varthabharthi


ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ನಿಮ್ಮ ಪೌರತ್ವದ ಹಕ್ಕುಗಳ ಉಳಿಸಿಕೊಳ್ಳಲು ಒಂದು ಅಮೂಲ್ಯ ಕೆಪಿಡಿ

ವಾರ್ತಾ ಭಾರತಿ : 5 Jan, 2020
-ಕಾರುಣ್ಯಾ

ಸಿಎಎ ಕಾಯ್ದೆ ಪರ ವಿರುದ್ಧ ದೇಶ ಒಡೆದಿದೆ. ಸಿಎಎ ಕಾಯ್ದೆಯ ಕುರಿತಂತೆ ಜನರಲ್ಲಿ ವ್ಯಾಪಕಗೊಂದಲಗಳಿವೆ. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದಿಂದ ದೌರ್ಜನ್ಯದ ಹಿನ್ನೆಲೆಯಲ್ಲಿ ಭಾರತಕ್ಕೆ ವಲಸೆ ಬಂದ ಆ ದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಕ್ಕಾಗಿ ಸಿಎಎ ಕಾನೂನನ್ನು ಮಾಡಲಾಗಿದೆ ಎಂದು ಸರಕಾರ ನಂಬಿಸುವ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಸಿಎಎ ಎನ್ನುವುದು ಅಲ್ಲಿನ ಅಲ್ಪಸಂಖ್ಯಾತರನ್ನು ಉದ್ಧರಿಸುವುದಕ್ಕಾಗಿ ಅಲ್ಲ, ಭಾರತದಲ್ಲಿರುವ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುವುದಕ್ಕಾಗಿ ಜಾರಿಗೆ ತರಲಾಗಿದೆ ಎಂದು ಈ ದೇಶದ ವಿವಿಧ ಸಂವಿಧಾನ ತಜ್ಞರು ಹೇಳುತ್ತಿದ್ದಾರೆ. ಸಿಎಎ ಕಾಯ್ದೆ ಸಂವಿಧಾನದ ಆಶಯಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದೂ ಅವರು ವಾದ ಮಾಡುತ್ತಿದ್ದಾರೆ. ಸಿಎಎ ಕಾಯ್ದೆ ಜಾರಿಗೆ ಬಂದಿರುವುದೇ ದೇಶಾದ್ಯಂತ ಎನ್‌ಆರ್‌ಸಿಯನ್ನು ಜಾರಿಗೆ ತರಲು ಎನ್ನುವುದು ಸಂವಿಧಾನಪರವಾಗಿರುವವರ ವಾದವಾಗಿದೆ. ಇದರಿಂದ ಬರೇ ಮುಸ್ಲಿಮರು ಮಾತ್ರವಲ್ಲ, ಇಡೀ ದೇಶವೇ ತಮ್ಮ ಪೌರತ್ವ ದಾಖಲೆಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗುತ್ತದೆ. ನೋಟು ನಿಷೇಧಕ್ಕಿಂತಲೂ ಭೀಕರವಾದ ಪರಿಸ್ಥಿತಿಯನ್ನು ದೇಶ ಎದುರಿಸಲಿದೆ. ಆರ್ಥಿಕವಾಗಿ ಸಂಪೂರ್ಣ ನೆಲಕಚ್ಚಿರುವ ದೇಶವನ್ನು ಇನ್ನಷ್ಟು ವಿಪತ್ತುಗಳಿಗೆ ಒಡ್ಡಲಿದೆ ಎಂದು ಒಂದು ಜನ ಸಮೂಹ ಆತಂಕ ಪಡುತ್ತಿದೆ. ಮುಸ್ಲಿಮರ ವಿರುದ್ಧ ಸಿಎಎಯನ್ನು ಬಳಸುವುದಕ್ಕೆ ಯತ್ನಿಸಿ ಸರಕಾರ ಕೈ ಸುಟ್ಟುಕೊಂಡಿದೆ. ಯಾಕೆಂದರೆ, ಇದರ ವಿರುದ್ಧ ಪ್ರತಿಭಟನೆಯಲ್ಲಿ ಎಲ್ಲ ಜಾತಿ ಧರ್ಮದ ಜನರೂ ಒಗ್ಗೂಡಿದ್ದಾರೆ. ಆದುದರಿಂದ ಎನ್‌ಆರ್‌ಸಿಯಿಂದ ಹಿಂದೆ ಸರಿದಂತೆ ನಟಿಸುತ್ತಿದೆ. ಆದರೆ ಹಿಂಬಾಗಿಲಲ್ಲಿ ಎನ್‌ಆರ್‌ಸಿಯನ್ನು ಜಾರಿಗೆ ತಂದು, ಅಲ್ಪಸಂಖ್ಯಾತರ, ದಲಿತರ, ಆದಿವಾಸಿಗಳ ಪೌರತ್ವ ರದ್ದು ಮಾಡುವುದಕ್ಕೆ ಸರಕಾರ ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರ ಗೊಂದಲಗಳನ್ನು ನಿವಾರಿಸಲು ‘ಏನಿದು ಪೌರತ್ವ ತಿದ್ದುಪಡಿ ಕಾಯ್ದೆ?’ ಎನ್ನುವ ಪುಟ್ಟ ಕೃತಿಯನ್ನು ಜನಸಾಮಾನ್ಯರಿಗಾಗಿಯೇ ಹೊರತಂದಿದ್ದಾರೆ ರಾಜಾರಾಂ ತಲ್ಲೂರು. ಇದು ಪುಟ್ಟ ಕೃತಿಯೇ ಆಗಿದ್ದರೂ, ಸಂವಿಧಾನಕ್ಕೆ ಎದುರಾಗಿರುವ ವಿಪತ್ತುಗಳನ್ನು, ನಾವು ಭವಿಷ್ಯದಲ್ಲಿ ಪ್ರಭುತ್ವದಿಂದ ಎದುರಿಸಬೇಕಾದ ಸವಾಲುಗಳನ್ನು ತೋರಿಸಿ ಕೊಡುವ ಮಾರ್ಗದರ್ಶಿ ಪುಸ್ತಕವಾಗಿದೆ. ಈ ಕೃತಿಯಲ್ಲಿರುವ ನಲವತ್ತು ಪುಟಗಳು ಭವಿಷ್ಯದ ನಮ್ಮ ನಾಗರಿಕ ಹಕ್ಕನ್ನು, ಭವಿಷ್ಯದ ಸಂವಿಧಾನದ ಸ್ಥಿತಿಗತಿಗಳನ್ನು, ಭವಿಷ್ಯದ ಭಾರತದ ಅಳಿವು ಉಳಿವುಗಳನ್ನು ವಿವರಿಸುತ್ತದೆ.

 ಸಿಎಬಿ ಎಂದರೇನು? ಸಿಎಎ ಎಂದರೇನು? ಪೌರತ್ವ ಎಂದರೇನು? ಭಾರತವಾಸಿ ಎಂದರೆ ಯಾರು?ಈತನಕ ಪೌರತ್ವ ಕಾಯ್ದೆಯಲ್ಲಿ ಆಗಿರುವ ಪ್ರಮುಖ ಬದಲಾವಣೆಗಳೇನು? ಎನ್‌ಆರ್‌ಸಿ ಎಂದರೇನು? ಎನ್‌ಆರ್‌ಪಿ ಎಂದರೇನು? ಎನ್‌ಆರ್‌ಸಿ ಅಸ್ಸಾಂನಲ್ಲಿ ಜಾರಿಗೆ ಬಂದ ಬಳಿಕ ನಡೆಯುವುತ್ತಿರುವುದೇನು? ಪೌರತ್ವ ಪರಿಶೀಲನೆಯ ಆರ್ಥಿಕ ಹೊರೆ ಎಷ್ಟು? ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೆ ತರುವ ಉದ್ದೇಶ ಏನು? ಭಾರತದಲ್ಲಿ ವಲಸಿಗರಾಗಿ ಬಂದಿರುವವರು ಯಾರು?, ವಲಸಿಗರ ಅಂಕಿಸಂಕೆಗಳೆಷ್ಟು? ಪೌರತ್ವ ತಿದ್ದುಪಡಿ ಕಾಯ್ದೆ ಹೇಗೆ ತಾರತಮ್ಯ ಮಾಡುತ್ತಿದೆ? ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಆಕ್ರೋಶ ಯಾಕೆ? ಪೌರತ್ವ ಮಸೂದೆಯ ತಪ್ಪುಗಳೇನು? ಹೀಗೆ ಪ್ರಶ್ನೆಗಳನ್ನು ಹಾಕುತ್ತಾ ಅವುಗಳಿಗೆ ಉತ್ತರಿಸುತ್ತದೆ ಈ ಕೃತಿ. ಈ ದೇಶದ ಪ್ರತಿ ನಾಗರಿಕನ ಬಳಿಯೂ ಅತ್ಯಗತ್ಯವಾಗಿ ಇರಬೇಕಾದ ಕೈ ಪಿಡಿಯಾಗಿದೆ ಇದು. ಬಹುರೂಪಿ ಪ್ರಕಾಶನ ಬೆಂಗಳೂರು ಇದನ್ನು ಸುಂದರವಾಗಿ ಮುದ್ರಿಸಿದೆ. ಒಟ್ಟು ಪುಟಗಳು 40. ಮುಖಬೆಲೆ 50 ರೂಪಾಯಿ. ನಮ್ಮ ಪೌರತ್ವದ ಬೆಲೆಗೆ ಹೋಲಿಸಿದರೆ ಈ ಬೆಲೆ ತೀರಾ ಅಗ್ಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)