ನೀವು ಮಧುಮೇಹಿಗಳೇ?: ಪ್ರಯಾಣದ ವೇಳೆ ಈ ಟಿಪ್ಸ್ ಗಳು ನೆನಪಿರಲಿ
ಮಧುಮೇಹಿಗಳಿಗೆ ಎಲ್ಲಿಯಾದರೂ ಪ್ರವಾಸಕ್ಕೆ ಹೋಗುವುದು ನಿಜಕ್ಕೂ ಸಮಸ್ಯೆಯಾಗುತ್ತದೆ. ಏಕೆಂದರೆ ಪ್ರವಾಸದ ಸಂದರ್ಭದಲ್ಲಿ ಆಹಾರ ಸೇವನೆ ಸಮಯದಲ್ಲಿ ಏರುಪೇರು,ಔಷಧಗಳ ಸೇವನೆ ಕ್ರಮ ತಪ್ಪುವುದು,ಅತಿಯಾದ ದೈಹಿಕ ಶ್ರಮ ಅಥವಾ ನಿರ್ಜಲೀಕರಣ ಇವೆಲ್ಲ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟದಲ್ಲಿ ವಿಪರೀತ ಬದಲಾವಣೆಗಳಿಗೆ ಕಾರಣವಾಗುತ್ತವೆ.
ಹೆಚ್ಚಿನ ಮಧುಮೇಹಿಗಳು ಇದೇ ಕಾರಣದಿಂದ ಪ್ರವಾಸ ಕೈಗೊಳ್ಳಲು ಬಯಸುವುದಿಲ್ಲ. ಆದರೆ ಸರಿಯಾದ ಪೂರ್ವಸಿದ್ಧತೆ ಮತ್ತು ಯೋಜನೆಯೊಂದಿಗೆ ಮಧುಮೇಹಿಗಳೂ ಎಲ್ಲರಂತೆ ಪ್ರವಾಸಗಳನ್ನು ಕೈಗೊಳ್ಳಬಹುದು. ಆರೋಗ್ಯಕರ ಪ್ರಯಾಣಕ್ಕಾಗಿ ಮಧುಮೇಹಿಗಳು ಅನುಸರಿಸಬೇಕಾದ ಕೆಲವು ಟಿಪ್ಸ್ ಇಲ್ಲಿವೆ......
►ಇತ್ತೀಚಿನ ವೈದ್ಯಕೀಯ ದಾಖಲೆಗಳು ಜೊತೆಯಲ್ಲಿರಲಿ
ಮಧುಮೇಹಿಗಳು ಪ್ರಯಾಣಕ್ಕೆ ತೆರಳುವ ಮುನ್ನ ಮಾಡಬೇಕಾದ ಮುಖ್ಯ ಕೆಲಸವೆಂದರೆ ತಮ್ಮ ವೈದ್ಯರನ್ನು ಭೇಟಿಯಾಗುವುದು. ಪ್ರಯಾಣ ಮಾಡಲು ನೀವು ಅರ್ಹರಿದ್ದೀರಿ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ ಮತ್ತು ವೈದ್ಯರಿಂದ ಅಗತ್ಯ ಸಲಹೆಗಳನ್ನು ಪಡೆದುಕೊಳ್ಳಿ. ವೈದ್ಯರು ಬರೆದುಕೊಟ್ಟಿರುವ ಇತ್ತೀಚಿನ ಔಷಧಿ ಚೀಟಿ ಮತ್ತು ಹಿಂದಿನ ಮೂರು ತಿಂಗಳುಗಳಲ್ಲಿ ನೀವು ಮಾಡಿಸಿದ ವೈದ್ಯಕೀಯ ತಪಾಸಣೆಗಳ ವರದಿಗಳ ಒಂದಕ್ಕಿಂತ ಹೆಚ್ಚಿನ ಪ್ರತಿಗಳು ನಿಮ್ಮ ಜೊತೆಯಲ್ಲಿರಲಿ. ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಈ ದಾಖಲೆಗಳು ನಿಮ್ಮ ಜೀವವನ್ನು ರಕ್ಷಿಸಬಲ್ಲವು. ವಿದೇಶಕ್ಕೆ ಪ್ರಯಾಣಿಸುವುದಿದ್ದರೆ ಭದ್ರತಾ ತಪಾಸಣೆಗಳ ಸಮಯದಲ್ಲಿ ತೊಂದರೆಯಾಗದಂತೆ ನಿಮ್ಮ ಆರೋಗ್ಯಸ್ಥಿತಿ ಮತ್ತು ನೀವು ಪಡೆಯುತ್ತಿರುವ ಚಿಕಿತ್ಸೆ,ಸೇವಿಸುತ್ತಿರುವ ಔಷಧಿಗಳ ವಿವರಗಳುಳ್ಳ ವೈದ್ಯರ ಪತ್ರವನ್ನು ಪಡೆದುಕೊಳ್ಳಿ.
►ನಿಮ್ಮ ಬ್ಯಾಗಿನಲ್ಲಿ ಸಾಕಷ್ಟು ಔಷಧಿಗಳಿರಲಿ
ನೀವು ಪ್ರವಾಸಕ್ಕೆ ಹೊರಡುವ ಮುನ್ನ ನೀವು ಪ್ರತಿದಿನ ಬಳಸುವ ಔಷಧಿಗಳು ನಿಮ್ಮ ಮಾಮೂಲು ಅಗತ್ಯಕ್ಕಿಂತ ಕನಿಷ್ಠ ದುಪ್ಪಟ್ಟು ಪ್ರಮಾಣದಲ್ಲಿ ನಿಮ್ಮ ಬ್ಯಾಗಿನಲ್ಲಿರಲಿ. ಏಕೆಂದರೆ,ವಿಶೇಷವಾಗಿ ನೀವು ಪ್ರವಾಸದಲ್ಲಿದ್ದಾಗ ಔಷಧಿಗಳ ಕೊರತೆಯನ್ನು ಎದುರಿಸುವುದಕ್ಕಿಂತ ಹೆಚ್ಚಿನ ಔಷಧಿ ನಿಮ್ಮ ಬಳಿ ಇರುವುದು ಒಳ್ಳೆಯದು. ನೀವು ದಿನನಿತ್ಯ ಸೇವಿಸುವ ಔಷಧಿಗಳು ಸದಾ ನಿಮ್ಮ ಕೈಗೆಟಕುವಂತಿರಲಿ. ವಿದೇಶಕ್ಕೆ ತೆರಳುವುದಿದ್ದರೆ ನಿಮ್ಮ ಔಷಧಿಗಳನ್ನು ಚೆಕ್-ಇನ್ ಬ್ಯಾಗೇಜ್‌ನ ಬದಲಾಗಿ ನಿಮ್ಮ ಬ್ಯಾಕ್‌ಪ್ಯಾಕ್ ಅಥವಾ ಹ್ಯಾಂಡ್‌ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ. ನೀವು ಇನ್ಸುಲಿನ್ ತೆಗೆದುಕೊಳ್ಳುತ್ತೀರಾದರೆ ಅದನ್ನೆಂದೂ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಇಡಬೇಡಿ,ಏಕೆಂದರೆ ಅತಿಯಾದ ಉಷ್ಣತೆಯಿಂದಾಗಿ ಅದು ಪರಿಣಾಮಕಾರಿತ್ವವನ್ನು ಕಳೆದುಕೊಳ್ಳಬಹುದು.
►ನಿಮ್ಮ ಮೆಡಿಸಿನ್ ಕಿಟ್‌ನಲ್ಲಿ ಗ್ಲುಕೊಮೀಟರ್ ಸೇರಿಸಲು ಮರೆಯಬೇಡಿ
ಪ್ರವಾಸದ ಸಂದರ್ಭದಲ್ಲಿ ನಿಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಆಗಾಗ್ಗೆ ಪರೀಕ್ಷಿಸುವುದು ಮುಖ್ಯವಾಗಿದೆ. ಹೀಗಾಗಿ ಗ್ಲುಕೊಮೀಟರ್ ಸದಾ ನಿಮ್ಮ ಬಳಿಯಿರಲಿ. ಜೊತೆಗೆ ನೀವು ಹೆಚ್ಚುವರಿ ಬ್ಯಾಟರಿಗಳು ಮತ್ತು ಗ್ಲುಕೊಮೀಟರ್ ಸ್ಟ್ರಿಪ್‌ಗಳನ್ನೂ ಇಟ್ಟುಕೊಳ್ಳಬೇಕು. ದೂರ ಅಂತರದ ವಿಮಾನ ಪ್ರಯಾಣವಾಗಿದ್ದರೆ ಗ್ಲುಕೊಮೀಟರ್,ಸ್ಟ್ರಿಪ್‌ಗಳು,ಇನ್ಸುಲಿನ್ ಮತ್ತು ಸಿರಿಂಜ್‌ಗಳು.ಕುರುಕಲು ತಿಂಡಿಗಳು ಮತ್ತು ಗ್ಲುಕೋಸ್ ಇತ್ಯಾದಿಗಳನ್ನು ಸಣ್ಣ ಬ್ಯಾಗಿನಲ್ಲಿ ಹಾಕಿ ನಿಮಗೆ ತಕ್ಷಣಕ್ಕೆ ಸಿಗುವಂತೆ ಇಟ್ಟುಕೊಳ್ಳಿ.
►ಆರೋಗ್ಯಕರ ತಿನಿಸು ಇಟ್ಟುಕೊಳ್ಳಿ
ರಕ್ತದಲ್ಲಿಯ ಸಕ್ಕರೆ ಮಟ್ಟದಲ್ಲಿ ದಿಢೀರ್ ಏರಿಳಿತಗಳಾದ ಸಂದರ್ಭದಲ್ಲಿ ತಿನ್ನಲು ಆರೋಗ್ಯಕರ ತಿಂಡಿಗಳನ್ನು ಪ್ಯಾಕ್ ಮಾಡಿಕೊಳ್ಳಲು ಮರೆಯಬೇಡಿ. ಇಂತಹ ತಿನಿಸುಗಳನ್ನು ನಡುನಡುವೆ ತಿನ್ನುತ್ತಿದ್ದರೆ ಅದು ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ ಮತ್ತು ದಿಢೀರ್ ಏರುಪೇರುಗಳು ಉಂಟಾಗುವುದಿಲ್ಲ. ದಿನಕ್ಕೆ ಮೂರೂ ಹೊತ್ತು ದೊಡ್ಡ ಊಟಗಳನ್ನು ಮಾಡುವ ಬದಲು ಆಗಾಗ್ಗೆ ಪುಟ್ಟ ಊಟಗಳನ್ನು ಮಾಡಿ. ಡ್ರೈಫ್ರುಟ್ಸ್,ನಟ್ಸ್, ಹಣ್ಣುಗಳು ಇತ್ಯಾದಿಗಳನ್ನು ಸದಾ ಸಿದ್ಧವಾಗಿಟ್ಟುಕೊಳ್ಳಿ.
►ಸರಳವಾದ ವ್ಯಾಯಾಮಗಳನ್ನು ಮರೆಯಬೇಡಿ
ನೀವು ವಿಮಾನ,ರೈಲು ಅಥವಾ ಬಸ್‌ನಲ್ಲಿ ಪ್ರಯಾಣಿಸಿ,ಆದರೆ ಕೈಕಾಲುಗಳನ್ನು ಆಡಿಸುತ್ತ ಸರಳ ವ್ಯಾಯಾಮಗಳನ್ನು ಮಾಡುತ್ತಿರಲು ಮರೆಯಬೇಡಿ. ನಿಮ್ಮ ನಿಗದಿತ ತಾಣವನ್ನು ತಲುಪಿದ ಬಳಿಕ ಅನಗತ್ಯ ತೂಕ ಗಳಿಕೆ ಮತ್ತು ತೊಂದರೆಗಳಿಂದ ದೂರವಿರಲು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ವಾಕಿಂಗ್ ಸೇರಿಸಿಕೊಳ್ಳಿ.
►ಆಗಾಗ್ಗೆ ನೀರು ಕುಡಿಯಲು ಮರೆಯಬೇಡಿ
ಪ್ರವಾಸದ ಸಂದರ್ಭದಲ್ಲಿ ನಿಮ್ಮ ಶರೀರ ನಿರ್ಜಲೀಕರಣಗೊಳ್ಳಲು ಅವಕಾಶ ನೀಡಬೇಡಿ. ದಿನವಿಡೀ ಸಾಕಷ್ಟು ನೀರು ಸೇವಿಸುವುದನ್ನು ಮರೆಯಬೇಡಿ. ನಿಮ್ಮ ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸಬಹುದಾದ ಸಕ್ಕರೆ ಬೆರೆತ ಚಹಾ,ಕಾಫಿ,ತಂಪು ಪಾನೀಯ,ಮದ್ಯ ಇತ್ಯಾದಿಗಳಿಂದ ದೂರವಿರಿ.
►ಅನುಕೂಲಕರ ಪಾದರಕ್ಷೆಗಳಿರಲಿ
ಹೆಚ್ಚು ಆರಾಮವನ್ನು ನೀಡುವ ಪಾದರಕ್ಷೆ/ಶೂಗಳನ್ನು ಒಯ್ಯಲು ಮರೆಯಬೇಡಿ. ಮಧುಮೇಹಿಗಳು ಸೋಂಕುಗಳು ಮತ್ತು ಪಾದದ ಸಮಸ್ಯೆಗಳಿಗೆ ಸುಲಭವಾಗಿ ತುತ್ತಾಗುವುದರಿಂದ ಸರಿಯಾದ ಪಾದರಕ್ಷೆಗಳನ್ನು ಧರಿಸುವುದು ಮುಖ್ಯವಾಗುತ್ತದೆ ಮತ್ತು ಪ್ರವಾಸದ ಸಂದರ್ಭದಲ್ಲಿಯೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.