ಡ್ಯಾಂ ನೀರು ಹರಿಸಿ ಜಲಪಾತೋತ್ಸವದ ಅಗತ್ಯವಿದೆಯೇ ?
ಗಗನಚುಕ್ಕಿ ಜಲಪಾತೋತ್ಸವಕ್ಕೆ ಭಾರಿ ವಿರೋಧ
ಮಂಡ್ಯ, ಜ.17: ಜಿಲ್ಲೆಯ ರೈತರ ಜೀವನಾಡಿ ಕೆಆರ್‍ಎಸ್ ಜಲಾಶಯದಿಂದ ದೊಡ್ಡ ಪ್ರಮಾಣದ ನೀರು ಹರಿಸಿ ಗಗನಚುಕ್ಕಿ ಜಲಪಾತೋತ್ಸವವನ್ನು ಯಾವ ಪುರುಷಾರ್ಥಕ್ಕೆ ಆಚರಣೆ ಮಾಡಲಾಗುತ್ತಿದೆ? ಎಂಬುದಾಗಿ ಸಾಮಾಜಿಕ ಹೋರಾಟಗಾರ ಷಣ್ಮುಖೇಗೌಡ ಪ್ರಶ್ನಿಸಿದ್ದಾರೆ.
ಹೌದು, “ದಿನದ ಕೂಳಿಗೆ ವರ್ಷದ ಕೂಳು ಕಳೆದುಕೊಂಡರು” ಎಂಬ ಗಾದೆಯಂತಾಗಿದೆ ಮಂಡ್ಯದ ರೈತಾಪಿ ಜನರ ಸ್ಥಿತಿ. ಹಾಗಾಗಿ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಮಂಡ್ಯ ಜಿಲ್ಲಾಡಳಿತ ಮಳವಳ್ಳಿ ತಾಲೂಕಿನ ಶಿವನಸಮುದ್ರದ ಬಳಿ ಜ.18 ಮತ್ತು 19 ರಂದು ಆಯೋಜಿಸಿರುವ ಗಗನಚುಕ್ಕಿ ಜಲಪಾತೋತ್ಸವಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸತತ ಬರದಿಂದ ತತ್ತರಿಸಿದ್ದ ಜಿಲ್ಲೆಯ ರೈತರು ಈ ವರ್ಷ ತಡವಾಗಿಯಾದರೂ ಅದ್ಧೂರಿಯಾಗಿ ಸುರಿದ ಮಳೆಯಿಂದ ಜೀವನಾಡಿ ಕೆಆರ್‍ಎಸ್ ಜಲಾಶಯ ತುಂಬಿ ತುಳುಕಿ ಅಷ್ಟೋಇಷ್ಟೋ ಭತ್ತದ ಫಸಲು ತೆಗೆದಿದ್ದಾರೆ. ಇನ್ನೂ ಬೆಳೆದು ನಿಂತಿರುವ ಕಬ್ಬು, ಹಿಪ್ಪುನೇರಳೆ ಮತ್ತು ರಾಸುಗಳ ಮೇವು ಬೆಳೆಗೆ ನೀರು ಅವಶ್ಯಕತೆ ಇದೆ. ಇದಲ್ಲದೆ ಮಂಡ್ಯ, ಮೈಸೂರು ಜಿಲ್ಲೆ ಸೇರಿದಂತೆ ರಾಜಧಾನಿ ಬೆಂಗಳೂರಿಗೆ ದಿನನಿತ್ಯದ ಕುಡಿಯುವ ನೀರು ಪೂರೈಸುವುದೂ ಈ ಜಲಾಶಯವೇ. ಸದ್ಯ ಜಲಾಶಯದಲ್ಲಿ ಇರುವ ನೀರು, ಇರುವ ಬೆಳೆಗಳ ಉಳಿವು ಮತ್ತು ಕುಡಿಯುವ ಅಗತ್ಯಕ್ಕೆ ಬೇಕು.
ಈಗಾಗಲೇ ನಾಲೆಗಳಿಗೆ ನೀರು ಹರಿಸಿ ತಿಂಗಳಾಗುತ್ತಾ ಬಂದಿದೆ. ಇರುವ ಬೆಳೆಗಳು ಒಣಗುತ್ತಿವೆ. ನೀರು ಹರಿಸದೇ ಇರುವುದರಿಂದ ಬಹಳಷ್ಟು ಕೆರೆಗಳು ಬಣಗುಡುತ್ತಿವೆ. ಇರುವ ಸಣ್ಣಪುಟ್ಟ ಕೆರೆಕಟ್ಟೆಗಳ ನೀರು ಖಾಲಿಯಾಗುತ್ತಿದ್ದು, ಜನಜಾನುವಾರುಗಳ ಕುಡಿಯುವ ನೀರಿಗೂ ತತ್ವಾರ ಒದಗುವ ಸಂಭವವಿದೆ.
ಈ ಬಗ್ಗೆ ಚಿಂತಿಸಬೇಕಾದ ಜಿಲ್ಲಾಡಳಿತ, ಸರಕಾರ ಕೆಲವೇ ಜನರ ತೃಪ್ತಿಗೆ ಡ್ಯಾಂನಿಂದ ನೀರು ಹರಿಸಿ ಉತ್ಸವ ಮಾಡುತ್ತಿದೆ. ಮತ್ತೊಂದೆಡೆ ಸಾರ್ವಜನಿಕ ವಲಯ ಇದಕ್ಕೆ ತೀವ್ರ ವಿರೋಧ ಮಾಡುತ್ತಿದೆ. ಜನರ ಕೂಗಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳೆನಿಸಿಕೊಂಡವರು ಮೌನವಾಗಿದ್ದಾರೆ.
ಅಮೂಲ್ಯ ಜೀವಜಲವನ್ನು ಜಲಪಾತೋತ್ಸವ ನೆಪದಲ್ಲಿ ಕೇವಲ ಎರಡು ದಿನದ ಮೋಜಿನ ಕಾರ್ಯಕ್ರಮಕ್ಕೆ ಪೋಲು ಮಾಡುವುದು ಜನೋದ್ಧಾರದ ಕಾರ್ಯಕ್ರಮವಲ್ಲ. ಎರಡು ದಿನ ಜಲಪಾತೋತ್ಸವ ಆಚರಿಸಿದ ಮಾತ್ರಕ್ಕೆ ಪ್ರವಾಸೋದ್ಯಮ ಅಭಿವೃದ್ಧಿಯಾಗಿಬಿಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜಲಪಾತೋತ್ಸವಕ್ಕೆ ಕೇವಲ ನೀರು ವ್ಯಯವಾಗುವುದು ಮಾತ್ರವಲ್ಲ. ಸುಮಾರು ಒಂದು ಕೋಟಿ ರೂ. ವ್ಯಯಿಸಲಾಗುತ್ತಿದೆ. ಈ ಹಣದಲ್ಲಿ ಗಗನಚುಕ್ಕಿ ಪ್ರದೇಶದಲ್ಲಿ ಪ್ರವಾಸಿಗರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿದರೆ ಪ್ರವಾಸಿಗರು ವರ್ಷಪೂರ್ತಿ ಬರುತ್ತಾರೆ. ಪ್ರವಾಸೋದ್ಯಮವೂ ಬೆಳೆಯುತ್ತದೆ ಎಂಬುದು ಸಾರ್ವಜನಿಕರ ಅಭಿಲಾಷೆ.
‘ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುತ್ತಿಲ್ಲವೆನ್ನಲಾಗುತ್ತಿದೆ. ಹಾಗಾದರೆ, ಜಲಪಾತೋತ್ಸವ ದಾಟಿ ಹೋಗುವ ನೀರು ಇನ್ನೆಲ್ಲಿಗೆ ತಲುಪುತ್ತದೆ? ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ತಾನೆ?’
-ಎಂ.ಬಿ.ನಾಗಣ್ಣಗೌಡ, ಹೋರಾಟಗಾರ.
‘ಜಲಪಾತೋತ್ಸವಕ್ಕೆ ಡ್ಯಾಂ ನೀರು ಬಳಸಿಕೊಳ್ಳುತ್ತಿಲ್ಲ, ಲೀಕೇಜ್ ನೀರಿನ್ನಲ್ಲಷ್ಟೇ ಆಚರಿಸಲಾಗುವುದು ಎಂದು ಡಿಸಿ ಡಾ.ವೆಂಕಟೇಶ್, ಮಳವಳ್ಳಿ ಶಾಸಕ ಡಾ.ಅನ್ನದಾನಿ ಸಮಜಾಯಿಸಿ ನೀಡಿದ್ದಾರೆ. ಲೀಕೇಜ್ ನೀರು ಹರಿಯುತ್ತಿದ್ದರೆ ಗಗನಚುಕ್ಕಿ ತುಂಬಿ ಹರಿಯಬೇಕಿತ್ತಲ್ಲವೆ? ನಾಲ್ಕು ಟಿಎಂಸಿ ನೀರು ಲೀಕೇಜ್ ಆಗುತ್ತದೆ ಎಂಬುದು ಮೂರ್ಖನತ. ಜತೆಗೆ, ತಿಂಗಳಿಂದಲೂ ನಾಲೆಗಳಿಗೆ ನೀರು ಹರಿಸಿಲ್ಲದಿರುವುದರಿಂದ ಸುಮಾರು 4 ಟಿಎಂಸಿ ನೀರು ಲೀಕೇಜ್ ಆಗುವುದಿಲ್ಲ ಎಂಬುದು ವಾಸ್ತವ’.
-ಪ್ರೊ.ಹುಲ್ಕೆರೆ ಮಹದೇವ, ಚಿಂತಕರು.