ಮತ್ತೊಮ್ಮೆ ಜೈಲು ಸೇರಿದ್ದೇನೆ.
ಉತ್ತರಪ್ರದೇಶದಲ್ಲಿ ಹಲವಾರು ಪ್ರತಿಭಟನಕಾರರು ಧಾರುಣವಾಗಿ ಸಾವನ್ನಪ್ಪಿದ್ದಾರೆಂಬುದಾಗಿ ನಾನು ಕೇಳಿದ್ದೇನೆ. ಈ ನೋವಿನ ಸಮಯದಲ್ಲಿ ನನ್ನ ಬಹುಜನರ ಜೊತೆಗೆ ಇರಲಾಗದಿದ್ದುದ್ದಕ್ಕಾಗಿ ನನಗೆ ವಿಷಾದವಾಗಿದೆ. ಶಾಂತಿಯುತ ಪ್ರತಿಭಟನಕಾರರತ್ತ ಗುಂಡೆಸೆದಿರುವ ರೀತಿಯನ್ನು ಕಂಡಾಗ, ಯೋಗಿ ಆದಿತ್ಯನಾಥ್ ಸರಕಾರವು ಸಂಪೂರ್ಣವಾಗಿ ನಿರಂಕುಶ ಆಡಳಿತವಾಗಿ ಮಾರ್ಪಟ್ಟಿರುವುದು ಸ್ಪಷ್ಟವಾಗಿದೆ. ಈ ಗುಂಡುಗಳನ್ನು ಹಾರಿಸಿರುವುದು ಬಹುಜನರ ಮೇಲಲ್ಲ. ಸಂವಿಧಾನದ ಮೇಲೆ ಅದನ್ನು ಹಾರಿಸಲಾಗಿದೆ. ಸಂವಿಧಾನದ ಅನುಯಾಯಿಗಳಾದ ನಾವೆಲ್ಲರೂ ಅದನ್ನು ರಕ್ಷಿಸಲು ಸಾಂವಿಧಾನಿಕ ಮಾರ್ಗಗಳ ಮೂಲಕ ಹೋರಾಡಬೇಕಾಗಿದೆ.
ಬಿಜೆಪಿಯು ಅಧಿಕಾರಕ್ಕೆ ಬಂದಾಗಿನಿಂದ ಭಾರತವನ್ನು ಹಿಂದೂ ರಾಷ್ಟ್ರವಾಗಿ ರೂಪಿಸಲು ಅದು ದೃಢಸಂಕಲ್ಪ ಮಾಡಿದೆ. ಭಾರತವು ಹಿಂದೂ ರಾಷ್ಟ್ರವಾದಲ್ಲಿ, ಅದರ ಪತನ ನಿಶ್ಚಿತವೆಂದು ಅಂಬೇಡ್ಕರ್ ಹೇಳುತ್ತಿದ್ದರು. ಬಿಜೆಪಿಯು ಭಾರತವನ್ನು ಆ ಮಾರ್ಗದೆಡೆಗೆ ಕೊಂಡೊಯ್ಯುತ್ತಿದೆ. ನಾನು ಜೈಲಿನಲ್ಲಿದ್ದರೂ ಮತ್ತು ನಮ್ಮ ನೂರಾರು ಬೆಂಬಲಿಗರನ್ನು ವಶಕ್ಕೆ ತೆಗೆದುಕೊಂಡಿರುವ ಹೊರತಾಗಿಯೂ ಈ ಚಳವಳಿಯು ಕುಂಠಿತಗೊಳ್ಳುವುದಕ್ಕೆ ನೀವು ಬಿಡಲಿಲ್ಲ. ಈ ಹೋರಾಟವು ಕೇವಲ ಮುಸ್ಲಿಮ್ ಸಮುದಾಯದ ಏಕಾಂಗಿ ಹೋರಾಟವಲ್ಲವೆಂಬುದನ್ನು ನಾನು ಪುನರುಚ್ಚರಿಸುತ್ತಿದ್ದೇನೆ. ಬಹುಜನ ವರ್ಗದ ಪ್ರತಿಯೊಬ್ಬರ ಮೇಲೂ ಸಿಎಎ ಪರಿಣಾಮವನ್ನು ಬೀರಲಿದೆ.
ನನ್ನ ಆತ್ಮೀಯ ಬಹುಜನರೇ, ಇದಕ್ಕಾಗಿಯೇ ನಾವು ಸಿಎಎ, ಭಾರತ ಹಾಗೂ ಅದರ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯ ಗುರಿ ಕೇವಲ ಮುಸ್ಲಿಮರಷ್ಟೇ ಅಲ್ಲ, ಪ್ರತಿಯೊಬ್ಬ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಡವ, ನಿರ್ಗತಿಕ, ಅಲೆಮಾರಿ ಮತ್ತು ಬುಡಕಟ್ಟು ವ್ಯಕ್ತಿ ಕೂಡಾ ತನ್ನ ಪೌರತ್ವವನ್ನು ಸಾಬೀತು ಪಡಿಸಬೇಕಾಗುತ್ತದೆ.
ನೀವು ಭಾರತೀಯರೆಂದು ಸಾಬೀತುಪಡಿಸಲು ದಾಖಲೆಪತ್ರಗಳನ್ನು ಹಾಜರು ಪಡಿಸಬೇಕಾಗುತ್ತದೆ. ನಿರ್ಗತಿಕರಾದವರು, ಅರಣ್ಯವಾಸಿಗಳು, ಅಲೆಮಾರಿಗಳು ಹಾಗೂ ಅನಕ್ಷರಸ್ಥ ಬಹುಜನರು ಹಾಗೂ ಬುಡಕಟ್ಟು ಜನರು ರಾತ್ರೋರಾತ್ರಿ ತಮ್ಮ ಮತದಾನದ ಹಕ್ಕುಗಳನ್ನು ಹಾಗೂ ಮೀಸಲಾತಿಯ ಹಕ್ಕುಗಳನ್ನು ಕಳೆದುಕೊಳ್ಳಲಿದ್ದಾರೆ.
ಆರೆಸ್ಸೆಸ್‌ನ ಮುಖ್ಯ ಕಾರ್ಯಸೂಚಿ ಇದಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಯಾವ ವ್ಯವಸ್ಥೆಯ ವಿರುದ್ಧ ಹೋರಾಡಿದ್ದಾರೋ ಹಾಗೂ ತಮ್ಮ ಪ್ರಾಣವನ್ನು ಅಪಾಯಕ್ಕೊಡ್ಡಿದ್ದಾರೆಯೋ ಅದೇ ವ್ಯವಸ್ಥೆಯಡಿಗೆ ನಮ್ಮನ್ನು ಒಯ್ಯಲಾಗಿದೆ. ಈ ಸಮರದಲ್ಲಿ ನಾವು ಜೊತೆಯಾಗಿ ಹೋರಾಡಬೇಕಾಗಿದೆ. ನಮ್ಮನ್ನು ಜೈಲಿನಲ್ಲಿರಿಸುವ ಮೂಲಕ ಚಳವಳಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲವೆಂಬುದನ್ನು ಬಿಜೆಪಿ ಸರಕಾರವು ನೆನಪಿಟ್ಟುಕೊಳ್ಳಲಿದೆ. ಇದು ಸಿದ್ಧಾಂತಗಳ ಸಂಘರ್ಷವಾಗಿದೆ, ಮನುಸ್ಮತಿ ವರ್ಸಸ್ ಸಂವಿಧಾನದ ಹೋರಾಟವಾಗಿದೆ, ಬಹುಜನವರ್ಗದ ಅಸ್ತಿತ್ವದ ಕುರಿತ ಹೋರಾಟ ಇದಾಗಿದೆ. ಈ ಹೋರಾಟಕ್ಕಾಗಿ ನಾನು ನನ್ನ ಇಡೀ ಜೀವನವನ್ನು ಜೈಲಿನಲ್ಲಿ ಕಳೆಯಬೇಕಾಗಿ ಬಂದರೂ ನಾನದಕ್ಕೆ ಸಿದ್ಧನಿದ್ದೇನೆ.
ಭಾರತದ ಸಂವಿಧಾನವನ್ನು ರಕ್ಷಿಸಲು ಯಾವುದೇ ರೀತಿಯ ತ್ಯಾಗಕ್ಕೆ ನಾನು ತಯಾರಿದ್ದೇನೆ ಹಾಗೂ ನನ್ನವರೇ ಆದ ಬಹುಜನರು ಈ ಚಳವಳಿಯನ್ನು ನಿಲ್ಲಿಸಲಾರರು ಹಾಗೂ ಅದು ಹಿಂಸಾತ್ಮಕತೆಯೆಡೆಗೆ ತಿರುಗುವುದನ್ನು ತಡೆಯುವರು ಎಂಬ ಭರವಸೆಯನ್ನು ನಾನು ಹೊಂದಿದ್ದೇನೆ. ಯಾಕೆಂದರೆ ಈ ಚಳವಳಿಯು ಬೃಹತ್ ಆಗಿದೆ ಮತ್ತು ಅದನ್ನು ಹಿಂಸಾಚಾರವು ದುರ್ಬಲಗೊಳಿಸುತ್ತದೆ. ತಮ್ಮ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಹೃದಯತುಂಬಿದ ಸಂತಾಪವನ್ನು ಸಲ್ಲಿಸುತ್ತೇನೆ ಹಾಗೂ ನಾನು ಜೈಲಿನಿಂದ ಹೊರಬಂದ ಬಳಿಕ ಆ ಕುಟುಂಬಗಳನ್ನು ಭೇಟಿಯಾಗಲಿದ್ದೇನೆ.
ಉತ್ತರಪ್ರದೇಶ ಪೊಲೀಸರ ನಡವಳಿಕೆಯು ಶಂಕಾಸ್ಪದವಾದುದಾಗಿದೆ. ಅವರು ಆರೆಸ್ಸೆಸ್ ಕಾರ್ಯಕರ್ತರ ಹಾಗೆ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ವೈರಲ್ ಆಗಿರುವ ವೀಡಿಯೊವೊಂದರಲ್ಲಿ ಮೀರತ್ ನಗರದ ಎಸ್ಪಿ ಅಖಿಲೇಶ್ ಸಿಂಗ್ ಅವರು ಮುಸ್ಲಿಮರಿಗೆ ಬೆದರಿಸುತ್ತಿರುವುದನ್ನು ಹಾಗೂ ಅವರಿಗೆ ಪಾಕಿಸ್ತಾನಕ್ಕೆ ತೆರಳುವಂತೆ ಹೇಳುತ್ತಿರುವಂತೆ ಕಂಡುಬಂದಿರುವುದು ಇದಕ್ಕೊಂದು ತಾಜಾ ಉದಾಹರಣೆಯಾಗಿದೆ. ಸುಪ್ರೀಂಕೋರ್ಟ್ ತಕ್ಷಣವೇ ಇದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಹಾಗೂ ಪೊಲೀಸರ ದೌರ್ಜನ್ಯದ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಸಮಿತಿಯೊಂದು ರಚನೆಯಾಗಬೇಕಿದೆ.
ಗೃಹ ಸಚಿವ ಅಮಿತ್ ಶಾ ಪೊಲೀಸ್ ಪಡೆಯಿಂದ ಸಂತ್ರಸ್ತರಾದವರನ್ನು ನೀವು ಸಂಪೂರ್ಣವಾಗಿ ಬೆಂಬಲಿಸುತ್ತೀರಿ ಎಂದು ನಾನು ಕೇವಲ ಭರವಸೆ ಮಾತ್ರವಲ್ಲ, ನಂಬಿಕೆಯನ್ನು ಕೂಡಾ ಇರಿಸಿಕೊಂಡಿದ್ದೇನೆ. ಸಾಮಾನ್ಯ ಭೀಮ್ ಆರ್ಮಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗದಂತೆ ನೋಡಿಕೊಳ್ಳಿ ಹಾಗೂ ಪೊಲೀಸರ ಅಮಾನವೀಯ ಕೃತ್ಯಗಳು ಹಾಗೂ ತಂತ್ರಗಾರಿಕೆಯಿಂದ ನಿಮ್ಮ ಚಳವಳಿಯನ್ನು ರಕ್ಷಿಸಿರಿ.
ಸಂವಿಧಾನದಿಂದಾಗಿ ನಾವು ಉಳಿದುಕೊಂಡಿದ್ದೇವೆ. ಅದು ಬಹುಜನವರ್ಗದ ರಕ್ಷಣಾತ್ಮಕ ಕವಚವಾಗಿದೆ. ಸಂವಿಧಾನವನ್ನು ಗುರಿಯಿಡುವ ಪ್ರತಿಯೊಂದು ನಡೆಯನ್ನೂ ವಿಫಲಗೊಳ್ಳುವುದನ್ನು ಖಾತರಿಪಡಿಸಿಕೊಳ್ಳಿ.
ಕೊನೆಯಾದಾಗಿ ನಾನು ಜಾರ್ಖಂಡ್‌ನ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ. ಮನುವಾದಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಅವರು ‘ತುರ್ತುಪರಿಸ್ಥಿತಿ’ಯ ಈ ಸಮಯದಲ್ಲಿ ಬೆಳಕಿನ ಕಿರಣವನ್ನು ತೋರಿಸಿಕೊಟ್ಟಿದ್ದಾರೆ.
ಎಂದೆಂದೂ ನಿಮ್ಮವನೇ.
ಚಂದ್ರಶೇಖರ್ ಆಝಾದ್
ಅಧ್ಯಕ್ಷ, ಭೀಮ್ ಆರ್ಮಿ
ಗೃಹ ಸಚಿವ ಅಮಿತ್ ಶಾ ಪೊಲೀಸ್ ಪಡೆಯಿಂದ ಸಂತ್ರಸ್ತರಾದವರನ್ನು ನೀವು ಸಂಪೂರ್ಣವಾಗಿ ಬೆಂಬಲಿಸುತ್ತೀರಿ ಎಂದು ನಾನು ಕೇವಲ ಭರವಸೆ ಮಾತ್ರವಲ್ಲ, ನಂಬಿಕೆಯನ್ನು ಕೂಡಾ ಇರಿಸಿಕೊಂಡಿದ್ದೇನೆ. ಸಾಮಾನ್ಯ ಭೀಮ್ ಆರ್ಮಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗದಂತೆ ನೋಡಿಕೊಳ್ಳಿ ಹಾಗೂ ಪೊಲೀಸರ ಅಮಾನವೀಯ ಕೃತ್ಯಗಳು ಹಾಗೂ ತಂತ್ರಗಾರಿಕೆಯಿಂದ ನಿಮ್ಮ ಚಳವಳಿಯನ್ನು ರಕ್ಷಿಸಿರಿ.
ಸಂವಿಧಾನದಿಂದಾಗಿ ನಾವು ಉಳಿದುಕೊಂಡಿದ್ದೇವೆ. ಅದು ಬಹುಜನವರ್ಗದ ರಕ್ಷಣಾತ್ಮಕ ಕವಚವಾಗಿದೆ. ಸಂವಿಧಾನವನ್ನು ಗುರಿಯಿಡುವ ಪ್ರತಿಯೊಂದು ನಡೆಯನ್ನೂ ವಿಫಲಗೊಳ್ಳುವುದನ್ನು ಖಾತರಿಪಡಿಸಿಕೊಳ್ಳಿ.