ಓ ಮೆಣಸೇ...
ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಈಗ ಏನನ್ನೂ ಕೇಳುವ ಪ್ರಶ್ನೆಯೇ ಇಲ್ಲ - ಡಿ.ಕೆ. ಶಿವಕುಮಾರ್, ಮಾಜಿ ಸಚಿವ
ಕಾಂಗ್ರೆಸ್‌ಗೆ ನೀವೇನು ಕೊಟ್ಟಿದ್ದೀರಿ ಎಂದು ಕೇಳಬೇಡವೇ?
---------------------
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದಲ್ಲಿ ನೆಲೆಸಿರುವ ಯಾವುದೇ ಧರ್ಮೀಯರಿಗೂ ತೊಂದರೆಯಾಗದು - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ.
ಸಂವಿಧಾನಕ್ಕಷ್ಟೇ ತೊಂದರೆ ಅಂತೀರಾ?
---------------------
ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ - ಸತೀಶ್ ಜಾರಕಿಹೊಳಿ, ಶಾಸಕ.
ಕೊಡದಿದ್ದರೆ ಏನು ಮಾಡುತ್ತೀರಿ, ಅದನ್ನೂ ಹೇಳಿ.
---------------------
ಒಳ್ಳೆಯ ಕೆಲಸ ಮಾಡುವಾಗ ನೂರು ಬೆದರಿಕೆ ಕರೆ ಬಂದರೂ ಹೆದರುವುದಿಲ್ಲ - ಈಶ್ವರಪ್ಪ, ಸಚಿವ.
ಮೊದಲು ನೀವು ಮಾಡಿದ ಒಳ್ಳೆಯ ಒಂದು ಕೆಲಸವನ್ನಾದರೂ ಹೇಳಿ?
---------------------
ಎಲ್ಲರಿಗೂ ಪೌರತ್ವ ಕೊಡಲು ಭಾರತ ತೋಟದಪ್ಪನ ಛತ್ರವಲ್ಲ - ಆರ್. ಅಶೋಕ್, ಸಚಿವ.
ಇಡೀ ದೇಶವನ್ನು ಸಂಘಪರಿವಾರದ ಛತ್ರಿಗಳ ಕೈಗೆ ಕೊಡುವ ಯೋಜನೆ ಇದೆಯೇ?
---------------------
ನಾವು ಎರಡು ಕೈಗಳನ್ನು ಮುಗಿಯುವುದರಿಂದ ನಮ್ಮ ದೇಹದಲ್ಲಿರುವ ಶಕ್ತಿ ನಮ್ಮಲ್ಲೇ ಇರುತ್ತದೆ. ನಾವು ಶೇಕ್ ಹ್ಯಾಂಡ್ ಮಾಡುವುದರಿಂದ ಅವರ ದರಿದ್ರಗಳು ನಮಗೆ ಬರುತ್ತವೆ - ಜಗ್ಗೇಶ್, ನಟ.
ಯಾರಿಗೋ ಶೇಕ್ ಹ್ಯಾಂಡ್ ಮಾಡಿದ್ದೀರಿ...ಅದಕ್ಕೆ ಇಂತಹ ದರಿದ್ರ ಮಾತುಗಳನ್ನಾಡುತ್ತಿರುವುದು.
---------------------
ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ನಡುವೆ ಯಾವುದೇ ರೀತಿಯ ಸೈದ್ಧಾಂತಿಕ ಸಾಮ್ಯತೆಗಳಿಲ್ಲ - ನಿತಿನ್ ಗಡ್ಕರಿ, ಕೇಂದ್ರ ಸಚಿವ.
ವಿವಿಧತೆಯಲ್ಲಿ ಏಕತೆ ಅವರ ಧೋರಣೆ ಇರಬೇಕು.
---------------------
ನಾನು ಮುಸ್ಲಿಮ್ ವಿರೋಧಿ ಅಲ್ಲ - ಸೋಮಶೇಖರ ರೆಡ್ಡಿ, ಶಾಸಕ.
ಬಹುಶಃ ಸಂವಿಧಾನದ ವಿರೋಧಿ ಇರಬೇಕು.
---------------------
ನನಗೆ ರಾಜಕೀಯ ನಿವೃತ್ತಿ ಪಡೆಯುವ ವಯಸ್ಸಾಗಿಲ್ಲ, ವೈರಾಗ್ಯವೂ ಬಂದಿಲ್ಲ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.
ದೇವೇಗೌಡರೂ ಇದನ್ನೇ ಹೇಳುತ್ತಿದ್ದಾರೆ.
---------------------
ಸಿಎಂ ಕುರ್ಚಿ ಹೋದ ಬಳಿಕ ಎಚ್.ಡಿ. ಕುಮಾರಸ್ವಾಮಿ ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದಾರೆ - ರೇಣುಕಾಚಾರ್ಯ, ಮಾಜಿ ಸಚಿವ.
ಯಡಿಯೂರಪ್ಪರ ಸ್ಥಿತಿ ಅತೃಪ್ತರ ಗಾಳಕ್ಕೆ ಸಿಕ್ಕಿ ಒದ್ದಾಡುತ್ತಿರುವ ಮೀನು.
---------------------
ನಾಯಿ ಬೊಗಳಿದರೆ ನಾವು ಅದಕ್ಕೆ ಕಚ್ಚಲಿಕ್ಕೆ ಹೋಗುವುದಿಲ್ಲ - ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ.
ಬರೇ ತಿರುಗಿ ಬೊಗಳಿ ಸುಮ್ಮಾನಾಗುತ್ತೀರಿ ಎಂದು ಕಾಣುತ್ತದೆ.
---------------------
ದೇಶ ವಿಭಜನೆಯ ಸಂದರ್ಭದಲ್ಲಿ ದೇಶ ಮುನ್ನಡೆಸಿದವರು ಹೇಡಿಗಳಾಗಿದ್ದರು - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ.
ಬ್ರಿಟಿಷರಿಗೆ ಕ್ಷಮೆಯಾಚನೆ ಪತ್ರ ಬರೆದವರು ನಿಮ್ಮ ದೃಷ್ಟಿಯಲ್ಲಿ ವೀರರಿರಬೇಕು.
---------------------
ಭಾರತದಲ್ಲಿ ಅಪಘಾತಗಳು ಹೆಚ್ಚುತ್ತಿವೆ - ನಿತಿನ್ ಗಡ್ಕರಿ, ಕೇಂದ್ರ ಸಚಿವ
ಡ್ರೈವಿಂಗ್ ದಾಖಲೆಗಳಿಲ್ಲದ ವ್ಯಕ್ತಿಯನ್ನು ಮತದಾರರು ಕ್ಯಾಬ್‌ನ ಚಾಲಕ ಮಾಡಿರುವುದೇ ಅದಕ್ಕೆ ಕಾರಣವಂತೆ.
---------------------
ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತಂತೆ ಕಾಂಗ್ರೆಸ್ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ - ನಳಿನ್ ಕುಮಾರ್ ಕಟೀಲು, ಸಂಸದ.
ಕಾಯ್ದೆ ಜಾರಿಗೆ ತಂದಿರುವುದೇ ದೇಶಕ್ಕೆ ಬೆಂಕಿ ಹಚ್ಚುವುದಕ್ಕಂತೆ.
---------------------
ಉಪ ಚುನಾವಣೆಯಲ್ಲಿ ಸೋತವರಿಗೆ ಮಂತ್ರಿಗಿರಿ ಕೊಡಬಾರದು ಎಂದು ಸುಪ್ರೀಂಕೋರ್ಟು ಹೇಳಿಲ್ಲ - ಎಚ್.ವಿಶ್ವನಾಥ್, ಮಾಜಿ ಶಾಸಕ.
ಸೋತವರಿಗಲ್ಲ, ಅನರ್ಹರಿಗೆ ಕೊಡಬಾರದು ಎಂದಿರುವುದು.
---------------------
ನಾನು ಏನೇ ಹೇಳಿದರೂ ಅದನ್ನು ವಿವಾದ ಮಾಡಿ ನನಗೆ ಪ್ರಸಿದ್ಧಿ ತಂದು ಕೊಟ್ಟವರು ಮಾಧ್ಯಮದವರು - ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ.
ಬೀದಿಯಲ್ಲಿ ಬೆತ್ತಲೆ ತಿರುಗುತ್ತಿದ್ದರೆ ಸುದ್ದಿಯಾಗದೇ ಇರುವುದು ಹೇಗೆ.
---------------------
ಪ್ರಧಾನಿ ಮೋದಿ ನನಗಿಂತ ಹೆಚ್ಚು ಬುದ್ಧಿವಂತರು - ಎಸ್.ಎಲ್. ಭೈರಪ್ಪ, ಸಾಹಿತಿ.
ನೀವು ಲದ್ದಿವಂತರಾಗಿರುವ ಕಾರಣದಿಂದಲೇ ಮೋದಿಯ ಕುರಿತು ಆತಂಕ.
---------------------
ಪಾಕಿಸ್ತಾನವು ವಿಶ್ವದ ಅತ್ಯಂತ ಸುರಕ್ಷಿತ ಸ್ಥಳಗಳಲ್ಲೊಂದಾಗಿದೆ - ಕ್ರಿಸ್ ಗೇಲ್, ವೆಸ್ಟ್ ಇಂಡಿಸ್ ಕ್ರಿಕೆಟಿಗ.
ಚಿಂತೆ ಬೇಡ. ಭಾರತ ಶೀಘ್ರದಲ್ಲೇ ಅದರ ಮಟ್ಟಕ್ಕೆ ತಲುಪಲು ಪ್ರಧಾನಿ ಶತ ಪ್ರಯತ್ನ ಮಾಡುತ್ತಿದ್ದಾರೆ.
---------------------
ಪ್ರಧಾನಿ ಮೋದಿಗೆ ಅರ್ಥಶಾಸ್ತ್ರ ಗೊತ್ತಿಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ.
ಅವರಿಗೆ ಶಸ್ತ್ರ ಗೊತ್ತಿದೆ. ಶಾಸ್ತ್ರ ಗೊತ್ತಿಲ್ಲ.
---------------------
ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯದ್ದು ಕಟ್ ಆ್ಯಂಡ್ ಪೇಸ್ಟ್ ಸಿಡಿ - ಶೋಭಾ ಕರಂದ್ಲಾಜೆ, ಸಂಸದೆ.
ಥೇಟ್ ನಿಮ್ಮ ಸರಕಾರದ ಹಾಗೆ.
---------------------
ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಭಾರತದ ಎರಡು ಕಣ್ಣುಗಳಿದ್ದಂತೆ - ಕೆ.ಎಸ್. ಈಶ್ವರಪ್ಪ, ಸಚಿವ.
ಅದೀಗ ಎರಡು ಹುಣ್ಣಾಗಿ ಬದಲಾಗಿದೆ.