varthabharthi


ಭೀಮ ಚಿಂತನೆ

ಸುಶಿಕ್ಷಿತರು ಸಚ್ಚಾರಿತ್ರ, ಸೌಜನ್ಯ ಬೆಳೆಸಿಕೊಳ್ಳಿ

ವಾರ್ತಾ ಭಾರತಿ : 9 Jan, 2020

ದಿನಾಂಕ 5 ಫೆಬ್ರವರಿ 1938ರ ‘ಜನತಾ’ ಪತ್ರಿಕೆಯಲ್ಲಿ ತಿಳಿಸಿದಂತೆ ಮನಮಾಡದಲ್ಲಿ ದಿನಾಂಕ 12 ಮತ್ತು 13 ಫೆಬ್ರವರಿ 1938ರಲ್ಲಿ ಏರ್ಪಡಿಸಿದ ಅಖಿಲ ಜಿ.ಐ.ಪಿ. ರೈಲ್ವೆ ಅಸ್ಪಶ್ಯ ಕಾರ್ಮಿಕರ ಸಮ್ಮೇಳನದ ಭವ್ಯಮಂಟಪದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರರ ಅಧ್ಯಕ್ಷತೆಯ ಅಡಿಯಲ್ಲಿ ಮುಂಬೈ ಇಲಾಖೆಯ ಅಸ್ಪಶ್ಯ ಯುವ ಸಮ್ಮೇಳನವನ್ನು 12ರ ರಾತ್ರಿ ಎಂಟಕ್ಕೆ ಏರ್ಪಡಿಸಲಾಗಿತ್ತು. ಈ ಸಮ್ಮೇಳನದಲ್ಲಿ ಶ್ರೀ ಮುರಲೀಧರ ಪಗಾರೆಯ ಭಾಷಣದ ಬಳಿಕ ವಿವಿಧ ಗೊತ್ತುವಳಿಯನ್ನು ಸ್ವೀಕರಿಸಿದ ನಂತರ ಡಾ. ಅಂಬೇಡ್ಕರ್ ಸಾಹೇಬರು ಭಾಷಣ ಮಾಡಿದರು.

ಡಾ. ಅಂಬೇಡ್ಕರರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದ್ದು ಹೀಗೆ-
ಇಂದಿನ ಈ ಸಮ್ಮೇಳನವು ಯುವಕರಿಗಾಗಿ ಎಂದಿದ್ದರೂ ಇಲ್ಲಿ ಎಲ್ಲ ವಯಸ್ಸಿನವರು ಸೇರಿದ್ದಾರೆ. ಏಕೆಂದರೆ ಈ ಯುವಕರ ಸಮ್ಮೇಳನದಲ್ಲಿ ಮುದುಕರಿದ್ದಾರೆ, ನನ್ನ ಬಲಬದಿಯ ಸಂಪೂರ್ಣ ಬ್ಲಾಕ್ ಭಗಿನಿಯರಿಂದ ತುಂಬಿ ಹೋಗಿದೆ. ಹೀಗಾಗಿ ಇಂದಿನ ಯುವ ಸಮ್ಮೇಳನದಲ್ಲಿ ನನ್ನ ಭಾಷಣ ಯುವಕೇತರರಿಗೆ ವಿಸಂಗತಿ ಎನಿಸಬಹುದು. ಹೀಗಾಗಿ ನಾನಿಂದು ಮಾತನಾಡಲಿರುವ ವಿಷಯ ಕೇವಲ ಯುವಜನರಿಗೆ ಮಾತ್ರ ಸಂಬಂಧಿಸಿದ್ದು.

ಇಂದಿನ ಈ ಯುವಸಮ್ಮೇಳನವು ಅತ್ಯಂತ ಮಹತ್ವದ್ದು. ಸಾಮಾನ್ಯ ಜನಸಂಖ್ಯೆಯಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಇದ್ದ ಕೆಲವೇ ಮುದುಕರಲ್ಲಿ ಹಲವರ ಗೋರಿಯನ್ನು ಈಗಾಗಲೇ ಅಗೆದು ಇಡಲಾಗಿದೆ. ಹಲವರು ಬಾಲ್ಯದಲ್ಲಿ ಯಾವ ಪರಿಸ್ಥಿತಿಯಲ್ಲಿ ಬೆಳೆದರೋ, ಅದರಿಂದ ಹೊರಬರಲು ಈಗಲೂ ಅವರು ಸಿದ್ಧರಿಲ್ಲ. ಬೆಳೆದ ಪರಿಸ್ಥಿತಿಗೇ ಅಂಟಿ ಕೊಂಡಿರುವುದು ಅವರ ಸ್ವಭಾವ. ಅವರಿಂದ ನಾವು ಬೇರೆ ಏನನ್ನೂ ಬಯಸದಿದ್ದರೂ, ಮುಂದೆ ಸಾಗುತ್ತಿರುವ ಚಳವಳಿಯ ರಥದ ನಡುವೆ ಅವರು ಬರದಿದ್ದರೆ ಅದೇ ದೊಡ್ಡ ಉಪಕಾರ ಮಾಡಿದಂತೆ.

ಇಂದಿನ ಈ ಯುವಸಮ್ಮೇಳನವು ಯುವಕ ಸಂಘದಿಂದಲೇ ಜರುಗಬೇಕಿತ್ತು. ಆದರದು ಸ್ವತಂತ್ರ ಕಾರ್ಮಿಕ ಪಕ್ಷದ ವತಿಯಿಂದ ನಡೆಯುತ್ತಿದೆ. ಈ ಸಮ್ಮೇಳನಗಳನ್ನು ಯುವಕರೇ ಏರ್ಪಡಿಸಿದ್ದರೆ ತುಂಬ ಚೆನ್ನಾಗಿರುತ್ತಿತ್ತು. ಆದರೆ ಯುವಕರಲ್ಲಿ ಚಿಕ್ಕಪುಟ್ಟ ಭಿನ್ನಾಭಿಪ್ರಾಯವಿದ್ದರೂ, ನಾಶಿಕ ಜಿಲ್ಲಾ ಯುವ ಸಂಘದ ಪರವಾಗಿ ಈ ಸಮ್ಮೇಳನವು ಏರ್ಪಡಿಸಲಾಗುತ್ತಿದೆ ಎಂದು ಈ ಮೊದಲೇ ತಿಳಿಸಿದ್ದರೂ, ಕಾರ್ಯವನ್ನು ಗಮನಿಸಿ ಯಾವ ಹಠವನ್ನು ಹಿಡಿಯದೆ ಇದು ಯುವಕರ ಸಮ್ಮೇಳನ, ಅದನ್ನು ಯಾರೇ ಏರ್ಪಡಿಸಲಿ, ಎಂಬ ಉದಾತ್ತಭಾವನೆಯಿಂದ ಭಾಗವಹಿಸಿದ್ದು, ಅಭಿನಂದನೀಯ ಸಂಗತಿಯಾಗಿದೆ. ಸಾರ್ವಜನಿಕ ಕಾರ್ಯದಲ್ಲಿ ತೊಡಗಿಕೊಂಡವರಲ್ಲಿ ಈ ಭಾವನೆಯು ಇರದಿದ್ದರೆ ಅವರಿಂದ ಯಾವ ಕೆಲಸವೂ ಆಗಲಾರದು. ಹೀಗಾಗಿ ಸಾಮಾಜಿಕ ಕಾರ್ಯ ಮಾಡುವವರು, ಮಾಡಬಯಸುವವರು ಈ ಭಾವನೆಯನ್ನು ಸತತ ಮನದೊಳಗೆ ಸಂರಕ್ಷಿಸುವುದರಲ್ಲೇ ಸಮಾಜಹಿತವಿದೆ. ಯುವ ಸಂಘದ ಜನರು ಆರಂಭಿಸಿದ ಈ ಸ್ತುತ್ಯ ಮತ್ತು ಅನುಕರಣೀಯ ಯೋಜನೆಯ ಬಗೆಗೆ ನಾನು ಮತ್ತೊಮ್ಮೆ ಅವರನ್ನು ಅಭಿನಂದಿಸುತ್ತೇನೆ.

ಯುವ ಸಮ್ಮೇಳನದಲ್ಲಿ ನಾನು ಹೇಳಲಿರುವ ಮಾತನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಬೇಕೆಂದಿದ್ದೆ, ಆದಾಗ್ಯೂ ಕೆಲಸದ ಬಾಹುಳ್ಯದಿಂದಾಗಿ ಇವತ್ತು ಅದು ಸಾಧ್ಯವಾಗದಿದ್ದರೂ, ಆದಷ್ಟು ಬೇಗ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತೇನೆ. ಇಂದಿನ ಸಂದರ್ಭದಲ್ಲಿ ಒಂದೆರಡು ಮಹತ್ವದ ಸಂಗತಿಗಳನ್ನು ಹೇಳಲಿದ್ದೇನೆ. ನನ್ನ ವಯಸ್ಸು 40 ದಾಟಿದ್ದರಿಂದ ನಾನು ಯುವಕನಲ್ಲ ಎಂಬ ಮಾತನ್ನು ನಾನು ಒಪ್ಪಲೇಬೇಕು. ಮನುಷ್ಯನು ತನ್ನ ಆಯುಷ್ಯವನ್ನು ಬರೇ ತಿನ್ನುವುದು. ಕುಡಿಯುವುದು ಮತ್ತು ಬದುಕುವುದರಲ್ಲೇ ಕಳೆಯುವುದು ಸರಿಯಲ್ಲ. ತಿನ್ನುವುದು, ಉಣ್ಣುವುದು, ಬದುಕುವುದಕ್ಕಾಗಿ ಮತ್ತು ಬದುಕುವುದು ಗೌರವಕ್ಕಾಗಿ ಹಾಗೇ ಸಮಾಜದಲ್ಲಿ ಭೂಷಣ ಪ್ರಾಯವಾಗಲು ಸಮಾಜಸೇವೆ ಅಗತ್ಯವಾದುದು. ‘ಭೂಮಿಗೆ ಭಾರ’ವಾಗಿ ಬದುಕುವುದರಲ್ಲಿ ಏನಿದೆ ಅರ್ಥ? ಈ ವಿಷಯಕ್ಕೆ ಸಂಬಂಧಿಸಿದಂತೆ ಶ್ರೇಷ್ಠ ನಾಟಕಕಾರ ಗಡಕರಿ ಒಂದೆಡೆ ಹೇಳಿದ್ದು ಹೀಗೆ, ‘‘ಸಮಾಜ ಎಲ್ಲಿಯವರೆಗೆ ನಮ್ಮನ್ನು ಗೌರವದಿಂದ ಕಾಣುತ್ತದೆಯೋ ಅಲ್ಲಿಯವರೆಗೆ ಬದುಕಿರುವುದು ಭೂಷಣಪ್ರಾಯವಾದುದು’’ ಇಲ್ಲದಿದ್ದರೆ ಸಮಾಜಕ್ಕೆ ಬೇಡವಾಗಿ ತೀರ ಮುದುಕರಾಗಿ ಹಾಸಿಗೆ ಹಿಡಿದು, ಮನೆಯ ಸೊಸೆ ಮಕ್ಕಳ ತಿರಸ್ಕಾರಕ್ಕೆ ಪಾತ್ರರಾಗಿ ಸೊರಗಿ- ಕೊರಗಿ ಬದುಕುವುದಕ್ಕಿಂತ ಮೊದಲೇ ಸಾಯುವುದು ಭೂಷಣಪ್ರಾಯವಾದುದು.

  ನಾನು ಯುವಕನಾಗಿದ್ದಾಗಿನ ನನ್ನ ಅನುಭವವನ್ನು ನಿಮಗೆ ಹೇಳಲು ಬಯಸುತ್ತೇನೆ. ಯುವಕರಾದವರು ತಮ್ಮ ಎದುರಿಗೆ ಉದಾತ್ತ ಧ್ಯೇಯವನ್ನು ಇರಿಸಿಕೊಳ್ಳಬೇಕು. ಯಾವುದೇ ವಿಷಯವನ್ನು ಹಸ್ತಗತ ಮಾಡಿಕೊಳ್ಳಬೇಕಿದ್ದರೆ ತಪಸ್ಸು ಮಾಡಬೇಕಾಗುತ್ತದೆ ಎನ್ನುವುದನ್ನು ಯುವಕರು ನೆನಪಿನಲ್ಲಿರಿಸಿಕೊಳ್ಳಬೇಕು. ಹೀಗಾಗಿ ನಮ್ಮಲ್ಲೊಂದು ಗಾದೆ ಮಾತಿದೆ ‘ತಪದ ಕೊನೆಗೆ ಫಲ’ ಕಾರ್ಯ ಆತ್ಮೋನ್ನತಿಯದ್ದೇ ಆಗಿರಲಿ, ಅಥವಾ ರಾಷ್ಟ್ರೋನ್ನತಿಯದ್ದೇ ಆಗಿರಲಿ, ಯಾವುದೇ ಆಗಿರಲಿ ಅದಕ್ಕಾಗಿ ಸತತ ಪ್ರಯುತ್ತ ಮಾಡಬೇಕಾಗುತ್ತದೆ. ಮನುಷ್ಯ ಇದನ್ನು ಸಮರ್ಪಣಾ ಭಾವನೆಯಿಂದ ಮಾಡಬೇಕಾಗುತ್ತದೆ. ನಾನು ನೋಡಿದ ಹಲವರು ಯುವಕರು ಹೇಗಿದ್ದಾರೆ ಎಂದರೆ, ಅವರಿಗೆ ಹದಿನೈದು ನಿಮಿಷ ಮೇಜಿನ ಎದುರಿಗೆ ಕೂತಿರುವುದು ಸಾಧ್ಯವಿಲ್ಲ. ಅವರಿಗೆ ಗಳಿಗೆ ಗಳಿಗೆಗೂ ಸೇದಲು ಬೀಡಿ ಬೇಕಾಗುತ್ತದೆ. ಗುಟುಕರಿಸಲು ಚಹಾ ಬೇಕಾಗುತ್ತದೆ. ಅದರ ಹೊರತು ಅವರಿಂದ ಕೆಲಸ ಮಾಡುವುದೇ ಸಾಧ್ಯವಿಲ್ಲ. ಇದು ಸರಿಯಲ್ಲ. ಯಾವುದೇ ವ್ಯಕ್ತಿ ತನ್ನ ಹುಟ್ಟುಗುಣದಿಂದ ಪರಾಕ್ರಮ ಮಾಡುವುದು ಸಾಧ್ಯವಿಲ್ಲ.

ಪ್ರಪಂಚದಲ್ಲಿ ಕೆಲವೇ ಬುದ್ಧಿಮಾಂದ್ಯರು ಹುಟ್ಟುತ್ತಾರೆ. ಬುದ್ಧಿಯ ವಿಕಾಸ ಮಾಡುವುದು ಪ್ರತಿಯೊಬ್ಬರ ಕೈಯಲ್ಲಿದೆ. 24 ಗಂಟೆಗಳಲ್ಲಿ 20 ಗಂಟೆ ಟೇಬಲ್ ಎದುರಿಗೆ ಕೂತುಕೆಲಸ ಮಾಡಲು ಬರುವಂತಿರಬೇಕು. ಯಾರಿಗೆ ಬುದ್ಧಿಯ ವಿಕಾಸ ಮಾಡುವ ಇಚ್ಛೆಯಿದೆಯೋ ಅವರು ತಪಸ್ಸು ಮಾಡಬೇಕು. ಶ್ರಮಪಡಬೇಕು. ಮನುಷ್ಯನು ಸಂಕಟದಲ್ಲಾಗಲಿ, ಬಡತನದಲ್ಲಾಗಲಿ ಸಿಲುಕಿದನೆಂದರೆ ಅವನು ನಿರಾಸೆಗೊಳಗಾಗುತ್ತಲೇ ಇರುತ್ತಾನೆ. ತನಗೆ ಯಶ ಸಿಗಲಾರದು ಎಂಬ ಭಾವನೆಯೂ ಅವನ ಮನದಲ್ಲಿ ಮೂಡುತ್ತದೆ. ಈ ಭಾವನೆಯ ಕಪಿಮುಷ್ಟಿಯಲ್ಲಿ ಸಿಲುಕಿದ ಮನುಷ್ಯನು ನಿರುಪಯೋಗಿಯಾಗುತ್ತಾನೆ. ಪ್ರತಿಯೊಬ್ಬ ಯುವಕನೂ ಆಸೆಯನ್ನು ಎಂದೂ ತೊರೆಯಬಾರದು. ಅವನು ಆಸೆ ಬಿಟ್ಟ ದಿನದಿಂದಲೇ ಸತ್ತರೂ ಅಷ್ಟೇ. ಪ್ರತಿಯೊಬ್ಬ ಯುವಕನು ಮಹತ್ವಾಕಾಂಕ್ಷಿಯಾಗಿರಬೇಕು. ಮಹತ್ವಾಕಾಂಕ್ಷೆಯ ಹೊರತು ಮನುಷ್ಯ ಪ್ರಯತ್ನವನ್ನು ಮಾಡುವುದು ಸಾಧ್ಯವೇ ಇಲ್ಲ. ನೀವಿಂದು ಎಲ್ಲಿಯೇ ಹೋಗಿ, ಅದು ಬೇಕಾದರೆ ತಹಶೀಲ್ದಾರ ಆಫೀಸಿರಲಿ, ಜಿಲ್ಲಾಧಿಕಾರಿ ಆಫೀಸಿರಲಿ ಅಥವಾ ಕೋರ್ಟೆ ಆಗಿರಲಿ ಎಲ್ಲೆಡೆ ಬರೇ ಭಟ್ಟ-ಬ್ರಾಹ್ಮಣರದ್ದೇ ಹಾವಳಿಯನ್ನು ಕಾಣಬಹುದು ಈ ಪರಿಸ್ಥಿತಿಯನ್ನು ಕಂಡು ಉಳಿದವರು ನಿರಾಸೆಗೊಳ್ಳುವುದು ಸ್ವಾಭಾವಿಕವಾಗಿದ್ದರೂ, ನಾವಿಂದು ನಿರಾಸೆಗೊಳ್ಳದೆ, ಉನ್ನತ ಮಹತ್ವಾಕಾಂಕ್ಷೆಯನ್ನು ಮನದೊಳಗೆ ಬೆಳೆಸಿಕೊಂಡು ಪ್ರಯತ್ನಶೀಲರಾಗಬೇಕಾಗಿದೆ. ನನ್ನನ್ನು ಮುಂಬೈಯ ಗವರ್ನರ್‌ನೆಂದು ನೇಮಿಸಿದ್ದರೂ ಅದು ಕಡಿಮೆಯೇ ಎಂದು ಭಾವಿಸುವವನು ನಾನು. ಇದನ್ನು ಹೇಳುವ ಉದ್ದೇಶವಿಷ್ಟೇ. ನಮ್ಮ್ಮಲ್ಲಿಯ ಪ್ರತಿಯೊಬ್ಬನೂ ಉನ್ನತ ಮಹತ್ವಾಕಾಂಕ್ಷೆಯನ್ನು ಹೊಂದಿ, ಅದನ್ನು ಫಲಪ್ರದಗೊಳಿಸಲು ಶತಪ್ರಯತ್ನ ಮಾಡಬೇಕು.

 ಯುವ ಬಂಧುಗಳು ಒಳಗೊಂದು ಹೊರಗೊಂದು ಎಂಬ ನಡವಳಿಕೆಯನ್ನು ಬೆಳೆಸಿಕೊಂಡಿರಬಾರದು. ಸತ್ಯಕ್ಕೆ ತಾತ್ಕಾಲಿಕ ಯಶ ಸಿಗದಿದ್ದರೂ, ಅಂತಿಮವಾಗಿ ಸತ್ಯಕ್ಕೆ ಜಯಸಿಗುತ್ತದೆ. ನಾವು ಇಬ್ಬಂದಿಯಿಂದ ವರ್ತಿಸಬಾರದು. ಜಗತ್ತಿಗೆ ವ್ಯಕ್ತಿಯು ಎರಡು ನಾಲಿಗೆಯುಳ್ಳವನು ಎನ್ನುವುದು ಗೊತ್ತಾದರೆ. ಅವನ ಮೇಲೆ ನಂಬಿಕೆ ಇಡುವುದಿಲ್ಲ.

ನಮಗಿಂದು ವಿದ್ಯೆಯ ಬಾಗಿಲು ತೆರೆದಿದೆ. ಈಗ ಸಿಗುತ್ತಿರುವ ಶಿಕ್ಷಣದ ಸವಲತ್ತುಗಳು ನಮ್ಮ ಕಾಲದಲ್ಲಿ ಖಂಡಿತಕ್ಕೂ ಇರಲಿಲ್ಲ. ಆಗ ಯಾರ ಸಹಾಯವು ಸಿಗುತ್ತಿರಲಿಲ್ಲ. ನಾನು ಇಲ್ಲಿಯ ವಿಶ್ವವಿದ್ಯಾನಿಲಯದಲ್ಲಿದ್ದಾಗ ನನ್ನ ತಂದೆ, ಕುಟುಂಬದ ಜನರು, ಒಂದು ಆಡು, ಕಟ್ಟಿಗೆ ಒಲೆ, ವಾರದ ಸಂತೆ ಮುಂತಾದ ಎಲ್ಲ ಸಾಮಾನುಗಳು ಇದ್ದ 8್ಡ8 ಉದ್ದಗಲದ ಖೋಲಿಯಲ್ಲಿದ್ದೆ. ಕಾಲೇಜಿನ ಪಾಠವನ್ನು ಅಲ್ಲಿಯೇ ಓದಿಕೊಳ್ಳಬೇಕಾಗುತ್ತಿತ್ತು. ನಿಮ್ಮ ಪುಣ್ಯಕ್ಕೆ ಇಂದು ಈ ಪರಿಸ್ಥಿತಿ ಬದಲಾಗಿದೆ. ಸೌಲಭ್ಯದ ಕೊರತೆಯಿಂದ ಶಿಕ್ಷಣ ಪಡೆಯುವುದಾಗಲಿಲ್ಲ ಎಂದು ನೀವೇನಾದರೂ ತಕರಾರು ಮಾಡಿದರೆ ಅದು ನಿರಾಧಾರ ಎನಿಸಿಬಿಡುತ್ತದೆ.

ನಮ್ಮಲ್ಲಿಯ ಪ್ರತಿಯೊಬ್ಬರೂ ಸುಶಿಕ್ಷಿತನಾಗಬೇಕೆಂಬ ಹೆಬ್ಬಯಕೆ ನನ್ನದು. ಅದರ ಜೊತೆಗೆ ನನಗೆ ಶಿಕ್ಷಣದ ಬಗೆಗೆ ಭಯವೂ ಇದೆ. ನನ್ನಂತೆ ಉಳಿದವರೂ ಸುಶಿಕ್ಷಿತ ಮನುಷ್ಯನ ಬಗೆಗೆ ಭಯವನ್ನು ಹೊಂದಿರಬೇಕು. ಏಕೆಂದರೆ ಶಿಕ್ಷಣವೆಂದರೆ ಖಡ್ಗವಿದ್ದಂತೆ. ಶಿಕ್ಷಣ ಒಂದು ಶಸ್ತ್ರವಿದ್ದಂತೆ. ಯಾರೇ ಆಗಲಿ ಕೈಯಲ್ಲಿ ಖಡ್ಗ ಹಿಡಿದುಕೊಂಡು ಬಂದರೆ ನಾವೆಲ್ಲ ಭಯಪಡುತ್ತೇವೆ. ಆದರೆ ವಿದ್ಯೆ ಎಂಬ ಶಸ್ತ್ರ ಸದಾಕಾಲ ಬಳಸುವವನನ್ನು ಅವಲಂಬಿಸಿರುತ್ತದೆ. ಅತ್ಯಾಚಾರದಿಂದ ಅಬಲೆಯರನ್ನು ಸಂರಕ್ಷಣೆ ಮಾಡಬಹುದು. ಸುಗುಣ ವ್ಯಕ್ತಿ ಕೈಯಲ್ಲಿ ಶಸ್ತ್ರವಿರುವುದು ಗಂಡಾಂತರಕಾರಿ ಶಿಕ್ಷಣ ಪಡೆದ ಮನುಷ್ಯನಲ್ಲಿ ಸಚ್ಚಾರಿತ್ರ ಮತ್ತು ಸೌಜನ್ಯವಿರದಿದ್ದರೆ ಅವನು ಕಾಡು ಪ್ರಾಣಿಗಿಂತಲೂ ಗಂಡಾಂತರಕಾರಿ ಎಂದು ಭಾವಿಸಬೇಕು. ಅನಾಗರಿಕರಿಗೆ ಮೋಸ ವಂಚನೆ ಗೊತ್ತಿರುವುದಿಲ್ಲ. ಕಲಿತವರಿಗೆ ಅದು ಹಸ್ತಗತವಾಗಿರುತ್ತದೆ. ಒಬ್ಬ ವ್ಯಕ್ತಿ ವ್ಯೆಹ ರಚಿಸಿದ್ದರೆ, ಅದನ್ನಷ್ಟೇ ತೊಡೆದು ಹಾಕಿ ಅವನನ್ನು ಪೇಚಿಗೆ ಹೇಗೆ ಸಿಲುಕಿಸುವುದು ಎಂದು ಹಲವರು ತಮ್ಮ ಶಿಕ್ಷಣ ಬಳಕೆ ಮಾಡುತ್ತಿರುತ್ತಾರೆ. ದೀನದಲಿತರು, ಬಡರೈತರು ಶಿಕ್ಷಣ ಪಡೆದಿರುವುದಿಲ್ಲ. ಅವರ ಅಜ್ಞಾನದ ಲಾಭವನ್ನು ಕಲಿತ ಶೇಠಜಿ, ಭಟಜಿ, ವಕೀಲ ಮುಂತಾದವರು ಪಡೆಯುತ್ತಿದ್ದಾರೆ. ಈ ರೀತಿ ಬಡಜನರ ಅಸಹಾಯಕತೆಗಾಗಿಯೇ, ಶಿಕ್ಷಣವನ್ನು ಬಳಸಿಕೊಳ್ಳುತ್ತಿದ್ದಾರೆ. ಅಂತಹ ಶಿಕ್ಷಣಕ್ಕೆ ಧಿಕ್ಕಾರವಿರಲಿ.

ಈ ದೃಷ್ಟಿಯಿಂದ ನೋಡಿದರೆ ಶಿಕ್ಷಣಕ್ಕಿಂತ ಸಚ್ಚಾರಿತ್ರವೇ ಮಹತ್ವದ್ದು. ಈಗಿನ ಯುವಕರಲ್ಲಿ ಧರ್ಮದ ಬಗೆಗೆ ಉದಾಸೀನತೆಯಿದೆ. ಧರ್ಮವೆಂದರೆ ಅಫೀಮು ಎಂದು ಹೇಳಲಾಗುತ್ತದೆ. ಆದರೆ ನನ್ನಲ್ಲಿರುವ ಉತ್ತಮ ಸಂಗತಿಗೆ, ಶಿಕ್ಷಣದಿಂದ ಅನ್ಯರಿಗೆ ಮಾಡಿದ ಸಹಾಯಕ್ಕೆ ನನ್ನಲ್ಲಿರುವ ಧಾರ್ಮಿಕ ಭಾವನೆಯೇ ಮುಖ್ಯ ಕಾರಣ. ನನಗೆ ಧರ್ಮಬೇಕು, ಧರ್ಮದ ಸೋಗು ಬೇಡ. ಹಿಂದೂ ಧರ್ಮವು ನರಕವಾಗಿದೆ ಎಂದು ನಾನೆಂದಿಗೂ ದೃಢವಾಗಿ ನಂಬಿದ್ದೇನೆ. ಹೀಗಾಗಿ ನಾನು ಹೇಳಬಹುದಾದ ಸಂಗತಿ ಏನೆಂದರೆ, ಶಿಕ್ಷಣಕ್ಕಿಂತ ಶೀಲಕ್ಕೆ, ಚಾರಿತ್ರಕ್ಕೆ ಹೆಚ್ಚು ಮಹತ್ವ ನೀಡಿ. ಹಾಗೆಯೇ ತಮ್ಮ ಶಿಕ್ಷಣವನ್ನು ನಮ್ಮದೇ ದೀನದಲಿತರ ಉದ್ಧಾರಕ್ಕಾಗಿ ಬಳಸದೆ, ಕೇವಲ ತನ್ನ ನೌಕರಿ ಮತ್ತು ಹೆಂಡತಿ ಮಕ್ಕಳ ಬಗೆಗೆ ಯೋಚಿಸುತ್ತಿದ್ದಾರೆ. ನಮ್ಮ ಯುವಕರು ಪಡೆದ ಶಿಕ್ಷಣದಿಂದ ಸಮಾಜಕ್ಕೇನು ಉಪಯೋಗ? ಯುವಕರು ಇಂದು ತಮ್ಮ ಮೇಲೆ ಬಿದ್ದರುವ ಹೊಣೆಯನ್ನು ಅರಿತು ಕಾರ್ಯ ಪ್ರವೃತ್ತರಾಗಬೇಕು. ಜನರ ನರನಾಡಿಗಳಲ್ಲಿ ಕೇವಲ ಪುಕ್ಕಲುತನ ಹರಿಯುತ್ತಿರುತ್ತದೆ. ತಮ್ಮ ಕಾನೂನು ಬದ್ಧ ಹಕ್ಕನ್ನು ಚಲಾಯಿಸಲು ಸಹ ಅವರು ಧೈರ್ಯದಿಂದ ಮುಂದೆ ಬರುವುದಿಲ್ಲ. ಸಾರ್ವಜನಿಕ ಬಾವಿಯಲ್ಲಿ ನೀರು ತುಂಬುವುದು, ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ಮಾಡುವುದು ಇವುಗಳನ್ನು ಜನರು ಭೀತಿಯಿಂದಲೇ ಮಾಡುತ್ತಿಲ್ಲ. ಈ ಬದಲಾವಣೆಯನ್ನು ತರುವುದು ಕೇವಲ ಯುವಕರಿಂದಲೇ ಸಾಧ್ಯ. ಆದರೆ ಮೊದಲಿಗೆ ಟೊಂಕಕಟ್ಟಿ ಸಿದ್ಧರಾಗಬೇಕು. ಅದಕ್ಕಾಗಿ ಅವರು ಬಿರುಸಿನಿಂದ ಸೆಣಸಾಡಬೇಕು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)