ಡಿಜಿಟಲ್ ಡಿಟಾಕ್ಸಿಫಿಕೇಷನ್
ಇತ್ತೀಚಿನ ದಿನಗಳಲ್ಲಿ ಯುವಜನರು ಮತ್ತು ಮಕ್ಕಳು ಹೆಚ್ಚು ಹೆಚ್ಚು ನೋಮೋಪೋಭಿಯಾ ಮತ್ತು ಸೈಬರ್ ಕಾಂಡ್ರೀಯಾ ಎಂಬ ರೋಗಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಒಂದು ಕ್ಷಣವೂ ಮೊಬೈಲ್ ಇಲ್ಲದೆ ಇರಲಾಗದ ಚಡಪಡಿಕೆಗೆ ನೋಮೋಪೋಭಿಯಾ ಎಂದೂ, ಪ್ರತಿ ಆರೋಗ್ಯದ ವಿಚಾರಕ್ಕೂ ಅಂತರ್ಜಾಲದ ಕೊಂಡಿ ಮುಖಾಂತರ ಗೂಗಲ್‌ಗೆ ಮೊರೆ ಹೋಗುವ ಗೀಳಿಗೆ ಸೈಬರ್ ಕಾಂಡ್ರೀಯಾ ಎಂದು ಕರೆಯಲಾಗುತ್ತಿದೆ. ಒಟ್ಟಿನಲ್ಲಿ ಈಗೀಗ ಜನರು ಅಂತರ್ಜಾಲದಿಂದ ಹೊರಗೆ ಬರಲಾಗದೆ ತಮ್ಮದೇ ಕಲ್ಪನಾ ಲೋಕದಲ್ಲಿ ಎಲ್ಲರೊಂದಿಗೆ ಇದ್ದರೂ ಏಕಾಂಗಿಯಾಗಿ ಬದುಕುತ್ತಿರುವುದೇ ವಿಪರ್ಯಾಸವಾಗಿದೆ. ಒಂದೈದು ನಿಮಿಷಗಳಲ್ಲಿ ಅಂತರ್ಜಾಲದ ಸೌಲಭ್ಯ ಕಡಿತವಾದರೂ ನೀರಿನಿಂದ ಹೊರ ತೆಗೆದ ಮೀನಿನಂತೆ ವಿಲವಿಲನೇ ಚಡಪಡಿಸುವುದನ್ನು ನೋಡಿ ಮರುಕವುಂಟಾಗುತ್ತದೆ. ಪ್ರತಿಕ್ಷಣದಲ್ಲಿ ಫೇಸ್‌ಬುಕ್ ಲಾಗಿನ್ ಆಗುವುದು, ಪ್ರತಿ ನಿಮಿಷಕ್ಕೊಮ್ಮೆ ಮೆಸೇಜನ್ನು ಪರೀಕ್ಷಿಸುವುದು, ಪ್ರತಿ ಸೆಕೆಂಡ್‌ಗೆ ವಾಟ್ಸ್‌ಆ್ಯಪ್ ನೋಡುವುದು... ಹೀಗೆ ದಿನದ 24 ಗಂಟೆಯೂ ಮೊಬೈಲ್‌ನ ಒಳಗೆ ಬಂದಿಯಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದಂತೂ ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಕಾಡತೊಡಗಿದೆ. ರಸ್ತೆಯಲ್ಲಿ ನಡೆದಾಡುವಾಗ ಮೊಬೈಲ್‌ನಲ್ಲಿ ಮಗ್ನನಾಗಿರುವುದು, ಬೆಳಗ್ಗೆ ವಾಕಿಂಗ್ ಹೋದಾಗ ಮೆಸೇಜ್ ನೋಡುತ್ತಿರುವುದು, ಡ್ರೈವಿಂಗ್ ಮಾಡುವಾಗ ಮೊಬೈಲ್ ಚಾಟ್ ಮಾಡುವುದು, ಊಟ ಮಾಡುವಾಗಲೂ ಮೊಬೈಲ್‌ನಲ್ಲಿ ಮಗ್ನವಾಗಿರುವುದು, ತನ್ನ ಸುತ್ತ ಯಾರಿದ್ದಾರೆ ಎಂಬುದರ ಪರಿವೆ ಇಲ್ಲದೆ, ಹಗಲು ರಾತ್ರಿಯ ವ್ಯತ್ಯಾಸವಿಲ್ಲದೆ, ತನ್ನ ಪರಿಸರದ ಬಗ್ಗೆಯೂ ಗಮನವಿಲ್ಲದೆ ಎಲ್ಲೆಂದರಲ್ಲಿ ಮೊಬೈಲ್‌ನಲ್ಲಿ ಮಗ್ನನಾಗಿ ಪ್ರಪಂಚವನ್ನು ಮರೆಯುವುದು ಬಹಳ ಆತಂಕಕಾರಿ ವಿಚಾರವಾಗಿದೆ.
ಏನಿದು ಡಿಜಿಟಲ್ ಡಿಟಾಕ್ಸಿಫಿಕೇಷನ್?
ದಿನದಲ್ಲಿ ಒಂದಷ್ಟು ನಿರ್ದಿಷ್ಟ ಸಮಯದ ಕಾಲ ಎಲ್ಲಾ ರೀತಿಯ ಡಿಜಿಟಲ್ ಯಂತ್ರಗಳಾದ ಮೊಬೈಲ್, ಕಂಪ್ಯೂಟರ್, ಟಿವಿ, ಸ್ಮಾರ್ಟ್ ಫೋನ್‌ಗಳನ್ನು ಬದಿಗಿಟ್ಟು ಸಾಮಾಜಿಕ ಜಾಲತಾಣಗಳನ್ನು ಬಳಸದೆ ಇರುವುದನ್ನು ಡಿಜಿಟಲ್ ಡಿಟಾಕ್ಸಿಫಿಕೇಷನ್ ಎನ್ನಲಾಗುತ್ತದೆ.
ಯಾಕಾಗಿ ಬಿಡಬೇಕು?
1. ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಸಂಶೋಧನೆಗಳ ಪ್ರಕಾರ ಅತಿಯಾದ ಮೊಬೈಲ್ ಅಥವಾ ಇನ್ನಿತರ ಡಿಜಿಟಲ್ ಯಂತ್ರದ ಗೀಳಿನಿಂದಾಗಿ ನಿದ್ರಾಹೀನತೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಕನಿಷ್ಠ 6 ರಿಂದ 8 ಗಂಟೆ ನಿದ್ರೆ ಪ್ರತಿಯೊಬ್ಬನಿಗೂ ಅವಶ್ಯಕ. ರಾತ್ರಿ ಇಡೀ ಮೊಬೈಲ್‌ನಲ್ಲಿ ಮುಳುಗಿ ಹೋಗಿ ನಿದ್ರಾಹೀನತೆ ಉಂಟಾಗಿ ವ್ಯಕ್ತಿಯ ಕಾರ್ಯಕ್ಷಮತೆಗೆ ಧಕ್ಕೆ ಬರುವ ಎಲ್ಲಾ ಸಾಧ್ಯತೆ ಇರುತ್ತದೆ.
2. ಪೆನ್ಸಿಲ್‌ವಾನಿಯಾ ಯೂನಿವರ್ಸಿಟಿ ಇದರ ಇತ್ತೀಚಿನ ಸಂಶೋಧನೆಯ ಪ್ರಕಾರ ಅತಿಯಾದ ಮೊಬೈಲ್ ಮತ್ತು ಕಂಪ್ಯೂಟರ್ ಬಳಸುವವರಿಗೆ ಮಾನಸಿಕ ಖಿನ್ನತೆ ಸಮಸ್ಯೆ ಹೆಚ್ಚು ಕಂಡು ಬರುತ್ತದೆ ಎಂದು ತಿಳಿದು ಬಂದಿದೆ. ಅಂತರ್ಜಾಲದ ಗೀಳಿನಿಂದಾಗಿ ಅದು ಸಿಗದೆ ಇದ್ದಾಗ ಮಾನಸಿಕ ಖಿನ್ನತೆ, ಏಕಾಂಗಿತನ ತನ್ನ ಬಗ್ಗೆ ಕೀಳರಿಮೆಯಿಂದ ಬಳಲುತ್ತಾರೆ ಎಂದು ತಿಳಿದು ಬಂದಿದೆ. ಅತಿಯಾದ ಮೊಬೈಲ್ ಮತ್ತು ಅಂತರ್ಜಾಲ ಬಳಸುವವರಲ್ಲಿ ಕೆಲಸದ ಒತ್ತಡ ಜಾಸ್ತಿ ಇರುತ್ತದೆ ಮತ್ತು ತನ್ನನ್ನು ಇತರರಿಗೆ ಹೋಲಿಸಿಕೊಂಡು ಮತ್ತಷ್ಟು ತಮ್ಮ ಬಗ್ಗೆಯೇ ಅಸಹ್ಯ ಪಡುತ್ತಾರೆ ಮತ್ತು ಆತ್ಮಹತ್ಯಾ ಆಲೋಚನೆಗಳನ್ನು ಮಾಡತೊಡಗುತ್ತಾರೆ ಎಂದೂ ತಿಳಿದು ಬಂದಿದೆ.
ಹೇಗೆ ಹೊರ ಬರುವುದು?
* ದಿನದಲ್ಲಿ 24 ಗಂಟೆ ಮತ್ತು ವಾರದಲ್ಲಿ ಒಟ್ಟು 168 ಗಂಟೆ ಇರುತ್ತದೆ. ದಿನವೊಂದಕ್ಕೆ 8 ಗಂಟೆ ಕೆಲಸವಾದಲ್ಲಿ ಒಂದು ವಾರದಲ್ಲಿ 40 ಗಂಟೆಗಳ ಕೆಲಸ ಮಾಡಿದರೆ ಒಬ್ಬ ತನ್ನ ಅಗತ್ಯಕ್ಕೆ ಬೇಕಾದಷ್ಟು ಆದಾಯಗಳಿಸಬಹುದು. ವಾರದಲ್ಲಿ 2 ದಿನಗಳ ವಿಶ್ರಾಂತಿ ಅತೀ ಅಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ವ್ಯಕ್ತಿ ದಿನಕ್ಕೆ 11 ಗಂಟೆ ಅಂದರೆ ವಾರದಲ್ಲಿ 55 ಗಂಟೆ ಕೆಲಸ ಮಾಡುತ್ತಾನೆ ಇದು ಅನಗತ್ಯ. ನಿಮ್ಮ ದಿನದ 24 ಗಂಟೆಗಳನ್ನು ಮೂರು ಪಾಲ ಮಾಡಿಕೊಂಡು 8 ಗಂಟೆ ಕೆಲಸ, 8 ಗಂಟೆ ನಿದ್ರೆ, 8 ಗಂಟೆ ವಿಶ್ರಾಂತಿ ಪಡೆಯಬೇಕು. ದಿನವೊಂದಕ್ಕೆ 8 ಗಂಟೆಗಿಂತ ಜಾಸ್ತಿ ಕೆಲಸ ಮಾಡಿದಲ್ಲಿ ಆದಾಯ ಜಾಸ್ತಿಯಾಗದು. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಳ್ಳಿ. ದಿನಕ್ಕೆ 8 ಗಂಟೆ ವಿಶ್ರಾಂತಿ ಪಡೆದಲ್ಲಿ ನಿಮ್ಮ ಮೆದುಳು ನಿರಾತಂಕವಾಗಿ ಕೆಲಸ ಮಾಡಬಹುದು. ವಾರಕ್ಕೆ 40 ಗಂಟೆಗಿಂತ ಜಾಸ್ತಿ ಕೆಲಸ ಮಾಡಿದ್ದಲ್ಲಿ ನಿಮ್ಮ ಕಾರ್ಯದಕ್ಷತೆ ಕುಂಠಿತವಾಗುತ್ತದೆ ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ. 8 ಗಂಟೆ ಕಡ್ಡಾಯವಾಗಿ ನಿದ್ರೆ ಮಾಡಿ. 8 ಗಂಟೆಯ ವಿಶ್ರಾಂತಿ ಸಮಯದಲ್ಲಿ ಯಾವುದೇ ಚಂಚಲತೆಗೆ ಒಳಗಾಗದೆ ಮನಸ್ಸನ್ನು ಹಿಡಿತದಲ್ಲಿದ್ದು, ಮೊಬೈಲ್ ಕಂಪ್ಯೂಟರ್ ಮತ್ತು ಅಂತರ್ಜಾಲದಿಂದ ಹೊರಗೆ ಬನ್ನಿ. ದೈನಂದಿನ ಕಸರತ್ತನ್ನು ಪ್ರಚೋದಿಸುವ ಆಟಗಳನ್ನು ಆಡಿ. ಕನಿಷ್ಠ 8 ಗಂಟೆಗಳ ವಿಶ್ರಾಂತಿಯನ್ನು ಮೆದುಳಿಗೆ ನೀಡಬೇಕು. ವ್ಯಾಯಾಮ, ಯೋಗ, ಈಜು, ವಾಕಿಂಗ್, ಸೈಕ್ಲಿಂಗ್ ಮಾಡಿದಲ್ಲಿ ದೇಹಕ್ಕೆ ಕಸರತ್ತು ದೊರಕಿ ಮೆದುಳಿಗೆ ವಿಶ್ರಾಂತಿ ಸಿಗುತ್ತದೆ.
♦ ವಾರದಲ್ಲಿ ಒಂದು ದಿನ ಡಿಜಿಟಲ್ ಉಪವಾಸ ಮಾಡಿ. ಇಡೀ ದಿನ ಅಂತರ್ಜಾಲ ಬಳಸಬೇಡಿ. ಕುಟುಂಬದವರ ಜೊತೆ, ಸ್ನೇಹಿತರ ಜೊತೆ ಮುಕ್ತವಾಗಿ ವ್ಯವಹರಿಸಿ, ಮಕ್ಕಳ ಜೊತೆ ಆಟವಾಡಿ ಹೆಂಡತಿ ಜೊತೆ ಮಾತನಾಡಿ.
♦ ಪ್ರತಿ ಬಾರಿ ಮೊಬೈಲ್ ಅಥವಾ ಇನ್ನಿತರ ಯಂತ್ರಗಳ ಮೇಲೆ ಕೈ ಹಾಕಿದಾಗಲೂ ಅದು ಅನಿವಾರ್ಯವೇ ಎಂದು ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ. ಅದು ಅತೀ ಅನಿವಾರ್ಯವಾದಲ್ಲಿ ಮಾತ್ರ ಬಳಸಿ ಇಲ್ಲವಾದಲ್ಲಿ, ಮನೆಯ ಹೊರಗೆ ಬಂದು ಗಾರ್ಡನ್‌ನಲ್ಲಿ ಅಡ್ಡಾಡಿ. ಸೂರ್ಯನ ಬೆಳಕಿಗೆ ಮೈ ಚೆಲ್ಲಿ ಅಥವಾ ತಂಪಾದ ಗಾಳಿಯಲ್ಲಿ ಒಂದೈದು ನಿಮಿಷ ದೀರ್ಘ ಉಸಿರಾಟ ಮಾಡಿ. ಒಟ್ಟಿನಲ್ಲಿ ಮೊಬೈಲ್, ಕಂಪ್ಯೂಟರ್‌ನ ದಾಸರಾಗಬೇಡಿ.
♦ ನಿಮ್ಮ ಜೀವನದಲ್ಲಿನ ನಿಮ್ಮ ಆಯ್ಕೆಗಳ ಬಗ್ಗೆ ಗಮನವಿರಲಿ. ನಾನು ಯಾವತ್ತೂ ಬ್ಯುಸಿ ಅಥವಾ ನನಗೆ ಯಾವುದಕ್ಕೂ ಸಮಯವಿಲ್ಲ ಎಂಬ ನಾಟಕ ಆಡಬೇಡಿ. ಸಮಯವಿಲ್ಲದ ಮನುಷ್ಯನೇ ಇಲ್ಲ. ನಿಮ್ಮ ಆರೋಗ್ಯ, ನಿಮ್ಮ ಕುಟುಂಬ, ನಿಮ್ಮ ಕೆಲಸ ಎಲ್ಲದಕ್ಕೂ ಸಮಯ ನೀಡಿ. ದಿನದ 24 ಗಂಟೆಯೂ ಬರೀ ಕೆಲಸ ಎಂದು ಕಂಪ್ಯೂಟರ್ ಮುಂದೆ ಜೀವನವನ್ನು ಹಾಳು ಮಾಡಬೇಡಿ. ನನಗೆ ಸಮಯವಿಲ್ಲ, ಎಂಬ ಟೊಳ್ಳು ಪ್ರತಿಷ್ಠೆಯನ್ನು ಬಿಟ್ಟು ಎಲ್ಲರೊಂದಿಗೆ ಬೆರೆಯಿರಿ. ಬದುಕನ್ನು ಆನಂದಿಸಿರಿ.
♦ ನಮ್ಮ ಜೀವನ ಅತ್ಯಂತ ಅಗತ್ಯವಾದ 4 ವಿಷಯಗಳೆಂದರೆ ನಮ್ಮ ಕುಟುಂಬ, ನಮ್ಮ ಸ್ನೇಹಿತರು, ನಮ್ಮ ಆರೋಗ್ಯ ಮತ್ತು ನಮ್ಮ ಕೆಲಸ. ಈ ನಾಲ್ಕು ವಿಷಯಗಳಿಗೆ ಅಡೆತಡೆ ತರುವ ವಿಚಾರಗಳನ್ನು ಬದಿಗಿಡಲೇಬೇಕು. ಈ ನಾಲ್ಕು ವಿಚಾರಗಳಿಗೆ ನಿಮ್ಮ ಜೀವನದ ಸಮಯವನ್ನು ಮೀಸಲಿಡಬೇಕು. ಹಾಗೆ ಮಾಡಿದಲ್ಲಿ ನಿಮಗೆ ಇತರ ವಿಚಾರಗಳಿಗೆ ಅಥವಾ ಜೀವನವಿಲ್ಲದ ಯಂತ್ರಗಳಿಗೆ ದಾಸರಾಗಲು ಸಮಯ ಸಿಗುವುದೇ ಇಲ್ಲ.