ಎತ್ತ ಸಾಗಿದೆ ನಮ್ಮ ಯುವಜನರ ಚಿತ್ತ...!?
ದೇಶದಲ್ಲಿ, ಭ್ರಷ್ಟಾಚಾರ ಎಲ್ಲಾ ಕ್ಷೇತ್ರಗಳನ್ನೂ ವ್ಯಾಪಿಸಿ ಪ್ರಾಮಾಣಿಕರ, ನಿಷ್ಠಾವಂತರ ನಿದ್ದೆಗೆಡಿಸಿರುವುದಲ್ಲದೆ ಪ್ರಾಮಾಣಿಕತೆ ಮತ್ತು ನಿಷ್ಠೆಗಳ ಅವನತಿಗೆ ಅಂತಿಮ ಚರಣ ಬರೆಯಲಾರಂಭಿಸಿದೆ. ಭ್ರಷ್ಟಾಚಾರ ವ್ಯವಸ್ಥೆಗೆ ಅಂತ್ಯ ಹಾಡುವ ಉದ್ದೇಶದಿಂದಲೇ ರಾಜಕೀಯದಂತಹ ಮಹತ್ವದ ಕ್ಷೇತ್ರಗಳಿಗೆ ಯುವಜನರು ಹೆಚ್ಚು ಹೆಚ್ಚಾಗಿ ಕಾಲಿಡಬೇಕೆಂಬ ಕೂಗೂ ಎದ್ದಿದೆ. ಆದರೆ ನಮ್ಮ ಯುವಜನರು ನಿಜಕ್ಕೂ ಈ ಹಳಿ ತಪ್ಪಿದ ವ್ಯವಸ್ಥೆಯನ್ನು ಸರಿಪಡಿಸಲು ಬದ್ಧರಾಗಿರುವರೇ ಎಂಬ ಪ್ರಶ್ನೆ ಪ್ರಜಾಪ್ರಭುತ್ವದ ಮೇಲೆ ಭರವಸೆ ಇಟ್ಟ ಎಲ್ಲರಲ್ಲೂ ಕಾಡತೊಡಗಿದೆ.
ಮೊದಮೊದಲು ಕೇವಲ ಶಾಸಕಾಂಗ ಮತ್ತು ಕಾರ್ಯಾಂಗಗಳಲ್ಲಿ ಕೇಳಿಬರುತ್ತಿದ್ದ ಭ್ರಷ್ಟಾಚಾರದ ಮಾತುಗಳು ಇತ್ತೀಚೆಗೆ ನ್ಯಾಯಾಂಗದ ಪಡಸಾಲೆಗಳಲ್ಲೂ ಪಿಸುಗುಡುತ್ತಾ ಹರಿದಾಡಲಾರಂಭಿಸಿರುವುದು ನಿಜಕ್ಕೂ ಆಘಾತಕಾರಿ ಮತ್ತು ದುರದೃಷ್ಟಕರ. ಇದಕ್ಕೆ ನಿಖರವಾದ ಸಾಕ್ಷಾಧಾರಗಳು ಸಿಗುವುದಿಲ್ಲವಾದರೂ ನಮ್ಮ ಸಂವಿಧಾನದ ಮೂರು ಅಂಗಗಳಲ್ಲಿ ಒಂದಾದ ನ್ಯಾಯಾಂಗದ ಮೇಲೇಯೇ ಹೆಚ್ಚಿನ ಭರವಸೆ ಇಟ್ಟು ಆರಾಧಿಸುತ್ತಿದ್ದ ಜನಸಾಮಾನ್ಯರಲ್ಲಿ ಅಪಸ್ವರ ಕೇಳಿಬರುತ್ತಿರುವುದಂತೂ ಸತ್ಯ. ಈ ಸಂಗತಿಯು ದುರ್ದೈವ ಮತ್ತು ಆಘಾತಕಾರಿ ಬೆಳವಣಿಗೆಯೂ ಹೌದು. ಆದರೆ ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಎಂಬ ಜನಸಾಮಾನ್ಯರ ಮಾತು ಸುಳ್ಳು ಎಂದೂ ಹೇಳಲಾಗುವುದಿಲ್ಲ. ಇತ್ತೀಚೆಗೆ ಖ್ಯಾತ ಆಂಗ್ಲ ದೈನಿಕವೊಂದು ಪ್ರಕಟಿಸಿದ್ದ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆಂದು ಹೇಳಲಾದ ರಾಜ್ಯದ ಕೆಲವು ನ್ಯಾಯಾಧೀಶರ ಅಮಾನತು ಕುರಿತಾದ ವರದಿಯೂ ಇದನ್ನು ಪುಷ್ಟೀಕರಿಸುತ್ತದೆ. ಹೈಕೋರ್ಟ್ ಆ ಪತ್ರಿಕೆಯ ಸಂಪಾದಕರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತ್ತಾದರೂ ಅಷ್ಟೊತ್ತಿಗೆ ಜನಸಾಮಾನ್ಯರಿಗೆ ನ್ಯಾಯಾಂಗದ ಬಗೆಗಿನ ತಮ್ಮ ಅನುಮಾನಕ್ಕೆ ತಕ್ಕ ಮಟ್ಟಿನ ಉತ್ತರ ದೊರೆತಾಗಿತ್ತು. ಸಂವಿಧಾನದ ನಾಲ್ಕನೇ ಅಂಗವೆಂದೇ ಪರಿಗಣಿಸಲ್ಪಡುವ ನಮ್ಮ ಮಾಧ್ಯಮ ರಂಗವೂ ಹಣದಾಸೆಗಾಗಿ ನ್ಯಾಯದ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸುವಂತಹ ಕಾರ್ಯಗಳಿಗೆ ಮುಂದಾಗುತ್ತಿರುವುದು ಇನ್ನೂ ಹೆಚ್ಚಿನ ಆಘಾತ ಹುಟ್ಟಿಸಿದೆ.
ದೇಶದ ಎಲ್ಲಾ ರಂಗಗಳನ್ನೂ ಪಾರ್ಥೇನಿಯಂನಂತೆ ಆವರಿಸಿರುವ ಭ್ರಷ್ಟಾಚಾರವನ್ನು ನಿರ್ನಾಮಮಾಡುವುದು ಸುಲಭದ ಮಾತೇನಲ್ಲ. ಇದಕ್ಕೆ ದೊಡ್ಡ ಮಟ್ಟದ ಆಂದೋಲನವೇ ನಡೆಯಬೇಕು. ಬ್ರಿಟಿಷರ ದಾಸ್ಯದಿಂದ ನಮ್ಮವರನ್ನು ಪಾರುಮಾಡಲು ಅನೇಕಾನೇಕ ಹುತಾತ್ಮರು ಮತ್ತು ದೇಶಭಕ್ತರು ಬೀದಿಗಿಳಿದು ಮಾಡಿದ ದಶಕಗಳ ಕಾಲದ ಹೋರಾಟಕ್ಕಿಂತ ಹತ್ತಾರು ಪಟ್ಟು ಹೆಚ್ಚಿನ ದೃಢತೆಯಿಂದ ಕೂಡಿದ ಹೋರಾಟವನ್ನೇ ನಡೆಸಬೇಕಿದೆ. ಆದರೆ ನಮ್ಮ ಯುವಜನತೆ ಏನು ಮಾಡುತ್ತಿದೆ? ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮುಂದಾಗಿದೆಯೇ? ಭ್ರಷ್ಟ ಅಧಿಕಾರಿವರ್ಗದ ಜೊತೆ ಸೆಣೆಸಲು ಸಜ್ಜಾಗಿದೆಯೇ? ಅದಕ್ಕೆ ಬೇಕಾದ ಕಾನೂನಿನ ಅರಿವಿದೆಯೇ? ಯಾವ ಸಿದ್ಧಾಂತವನ್ನು ಅಳವಡಿಸಿಕೊಳ್ಳುತ್ತಿದೆ? ಹೀಗೆ ಪ್ರಶ್ನೆಗಳ ಸುರಿಮಳೆಯೇ ಸುರಿಯುತ್ತದೆ. ದುರದೃಷ್ಟವೆಂದರೆ ಯುವಜನತೆ ಉದ್ದೇಶಪೂರ್ವಕವಾಗಿಯೇ ತಪ್ಪುಮಾಡಿ ಅದೇ ರೀತಿಯ ತಪ್ಪು ಮಾಡಿದ ಜನಪ್ರತಿನಿಧಿಗಳೆಡೆಗೆ ಬೊಟ್ಟು ಮಾಡುವುದನ್ನೇ ರೂಢಿಸಿಕೊಂಡಿದ್ದಾರೆ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಹೀಗಾದಲ್ಲಿ ಬದಲಾವಣೆಗೆ ಜಾಗವೇ ಇರುವುದಿಲ್ಲ. ಭಗವದ್ಗೀತೆಯನ್ನೇ ಜಪಿಸುತ್ತಾ ಬದಲಾವಣೆಯೇ ಜಗದ ನಿಯಮ ಎಂಬ ಮಾತುಗಳನ್ನೇ ಬಳಸಿ ತಮ್ಮ ಕೆಲಸಗಳನ್ನು ಸಮರ್ಥಿಸುತ್ತಿದ್ದಾರೆ. ಯಾವುದೇ ಒಬ್ಬ ಮುಗ್ಧ ವ್ಯಕ್ತಿಯ ನಂಬಿಕೆಯನ್ನೇ ತಮ್ಮ ಆಯುಧವಾಗಿ ಬಳಸಿ ಮೋಸವೆಸಗುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನೂ ಸೋಜಿಗ ಮತ್ತು ಬೇಸರದ ವಿಷಯವೆಂದರೆ ಜನಸಾಮಾನ್ಯರು ಪ್ರಜೆಗಳೇ ಪ್ರಭುಗಳು ಎಂಬ ಪ್ರಜಾಪ್ರಭುತ್ವದ ಮೂಲ ಉದ್ದೇಶ ಮತ್ತು ಸಿದ್ಧಾಂತಗಳನ್ನೇ ಸರಿಯಾಗಿ ಅರ್ಥೈಸಿಕೊಂಡಿಲ್ಲದಿರುವುದು. ಯಥಾ ರಾಜ ತಥಾ ಪ್ರಜಾ ಎಂಬ ರಾಜರ ಕಾಲದ ನಾಣ್ಣುಡಿಯೊಂದನ್ನು ಇನ್ನೂ ತಪ್ಪಾಗಿ ತಿಳಿದುಕೊಂಡಿದ್ದಾರೆ. ಅಂದು ಪ್ರಜೆಗಳ ಕ್ಷೇಮ ಮತ್ತು ರಕ್ಷಣೆ ರಾಜರ ಆಡಳಿತವನ್ನು ಅವಲಂಬಿಸಿತ್ತು. ರಾಜರ ನಿರ್ಧಾರಗಳಿಗೆ ವಿರುದ್ಧವಾದ ಅಭಿಪ್ರಾಯವನ್ನು ಮಂಡಿಸಲು ಯಾವ ಪ್ರಜೆಗೂ ಅವಕಾಶವಿರಲಿಲ್ಲ. ಆದರೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯೂ ಹಾಗೆಯೇ ಎಂದು ತಿಳಿದು ಜನಸಾಮಾನ್ಯರು ಮೂಢರಾಗುತ್ತಿದ್ದಾರೆ. ಪ್ರಜಾತಂತ್ರದಲ್ಲಿ ತಾವೇ ಪ್ರಭುಗಳೆಂಬುದನ್ನೂ ಮರೆತು ಮತ ಚಲಾಯಿಸಿ ತಮ್ಮ ನಿರ್ಣಾಯಕ ಜವಾಬ್ದಾರಿಯನ್ನೇ ಮರೆಯುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯೊಂದರಲ್ಲಿ ಸ್ಪರ್ಧಿಗಳು ತಮಗೆ ಹಣ ನೀಡಲಿಲ್ಲವೆಂದು ಮತದಾನವನ್ನೇ ಬಹಿಷ್ಕರಿಸಿದಂತಹ ಘಟನೆಗಳು ಪ್ರಜಾತಂತ್ರದ ಮೂಲ ಉದ್ದೇಶಕ್ಕೆ ಬಲವಾದ ಪೆಟ್ಟು ನೀಡಿ ಭೀತಿ ಮೂಡಿಸಲಾರಂಭಿಸಿವೆ.
ಯುವಜನತೆ ಕೆಲವು ಸಿನೆಮಾ ನಟರನ್ನು ಅನುಸರಿಸುವ ಭರದಲ್ಲಿ ತಮ್ಮತನವನ್ನೇ ಮರೆಯುತ್ತಿದ್ದಾರೆ. ಕೆಲವು ನಟರು ಸಾರ್ವಜನಿಕವಾಗಿ ಮಾಡಿದ ಸಮಾಜ ವಿರೋಧಿ ಕೃತ್ಯಗಳನ್ನು ಅನುಸರಿಸಿ, ಸಮರ್ಥಿಸಿ, ವಿಜೃಂಭಿಸುತ್ತಾ ತಮ್ಮ ಕೀಳು ಮನಸ್ಥಿತಿಯನ್ನು ತೋರ್ಪಡಿಸುತ್ತಿರುವ ಯುವಜನರ ದಂಡು ದಿನದಿಂದ ದಿನಕ್ಕೆ ದುಪ್ಪಟ್ಟಾಗಲಾರಂಭಿಸಿದೆ. ಕೆಲವು ತಿಂಗಳುಗಳ ಹಿಂದೆ ತೆರೆಕಂಡ ಕನ್ನಡ ಸಿನೆಮಾವೊಂದರಲ್ಲಿ ಎರಡು ಪಾತ್ರಗಳು ಹೊಡೆದಾಡುವ ದೃಶ್ಯಕ್ಕೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆಗಳೂ ನಡೆದವು. ಇದಕ್ಕೆ ಕಾರಣ ಆ ಎರಡು ಪಾತ್ರಗಳನ್ನೂ ನಿಭಾಯಿಸಿದ್ದು ಇಬ್ಬರು ಖ್ಯಾತ ನಟರು. ಅವರ ನಟನೆಯನ್ನು ಗೌರವಿಸುವ ಬದಲು ಅದು ಸ್ವಪ್ರತಿಷ್ಠೆಯ ವಿಷಯವಾಗಿ ಯುವಜನರ ದಿನನಿತ್ಯದ ಬದುಕಿನ ದಿಕ್ಕು ಬದಲಿಸಿದ್ದು ಇನ್ನೂ ಆಘಾತಕಾರಿ. ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾದಾಗಲಂತೂ ಕೆಲಸ ಅರಸಿ ನಗರ ಪ್ರದೇಶಗಳನ್ನು ಸೇರಿಕೊಂಡಿರುವ ಹೆಚ್ಚಿನ ಯುವಜನರು ತಾತ್ಕಾಲಿಕವಾಗಿ ಊರಿಗೆ ಮರಳುತ್ತಾರೆ. ಆಗಲೂ ಸಹ ಹೆಚ್ಚಿನವರ ಮನದಲ್ಲಿ ಹಣದ ಉದ್ದೇಶವಿರುತ್ತದೆಯೇ ಹೊರತು ಯಾವುದೇ ಸಿದ್ಧಾಂತಗಳೆಡೆಗೆ ಕನಿಷ್ಠ ದೃಷ್ಟಿಕೋನವೂ ಇರುವುದಿಲ್ಲ.
ಕೇವಲ ದುಡ್ಡು ಮಾಡುವುದಷ್ಟೇ ಇಂದಿನ ಹೆಚ್ಚಿನ ಜನರ ನಿತ್ಯದ ಕಾಯಕವಾಗಿದೆ. ಕೆಲವು ದಶಕಗಳ ಹಿಂದೆ ನಮ್ಮ ರಾಜ್ಯ ಸರಕಾರವು ಸರ್ವ ಶಿಕ್ಷಣ ಅಭಿಯಾನವನ್ನು ಪ್ರಾರಂಭಿಸಿ ‘ದುಡ್ಡೇ ದೊಡ್ಡಪ್ಪವಿದ್ಯೆ ಅವರಪ್ಪ’ ಎಂಬ ಘೋಷವಾಕ್ಯವನ್ನು ಪರಿಚಯಿಸಿತ್ತು. ಆದರೆ ಬರುಬರುತ್ತಾ ಅದೇ ಘೋಷವಾಕ್ಯದ ಅಡಿಯಲ್ಲಿ ಶಿಕ್ಷಣ ಪಡೆದ ಕೆಲವು ಮಂದಿ ವಿದ್ಯೆಯಿಂದ ಹೆಚ್ಚೆಚ್ಚು ಹಣ ಗಳಿಸಬಹುದೆಂದು ಘಂಟಾಘೋಷವಾಗಿ ಹೇಳಲಾರಂಭಿಸಿದ್ದಾರೆ. ಶೇ. 90 ಕ್ಕಿಂತ ಹೆಚ್ಚಿನ ಅಪರಾಧ ಪ್ರಕರಣಗಳು ಸುಶಿಕ್ಷಿತ ವರ್ಗದವರಿಂದಲೇ ದಾಖಲಾಗುತ್ತಿರುವುದು ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಿಟ್ಟುಸಿರು ಬಿಡುವಂತಾಗಿದೆ. ಸುಶಿಕ್ಷಿತ ವರ್ಗದವರಿಂದಲೇ ಹೆಚ್ಚಿನ ಶೋಷಣೆ, ದೌರ್ಜನ್ಯ, ಅಕ್ರಮ ಮತ್ತು ಭ್ರಷ್ಟಾಚಾರದಂತಹ ಗಂಭೀರವಾದ ಸಮಾಜವಿರೋಧಿ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಊಹೆಗೂ ನಿಲುಕದ ರೀತಿ ಎಲ್ಲಾ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ‘‘ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’’ ಎಂಬ ವಿವೇಕಾನಂದರ ವಾಣಿ ಯುವಜನತೆಯ ಸಕಾರಾತ್ಮಕ, ಸಮಾಜಮುಖಿ ಕಾರ್ಯಗಳಿಗೆ ಸ್ಫೂರ್ತಿಯಾಗುವ ಬದಲು ನಕಾರಾತ್ಮಕ ಮತ್ತು ಸಮಾಜವಿರೋಧಿ ಕೃತ್ಯಗಳೆಸಗುತ್ತಿರುವವರಿಗೆ ಸ್ಫೂರ್ತಿಯಾಗುತ್ತಿರುವುದು ನಿಜಕ್ಕೂ ದುರದೃಷ್ಟ ಮತ್ತು ವಿಪರ್ಯಾಸ.
ಜಾಗತೀಕರಣದ ದೆಸೆ ಮತ್ತು ತಂತ್ರಜ್ಞಾನದಲ್ಲಿನ ಕ್ರಾಂತಿಯಿಂದಾಗಿ ಜಗತ್ತೇ ಯುವಜನತೆಯ ಕೈಬೆರಳುಗಳಲ್ಲಿದೆ. ಆದರೆ ಅವರು ಸರಿದಾರಿಯಲ್ಲಿ ನಡೆಯುವುದಷ್ಟೇ ಇಂದಿನ ಅಗತ್ಯ. ಯುವಜನತೆ ತಮ್ಮ ಶಕ್ತಿ ಮತ್ತು ತಾಕತ್ತನ್ನು ಬಳಸಿ ಸಮಾಜವಿರೋಧಿಗಳನ್ನು ಮಣಿಸಬೇಕಾಗಿದೆ. ಆದರೆ ಮತ್ತೊಬ್ಬ ವ್ಯಕ್ತಿಯ ದೌರ್ಬಲ್ಯಗಳ ಜೊತೆ ಸೆಣಸಾಡಿ ನಿಮಗೆ ನೀವೇ ಅಪಮಾನವೆಸಗಿಕೊಳ್ಳದಿರಿ. ನೀರಿಗೆ ಎದುರಾಗಿ ಈಜುವ ಛಾತಿ ಮತ್ತು ಛಲವನ್ನು ಬೆಳೆಸಿಕೊಳ್ಳಬೇಕಾಗಿದೆ. ನೆನಪಿರಲಿ ಇಂತಹ ಯಾವುದೇ ಹೋರಾಟಗಳು ಸಮಾಜಮುಖಿಯಾಗಿರಬೇಕೇ ಹೊರತು ಸಮಾಜವಿರೋಧಿಯಾಗಿರಬಾರದು. ಗಾಳಿ ಬಂದಾಗ ತೂರಿಕೋ ಎಂಬಂತಹ ನಾಣ್ಣುಡಿಗಳು ದುಷ್ಟರ ನಡೆಗಳಿಗೆ ಸಮರ್ಥನೆಯಾಗದಂತಿರಲಿ.
ಕೊನೆಯದಾಗಿ ಒಂದು ಮಾತು. ನಾವು ನಮಗೆ ನೀರಿಗೆ ಬರ ಬಂದಿತೆಂದು ಸಮುದ್ರದ ನೀರನ್ನು ಕುಡಿದು ಬಾಯಾರಿಕೆಯನ್ನು ನೀಗಿಸಿಕೊಳ್ಳಲಾಗುವುದಿಲ್ಲ, ಅನ್ನಕ್ಕೆ ಬರವಿದೆಯೆಂದು ಮಣ್ಣು ತಿಂದು ಬದುಕಲೂ ಆಗುವುದಿಲ್ಲ. ಹಾಗೆಯೇ ಪ್ರಾಮಾಣಿಕತೆಗೆ ಮತ್ತು ನಿಷ್ಠೆಗೆ ಕೊರತೆಯಿದೆ ಎಂಬ ಕಾರಣಕ್ಕೆ ಭ್ರಷ್ಟಾಚಾರವನ್ನು ಒಪ್ಪಿಕೊಳ್ಳುವುದು ಅಸಹಜ ಕ್ರಿಯೆಯೇ ಆಗಿದೆ. ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ಅನಿವಾರ್ಯ ಇಲ್ಲವಾದಲ್ಲಿ ಅವಸಾನವೇ ಖಚಿತ. ಭ್ರಷ್ಟರ ವಿರುದ್ಧ ಪರಿಣಾಮಕಾರಿ ಹೋರಾಟವನ್ನು ತುರ್ತಾಗಿ ಪ್ರಾರಂಭಿಸಬೇಕಾಗಿರುವುದು ಇಂದಿನ ಅಗತ್ಯವೆಂಬುದನ್ನು ಯುವಜನತೆ ಮರೆಯಬಾರದು.