ಇದು ಖಂಡಿತವಾಗಿಯೂ ಅಸಂಗತ
1979ರಲ್ಲಿ ಅವರು ಬರೆದ ಕವನ ‘ಹಮ್ ದೇಖೇಂಗೆ’ ಜಿಯಾವುಲ್ ಹಕ್‌ಅವರ ಸರ್ವಾಧಿಕಾರಿ ಹಾಗೂ ಮೂಲಭೂತವಾದಿ ಆಡಳಿತದ ವಿರುದ್ಧ ಪ್ರತಿಭಟಿಸುವಂತೆ ಜನತೆಗೆ ನೀಡಿದ ಕರೆಯಾಗಿದೆ. ಪ್ರಮುಖವಾಗಿ ಮುಸ್ಲಿಮ್ ಶ್ರೋತೃಗಳಿಗಾಗಿ ಬರೆದ ಕವನವಾದ್ದರಿಂದ ಸರ್ವಾಧಿಕಾರವನ್ನು ಖಂಡಿಸಲು ಅದು ಇಸ್ಲಾಮಿಕ್ ಪ್ರತಿಮೆಗಳನ್ನು ಬಳಸಿಕೊಂಡಿದೆ. ಎಲ್ಲ ಸುಳ್ಳು ದೇವರುಗಳನ್ನು (ಸರ್ವಾಧಿಕಾರಿ ಆಡಳಿತಗಾರರನ್ನು) ಅಧಿಕಾರದಿಂದ ಕಿತ್ತೆಸೆದು ಎಲ್ಲ ಸಿಂಹಾಸನಗಳನ್ನು ಹಾಗೂ ಕಿರೀಟಗಳನ್ನು ನಾಶಪಡಿಸುವ ಒಂದು ತೀರ್ಪಿನ ದಿನವನ್ನು ಅದು ಒಂದು ರೂಪಕವಾಗಿ ಬಳಸುತ್ತದೆ.
ಡಿಸೆಂಬರ್ 17ರಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ರ್ಯಾಲಿಯೊಂದರಲ್ಲಿ ಖ್ಯಾತ ಉರ್ದು ಕವಿ ಫೈಝ್ ಅಹ್ಮದ್ ಫೈಝ್ ಅವರ ‘ಹಮ್ ದೇಖೇಂಗೆ’ (ನಾವು ಖಂಡಿತವಾಗಿಯೂ ನೋಡುತ್ತೇವೆ) ಕವನವನ್ನು ವಾಚಿಸಲಾಯಿತು. ಹೀಗೆ ರ್ಯಾಲಿಯಲ್ಲಿ ಕವನ ವಾಚನ ಮಾಡಿರುವುದು ರಾಷ್ಟ್ರ ವಿರೋಧಿ ಹಾಗೂ ಹಿಂದೂ ವಿರೋಧಿ ಎಂದು ಓರ್ವ ತಾತ್ಕಾಲಿಕ ಉಪನ್ಯಾಸಕ ಹಾಗೂ ಇತರ ಹದಿನಾರು ಮಂದಿ ನೀಡಿದ ದೂರಿನ ಬಗ್ಗೆ, ಐಐಟಿ ಕಾನ್ಪುರ ವಿಚಾರಣಾ ಸಮಿತಿಯೊಂದನ್ನು ರಚಿಸಲು ನಿರ್ಧರಿಸಿರುವುದು ಅಸಂಗತವಲ್ಲದೆ ಬೇರೇನೂ ಅಲ್ಲ. ದೂರು ನೀಡಿದವರಿಗೆ ಉರ್ದು ಸಾಹಿತ್ಯ, ಉರ್ದು ಕಾವ್ಯದ ರೂಪಕಗಳು, ಫೈಝ್ ಅವರ ರಾಜಕೀಯ ನಿಲುವುಗಳು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಆ ಕವನವನ್ನು ಯಾವ ಸಂದರ್ಭದಲ್ಲಿ ಬರೆಯಲಾಗಿತ್ತು ಎಂಬ ಬಗ್ಗೆ ತೀವ್ರ ಅಜ್ಞಾನವಿದೆ. ಫೈಝ್ ಅಹ್ಮದ್ ಫೈಝ್ (1911-1984) ತನ್ನ ತಲೆಮಾರಿನ ಅತ್ಯಂತ ಶ್ರೇಷ್ಠ ಉರ್ದು ಕವಿ. ಅವರು ಜನಿಸಿದ ಲಾಹೋರ್ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಅವರು ಬೆಳೆಯುತ್ತಿದ್ದಾಗ ಉರ್ದು ಸಾಹಿತ್ಯದ ಹಾಗೂ ಪ್ರಗತಿಪರ ಚಿಂತನೆಯ ಒಂದು ದೊಡ್ಡ ಕೇಂದ್ರವಾಗಿತ್ತು.
ಫೈಝ್ ಆಲ್ ಇಂಡಿಯಾ ಪ್ರೊಗ್ರೆಸಿವ್ ರೈಟರ್ಸ್ ಅಸೋಸಿಯೇಶನ್‌ನ ಒಂದು ಭಾಗವಾಗಿದ್ದರು. ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವುದು 1936ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಆ ಸಂಘದ ಗುರಿಯಾಗಿತ್ತು. ಅದರ ಹಲವು ಪ್ರಮುಖ ಸದಸ್ಯರು ಕಮ್ಯುನಿಸ್ಟ್ ಚಳವಳಿಗೆ ಸೇರಿದವರಾಗಿದ್ದರು. ಸಾಮಾಜಿಕ ನ್ಯಾಯ ಮತ್ತು ಅನ್ಯಾಯ ಹಾಗೂ ಸರ್ವಾಧಿಕಾರಕ್ಕೆ ವಿರೋಧ ಆದರ್ಶಗಳು ಫೈಝ್‌ರವರ ಕಾರ್ಯಕ್ಕೆ ಸ್ಫೂರ್ತಿಯಾಗಿದ್ದವು. ಅವರ ಪ್ರಸಿದ್ಧ ಕವನಗಳಲ್ಲಿ ಒಂದು ಹೀಗಿದೆ: ‘‘ಮುಜ್‌ಸೆ ಪೆಹಲಿ ಸಿ ಮೊಹಬ್ಬತ್ ಮೇರೇ ಮಹಬೂಬ್ ನ ಮಾಂಗ್’’ (ನನ್ನ ಪ್ರಿಯತಮೆ, ನನ್ನಿಂದ ಪ್ರೀತಿಯ ಈ ಹಿಂದಿನ ತೀವ್ರತೆಯನ್ನು ಕೇಳಬೇಡ.)
ಈ ಕವನ ಫೈಝ್ ಅವರ ಸಾಮಾಜಿಕ ನ್ಯಾಯದ ಕುರಿತಾದ ತುಡಿತವನ್ನು ಮೂರ್ತೀಭವಿಸುತ್ತದೆ.
1950ರ ದಶಕದಲ್ಲಿ ಫೈಝ್ ಅವರ ಕ್ರಾಂತಿಕಾರಿ ನಿಲುವುಗಳಿಂದಾಗಿ ಕೆಲ ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಜೈಲುವಾಸ ಅನುಭವಿಸಿದ್ದರು. ಜಿಯಾವುಲ್ ಹಕ್ ಅವರ ಆಡಳಿತದಲ್ಲಿ ಅವರಿಗೆ ಕಿರುಕುಳ ನೀಡಲಾದ ಪರಿಣಾಮವಾಗಿ ಅವರು 1979ರಿಂದ 1982ರ ವರೆಗೆ ಅಜ್ಞಾತರಾಗಿ ದೇಶಭ್ರಷ್ಟರಾಗಬೇಕಾಯಿತು. 1979ರಲ್ಲಿ ಅವರು ಬರೆದ ಕವನ ‘ಹಮ್ ದೇಖೇಂಗೆ’ ಜಿಯಾವುಲ್ ಹಕ್‌ಅವರ ಸರ್ವಾಧಿಕಾರಿ ಹಾಗೂ ಮೂಲಭೂತವಾದಿ ಆಡಳಿತದ ವಿರುದ್ಧ ಪ್ರತಿಭಟಿಸುವಂತೆ ಜನತೆಗೆ ನೀಡಿದ ಕರೆಯಾಗಿದೆ. ಪ್ರಮುಖವಾಗಿ ಮುಸ್ಲಿಮ್ ಶ್ರೋತೃಗಳಿಗಾಗಿ ಬರೆದ ಕವನವಾದ್ದರಿಂದ ಸರ್ವಾಧಿಕಾರವನ್ನು ಖಂಡಿಸಲು ಅದು ಇಸ್ಲಾಮಿಕ್ ಪ್ರತಿಮೆಗಳನ್ನು ಬಳಸಿಕೊಂಡಿದೆ. ಎಲ್ಲ ಸುಳ್ಳು ದೇವರುಗಳನ್ನು (ಸರ್ವಾಧಿಕಾರಿ ಆಡಳಿತಗಾರರನ್ನು) ಅಧಿಕಾರದಿಂದ ಕಿತ್ತೆಸೆದು ಎಲ್ಲ ಸಿಂಹಾಸನಗಳನ್ನು ಹಾಗೂ ಕಿರೀಟಗಳನ್ನು ನಾಶಪಡಿಸುವ ಒಂದು ತೀರ್ಪಿನ ದಿನವನ್ನು ಅದು ಒಂದು ರೂಪಕವಾಗಿ ಬಳಸುತ್ತದೆ. ಸಬ್ ತಾಜ್ ಉಚಾಲೆ ಜಾಯೇಂಗೆ, ಸಬ್ ತಖ್ತ್ ಗಿರಾಯೆ ಜಾಯೇಂಗೆ’’. ಆ ಮೂಲಕ ಜಗತ್ತಿಗೆ ಪ್ರಜಾಸತ್ತಾತ್ಮಕವಾದ ಹಾಗೂ ಸರ್ವರ ಕಲ್ಯಾಣವನ್ನು ಬಯಸುವ ಒಂದು ಭವಿಷ್ಯದ ಚಿತ್ರಣ ನೀಡುತ್ತದೆ.
ಸರ್ವಾಧಿಕಾರವನ್ನು ಹಾಗೂ ಇಸ್ಲಾಮಿಕ್ ಮೂಲಭೂತ ವಾದವನ್ನು ಖಂಡಿಸುವ ಒಂದು ಪದ್ಯವನ್ನು ಅದು ಹಿಂದೂ ವಿರೋಧಿ ಹಾಗೂ ಭಾರತ ವಿರೋಧಿ ಎಂದು ಈಗ ಭಾರತದಲ್ಲಿ ಖಂಡಿಸುವುದು ಒಂದು ದೊಡ್ಡ ವ್ಯಂಗ್ಯ. ಇದು ಹೀಗೆ ಖಂಡಿಸುತ್ತಿರುವವರಿಗೆ ಆ ಪದ್ಯದ ಸಂದರ್ಭದ ಕುರಿತು ಇರುವ ಸಂಪೂರ್ಣ ಅಜ್ಞಾನವನ್ನು ತೋರಿಸುತ್ತದೆ ಮತ್ತು ಅವರ ಸಾಂಸ್ಕೃತಿಕ ಗೊಡ್ಡುತನವನ್ನು ಜಾಹೀರುಪಡಿಸುತ್ತದೆ. ಪಾಕಿಸ್ತಾನದಲ್ಲಷ್ಟೇ ಅಲ್ಲ, ಎಲ್ಲ ಕಡೆಗಳಲ್ಲೂ ಜನರು ತಮ್ಮ ಅದೃಷ್ಟವನ್ನು ತಮ್ಮ ಕೈಗೇ ತೆಗೆದುಕೊಂಡು ಸರ್ವಾಧಿಕಾರಿ ಆಡಳಿತವನ್ನು ಹಾಗೂ ಮತಾಂಧ ಆಡಳಿತಗಾರರನ್ನು ಅಧಿಕಾರದಿಂದ ಕಿತ್ತೆಸೆಯುವಂತೆ ಜನರನ್ನು ಹುರಿದುಂಬಿಸಲು ಫೈಝ್ ಅವರು ಬರೆದ ಕವನ ‘‘ಹಮ್ ದೇಖೇಂಗೆ’’. ಯಾಕೆಂದರೆ ಫೈಝ್ ಅವರು ಹೇಳುವಂತೆ ತಾವೇ ಸ್ವತಃ ದೇವರು ಎಂಬಂತೆ ವರ್ತಿಸುವ ಸರ್ವಾಧಿಕಾರಿಗಳನ್ನು ಅವರ ಕುರ್ಚಿಯಿಂದ, ಸಿಂಹಾಸನದಿಂದ ಕೆಳಗಿಳಿಸಿ ಜನರ ಮನೋಗತ ಮೆರೆಯುವಂತಹ ಒಂದು ದಿನ ಬಂದೇ ಬರುತ್ತದೆ.
(ಲೇಖಕರು ಯುನಿವರ್ಸಿಟಿ ಡಿಸ್ಟಿಂಗ್ವಿಶ್‌ಡ್ ಪ್ರೊಫೆಸರ್ ಎಮಿರೆಟಸ್ ಆಫ್ ಇಂಟರ್‌ನ್ಯಾಷನಲ್ ರಿಲೇಶನ್ಸ್ ಆಗಿ ಮಿಚಿಗನ್ ಸ್ಟೇಟ್ ಯುನಿವರ್ಸಿಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.)
ಕೃಪೆ: ದಿ ಹಿಂದೂ