ಎಂಜಲಿನ ಹಿಂದೆ ಪ್ರಾಂಜಲ ಮನಸ್ಸು
ಪ್ರತಿಯೊಬ್ಬ ವ್ಯಕ್ತಿಗೂ ಬದುಕಿನಲ್ಲಿ ಕೆಲವರ ನೆನಪು ಸದಾ ಕಾಡುತ್ತಿರುತ್ತದೆ. ಬಾಲ್ಯದಲ್ಲಂತೂ ಅಜ್ಜ-ಅಜ್ಜಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಹಜವಾಗಿ ಎಲ್ಲರ ಜೀವನದಲ್ಲಿ ಇಬ್ಬರು ಅಜ್ಜಂದಿರು, ಇಬ್ಬರು ಅಜ್ಜಿಯರನ್ನು ನೋಡುತ್ತೇವೆ. ನಮ್ಮ ತಂದೆಯ ಅಪ್ಪ-ಅಮ್ಮ ಮತ್ತು ನಮ್ಮ ತಾಯಿಯ ಅಪ್ಪ-ಅಮ್ಮ. ಈ ಇಬ್ಬರ ತಂದೆ-ತಾಯಿಯರಲ್ಲಿ ತಾಯಿಯ ಅಪ್ಪ-ಅಮ್ಮ ಎಂದರೆ ಇನ್ನೂ ಅಚ್ಚುಮೆಚ್ಚು. ಬಾಲ್ಯದಲ್ಲಿ ಬಹುತೇಕ ಮಕ್ಕಳು ಬೆಳೆಯುವುದು ತಾಯಿಯ ತವರು ಮನೆಯಾದ ಅಜ್ಜನ ಮನೆಯಲ್ಲಿ. ಹೀಗಾಗಿ ನಾನೂ ನನ್ನ ಬಾಲ್ಯವನ್ನು ನನ್ನ ಅಜ್ಜನ ಮನೆಯಲ್ಲಿ ಕಳೆದಿದ್ದರಿಂದ ಅಲ್ಲಿನ ಪ್ರೀತಿ ತುಂಬಿದ ಒಡನಾಟವನ್ನು ಮರೆಯಲು ಸಾಧ್ಯವಿಲ್ಲ.
ನನ್ನ ತಾಯಿಯ ತವರು ಮನೆ ತುಂಬು ಕುಟುಂಬವಾಗಿದ್ದರಿಂದ ಮಾವ-ಅತ್ತೆಯರ ಆರೈಕೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ನನ್ನ ಬಾಲ್ಯದ ದಿನಗಳಲ್ಲಿನ ನನ್ನ ಅಜ್ಜ-ಅಜ್ಜಿಯ ಪ್ರೀತಿ ತುಂಬಿದ ಕೈತುತ್ತು ಯಾವತ್ತೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತಿದೆೆ. ಸಿದ್ದಜ್ಜ ಎಂದು ನನ್ನಜ್ಜನ ಹೆಸರು. ಹೆಸರಿಗೆ ತಕ್ಕಂತೆೆ ಎಲ್ಲದಕ್ಕೂ ಸಿದ್ದಪುರುಷ ನನ್ನಜ್ಜ. ಯಾವಾಗಲೂ ನನ್ನಜ್ಜನನ್ನು ನೋಡುವುದೇ ಒಂದು ಖುಷಿ. ಅವರ ಬಾಹ್ಯರೂಪ ಎತ್ತರವಾದ ಆಳು, ಯಾವಾಗಲೂ ಶುಭ್ರವೂ ನಿರಾಡಂಬರವೂ ಆದ ಬಿಳಿಯ ಕಚ್ಚೆ ಪಂಚೆ, ನಿಲುವಂಗಿ, ಕಪ್ಪು ಕನ್ನಡಕ, ಆ ಕನ್ನಡಕವನ್ನು ಆಗಾಗ ತೆಗೆದು ಪಂಚೆಯ ಸೆರಗಿಗೆ ಉಜ್ಜಿಕೊಂಡು ಹಾಕಿಕೊಳ್ಳುವ ರೀತಿ, ಅಪ್ಪಟ ಹಳ್ಳಿಯ ಚರ್ಮದ ಚಪ್ಪಲಿಯನ್ನು ಧರಿಸಿ ನಡೆದು ಬರುತ್ತಿದ್ದರೆ ನೋಡುವುದೇ ಒಂದು ಮಹದಾನಂದ. 20 ವರ್ಷಗಳ ಹಿಂದೆ ಮನೆಯ ಜಾಗದ ವಿಚಾರವಾಗಿ ಪಕ್ಕದ ಮನೆಯವರೊಂದಿಗೆ ಆಗಾಗ ನಡೆಯುತ್ತಿದ್ದ ಜಗಳವನ್ನು ನಮ್ಮ ಅಜ್ಜ ಒಂಟಿಸಲಗದಂತೆ ಹೆದರಿಸುವಾಗ ಯಾವುದೋ ಮೂಲೆಯಲ್ಲಿ ನಿಂತು ನನ್ನಜ್ಜಿಯ ಸೆರಗನ್ನು ಹಿಡಿದು ಭಯಪಡುತ್ತಾ ಕಣ್ಣೀರು ಹಾಕಿದ್ದು ಈಗಲೂ ಕಣ್ಣಮುಂದೆ ಇದೆ. ಆನೆ ನಡೆದಿದ್ದೇ ದಾರಿ ಎನ್ನುವಂತೆ ಬದುಕಿದ್ದವರು ಅವರು. ಊಟ-ಉಪಚಾರ, ಉಡುಗೆ-ತೊಡುಗೆ, ಮಾತು-ಮೌನ ಎಲ್ಲದರಲ್ಲೂ ಒಂದು ಶಿಸ್ತಿನ ಜೀವನವನ್ನು ರೂಢಿಸಿಕೊಂಡಿದ್ದವರು. ಇನ್ನು ನನ್ನ ಅಜ್ಜಿ ಸಾಕಮ್ಮ. ನಮ್ಮ ಮನೆಯಲ್ಲಿ ಮಾವ-ಅತ್ತೆ ಎಲ್ಲರೂ ನಮ್ಮ ಅಜ್ಜಿಗೆ ಅವ್ವ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರಿಂದ ಈಗಲೂ ಅವ್ವ ಎನ್ನುವ ಮಾತೃವಾತ್ಸಲ್ಯದ ನುಡಿ ಉಳಿದುಕೊಂಡಿದೆ. ನಾನು ಯಾವುದಾದರೂ ಸಂದಭರ್ದಲ್ಲಿ ಹಠಮಾಡಿದಾಗ ಸೊಂಟದ ಸೆರಗಿನಲ್ಲಿ ಇಟ್ಟುಕೊಂಡಿದ್ದ ಒಂದು-ಎರಡು ರೂಪಾಯಿ ಕೊಟ್ಟರೆ ಅದರಲ್ಲಿ ನನ್ನ ನಿಕ್ಕರಿ(ದೊಡ್ಡ ಚಡ್ಡಿ)ನ ಜೇಬು ತುಂಬುವಷ್ಟು ಮಿಠಾಯಿ, ಕೋಡಬಳೆಯನ್ನು ಕೊಂಡು ತಿಂದಿದ್ದು ಕಣ್ಣ ಮುಂದೆಯೇ ಇದೆ. ಅವ್ವ ಮಾಡುತ್ತಿದ್ದ ಉದಕ-ಮುದ್ದೆಯ ಊಟವನ್ನು ನೆನಪು ಮಾಡಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತೆ. ಜಗತ್ತಿನ ಆಹಾರ ಪದ್ಧ್ದತಿಯ ಫ್ಯಾಷನ್ ಎಷ್ಟೇ ಬದಲಾದರೂ ನನ್ನವ್ವ ಮಾಡುತ್ತಿದ್ದ ಅಡುಗೆಯ ರುಚಿ ಮಾತ್ರ ಎಂದೂ ಬದಲಾಗಿಲ್ಲ! ಕಟ್ಟಿಗೆಯ ಒಲೆಯನ್ನು ಹಚ್ಚಿ ಅಡುಗೆ ಮಾಡುವಾಗ ಕಟ್ಟಿಗೆ ಸರಿಯಾಗಿ ಉರಿಯದಿದ್ದಾಗ ಕೊಳವೆಯಲ್ಲಿ ಊದಿ ಮತ್ತೆ ಒಲೆಯನ್ನು ಹಚ್ಚಿ ಒಗ್ಗರಣೆ ಹಾಕಿದರೆ ಅದರ ವಾಸನೆ ಹೊರಗೆ ನಿಂತವರ ಘ್ರಾಣೇಂದ್ರಿಯಕ್ಕೆ ಬಡಿಯುತ್ತಿತ್ತು. ಅಷ್ಟರ ಮಟ್ಟಿಗೆ ಅವರ ಕೈರುಚಿ ಇರುತ್ತಿತ್ತು.
ಊಟವಾದ ನಂತರ ಅವ್ವನಿಗೆ ಆಗಾಗ ಎಲೆ ಅಡಿಕೆ ಹಾಕುವ ರೂಢಿ ಇತ್ತು. ಆಗ ನಾನು ಅವ್ವ ಜಗಿದ ಎಲೆ ಅಡಿಕೆ ನನಗೂ ಬೇಕು ಎಂದು ಹಠ ಮಾಡಿದರೆ ಜಗಿದು ನುಣ್ಣಗೆ ಮಾಡಿದ್ದ ತಾಂಬೂಲವನ್ನು ತೆಗೆದು ನನಗೆ ಕೊಡುತಿತ್ತು. ಇಂದಿನ ದಿನಮಾನದಲ್ಲಿ ಮಕ್ಕಳು ತಂದೆ ತಾಯಿ ಊಟ ಮಾಡಿದ ತಟ್ಟೆಯಲ್ಲಿಯೇ ಊಟ ಮಾಡಲು ಮುಜುಗರ ಪಡುತ್ತಾರೆ. ಆದರೆ ನನಗೆ ಅವ್ವ ಜಗಿದು ಕೊಟ್ಟ ತಾಂಬೂಲ ಅಸಹ್ಯ ಅನಿಸಲೇ ಇಲ್ಲ. ಏಕೆಂದರೆ ನನ್ನ ಅವ್ವ ಜಗಿದು ಕೊಟ್ಟ ತಾಂಬೂಲದ ಎಂಜಲಿನ ಹಿಂದೆ ಪ್ರಾಂಜಲ ಮನಸ್ಸು ಇತ್ತು. ಅಂಥ ಪ್ರಾಂಜಲ ಮನಸ್ಸು ಯಾರಿಗೆ ತಾನೆ ಅಸಹ್ಯ ಹುಟ್ಟಿಸಲು ಸಾಧ್ಯ?! ಕಾಡಿನಲ್ಲಿ ಮತಂಗಾಶ್ರಮದಲ್ಲಿದ್ದ ಶಬರಿ ಶ್ರೀರಾಮನಿಗೆ ಆತಿಥ್ಯ ಮಾಡುವಾಗ ಪ್ರತಿ ಹಣ್ಣನ್ನೂ ಕಚ್ಚಿ ನೋಡಿ ಸಿಹಿಯಾಗಿರುವ ಹಣ್ಣನ್ನು ಮಾತ್ರ ಶ್ರೀ ರಾಮನಿಗೆ ಕೊಡುತ್ತಿದ್ದಳಂತೆ. ಶ್ರೀರಾಮ ಶಬರಿ ಎಂಜಲು ಮಾಡಿದ ಹಣ್ಣನ್ನು ಅತ್ಯಂತ ಪ್ರೀತಿಯಿಂದ ಸವಿಯುತ್ತಾನೆ ಎನ್ನುವ ರಾಮಾಯಣದ ಕಥೆಯಂತೆ ನನ್ನಜ್ಜಿಯ ತಾಂಬೂಲದ ಸವಿ ಅಂಥ ಪ್ರೀತಿಯನ್ನು, ಕೈತುತ್ತನ್ನು ಕೊಟ್ಟು ಬೆಳೆಸಿದೆ. ಆದರೆ ಈಗ ಅಜ್ಜ ನಮ್ಮಿಂದ ಬಹುದೂರ ಹೋಗಿದ್ದಾರೆ. ಅಜ್ಜನೊಂದಿಗಿನ ಬಾಂಧವ್ಯವನ್ನು ನೆನಪು ಮಾಡಿಕೊಂಡಾಗಲೆಲ್ಲಾ ಕಣ್ಣುಗಳು ಒದ್ದೆಯಾಗುತ್ತವೆ. ಬಹುಶಃ ನನ್ನಂತೆಯೇ ನನ್ನ ಅವ್ವನೂ ಅಜ್ಜನಿಂದ ದೂರವಾಗಿ ಒಬ್ಬಂಟಿಯ ಬದುಕನ್ನು ಅನುಭವಿಸುತ್ತಾ ದಿನಗಳನ್ನು ದೂಡುತ್ತಿದ್ದಾರೆ.
ಅವರಿಗೆ ಈ ವಯಸ್ಸಿನಲ್ಲಿ ನಾವು ಕೊಡಬಹುದಾದ ಅತ್ಯಂತ ಅಮೂಲ್ಯ ಉಡುಗೊರೆ ಎಂದರೆ ಎಲ್ಲರ ಪ್ರೀತಿಯ ಆರೈಕೆ. ನನ್ನೊಂದಿಗೆ ಎಲ್ಲರೂ ಇದ್ದಾರೆ ಎನ್ನುವ ಮನೋಬಲವನ್ನು ತುಂಬಿದರೆ ಖಂಡಿತಾ ನನ್ನವ್ವನ ಖುಷಿಯಲ್ಲಿ ನಾವೆಲ್ಲಾ ಸಂತಸದಿಂದ ಇರಲು ಸಾಧ್ಯ. ಬದುಕಿನಲ್ಲಿ ನಾವು ಎಷ್ಟೇ ಮೇಲೇರಿದರೂ, ಸಿರಿವಂತಿಕೆಯ ಜೋಕಾಲಿಯಲ್ಲಿ ತೇಲಾಡಿದರೂ ಮನೆಯಲ್ಲಿ ಹಿರಿಯ ಜೀವಗಳು ಇಲ್ಲವೆಂದರೆ ಏನೋ ಬೆಲೆಕಟ್ಟಲಾಗದ ಬಾಂಧವ್ಯವನ್ನು, ಸಂಬಂಧವನ್ನು ಕಳೆದುಕೊಂಡಂತೆಯೇ. ಅಂತಹ ಸಂಬಂಧಗಳಿಂದ ದೂರವಾಗುವುದು ಬೇಡವೆಂದಾದರೆ ಹಿರಿಯ ಜೀವಗಳನ್ನು ಅಕ್ಕರೆಯ ಪ್ರೀತಿ, ವಾತ್ಸಲ್ಯದಿಂದ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಲ್ಲವೇ?