ಪೌರತ್ವ ಕಾಯ್ದೆ ವಿರುದ್ಧ ಸಿಡಿದೆದ್ದ ವನಿತೆಯರು!
ದೇಶಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಶಾಹೀನ್ ಬಾಗ್ ಪ್ರತ್ಯೇಕವಾಗಿ ನಿಲ್ಲುತ್ತದೆ. ಮುಖ್ಯವಾಗಿ ಈ ಪ್ರತಿಭಟನೆಯನ್ನು ಆಸುಪಾಸಿನ ಪ್ರದೇಶಗಳ ಮಹಿಳೆಯರು ಸಂಘಟಿಸಿದ್ದು ಅವರಲ್ಲಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಎಲ್ಲೆಡೆ ಪ್ರತಿಭಟನೆಗಳನ್ನು ಹಿಂಸಾತ್ಮಕವಾಗಿ ಮಟ್ಟಹಾಕುತ್ತಿರುವ ದಿಲ್ಲಿ ಪೊಲೀಸರು ಶಾಹೀನ್‌ಬಾಗ್‌ನಲ್ಲಿ ಶಾಂತಿಯುತವಾಗಿ ಹಗಲುರಾತ್ರಿ ಧರಣಿ ನಡೆಸುತ್ತಿರುವ ಸ್ಕಾರ್ಫ್‌ಧಾರಿ ಮಹಿಳೆಯರ ಸಮೂಹವನ್ನು ಕಂಡು ಚಕಿತರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಿಲೋಫರ್ ಸಾದಿಕ್ ತುಂಬಾ ಬ್ಯುಸಿಯಾಗಿ ಬಿಟ್ಟಿದ್ದಾರೆ. ಪ್ರತಿದಿನವೂ ಆಕೆ ನಸುಕಿನಲ್ಲಿ 5 ಗಂಟೆಗೆ ಏಳುತ್ತಾರೆ ಆನಂತರ ಆಕೆ, ಕ್ರೈಸ್ತ ಶಾಲೆಗೆ ಶಿಕ್ಷಕಿಯಾಗಿ ಹೋಗುತ್ತಾರೆ. ಅಲ್ಲಿ ಅವರು ಭೌತಶಾಸ್ತ್ರ ಹಾಗೂ ಗಣಿತ ಬೋಧಿಸುತ್ತಾರೆ. ಈಗ ಅವರ ದೈನಂದಿನ ದಿನಚರಿಗೆ ಇನ್ನೊಂದು ಹೊಣೆಗಾರಿಕೆ ಸೇರ್ಪಡೆಗೊಂಡಿದೆ. ಆಕೆ ಕೋಲ್ಕತಾದ ಪಾರ್ಕ್ ಸರ್ಕಸ್ ಮೈದಾನದಲ್ಲಿ ಜನವರಿ ಏಳರಿಂದ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರ ಗುಂಪಿನೊಂದಿಗೆ ಧರಣಿೆ ಕುಳಿತುಕೊಳ್ಳುತ್ತಿದ್ದಾರೆ.
‘‘ನಾನು ನೇರವಾಗಿ ಕರ್ತವ್ಯದ ಸ್ಥಳದಿಂದಲೇ ಇಲ್ಲಿಗೆ ಬಂದಿದ್ದೇನೆ. ನಾನು ಆಹಾರ ಕೂಡಾ ಸೇವಿಸಿಲ್ಲ’’ ಎಂದು ನಿಲೋಫರ್ ಮಂಗಳವಾರ ತನ್ನನ್ನು ಮಾತನಾಡಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ. ‘‘ನಾನು ಆನಂತರ ಮಕ್ಕಳ ಬಳಿಗೆ ಹೋಗಬೇಕಾಗಿದೆ. ಅವರ ಹೋಂವರ್ಕ್‌ಗೆ ಮಾರ್ಗದರ್ಶನ ನೀಡಬೇಕಾಗಿದೆ. ನನ್ನ ಪುತ್ರನಿಗೆ ನಾಳೆ ಗಣಿತ ಪರೀಕ್ಷೆಯಿದೆ. ನಾನೋರ್ವ ಗಣಿತ ಶಿಕ್ಷಕಿ’’ ಎಂದು ನಸುನಗುತ್ತಾ ಹೇಳಿಕೊಂಡರು.
ನಿಲೋಫರ್ ಹಾಗೂ ಪಾರ್ಕ್ ಸರ್ಕಸ್ ಮೈದಾನದಲ್ಲಿ ಧರಣಿ ನಿರತರಾಗಿರುವ ಇತರ ಮಹಿಳೆಯರೂ ಕೂಡಾ ಇದೇ ರೀತಿ ಯೋಚಿಸುತ್ತಿದ್ದಾರೆ. ಸದ್ಯಕ್ಕೆ ಮಕ್ಕಳ ಹೋಂವರ್ಕ್ ತಮ್ಮ ಮೇಲ್ವಿಚಾರಣೆಯಿಲ್ಲದೆ ನಡೆಯುತ್ತಿರಬಹುದು. ಆದರೆ ಒಂದು ವೇಳೆ ತಾವು ಪ್ರತಿಭಟನೆ ನಡೆಸಲು ಮನೆಯಿಂದ ಹೊರಬಾರದೆ ಇದ್ದಲ್ಲಿ, ಭವಿಷ್ಯದಲ್ಲಿ ತಮ್ಮ ಮಕ್ಕಳನ್ನು ತಮ್ಮ ದೇಶದಲ್ಲೇ ವಿದೇಶಿಯರೆಂದು ಘೋಷಿಸಬಹುದು ಹಾಗೂ ಅವರು ಶಾಲೆಗೆ ಹೋಗಲು ಸಾಧ್ಯವಾಗದಿರಬಹುದು ಎಂಬುದನ್ನು ಅವರು ಅರಿತುಕೊಂಡಿದ್ದಾರೆ.
ಇನ್ನೊಂದು ಶಾಹೀನ್‌ಬಾಗ್
ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರಗೊಂಡ ಬಳಿಕ ನಾವು ಪ್ರತಿಭಟನಾ ರ್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿದ್ದೆವು. ಆದರೆ ಆನಂತರ ನಾವು ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಸ್ಫೂರ್ತಿ ಪಡೆದೆವು ಎಂದು ಪಾರ್ಕ್ ಸರ್ಕಸ್ ಮೈದಾನದಲ್ಲಿ ಧರಣಿ ನಿರತರಲ್ಲೊಬ್ಬರಾದ ಫರ್ಹತ್ ಸಲೀಂ ಹೇಳುತ್ತಾರೆ. ಜನವರಿ 1ರಿಂದ 7ರವರೆಗೆ ಅವರು ಅಹರ್ನಿಶಿ ಪ್ರತಿಭಟನೆ ನಡೆಸಿದ್ದರು. ‘‘ನಾನೊಬ್ಬಳು ಗೃಹಿಣಿ. ಪ್ರತಿಭಟನೆಗಾಗಿ ಮನೆಯಿಂದ ಹೊರಬರುತ್ತಿರುವುದು ಇದೇ ಮೊದಲು ಎಂದು ಆಕೆ ಹೇಳಿದ್ದಾರೆ.
ಸರಕಾರದ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸಲು ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ಮಹಿಳೆಯರು ಸುಮಾರು ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಡಿಸೆಂಬರ್ 11ರಂದು ಸಂಸತ್ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರು ಭಾರತೀಯ ಪೌರತ್ವ ಪಡೆಯಲು ಅವಕಾಶ ನೀಡುತ್ತದೆ. ಆ ಮೂಲಕ ಮುಸ್ಲಿಮ್ ವಲಸಿಗರು ಪೌರತ್ವಕ್ಕೆ ಅರ್ಹರಾಗುವುದಿಲ್ಲವೆಂಬುದನ್ನು ಸೂಚಿಸಿದೆ. ನೂತನ ಪೌರತ್ವ ತಿದ್ದುಪಡಿ ಕಾಯ್ದೆಯು ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಗೆ ಮುನ್ನುಡಿಯಾಗಲಿದೆ ಎಂದು ಸರಕಾರವು ಕಳೆದ ಒಂದು ವರ್ಷದಿಂದ ಪುನರುಚ್ಚರಿಸುತ್ತಲೇ ಬಂದಿದೆ. ತಥಾಕಥಿತ ಅಕ್ರಮ ವಲಸಿಗರನ್ನು ಗುರುತಿಸಿ, ಅವರನ್ನು ಗಡಿಪಾರು ಮಾಡುವ ಉದ್ದೇಶವನ್ನು ತಾನು ಹೊಂದಿರುವುದಾಗಿ ಅದು ಹೇಳಿತ್ತು. ಇವೆಲ್ಲವನ್ನೂ ಒಟ್ಟಿಗೆ ಪರಿಗಣನೆಗೆ ತೆಗೆದುಕೊಂಡಲ್ಲಿ ಸಿಎಎ ಹಾಗೂ ಎನ್‌ಆರ್‌ಸಿಯು ಭಾರತೀಯ ಮುಸ್ಲಿಮರನ್ನು ಪೌರತ್ವದಿಂದ ಹೊರಗಿಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿದೆಯೆಂಬ ಭಯಭೀತಿ ಹರಡಿದೆ.
ದೇಶಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಶಾಹೀನ್ ಬಾಗ್ ಪ್ರತ್ಯೇಕವಾಗಿ ನಿಲ್ಲುತ್ತದೆ. ಮುಖ್ಯವಾಗಿ ಈ ಪ್ರತಿಭಟನೆಯನ್ನು ಆಸುಪಾಸಿನ ಪ್ರದೇಶಗಳ ಮಹಿಳೆಯರು ಸಂಘಟಿಸಿದ್ದು ಅವರಲ್ಲಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಎಲ್ಲೆಡೆ ಪ್ರತಿಭಟನೆಗಳನ್ನು ಹಿಂಸಾತ್ಮಕವಾಗಿ ಮಟ್ಟಹಾಕುತ್ತಿರುವ ದಿಲ್ಲಿ ಪೊಲೀಸರು ಶಾಹೀನ್‌ಬಾಗ್‌ನಲ್ಲಿ ಶಾಂತಿಯುತವಾಗಿ ಹಗಲುರಾತ್ರಿ ಧರಣಿ ನಡೆಸುತ್ತಿರುವ ಸ್ಕಾರ್ಫ್‌ಧಾರಿ ಮಹಿಳೆಯರ ಸಮೂಹವನ್ನು ಕಂಡು ಚಕಿತರಾಗಿದ್ದಾರೆ.
ಅವರಲ್ಲಿ ಹಲವರು, ಅಪರೂಪಕ್ಕೆ ಮನೆಯಿಂದ ಹೊರಬರುವಂತಹ ಗೃಹಿಣಿಯರಾಗಿದ್ದಾರೆ. ತಮ್ಮ ಜೀವಿತದುದ್ದಕ್ಕೂ ಮನೆಗೆಲಸವಷ್ಟೇ ತಿಳಿದಿದ್ದ ಅವರೀಗ ದುರುಳ ಉದ್ದೇಶದ ವಿರುದ್ಧ ಸಿಡಿದೆದ್ದಿದ್ದಾರೆ. ಕಂಕುಳಲ್ಲಿ ಕಂದಮ್ಮಗಳನ್ನು ಹಿಡಿದುಕೊಂಡೇ ಅವರು ತಮ್ಮ ಸಹ ಪಾಲುದಾರರಿಗೆ ಆಹಾರ ನೀಡುತ್ತಿದ್ದಾರೆ, ಕುಡಿಯಲು ನೀರು ಕೊಡುತ್ತಿದ್ದಾರೆ, ಧರಣಿ ಕುಳಿತವರಿಗೆ ಕಂಬಳಿಗಳನ್ನು ಹಾಸಿ ಕೊಡುತ್ತಿದ್ದಾರೆ. ಸ್ಥಳದಲ್ಲಿ ಹಾಕಿದ ಶಾಮಿಯಾನ ಚಪ್ಪರ ಕೂಡಾ ಪ್ರತಿಭಟನೆಗೆ ಕೌಟುಂಬಿಕ ಕಾರ್ಯಕ್ರಮದ ವಾತಾವರಣವನ್ನು ಸೃಷ್ಟಿಸಿದೆ. ಜಾತಿ,ಧರ್ಮಗಳ ಭೇದವಿಲ್ಲದೆ ವಿದ್ಯಾರ್ಥಿಗಳು, ಚಳವಳಿಗಾರರು, ಸೆಲೆಬ್ರಿಟಿಗಳು ಹಾಗೂ ಕೆಲವು ರಾಜಕಾರಣಿಗಳು ಅಲ್ಲಿಗೆ ತಂಡತಂಡವಾಗಿ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಶಾಹೀನ್‌ಬಾಗ್ ಪ್ರತಿಭಟನೆಯ ಪರಿಕಲ್ಪನೆಯು ಈಗ ದೇಶದ ಇತರ ಭಾಗಗಳಿಗೂ ಹರಡುತ್ತಿದೆ. ಕೋಲ್ಕತಾದ ಪಾರ್ಕ್ ಸರ್ಕಸ್ ಕೂಡಾ ಮುಸ್ಲಿಮ್ ಬಾಹುಳ್ಯದ ಪ್ರದೇಶವಾಗಿದ್ದು, ಅಲ್ಲಿಯೂ ಕೂಡಾ ಹಲವಾರು ಮಹಿಳೆಯರು ಇದೇ ಮೊದಲ ಬಾರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಧರಣಿ ನಿರತ ಮಹಿಳೆಯರಲ್ಲಿ ಹಲವರು ವೈದ್ಯರು, ನ್ಯಾಯವಾದಿಗಳು ಹಾಗೂ ಶಿಕ್ಷಕಿಯರಾಗಿದ್ದು, ತಮ್ಮ ವೃತ್ತಿಪರ ಜಗತ್ತಿನಲ್ಲಿ ತಲ್ಲೀನರಾಗಿದ್ದ ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕ ವಲಯವನ್ನು ಪ್ರವೇಶಿಸಿದ್ದಾರೆ.
‘‘ಇದೊಂದು ವಿಭಿನ್ನವಾದ ಅನುಭವ’’ ಎಂದು ಕೋಲ್ಕತಾದ ಹಾತಿ ಬಾಗನ್ ಪ್ರದೇಶದಲ್ಲಿ ವಾಸಿಸುತ್ತಿರುವ ಗೃಹಿಣಿ ನುಝತ್ ಪರ್ವೀನ್ ಹೇಳುತ್ತಾರೆ. ‘‘ಮುಸ್ಲಿಮ್ ಮಹಿಳೆಯರಾದ ನಾವು ಮನೆಯಲ್ಲಿ ಉಳಿದುಕೊಳ್ಳುತ್ತೇವೆ. ಬಹುಶಃ ಕೆಲವೊಮ್ಮೆ ನಾವು ನಮ್ಮ ನೆರೆಹೊರೆಯವರೊಂದಿಗೆ ಮಾತನಾಡುತ್ತೇವೆ, ಇದೀಗ ನಾವು ಮನೆಯಿಂದ ಹೊರಬಂದಿದ್ದೇವೆ. ನಾವು ಹಿಂದೂಗಳನ್ನು, ಸಿಖ್ಖರನ್ನು, ಪಂಜಾಬಿಗಳನ್ನು ಭೇಟಿಯಾಗಿದ್ದೇವೆ. ನಾವೆಲ್ಲರೂ ಒಂದೇ ರೀತಿಯಾಗಿ ಯೋಚಿಸುತ್ತಿದ್ದೇವೆ, ನಾವು ಏಕತೆಯನ್ನು ಕಂಡುಕೊಂಡಿದ್ದೇವೆ’’ ಎನ್ನುತ್ತಾರೆ.
ಆಕೆಯ ಅತ್ತಿಗೆ ಅಮ್ರೀನ್ ಬೇಗಂ ಗೃಹಿಣಿಯಾಗಿದ್ದು, ಇದೇ ಮೊದಲ ಬಾರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಅವರು ಕೂಡಾ ನುಝತ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸುತ್ತಾರೆ. ‘‘ನಮಗೆ ನವಭಾರತ ಬೇಕಿಲ್ಲ. ಪ್ರತಿಯೊಬ್ಬರೂ ಜೊತೆಜೊತೆಯಾಗಿ ಬಾಳುತ್ತಿದ್ದಂತಹ ಹಳೆಯ ಭಾರತವೇ ನಮಗೆ ಬೇಕಿದೆ’’ ಎಂದರು.
ಎನ್‌ಆರ್‌ಸಿ-ಸಿಎಎ-ಎನ್‌ಪಿಆರ್ ವಿರುದ್ಧದ ಚಳವಳಿ ಮಹಾನಗರಗಳನ್ನೂ ಮೀರಿ ವ್ಯಾಪಿಸಿದೆ. ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ, ಬಿಹಾರದ ಗಯಾ ಹಾಗೂ ಪಟ್ನಾದಲ್ಲಿ, ತೆಲಂಗಾಣದ ಹೈದರಾಬಾದ್‌ನಂತಹ ನಗರಗಳಲ್ಲಿ ಮಹಿಳೆಯರು ಶಾಹೀನ್ ಬಾಗ್ ಮಾದರಿಯ ಪ್ರತಿಭಟನೆಯನ್ನು ಆರಂಭಿಸುವ ನಿರ್ಧಾರವನ್ನು ಘೋಷಿಸಿದ್ದಾರೆ. ಪೊಲೀಸ್ ಹಿಂಸಾಚಾರದಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಉತ್ತರಪ್ರದೇಶದಲ್ಲಿ ಧರಣಿ ನಡೆಸುತ್ತಿದ್ದ ಮಹಿಳೆಯರನ್ನು ಚದುರಿಸಲಾಗಿದೆ. ತಮ್ಮ ಉಪಸ್ಥಿತಿಯಿಂದಾಗಿ ಪೊಲೀಸರು ಪ್ರತಿಭಟನಾನಿರತರ ಮೇಲೆ ಅತಿರೇಕದಿಂದ ವರ್ತಿಸಲಾರರೆಂಬ ಭರವಸೆಯಿಂದ ಕೆಲವೆಡೆ ಮಹಿಳೆಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಆದರೆ ದಿಲ್ಲಿಯಂತೆ ಕೋಲ್ಕತಾದಲ್ಲಿಯೂ ಮಹಿಳೆಯರು ಪ್ರತಿಭಟನೆಯ ಉಸ್ತುವಾರಿಯನ್ನು ಕೈಗೆತ್ತಿಕೊಂಡಿದ್ದರು. ಪಾರ್ಕ್ ಸರ್ಕಸ್ ಮೈದಾನದ ಮೊದಲ ದಿನದಂದು ಸುಮಾರು 60 ಮಹಿಳೆಯರಿದ್ದರೆಂದು ಫರ್ಹತ್ ಇಸ್ಲಾಮ್ ಅಂದಾಜಿಸಿದ್ದಾರೆ. ಆದರೆ ಜನವರಿ 12ರ ರಾತ್ರಿ ಹೊತ್ತಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹಿಳೆಯರ ಸಂಖ್ಯೆ 5 ಸಾವಿರ ದಾಟಿತು. ಬೆಳಗ್ಗೆ ಹಾಗೂ ಮಧ್ಯಾಹ್ನದ ಹೊತ್ತಲ್ಲಿ ಜನಜಂಗುಳಿ ಕ್ಷೀಣಿಸಿದರೂ, ಸಂಜೆಯ ಹೊತ್ತಿಗೆ ಹೆಚ್ಚುತ್ತಿತ್ತು. ಕಲಾವಿದರು, ವಿದ್ಯಾರ್ಥಿಗಳು, ಅರೆಕಾಲಿಕ ಪ್ರತಿಭಟನಾಕಾರರು ಹಾಗೂ ಪಾರ್ಕ್ ಸರ್ಕಸ್ ಪ್ರದೇಶದ ನಿವಾಸಿಗಳು ಕೂಡಾ ಆಗಮಿಸುತ್ತಿದ್ದರು. ‘‘ಆಝಾದಿ’’ ಹಾಗೂ ‘‘ಅಮ್ರಾ ಕಾಗೊಝ್ ದೇಖಾಬೊ ನಾ’’ (ನಾವು ನಮ್ಮ ದಾಖಲೆಪತ್ರಗಳನ್ನು ತೋರಿಸುವುದಿಲ್ಲ) ಎಂಬ ಘೋಷಣೆಗಳನ್ನು ಕೂಗುವುದರ ಜೊತೆ ಬೀದಿ ನಾಟಕಗಳನ್ನು ಆಡುತ್ತಿದ್ದರು ಹಾಗೂ ಜನಜಾಗೃತಿಯ ಹಾಡುಗಳನ್ನು ಹಾಡುತ್ತಿದ್ದರು.
ಸುಮಾರು 25 ಮಂದಿ ಮಹಿಳೆಯರು ದಿನವಿಡೀ ಇಡೀ ಪ್ರತಿಭಟನಾ ಸಭೆಯ ಸುತ್ತ ಕಟ್ಟೆಚ್ಚರದ ನಿಗಾವಿರಿಸುತ್ತಾರೆ. ಫರ್ಹತ್ ಇಸ್ಲಾಮ್ ಕೂಡಾ ಈ ಗುಂಪಿನ ಭಾಗವಾಗಿದ್ದಾರೆ. ಪರ್ವೀನ್, ಅಮ್ರೀನ್ ಬೇಗಂ ಹಾಗೂ ಆಕೆಯ ತಾಯಿ ನೂರ್‌ಜಹಾನ್ ಬೇಗಂ ಕೂಡಾ ಒಂದೇ ಕುಟುಂಬದಂತೆ ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಈ ಮಹಿಳೆಯರ ತಂಡವು ಅಝ್-ಝುಮರ್ ಸಂಸ್ಥೆಗೆ ಸೇರಿದವರಾಗಿದ್ದಾರೆ. ಅದರ ಮಾಲಕಿ ಅಸ್ಮತ್ ಝಬೀನ್ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ತರಗತಿಗಳನ್ನು ನಡೆಸುತ್ತಿದ್ದಾರೆ. ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಕಾರ್ಯಾಗಾರಗಳನ್ನು ಕೂಡಾ ನಡೆಸುತ್ತಿದ್ದಾರೆ. ಆಧಾರ್ ಹಾಗೂ ಮತದಾರರ ಗುರುತುಚೀಟಿಗಳನ್ನು ಅಪ್‌ಡೇಟ್ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಆಂದೋಲನವನ್ನು ಕೂಡಾ ಆಯೋಜಿಸಿದ್ದರು. ‘‘ಎನ್‌ಆರ್‌ಸಿ ಗಣತಿ ವೇಳೆ ನಾವು ನಮ್ಮ ದಾಖಲೆಗಳನ್ನು ಪ್ರದರ್ಶಿಸುವುದಿಲ್ಲ. ಆದರೆ ಜವಾಬ್ದಾರಿಯುತ ನಾಗರಿಕರಾಗಿ ನಾವು ನಮ್ಮ ಆಧಾರ್ ಹಾಗೂ ಮತದಾರರ ಗುರುತುಚೀಟಿಗಳನ್ನು ಅಪ್‌ಡೇಟ್ ಮಾಡಿರುತ್ತೇವೆ’’ ಎಂದು ಫರ್ಹತ್ ಇಸ್ಲಾಮ್ ಹೇಳುತ್ತಾರೆ.
ಡಿಸೆಂಬರ್ 15ರಂದು ವ್ಯಾಪಕ ಪೊಲೀಸ್ ದೌರ್ಜನ್ಯಕ್ಕೆ ಸಾಕ್ಷಿಯಾದ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯವು ಶಾಹೀನ್‌ಬಾಗ್‌ಗೆ ತೀರಾ ಹತ್ತಿರದಲ್ಲಿದೆ. ಆಸುಪಾಸಿನ ನಿವಾಸಿಗಳ ಜೊತೆ ವಿಶ್ವವಿದ್ಯಾನಿಲಯವು ಆತ್ಮೀಯವಾದ ನಂಟನ್ನು ಹೊಂದಿತ್ತು. ‘‘ನಮ್ಮ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದ ಆನಂತರ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ’’ ಎಂದು ಪ್ರತಿಭಟನಾನಿರತ ಮಹಿಳೆಯೊಬ್ಬರು ತಿಳಿಸಿದ್ದಾರೆ. ‘‘ಬಹುತೇಕ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದಾರೆ. ನನ್ನ ಮಕ್ಕಳು ವಿಶ್ವವಿದ್ಯಾನಿಲಯಕ್ಕೆ ಹೋಗುತ್ತಾರೆ ಹಾಗೂ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾರೆ. ಆದರೆ ಅಲ್ಲಿ ನಮ್ಮ ಮಕ್ಕಳು ಸುರಕ್ಷಿತರಲ್ಲದಿರುವುದು ನಮಗೆ ಕಂಡುಬಂದಿದೆ’’ ಎಂದು ಆಕೆ ಹೇಳುತ್ತಾರೆ.
ಶಾಹೀನ್‌ಬಾಗ್ ಹಾಗೂ ಪಾರ್ಕ್ ಸರ್ಕಸ್ ಮೈದಾನದ ಪ್ರತಿಭಟನೆಗಳು ಎರಡು ವಿಭಿನ್ನ ಆಡಳಿತಗಳನ್ನು ಎದುರಿಸುತ್ತಿವೆ. ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಚರ್ಚೆಯಲ್ಲಿ ಅತ್ಯಂತ ಜಾಗರೂಕತೆಯ ಹೇಳಿಕೆ ನೀಡುತ್ತದೆ. ವಿಧಾನಸಭಾ ಚುನಾವಣೆ ಹತ್ತಿರಬಂದಿರುವುದರಿಂದ ಅದು ಯಾವುದೇ ಮತದಾರರಿಂದ ದೂರವಾಗಲು ಬಯಸುತ್ತಿಲ್ಲ. ಆದರೆ, ದಿಲ್ಲಿ ಪೊಲೀಸರು ಸಿಎಎ ಪ್ರತಿಭಟನಾಕಾರರ ವಿರುದ್ಧ ಅಸಹನೆ ಹೊಂದಿರುವ ಕೇಂದ್ರ ಸರಕಾರದ ನಿಯಂತ್ರಣದಲ್ಲಿದ್ದಾರೆ. ನಗರದ ಹಲವೆಡೆ ದಿಲ್ಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಬಹಿರಂಗವಾಗಿ ದ್ವೇಷವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಬಿಜೆಪಿ ಆಯೋಜಿಸಿದ್ದ ರ್ಯಾಲಿಯನ್ನು ನಿಷೇಧಿಸಲು ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರಕಾರವು ನಿಷೇಧಾಜ್ಞೆ ಹೇರಿತು. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯ ಪ್ರಬಲ ವಿರೋಧಿಯಾದ ಮಮತಾ ಬ್ಯಾನರ್ಜಿಯವರು, ಅದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ.
ಕೋಲ್ಕತಾದ ಪಾರ್ಕ್ ಸರ್ಕಸ್ ಮೈದಾನದಲ್ಲಿ ಕನಿಷ್ಠ ಪಕ್ಷ ಜನವರಿ 22ರವರೆಗೂ ಧರಣಿಯನ್ನು ಮುಂದುವರಿಸುವ ಯೋಜನೆಯನ್ನು ಮಹಿಳೆಯರು ಹೊಂದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅಂದು ಜೊತೆಯಾಗಿ ನಡೆಸಲಿದೆ. ನ್ಯಾಯಾಲಯದ ತೀರ್ಪನ್ನು ಅವಲಂಬಿಸಿ ಪ್ರತಿಭಟನೆಯ ಮುಂದಿನ ನಡೆ ನಿರ್ಧಾರವಾಗಲಿದೆ.
ಪ್ರತಿಭಟನೆಯ ಬಗ್ಗೆ ನಿಲೋಫರ್ ಭಾರೀ ಆಶಾವಾದ ಇರಿಸಿಕೊಂಡಿದ್ದಾರೆ. ‘‘ಈ ಪ್ರತಿಭಟನೆಯಿಂದ ಯಾವ ಪರಿಣಾಮವಾಗಲಿದೆಯೆಂದು ನನಗೆ ತಿಳಿದಿಲ್ಲ. ಆದರೆ ಮುಂದಿನ ಪೀಳಿಗೆಗಾಗಿ ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿದ್ದೇವೆಯೆಂಬ ತೃಪ್ತಿ ನನ್ನ ಹೃದಯದಲ್ಲಿದೆ’’ ಎಂದು ಅವರು ಭಾವುಕರಾಗಿ ಹೇಳುತ್ತಾರೆ.
ಕೃಪೆ: scroll.in