ಮಾಂಸಾಹಾರ ಸೇವನೆ ಕುರಿತ ಮಿಥ್ಯೆಗಳು
ಮಾಂಸಾಹಾರ ಮತ್ತು ಸಸ್ಯಾಹಾರಗಳ ಪೈಕಿ ಯಾವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂಬ ಕುರಿತು ಹಲವಾರು ಚರ್ಚೆಗಳು ನಡೆಯುತ್ತಲೇ ಇವೆ. ಆಹಾರಕ್ಕೆ ಸಂಬಂಧಿಸಿದಂತೆ ಕೆಲವು ಮಿಥ್ಯೆಗಳಿದ್ದು, ಇವುಗಳಲ್ಲಿ ಯಾವುದೇ ತಥ್ಯವಿಲ್ಲ ಎನ್ನುವುದನ್ನು ಸಂಶೋಧನೆಗಳು ಸಾಬೀತುಗೊಳಿಸಿವೆ. ಮಾಂಸ ಸೇವನೆಯ ಕುರಿತೂ ಹಲವಾರು ಮಿಥ್ಯೆಗಳಿವೆ. ಮಾಂಸ ಸೇವನೆ ಹೃದಯಕ್ಕೆ ಒಳ್ಳೆಯದಲ್ಲ್ಲ ಎಂಬ ಮಾತನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಮಾಂಸಾಹಾರ ಹೇಗೆ ಆರೋಗ್ಯಕ್ಕೆ ಲಾಭದಾಯಕ ಎನ್ನುವುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ.
ಮಾಂಸ ಪ್ರೊಟೀನ್ ಮತ್ತು ಶಕ್ತಿಯ ಆಗರವಾಗಿದೆ. ಸೂಕ್ತ ಪಾಕವಿಧಾನದಿಂದ ಅದರ ಗರಿಷ್ಠ ಆರೋಗ್ಯಲಾಭಗಳನ್ನು ಪಡೆಯಲು ಸಾಧ್ಯ. ಮಾಂಸ ಸೇವನೆಯ ಕುರಿತ ಕೆಲವು ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳಿಲ್ಲಿವೆ.
► ಮಾಂಸವು ಕರುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ
-ಮಾಂಸ ಸೇವನೆಯು ನಮ್ಮ ಕರುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕೆಲವರು ಹೇಳುತ್ತಾರೆ, ಆದರೆ ಖಂಡಿತವಾಗಿಯೂ ಇದು ನಿಜವಲ್ಲ. ವಾಸ್ತವದಲ್ಲಿ ಮಾಂಸವನ್ನು ಸೇವಿಸಿದ ಬಳಿಕ ಅದು ಅಮಿನೊ ಮತ್ತು ಫ್ಯಾಟಿ ಆ್ಯಸಿಡ್ಗಳಾಗಿ ವಿಭಜಿಸಲ್ಪಡುತ್ತದೆ ಹಾಗೂ ರಕ್ತ ಮತ್ತು ಜೀರ್ಣಾಂಗದ ಭಿತ್ತಿಪದರಗಳು ಅವುಗಳನ್ನು ಹೀರಿಕೊಳ್ಳುತ್ತವೆ. ಇದರಿಂದಾಗಿ ಶರೀರದಲ್ಲಿ ನಾವು ಸೇವಿಸಿದ ಮಾಂಸದ ಕುರುಹು ಸಹ ಇರುವುದಿಲ್ಲ.
► ಅಧಿಕ ಕೊಲೆಸ್ಟ್ರಾಲ್ ಮತ್ತು ಪರಿಷ್ಕೃತ ಕೊಬ್ಬಿಗೆ ಮಾಂಸ ಕಾರಣ
-ಮಾಂಸದ ಸೇವನೆಯು ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹಲವರು ಭಾವಿಸಿದ್ದಾರೆ. ಆದರೆ ಕೊಲೆಸ್ಟ್ರಾಲ್ ನಮ್ಮ ಶರೀರಕ್ಕೆ ಅಗತ್ಯವಾಗಿದೆ. ಮಹತ್ವದ್ದೆಂದರೆ ಆಹಾರದ ಮೂಲಕ ಶರೀರಕ್ಕೆ ಕೊಲೆಸ್ಟ್ರಾಲ್ ಪೂರೈಕೆಯಾದಾಗ ಸಮತೋಲನವನ್ನು ಕಾಯ್ದುಕೊಳ್ಳಲು ಯಕೃತ್ತು ಕಡಿಮೆ ಕೊಲೆಸ್ಟ್ರಾಲ್ನ್ನು ಉತ್ಪಾದಿಸುತ್ತದೆ. ಹೃದಯಾಘಾತಗಳನ್ನು ತಡೆಯಲು ಒಳ್ಳೆಯ ಕೊಲೆಸ್ಟ್ರಾಲ್ ಅಗತ್ಯ ಎನ್ನುವುದನ್ನು ಹಲವಾರು ಅಧ್ಯಯನಗಳು ತಿಳಿಸಿವೆ.
► ಮಾಂಸ ಸೇವನೆಯು ಮಧುಮೇಹ ಮತ್ತು ಹೃದ್ರೋಗಗಳಿಗೆ ಕಾರಣವಾಗುತ್ತದೆ
-ಕೆಲವು ಸಂಶೋಧನೆಗಳು ಮಾಂಸ ಸೇವನೆ ಹಾಗೂ ಮಧುಮೇಹ ಮತ್ತು ಹೃದ್ರೋಗಗಳಿಗೆ ತಳುಕು ಹಾಕಿವೆ. ಇದಕ್ಕೆ ಖಂಡಿತ ಯಾವುದೇ ಪ್ರಸ್ತುತತೆ ಇಲ್ಲ. ಅನಾದಿಕಾಲ ದಿಂದಲೂ ಜನರು ಮಾಂಸವನ್ನು ಸೇವಿಸುತ್ತಲೇ ಬಂದಿದ್ದಾರೆ ಮತ್ತು ತಾಜಾ ಮಾಂಸವು ಆಹಾರದ ಅತ್ಯುತ್ತಮ ಭಾಗವಾಗಿದೆ. ಆದರೆ ಮಾಂಸ ಸೇವನೆ ಯಾವಾಗಲೂ ಮಿತವಾದ ಪ್ರಮಾಣದಲ್ಲಿರಬೇಕು.
► ಮಾಂಸವು ಮೂಳೆಗಳನ್ನು ಪೆಡಸಾಗಿಸುತ್ತದೆ
-ಮಾಂಸವು ಶರೀರಕ್ಕೆ ಪ್ರೊಟೀನ್ನ ಅಗತ್ಯ ಮೂಲವಾಗಿದೆ. ಅಲ್ಲದೆ ಕ್ಯಾಲ್ಸಿಯಂ, ಖನಿಜಗಳು ಮತ್ತು ವಿಟಾಮಿನ್ಗಳು ಮಾಂಸದಲ್ಲಿರುವ ಪ್ರಾಥಮಿಕ ಪೋಷಕಾಂಶಗಳಾಗಿವೆ. ಈ ಎಲ್ಲ ಖನಿಜಗಳು ಮತ್ತು ಪೋಷಕಾಂಶಗಳು ಮೂಳೆಗಳನ್ನು ಬಲಗೊಳಿಸುತ್ತವೆ ಹಾಗೂ ಅಸ್ಥಿರಂಧ್ರತೆ ಮತ್ತು ಮೂಳೆ ಮುರಿತದ ಅಪಾಯಗಳನ್ನು ಕಡಿಮೆ ಮಾಡುತ್ತವೆ.
► ಮಾಂಸ ಸೇವನೆಯು ಬೊಜ್ಜಿಗೆ ಕಾರಣವಾಗುತ್ತದೆ
-ಪ್ರತಿ ದಿನ ಜಿಮ್ನಲ್ಲಿ ಬೆವರಿಳಿಸುವವರಿಗೆ ಮಾಂಸವು ಪ್ರೊಟೀನ್ ಮತ್ತು ಶಕ್ತಿಯ ಅತ್ಯುತ್ತಮ ಮೂಲವಾಗಿದೆ. ಮಾಂಸದಲ್ಲಿ ಹೆಚ್ಚಿನ ಕೊಬ್ಬು ಮತ್ತು ಕ್ಯಾಲರಿಗಳಿದ್ದರೂ ಅದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ನ್ನು ನಮ್ಮ ಶರೀರಕ್ಕೆ ಒದಗಿಸುತ್ತದೆ. ಅಲ್ಲದೆ ಅದರಲ್ಲಿರುವ ಅಪಾರ ಪೋಷಕಾಂಶಗಳು ಶರೀರದ ತೂಕವನ್ನು ಇಳಿಸಲು ಅಗತ್ಯವಾಗಿವೆ. ವ್ಯಾಯಾಮದಿಂದ ಬಸವಳಿಯುವ ಶರೀರಕ್ಕೆ ಮಾಂಸದಂತಹ ಪ್ರೊಟೀನ್ ಸಮೃದ್ಧ ಆಹಾರಗಳು ಶಕ್ತಿ ನೀಡುತ್ತವೆ.
ಮಾಂಸವು ನಮ್ಮನ್ನು ಹೆಚ್ಚು ಸದೃಢ ಮತ್ತು ಆರೊಗ್ಯವಂತರನ್ನಾಗಿಸುವ ಹಲವಾರು ಅಗತ್ಯ ಮ್ಯಾಕ್ರೋನ್ಯೂಟ್ರಿಯಂಟ್ಗಳು, ಖನಿಜಗಳು ಮತ್ತು ಆಹಾರ ಪೂರಕಗಳ ಸಮೃದ್ಧ ಮೂಲವಾಗಿರುವುದರಿಂದ ಈ ಮಿಥ್ಯೆಗಳಿಗೆ ಯಾವುದೇ ಮಹತ್ವವಿಲ್ಲ.
-ಎನ್.ಕೆ.