ಸಿಎಎ ಅನುಷ್ಠಾನಕ್ಕೆ ಉತ್ತರಪ್ರದೇಶ ಸರಕಾರ ಆದೇಶ
ಲಕ್ನೋ, ಜ.5: ದೇಶಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಅನುಷ್ಠಾನಕ್ಕೆ ಉತ್ತರಪ್ರದೇಶ ಸರಕಾರ ಆದೇಶ ನೀಡಿದ್ದು, ದೇಶದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರುತ್ತಿರುವುದಕ್ಕೆ ಮೊದಲ ಹೆಜ್ಜೆ ಇಡುತ್ತಿರುವ ಮೊದಲ ರಾಜ್ಯವಾಗಿದೆ.
ಮೂರು ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ವಲಸೆ ಬಂದಿರುವ ಹಿಂದೂಗಳು, ಸಿಖ್ಖರು, ಜೈನರು, ಬೌದ್ದರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನರನ್ನು ಗುರುತಿಸುವಂತೆ ಆದೇಶಿಸಲಾಗಿದ್ದು, ಉತ್ತರಪ್ರದೇಶವು ಪೌರತ್ವ ನೀಡಲು ಅರ್ಹವಿರುವ ವಲಸಿಗರ ಅಂತಿಮ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಗೆ ಮುಂದಾಗಿರುವ ಮೊದಲ ರಾಜ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
‘‘ಪೌರತ್ವವಿಲ್ಲದೆ ರಾಜ್ಯದಲ್ಲಿ ದಶಕಗಳಿಂದ ನೆಲೆ ನಿಂತಿರುವ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ವಲಸಿಗರನ್ನು ಪತ್ತೆ ಹಚ್ಚುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ತಿಳಿಸಲಾಗಿದೆ. ಅಫ್ಘಾನಿಸ್ತಾನದಿಂದ ಉತ್ತರಪ್ರದೇಶಕ್ಕೆ ಬಂದು ನೆಲೆಸಿರುವ ಸಂಖ್ಯೆ ತುಂಬಾ ಕಡಿಮೆಯಿದೆ. ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾಗಿ ರಾಜ್ಯದಲ್ಲಿ ನೆಲೆಸಿರುವ ವಲಸಿಗರ ಅಂದಾಜು ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ’’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ)ಅವನೀಶ್ ಅವಸ್ಥಿ ಆಂಗ್ಲ ದಿನಪತ್ರಿಕೆಗೆ ತಿಳಿಸಿದ್ದಾರೆ.
ಉಭಯ ದೇಶಗಳಿಂದ ವಲಸೆ ಬಂದಿರುವ ಜನರು ಮುಖ್ಯವಾಗಿ ಲಕ್ನೋ, ಹಾಪುರ್, ರಾಂಪುರ್, ಶಹಜಹಾನ್ಪುರ, ನೊಯ್ಡೋ ಹಾಗೂ ಗಾಝಿಯಾಬಾದ್‌ನಲ್ಲಿ ಹೆಚ್ಚಿದ್ದಾರೆ.