ಹೆಚ್ಚುತ್ತಿರುವ ‘ಹಿಂಸೆ’ಯ ವಿರುದ್ಧದ ಪ್ರತಿರೋಧ
ಈ ದೇಶದಲ್ಲಿ ಧಾರ್ಮಿಕ ಮೂಲಭೂತವಾದಿಗಳ ಪ್ರಾಯೋಜಿತ ಹಿಂಸೆ ಏರಿಕೆ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕೇಂದ್ರ ಸರಕಾರದ ಬಹುಪಾಲು ಜನವಿರೋಧಿ ನೀತಿಗಳು ಜನರಿಗೆ ಹಿಂಸೆಯಾಗಿ ರೂಪಾಂತರಗೊಂಡಿವೆ. ಹೀಗಾಗಿ ಹಿಂಸೆ ಎಂದರೆ ಕಣ್ಣಿಗೆ ಕಾಣುವ ಕೇವಲ ದೈಹಿಕ ದಂಡನೆ ಎಂದು ಭಾವಿಸಬೇಕಿಲ್ಲ. ಹಿಂಸೆಯು ಬಹುರೂಪಿಯಾಗಿದೆ.
ಈಚೆಗೆ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರೋಧ ವ್ಯಾಪಕವಾಗಿದೆ. ದಿನದಿಂದ ದಿನಕ್ಕೆ ಈ ಪ್ರತಿರೋಧ ಹೆಚ್ಚುತ್ತಿದೆ. ಮತ್ತೊಂದೆಡೆ ಸಿಎಎ ಕಾಯ್ದೆ ಗೆಜೆಟ್ ನೋಟಿಫಿಕೇಷನ್ ಆಗಿ ಅಧಿಕೃತವಾಗಿ ಕೇಂದ್ರ ಸರಕಾರ ಜಾರಿ ಮಾಡಿದೆ. ಈ ವಿರೋಧವನ್ನು ಕುರಿತಂತೆ ಬಹು ಬಗೆಯ ವಿಶ್ಲೇಷಣೆಗಳು ನಡೆಯುತ್ತಿವೆ. ಸಿಎಎ/ಎನ್‌ಆರ್‌ಸಿ ಪರ ಮತ್ತು ವಿರೋಧದ ಎರಡೂ ಬಗೆಯ ಚರ್ಚೆಗಳಿವೆ. ಈ ಸಂವಾದಗಳಲ್ಲಿ ಈಗಿನ ದೇಶವ್ಯಾಪಿ ಪ್ರತಿರೋಧಕ್ಕೆ ಸಿಎಎ/ಎನ್‌ಆರ್‌ಸಿ ಜೊತೆಗೆ ಅಸಂಖ್ಯ ಕಾರಣಗಳೂ ಜೊತೆಗೂಡಿವೆ. ಹಾಗಾಗಿ ಈ ಇಡಿಯಾದ ಪ್ರತಿರೋಧವನ್ನು ಮತ್ತೊಂದು ಮಗ್ಗುಲಿನಿಂದ ನೋಡುವ ಅಗತ್ಯವಿದೆ. ಎಕಾನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿಯ (ಇಪಿಡಬ್ಲು) ಸಂಪಾದಕರಾದ ಗೋಪಾಲ್‌ಗುರು ಡಿಸೆಂಬರ್ 21 ರ ಸಂಚಿಕೆಯ ಸಂಪಾದಕೀಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ ಪ್ರತಿಭಟನೆಗಳನ್ನು ವಿಶ್ಲೇಷಿಸುತ್ತ ಮೇಲ್ನೋಟಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಾದರೂ ಆಳದಲ್ಲಿ ಈ ಇಡೀ ಹೋರಾಟವೇ ಈ ದೇಶದಲ್ಲಿ ಹೆಚ್ಚುತ್ತಿರುವ ಆತಂಕ, ಅಭದ್ರತೆ, ಅನಿಶ್ಚಿತತೆ ಹೆಚ್ಚುತ್ತಿರುವುದರ ಪ್ರತಿಬಿಂಬವಾಗಿದೆ. ಈ ಎಲ್ಲವನ್ನೂ ಒಳಗೊಂಡಂತೆ ಈ ದೇಶದಲ್ಲಿ ಹೆಚ್ಚುತ್ತಿರುವ ‘ಹಿಂಸೆ’ಯ ವಿರುದ್ಧ ‘ಶಾಂತಿಯನ್ನು ನೆಲೆಗೊಳಿಸಲು’ ಮಾಡುತ್ತಿರುವ ಜನ ಹೋರಾಟ ಎನ್ನುತ್ತಾರೆ.
ಸಿಎಎ/ಎನ್‌ಆರ್‌ಸಿ ವಿರೋಧ ಮತ್ತು ಪರದ ಆಚೆ ನಿಂತು ನೋಡಿದಾಗ ಈ ಮೇಲಿನ ಮಾತು ವಾಸ್ತವ ಅನ್ನಿಸುತ್ತದೆ. ಈ ದೇಶದಲ್ಲಿ ಧಾರ್ಮಿಕ ಮೂಲಭೂತವಾದಿಗಳ ಪ್ರಾಯೋಜಿತ ಹಿಂಸೆ ಏರಿಕೆ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕೇಂದ್ರ ಸರಕಾರದ ಬಹುಪಾಲು ಜನವಿರೋಧಿ ನೀತಿಗಳು ಜನರಿಗೆ ಹಿಂಸೆಯಾಗಿ ರೂಪಾಂತರಗೊಂಡಿವೆ. ಹೀಗಾಗಿ ಹಿಂಸೆ ಎಂದರೆ ಕಣ್ಣಿಗೆ ಕಾಣುವ ಕೇವಲ ದೈಹಿಕ ದಂಡನೆ ಎಂದು ಭಾವಿಸಬೇಕಿಲ್ಲ. ಹಿಂಸೆಯು ಬಹುರೂಪಿಯಾಗಿದೆ. ಧರ್ಮದ ಹೆಸರಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗಳು, ರೈತರ ಆತ್ಮಹತ್ಯೆಗಳು, ಗಂಡಾಳ್ವಿಕೆ ಸಮಾಜವು ನಡೆಸುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕೊಲೆಗಳು, ದಲಿತ ದಮನಿತ, ಆದಿವಾಸಿ, ಅಲೆಮಾರಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮತ್ತು ಕೊಲೆಗಳು. ಅಭಿವೃದ್ಧಿಯ ಹೆಸರಿನಲ್ಲಿ ನಿರಾಶ್ರಿತರಾದವರ ಅತಂತ್ರದ ಜೀವನ, ನಿರುದ್ಯೋಗ ಹೆಚ್ಚಾಗಿ ಈ ದೇಶದ ಯುವಜನರ ಬದುಕಿನಲ್ಲುಂಟಾದ ತಲ್ಲಣಗಳು, ನೋಟ್ ರದ್ಧತಿ, ಜಿಎಸ್‌ಟಿ ಮುಂತಾದ ಯೋಜನೆಗಳಿಂದಾಗಿ ನಿರ್ಗತಿಕರಾಗಿರುವುದು, ಆರ್ಥಿಕ ದುಸ್ಥಿತಿಯಿಂದಾಗಿ ಜನರ ತೀರಾ ಕೆಳಮಟ್ಟದ ಜೀವನ ನಿರ್ವಹಣೆ, ನಗರ ನಕ್ಸಲ್ ಎಂದು ಪ್ರಗತಿಪರರನ್ನು ಬಂಧಿಸುತ್ತಿರುವುದು, ಹೀಗೆ ಬಹು ಬಗೆಯ ಹಿಂಸೆಯ ಪಟ್ಟಿ ಬೆಳೆಯುತ್ತದೆ. ಇದೀಗ ಸಂವಿಧಾನದ ಸಮಾನತೆಯ ಮೂಲ ಆಶಯಕ್ಕೆ ವಿರುದ್ಧವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ‘ದಾಖಲೆ ರಹಿತ’ ಜನರು ನಾಗರಿಕತ್ವವನ್ನೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ಕಾರಣಕ್ಕೆ ದೇಶಭ್ರಷ್ಟವಾಗಿ ಬದುಕುವ ಭಯ ಹಿಂಸೆಯ ತೀವ್ರತೆಯನ್ನು ಹೆಚ್ಚಿಸಿದೆ. ಮೇಲೆ ಹೇಳಿದ ಎಲ್ಲಾ ಬಗೆಯ ಹಿಂಸೆಗಳ ವಿರುದ್ಧದ ಜನರ ಸಿಟ್ಟು ಏಕೀಕರಣ ಗೊಂಡ ಫಲವೇ ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧ ದೇಶವ್ಯಾಪಿಯಾಗಿದೆ.
ಇದೇ ಜನವರಿ 9 ರಂದು ಕೇಂದ್ರ ಸರಕಾರದ ನ್ಯಾಷನಲ್ ಕ್ರೈಮ್ ರಿಪೋರ್ಟ್ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ಮೂರು ಸಂಪುಟದ 1,496 ಪುಟಗಳ 2018 ರಅಪರಾಧ ವರದಿಯು ಈ ದೇಶದಲ್ಲಿ ಹೆಚ್ಚುತ್ತಿರುವ ಬಹುರೂಪಿ ಹಿಂಸೆಗೆ ಕನ್ನಡಿ ಹಿಡಿಯುತ್ತಿದೆ. ಹೆಚ್ಚುತ್ತಿರುವ ಬಡತನ ಮತ್ತು ನಿರುದ್ಯೋಗದ ಕಾರಣ ಭಾರತದಲ್ಲಿ ಪ್ರತಿ ದಿನ ಒಂಬತ್ತು ಗಂಡಸರು, ಒಬ್ಬ ಮಹಿಳೆಯನ್ನು ಒಳಗೊಂಡಂತೆ ಹತ್ತು ಜನರು ಸಾವನ್ನಪ್ಪುತ್ತಿದ್ದಾರೆ. ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಶೇ. 4.8ರಷ್ಟು ಹೆಚ್ಚಾಗಿದೆ. 2018ರಲ್ಲಿ 2,700 ಜನರು ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡತನದಿಂದಾಗಿ 2018 ರಲ್ಲಿ ಪ್ರತಿ ದಿನಕ್ಕೆ ಮೂವರು ಸಾವನ್ನಪ್ಪಿದ್ದಾರೆ.
ಕೊಲೆಯ ಪ್ರಮಾಣ 2017ಕ್ಕಿಂತ ಶೇ.1.3 ರಷ್ಟು ಹೆಚ್ಚಾಗಿದೆ. 2018ರ ಮಾರ್ಚ್‌ನಲ್ಲಿ ಲೋಕಸಭೆಗೆ ಹೋಮ್ ಮಿನಿಸ್ಟ್ರೀ ನೀಡಿದ ವರದಿ ಪ್ರಕಾರ 9 ರಾಜ್ಯಗಳಲ್ಲಿ 2014 ರಿಂದ ಮಾರ್ಚ್ 3, 2018ರಲ್ಲಿ 45 ಜನರು ಗುಂಪು ಹತ್ಯೆಗೆ ಒಳಗಾಗಿದ್ದಾರೆ. ಕನಿಷ್ಠ 217 ಜನರನ್ನು ಈ ಕಾರಣಕ್ಕೆ ಬಂಧಿಸಲಾಗಿದೆ. ಹೀಗೆ ಒಂದೊಂದೆ ಸಂಗತಿಗಳನ್ನು ಕೂಲಂಕಶವಾಗಿ ಪರಿಶೀಲಿಸಿದರೆ 2014 ರಿಂದ 2018 ರ ತನಕದ ಎನ್‌ಸಿಆರ್‌ಬಿ ವರದಿಗಳು ಅಂಕೆ ಸಂಖ್ಯೆ ಸಮೇತ ಈ ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆ, ಅಭದ್ರತೆ, ಅನಿಶ್ಚಿತತೆಯನ್ನು ಕೂಲಂಕಶವಾಗಿ ಮನದಟ್ಟು ಮಾಡುತ್ತಿವೆ.
ಅಂತೆಯೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗಲೂ ‘ದಾಖಲೆ ರಹಿತ’ ಜನರ ಹಿಂಸೆಯೂ ಹೆಚ್ಚಾಗಲಿದೆ. ಈ ದೇಶದಲ್ಲಿ 30 ದಶಲಕ್ಷ ಭೂಹೀನ ಜನರಿದ್ದಾರೆ ಅವರಲ್ಲಿ ಭೂದಾಖಲೆಗಳಿಲ್ಲ, 17 ದಶಲಕ್ಷ ವಸತಿಹೀನ ಜನರಿದ್ದಾರೆ ಅವರಲ್ಲಿ ವಸತಿ ದಾಖಲೆಗಳಿಲ್ಲ. 2011 ರ ಜನಗಣತಿ ಪ್ರಕಾರ 80 ಲಕ್ಷ ಆದಿವಾಸಿ ಜನರಿದ್ದಾರೆ. ಅವರ ಬಗೆಗೆ ಸರಕಾರದಲ್ಲೇ ಸರಿಯಾದ ದಾಖಲೆಗಳಿಲ್ಲ, 1970 ರ ಸರಕಾರಿ ದಾಖಲೆಗಳ ಪ್ರಕಾರ ದೇಶದ ಸಾಕ್ಷರತೆ ಶೇ. 34ರಷ್ಟಿತ್ತು. ಆಗ ಶೇ. 66ರಷ್ಟು ಜನರು ನಿರಕ್ಷರರಾಗಿದ್ದರು ಾಗಾಗಿ ಅಷ್ಟು ಜನರಲ್ಲಿ ಶಾಲಾ ದಾಖಲಾತಿಗಳಿಲ್ಲ. ಹೀಗೆ ಇವರೆಲ್ಲಾ ಸಿಎಎ/ಎನ್‌ಆರ್‌ಸಿ ವ್ಯಾಪ್ತಿಯಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಇದೆಲ್ಲವನ್ನು ನೋಡಿದರೆ ಮೇಲೆ ವಿವರಿಸಿದ ಬಹುರೂಪಿ ಹಿಂಸೆಯು ತನ್ನ ತುಟ್ಟತುದಿಯನ್ನು ಮುಟ್ಟಿ ವಿಜೃಂಬಿಸುವ ತಯಾರಿಯಲ್ಲಿದೆ. ಇದೆಲ್ಲರ ಸಾಂಕೇತಿಕವಾಗಿ ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಮುಸುಕುಧಾರಿಗಳ ಹಲ್ಲೆ ಮತ್ತೊಂದು ತುದಿಯಲ್ಲಿದೆ.
ಹೀಗಾಗಿ ದೇಶವ್ಯಾಪಿ ಸಿಎಎ ವಿರುದ್ಧದ ಹೋರಾಟ ಈ ನೆಲದಲ್ಲಿ ಶಾಂತಿಯನ್ನು ನೆಲೆಗೊಳಿಸಲು, ಹಿಂಸೆಗೆ ಒಳಗಾದವರೆಲ್ಲರ ಒಕ್ಕೊರಲ ಧ್ವನಿಯಾಗಿದೆ. ಪ್ರಭುತ್ವ ಹಿಂಸೆಯ ಪ್ರಮಾಣ ಹೆಚ್ಚಾಗಲು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಕಾರಣವಾದಂತೆ, ಜನರ ಪ್ರತಿರೋಧದ ಪ್ರಮಾಣವೂ ಹೆಚ್ಚಾಗಲಿದೆ.