ನಕಲಿ ವೈದ್ಯರ ಕೈಯಲ್ಲಿ ರೋಗಗ್ರಸ್ತ ಭಾರತ
ಪೌಷ್ಟಿಕಾಂಶದ ಕೊರತೆ ಇದೆ. ನಡೆದಾಡಲಾಗುತ್ತಿಲ್ಲ. ನಿತ್ರಾಣ ಕಾಡುತ್ತಿದೆ. ಕಾಲುಗಳಲ್ಲಿ ತ್ರಾಣ ಇಲ್ಲದಾಗಿದೆ. ಮುಖ್ಯ ವೈದ್ಯರಿಗೆ ಇದು ಅರಿವಾಗುತ್ತಲೇ ಇಲ್ಲ. ನಡೆದಾಡುವ ಬಲ ಕಾಲ್ಗಳಿಗೆ ಬಂದು ಬಿಟ್ಟರೆ ಓಡಿ ಹೋಗಬಹುದೇನೋ ಎನ್ನುವ ಆತಂಕ. ತೋಳುಗಳಿಗೆ ಬಲ ಬಂದರೆ ನಿಯಂತ್ರಿಸುವುದೇ ಕಷ್ಟವಾಗಬಹುದು. ಕೈ ಎತ್ತಿದರೆ ತಾನೇ ಪ್ರಹಾರ, ಎತ್ತಲಾಗದಂತೆಯೇ ಮಾಡಿಬಿಟ್ಟರೆ? ಆಪ್ತ ಸಲಹೆಗಾರರ ಸಲಹೆ ಇದು. ಗಟ್ಟಿ ದೇಹ ಅಪ್ಪಿಕೊಳ್ಳುವುದೂ ಅಪಾಯ ಎನ್ನುವ ದೂರದೃಷ್ಟಿಯ ಫಲವೋ ಏನೋ, ಕೃಶ ದೇಹಕ್ಕೇ ಮಾನ್ಯತೆ.
ರೋಗಗ್ರಸ್ತ ಭಾರತ ಮತ್ತೊಮ್ಮೆ ಉತ್ತಮ ಗುಣಮಟ್ಟದ ಚಿಕಿತ್ಸೆ ಬಯಸುತ್ತಿದೆ. ರೋಗದ ಗುಣಲಕ್ಷಣಗಳು ಕಾಣುತ್ತಿದ್ದರೂ ಗುರುತಿಸಲಾಗದ ವೈದ್ಯರ ಚಿಕಿತ್ಸಾ ಕೊಠಡಿಯಲ್ಲಿ ನರಳಾಡುತ್ತಿರುವ ಭಾರತಕ್ಕೆ ಉತ್ತಮ ವೈದ್ಯರ ಅವಶ್ಯಕತೆ ಇದೆ. ದುರಂತ ಎಂದರೆ ತಿಳಿದೋ ತಿಳಿಯದೆಯೋ ಭಾರತ ನಕಲಿ ವೈದ್ಯರನ್ನು ಸಂಪರ್ಕಿಸಿದೆ. ಉಷ್ಣಮಾಪಕದ ಪರಿವೆಯೇ ಇಲ್ಲದ ಕಿರಿಯ ವೈದ್ಯರು, ನಾಡಿ ಎಲ್ಲಿದೆ ಎಂದೇ ತಿಳಿಯದ ಶುಶ್ರೂಶಕರು, ಹೃದಯ ಬಡಿತವನ್ನು ಗುರುತಿಸಲು ಉದರ ವೀಕ್ಷಣೆ ಮಾಡುವ ಚಿಕಿತ್ಸಕರು, ಎಲುಬಿಗೂ ಮಾಂಸಖಂಡಕ್ಕೂ ಇರುವ ವ್ಯತ್ಯಾಸವನ್ನು ಅರಿಯದ ವೈದ್ಯಕೀಯ ಸಿಬ್ಬಂದಿಯ ನಡುವೆ ಪ್ರಾಣಭಿಕ್ಷೆ ಬೇಡುತ್ತಿರುವ ಭಾರತಕ್ಕೆ ದೇಹ ರಚನೆಯ ಪರಿಜ್ಞಾನವೇ ಇಲ್ಲದ ಮುಖ್ಯ ವೈದ್ಯಾಧಿಕಾರಿಯೊಬ್ಬರು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಇಷ್ಟಕ್ಕೂ ಭಾರತ ಏಕೆ ರೋಗಗ್ರಸ್ತವಾಗಿದೆ? ಈ ರೋಗದ ಗುಣಲಕ್ಷಣಗಳಾದರೂ ಏನು? ಇದನ್ನು ಅರ್ಥಮಾಡಿಕೊಳ್ಳಲು ಬೇಕಾದ ಪ್ರಯೋಗಾಲಯವೇ ಇಲ್ಲವಾಗಿದೆ. ಇದ್ದರೂ ಈ ಪ್ರಯೋಗಾಲಯದಲ್ಲಿರುವ ಸಿಬ್ಬಂದಿಗೆ ರಕ್ತ ಮತ್ತು ನೀರಿನ ನಡುವೆ ಇರುವ ವ್ಯತ್ಯಾಸವೇ ತಿಳಿದಿಲ್ಲ ಎನಿಸುತ್ತದೆ. ಭಾರತ ಒಂದು ರೀತಿಯಲ್ಲಿ ನತದೃಷ್ಟ ರೋಗಿಯೇ. ಏಕೆಂದರೆ ರೋಗಲಕ್ಷಣಗಳನ್ನು ಗುರುತಿಸಿ, ಉತ್ತಮ ಚಿಕಿತ್ಸೆ ನೀಡಿ ಗುಣಪಡಿಸಬಲ್ಲ ವೈದ್ಯರನ್ನು ಹೊರಗೆಸೆಯಲಾಗಿದೆ. ದೇಹರಚನೆಯ ಪರಿಜ್ಞಾನವೇ ಇಲ್ಲದವರು ಶಸ್ತ್ರ ಚಿಕಿತ್ಸೆ ನಡೆಸಲು ಕತ್ತರಿ ಹಿಡಿದು ನಿಂತುಬಿಟ್ಟಿದ್ದಾರೆ. ದೇಹ ಎಲ್ಲಿದ್ದರೇನಂತೆ, ರೋಗಿಯನ್ನು ಶವಾಗಾರಕ್ಕೇ ತಳ್ಳಿಬಿಡಿ ಎಂದು ಹೇಳುವ ವೈದ್ಯಾಧಿಕಾರಿಯ ಉಸ್ತುವಾರಿಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.
ಈ ಭಾರತಕ್ಕೆ ತಗುಲಿರುವ ರೋಗಗಳು ಹಲವು ವಿಧ. ಜನ್ಮತಃ ಅಂಟಿದ ರೋಗಗಳು, ಬಾಲ್ಯಾವಸ್ಥೆಯಲ್ಲೇ ಸೋಂಕಿಗೆ ಒಳಗಾಗಿ ಉಲ್ಬಣಿಸಿರುವ ರೋಗಗಳು, ಪೌಷ್ಟಿಕಾಂಶಗಳ ಕೊರತೆಯಿಂದ ಹೆಚ್ಚಾಗಿರುವ ಸಮಸ್ಯೆಗಳು, ಪ್ರೌಢಾವಸ್ಥೆಯಲ್ಲಿ ಹಾದಿತಪ್ಪಿ ತಗುಲಿಸಿಕೊಂಡ ಮಾರಣಾಂತಿಕ ಕಾಯಿಲೆಗಳು, ವಿಷಪ್ರಾಶನದಿಂದ ಉಂಟಾಗಿರುವ ನ್ಯೂನತೆಗಳು, ಸಮ್ಮೋಹನಕ್ಕೊಳಗಾಗಿ ಉನ್ಮಾದಕ್ಕೆ ಬಲಿಯಾಗಿ ಹೆಚ್ಚಾಗಿರುವ ಮಾನಸಿಕ ಕಾಯಿಲೆ, ಇವೆಲ್ಲವನ್ನೂ ಮೀರಿಸುವಂತೆ ದೇಹವ್ಯಾಪಿ ಚರ್ಮರೋಗ. ಚರಮಗೀತೆ ಹಾಡಿದರೂ ಮಾಸದ ಚರ್ಮರೋಗಕ್ಕೆ ಭಾರತ ತುತ್ತಾಗಿದೆ. ಈ ತುರಿಕೆಯನ್ನು ವಾಸಿ ಮಾಡುವ ತಜ್ಞರು ಇಲ್ಲವಾಗಿದ್ದಾರೆ. ಭಾರತದ ಜನ್ಮ ಜಾತಕವನ್ನು ಗಮನಿಸಿದರೆ ಈ ತುರಿಕೆ ಹುಟ್ಟಿನೊಂದಿಗೇ ಬಂದಿದೆ. ಭಾರತ ನಡೆಯಲು ಬಳಸುವ ಕಾಲುಗಳಿಗಿಂತಲೂ ಭಾರತವನ್ನು ನಿಯಂತ್ರಿಸುವ ಕೈಗಳು ಬಲಿಷ್ಠವಾಗಿಬಿಟ್ಟಿವೆ. ಒಂದು ಕೈ ದುಡಿಯುತ್ತದೆ ಮತ್ತೊಂದು ಚರ್ಮದ ಬಣ್ಣವನ್ನೇ ಗಮನಿಸುತ್ತಾ ತನಗಿಷ್ಟವಿಲ್ಲದ ಭಾಗವನ್ನು ಕೆರೆಕೆರೆದು, ಕೆರೆಕೆರೆದು ಗಾಯ ಹೆಚ್ಚು ಮಾಡುತ್ತದೆ. ಹೊರ ಸೂಸುವ ರಕ್ತವನ್ನು ನೀರು ಎಂದು ಭಾವಿಸುವ ವೈದ್ಯರು ಗಾಯದ ಮೇಲೆ ಉಪ್ಪುಸವರಿ ಸುಮ್ಮನಾಗುತ್ತಾರೆ. ಕೆರೆತಕ್ಕೆ ಬಲಿಯಾದ ಚರ್ಮದ ಭಾಗ ಸುರುಟಿ ಹೋದರೂ ಲೆಕ್ಕಿಸದ ಭಾರತದ ಮನಸ್ಸಿಗೆ ಘಾಸಿಯಾಗುವುದೇ ಇಲ್ಲ. ಏಕೆಂದರೆ ಭಾರತದ ಮೆದುಳು ಅಷ್ಟು ಗಟ್ಟಿ.
ಜನ್ಮತಃ ಅಂಟಿದ ರೋಗಗಳು ಹೆಚ್ಚಾಗಿ ಬಾಧಿಸುತ್ತವೆ. ಚಪ್ಪಾಳೆ ಹೊಡೆಯಬೇಕೆಂದರೂ ಮೆದುಳು ಅಡ್ಡಿಯಾಗುತ್ತದೆ. ಎರಡು ಕೈಗಳು ಒಂದಾಗಲು ಬಿಡುವುದೇ ಇಲ್ಲ. ಅತ್ತಲಿನ ಐದು ಇತ್ತಲಿನ ಐದು ಬೆರಳುಗಳು ಅಪರೂಪಕ್ಕೊಮ್ಮೆ ಬೆಸೆದುಕೊಂಡರೆ ದೇಹ ಕಂಪಿಸಿಬಿಡುತ್ತದೆ. ಮೈಮೇಲೆ ದೇವರು ಬಂದಂತೆ ಎಗರಾಡಿಬಿಡುತ್ತದೆ. ಲಟಲಟನೆ ಮುರಿಯುವ ಮೂಳೆಗಳ ಸದ್ದು ತಲೆಯೊಳಗೆ ನುಸುಳಿಬಿಡುತ್ತದೆ. ದೇಹದ ಒಂದು ಭಾಗದಲ್ಲಿ ರಕ್ತಸ್ರಾವವಾಗುತ್ತಿದ್ದರೂ ಒಂದು ಕೈ ಮುಟ್ಟಲು ಹೋಗುವುದಿಲ್ಲ. ಮುಟ್ಟಿದರೆ ತೊಳೆಯಬೇಕೆಂಬ ಚಿಂತೆ. ಮೆದುಳನ್ನು ಆಶ್ರಯಿಸುತ್ತದೆ. ಮೆದುಳು ಹೇಳುತ್ತದೆ ‘‘ಏಯ್ ಆ ಗಾಯ ಹಾಗೆಯೇ ಇರಲಿ ನೀನು ಬದುಕಬೇಕಲ್ಲವೇ?’’. ಕೈ ಸರಕ್ಕನೆ ಹಿಂದೆ ಸರಿಯುತ್ತದೆ. ಬಾಲ್ಯಾವಸ್ಥೆಯಲ್ಲಿ ತಗುಲಿದ ಸೋಂಕುಗಳನ್ನು ವಾಸಿ ಮಾಡುವ ಜಾಣ್ಮೆ ವೈದ್ಯರಿಗೆ ಇದೆ. ಆದರೆ ಎಲ್ಲವೂ ವಾಸಿಯಾಗಿಬಿಟ್ಟರೆ ದೇಹದ ಮೂಲ ಸ್ವರೂಪವೇ ಬದಲಾಗಿಬಿಡುತ್ತದೆ ಎನ್ನುವ ಭೀತಿ. ದೇಹಪರಂಪರೆಯ ರಕ್ಷಕರಾಗಿಬಿಟ್ಟಿದ್ದಾರೆ ವೈದ್ಯರು ಏನು ಮಾಡುವುದು?
ಪೌಷ್ಟಿಕಾಂಶದ ಕೊರತೆ ಇದೆ. ನಡೆದಾಡಲಾಗುತ್ತಿಲ್ಲ. ನಿತ್ರಾಣ ಕಾಡುತ್ತಿದೆ. ಕಾಲುಗಳಲ್ಲಿ ತ್ರಾಣ ಇಲ್ಲದಾಗಿದೆ. ಮುಖ್ಯ ವೈದ್ಯರಿಗೆ ಇದು ಅರಿವಾಗುತ್ತಲೇ ಇಲ್ಲ. ನಡೆದಾಡುವ ಬಲ ಕಾಲ್ಗಳಿಗೆ ಬಂದು ಬಿಟ್ಟರೆ ಓಡಿ ಹೋಗಬಹುದೇನೋ ಎನ್ನುವ ಆತಂಕ. ತೋಳುಗಳಿಗೆ ಬಲ ಬಂದರೆ ನಿಯಂತ್ರಿಸುವುದೇ ಕಷ್ಟವಾಗಬಹುದು. ಕೈ ಎತ್ತಿದರೆ ತಾನೇ ಪ್ರಹಾರ, ಎತ್ತಲಾಗದಂತೆಯೇ ಮಾಡಿಬಿಟ್ಟರೆ? ಆಪ್ತ ಸಲಹೆಗಾರರ ಸಲಹೆ ಇದು. ಗಟ್ಟಿ ದೇಹ ಅಪ್ಪಿಕೊಳ್ಳುವುದೂ ಅಪಾಯ ಎನ್ನುವ ದೂರದೃಷ್ಟಿಯ ಫಲವೋ ಏನೋ, ಕೃಶ ದೇಹಕ್ಕೇ ಮಾನ್ಯತೆ. ಕೃಶವಾಗಿದ್ದಷ್ಟೂ ಅವಲಂಬನೆ ಹೆಚ್ಚು, ಅವಲಂಬನೆ ಹೆಚ್ಚಾದಷ್ಟೂ ನಿಯಂತ್ರಣ ಸುಲಭ, ನಿಯಂತ್ರಣ ಸುಲಭವಾದಷ್ಟೂ ಹಿಡಿತ ಬಿಗಿಯಾಗುತ್ತದೆ. ಇದು ಮುಖ್ಯ ವೈದ್ಯಾಧಿಕಾರಿಗಳ ಧೋರಣೆ. ಪೌಷ್ಟಿಕಾಂಶ ಕೊರತೆಗೆ ನಾವೇನೂ ಕಾರಣಕರ್ತರಲ್ಲ, ಹಿಂದೆ ದೇಹವನ್ನು ಸಲಹಿದವರು ಮಾಡಿದ ತಪ್ಪುನಮ್ಮನ್ನೇಕೆ ದೂಷಿಸುತ್ತೀರಿ ಎನ್ನುವುದು ವೈದ್ಯಲೋಕದ ಅಹವಾಲು.
ಪ್ರೌಢಾವಸ್ಥೆಯಲ್ಲಿ ತಪ್ಪುಹಾದಿ ಹಿಡಿದು ತಗುಲಿಸಿಕೊಂಡ ರೋಗಗಳಿಗೆ ಏನು ಚಿಕಿತ್ಸೆ ನೀಡುವುದು? ವೈದ್ಯರ ಸಭೆಯಲ್ಲಿ ಒಂದು ನಿರ್ಣಯ ಕೈಗೊಳ್ಳಲಾಗುತ್ತದೆ. ಈ ರೋಗಗಳನ್ನು ವಾಸಿ ಮಾಡುವುದು ಬೇಕಿಲ್ಲ, ಇದಕ್ಕೆ ಕಾರಣ ಯಾರು ಎಂದು ಕಂಡುಹಿಡಿಯೋಣ. ಯಾರು ಕಾರಣ ತಿಳಿಯುತ್ತಿಲ್ಲ. ನೆರೆಯವರೋ, ಮನೆಯವರೋ, ದೂರದವರೋ ಅಥವಾ ಭಾರತವೇ ಹೀಗೆಯೋ. ಚರ್ಚೆಗಳು ನಡೆಯುತ್ತಲೇ ಇವೆ. ತಪ್ಪುದಾರಿಗೆ ಎಳೆದವರಾರು ಈ ಭಾರತವನ್ನು? ಇಂದಿನ ವೈದ್ಯರಿಗೆ ಇದು ಗೊತ್ತಿದೆ. ಆದರೆ ಅದನ್ನು ಹೇಳಿ ಏನು ಪ್ರಯೋಜನ. ಹಾಗಾಗಿ ತಪ್ಪಿದ ಹಾದಿಯಲ್ಲೇ ಮುಂದುವರಿಯಲಿ ಎನ್ನುವ ನಿರ್ಧಾರ. ಮನಸ್ಸು ಕೆಟ್ಟಿದೆ, ಸರಿಪಡಿಸಿಬಿಟ್ಟರೆ ಅದು ಮೆದುಳಿನ ಮೇಲೆ ನಿಯಂತ್ರಣ ಸಾಧಿಸಿಬಿಡುತ್ತದೆ. ಮೆದುಳು ತನ್ನ ಪ್ರಾಬಲ್ಯ ಕಳೆದುಕೊಂಡುಬಿಡುತ್ತದೆ. ಮನಸ್ಸು ಹಾಗೆಯೇ ಇರಲಿ ಎನ್ನುವುದು ಮನಶ್ಶಾಸ್ತ್ರ ವೈದ್ಯರ ಅಭಿಪ್ರಾಯ. ಕೆಡಿಸಿದವರೇ ಸರಿಪಡಿಸಲಿ ಎನ್ನುವ ಹಠಮಾರಿತನ.
ವೈದ್ಯರಿಗೆ ಸಮಸ್ಯೆ ಇರುವುದು ವಿಷಪ್ರಾಶನದ್ದು. ಹೌದು ಈಗಿರುವ ವೈದ್ಯರೇ ಹಿಂದೊಮ್ಮೆ ಭಾರತಕ್ಕೆ ಚಿಕಿತ್ಸೆ ನೀಡಲು ಮುಂದಾದಾಗ, ಒಳಗಿನ ಕಲ್ಮಷ ತೆಗೆಯಲು ವಿಷಪ್ರಾಶನ ಮಾಡಿಸಿಬಿಟ್ಟಿದ್ದರು. ಈಗ ರೋಗಿ ತಮ್ಮ ಬಳಿಗೇ ಬಂದದ್ದಾಗಿದೆ. ಅಂದು ಸೂಜಿಯ ಮೂಲಕ ರಕ್ತನಾಳಗಳಲ್ಲಿ ಹರಿದುಬಿಟ್ಟ ಒಂದೆರಡು ತೊಟ್ಟು ನಂಜು ಈಗ ನೆತ್ತಿಯಿಂದ ಪಾದದವರೆಗೆ ಹರಡಿಬಿಟ್ಟಿದೆ. ಸೂಜಿ ಚುಚ್ಚಿದ ಹಿರಿಯ ವೈದ್ಯರು ವಯೋಸಹಜ ಮರೆವಿನ ಕಾಯಿಲೆಗೆ ಬಲಿಯಾಗಿ ನಿಷ್ಕ್ರಿಯರಾಗಿಬಿಟ್ಟಿದ್ದಾರೆ. ಈ ವಿಷವನ್ನು ಹೊರತೆಗೆಯುವ ವಿಧಾನ ಅವರಿಗೆ ತಿಳಿದಿರಬಹುದು. ಆದರೆ ಪಾಪ ಅವರ ದೇಹ ನೆಪಮಾತ್ರಕ್ಕೆ ಇಲ್ಲಿದೆ. ಏನೂ ಮಾಡಲಾಗದೆ ಮೂಲೆಗುಂಪಾಗಿಬಿಟ್ಟಿದ್ದಾರೆ. ಈಗಿನ ವೈದ್ಯರಿಗೆ ಅವರ ಸಲಹೆ ಪಡೆಯುವ ಇಚ್ಛೆಯೂ ಇಲ್ಲವೆನ್ನಿ. ದೇಹದೊಳಗೆ ವಿಷ ಇದ್ದರೇನಂತೆ? ಸ್ವಲ್ಪ ಮಟ್ಟಿಗೆ ವಿಷ ದೇಹದೊಳಗೆ ಇದ್ದರೇನೇ ಮೆದುಳಿಗೆ ದೇಹವನ್ನು ನಿಯಂತ್ರಿಸುವುದು ಸುಲಭ ಎಂದು ಪ್ರಾಚೀನ ವೈದ್ಯ ಶಾಸ್ತ್ರ ಪಂಡಿತರ ಸಲಹೆ. ಪಾಪ ಭಾರತ ಹಾಗೆಯೇ ತೆವಳುತ್ತಿದೆ.
ಹಾಗೂ ಹೀಗೂ ತೆವಳುತ್ತಿದ್ದ ಈ ರೋಗಗ್ರಸ್ತ ದೇಹ ಈಗ ಉನ್ಮಾದದ ಹುಚ್ಚಿಗೆ ಬಲಿಯಾಗಿದೆ. ಮುಖ್ಯ ವೈದ್ಯರ ಮಾತಿಗೆ ಹ್ಞೂಂಗುಟ್ಟುವುದನ್ನು ಬಿಟ್ಟರೆ ಬೇರೇನೂ ಮಾಡುವ ಸ್ಥಿತಿಯಲ್ಲಿಲ್ಲ. ಮುಖ್ಯ ವೈದ್ಯರು ಹೇಳಿದಂತೆ ಕೇಳುತ್ತದೆ. ಶುಶ್ರೂಷಕರ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡುವುದಿಲ್ಲ. ಉನ್ಮಾದವನ್ನು ಕಡಿಮೆ ಮಾಡಲು ವೈದ್ಯರಿಗೆ ಇಷ್ಟವಿಲ್ಲ. ಮುಖ್ಯ ವೈದ್ಯಾಧಿಕಾರಿಗೆ ಈ ಉನ್ಮಾದವೇ ಬೇಕು ಎಂದು ವೈದ್ಯಕೀಯ ಸಿಬ್ಬಂದಿ ಗುಸುಗುಸು ಮಾತನಾಡಿಕೊಳ್ಳುತ್ತಾರೆ. ಓಡಲು ಕಾಲ್ಗಳಲ್ಲಿ ತ್ರಾಣ ಇಲ್ಲ, ಕೈ ಎತ್ತಲು ಸಾಧ್ಯವಾಗುತ್ತಿಲ್ಲ. ಚರ್ಮ ರೋಗ ಬೇರೆ ಕಾಡುತ್ತಿದೆ. ಮನಸ್ಸು ಸ್ಥಿಮಿತದಲ್ಲಿಲ್ಲ. ದೇಹದಲ್ಲಿ ಶಕ್ತಿ ಕುಂದಿದೆ. ಹೀಗಿದ್ದರೆ ಮಾತ್ರ ಮೆದುಳು ಸಂಪೂರ್ಣ ನಿಯಂತ್ರಣ ಸಾಧಿಸಲು ಸಾಧ್ಯ ಎಂದು ಸಲಹೆ ನೀಡುವ ಚಿಕಿತ್ಸಕ ಋಷಿಗಳು ಹೇರಳವಾಗಿದ್ದಾರೆ. ಮುಖ್ಯ ವೈದ್ಯಾಧಿಕಾರಿಗಳಿಗೆ ಇವರ ಸಲಹೆ ವೇದವಾಕ್ಯ.
ಅದೇಕೋ ಭಾರತ ತನ್ನ ದೇಹಬಾಧೆಗಳೆಲ್ಲವನ್ನೂ ಮರೆತು, ರೋಗಗ್ರಸ್ತ ಅಂಗಾಂಗಗಳನ್ನೂ ಲೆಕ್ಕಿಸದೆ ಸೆಟೆದು ನಿಂತುಬಿಟ್ಟಿದೆ. ನಿನ್ನ ವೈದ್ಯ ಶಾಸ್ತ್ರವೂ ಬೇಡ, ನಿನ್ನ ಚಿಕಿತ್ಸೆಯೂ ಬೇಡ ಎಂದು ಎದ್ದು ಓಡಲು ಸಜ್ಜಾಗಿಬಿಟ್ಟಿದೆ. ತ್ರಾಣವಿಲ್ಲದ ಕಾಲ್ಗಳಿಗೆ ಪಾದಗಳು ಬಲ ಒದಗಿಸುತ್ತಿವೆ. ತೊಡೆಗಳು ಗಟ್ಟಿಯಾಗಿವೆ ನಡೆ ಮುಂದೆ ಎನ್ನುತ್ತಿವೆ. ಕೈ ಎತ್ತುವುದು ಕಷ್ಟ ಆದರೆ ಬೆನ್ನು ಹುರಿ ಗಟ್ಟಿಯಾಗಿದೆ ಎನ್ನುತ್ತಿವೆ ಎರಡು ತೋಳುಗಳು. ಇವೆಲ್ಲವನ್ನೂ ಕಂಡು ಮನಸು ಸ್ಥಿಮಿತಕ್ಕೆ ಬರುತ್ತಿದ್ದಂತೆ ಕಾಣುತ್ತಿದೆ. ಈಗಿರುವ ಮೆದುಳನ್ನೇ ಕಿತ್ತೊಗೆದು ಮತ್ತೊಂದು ಮೆದುಳು ಜೋಡಿಸುವ ಯೋಚನೆ ಹರಿಯುತ್ತಿದೆ. ವೈದ್ಯಾಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿ ಇಡೀ ದೇಹವನ್ನೇ ತುರ್ತು ನಿಗಾ ಘಟಕದಲ್ಲಿರಿಸಲು ಹವಣಿಸುತ್ತಿದ್ದಾರೆ. ರೋಗಿಯ ದೇಹದೊಳಗಿನ ಕಾವು ವೈದ್ಯರನ್ನು ಬೆಚ್ಚಗೆ ಮಾಡುತ್ತಿದೆ. ಈ ರೋಗಗ್ರಸ್ತ ಭಾರತಕ್ಕೆ ಇಷ್ಟು ಸ್ಥೈರ್ಯ ಬರಲು ಏನು ಕಾರಣ ? ಕಣ್ಣುಗಳು ಆರೋಗ್ಯಕರವಾಗಿವೆ. ಕಣ್ತೆರೆದು ನೋಡುತ್ತಿದೆ. ದೇಹವನ್ನಾವರಿಸಿರುವ ನಂಜಿಗೆ ಅಂಜದೆ ತನ್ನನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಿದೆ. ಭಾರತ ಎಚ್ಚೆತ್ತಿದೆ.