ಪೌರತ್ವ ಒಂದು ಅವಲೋಕನ
ಭಾರತದ ಸಂವಿಧಾನವು ಪಾಕಿಸ್ತಾನದಿಂದ ವಲಸೆ ಬಂದಿರುವ ಎಲ್ಲಾ ಧರ್ಮೀಯರಿಗೂ ಈ ದೇಶದ ನಾಗರಿಕ ಎಂಬುದಾಗಿ ತೀರ್ಮಾನಿಸುತ್ತದೆ. ಹಾಗಾಗಿ ಸಂವಿಧಾನವು ಪಾಕಿಸ್ತಾನದಿಂದ ಬಂದಿರುವ ಯಾರಿಗೂ ಪೌರತ್ವವನ್ನು ನಿರಾಕರಿಸುವುದಿಲ್ಲ. ಪಾಕಿಸ್ತಾನದಿಂದ ಬಂದವರು ಈ ದೇಶದ ನಾಗರಿಕರಲ್ಲ ಎಂಬುದು ಸಂವಿಧಾನ ವಿರೋಧಿ ಹೇಳಿಕೆಯಾಗಿರುತ್ತದೆ. ಅಲ್ಲದೆ ಭಾರತದಿಂದ ಹೊರಗೆ ವಾಸಿಸುತ್ತಿರುವ ಅನಿವಾಸಿ ಭಾರತೀಯರೂ ಭಾರತ ಸರಕಾರ ಅಧಿನಿಯಮ 1935ರಲ್ಲಿ ವಿವರಿಸುವಂತೆ ಭಾರತದ ನಿವಾಸಿ ಎಂದು ನೋಂದಣಿ ಮಾಡಿಕೊಂಡಿದ್ದರೂ ಅಂತಹವರಿಗೂ ನಮ್ಮ ಸಂವಿಧಾನ ಅನುಚ್ಚೇದ 8ರಡಿಯಲ್ಲಿ ಭಾರತದ ಪೌರ ಎಂದು ಭಾವಿಸುತ್ತದೆ.
ಭಾಗ-1
ಇಡೀ ದೇಶ ಬೆಂಕಿಯಲ್ಲಿ ಬೇಯುತ್ತಿದೆ. ಇತ್ತೀಚಿನ ಒಂದು ಕಾನೂನಿನ ತಿದ್ದುಪಡಿ ದೇಶದಲ್ಲಿ ಕಿಚ್ಚು ಹಚ್ಚಿದೆ. ತಿದ್ದುಪಡಿ ಕಾಯ್ದೆಯ ಪರ ಹಾಗೂ ವಿರೋಧದ ಚಳವಳಿಗಳು ದೇಶದ ಸಾಮಾನ್ಯ ಜನರನ್ನು ದಿಕ್ಕುತಪ್ಪಿಸುತ್ತಿವೆ. ಮುಸ್ಲಿಮ್ ಪರ ಹಾಗೂ ವಿರೋಧ ಹೋರಾಟವನ್ನು ರಾಜಕೀಯ ಪಕ್ಷಗಳು ಪೋಷಿಸಿಕೊಂಡು ಹೋಗುತ್ತಿವೆ. ಕೇಂದ್ರ ಸರಕಾರ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ ಎಂಬಿತ್ಯಾದಿ ಸಮಜಾಯಿಷಿ ನೀಡಿದರೂ ಕೂಡ ಚಳವಳಿ ತೀವ್ರವಾಗುತ್ತಿದೆ. ಹಾಗಾಗಿ ದೇಶದ ಸಂವಿಧಾನವನ್ನು ಅರಿಯುವ ಹಾಗೂ ತಿದ್ದುಪಡಿ ಕಾಯ್ದೆಯ ಕುರಿತು ಚರ್ಚೆಗಳಾಗದ ಹೊರತು ಈ ಚಳವಳಿಗೆ ತಾರ್ಕಿಕ ಅಂತ್ಯ ಕಾಣಿಸುವುದು ಕಷ್ಟ ಸಾಧ್ಯವಾಗಿದೆ ಹಾಗೂ ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ 2019(ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯು ಜನವಿರೋಧಿಯೋ ಅಥವಾ ಜನಪರವೆನ್ನುವುದನ್ನು ಅರಿಯಲು ಸಾಧ್ಯ. ಪ್ರತೀ ದಿವಸ ನಾವು ಪತ್ರಿಕೆಗಳಲ್ಲಿ ‘ಪೌರತ್ವ’ ಪದವನ್ನು ನೋಡುತ್ತಿದ್ದೇವೆ. ಹಾಗಾದರೆ ಪೌರತ್ವ ಎಂದರೆ ಏನು, ಒಂದು ದೇಶದ ಪೌರ ಅಂದರೆ ಆತನ ಹಕ್ಕು ಹಾಗೂ ಕರ್ತವ್ಯಗಳು ಏನು ಎಂಬುದನ್ನು ತಿಳಿಯಬೇಕಾಗುತ್ತದೆ. ಸಾಮಾನ್ಯವಾಗಿ ಪೌರತ್ವ ಎಂದರೆ ಒಂದು ದೇಶದ ನಾಗರಿಕ ಸ್ಥಾನ ಅಥವಾ ಸ್ಥಿತಿ ಎಂದಾಗುತ್ತದೆ. ಪೌರತ್ವವನ್ನು ಕಾನೂನಾತ್ಮಕವಾಗಿ ನೋಡಿದಾಗ ಅದರ ವ್ಯಾಪ್ತಿ ವಿಸ್ತಾರಗೊಳ್ಳುತ್ತದೆ. ಪೌರತ್ವ ಎಂಬುದು ಒಂದು ದೇಶ ಹಾಗೂ ಒಬ್ಬ ವ್ಯಕ್ತಿಯ ಸಂಬಂಧವಾಗಿದ್ದು, ಆ ವ್ಯಕ್ತಿ ತನ್ನ ದೇಶಕ್ಕೆ ನಿಷ್ಠನಾಗಿರುವುದು ಅದರ ಬದಲಿಗೆ ತನ್ನ ಭದ್ರತೆಯನ್ನು ಪಡೆದುಕೊಳ್ಳುತ್ತಾನೆ. ಪೌರತ್ವವು ಅಂತಹ ವ್ಯಕ್ತಿಗೆ ಸ್ವಾತಂತ್ರದ ಸ್ಥಿತಿಯನ್ನು ನೀಡುವುದರ ಜೊತೆಗೆ ಕರ್ತವ್ಯಗಳನ್ನೂ ನೀಡುತ್ತದೆ. ಆದರೆ ಯಾರು ದೇಶದ ಪೌರನಾಗಿರದೆ ಯಾವ ದೇಶದಲ್ಲಿ ವಾಸಮಾಡುತ್ತಿರುತ್ತಾರೋ ಅವನಿಗೆ ಕೆಲವು ರೀತಿಯ ಹಕ್ಕು, ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಪೌರತ್ವವು ನಿರ್ಬಂಧಿಸುತ್ತದೆ.
ದೇಶದ ನಾಗರಿಕನಿಗೆ ಪೌರತ್ವದ ಮೂಲಕ ಸಂಪೂರ್ಣ ರಾಜಕೀಯದ ಹಕ್ಕು, ಮತದಾನ ಮಾಡುವ ಹಕ್ಕು ಮತ್ತು ಸಾರ್ವಜನಿಕವಾಗಿ ವ್ಯವಹಾರಗಳನ್ನು ನಡೆಸುವ ಹಕ್ಕನ್ನು ದಯಪಾಲಿಸಲಾಗುತ್ತದೆ. ನಾಗರಿಕನಾದವನು ಚುನಾವಣೆಯಲ್ಲಿ ಭಾಗವಹಿಸುವ, ಮತದಾನ ಮಾಡುವ ಹಾಗೂ ದೇಶವನ್ನು ಮುನ್ನಡೆಸುವ ಹಕ್ಕು ಪೌರತ್ವದ ಮೂಲಕವೇ ಪಡೆಯಬೇಕಾಗುತ್ತದೆ. ಪೌರತ್ವವಿಲ್ಲದೆ ಯಾರನ್ನೂ ದೇಶದ ನಾಗರಿಕನೆಂದು ಪರಿಗಣಿಸಲು ಸಾಧ್ಯವಿರುವುದಿಲ್ಲ. ಪೌರತ್ವ ಪಡೆದ ನಾಗರಿಕನು ಆ ದೇಶಕ್ಕೆ ನಿಷ್ಠೆ, ಕಂದಾಯ ಪಾವತಿ ಮಾಡುವ ಹಾಗೂ ಸೇನೆಯಲ್ಲಿ ಸೇವೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಪೌರತ್ವದ ಕಲ್ಪನೆಯು ಪುರಾತನ ಗ್ರೀಸ್‌ನ ನಗರ ಹಾಗೂ ನಗರ ರಾಜ್ಯಗಳಲ್ಲಿ ಹುಟ್ಟಿಕೊಂಡಿತು. ಮೊದಲಿಗೆ ಅಲ್ಲಿನ ಚರ ಹಾಗೂ ಸ್ಥಿರ ಸೊತ್ತುಗಳನ್ನು ಹೊಂದಿರುವವರಿಗೆ ಮಾತ್ರ ಪೌರತ್ವವನ್ನು ನೀಡಲಾಗಿತ್ತು ಆದರೆ ಮಹಿಳೆಯರು, ಗುಲಾಮರು ಅಥವಾ ಸಮುದಾಯಗಳ ಬಡಜನರಿಗೆ ಪೌರತ್ವನ್ನು ನಿರಾಕರಿಸಲಾಗಿತ್ತು. ಗ್ರೀಕ್ ನಗರ ರಾಜ್ಯಗಳಲ್ಲಿ ಪೌರತ್ವವು ಮತದಾನ ಮಾಡುವ ಹಾಗೂ ಕಂದಾಯಗಳನ್ನು ಪಾವತಿಸುವ ಹಾಗೂ ಸೇನೆಯಲ್ಲಿ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿತ್ತು. ಆನಂತರದಲ್ಲಿ ಆದ ಬೆಳವಣಿಗೆಯಲ್ಲಿ ಪೌರತ್ವದಲ್ಲಿ ಹಲವಾರು ಬದಲಾವಣೆಗಳಾಗಿದ್ದು ಕಾನೂನಿನ ಮೂಲಕ ವಿಶೇಷ ಅಧಿಕಾರಗಳನ್ನು ನೀಡಲಾಯಿತು. ಇನ್ನು ಇಂಗ್ಲೆಂಡ್‌ನ ಪೌರತ್ವ ನೀಡಿಕೆಯ ಇತಿಹಾಸವನ್ನು ಪರಿಶೀಲಿಸುವುದಾದರೆ, ಇಂಗ್ಲೆಂಡಿನ ಪೌರತ್ವವನ್ನು ಪಡೆಯುವ ಮಾರ್ಗಗಳೆಂದರೆ, ದೇಶದ ನಿರ್ದಿಷ್ಟ ಭೂಭಾಗಲ್ಲಿ ಜನಿಸುವುದು, ನಾಗರಿಕನ ಪಿತೃಗಳಿಂದ ಪಡೆಯುವುದು, ನಾಗರಿಕನ ಮದುವೆ ಮತ್ತು ದೇಶೀಕರಣವಾಗಿರುತ್ತದೆ. ಮೊದಲಿಗೆ ಇಂಗ್ಲೆಂಡಿನಲ್ಲಿ ಮಹಿಳೆಯರು ಹಾಗೂ ಆಕೆಯ ಮಕ್ಕಳ ಪೌರತ್ವವು ಆಕೆಯ ಗಂಡನ ಪೌರತ್ವವನ್ನು ಅವಲಂಬಿಸಿರುತ್ತಿತ್ತು. ಎರಡನೇ ಜಾಗತಿಕ ಯುದ್ಧದ ಪರಿಣಾಮದಿಂದಾಗಿ ಹಾಗೂ 1920ರ ನಂತರದಲ್ಲಿ ಪುರುಷ ಹಾಗೂ ಮಹಿಳೆಯು ಸಮಾನರು ಎಂಬ ವಾದ ಏರ್ಪಟ್ಟಿದ್ದರಿಂದ ಪೌರತ್ವದ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಂಡಿದ್ದು, ಮಹಿಳೆ ಹಾಗೂ ಮಕ್ಕಳಿಗೆ ಅವರ ಪೌರತ್ವವನ್ನು ಪಡೆಯುವ ಆಯ್ಕೆಯನ್ನು ಅವರಿಗೆ ನೀಡಲಾಗಿರುತ್ತದೆ.
ಡಾ.ಬಿ.ಆರ್.ಅಂಬೇಡ್ಕರ್‌ರವರ ದೃಷ್ಟಿಕೋನದಲ್ಲಿ ಪೌರತ್ವ:
ಭಾರತದಲ್ಲಿ ಪೌರತ್ವನ್ನು ರೂಪಿಸುವಲ್ಲಿ ಶ್ರಮವಹಿಸಿದವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ಅವರ ಬರಹಗಳು ಹಾಗೂ ಭಾಷಣಗಳಲ್ಲಿ ಪೌರತ್ವದ ಮಹತ್ವದ ಬಗ್ಗೆ ವಿವರಿಸುತ್ತಾ, ಪೌರತ್ವದಿಂದ ಹಲವಾರು ಪ್ರಯೋಜನಗಳನ್ನು ದೇಶದ ನಾಗರಿಕರಿಗೆ ನೀಡ ಬಯಸುತ್ತಾರೆ. ಅವರ ಪ್ರಕಾರ ಪೌರತ್ವ ಎಂದರೆ
‘‘ಪೌರತ್ವವು ಹಲವಾರು ಹಕ್ಕುಗಳ ಗೊಂಚಲಾಗಿರುತ್ತದೆ. ಅವುಗಳೆಂದರೆ 1) ವೈಯಕ್ತಿಕ ಸ್ವಾತಂತ್ರ, 2) ವೈಯಕ್ತಿಕ ಭದ್ರತೆ, 3) ಖಾಸಗಿ ಸೊತ್ತುಗಳನ್ನು ಹೊಂದುವ ಹಕ್ಕು, 4) ಕಾನೂನಿನ ದೃಷ್ಟಿಯಲ್ಲಿ ಸಮಾನತೆ 5) ಆತ್ಮಸಾಕ್ಷಿಯ ಸ್ವಾತಂತ್ರ 6) ಅಭಿವ್ಯಕ್ತಿ ಸ್ವಾತಂತ್ರ 7) ಸಭೆ ಸೇರುವ ಹಕ್ಕು 8) ದೇಶದ ಸರಕಾರದಲ್ಲಿ ಭಾಗವಹಿಸುವಿಕೆಯ ಹಕ್ಕು, 9) ರಾಜ್ಯದ ಅಡಿಯಲ್ಲಿ ವ್ಯವಹಾರ ನಡೆಸುವ ಹಕ್ಕು. ಸರಕಾರದಲ್ಲಿ ಭಾಗವಹಿಸುವಿಕೆ ಹಾಗೂ ರಾಜ್ಯದಲ್ಲಿ ವ್ಯವಹಾರ ಮಾಡಬಹುದಾದ ಮುಖ್ಯವಾದ ಎರಡು ಹಕ್ಕುಗಳು ಪೌರತ್ವದಿಂದ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ’’. ಭಾರತದಂತಹ ಪ್ರಜಾಪ್ರಭುತ್ವದ ಮಟ್ಟಿಗೆ ದೇಶದ ಸರಕಾರದಲ್ಲಿ ಭಾಗವಹಿಸುವ ಮತ್ತ್ತು ಸರಕಾರವನ್ನು ಪ್ರತಿನಿಧಿಸುವ ಹಕ್ಕು ಪೌರತ್ವದಿಂದಲೇ ಲಭಿಸುವಂತಹುದು.
ಭಾರತೀಯ ಪೌರತ್ವ ಹಾಗೂ ಅದರ ಮಹತ್ವ ಭಾರತದಲ್ಲಿ ಪೌರತ್ವದ ಕುರಿತ ಚರ್ಚೆ ಮೊದಲಿಗೆ ಪ್ರಾರಂಭವಾಗಿದ್ದು, ಸಂವಿಧಾನದ ರಚನೆಯ ಕಾಲಘಟ್ಟದಲ್ಲಿ. ಡಾ.ಬಿ.ಆರ್.ಅಂಬೇಡ್ಕರ್ ದೇಶದಲ್ಲಿನ ವಿವಿಧ ಧರ್ಮದ, ಜಾತಿಯ ಹಾಗೂ ಆರ್ಥಿಕ ಅಸಮಾನತೆಯ ಸಮಾಜವನ್ನು ಗಮನದಲ್ಲಿರಿಸಿಕೊಂಡು ಹಾಗೂ ಸ್ವತಂತ್ರ ಭಾರತ ಮುನ್ನಡೆಯಬೇಕಾದ ಹಾದಿಯನ್ನು ಸ್ಪಷ್ಟಪಡಿಸುತ್ತಾ, ಸಂವಿಧಾನದಲ್ಲಿ ಭಾರತೀಯರಿಗೆ ಪೌರತ್ವ ನೀಡುವ ವ್ಯವಸ್ಥೆಯನ್ನು ಕಟ್ಟಿಕೊಡುತ್ತಾರೆ. ಭಾರತದ ಸಂವಿಧಾನದ ಭಾಗ-2ರಲ್ಲಿನ 5 ರಿಂದ 11ನೇ ಅನುಚ್ಛೇದದಲ್ಲಿ ಯಾರು ಯಾರು ಭಾರತದ ಪೌರತ್ವವನ್ನು ಪಡೆಯಬಹುದು ಎಂಬುದನ್ನು ವಿವರಿಸಿದ್ದಾರೆ. ಭಾರತದ ಸಂವಿಧಾನದ 5ನೇ ಅನುಚ್ಛೇದದ ಮೂಲಕ ಸಂವಿಧಾನದ ಪ್ರಾರಂಭದಲ್ಲಿ ಹೇಗೆ ನಾಗರಿಕತ್ವವನ್ನು ಪಡೆಯಬಹುದು ಎಂಬುದನ್ನು ವಿವರಿಸಲಾಗಿದೆ. ಸಂವಿಧಾನದ ಪ್ರಾರಂಭದ ದಿವಸಗಳಲ್ಲಿ ಯಾರು ಭಾರತದ ರಾಜ್ಯಕ್ಷೇತ್ರದಲ್ಲಿ ಎ) ಹುಟ್ಟಿರುವವರು, ಬಿ) ತನ್ನ ತಾಯಿಯಾಗಲಿ, ತಂದೆಯಾಗಲೀ ಭಾರತದ ರಾಜ್ಯಕ್ಷೇತ್ರದಲ್ಲಿ ಹುಟ್ಟಿದ್ದರೆ ಹಾಗೂ ಸಿ) ಸಂವಿಧಾನದ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ ಐದು ವರ್ಷಗಳಿಗೆ ಕಡಿಮೆ ಇಲ್ಲದಷ್ಟು ಕಾಲದಿಂದ ಭಾರತದ ರಾಜ್ಯಕ್ಷೇತ್ರದಲ್ಲಿ ಸಾಮಾನ್ಯ ನಿವಾಸಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯೂ ಭಾರತದ ನಾಗರಿಕ ಎಂದು ಪರಿಗಣಿಸುತ್ತದೆ. ಆದರೆ ಎಲ್ಲಿಯೂ ಕೂಡ ಪೌರತ್ವವನ್ನು ಈ ಅನುಚ್ಛೇದದಡಿಯಲ್ಲಿ ಜಾತಿ ಧರ್ಮದ ಆಧಾರದಲ್ಲಿ ಪಡೆಯಬಹುದು ಎಂಬುದನ್ನು ವಿವರಿಸುವುದಿಲ್ಲ.
ಬದಲಿಗೆ ಯಾರು ಯಾರು ಈ ದೇಶದಲ್ಲಿ ಹುಟ್ಟಿರುತ್ತಾರೋ, ಯಾರ ಪೂರ್ವಜರು ಈ ದೇಶದಲ್ಲಿ ಹುಟ್ಟಿರುತ್ತಾರೋ ಹಾಗೂ ಸಂವಿಧಾನ ಜಾರಿಗೆ ಬರುವ 5 ವರ್ಷಗಳಿಗೆ ಮುಂಚೆ ಯಾರು ಭಾರತದಲ್ಲಿ ವಾಸಿಸುತ್ತಿರುತ್ತಾರೋ ಅಂತಹವರು ಎಲ್ಲರೂ ಈ ದೇಶದ ಪೌರರಾಗಿರುತ್ತಾರೆ. ಇತ್ತೀಚೆಗಿನ ಬೆಳವಣಿಗೆಯೆಂದರೆ ಹಿಂದೂ ಧರ್ಮದ ಅನುಯಾಯಿಗಳು ಈ ದೇಶದ ಮೂಲನಿವಾಸಿಗಳು ಹಾಗೂ ಮುಸ್ಲಿಮರು ವಲಸೆ ಬಂದವರು ಎಂಬುದನ್ನು ಜನರಲ್ಲಿ ಬಿತ್ತುತ್ತಿದ್ದಾರೆ. ಭಾರತದ ವಿಭಜನೆಗೆ ಮೊದಲಿನಿಂದಲೂ ಮುಸ್ಲಿಮರು ಭಾರತಲ್ಲಿ ಹುಟ್ಟಿದವರೇ ಹಾಗೂ ಅವರೂ ಸಹ ದೇಶದ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿದ್ದವರೇ. ರಾಜಕೀಯ ಕಾರಣಗಳಿಗಾಗಿ ಭಾರತ ಹಾಗೂ ಪಾಕಿಸ್ತಾನ ದೇಶಗಳ ವಿಭಜನೆಯಾದಾಗ ಸುಮಾರಷ್ಟು ಮುಸ್ಲಿಮರು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದಾರೆ ಹಾಗೂ ಅಲ್ಲಿಂದ ಹಿಂದೂಗಳೂ ಭಾರತದ ಭೂಭಾಗಕ್ಕೆ ಬಂದಿದ್ದಾರೆ ಹಾಗೂ ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗದೆ ಈ ನೆಲದಲ್ಲಿ ಅವರ ನೆನಪನ್ನು ಬಿಟ್ಟುಹೋಗಲಾಗದೇ ಈ ದೇಶದಲ್ಲಿಯೇ ಉಳಿದುಕೊಂಡವರೇ ಹೊರತು ಪಾಕಿಸ್ತಾನದಿಂದ ಬಂದವರಲ್ಲ. ಪಾಕಿಸ್ತಾನದ ರಚನೆಯಾದಾಗ ಭಾರತಕ್ಕೆ ವಲಸೆ ಬಂದವರಿಗೂ ಸಹ ದೇಶದ ಪೌರತ್ವ ನೀಡಬೇಕಾದ ಮಹತ್ವವನ್ನು ಅರಿತು ಸಂವಿಧಾನದ ಅನುಚ್ಚೇದ 6 ರಲ್ಲಿ ಈ ರೀತಿ ವಿವರಿಸುತ್ತಾರೆ.
ಪಾಕಿಸ್ತಾನದಿಂದ ಭಾರತ ರಾಜ್ಯಕ್ಷೇತ್ರಕ್ಕೆ ಯಾರೇ ವಲಸೆ ಬಂದಿದ್ದರೂ ಸಹ ಎ) ಅವನಾಗಲೀ, ಅವನ ತಾಯಿ ಅಥವಾ ತಂದೆಯಾಗಲಿ ಅಥವಾ ಅಜ್ಜಿ ಅಥವಾ ತಾತನಾಗಲೀ ಭಾರತ ಸರಕಾರದ ಅಧಿನಿಯಮ 1935 ರಲ್ಲಿ ಪರಿಭಾಷಿಸುವಂತೆ ಭಾರತದಲ್ಲಿ ಹುಟ್ಟಿದ್ದರೇ, ಬಿ) 1) ಅಂತಹ ವ್ಯಕ್ತಿಯು 1948ನೆಯ ಇಸವಿ ಜುಲೈ ತಿಂಗಳ ಹತ್ತೊಂಬತ್ತನೇ ದಿನಾಂಕಕ್ಕಿಂತ ಮುಂಚಿತವಾಗಿ ವಲಸೆ ಬಂದು ದೇಶದಲ್ಲಿ ಸಾಮಾನ್ಯ ನಿವಾಸಿಯಾಗಿದ್ದರೆ, 2)ದಿನಾಂಕ: 19.7.1948ರಂದು ಅಥವಾ ತರುವಾಯ ಭಾರತಕ್ಕೆ ವಲಸೆ ಬಂದಿದ್ದು, ಭಾರತದ ನಾಗರಿಕನೆಂದು ನೋಂದಾಯಿಸಿಕೊಂಡಿದ್ದರೆ, ಆತನೂ ಸಹ ಸಂವಿಧಾನ ಜಾರಿಯಾದಂದಿನಿಂದಲೂ ಭಾರತದ ನಾಗರಿಕನಾಗಿರುತ್ತಾರೆ. ಭಾರತದ ಸಂವಿಧಾನವು ಪಾಕಿಸ್ತಾನದಿಂದ ವಲಸೆ ಬಂದಿರುವ ಎಲ್ಲಾ ಧರ್ಮೀಯರಿಗೂ ಸಹ ಈ ದೇಶದ ನಾಗರಿಕ ಎಂಬುದಾಗಿ ತೀರ್ಮಾನಿಸುತ್ತದೆ. ಹಾಗಾಗಿ ಸಂವಿಧಾನವು ಪಾಕಿಸ್ತಾನದಿಂದ ಬಂದಿರುವ ಯಾರಿಗೂ ಸಹ ಪೌರತ್ವವನ್ನು ನಿರಾಕರಿಸುವುದಿಲ್ಲ. ಪಾಕಿಸ್ತಾನದಿಂದ ಬಂದವರು ಈ ದೇಶದ ನಾಗರಿಕರಲ್ಲ ಎಂಬುದು ಸಂವಿಧಾನ ವಿರೋಧಿ ಹೇಳಿಕೆಯಾಗಿರುತ್ತದೆ. ಅಲ್ಲದೆ ಭಾರತದಿಂದ ಹೊರಗೆ ವಾಸಿಸುತ್ತಿರುವ ಅನಿವಾಸಿ ಭಾರತೀಯರೂ ಸಹ ಭಾರತ ಸರಕಾರ ಅಧಿನಿಯಮ 1935ರಲ್ಲಿ ವಿವರಿಸುವಂತೆ ಭಾರತದ ನಿವಾಸಿ ಎಂದು ನೋಂದಣಿ ಮಾಡಿಕೊಂಡಿದ್ದರೂ ಸಹ ಅಂತಹವರಿಗೂ ನಮ್ಮ ಸಂವಿಧಾನ ಅನುಚ್ಚೇದ 8ರಡಿಯಲ್ಲಿ ಭಾರತದ ಪೌರ ಎಂದು ಭಾವಿಸುತ್ತದೆ. ಆದರೆ ಯಾವುದೇ ವ್ಯಕ್ತಿ ತನ್ನ ಸ್ವಇಚ್ಛೆಯಿಂದ ಯಾವುದೇ ವಿದೇಶಿ ರಾಜ್ಯದ ನಾಗರಿಕತ್ವವನ್ನು ಪಡೆದಿದ್ದರೆ ಅಂತಹ ವ್ಯಕ್ತಿಗೆ ಅನುಚ್ಛೇದ 5, 6, ಹಾಗೂ 8 ರಂತೆ ಪೌರತ್ವವನ್ನು ನೀಡದೆ ಆತ ಭಾರತದ ನಾಗರಿಕನಲ್ಲ ಎಂದು ಸಾರುತ್ತದೆ. ಭಾರತದ ಸಂವಿಧಾನದಲ್ಲಿ ತಿಳಿಸಿರುವಂತೆ ಭಾರತದಲ್ಲಿ ಹುಟ್ಟಿರುವ, ವಾಸಿಸುತ್ತಿರುವ, ವಲಸೆ ಬಂದಿರುವ ಹಾಗೂ ಅನಿವಾಸಿಗಳಾಗಿರುವ ಎಲ್ಲರೂ ಸಹ ಭಾರತದ ಪೌರರಾಗಿರುತ್ತಾರೆ. ಸಂವಿಧಾನವು ಅಂತಹ ನಾಗರಿಕರಿಗೆ ಭಧ್ರತೆ, ಮತ ಚಲಾಯಿಸುವ, ಚುನಾವಣೆಯಲ್ಲಿ ಭಾಗವಹಿಸುವ ಹಾಗೂ ಸರಕಾರದಲ್ಲಿ ಭಾಗವಹಿಸುವ ಹಕ್ಕುಗಳಲ್ಲದೆ, ಮೂಲಭೂತ ಹಕ್ಕುಗಳು, ಆಸ್ತಿ ಹಕ್ಕು, ವ್ಯವಹಾರ ನಡೆಸುವ ಹಕ್ಕುಗಳಲ್ಲದೆ ಇನ್ನೂ ಮುಂತಾದ ಹಲವಾರು ಹಕ್ಕುಗಳನ್ನು ನೀಡುವ ಮೂಲಕ ಭಾರತದ ಪೌರನಿಗೆ ಹಲವಾರು ಸವಲತ್ತುಗಳನ್ನು ಒದಗಿಸುತ್ತದೆ.
ಪೌರತ್ವ ಕಾಯ್ದೆ 1955 ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ 2019ರ ವೈರುಧ್ಯಗಳು
ಸ್ವತಂತ್ರ ಭಾರತದ ಸಂವಿಧಾನದಲ್ಲಿ ವಿವರಿಸಲಾದ ಪೌರತ್ವದ ಹಕ್ಕು ಸಂವಿಧಾನದ ಜಾರಿಯ ಸಂದರ್ಭದಲ್ಲಿನ ಪೌರತ್ವದ ಬಗ್ಗೆ ವಿವರಿಸಿದರೆ, 1955ರ ಪೌರತ್ವ ಕಾಯ್ದೆಯು ಸಂವಿಧಾನದ ಜಾರಿಯ ನಂತರದ ಪೌರತ್ವದ ಹಕ್ಕಿನ ಬಗ್ಗೆ ವಿವರಿಸುತ್ತದೆ. ಸದರಿ ಕಾಯ್ದೆಯನ್ನು ಸಂವಿಧಾನದ 11 ಅನುಚ್ಛೇಧದಡಿಯಲ್ಲಿ ಕೇಂದ್ರ ಸರಕಾರಕ್ಕೆ ನೀಡಲಾಗಿರುವ ವಿಶೇಷಾಧಿಕಾರ ಬಳಸಿ ಪೌರತ್ವವನ್ನು ಅನುಷ್ಠಾನಕ್ಕೆ ತರುವ ಉದ್ದೇಶದಿಂದ 30ನೇ ಡಿಸೆಂಬರ್ 1955ರಂದು ಜಾರಿಗೆ ತರಲಾಯಿತು. 1955ರ ಪೌರತ್ವ ಕಾಯ್ದೆಯ ಪ್ರಕಾರ ಈ ಕೆಳಕಂಡಂತೆ ಪೌರತ್ವವನ್ನು ಪಡೆಯಬಹುದಾಗಿದೆ (2004ರ ತಿದ್ದುಪಡಿಯಂತೆ);
1. ಹುಟ್ಟಿನಿಂದ ಪೌರತ್ವ: 3ನೇ ಡಿಸೆಂಬರ್ 2004 ರಂದು ಅಥವಾ ನಂತರದಲ್ಲಿ ಹುಟ್ಟಿದ ವ್ಯಕ್ತಿಯ ತಂದೆ ಹಾಗೂ ತಾಯಿ ಇಬ್ಬರೂ ಭಾರತದ ನಿವಾಸಿಗಳಾಗಿದ್ದರೆ ಅಥವಾ ಪಿತೃಗಳಲ್ಲಿ ಯಾರಾದರೊಬ್ಬರು ಭಾರತದ ನಿವಾಸಿಯಾಗಿದ್ದು ಆದರೆ ಮತ್ತೊಬ್ಬರು ಜನನದ ಕಾಲದಲ್ಲಿ ಅಕ್ರಮ ವಲಸಿಗರಾಗಿರದಿದ್ದರೆ;
2) ಸಭ್ಯತೆಯ ಆಧಾರದಲ್ಲಿ ಪೌರತ್ವ: 1992 ರವರೆವಿಗೂ, ಯಾವ ವ್ಯಕ್ತಿ ಭಾರತದ ಹೊರಗೆ ಜನಿಸಿರುತ್ತಾನೆಯೋ ಮತ್ತು ಭಾರತದ ತಂದೆಯನ್ನು ಹೊಂದಿದ್ದರೆ, ಅಂತಹವರು ಭಾರತದ ಪೌರತ್ವ ಪಡೆಯಲು ಬಾದ್ಯರಾಗಿರುತ್ತಾರೆ. ಹಾಗಿದ್ದಾಗ್ಯೂ ಆತ/ಆಕೆ ಡಿಸೆಂಬರ್ 2004ರ ನಂತರದಲ್ಲಿ ಜನಿಸಿದ್ದು, ಜನಿಸಿದ 1 ವರ್ಷದೊಳಗೆ ಜನನ ನೋಂದಣಿಯಾಗಿದ್ದರೆ ಅಂತಹವರನ್ನೂ ಭಾರತದ ನಾಗರಿಕ ಎಂದು ಪರಿಗಣಿಸಲಾಗುತ್ತದೆ.
3) ನೋಂದಣಿಯಂತೆ ಪೌರತ್ವ: ಕೆಲವು ನಿಯಮಾವಳಿ ಹಾಗೂ ನಿಯಂತ್ರಣಕ್ಕೆ ಒಳಪಟ್ಟು, ಭಾರತದ ಸಂಜಾತನಾದ ವ್ಯಕ್ತಿ ಅಥವಾ ಮಹಿಳೆ ಭಾರತದ ನಾಗರಿಕನ್ನು ವಿವಾಹವಾಗಿದ್ದರೆ ಅಂತಹವರು ಭಾರತದ ನಾಗರಿಕರು ಎಂದು ನೋಂದಣಿ ಮಾಡಿಕೊಳ್ಳಬಹುದಾಗಿದೆ.
4) ಸ್ವಾಭಾವಿಕತೆಯ ಆಧಾರದಲ್ಲಿ ಪೌರತ್ವ: ಯಾವ ವಿದೇಶಿ ಪ್ರಜೆ ನೋಂದಣಿ ಮಾಡಿದ ತನ್ನ ಕೊನೆಯ 12 ತಿಂಗಳು ಹಾಗೂ 14 ವರ್ಷಗಳಲ್ಲಿ ಮೊದಲ 11 ವರ್ಷಗಳ ಕಾಲಕ್ಕೆ ಭಾರತದ ನಿವಾಸಿ ಅಥವಾ ಭಾರತ ಸರಕಾರದ ಸೇವೆಯಲ್ಲಿದ್ದರೆ ಸ್ವಾಭಾವಿಕವಾಗಿ ಪೌರತ್ವ ಪಡೆಯಬಹುದಾಗಿದೆ.
5) ಭೂಭಾಗದಿಂದ ಪೌರತ್ವ: ಯಾವುದೇ ಹೊಸ ಭೂಭಾಗ ಭಾರತದ ಭಾಗವಾದ ಪಕ್ಷದಲ್ಲಿ ಅಂತಹ ಪ್ರದೇಶದ ವ್ಯಕ್ತಿ ಕೂಡ ಭಾರತದ ನಾಗರಿಕ ಎಂಬುದಾಗಿ ಕೇಂದ್ರ ಸರಕಾರ ನಿರ್ಧರಿಸುತ್ತದೆ.
ಮೂಲ ಕಾಯ್ದೆಯಲ್ಲಿ ಕಲಂ 2 ರಡಿಯಲ್ಲಿ ಅಕ್ರಮ ವಲಸಿಗರು ಎಂಬುದಕ್ಕೆ ಸ್ಪಷ್ಟವಾದ ವಿವರಣೆಯನ್ನು ನೀಡಲಾಗಿರುತ್ತದೆ. ಯಾವ ವಿದೇಶಿ ಪ್ರಜೆಯು ಯಾವುದೇ ಕಾನೂನುಬದ್ಧ ದಾಖಲಾತಿಗಳಿಲ್ಲದೆ ಅಥವಾ ಭಾರತ ಪ್ರವೇಶಿಸಲು ಅಗತ್ಯವಾಗಿರುವ ಪಾಸ್ ಪೋರ್ಟ್ ಹಾಗೂ ಪ್ರಯಾಣದ ದಾಖಲಾತಿಗಳಿಲ್ಲದೆ ಅಥವಾ ಭಾರತದ ಕಾನೂನುಗಳಿಗೆ ವಿರುದ್ಧವಾಗಿ ಭಾರತದ ಭೂಭಾಗವನ್ನು ಪ್ರವೇಶಿಸುತ್ತಾನೋ ಹಾಗೂ ಪಾಸ್‌ಪೋರ್ಟ್ ಹಾಗೂ ಪ್ರಯಾಣದ ದಾಖಲಾತಿಗಳಿದ್ದು ಭಾರತದ ಭೂಭಾಗದಲ್ಲಿ ಸಂಚರಿಸಲು ನೀಡಿದ ಅವಕಾಶ ಮುಗಿದಿದ್ದು ಭಾರತದಿಂದ ಹೊರಹೋಗಿಲ್ಲವಾದರೆ ಅಂತಹ ವ್ಯಕ್ತಿಗಳು ಅಕ್ರಮ ವಲಸಿಗರಾಗಿರುತ್ತಾರೆ. ಆದರೆ ಅಕ್ರಮ ವಲಸಿಗರನ್ನು ಮೂಲ ಕಾಯ್ದೆಯಲ್ಲಿ ಯಾವುದೇ ಧಾರ್ಮಿಕ ಹಿನ್ನೆಲೆಯಿಂದಾಗಲಿ ಅಥವಾ ಧರ್ಮದಿಂದಾಗಲಿ ಗುರುತಿಸುವುದಿಲ್ಲ ಹಾಗೂ ವಿದೇಶಿ ಎಂಬ ಪದ ಬಳಕೆಯಲ್ಲಿ ಯಾವುದೇ ದೇಶಗಳನ್ನು ಗುರಿಯಾಗಿರಿಸಿರುವುದಿಲ್ಲ.
ಕಾನೂನಿನಲ್ಲಿ ಎಲ್ಲರೂ ಸಮಾನರು ಎಂಬ ತತ್ವವನ್ನು ಅಕ್ರಮ ವಲಸಿಗರು ಯಾರು ಎಂಬುದನ್ನು ನಿರ್ಧರಿಸುವಲ್ಲಿ ನಾವು ಕಾಣಬಹುದಾಗಿರುತ್ತದೆ. ಆದರೆ ಇತ್ತಿಚೆಗೆ ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ 2019ರಲ್ಲಿ ಮೂಲ ಪೌರತ್ವ ಕಾಯ್ದೆಯ ಕಲಂ 2ಕ್ಕೆ ಬದಲಾವಣೆ ತರಲಾಗಿರುತ್ತದೆ. ಸದರಿ ಕಾಯ್ದೆಯಂತೆ ‘‘ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನಕ್ಕೆ ಸೇರಿದ ಹಿಂಧೂ, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು ಕೇಂದ್ರ ಸರಕಾರದ ನಿಯಮಗಳಿಗೆ, ಪಾಸ್‌ಪೋರ್ಟ್ ಕಾಯ್ದೆ 1920, ಕಲಂ3 (2) ರ ಪೌರತ್ವ ಕಾಯ್ದೆ 1955 ಅಥವಾ ವಿದೇಶಿಗರ ಕಾಯ್ದೆ 1956ರ ನಿಯಮಾವಳಿಗೆ ವಿರುದ್ಧವಾಗಿದ್ದರೂ ಕೂಡ ಅವರನ್ನು ಅಕ್ರಮ ವಲಸಿಗರೆಂದು ಭಾವಿಸಬಾರದು ಹಾಗೂ ಈ 2019ರ ತಿದ್ದುಪಡಿ ಕಾಯ್ದೆಯು ಜಾರಿಗೊಂಡ ದಿವಸದಿಂದ ಮೇಲೆ ತಿಳಿಸಲಾದ ಸಮುದಾಯಕ್ಕೆ ಸೇರಿದ ವಲಸಿಗರು ಭಾರತೀಯ ನಾಗರಿಕರೆಂದು ಪೌರತ್ವ ಕಾಯ್ದೆಯ ಕಲಂ 6ರಡಿಯಲ್ಲಿ ಘೋಷಿಸಿಕೊಳ್ಳಬಹುದು ಎಂಬುದಾಗಿದೆ.
(ಮುಂದುವರಿಯುವುದು)