ಅಡುಗೆಯ ಸಿದ್ಧಿ ಹೇಗೆ?
ನೀವಾಗಿ ಅಡುಗೆಯ ಸಂಗ ಮಾಡದೇ ಇದ್ದಲ್ಲಿ ಅದು ನಿಮ್ಮಡೆಗೆ ಎಂದೂ ಬರುವುದಿಲ್ಲ.. ಬಣ್ಣ ಬಿಡಿಸದೇ ಚಿತ್ರ, ಪದ ಕಟ್ಟದೆ ಪದ್ಯ ಸಿಕ್ಕೀತು ಹೇಗೆ? ಆದರೆ ಚಿತ್ರ-ಪದ್ಯವಿಲ್ಲದೇ ಬದುಕಬಹುದು, ಊಟವಿಲ್ಲದೇ ಇರಬಹುದೇ? ಅದನ್ನು ಒಲಿಸಿಕೊಳ್ಳದೆ ವಿಧಿಯಿಲ್ಲ.
ಅಡುಗೆಯು ಆತ್ಮ ಸಂಗಾತಕ್ಕೆ ಒದಗಿದ ಮೇಲೆ ಅದು ಕಲೆಯೇ ಎಂಬ ಪ್ರಶ್ನೆ ಉಳಿಯುವುದಿಲ್ಲ. ಆತ್ಮ ಸಂಗಾತವು ಸೃಜನಶೀಲತೆಗೆ ಸಿಗುವ ಒಂದು ಸ್ಪೇಸ್. ಅಲ್ಲಿಂದಲೇ ಕಲೆಯ ಒಂದು ಹರಿವು ಶುರುವಾಗುವುದು. ಅದು ನಿಧಾನಕ್ಕೆ ಬೆಳೆಯುತ್ತಾ ಬೆಳೆಯುತ್ತಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಅಧ್ಯಾತ್ಮವಾಗಿ ನಿಲ್ಲುತ್ತದೆ. ಈ ಅಧ್ಯಾತ್ಮವು ಕೆಲವರಲ್ಲಿ ಭಕ್ತಿ, ಕೆಲವರಲ್ಲಿ ವಿರಕ್ತಿ, ಹಲವರಲ್ಲಿ ಹಲವು ವಿಧವಾಗಿ ಕಾಣಿಸಿಕೊಳ್ಳುತ್ತದೆ. ಮಿತಿಯಿಲ್ಲದ ಸ್ವರೂಪ ಅದರದ್ದು. ಆದರೆ ಅದಕ್ಕೆ ಕಲೆಯು ಅಭಿವ್ಯಕ್ತಿ ಮಾಧ್ಯಮವಾಗುತ್ತದೆ. ಮನುಷ್ಯನಿಂದ ಮನುಷ್ಯನಿಗೆ ಪೀಳಿಗೆಯಿಂದ ಪೀಳಿಗೆಗೆ ಈ ಎಲ್ಲ ಪರಿಜ್ಞಾನಗಳನ್ನು ಸಾಗಿಸುವ ವಾಹನವು ಕಲೆಯೇ ಆಗಿದೆ. ಎಷ್ಟೋ ಬಾರಿ ಅದು ತನ್ನೆಲ್ಲಾ ಕೆಲಸಗಳನ್ನು ಮಾಡಿ ಅದನ್ನು ವಿಜ್ಞಾನ, ತಂತ್ರಜ್ಞಾನದ ಹೆಗಲಿಗೆ ವರ್ಗವಾಯಿಸುತ್ತದೆ.
ಅಡುಗೆ ಕಲೆಯೋ, ವಿಜ್ಞಾನವೋ?!
ನಾವು ಶಾಲೆ-ಕಾಲೇಜುಗಳಲ್ಲಿ ಓದುವಾಗ ಕೆಲವು ವಿಷಯಗಳ ಅಧ್ಯಯನದ ಮೊದಲಿಗೆ ಇದು ಕಲೆಯೋ ವಿಜ್ಞಾನವೋ ಎಂಬ ಚರ್ಚೆ ಇರುತ್ತಿತ್ತು. ನಮ್ಮೆಲ್ಲರ ಚರ್ಚೆ ಅದು ವಿಜ್ಞಾನ ಎಂಬ ಕಡೆಗೇ ಹೋಗುತ್ತಿತ್ತು. ಬಹುಶಃ ನಮಗೆಲ್ಲಾ ಕಲಾ ತರಗತಿಗಳ ಮೇಲೆ ಇದ್ದ ಅಸಡ್ಡೆಯೋ ಏನೋ ಯಾವುದನ್ನೂ ಕಲೆ ಎಂದು ಒಪ್ಪಲು ಹೋಗುತ್ತಲೇ ಇರಲಿಲ್ಲ. ವಿಜ್ಞಾನ ಎಂಬುದೇ ಸತ್ಯ ಉಳಿದದ್ದು ಮಿಥ್ಯ ಎಂಬುದು ತಲೆಯ ಹೊಕ್ಕಿ ಬಿಟ್ಟಿತ್ತು. ಅಂತಹ ಜಿಜ್ಞಾಸೆ ‘ಅಡುಗೆ’ ವಿಚಾರದಲ್ಲೂ ಇದೆ. ಇದು ಕಲೆಯೋ ವಿಜ್ಞಾನವೋ ಪ್ರತಿ ಸಲವೂ ಯೋಚಿಸಿ ಎರಡೂ ಇರಬಹುದು ಎಂದು ನುಣುಚಿಕೊಳ್ಳುವ ಉತ್ತರ ಕೊಟ್ಟುಬಿಡುತ್ತೇವೆ. ಆದರೆ ವಿಜ್ಞಾನ ಅನ್ನುವುದೇ ಕಲೆಯಿಂದ ಹುಟ್ಟಿಕೊಂಡ ಪರಿಜ್ಞಾನ! ಪರಿಕಲ್ಪನೆಗಳೆಲ್ಲವೂ ಮನುಷ್ಯನ ಕಲಾ ಪ್ರಜ್ಞೆಯ ಸಂಕೇತಗಳೇ ಆಗಿವೆ. ಕಲೆಯಿಲ್ಲದ ಪರಿಕಲ್ಪನೆಯ ಬೆಳವಣಿಗೆ ಕೂಡ ಅಸಾಧ್ಯ. ಉದಾ: ಆಕಾಶದಲ್ಲಿ ಹಾರಾಡುವ ವಿಮಾನದ ಕಲ್ಪನೆ ಹುಟ್ಟಿದ್ದರಿಂದಲೇ ವಿಮಾನ ತಯಾರಿಸಲು ಸಾಧ್ಯವಾಯಿತು. ಸೃಜನಶೀಲತೆ ಅಥವಾ ಕಲೆಯು ವಿಜ್ಞಾನಕ್ಕೆ ಮೂಲಧಾತುವೇ ಆಗಿದೆ. ಅಡುಗೆ ಹೇಗಿರಬೇಕು, ರುಚಿ, ಬಡಿಸುವ ವಿಧಾನ ಎಲ್ಲವೂ ಕಲೆಯಾಗಿದ್ದರೆ ಪದಾರ್ಥವು ಆಹಾರವಾಗಿ ಮಾರ್ಪಡುವ ಮತ್ತು ದೇಹದಲ್ಲಿ ಅದು ಶಕ್ತಿಯಾಗಿ ಪರಿವರ್ತನೆಯಾಗುವ ವಿಚಾರವು ವಿಜ್ಞಾನವಾಗುತ್ತದೆ. ಹೀಗೆ ಪ್ರಕ್ರಿಯೆಯಲ್ಲಿ ಕಲೆ ಮತ್ತು ವಿಜ್ಞಾನಗಳು ಮೇಳೈಸಿದ್ದರೆ... ಅದರ ಹುಟ್ಟು ಮಾತ್ರ ಕಲೆಯೇ ಆಗಿದೆ.
ಕಲೆಯ ಕಾಯಕಲ್ಪ
ಅಡುಗೆಯನ್ನು ಉತ್ಪನ್ನದಂತೆ ತಯಾರಿಸಲಾಗುವುದಿಲ್ಲ.. ಹಾಗೆ ತಯಾರಾದವು ಉತ್ಪನ್ನಗಳೇ ಪರಂತು ಆಹಾರವಲ್ಲ. ಅವು ವಾಯಿದೆಗೆ ಸಿಕ್ಕ ವಾರೆಂಟುಗಳ ಹಾಗೆ. ಚೂರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ನಾವೇ ಸ್ವತಃ ಮಾಡಿದ ಅಡುಗೆಗೆ ಅಂತಹ ವಾಯಿದೆ, ವಾರೆಂಟುಗಳೂ ಇಲ್ಲ. ಚೂರು ಹೆಚ್ಚುಕಮ್ಮಿಗಳಾದ್ರೂ ಜೀವಾಪಾಯವಂತೂ ಇರುವುದಿಲ್ಲ. ಹೆಚ್ಚಿಗೆ ಅಂದ್ರೆ ಉಪ್ಪು, ಖಾರ, ಹುಳಿ ಹೆಚ್ಚು ಕಮ್ಮಿಯಾಗಿ ‘ರುಚಿ’ಯು ಬದಲಾಗಬಹುದು. ಆದರೆ ಆ ಅನುಭವವು ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಬೆಳೆಯಲು ಮತ್ತು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ದಿನವೂ ಹೊಸ ಹೊಸ ಪರ್ಯಾಯ ಸಾಧನಗಳನ್ನು, ರುಚಿಯ ವೈವಿಧ್ಯತೆಯನ್ನು ಕಲ್ಪಿಸುತ್ತದೆ. ರಸಸ್ವಾದವು ಬೇರೆ ಬೇರೆ ರಸಗಳನ್ನು ಕೂಡಿಸಿದಾಗ ಸಿಗಬಹುದಾದ ರುಚಿ ಮತ್ತು ಘಮ, ಖಾದ್ಯದ ಬಣ್ಣ ಮತ್ತು ನೋಟ ಇತ್ಯಾದಿಯಾಗಿ ಸಂಪೂರ್ಣ ಅರಿವು ದೊರಕುತ್ತಾ ಹೋಗುತ್ತದೆ. ಥೇಟ್ ಕಲೆಯು ವಿಜ್ಞಾನವಾಗುವ ಬಗೆ.
ಇದು ಜೀವಾಧಾರಕ್ಕೆ ಕಲಿಯಲೇಬೇಕಾದ ಕಲೆ. ನಾವು ದುಡಿಯುವುದು ತಿಂದು ಬದುಕುವುದಕ್ಕಾಗಿಯೇ ಅಲ್ಲವೇ? ಹಾಗೆ ದುಡಿದ ಹಣ ಪೋಲಾಗಬಾರದು. ಅದರಲ್ಲೂ ಆಹಾರದ ವಿಷಯದಲ್ಲಿ ಪೋಲು ಅಕ್ಷಮ್ಯ. ಜೀವರಾಶಿಯಲ್ಲಿ ಆಹಾರದ ಕೊರತೆ ಮತ್ತು ಅಸಮಾನತೆಯನ್ನು ಅತೀ ಹೆಚ್ಚು ಎದುರಿಸುತ್ತಿರುವ ಸಸ್ತನಿಯೆಂದರೆ ಮನುಷ್ಯನೇ! ಆಹಾರ ಬೆಳೆಗಳನ್ನು ಬೆಳೆಯುವುದು, ಸಂಗ್ರಹಿಸುವುದು, ಮಾರುವುದು, ಕೊಂಡು ತರುವುದು, ಬೇಯಿಸಿ ಅಡುಗೆ ಮಾಡುವುದು ಮತ್ತು ತಿನ್ನುವುದು ಹೀಗೆ ಬಹುದೊಡ್ಡ ಸರಪಣಿಯೇ ಮನುಷ್ಯನ ಆಹಾರಕ್ರಮದಲ್ಲಿ ಅಡಕವಾಗಿದೆ. ಆದರೆ ಈ ಇಡೀ ಸರಪಣಿಯನ್ನು ನಾವು ‘ಕಾಯಕ’ ಎಂದು ಮಾತ್ರ ಬಗೆದು ನಿರ್ಲಕ್ಷ ಮಾಡಿದ್ದೇವೆ. ಕಾಯಕವು ಸಂಪಾದನೆಯ ಮಾರ್ಗ ಎಂದು ಭಾವಿಸಲಾಗಿದೆ. ಆದರೆ ಅವು ಕಲೆಯ ಕಣಿವೆ ಮಾರ್ಗಗಳೂ ಹೌದು. ಕಾಯಕದೊಂದಿಗೆ ನಮ್ಮ ಏಸ್ತಟಿಕ್ ಪ್ರಜ್ಞೆಗಳೂ ಜೊತೆಗೂಡಿ ಬಿಟ್ಟರೆ ಮನುಷ್ಯನ ಮನಸ್ಸಿಗೆ ಸಿಕ್ಕುವ ಆನಂದದಷ್ಟು ಮತ್ತೊಂದಿಲ್ಲ. ಅದು ನಿಯಮಿತವಾದ ಉತ್ತೇಜನವನ್ನು ಒದಗಿಸುತ್ತದೆ. ಬರಿಯ ಕಾಯಕವು ನಮ್ಮನ್ನು ಆಯಾಸಗೊಳಿಸುತ್ತದೆ. ಅಂತಹ ಏಸ್ತಟಿಕ್ ಪ್ರಜ್ಞೆಯು ಸಮ್ಮಿಳಿತಗೊಂಡ ಕಾಯಕವೇ ‘ಅಡುಗೆ’. ಆ ಕಾರಣ ಮಾತ್ರದಿಂದಲೇ ಅಲ್ಲೊಂದು ಆನಂದ ಮತ್ತು ಅರಿವು ಪ್ರತಿ ಸಲವು ಪುಟಿಯಲು ಸಾಧ್ಯವಾಗುವುದು. ಇಲ್ಲದೆ ಹೋಗಿದ್ದರೆ ಅದು ಉಳಿದ ಉದ್ಯೋಗಗಳಂತೆ ನಿಮಿತ್ತ ಮಾತ್ರವಾಗಿರುತ್ತಿತ್ತು. (ಹೀಗಿರುವುದೂ ಹಲವೆಡೆ ಉಂಟು.. ಇಲ್ಲವೇ ಇಲ್ಲವೆಂದು ನಿರಾಕರಿಸಲು ಅಸಾಧ್ಯ)
ನೀವಾಗಿ ಅಡುಗೆಯ ಸಂಗ ಮಾಡದೇ ಇದ್ದಲ್ಲಿ ಅದು ನಿಮ್ಮಡೆಗೆ ಎಂದೂ ಬರುವುದಿಲ್ಲ.. ಬಣ್ಣ ಬಿಡಿಸದೇ ಚಿತ್ರ, ಪದ ಕಟ್ಟದೆ ಪದ್ಯ ಸಿಕ್ಕೀತು ಹೇಗೆ? ಆದರೆ ಚಿತ್ರ-ಪದ್ಯವಿಲ್ಲದೇ ಬದುಕಬಹುದು, ಊಟವಿಲ್ಲದೇ ಇರಬಹುದೇ? ಅದನ್ನು ಒಲಿಸಿಕೊಳ್ಳದೆ ವಿಧಿಯಿಲ್ಲ. ಅದೇನು ಅಷ್ಟು ಕಷ್ಟದ ಸಂಗತಿಯಲ್ಲ.. ಚೂರು ಮನಸ್ಸು ಮಾಡಬೇಕು. ಅಮ್ಮನೊಂದಿಗೋ, ಹೆಂಡತಿ ಯೊಂದಿಗೋ ಜೊತೆಯಾಗಿ ಅಡುಗೆಮನೆಯಲ್ಲಿ ನಿಲ್ಲಬೇಕು, ತರಕಾರಿ ಹಚ್ಚಬೇಕು, ಮಸಾಲೆ ಅರೆದು ಕೊಡಬೇಕು, ಸೊಪ್ಪುಬಿಡಿಸಬೇಕು.. ಹಾಗೇ ನಿಧಾನಕ್ಕೆ ಒಗ್ಗರಣೆ ಹಾಕಬೇಕು, ಅನ್ನ ಬಸಿಯ ಬೇಕು, ದೋಸೆ ಉಯ್ಯಬೇಕು, ರೊಟ್ಟಿತಟ್ಟಬೇಕು, ಸಾರಿಗೆ ಎಷ್ಟು ನೀರು ಎಷ್ಟು ಉಪ್ಪುಎಂಬ ಪ್ರಮಾಣ ತಿಳಿಯಬೇಕು.. ಮುಂದೆ ತರಕಾರಿ ಎಷ್ಟು ಬೇಯಬೇಕು, ಮಾಂಸ ಎಷ್ಟು ಹುರಿಯಬೇಕು, ಕಾಳು ಎಷ್ಟು ನೆನೆಯಬೇಕು ಎಂಬುದೆಲ್ಲಾ ಹಂತಹಂತವಾಗಿ ನಮ್ಮ ಇಂದ್ರಿಯಗಳಿಗೆ ತಿಳಿಯುತ್ತಾ ಹೋಗುತ್ತದೆ. ಬೆಂದ ವಾಸನೆಯಲ್ಲಿ ಗೊತ್ತಾಗುತ್ತದೆ, ಹಾಗೆಯೇ ಕುದಿವ ಶಬ್ದದಲ್ಲಿ.. ಅಡುಗೆಯ ಗತಿ ಬೇಯುವ ಏಳುವ ಹಬೆಯಲ್ಲಿ, ತಿರುಗುವ ಬಣ್ಣದಲ್ಲಿ, ಹೊಮ್ಮುವ ಘಮದಲ್ಲಿ ಗ್ರಹಿಕೆ ಒದಗುತ್ತಾ ಹೋಗುತ್ತದೆ. ಕಲೆಯ ಸಿದ್ಧಿಯೇ ಹಾಗೆ, ಅಭ್ಯಾಸದಲ್ಲಿ ಮಾತ್ರ!
ಕಲೆಯ ಸಾಧನ ಮತ್ತು ಸಿದ್ಧಿ
ಅಡುಗೆಯ ಕಲೆಗೆ ಬಹುಮುಖ್ಯವಾಗಿ ಬೇಕಿರುವುದು; ಆಸಕ್ತಿ ಮತ್ತು ಕುತೂಹಲ. ಇವೆರಡು ಇದ್ದರೆ ಸಾಕು.. ಅಡುಗೆಯ ಪ್ರಯಾಣವು ಭೂಮಿಯನ್ನು ಒಂದು ಸುತ್ತು ಹಾಕಿಸುತ್ತದೆ. ಉಪಖಂಡದಿಂದಾಚೆಗೆ ನೆಗೆದು ಖಂಡಾಂತರಗಳಲ್ಲಿ ಸುತ್ತಿ ಮರುಭೂಮಿಯಲ್ಲಿ ಒದ್ದಾಡಿ ದಖನ್‌ಪ್ರಸ್ಥಭೂಮಿಗೆ ಬಂದುನಿಲ್ಲುತ್ತದೆ. ಎಲ್ಲಿಯೇ ಹೋದರೂ ಅಡುಗೆಯ ರಸಸೂತ್ರ ಒಂದೇ ಆಗಿರುತ್ತದೆ. ಆದರೆ ಅದರ ಪರಿಮಾಣಗಳು ಪ್ರಾದೇಶಿಕತೆಯ ಮೇಲೆ, ಪರಿಸರದ ಮೇಲೆ ಮತ್ತು ಲಭ್ಯ ಪದಾರ್ಥಗಳ ಮೇಲೆ ಅವಲಂಬಿತ. ಸಿಕ್ಕುವ ಪದಾರ್ಥಗಳಿಗೆ ಯಾವ ತರಹದ ರುಚಿಯ ಉಪಚಾರ ನಡೆಸಬೇಕು ಎಂಬದನ್ನು ತಿಳಿದುಕೊಳ್ಳಬೇಕು.. ಅಡುಗೆಗೂ ಮೊದಲು ಕೆಲವು ಪದಾರ್ಥ ನೆನೆಸಬೇಕು, ಕೆಲವು ಅರೆಬೇಯಿಸಿ ಅವುಗಳ ನಂಜು ಹೊರಗೆ ತೆಗೆಯಬೇಕು, ಕೆಲವನ್ನು ಹಸಿಯಾಗೇ ಉಳಿಸಬೇಕು. ಕೆಲವನ್ನು ಸುಟ್ಟುತೆಗೆಯಬೇಕು ಹೀಗೆ ಹತ್ತಾರು ಸಿದ್ಧತೆಯಾಗಬೇಕು.. ಈ ಸಿದ್ಧತೆಯ ಸಾಧನಗಳು ಹಲವಾರು ಇವೆ. ಆದರೂ ಮನುಷ್ಯ ಕೈಯ ಐದು ಬೆರಳುಗಳು ಪರಿಮಾಣಗಳನ್ನು ನಿರ್ಧರಿಸುವ, ಪದಾರ್ಥವನ್ನು ಆರಿಸುವ ಪಂಚಭೂತಗಳ ಸಂಕೇತ ಎನ್ನುತ್ತಾರೆ. ಆದರೆ ನನಗೆ ಅವು ಐದು ಇಂದ್ರಿಯಗಳ ಜ್ಞಾನ ಎನಿಸುತ್ತದೆ. ಅದಕ್ಕೆ ನಾವು ನಮ್ಮ ಅಡುಗೆಯ ರೆಸಿಪಿಗಳನ್ನು ಸ್ಪಷ್ಟವಾದ ಅಂಕಿಗಳಲ್ಲಿ ಹೇಳಲು ಸಾಧ್ಯವೇ ಇಲ್ಲ. ಚಿಟಿಕೆ ಉಪ್ಪು, ಹಿಡಿಯಷ್ಟು ಬೇಳೆ, ಬೊಗಸೆಯಷ್ಟು ಅಕ್ಕಿ, ಬೆರಳಿನ ಒಂದೊಂದು ಗೆರೆಯಷ್ಟು ಅರಿಶಿನ, ಮೆಣಸಿನ ಪುಡಿ ಇತ್ಯಾದಿಗಳ ಪರಿಮಾಣ ನಿರ್ಧರಿಸುತ್ತೇವೆ.. ಚಮಚೆಯಲ್ಲಿ ಹೇಳಿದರೆ ಏನೋ ವ್ಯಾಕುಲ ನಮಗೆ. ಅಡುಗೆ ಸಿದ್ಧಿಸಿದವರಿಗೆ ಪರಿಮಾಣದ ಬವಣೆ ಇರದು.. ಎಷ್ಟು ಜನಕ್ಕಾದ್ರೂ ಮಾಡುವ ಉತ್ಸಾಹ ಮತ್ತು ಉಮೇದು ಅವರಲ್ಲಿರುತ್ತದೆ.
ಲೋಕದ ಸಕಲ ಚರಾಚರಗಳಲ್ಲಿ ಅಡಗಿರುವ ಕಲೆಯು ಅಡುಗೆಯಲ್ಲಿಯೂ ಇದೆ. ಮಾಡುವ ಬಡಿಸುವ ತಿನ್ನುವ ವಿಧಾನಗಳಲ್ಲಿ ಅದು ಇನ್ನಷ್ಟು ಹೆಚ್ಚು ರೂಪಗಳಲ್ಲಿ ಅಲಂಕಾರಗಳಲ್ಲಿ ಕಾಣಿಸಿಕೊಳ್ಳುತ್ತದೆ. ನೀವೆಷ್ಟು ತೊಡಗಿಸಿಕೊಳ್ಳುತ್ತಿರೋ ಕಲೆ ಅದರ ದುಪ್ಪಟ್ಟು ವಿಸ್ತರಿಸಿಕೊಳ್ಳುತ್ತದೆ. ಬೇರೇನೂ ಬೇಡ.. ಇವತ್ತೇ ಒಮ್ಮೆ ಅಡುಗೆ ಮನೆ ಹೊಕ್ಕಿ ಏನಾದರು ಅಡುಗೆ ಮಾಡಲು ಯತ್ನಿಸಿ, ಅಮ್ಮ /ಹೆಂಡತಿ/ ಸಂಗಾತಿ ಕೇಳಿ ಅಥವಾ ಯೂಟ್ಯೂಬ್ ನೋಡಿ ಒಮ್ಮೆ ಅಡುಗೆ ಮಾಡಿನೋಡಿ.. ಅದು ನಿಮ್ಮನ್ನು ಆವರಿಸಿಕೊಳ್ಳುವ ಪರಿಯೇ ಚೆಂದ.