ಸಫ್ದರ್ ಹಶ್ಮಿ ನೆನಪು
ಸುಧನ್ವ ದೇಶಪಾಂಡೆ
ಬೆಳಗ್ಗೆ ನಾನು ಮರಳಿ ಆಸ್ಪತ್ರೆಯಲ್ಲಿದ್ದೆ. ದಾಳಿಯ ಸುದ್ದಿ ಹಲವು ವರ್ತಮಾನ ಪತ್ರಿಕೆಗಳಲ್ಲಿ ಮುಖಪುಟ ಸುದ್ದಿಯಾಗಿ ಪ್ರಕಟವಾಗಿತ್ತು. ಅಷ್ಟಾಗುವಾಗ, ಹಶ್ಮಿಯ ಮೇಲೆ ದಾಳಿ ನಡೆಸಿದವರ ನೇತೃತ್ವ ವಹಿಸಿದ್ದಾತ ಸಾಹಿಬಾಬಾದ್‌ನ ಓರ್ವ ಕಾಂಗ್ರೆಸ್ ನಾಯಕ ಮತ್ತು ಗೂಂಡಾ ಮುಖೇಶ್ ಶರ್ಮಾ ಎಂದು ನಮಗೆ ಗೊತ್ತಾಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು, ಆಗ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ನಾರಾಯಣ್ ದತ್ತ್ ತಿವಾರಿ ಹಾಗೂ ಬೂಟಾ ಸಿಂಗ್ ಕೇಂದ್ರ ಗೃಹ ಸಚಿವರಾಗಿದ್ದರು. ಆವತ್ತು ಬೂಟಾ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿದಾಗ ಕುಪಿತ ಗುಂಪೊಂದು ಅವರನ್ನು ತರಾಟೆಗೆ ತೆಗೆದುಕೊಂಡಿತು ಆ ಗುಂಪು ಅವರಿಗೆ ಐಸಿಯು ಒಳಹೋಗಿ ಸಫ್ದರ್‌ರನ್ನು ನೋಡಲು ಅವಕಾಶ ನೀಡಲಿಲ್ಲ. ಈ ಘಟನೆಗೆ ಮೊದಲೋ ಅಥವಾ ನಂತರವೋ ನನಗೆ ಖಚಿತವಾಗಿ ಗೊತ್ತಿಲ್ಲ; ಸುಮಾರು 300 ಮಂದಿ ಕಲಾವಿದರು ಹಾಗೂ ಬುದ್ಧಿಜೀವಿಗಳು ಬೂಟಾಸಿಂಗ್‌ರ ನಿವಾಸದ ಎದುರು ಮತ ಪ್ರದರ್ಶನ ನಡೆಸಿದರು. ಪರಿಣಾಮವಾಗಿ, ದಾಳಿಗೆ ಏನು ಕಾರಣವೆಂದು ತಿಳಿಯಲು ಉನ್ನತ ಮಟ್ಟದ ವಿಚಾರಣೆ ನಡೆಸಲಾಗುವುದೆಂದು ಗೃಹ ಸಚಿವರು ಆಶ್ವಾಸನೆ ನೀಡಿದರು.
ಅಲ್ಲಿಂದ ಪ್ರದರ್ಶನಕಾರರು ರವೀಂದ್ರ ಭವನಕ್ಕೆ ತೆರಳಿ ಸಭೆ ನಡೆಸಿ, ಜನವರಿ 9ನೇ ತಾರೀಕಿನಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದರು. ಆ ದಿನ ಮಧ್ಯಾಹ್ನ ಸಫ್ದರ್ ಕರೆದಿದ್ದ ಪತ್ರಿಕಾಗೋಷ್ಠಿ ನಿಗದಿಯಾದಂತೆ ನಡೆಯಿತು. ಅದರಲ್ಲಿ ಮಾತಾಡಿದವರಲ್ಲಿ ರಂಗ ಕಲಾವಿದರಾದ ಗೋವಿಂದ ದೇಶ್‌ಪಾಂಡೆ, ಎಂ.ಕೆ ರೈನಾ ಮತ್ತು ಹಬೀಬ್ ತನ್ವಿರ್ ಸೇರಿದ್ದರು.
ಎಂ.ಕೆ. ರೈನಾ ತನ್ನ ಸಿಟ್ಟನ್ನು ತೆಗೆದುಕೊಳ್ಳಲಾರದೆ ಹೇಳಿದರು: ‘‘ನಾವು ಸಫ್ದರ್ ಹಶ್ಮಿಗಾಗಿ ಮೊವಣಿಗೆಯಲ್ಲಿ ಬಂದಿದ್ದೇವೆ, ಯಾಕೆಂದರೆ ಕಲಾವಿದರನ್ನು ಒಂದಾಗಿಸುವುದರಲ್ಲಿ ಅವರು ಒಂದು ಕೇಂದ್ರ ಶಕ್ತಿಯಾಗಿದ್ದರು’’
ಮೃದು ಭಾಷಿಯಾದ ಹಬೀಬ್ ತನ್ವಿರ್ ಆವತ್ತು ಗುಡುಗಿದರು: ‘‘ಇದು ಪರಿಸ್ಥಿತಿಯಾದರೆ, ಎಲ್ಲಿ ಜನರಿಗೂ ಕೋವಿ ಕೊಡಿ. ಆಗ ನಾವು ನಮ್ಮ ರಕ್ಷಣೆ ಮಾಡಿಕೊಳ್ಳುತ್ತೇವೆ’’ ಪತ್ರಿಕಾಗೋಷ್ಠಿಯ ಬಳಿಕ ನಾವು ಮರಳಿ ಆಸ್ಪತ್ರೆಗೆ ಹೋದೆವು. ಆ ದಿನ ರಾತ್ರಿ ಸುಮಾರು 10:30ಕ್ಕೆ ಐಸಿಯುನಿಂದ ಹೊರಬಂದು ಬ್ರಿಜೇಶ್ ಸುದ್ದಿ ನೀಡಿದರು. ಸಫ್ದರ್ ಇನ್ನಿಲ್ಲ.
ಮುಂದಿನ ಕೆಲವು ನಿಮಿಷಗಳ ಕಾಲ ಅಲ್ಲಿ ವೌನ ನೆಲೆಸಿತ್ತು. ಬಳಿಕ ಯಾರೋ ಒಬ್ಬರು ಘೋಷಣೆ ಕೂಗಿದರು: ‘‘ಕಾಮ್ರೇಡ್ ಸಫ್ದರ್ ಅಮರ್‌ರಹೇ!’’ ಪುನಃ ಮತ್ತೊಂದು ಘೋಷಣೆ: ‘‘ಖೂನ್ ಕಾ ಬದಲಾ ಖೂನ್‌ಸೆ ಲೇಂಗೇ!’’
ನಾನು ಮೂಕ ವಿಸ್ಮಿತನಾಗಿ ಕುಳಿತೆ. ಸ್ವಲ್ಪ ಹೊತ್ತಿನ ಬಳಿಕ ಮಾಲಾ ಬಂದರು. ‘‘ಸ್ವಲ್ಪ ನಿದ್ದೆ ಮಾಡಿ. ನಾಳೆ ಬೆಳಗ್ಗೆ ಪಕ್ಷದ ಕಚೇರಿಗೆ ಬನ್ನಿ.’’
ನಾವು ಮೂವರು- ಲಲಿತ್, ಜೋಗಿ ಮತ್ತು ನಾನು ಶೂನ್ಯವನ್ನು ದಿಟ್ಟಿಸುತ್ತ ಕುಳಿತೆವು. ಆಮೇಲೆ ಲಲಿತ್ ಎದ್ದುನಿಂತು ಏನನ್ನೋ ಒಂದಷ್ಟು ಬೈಗುಳದ ಮಾತುಗಳನ್ನು ಹೇಳಿ ಹೊರಟು ಹೋದ. ಜೋಗಿ ಮತ್ತು ನಾನು ನಮಗೆ ದೊರೆತ ಒಂದು ಹೊದಿಕೆಯೊಳಗೆ ನುಸುಳಿ ಮಲಗಿಕೊಂಡೆವು.
ಜನವರಿ 2ರ ಬೆಳ್ಳಂಬೆಳಗ್ಗೆ ಮಾಲಾ ಮನೆಗೆ ಹೋದರು. ಒಂಬತ್ತು ಗಂಟೆಯ ವೇಳೆಗೆ ಆಕೆ ಮರಳಿ ಆಸ್ಪತ್ರೆಯಲ್ಲಿದ್ದರು. ಸಫ್ದರ್ ಇನ್ನು ಬದುಕುವುದಿಲ್ಲವೆಂದು ಆಕೆಗೆ ಗೊತ್ತಿತ್ತು. ಇದನ್ನು ಹಿರಿಯ ವೈದ್ಯರು ಖಚಿತ ಪಡಿಸಿದ್ದರು. ಸಫ್ದರ್ ಮೇಲೆ ನಡೆದ ದಾಳಿಯಲ್ಲಿ ಅವರಿಗೆ ಎಷ್ಟೊಂದು ಗಂಭೀರ ಸ್ವರೂಪದ ಗಾಯಗಳಾಗಿದ್ದವೆಂದರೆ ಅವರಿಗೆ ಯಾವುದೇ ಶಸ್ತ್ರಚಿಕಿತ್ಸೆ ನಡೆಸುವುದು ಸಾಧ್ಯವಿರಲಿಲ್ಲ.
ಆ ಇಡೀ ದಿನ ಬಹಳಷ್ಟು ಜನ ಆಸ್ಪತ್ರೆಗೆ ಬಂದರು. ಅವರಲ್ಲಿ ಕೆಲವರು ಮಾಲಾ ಅವರನ್ನು ಭೇಟಿಯಾದರು. ಬೂಟಾ ಸಿಂಗ್ ಅವರನ್ನು ಹಿಂದೆ ಕಳುಹಿಸಿದ್ದು ಆಕೆಗೆ ನೆನಪಿದೆ. ದೂರದರ್ಶನದ ಹಲವು ಸಿಬ್ಬಂದಿಯೂ ಆಸ್ಪತ್ರೆಗೆ ಭೇಟಿ ನೀಡಿದ್ದೂ ಆಕೆಗೆ ನೆನಪಿದೆ. ಕೆಲವು ವರ್ಷಗಳ ಹಿಂದೆ ಹಲವಾರು ಸಾಕ್ಷಚಿತ್ರಗಳನ್ನು ಮಾಡುವಾಗ ಸಫ್ದರ್ ಅವರ ಗೆಳೆತನ ಸಂಪಾದಿಸಿದ್ದರು. ಕಲಾವಿದರು ಆಸ್ಪತ್ರೆಗೆ ಬರುತ್ತಲೇ ಇದ್ದರು. ಭೀಷ್ಮ ಸಹಾನಿ, ಇಬ್ರಾಹೀಂ ಅಲ್ಕಾಝಿ ಸಂಜೆ ಆಸ್ಪತ್ರೆಗೆ ಬಂದರು.
ಆ ದಿನ ಕಾಯುವುದರಲ್ಲೇ ಕಳೆಯಿತು. ಸಫ್ದರ್‌ರವರ ಸಹೋದರಿಯಾದ ಶಬನಮ್‌ಮತ್ತು ಶೆಹ್ಲಾ ಊಟದ ವ್ಯವಸ್ಥೆ ಮಾಡಿದರು. ಒಂದು ಹಂತದಲ್ಲಿ ಅಮ್ಮಾಜಿ ಮತ್ತು ಮಾಲಾರಿಗೆ ಐಸಿಯು ಒಳಗೆ ಹೋಗಲು ಅನುಮತಿ ನೀಡಲಾಯಿತು. ಅವರು ದೂರದಿಂದ ಸಫ್ದರ್ ಅವರನ್ನು ನೋಡಿದರು. ಸಫ್ದರ್ ಮೃತಪಟ್ಟಿದ್ದಾರೆಂದು ವೈದ್ಯರು ಅಧಿಕೃತವಾಗಿ ಘೋಷಿಸಿದ ಬಳಿಕ, ಮಾಲಾ ಮನೆಗೆ ಹೋಗುವ ಮೊದಲು ನೇತ್ರದಾನದ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿಕ್ಕಾಗಿ ಕಾದರು. ಸಫ್ದರ್‌ರ ಅಂಗಾಂಗಗಳನ್ನು ದಾನ ಮಾಡಿ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗೆ ನೀಡಬೇಕೆಂದು ಮಾಲಾ ಬಯಸಿದ್ದರು. ಆದರೆ ಹಾಗೆ ಮಾಡಲು ಕಾನೂನಿನ ತೊಡಕುಗಳಿದ್ದವು.