ನಾನೂ ದೇಹದಾನ ಮಾಡಿದೆ
ಅವರು ತಣ್ಣನೆಯ ಧ್ವನಿಯಲ್ಲಿ ಹೇಳಿದರು- ‘‘ನಿನ್ನ ಅಂತಿಮ ಕಾರ್ಯವನ್ನು ಮಾಡುವವನು ನಾನಲ್ಲ. ಅದು ಮಕ್ಕಳಿಗೆ ಸಂಬಂಧ ಪಟ್ಟ ವಿಚಾರ. ಅವರು ಒಪ್ಪಿದರೆ ನನ್ನ ಅಡ್ಡಿ ಏನಿಲ್ಲ’’. ಗಂಡನ ಒಪ್ಪಿಗೆ ಸಿಕ್ಕಿದ ಮೇಲೆ ಮಕ್ಕಳ ಒಪ್ಪಿಗೆ ಪಡೆಯುವುದು ಏನು ಕಷ್ಟ? ಹಿರಿಯವನಿಗೆ ಆಗ 19 ವರ್ಷ. ತಕರಾರು ಮಾಡದೆ ಸಹಿ ಹಾಕಿದ. ಕಿರಿಯವನಿಗೆ 11 ವರ್ಷ. ನನ್ನ ಮೇಲೆ ಮೋಹ ಜಾಸ್ತಿ. ನನಗೆ ಅವನು ಸಹಿ ಹಾಕುವ ಬಗ್ಗೆ ಸ್ವಲ್ಪ ಅನುಮಾನವಿತ್ತು. ಆದರೆ, ಅವನಿಗೆ ಏನೂ ಅರ್ಥವಾಗದ ವಯಸ್ಸಾದ್ದರಿಂದ ಅದು ಏನು ಎಂದು ಅವನು ಓದಿಕೊಳ್ಳಲಿಲ್ಲ. ‘‘ಅಮ್ಮ ಸಹಿ ಹಾಕಲು ಹೇಳಿದ್ದಾಳೆ. ಅವಳು ಹೇಳಿದಂತೆ ಮಾಡುವುದು ನನ್ನ ಕೆಲಸ’’ ಎಂದಷ್ಟೇ ಯೋಚಿಸಿ ಅವನೂ ಸಹಿ ಹಾಕಿದ. ಹೀಗೆ ಇಬ್ಬರು ಮಕ್ಕಳ ಸಮ್ಮತಿ ಪಡೆದು ವೈಯಕ್ತಿಕ ವಿವರಗಳನ್ನು ದಾಖಲಿಸಿ ‘‘ಜೆಎಸ್‌ಎಸ್ ಮೆಡಿಕಲ್ ಕಾಲೇಜಿಗೆ ಮರಣಾನಂತರ ನನ್ನ ದೇಹವನ್ನು ವೈದ್ಯಕೀಯ ಅಧ್ಯಯನದ ಉದ್ದೇಶಕ್ಕಾಗಿ ಸಂತೋಷದಿಂದ ದಾನ ಮಾಡುತ್ತೇನೆ’’ ಎಂದು ಬರೆದ ಕವರನ್ನು ಅದೇ ದಿನ ಪೋಸ್ಟ್ ಮಾಡಿದೆ.
ಸಾಮಾನ್ಯವಾಗಿ ಯಾರೂ ಮಾತನಾಡಲು ಇಚ್ಛಿಸದ ವಿಷಯವೊಂದಿದ್ದರೆ ಅದು ಸಾವಿನ ಬಗ್ಗೆ ಇರಬಹುದೇನೋ! ಸಾವನ್ನು ಗೆಳೆಯ ಅಥವಾ ಗೆಳತಿ ಎಂದು ಕರೆಯುವವರೂ ಇರಲಿಕ್ಕಿಲ್ಲ. ಎಲ್ಲರೂ ತಾವು ಚಿರಂಜೀವಿಗಳಾಗಬೇಕೆಂದೇ ಬಯಸುತ್ತಾರೆ. ಹಣ್ಣು ಹಣ್ಣು ಮುದುಕರಿಗೂ ಸಹ ಮೊಮ್ಮಗಳ ಮದುವೆ ನೋಡಿ ಸಾಯಬೇಕು ಎಂಬ ಬಯಕೆ. ಮೊಮ್ಮಗಳಿಗೆ ಮದುವೆಯಾಗುವ ತನಕ ಬದುಕಿ ಉಳಿದರೆ ಮೊಮ್ಮಗಳ ಮಗುವನ್ನು ನೋಡಬೇಕು ಎಂಬ ಆಶೆ ಅವರಿಗೆ. ಅದಕ್ಕೇ ಇರಬೇಕು ಯಮಧರ್ಮರಾಯ ದೇವತೆಯಾದರೂ ಅವನನ್ನು ಪೂಜಿಸುವವರು ಯಾರೂ ಇಲ್ಲ. ‘ನನ್ನ ಮನೆಗೆ ಬರಬೇಡ’ ಎಂದು ವಿನಂತಿಸುವವರೇ ಇರುವುದು. ಖ್ಯಾತ ಬರಹಗಾರ್ತಿ ನೇಮಿಚಂದ್ರ ಬರೆದ ಒಂದು ಪುಸ್ತಕದ ಹೆಸರು ‘ಸಾವೇ, ಬರುವುದಿದ್ದರೆ ನಾಳೆ ಬಾ’. ಹೀಗಿರುವಾಗ ‘ನಾನು ನನ್ನ ನಲುವತ್ತನೇ ವಯಸ್ಸಿನಲ್ಲಿ ದೇಹದಾನ ಮಾಡಿದೆ’ ಎಂಬ ವಿಷಯದ ಬಗ್ಗೆ ಬರೆಯಲು ಹೊರಟರೆ ನಿಮಗೆ ಅದು ರುಚಿಸಲಿಕ್ಕಿಲ್ಲ. ಆದರೆ ಏನು ಮಾಡಲಿ? ಬರೆಯಲೇ ಬೇಕೆಂದು ನನ್ನೊಳಗಿನಿಂದ ಒತ್ತಡ ಉಕ್ಕಿ ಬರುತ್ತಿದೆ. ಬರೆಯದೇ ಇರಲಾರೆ.
ಅದು 2010ನೇ ಇಸವಿ ಇರಬಹುದು. ಪ್ರಸಿದ್ಧ ವಿಜ್ಞಾನ ಲೇಖಕ ಜಿ. ಟಿ. ನಾರಾಯಣ ರಾವ್ ಅವರು ಮಾಡಿದ ದೇಹದಾನದಿಂದ ಪ್ರೇರಿತಳಾಗಿ ಅವರ ಮನೆಕೆಲಸದ ಹೆಣ್ಣುಮಗಳೊಬ್ಬಳು ತಾನು ದೇಹದಾನ ಮಾಡಿದ ವಿಷಯವನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಬರೆದಿದ್ದಳು. ಅದನ್ನು ಓದಿ ನನಗೂ ದೇಹದಾನ ಮಾಡಬೇಕೆಂದು ಅನಿಸಿತು. ‘ಉಳ್ಳವರು ಶಿವಾಲಯವ ಮಾಡುವರು. ನಾನೇನು ಮಾಡಲಿ ಬಡವನಯ್ಯಿ?’ ಎಂಬಂತೆ ತಿಂಗಳು ತಿಂಗಳು ಸಂಬಳ ಬರುವ ಉದ್ಯೋಗದಲ್ಲಿ ಇರದ, ಬಡ ರೈತಮಹಿಳೆಯಾದ ನಾನು ಬದುಕಿದ್ದಾಗ ಸಮಾಜಕ್ಕೆ ಕೊಡುಗೆ ಕೊಡುವುದು ಅಷ್ಟರಲ್ಲೇ ಇದೆ. ದೇಹದಾನ ಮಾಡಿದರೆ ಸತ್ತ ಮೇಲಾದರೂ ಸಮಾಜದ ಋಣ ತೀರಿಸಿದ ಹಾಗೆ ಆಗುತ್ತದೆ ಎಂಬುದು ನನ್ನ ಮನದಾಳದ ಬಯಕೆ. ಆದರೆ ನನಗೆ ದೇಹದಾನ ಎಲ್ಲಿ ಮಾಡುವುದು? ಹೇಗೆ ಮಾಡುವುದು? ಎಂಬುದು ಗೊತ್ತಿರಲಿಲ್ಲ. ಮಾಹಿತಿ ಕೇಳೋಣವೆಂದರೆ ಆ ಲೇಖನ ಬರೆದವರ ವಿಳಾಸ, ದೂರವಾಣಿ ಸಂಖ್ಯೆ ಅದರಲ್ಲಿ ಇರಲಿಲ್ಲ. ಆ ವಿಷಯವನ್ನು ನಾನು ಅಲ್ಲಿಗೇ ಮರೆತುಬಿಟ್ಟೆ.
ಅದೇ ಸಮಯದಲ್ಲಿ ಬರಹಗಾರ ಮತ್ತು ಆಕಾಶವಾಣಿಯ ಅಧಿಕಾರಿ ಅಬ್ದುಲ್ ರಶೀದ್ ಅವರು ಮಡಿಕೇರಿ ಆಕಾಶವಾಣಿಯಲ್ಲಿ ‘ಕಾವೇರಿ ಎಕ್ಸ್ ಪ್ರೆಸ್’ ಎಂಬ ಕಾರ್ಯಕ್ರಮವನ್ನು ವಾರದಲ್ಲಿ ಎರಡು ದಿನ ನಡೆಸುತ್ತಿದ್ದರು. ಅದರಲ್ಲಿ ಅವರು ಬೇರೆ ಬೇರೆ ವೃತ್ತಿಯ ಸಾಧಕರೊಂದಿಗೆ ಫೋನ್‌ನಲ್ಲಿ ಸಂಭಾಷಣೆ ನಡೆಸಿ ಆ ಮೂಲಕ ಅವರನ್ನು ಕೇಳುಗರಿಗೆ ಪರಿಚಯ ಮಾಡಿಸುತ್ತಿದ್ದರು. ಅದು ಬಹಳ ಆಸಕ್ತಿದಾಯಕವಾಗಿ ಇರುತ್ತಿದ್ದುದರಿಂದ ನಾನು ಅದನ್ನು ತಪ್ಪದೇ ಕೇಳುತ್ತಿದ್ದೆ. ಒಮ್ಮೆ ಹೀಗೆ ಕೇಳುತ್ತಿದ್ದಾಗ ಮಡಿಕೇರಿಯ ‘ಜ್ಯೋತಿ ಕಾಫಿ ವರ್ಕ್ಸ್’ ಎಂಬ ಅಂಗಡಿ ಮಾಲಕ ಹಾಗೂ ಕಾಫಿ ಪ್ಲಾಂಟರ್ ಆಗಿರುವ ಸದಾಶಿವ ರಾವ್ ಎಂಬವರ ಸಂದರ್ಶನ ಬಂದಿತ್ತು. ಆ ಸಂದರ್ಶನದಲ್ಲಿ ಸದಾಶಿವ ರಾವ್ ಅವರು ತಮ್ಮ ಪತ್ನಿ ಶಾಂತಾ ಎಸ್. ರಾವ್ ಅವರ ಜೊತೆೆಗೂಡಿ ದೇಹದಾನ ಮಾಡಿದ ವಿಷಯವನ್ನು ತಿಳಿಸಿದ್ದರು. ಕೂಡಲೇ ನಾನು ಆಕಾಶವಾಣಿಗೆ ಕರೆ ಮಾಡಿ ಅವರ ಫೋನ್ ನಂಬರನ್ನು ಕೇಳಿ ತಿಳಿದುಕೊಂಡೆ. ಯಾವುದೋ ಕೆಲಸದ ನಿಮಿತ್ತ ಮಡಿಕೇರಿಗೆ ಹೋದಾಗ ‘ಜ್ಯೋತಿ ಕಾಫಿ ವರ್ಕ್ಸ್’ ಎಲ್ಲಿದೆಯೆಂದು ಹುಡುಕಿ ಸದಾಶಿವ ರಾವ್ ಅವರನ್ನು ಕಂಡು ಮಾತಾಡಿದೆ. ನನಗೂ ದೇಹದಾನ ಮಾಡಬೇಕೆಂದು ಆಸೆ ಇರುವುದಾಗಿ ತಿಳಿಸಿದೆ. ಅವರು ಖುಷಿ ಪಟ್ಟು ಅವರ ಅಂಗಡಿಯ ಟೇಬಲ್ ಮೇಲಿದ್ದ ದೇಹದಾನಕ್ಕೆ ಸಲ್ಲಿಸುವ ಸಮ್ಮತಿ ಅರ್ಜಿಗಳನ್ನು ತೋರಿಸಿದರು. ಆ ಅರ್ಜಿಗೆ ಕುಟುಂಬದ ಇಬ್ಬರು ಸದಸ್ಯರ ಸಹಿ ಹಾಕಿಸಿ ಮೈಸೂರಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜಿಗೆ ಕಳುಹಿಸುವಂತೆ ಹೇಳಿದರು. ನಾನು ಅಲ್ಲಿಂದ ನಾಲ್ಕು ಅರ್ಜಿಗಳನ್ನು ತಂದೆ. ಅದುವರೆಗೂ ನಾನು ದೇಹದಾನ ಮಾಡಲು ಹೊರಟ ವಿಷಯವನ್ನು ಗಂಡನಿಗೆ ಹೇಳಿರಲಿಲ್ಲ. ಸಂಪ್ರದಾಯ ನಿಷ್ಠರಾದ, ದೈವಭಕ್ತ ಗಂಡನಿಗೆ ಹೇಗೆ ಹೇಳುವುದು? ಒಂದು ವೇಳೆ ಅವರು ಒಪ್ಪದಿದ್ದರೆ ಎಂಬ ಭಯ. ಸಮ್ಮತಿ ಅರ್ಜಿಗಳನ್ನು ಗಂಡನಿಗೆ ಕಾಣದಂತೆ ನನ್ನ ಪುಸ್ತಕಗಳ ಮಧ್ಯೆ ಇಟ್ಟುಬಿಟ್ಟೆ. ಹಾಗೆ ಕೆಲ ದಿನಗಳು ಕಳೆದವು. ಎಷ್ಟು ದಿನ ಅಂತ ಹೇಳದೆ ಇರುವುದು? ಇಂದಲ್ಲ ನಾಳೆ ತಿಳಿಸಲೇ ಬೇಕು. ಇನ್ನು ದಿನ ತೆಗೆಯುವುದು ಸರಿಯಲ್ಲ ಎಂದು ಧೈರ್ಯವಹಿಸಿ ಗಂಡನ ಮುಂದೆ ಮೆಲ್ಲನೆ ವಿಷಯ ಪ್ರಸ್ತಾಪ ಮಾಡಿದೆ. ‘ದೇಹದಾನ ಸಮ್ಮತಿ ಉಯಿಲು’ ಪತ್ರಕ್ಕೆ ಸಹಿ ಹಾಕಲು ಹೇಳಿದೆ. ಅವರು ಆಕಾಶ-ಭೂಮಿ ಒಂದು ಮಾಡಿ ನನ್ನನ್ನು ಬೈಯಬಹುದು ಅಂದುಕೊಂಡಿದ್ದೆ. ದೇವರ ದಯೆ! ಹಾಗೇನೂ ಆಗಲಿಲ್ಲ. ಅವರು ತಣ್ಣನೆಯ ಧ್ವನಿಯಲ್ಲಿ ಹೇಳಿದರು- ‘‘ನಿನ್ನ ಅಂತಿಮ ಕಾರ್ಯವನ್ನು ಮಾಡುವವನು ನಾನಲ್ಲ. ಅದು ಮಕ್ಕಳಿಗೆ ಸಂಬಂಧ ಪಟ್ಟ ವಿಚಾರ. ಅವರು ಒಪ್ಪಿದರೆ ನನ್ನ ಅಡ್ಡಿ ಏನಿಲ್ಲ’’. ಗಂಡನ ಒಪ್ಪಿಗೆ ಸಿಕ್ಕಿದ ಮೇಲೆ ಮಕ್ಕಳ ಒಪ್ಪಿಗೆ ಪಡೆಯುವುದು ಏನು ಕಷ್ಟ? ಹಿರಿಯವನಿಗೆ ಆಗ 19 ವರ್ಷ. ತಕರಾರು ಮಾಡದೆ ಸಹಿ ಹಾಕಿದ. ಕಿರಿಯವನಿಗೆ 11 ವರ್ಷ. ನನ್ನ ಮೇಲೆ ಮೋಹ ಜಾಸ್ತಿ. ನನಗೆ ಅವನು ಸಹಿ ಹಾಕುವ ಬಗ್ಗೆ ಸ್ವಲ್ಪ ಅನುಮಾನವಿತ್ತು. ಆದರೆ, ಅವನಿಗೆ ಏನೂ ಅರ್ಥವಾಗದ ವಯಸ್ಸಾದ್ದರಿಂದ ಅದು ಏನು ಎಂದು ಅವನು ಓದಿಕೊಳ್ಳಲಿಲ್ಲ. ‘‘ಅಮ್ಮ ಸಹಿ ಹಾಕಲು ಹೇಳಿದ್ದಾಳೆ. ಅವಳು ಹೇಳಿದಂತೆ ಮಾಡುವುದು ನನ್ನ ಕೆಲಸ’’ ಎಂದಷ್ಟೇ ಯೋಚಿಸಿ ಅವನೂ ಸಹಿ ಹಾಕಿದ. ಹೀಗೆ ಇಬ್ಬರು ಮಕ್ಕಳ ಸಮ್ಮತಿ ಪಡೆದು ವೈಯಕ್ತಿಕ ವಿವರಗಳನ್ನು ದಾಖಲಿಸಿ ‘‘ಜೆಎಸ್‌ಎಸ್ ಮೆಡಿಕಲ್ ಕಾಲೇಜಿಗೆ ಮರಣಾನಂತರ ನನ್ನ ದೇಹವನ್ನು ವೈದ್ಯಕೀಯ ಅಧ್ಯಯನದ ಉದ್ದೇಶಕ್ಕಾಗಿ ಸಂತೋಷದಿಂದ ದಾನ ಮಾಡುತ್ತೇನೆ’’ ಎಂದು ಬರೆದ ಕವರನ್ನು ಅದೇ ದಿನ ಪೋಸ್ಟ್ ಮಾಡಿದೆ. ತಿಂಗಳು ಕಳೆಯುವಷ್ಟರಲ್ಲಿ ಅಲ್ಲಿಂದ ದೇಹದಾನ ಸ್ವೀಕೃತವಾದದ್ದಕ್ಕೆ ಐಡೆಂಟಿಟಿ ಕಾರ್ಡೂ ಬಂತು. ಅದೇ ವರ್ಷ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನವರು ಹೊಸದಾಗಿ ದೇಹದಾನ ಮಾಡಿದವರಿಗಾಗಿ ಆರೋಗ್ಯ ತಪಾಸಣೆ ಹಾಗೂ ಭೋಜನ ಕೂಟ ಕಾರ್ಯಕ್ರಮ ಏರ್ಪಡಿಸಿದ್ದರು. ನಾನು ಹೋದೆ. ಸುಮಾರು ಸಾವಿರದ ಸಂಖ್ಯೆಯಲ್ಲಿ ಜನ ಬಂದಿದ್ದರು. ಹೆಚ್ಚಿನವರೆಲ್ಲರೂ 60 ದಾಟಿದವರೇ! ಬಂದವರೆಲ್ಲರಿಗೂ ಸಹಿ ಮಾಡಲು ಇತ್ತು. ನಾನು ಸಹಿ ಹಾಕುವಾಗ ನನ್ನ ಹೆಸರು ನೋಡಿದ ಅಲ್ಲಿನ ಕ್ಲರ್ಕ್ ಒಬ್ಬರು ‘‘ಓ! ಸಹನಾ ಕಾಂತಬೈಲು ಎಂದರೆ ನೀವೆಯಾ? ದೇಹದಾನ ಸಮ್ಮತಿ ಪತ್ರದಲ್ಲಿ ನಿಮ್ಮ ಪ್ರಾಯ ಮತ್ತು ನೀವು ಲಗತ್ತಿಸಿದ ಫೋಟೊ ನೋಡಿ ದೇಹದಾನ ಮಾಡಲು ಮುಂದೆ ಬಂದ ಇಷ್ಟು ಸುಂದರ ಹಾಗೂ ಚಿಕ್ಕ ವಯಸ್ಸಿನ ಹೆಣ್ಣು ಯಾರಿರಬಹುದು? ಅವರನ್ನು ಒಮ್ಮೆ ನೋಡಬೇಕಿತ್ತು ಎಂದು ನಾವು ಕಚೇರಿಯಲ್ಲಿ ನಮ್ಮೆಳಗೆ ನಿಮ್ಮ ಕುರಿತು ಮಾತಾಡಿಕೊಂಡೆವು’’ ಎಂದರು.
ನನ್ನ ಹತ್ತಿರ ಇನ್ನೂ ಮೂರು ಸಮ್ಮತಿ ಅರ್ಜಿ ಇತ್ತಷ್ಟೆ. ದೇಹದಾನ ಮಾಡಲು ಇಚ್ಛೆಯುಳ್ಳವರಿಗೆ ಕೊಡುವ ಉದ್ದೇಶದಿಂದ ಅದನ್ನು ಹಾಗೆಯೇ ಇಟ್ಟುಕೊಂಡಿದ್ದೆ. ಒಂದು ದಿನ ನಮ್ಮ ಮನೆಯಿಂದ 12 ಕಿ.ಮೀ. ದೂರವಿರುವ ಜೇಡ್ಲ ಎಂಬ ಊರಿನ ಒಬ್ಬರು ಭಟ್ಟರ ಮನೆಗೆ ಊರದನ ಖರೀದಿಸಲು ಹೋದೆ. ಅವರು ಬ್ರಹ್ಮಚಾರಿ. ಒಬ್ಬರೇ ವಾಸವಾಗಿದ್ದರು. ವಯಸ್ಸು ಆಗ ಎಪ್ಪತ್ತೈದರ ಸಮೀಪ ಇತ್ತು. ಅವರು ನನ್ನಲ್ಲಿ ‘‘ನಾನು ಇನ್ನು ಎಷ್ಟು ವರ್ಷ ಬದುಕುತ್ತೇನೋ ಗೊತ್ತಿಲ್ಲ. ನನಗೆ ದೇಹದಾನ ಮಾಡಬೇಕೆಂದು ಇದೆ. ನಿನಗೆ ಈ ಕುರಿತು ಏನಾದರೂ ಮಾಹಿತಿ ಇದೆಯಾ?’’ ಎಂದು ಕೇಳಿದರು. ನಾನು ಹೇಳಿದೆ- ‘‘ನಾನು ಈಗಾಗಲೇ ದೇಹದಾನ ಮಾಡಿದ್ದೇನೆ. ನಿಮಗೆ ಅದಕ್ಕೆ ಬೇಕಾದ ಎಲ್ಲ ಸಹಾಯವನ್ನೂ ಮಾಡುತ್ತೇನೆ’’. ನಂತರ ಒಂದೆರಡು ದಿನದಲ್ಲಿ ನಾನು ನನ್ನ ಬಳಿ ಇದ್ದ ‘ದೇಹದಾನ ಸಮ್ಮತಿ ಉಯಿಲು’ ಪತ್ರವನ್ನು ತೆಗೆದುಕೊಂಡು, ಅದನ್ನು ಕಳುಹಿಸಲು ಬೇಕಾಗುವ ಅಂಚೆಚೀಟಿಯನ್ನೂ ಖರೀದಿಸಿ, ಅಲ್ಲಿಗೆ ಹೋಗಲು ವಾಹನ ವ್ಯವಸ್ಥೆ ಇಲ್ಲದುದರಿಂದ ಜೀಪು ಬಾಡಿಗೆ ಮಾಡಿಕೊಂಡು ಹೋದೆ. ಅದನ್ನು ಅವರಿಗೆ ಕೊಟ್ಟು ‘‘ನಿಮ್ಮ ನೆರೆಯವರ ಇಲ್ಲವೇ ಹತ್ತಿರದ ಇಬ್ಬರು ಬಂಧುಗಳ ಸಹಿ ಮಾಡಿಸಿ ಜೆಎಸ್‌ಎಸ್ ದೇಹದಾನ ಸಂಸ್ಥೆಗೆ ಕಳುಹಿಸಿ’’ ಎಂದೆ. ಅವರು ಒಪ್ಪಿದರು. ಸುಮಾರು ಒಂದು ವಾರ ಕಳೆಯುವಾಗ ನನಗೆ ಒಂದು ಫೋನ್ ಬಂತು. ಆ ಕಡೆಯ ವ್ಯಕ್ತಿ ನನ್ನ ಹೆಸರು ಸಹನಾ ಕಾಂತಬೈಲು ಎಂದು ಗೊತ್ತಾದ ಕೂಡಲೇ ನನ್ನನ್ನು ತರಾಟೆಗೆ ತೆಗೆದುಕೊಳ್ಳತೊಡಗಿದರು. ಒಮ್ಮೆಲೆ ನನಗೆ ಸಿಕ್ಕ ಮಾತಿನ ಪೆಟ್ಟನ್ನು ಅರಗಿಸಿ ಕೊಳ್ಳಲು ತುಸು ಹೊತ್ತು ಬೇಕಾಯಿತು. ವಿಷಯ ಏನೆಂದರೆ ನಾನು ಜೇಡ್ಲದ ಭಟ್ಟರಿಗೆ ‘ದೇಹದಾನ ಸಮ್ಮತಿ ಉಯಿಲ’ನ್ನು ಕೊಡಬಾರದಿತ್ತಂತೆ. ಅವರು ಭಟ್ಟರ ಅಣ್ಣನ ಮಕ್ಕಳಂತೆ. ‘‘ನಾವು ಇರುವಾಗ ನಮ್ಮ ಚಿಕ್ಕಪ್ಪ ಅನಾಥರಲ್ಲ. ಅವರು ದೇಹದಾನ ಮಾಡಬೇಕಾದ ಅಗತ್ಯ ಇಲ್ಲ. ಅವರನ್ನು ನಾವು ಬಿಟ್ಟುಹಾಕುವುದಿಲ್ಲ. ಅವರ ಮರಣಾ ನಂತರ ನಾವೇ ಮುಂದೆ ನಿಂತು ಅವರ ಉತ್ತರಕ್ರಿಯೆಯನ್ನೂ ಮಾಡುತ್ತೇವೆ. ನೀವು ಏನೇನೋ ಹೇಳಿ ನಮ್ಮ ಚಿಕ್ಕಪ್ಪನ ತಲೆಹಾಳು ಮಾಡಿದ್ದೀರಿ’’ ಎಂದು ನನ್ನನ್ನು ದೂರಿದರು. ‘‘ನಿಮ್ಮ ಚಿಕ್ಕಪ್ಪನಿಗೆ ನಾನಾಗಿ ಹೇಳಲಿಲ್ಲ. ಅವರು ಕೇಳಿದ ಕಾರಣ ಮಾಹಿತಿ ಕೊಡುವ ಕೆಲಸವನ್ನಷ್ಟೇ ಮಾಡಿದೆ. ನಾನು ಈ ಬಗ್ಗೆ ಯಾರನ್ನೂ ಒತ್ತಾಯಿಸಲಿಲ್ಲ, ಒತ್ತಾಯಿಸುವುದೂ ಇಲ್ಲ’’ ಎಂದು ಹೇಳಿದ ಮೇಲೆ ಅವರಿಗೆ ಸಮಾಧಾನವಾಯಿತು.
ಮೊನ್ನೆ ಪುತ್ತೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಒಬ್ಬರೇ ವಾಸಿಸುವ ನನ್ನ ಚಿಕ್ಕಮ್ಮ ‘‘ನಾನು ದೇಹದಾನ ಮಾಡಬೇಕೆಂದಿರುವೆ. ನಿನಗೆ ಏನಾದರೂ ಈ ಬಗ್ಗೆ ಗೊತ್ತಾ?’’ ಎಂದು ಕೇಳಿದರು. ನಾನು ಗೊತ್ತು ಎಂದಷ್ಟೇ ಹೇಳಿದೆ. ಇನ್ನೂ ಚಿಕ್ಕಮ್ಮನಿಗೆ ಸಮ್ಮತಿ ಅಜಿಯರ್ನ್ನು ಕೊಟ್ಟಿಲ್ಲ. ಕೊಟ್ಟರೆ ಅವರ ಮೂವರು ಹೆಣ್ಣುಮಕ್ಕಳು ‘‘ನಾವೆಲ್ಲ ಇರುವಾಗ ನೀನು ಯಾಕೆ ಅಮ್ಮನಿಗೆ ಅದನ್ನು ಕೊಟ್ಟದ್ದು?’’ ಎಂದು ಕೇಳಿದರೆ ಎಂಬ ಹೆದರಿಕೆ.
‘ಅನಾಥರಾದವರು ಬೇರೆ ದಾರಿಯಿಲ್ಲದೆ ದೇಹದಾನ ಮಾಡುತ್ತಾರೆ ಹೊರತು ಮಕ್ಕಳಿದ್ದವರಲ್ಲ’’ ಎಂಬ ತಪ್ಪುಕಲ್ಪನೆ ಹಲವರಲ್ಲಿ ಇದೆ. ಯಾರು ಬೇಕಾದರೂ, ಯಾವ ವಯಸ್ಸಿನಲ್ಲಿ ಬೇಕಾದರೂ ದೇಹದಾನ ಮಾಡಬಹುದು. ಮುಖ್ಯವಾಗಿ ಮಾಡುವ ಮನಸ್ಸಿರಬೇಕು ಅಷ್ಟೆ. ನನ್ನ ಮೊಬೈಲ್‌ನಲ್ಲಿ ‘ದೇಹದಾನ’ ಎಂದು ಹೆಸರು ಬರೆದು ಅದರ ಮುಂದೆ ಜೆಎಸ್‌ಎಸ್ ದೇಹದಾನ ಸಂಸ್ಥೆಯ ಸಂಖ್ಯೆಯನ್ನು ಸೇವ್ ಮಾಡಿ ಇಟ್ಟಿದ್ದೇನೆ. ನಾನು ಸತ್ತರೆ ಆ ನಂಬರಿಗೆ ಫೋನ್ ಮಾಡಿದರೆ ಆಯಿತು. ಅವರೇ ನಾನಿದ್ದಲ್ಲಿಗೆ ವಾಹನ ತಂದು ನನ್ನನ್ನು ಅದರಲ್ಲಿ ಹಾಕಿ ತೆಗೆದುಕೊಂಡು ಹೋಗುತ್ತಾರೆ. ಬಂಧುಗಳಿಗೆ ನೋಡಬೇಕೆಂದು ಇದ್ದರೆ ಮೂರ್ನಾಲ್ಕು ದಿನ ಅಲ್ಲಿ ಹೆಣವನ್ನು ಕೆಡದಂತೆ ಇಡುತ್ತಾರಂತೆ. ಬಲ್ಲವರು ಹೇಳುವಂತೆ ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಅಂದಹಾಗೆ ನನಗೀಗ ನಲುವತ್ತೆಂಟು ಹಿಡಿಯಿತು.