ಯಾರು ಶ್ರೇಷ್ಠರು?
ಅಜ್ಜಿ ಹೇಳಿದ ಕಥೆ
ಯಾರು ಶ್ರೇಷ್ಠರು?
ಒಂದು ಕಾಡಿನಲ್ಲಿ ಮಾವಿನ ಮರ ಮತ್ತು ಬೇವಿನ ಮರ ಎರಡೂ ಅಕ್ಕಪಕ್ಕದಲ್ಲಿದ್ದವು. ಒಮ್ಮೆ ಸಂಜೆಯ ಸಮಯ ಮಾವಿನ ಮರಕ್ಕೆ ಬೇವಿನ ಮರವನ್ನು ನೋಡಿ ಕುಚೋದ್ಯ ಮಾಡಬೇಕೆನಿಸಿತು. ಅದು ಏನು ಬೇವಣ್ಣಾ. ಆರಾಮಾಗಿದ್ದೀಯೇ?.. ಏನು ಆರಾಮ ಬಿಡಪ್ಪಾ ಮೈ ತುಂಬಾ ಕಹಿಯನ್ನೇ ತುಂಬಿಕೊಂಡಿದ್ದೀಯಾ ಪಾಪ. ಆರಾಮ ಎಲ್ಲಿಂದ ಇರಬೇಕು, ಅದಕ್ಕೆ ಮುಖ ನೋಡು ಬರೀ ಕಹಿಯಾಗಿಯೇ ಕಾಣುತ್ತಿದೆ ಎಂದು ನಗುತ್ತಾ ಹೇಳಿತು.
ಬೇವು ಅಯ್ಯೋ ಮಾವಣ್ಣಾ. ವಿಷವನ್ನೇ ನುಂಗಿ ತನ್ನ ಗಂಟಲಲ್ಲಿ ಸಿಕ್ಕಿಸಿಕೊಂಡಿರುವ ಆ ಶಿವನು 'ನೀಲಕಂಠ' ಎಂದು ಎಲ್ಲರಿಂದಲೂ ಪೂಜಿಸಲ್ಪಡುತ್ತಿಲ್ಲವೇ? ಹಾಗೇ ನಾನೂ ಸಹ ಎಲ್ಲರಿಂದಲೂ ಪೂಜಿಸಲ್ಪಡುತ್ತಾ ದೇವರಿಗೆ ಸಮಾನನಾಗಿದ್ದೇನೆ ಅಲ್ಲವೇ...? ಎಂದಿತು.
ಮಾವು ಅದೇನೋ ಸರಿ, ಆದರೆ ನಿನ್ನ ಹತ್ತಿರ ಯಾರೂ ಸಹ ಬರುವುದೇ ಇಲ್ಲವಲ್ಲ, ನನ್ನ ಬಳಿಗಾದರೋ ಮಕ್ಕಳೆಲ್ಲಾ ನನ್ನ ಮೇಲೆ ಹತ್ತಿ ನಲಿದಾಡುತ್ತಾರೆ, ನಾನು ನೀಡುವ ರುಚಿಯಾದ ಹಣ್ಣನ್ನು ತಿಂದು ಖುಷಿಯಾಗುತ್ತಾರೆ, ಜನರು ಅವರ ಹಸಿವನ್ನು ತೀರಿಸಿಕೊಂಡು ಸಂತೃಪ್ತರಾಗಿ ಹೋಗುತ್ತಾರೆ. ನಾನೇ ಶ್ರೇಷ್ಠ ಎಂದಿತು.
ಬೇವು ಹೌದು ಗೆಳೆಯಾ ನೀನು ಎಲ್ಲರ ಹಸಿವನ್ನೂ ನೀಗಿಸುತ್ತೀಯಾ ಸಂತೋಷ, ಆದರೆ ನಾನು ಸಹ ಎಲ್ಲರ ಆರೋಗ್ಯವನ್ನು ಕಾಪಾಡುತ್ತೇನೆ. ಬೆಳಗ್ಗೆ ಎದ್ದ ತಕ್ಷಣ ಎಷ್ಟೋ ಜನರು ನನ್ನ ಕಡ್ಡಿಯಿಂದ ಹಲ್ಲುಜ್ಜುತ್ತಾರೆ. ನನ್ನ ಎಲೆಗಳಿಂದ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಿ ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಾರೆ. ನಾನೂ ಶ್ರೇಷ್ಠನೇ ಅಲ್ಲವೇಎಂದಿತು.
ಮಾವು ಅಷ್ಟಾದರೆ ಸಾಕೇ? ಎಲ್ಲಾ ಸಮಾರಂಭಗಳಲ್ಲೂ ನನ್ನನ್ನು ಉಪಯೋಗಿಸುತ್ತಾರೆ, ಹಬ್ಬ-ಹರಿದಿನಗಳಲ್ಲಿ ಮನೆಗೆ ತೋರಣ ಕಟ್ಟುತ್ತಾರೆ, ಮದುವೆ ಮುಂಜಿ ಸಮಾರಂಭಗಳಲ್ಲಿ ನನ್ನ ಹಣ್ಣನ್ನು ತಾಂಬೂಲದ ಜೊತೆ ನೀಡುತ್ತಾರೆ, ಜನ ಹಣ್ಣನ್ನು ಸ್ವೀಕರಿಸಿ ಖುಷಿಯಿಂದ ಹೋಗುತ್ತಾರೆ. ನಿನ್ನ ಹಣ್ಣನ್ನು ಯಾರು ಕೊಡುತ್ತಾರೆ?ಅದನ್ನು ತಿನ್ನಲೂ ಸಾಧ್ಯವೇ? ಎಂದಿತು.
ಬೇವು ನಿಜ ನಿನ್ನ ಹಣ್ಣು ರುಚಿಯಾಗಿದ್ದು, ಅದನ್ನು ತಿಂದು ಸಿಪ್ಪೆ ಮತ್ತು ವಾಟೆಯನ್ನು ಕಸದಂತೆ ಬಿಸಾಡುತ್ತಾರೆ. ಆದರೆ ನನ್ನ ಬೇವಿನ ಬೀಜವನ್ನು ಜನರು ಹುಡುಕಿ ಆರಿಸಿ ಅದರಿಂದ ಎಣ್ಣೆಯನ್ನು ಮಾಡಿ ದೀಪಗಳಿಗೆ ಹಾಕಿ ದೇವರ ಹತ್ತಿರ ಜ್ಯೋತಿ ಮಾಡಿ ಪೂಜಿಸುತ್ತಾರೆ. ಅಷ್ಟೇ ಏಕೆ ಯುಗಾದಿಯ ಹಬ್ಬದಂದು ಬೇವು-ಬೆಲ್ಲ ಎಂದು ನನ್ನ ಹೂವನ್ನು ವರ್ಷದ ಪ್ರಾರಂಭದಲ್ಲಿಯೇ ತಿಂದು ಇಡೀ ವರ್ಷ ಖುಷಿಯಿಂದ ಜೀವನ ಮಾಡುತ್ತಾರೆ. ಇದರಿಂದಲಾದರೂ ತಿಳಿಯಿತೇ ನಾನೇ ಶ್ರೇಷ್ಠ ಎಂದಿತು.
ಮಾವು ಆದರೂ ಜನರಿಗೆ ನಾನೆಂದರೆ ತುಂಬಾನೇ ಇಷ್ಟ. ನನ್ನ ಹಣ್ಣಿನ ಕಾಲಕ್ಕೋಸ್ಕರ ಕಾಯುತ್ತಿರುತ್ತಾರೆ. ಅಲ್ಲದೇ ನನ್ನ ಹಣ್ಣಿನಿಂದ ಜ್ಯೂಸ್ ಮಾಡಿ ಕುಡಿಯುತ್ತಾರೆ. ಈಗ ನಾನು ಅವರಿಗೆ ಸದಾಕಾಲ ಸಿಗುತ್ತೇನೆ. ನನ್ನ ಹಣ್ಣಿನಿಂದ ಜ್ಯೂಸ್ ಮಾಡಿ ಬಾಟಲ್‌ನಲ್ಲಿಟ್ಟು ವರ್ಷವಿಡೀ ಕುಡಿಯುತ್ತಾರೆ. ನನ್ನ ಹಣ್ಣಿನಿಂದ ಮಾಡಿದ ಚಾಕೋಲೇಟ್ ತಿನ್ನುತ್ತಾರೆ. ನಿನ್ನ ಹಣ್ಣಿನಿಂದ ಎಣ್ಣೆ ಬಿಟ್ಟು ಚಾಕಲೇಟ್ ಮಾಡಿದರೆ ಮಕ್ಕಳು ಓಡಿಹೋಗುತ್ತಾರೆ ಹ.ಹ.ಹಾ..ಎಂದು ನಗುತ್ತಾ ಬೇವಿನ ಮರವನ್ನು ಅಣಕಿಸಿ ನಗುತ್ತಿತ್ತು.
ಅದೇ ಸಮಯಕ್ಕೆ ಸರಿಯಾಗಿ ತನ್ನ ದಿನನಿತ್ಯದ ಪ್ರಾರ್ಥನೆಯನ್ನು ಮುಗಿಸಿಕೊಂಡು ಸನ್ಯಾಸಿಯೊಬ್ಬರು ದೇವಸ್ಥಾನದಿಂದ ಬರುತ್ತಿದ್ದರು. ಆಗ ಬೇವಿನ ಮರ ನಮ್ಮಿಬ್ಬರ ವಾಗ್ವಾದ ಬೇಡ, ಈ ಸನ್ಯಾಸಿಯನ್ನೇ ಕೇಳೋಣ ಬಾ, ಯಾರು ಶ್ರೇಷ್ಠರು ಎಂದು.
ಅಷ್ಟರಲ್ಲಿ ಮರಗಳ ಹತ್ತಿರಕ್ಕೆ ಬಂದಿದ್ದ ಸನ್ಯಾಸಿಯು ಮಿತ್ರರೇ ನಿಮ್ಮಿಬ್ಬರ ನಡುವೆ ನಡೆದ ಸಂವಾದವನ್ನು ನಾನು ಕೇಳಿಸಿಕೊಂಡೆನು. ನೀವೇ ಎಲ್ಲಾ ಹೇಳಿಕೊಂಡಿರಲ್ಲವೇ ನಿಮ್ಮ ನಿಮ್ಮ ಅರ್ಹತೆ ಮತ್ತು ಉಪಯೋಗವನ್ನು, ಇದರಲ್ಲಿ ಯಾರು ಎಂಬ ಪ್ರಶ್ನೆಯೇ ಇರುವುದಿಲ್ಲ. ಮಾವು ತನ್ನ ದೇಹ ಪ್ರಕೃತಿಯಂತೆ ಅದು ಶ್ರೇಷ್ಠ. ಇನ್ನು ಬೇವು ನಿನ್ನ ದೇಹ ಪ್ರಕೃತಿಯಂತೆ ನೀನೂ ಶ್ರೇಷ್ಠನೇ, ಒಟ್ಟಿನಲ್ಲಿ ನಿಮ್ಮಿಬ್ಬರಿಂದಲೂ ಜನರಿಗೆ, ಸಕಲ ಜೀವ ಜಂತುಗಳಿಗೆ ಉಪಕಾರವಾಗುತ್ತಿದೆ. ಶ್ರೇಷ್ಠತೆಯನ್ನು ಮಾತಿನಿಂದ ಅಳೆಯಬಾರದು. ನೀವು ಮಾಡುವ ಕಾರ್ಯ-ಕರ್ತವ್ಯದಿಂದ ಅಳೆಯಬೇಕು. ಜನರು ಮಾವಿನ ತೋರಣ ಕಟ್ಟುವಾಗ ಜೊತೆಯಲ್ಲಿ ಬೇವಿನ ಸೊಪ್ಪನ್ನೂ ಸಹ ಕಟ್ಟುತ್ತಾರೆ. ಏಕೆ ನೀವಿಬ್ಬರೂ ಸಮಾನರಲ್ಲವೇ?ಒಬ್ಬರು ಹಸಿವನ್ನು ನೀಗಿಸಿ ಸಂತೃಪ್ತಿ ನೀಡಿದರೆ, ಇನ್ನೊಬ್ಬರು ಅವರ ಕಾಯಿಲೆ-ನೋವುಗಳನ್ನು ನಿವಾರಿಸಿ ನೆಮ್ಮದಿ ನೀಡುತ್ತೀರಿ. ನೀವಿಬ್ಬರೂ ಶ್ರೇಷ್ಠರೇ, ಇನ್ನು ಮುಂದಾದರೂ ನೀವಿಬ್ಬರೂ ಒಬ್ಬರನ್ನೊಬ್ಬರು ಅರಿತು ಖುಷಿಯಿಂದ ಅಣ್ಣತಮ್ಮಂದಿರಂತೆ ಇರಿಎಂದರು.
ಆಗ ಮಾವು ತಲೆ ತಗ್ಗಿಸಿಕೊಂಡಿತು, ಪೂಜ್ಯರೇ ನಿಮ್ಮ ಮಾತು ನಿಜ, ನಾನು ಮೂರ್ಖನಾಗಿ ವರ್ತಿಸಿ ಬೇವಣ್ಣನಿಗೆ ಟೀಕಿಸಿದೆ. ಪ್ರಪಂಚದಲ್ಲಿ ಯಾರೂ ಕೀಳಲ್ಲ. ಎಲ್ಲರೂ ಅವರವರ ಕ್ಷೇತ್ರದಲ್ಲಿ ಉಪಯೋಗಿಗಳು. ಜ್ಞಾನವಂತರೇ ಆಗಿರುತ್ತಾರೆ. ಅದನ್ನು ಅರಿತು ನಡೆದರೆ ಜಗಳವೆಂಬುದೇ ಇರುವುದಿಲ್ಲ. ಈ ನಾಡು ಸುಭಿಕ್ಷವಾಗಿರುತ್ತದೆಎಂದಿತು. ಬೇವಣ್ಣನೂ ಹೌದೆಂದು ತಲೆದೂಗಿ ಎರಡು ಮರಗಳೂ ಸನ್ಯಾಸಿಯ ಬಳಿ ಕ್ಷಮೆ ಕೇಳಿ ಮುಂದೆ ಸಂತೋಷದಿಂದ ಕಾಲ ಕಳೆಯುತ್ತಿದ್ದವು.