ಗಲಭೆ ಕೋರರನ್ನು ಬಂಧಿಸಲು ಹೊಸ ಎನ್‌ಆರ್‌ಸಿ....!
ಮಂಗಳೂರಿನ ಪೊಲೀಸ್ ಗೋಲಿಬಾರ್ ಸುದ್ದಿ ದೇಶಾದ್ಯಂತ ಹರಡುತ್ತಿದ್ದಂತೆಯೇ ಕಾಸಿ ಮಂಗಳೂರಿಗೆ ಧಾವಿಸಿದ. ಆಯುಕ್ತರ ಕಚೇರಿಯಲ್ಲಿ ಕೂತಿರುವವರ ಮುಖದಲ್ಲಿ ಹರ್ಷ ಇದ್ದಿರಲೇ ಇಲ್ಲ.
‘‘ಯಾಕೆ ಸಾರ್...ಬೇಜಾರು...’’
‘‘ಏನು ಇಲ್ಲ.... ನಮ್ಮ ಇಲಾಖೆಯ ಪೊಲೀಸರಿಗೆ ಸರಿಯಾಗಿ ಕೋವಿ ಹಿಡಿಯುವುದಕ್ಕೂ ಬರುವುದಿಲ್ಲ ಎನ್ನುವುದು ದೇಶದ ಮುಂದೆ ಸಾಬೀತಾಗಿ ಹೋಯಿತಲ್ಲ ಅದಕ್ಕೆ ಬೇಜಾರು...ನೋಡ್ರೀ ಅವರು ಆಕಾಶಕ್ಕೆ ಗುರಿ ಇಟ್ಟು ಗುಂಡು ಹಾರಿಸಿದ್ದಾರೆ. ಆದರೆ ಗುರಿ ತಪ್ಪಿ ಅವೆಲ್ಲ ಜನರ ಎದೆಗೆ ಬಿದ್ದಿದೆ’’ ಅನಾಹುತದ ಕಾರಣವನ್ನು ಅವರು ವಿವರಿಸತೊಡಗಿದರು.
‘‘ಸಾರ್ ವೀಡಿಯೊದಲ್ಲಿ ಒಂದು ಬೀಳ್ಳಿ ಸಾರ್ ಒಂದು ಬೀಳ್ಳಿ ಸಾರ್...ಎಂದು ಯಾರೋ ಹೇಳ್ತಾ ಇದ್ದರಲ್ಲ....’’
‘‘ನೋಡ್ರೀ...ಪಕ್ಕದಲ್ಲೇ ಮಾವಿನ ಮರವೊಂದಿತ್ತು....ಗುಂಡು ಹೊಡೆದು ಅದನ್ನು ಬೀಳಿಸುವ ಪ್ರಯತ್ನ ಮಾಡ್ತಾ ಇದ್ದರು...’’
‘‘ಸಾರ್...ಈಗ ಮಾವಿನಕಾಯಿ ಎಲ್ಲಿ ಸಾರ್? ಬೀಳೋದಕ್ಕೆ...’’ ಕಾಸಿ ಕೇಳಿದ.
‘‘ಮಾವಿಕಾಯಿ ಅಲ್ಲ, ಬಹುಶಃ ಕುಂಬಳಕಾಯಿ....’’
‘‘ಸಾರ್ ಕುಂಬಳಕಾಯಿ ಬಳ್ಳಿಯಲ್ಲಿ ಆಗುವುದು ಸಾರ್...ಮರದಲ್ಲಿ ಆಗಲ್ಲ....’’ ಕಾಸಿ ಮತ್ತು ಗೊಂದಲಗೊಂಡ.
‘‘ನೋಡ್ರೀ...ಕುಂಬಳಕಾಯಿ ಬಳ್ಳಿ ಮಾವಿನ ಮರಕ್ಕೆ ಸುತ್ತಿಕೊಂಡು ಮೇಲೆ ಹೋಗಿತ್ತು. ಆ ಕುಂಬಳಕಾಯಿ ಬೀಳಿಸುವುದಕ್ಕೆ ಪೊಲೀಸರು ಪ್ರಯತ್ನಿಸುತ್ತಿದ್ದರು....ಅದನ್ನೇ ತಿರುಚಿ ವೀಡಿಯೊ ಮಾಡಿದ್ದಾರೆ....’’
‘‘ಸಾರ್...ಕೇರಳದಿಂದ ಸಾವಿರಾರು ಜನರು ಬಂದಿದ್ದಾರಲ್ಲ...ಆ ಸಾವಿರಾರು ಜನರಿರುವ ವೀಡಿಯೊ ಏನಾದರೂ ಇದೆಯಾ ಸಾರ್...?’’
‘‘ನೋಡ್ರೀ ಕೇರಳದಿಂದ ಬಂದಿರೋದು ನಿಜ. ಅವರ ಬಟ್ಟೆಗಳನ್ನೆಲ್ಲ ಗುರುತಿಸಲಾಗಿದೆ. ಅದನ್ನು ಹೊಲಿದ ದರ್ಜಿಗಳನ್ನು ಸಂಪರ್ಕಿಸುವ ಕೆಲಸ ನಡೆದಿದೆ. ದರ್ಜಿಗಳು ನೀಡಿರುವ ಮಾಹಿತಿಗಳ ಅನುಸಾರವಾಗಿ ನಾವು ಕೇರಳದ ಜನರನ್ನು ಬಂಧಿಸಲಿದ್ದೇವೆ. ಇದಕ್ಕಾಗಿ ವಿವಿಧ ದರ್ಜಿಗಳನ್ನು ಸಂಪರ್ಕಿಸಲು ಪೊಲೀಸರ ತಂಡವನ್ನು ನೇಮಕ ಮಾಡಲಾಗಿದೆ’’
‘‘ಆದರೂ ಅವರನ್ನು ಬಂಧಿಸುವುದು ಹೇಗೆ ಸಾರ್?’’
‘‘ನೋಡಿ ಮೊದಲು ನಾವು ಕೇರಳ ಜನರು ಮಂಗಳೂರು ಗಲಭೆಯಲ್ಲಿ ಭಾಗವಹಿಸಿದ್ದಾರೆಯೇ ಎನ್ನುವುದನ್ನು ಸಾಬೀತು ಪಡಿಸಲು ಎನ್‌ಆರ್‌ಸಿ ಜಾರಿಗೊಳಿಸಲು ನಿರ್ಧರಿಸಿದ್ದೇವೆ. ರಾಜ್ಯ ಸರಕಾರವೂ ಇದಕ್ಕೆ ಮಾನ್ಯತೆ ನೀಡಿದೆ. ಕೇರಳ ಸರಕಾರ ಸಹಕರಿಸಬೇಕು ಅಷ್ಟೇ’’
‘‘ಅದು ಹೇಗೆ ಸಾರ್... ಸ್ವಲ್ಪ ವಿವರಿಸಿ’’ ಕಾಸಿ ಕುತೂಹಲದಿಂದ ಕೇಳಿದ.
‘‘ನೋಡ್ರಿ...ಡಿಸೆಂಬರ್‌ನಲ್ಲಿ ತಾವು ಮಂಗಳೂರಿಗೆ ಬಂದಿಲ್ಲ ಎನ್ನುವುದರ ಕುರಿತಂತೆ ಇಡೀ ಕೇರಳದ ಜನರು ದಾಖಲೆಗಳನ್ನು ಒದಗಿಸಬೇಕು. ಯಾರೆಲ್ಲ ದಾಖಲೆಗಳನ್ನು ಒದಗಿಸುವುದಿಲ್ಲವೋ ಅವರೆಲ್ಲ ಮಂಗಳೂರು ಗಲಭೆಯಲ್ಲಿ ಭಾಗವಹಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಅವರೆಲ್ಲರ ಮೇಲೆ ಮಂಗಳೂರು ಗಲಭೆಯಲ್ಲಿ ಭಾಗವಹಿಸಿದ ಆರೋಪಗಳನ್ನು ಲಗತ್ತಿಸಲಾಗುತ್ತದೆ. ಅವರು ಸೂಕ್ತ ದಾಖಲೆಗಳನ್ನು ನೀಡಿ ತಮ್ಮ ನಿರಪರಾಧಿತ್ವವನ್ನು ಸಾಬೀತು ಮಾಡಬೇಕು....’’
‘‘ಸಾರ್ ಇದರಿಂದ ಅಮಾಯಕರಿಗೆ ತೊಂದರೆಯಾಗುವುದಿಲ್ಲವೇ?’’ ಕಾಸಿ ಆತಂಕದಿಂದ ಕೇಳಿದ.
‘‘ಅಮಾಯಕರಿಗೆ ಯಾಕೆ ತೊಂದರೆ....ಕೇವಲ ಗಲಭೆಯಲ್ಲಿ ಭಾಗವಹಿಸಿದವರಿಗೆ ಮಾತ್ರ ತೊಂದರೆಯಾಗುತ್ತದೆ. ತಾವು ಮಂಗಳೂರಿಗೆ ಬಂದಿಲ್ಲ ಎನ್ನುವ ದಾಖಲೆ ತೋರಿಸಲು ಅವರಿಗೆ ಏನು ಸಮಸ್ಯೆ...’’
‘‘ಸಾರ್ ಬೇರೆ ಬೇರೆ ಕಾರಣಕ್ಕೆ ಮಂಗಳೂರಿಗೆ ಬಂದವರ ಗತಿ....’’ ಕಾಸಿ ಕೇಳಿದ.
‘‘ತಾವು ಯಾವ ಕಾರಣಕ್ಕೆ ಬಂದಿದ್ದೇವೆ ಎನ್ನುವುದರ ಕುರಿತಂತೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಈಗ ಅಂಗಡಿಗೆ ವ್ಯಾಪಾರಕ್ಕೆ ಬಂದಿದ್ದರೆ ಆ ಅಂಗಡಿಯಿಂದ ವ್ಯಾಪಾರ ಮಾಡಿದ ಬಿಲ್‌ಗಳು ಇರಬೇಕು. ಕನಿಷ್ಠ 2,000 ರೂಪಾಯಿಯ ವ್ಯಾಪಾರವನ್ನಾದರೂ ಅವರು ಮಾಡಿರಬೇಕು. ಅದಕ್ಕಿಂತ ಕಡಿಮೆ ವ್ಯಾಪಾರ ಮಾಡಿದವರ ಬಿಲ್‌ಗಳನ್ನು ಪರಿಗಣಿಸಲಾಗುವುದಿಲ್ಲ....’’
‘‘ಸಾರ್ ದಾಖಲೆಗಳಿಲ್ಲದವರ ಕತೆ...’’
‘‘ದಾಖಲೆಗಳಿಲ್ಲದೇ ಇರುವುದರಿಂದ ಅವರು ಮಂಗಳೂರಿಗೆ ಗಲಭೆ ನಡೆಸುವುದಕ್ಕಾಗಿಯೇ ಬಂದವರು ಎನ್ನುವುದು ಸಾಬೀತಾಗುತ್ತದೆ...ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ...’’
‘‘ಸಾರ್...ಈ ಎನ್‌ಆರ್‌ಸಿಗೆ ಕೇರಳ ಸರಕಾರ ಸಹಕರಿಸಬಹುದೇ?’’
‘‘ನೋಡಿ ದೇಶದ ಹಿತಕ್ಕಾಗಿ ಸಹಕರಿಸಬೇಕು. ಇದರಿಂದ ಕೇರಳ ಸರಕಾರಕ್ಕೂ ಲಾಭವಾಗುತ್ತದೆ. ಅಲ್ಲಿ ನಡೆಯುವ ಎಲ್ಲ ಗಲಭೆಗಳನ್ನು ಇವರ ತಲೆಗೆ ಕಟ್ಟಿ ನ್ಯಾಯಾಲಯಕ್ಕೆ ಹಾಜರು ಪಡಿಸಬಹುದು. ಸಹಕರಿಸದೇ ಇದ್ದರೆ ಮಂಗಳೂರು ಗಲಭೆಗೆ ಕೇರಳ ಸರಕಾರ ನುಸುಳುಕೋರರನ್ನು ಕಳುಹಿಸಿದೆ ಎಂದು ಭಾವಿಸಬೇಕಾಗುತ್ತದೆ. ಇದು ಸಂಪೂರ್ಣ ಕೇರಳ ಸರಕಾರ ಪ್ರಾಯೋಜಿಸಿದ ಗಲಭೆ ಎನ್ನುವುದು ಸಾಬೀತಾಗುತ್ತದೆ....’’
‘‘ಸಾರ್ ಹೀಗೆ ಬಂಧಿಸಿದವರ ಮೇಲೆ ಏನೇನು ಕೇಸು ದಾಖಲಿಸಲಾಗುತ್ತದೆ....’’ ಕಾಸಿ ಆತಂಕದಿಂದ ಕೇಳಿದ.
‘‘ನೋಡಬೇಕು...ಕೆಲವರ ಮೇಲೆ ಹತ್ಯೆ ಸಂಚು ದಾಖಲಿಸಬೇಕಾಗಬಹುದು. ಯಾವ ನಾಯಕರ ವಿರುದ್ಧ ಕೊಲೆ ಸಂಚು ರೂಪಿಸಲಾಗಿದೆ ಎನ್ನುವ ವಿವರವನ್ನು ಮುಖ್ಯಮಂತ್ರಿಯಿಂದ ಪಡೆದು ಬಳಿಕ ಅರ್ಹ ಸಂಚುಕೋರರನ್ನು ಆರಿಸಿ ಅವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ...’’
‘‘ಮಂಗಳೂರಿನಲ್ಲಿ ಕಾನೂನು ವ್ಯವಸ್ಥೆ ಸರಿಯಾಗಿರಿಸಲು ಏನು ಕ್ರಮ ತೆಗೆದುಕೊಳ್ಳುತ್ತೀರಿ...?’’
‘‘ಏನಿಲ್ಲ ಗುರಿ ತಪ್ಪದಂತೆ ಕೋವಿ ಚಲಾಯಿಸಲು ಎಲ್ಲ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ....’’
ಹಣೆಯ ಬೆವರು ಒರೆಸಿಕೊಂಡ ಕಾಸಿ ‘‘ಸಾರ್...ಇಲ್ಲಿ ಸಾಕು.... ಬರುತ್ತೇನೆ’’ ಎಂದು ಹೊರಡಲನುವಾದ.
‘‘ಹಾಗೆ ಹೊರಟರೆ ಹೇಗೆ....ಗಲಭೆ ದಿನ ನೀವು ಮಂಗಳೂರಿನಲ್ಲಿ ಇರಲಿಲ್ಲ ಎನ್ನುವುದನ್ನು ಸಾಬೀತು ಮಾಡಿ ಹೋಗಿ....’’ ಎಂದದ್ದೇ ಸರಿ ಪತ್ರಕರ್ತ ಎಂಜಲು ಕಾಸಿ ಅಲ್ಲಿಂದ ಓಡ ತೊಡಗಿದ.