ಸೀಳಿಬಿಡು ನನ್ನೆದೆಯ
ಭಾವನಾ
ನಿನ್ನಜ್ಜನ ಹೊಲದೊಳಗೆ
ಬೆವರ ಮಳೆ ಸುರಿಸುವಾಗ
ನಿನ್ನಪ್ಪನ ದನದ ದೊಡ್ಡಿಯಲಿ
ಸಗಣಿ ಗಂಜಳವ ಬಳಿವಾಗ
ನಿನ್ನಮ್ಮನಿಗೆ ಹಾಲು ಬೆಣ್ಣೆಯ
ಹೊತ್ತು ತರುವಾಗ
ಅಕ್ಷರವ ಕಲಿಯಬೇಕೆಂದು ನಿವ್ಯಾರು ಹೇಳಲೆ ಇಲ್ಲ !,
ನಿಮ್ಮಪ್ಪಣೆಯಿಲ್ಲದೆ ಅಕ್ಷರವ ಕಲಿಯಲಾದೀತೆ ಒಡೆಯ?
ಇಷ್ಟಕ್ಕೂ ಅಕ್ಷರವ ತಿದ್ದಲು
ನನಗೆಲ್ಲಿತ್ತೊ ಸಮಯ?...
ಉತ್ತು ಬಿತ್ತಿ ಬೆಳೆದು
ಒಕ್ಕು ಚೊಕ್ಕವ ಮಾಡಿ
ನೆಟ್ಟು ನೀರುಣಿಸಿ ಬೆಳೆತೆಗೆದು ಹೊತ್ತು ಹೊತ್ತಿಗೆ ತುತ್ತುಣಲು
ನಿನ್ನ ಅನ್ನದ ತಟ್ಟೆ ತುಂಬಬೇಕಿತ್ತಲ್ಲ
ಇಷ್ಟಕ್ಕೂ ಅಕ್ಷರವ ತಿದ್ದಲು
ನನಗೆಲ್ಲಿತ್ತೊ ಸಮಯ?....
ನೀ ನಡೆವ ಹಾದಿಬೀದಿಯ ಗುಡಿಸಿ
ಶುಚಿಗೊಳಿಸಬೇಕಿತ್ತು
ನಿನ್ನ, ನಿನ್ನಜ್ಜನ, ಮುತ್ತಜ್ಜನ ಮಾರುದ್ದ ಬೆಳೆದಿದ್ದ ತಲೆಗೂದಲ
ಜೊತೆಗೆ ಸಹ್ಯವಲ್ಲದ ವಾಸನೆಯ
ಕಂಕುಳ ಕೂದಲನು ಕತ್ತರಿಸಿ ಒಪ್ಪಮಾಡಬೇಕಿತ್ತು
ನಿನ್ನ, ನಿನ್ನ ಪರಿವಾರದವರ
ಪಾದಗಳಿಗೆ ಮುಳ್ಳು ಕಲ್ಲುಗಳು
ತಾಕದಿರಲೆಂದು ಚಪ್ಪಲಿ ಹೊಲಿಯಬೇಕಿತ್ತು
ಇಷ್ಟಕ್ಕೂ ಅಕ್ಷರವ ತಿದ್ದಲು
ನನಗೆಲ್ಲಿತ್ತೊ ಸಮಯ?....
ನನಗೆ ಹೆಮ್ಮೆಯಿದೆ ಒಡೆಯ
ಕೆಟ್ಟು ಮೂಲೆ ಸೇರಬೇಕಿದ್ದ
ನಿಮ್ಮ ವಾಹನಗಳ ರಿಪೇರಿಮಾಡದ್ದಕ್ಕೆ
ಪಂಕ್ಚರ್ ಹಾಕಿದ್ದಕ್ಕೆ
ನಿಮ್ಮನೆಯ ಕುದುರೆಗಳಿಗೆ
ಲಾಳ ಕಟ್ಟಿದ್ದಕ್ಕೆ
ನಂಬು ನನ್ನನ್ನ
ತಾಸಿನ ಲೆಕ್ಕವಿಡದ ಶ್ರಮದೊಳಗೆ
ನಿನ್ನ ಮೂರುಕಾಸಿನಕ್ಷರವ
ನಾ ಕದ್ದು ಎದೆಯೊಳಗೆ
ಬಚ್ಚಿಟ್ಟು ಕೊಳ್ಳಲಿಲ್ಲ
ಭಯವಿದೆ ನನಗೆ
ಒಮ್ಮೆ ನಿಮ್ಮವರ್ಯಾರೊ
ಓದುವುದ ಕೇಳಿದ
ನಮ್ಮಣ್ಣ-ತಮ್ಮರ ಕಿವಿಗೆ
ಕಾದ ಸೀಸವ ಸುರಿದಿದ್ದರಂತೆ ಎರಡಕ್ಷರವ ಉಚ್ಚರಿಸಿದ
ತಪ್ಪಲ್ಲದ ತಪ್ಪಿಗೆ
ಕಮ್ಮಾರನ ಕುಲುಮೆಯಲಿ
ಬೆಂದ ಸರಳಿಂದ ನಾಲಿಗೆಯ ಸುಟ್ಟಿದ್ದರಂತೆ
ಹೀಗಿದ್ದು ನಿಮ್ಮ ಬದುಕುವ ಆಯುಧಗಳಾದ ಅಕ್ಷರಗಳ
ಹಂಗ್ಯಾಕೊ ನನಗೆ?
ಹಾಗೂ ಅನುಮಾನವಿದ್ದರೆ
ಸಿಗಿದುಬಿಡು ನನ್ನೆದೆಯ
ಅಲ್ಲಿ ಹಿಂದೂ, ಮುಸ್ಲಿಮ್,
ಕ್ರಿಸ್ತ, ಬೌದ್ಧ, ಜೈನ, ಪಾರಸಿ
ವಿಶ್ವದೊಳಿರುವ ಯಾವ
ಜಾತಿ-ಧರ್ಮಗಳೂ ಇಲ್ಲ
ಮನುಷ್ಯ ಪ್ರೀತಿಯ ಬಿಟ್ಟು
ಸಾಕ್ಷೀಕರಿಸಲಿ ಇದನು
ಕರೆಸು ಆ ನಿನ್ನ ರಾಮನ
ಬೇರೇನಾದರೂ ಇದ್ದರೆ
ನನ್ನ ರುಂಡವ ತುಂಡರಿಸಲಿ
ಅಂತೂ-ಇಂತೂ
ನಿನ್ನ ಕೃತಜ್ಞತೆಗೆ
ಈ ಸೇವಾನಿರತನ ಧನ್ಯವಾದಗಳು.