ಈ ‘ಸ್ಮಾರ್ಟ್ ಶರ್ಟ್ ’ ನಿಮ್ಮನ್ನು ಹೃದಯ ಮತ್ತು ಶ್ವಾಸಕೋಶ ಕಾಯಿಲೆಗಳಿಂದ ರಕ್ಷಿಸುತ್ತದೆ
ವಿಜ್ಞಾನ ಮತ್ತು ತಂತ್ರಜ್ಞಾನ ಕೆಲವೊಮ್ಮೆ ನಮ್ಮನ್ನು ಅಚ್ಚರಿಯಲ್ಲಿ ಕೆಡವುತ್ತವೆ. ಈಗ ವಿಜ್ಞಾನಿಗಳು ನಿಮ್ಮ ಹೃದಯ ಮತ್ತು ಶ್ವಾಸಕೋಶಗಳ ಆರೋಗ್ಯದ ಬಗ್ಗೆ ನಿಗಾ ವಹಿಸುವ ‘ಸ್ಮಾರ್ಟ್ ಶರ್ಟ್ ’ನ್ನು ಅಭಿವೃದ್ಧಿಗೊಳಿಸಿದ್ದಾರೆ. ಈ ಶರ್ಟ್‌ನಲ್ಲಿ ಅಳವಡಿಸಲಾಗಿರುವ ಹಲವಾರು ಸೆನ್ಸರ್‌ಗಳು ನಿಮ್ಮ ಹೃದಯ ಬಡಿತ ಮತ್ತು ಉಸಿರಾಟ ದರವನ್ನು ಸುಲಭವಾಗಿ ಲೆಕ್ಕ ಹಾಕಬಲ್ಲವು.
ಜೊತೆಗೆ ಈ ಸೆನ್ಸರ್‌ಗಳು ದಿನವಿಡೀ ನಿಮ್ಮ ಚಟುವಟಿಕೆಗಳ ಮೇಲೆ ನಿಗಾಯಿರಿಸುತ್ತವೆ ಮತ್ತು ಇದು ನಿಮ್ಮ ಶ್ವಾಸಕೋಶಗಳು, ಹೊಟ್ಟೆ ಮತ್ತು ಎದೆಯಲ್ಲಿ ಸಮಸ್ಯೆಗಳಿದ್ದರೆ ಅವನ್ನು ಪತ್ತೆ ಹಚ್ಚಲು ಶರ್ಟ್‌ಗೆ ನೆರವಾಗುತ್ತದೆ ಮತ್ತು ಅದು ನಿಮ್ಮನ್ನು ಎಚ್ಚರಿಸುತ್ತದೆ. ಈ ಶರ್ಟ್‌ನ್ನು ಧರಿಸಿದ ಬಳಿಕ ನೀವು ಮೊಬೈಲ್ ಆ್ಯಪ್‌ನ ಮೂಲಕ ನಿಮ್ಮ ಶರೀರದಲ್ಲಿನ ಚಟುವಟಿಕೆಗಳ ಮೇಲೆ ನಿಗಾಯಿರಿಸಲು ಸಾಧ್ಯವಾಗುತ್ತದೆ. ನಿಮ್ಮ ಉಸಿರಾಟ ಮತ್ತು ಹೃದಯ ಬಡಿತದಲ್ಲಿ ವ್ಯತ್ಯಯಗಳನ್ನು ಈ ಶರ್ಟ್ ತಕ್ಷಣ ಗುರುತಿಸುತ್ತದೆ ಮತ್ತು ನಿಮಗೆ ಎಚ್ಚರಿಕೆಯನ್ನು ನೀಡುತ್ತದೆ.
ಈ ಸ್ಮಾರ್ಟ್ ಶರ್ಟ್‌ನ್ನು ‘ಹೆಕ್ಸೋಸ್ಕಿನ್ ’ಎಂದು ಹೆಸರಿಸಲಾಗಿದೆ. ಈ ಶರ್ಟ್‌ನಲ್ಲಿ ಬಳಕೆಯಾಗಿರುವ ವಿಶೇಷ ತಂತ್ರಜ್ಞಾನವು ಉಸಿರಾಟದ ವೇಳೆ ಬಟ್ಟೆಯ ಆಕುಂಚನ ಮತ್ತು ಸಂಕೋಚನದ ಮೂಲಕ ನೀವು ಎಷ್ಟು ಗಾಳಿಯನ್ನು ಒಳಗೆಳೆದುಕೊಂಡಿದ್ದೀರಿ ಮತ್ತು ಎಷ್ಟು ಗಾಳಿಯನ್ನು ಹೊರಕ್ಕೆ ಬಿಟ್ಟಿದ್ದೀರಿ ಎನ್ನುವುದನ್ನು ಪತ್ತೆ ಹಚ್ಚುತ್ತದೆ. ಉಸಿರಾಟವಲ್ಲದೆ ಈ ಸ್ಮಾರ್ಟ್‌ಶರ್ಟ್ ಹೃದಯ ಬಡಿತ ಮತ್ತು ಹೊಟ್ಟೆಯ ಚಲನವಲನಗಳನ್ನೂ ಗಮನಿಸುತ್ತಿರುತ್ತದೆ. ಸದ್ಯ ಈ ಸ್ಮಾರ್ಟ್ ಶರ್ಟ್ ಕ್ರೀಡಾಪಟುಗಳಿಗಾಗಿ ಬಳಕೆಯಾಗುತ್ತಿದ್ದು,ಶೀಘ್ರವೇ ಎಲ್ಲರಿಗೂ ಲಭ್ಯವಾಗಲಿದೆ.
ಪುರುಷರು ಮತ್ತು ಮಹಿಳೆಯರು,ಹೀಗೆ ಇಬ್ಬರಿಗೂ ಲಭ್ಯವಿರುವ ಈ ಸ್ಮಾರ್ಟ್ ಶರ್ಟ್‌ನ ವಿಶೇಷವೆಂದರೆ ಅದರ ಕೆಲಸಗಳು ಮತ್ತು ಅದು ನೀಡುವ ಲಾಭಗಳನ್ನು ಪರಿಗಣಿಸಿದರೆ ಅದು ಅತ್ಯಂತ ದುಬಾರಿಯಲ್ಲ ಎನ್ನುವುದು. ಸ್ಮಾರ್ಟ್ ಶರ್ಟ್ ವಿಶೇಷ ಸಾಧನ ಮತ್ತು ವಿಶೇಷ ಯುಎಸ್‌ಬಿ ಕೇಬಲ್ ಹೊಂದಿದ್ದು,ಇವುಗಳ ಮೂಲಕ ನಿಮ್ಮ ಶರೀರದ ಚಲನವಲನಗಳನ್ನು ದತ್ತಾಂಶವನ್ನು ಮೊಬೈಲ್ ಆ್ಯಪ್‌ಗೆ ರವಾನಿಸುತ್ತದೆ. ಮೊದಲ ಬಾರಿಗೆ ಇದನ್ನು ಖರೀದಿಸುವಾಗ ಸ್ಮಾರ್ಟ್ ಶರ್ಟ್,ವಿಶೇಷ ಸಾಧನ ಮತ್ತು ಯುಎಸ್‌ಬಿ ಕೇಬಲ್ ಸೇರಿ ಬೆಲೆ 499 ಡಾ. ಅಥವಾ ಸುಮಾರು 35,000 ರೂ.ಗಳಾಗುತ್ತವೆ. ಆದರೆ ತಲೆ ಬಿಸಿ ಮಾಡಿಕೊಳ್ಳಬೇಕಿಲ್ಲ,ಏಕೆಂದರೆ ನೀವು ಒಂದು ಬಾರಿ ಸಂಪೂರ್ಣ ಸೆಟ್ ಅನ್ನು ಖರೀದಿಸಿದಿರೆಂದರೆ ಮುಂದಿನ ಸಲ ನೀವು ಕೇವಲ ಸ್ಮಾರ್ಟ್ ಶರ್ಟ್‌ನ್ನು ಖರೀದಿಸಬಹುದು ಮತ್ತು ಇದರ ಬೆಲೆ 169 ಡಾ.ಅಥವಾ ಸುಮಾರು 12,000 ರೂ.ಗಳಾಗುತ್ತವೆ. ಬೆವರು,ಧೂಳು ಮತ್ತು ವಾಸನೆಯು ಯಾವುದೇ ಪರಿಣಾಮವನ್ನು ಬೀರದಂತೆ ಈ ಶರ್ಟ್‌ನ ಬಟ್ಟೆಯನ್ನು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಆಗಾಗ್ಗೆ ತೊಳೆಯಬೇಕು ಮತ್ತು ಒಣಗಿಸಬೇಕು ಎಂಬ ಚಿಂತೆಗೆ ಆಸ್ಪದವಿಲ್ಲ.
ಈ ಶರ್ಟ್‌ನೊಂದಿಗೆ ನೀವು ಕ್ರೆಡಿಟ್ ಕಾರ್ಡ್‌ಗಿಂತಲೂ ಚಿಕ್ಕ ಗಾತ್ರದ,ವಿಶೇಷ ಬ್ಲೂಟೂಥ್ ಪವರ್ಡ್ ಸಾಧನವನ್ನು ಅಳವಡಿಸಬೇಕಾಗುತ್ತದೆ. ಶರ್ಟ್‌ನ್ನು ಧರಿಸಿದ ಬಳಿಕ ಈ ಸಾಧನವನ್ನು ಶರ್ಟ್‌ನ ಒಳಬದಿಯ ಪಾಕೆಟ್‌ನಲ್ಲಿ ಇರಿಸಬಹುದು. ಇದು ಕನೆಕ್ಟರ್ ಮೂಲಕ ಶರ್ಟ್‌ನೊಂದಿಗೆ ಸಂಪರ್ಕವನ್ನು ಹೊಂದಿರುತ್ತದೆ ಮತ್ತು ಸೆನ್ಸರ್‌ಗಳು ಸಂಗ್ರಹಿಸುವ ದತ್ತಾಂಶಗಳು ಕನೆಕ್ಟರ್ ಮೂಲಕ ಈ ಬ್ಲೂಟೂಥ್ ಪವರ್ಡ್ ಸಾಧನಕ್ಕೆ ರವಾನೆಯಾಗುತ್ತವೆ. ಸಾಧನದ ಮೇಲೆ ಮೂರು ಎಲ್‌ಇಡಿ ದೀಪಗಳಿದ್ದು,ಇವು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಬೇರೆ ಬೇರೆ ಸಂದೇಶಗಳನ್ನು ನೀಡುತ್ತವೆ. ಈ ಸಾಧನವನ್ನು ಒಂದು ಬಾರಿ ಚಾರ್ಜ್ ಮಾಡಿದರೆ 14 ಗಂಟೆಗಳ ಕಾಲ ಬಳಸಬಹುದು ಮತ್ತು ಅದು ಒಂದು ಸಲಕ್ಕೆ 150 ಗಂಟೆಗಳಷ್ಟು ದತ್ತಾಂಶಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.