ಇದ್ದಕ್ಕಿದ್ದಂತೆ ಎಲ್ಲಾ ಮಾನವರು ಭೂಮಿಯಿಂದ ಮರೆಯಾದರೆ ಏನಾಗುತ್ತೆ ?
ತಿಳಿ-ವಿಜ್ಞಾನ
ಭೂಮಿಯ ಮೇಲೆ 7.6 ಶತಕೋಟಿ ಜನರಿದ್ದಾರೆ. ಇಷ್ಟೆಲ್ಲಾ ಜನರಿದ್ದರೂ ಪ್ರಕೃತಿಯನ್ನು ಉಳಿಸಿಕೊಳ್ಳುವಲ್ಲಿ ಎಲ್ಲರೂ ಸೋತಿದ್ದೇವೆ ಅಂತ ಅನಿಸುವುದಿಲ್ಲವೇ? ಅದರಲ್ಲಿ ನಾವು ಒಬ್ಬರು. ಎಲ್ಲರಿಂದ ಆಗಲಾರದ್ದು ಒಬ್ಬರಿಂದ ಸಾಧ್ಯವೇ? ಪ್ರತಿದಿನ ನಾವು ಬೇರೆ ಬೇರೆ ಸ್ಥಳಗಳಲ್ಲಿ ಅದೆಷ್ಟೋ ಜನರನ್ನು ನೋಡುತ್ತೇವೆ. ಆದರೆ ಅದರಲ್ಲಿ ಬಹುತೇಕರು ಅಪರಿಚಿತರು ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪರಿಚಿತರೂ ಸಹ ಅಪರಿಚಿತರಾಗುತ್ತಿರುವುದು ಮಾನವ ಇತಿಹಾಸದ ದುರಂತ. ಪ್ರಕೃತಿ ಸಂರಕ್ಷಣೆ ವಿಷಯ ಬಂದಾಗಲೆಲ್ಲ ಮಾನವರಿಂದಲೇ ಪ್ರಕೃತಿಯ ಅತ್ಯಾಚಾರ, ಅಸುರಕ್ಷಿತತೆ, ಮುಂತಾದ ರೀತಿಯಲ್ಲಿ ಮಾತನಾಡುತ್ತೇವೆ. ಹಾಗಾದರೆ ಭೂಮಿಯ ಮೇಲೆ ಮಾನವನ ಅವಶ್ಯಕತೆ ಇಲ್ಲವೇ? ಇದ್ದರೆ ಅದು ಹೇಗೆ? ಒಂದು ವೇಳೆ ಇದ್ದಕ್ಕಿದ್ದಂತೆ ಎಲ್ಲಾ ಮಾನವರು ಭೂಮಿಯಿಂದ ಕಣ್ಮರೆಯಾದರೆ ಏನಾಗುತ್ತೆ? ಎಂಬುದೊಂದು ಯಕ್ಷಪ್ರಶ್ನೆ.
ಭೂಮಿಯ ಮೇಲೆ ಮಾನವರು ಕಣ್ಮರೆಯಾದ ಮರುಕ್ಷಣವೇ ಅನೇಕ ಅಸ್ತವ್ಯಸ್ಥಗಳು ಉಂಟಾಗುತ್ತವೆ. ಪ್ರಮುಖವಾಗಿ ಚಲಿಸುತ್ತಿರುವ ವಿಮಾನ, ರೈಲು, ಮುಂತಾದ ವಾಹನಗಳೆಲ್ಲವೂ ಚಾಲಕರು ಇಲ್ಲದೇ ತಮ್ಮ ಸ್ಥಾನದಿಂದ ಮುಗ್ಗರಿಸುತ್ತವೆ ಅಥವಾ ಅಪಘಾತಕ್ಕೆ ಒಳಗಾಗುತ್ತವೆ.
ಮಾನವರು ಮರೆಯಾದ ಒಂದು ಗಂಟೆಯೊಳಗೆ ಇಡೀ ಪ್ರಪಂಚದಾದ್ಯಂತ ವಿದ್ಯುತ್ ಕಡಿತ ಉಂಟಾಗುತ್ತದೆ. ಏಕೆಂದರೆ ಈಗ ಚಾಲ್ತಿಯಲ್ಲಿರುವ ಕಲ್ಲಿದ್ದಲು, ಗಾಳಿ, ನೀರು ಆಧಾರಿತ ವಿದ್ಯುತ್ ವ್ಯವಸ್ಥೆ ಎಲ್ಲವೂ ಮಾನವ ಮೇಲ್ವಿಚಾರಣೆಯಲ್ಲಿಯೇ ನಡೆಯುತ್ತಿದೆ. ಹಾಗಾಗಿ ಮಾನವರು ಮರೆಯಾದರೆ ನಿರ್ವಹಣೆಯ ವ್ಯವಸ್ಥೆ ಇಲ್ಲದೆ ಸರಬರಾಜು ಸ್ಥಗಿತಗೊಳ್ಳುತ್ತದೆ.
ಮಾನವರು ಮರೆಯಾದ ಮರುದಿನದಿಂದ ಪರಮಾಣು ರಿಯಾಕ್ಟರ್‌ಗಳೆಲ್ಲವೂ ಕಾರ್ಯ ಸ್ಥಗಿತಗೊಳ್ಳುತ್ತವೆ. ಏಕೆಂದರೆ ಅವುಗಳನ್ನು ನಿರ್ವಹಿಸಲು ಆಪರೇಟರ್ ಇಲ್ಲದೇ ಕಂಪ್ಯೂಟರ್‌ಗಳೆಲ್ಲವೂ ಶಟ್‌ಡೌನ್ ಆಗುತ್ತವೆ. ಹಾಗಾಗಿ ಇದ್ದ ಅಲ್ಪಸ್ವಲ್ಪ ಪರಮಾಣು ವಿದ್ಯುತ್ ಸಹ ಕಡಿತಗೊಳ್ಳುತ್ತದೆ. ಜನರಿಲ್ಲದೆ ರಸ್ತೆಗಳೆಲ್ಲಾ ಬಿಕೋ ಎನ್ನುತ್ತವೆ. ಸಾಕುಪ್ರಾಣಿಗಳು ಹಾಗೂ ಸಂಗ್ರಹಾಲಯದ ಪ್ರಾಣಿಗಳು ಆಹಾರವಿಲ್ಲದೇ ನರಳಿ ನರಳಿ ಸಾಯುತ್ತವೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತದೆ. ಮಾನವರು ಮರೆಯಾಗಿ 10 ದಿನಗಳ ನಂತರ ಪರಮಾಣು ವಿದ್ಯುತ್ ಸ್ಥಾವರಗಳ ಭದ್ರತಾ ಕ್ರಮ ವಿಫಲವಾಗುತ್ತದೆ. ವಿಕಿರಣಗಳು ಬಿಡುಗಡೆಯಾಗುತ್ತವೆ. ವಿಕಿರಣದಿಂದ ಆ ಪ್ರದೇಶದಲ್ಲಿನ ವನ್ಯಜೀವಿಗಳು ಸಾಯುತ್ತವೆ. ಕೆಲವು ಕ್ರಿಮಿಕೀಟಗಳು ಮೇಲುಗೈ ಸಾಧಿಸುತ್ತವೆ. ಅಂಗಡಿಗಳು ಮತ್ತು ಮಾಲ್‌ಗಳಲ್ಲಿ ಇಲಿ, ಹೆಗ್ಗಣಗಳು ಸಾಮ್ರಾಜ್ಯವನ್ನು ವಿಸ್ತರಿಸುತ್ತವೆ. ಮಾನವ ಮರೆಯಾಗಿ ಕೆಲವೇ ವರ್ಷಗಳಲ್ಲಿ ನಗರಗಳೆಲ್ಲವೂ ನೈಸರ್ಗಿಕ ಥೀಮ್ ಪಾರ್ಕ್‌ಗಳಾಗಿ ಪರಿವರ್ತನೆ ಹೊಂದುತ್ತವೆ. ಎಲ್ಲಡೆ ಮರಗಳ ಎಲೆ, ಹೂ ಹಾಗೂ ಕಸದ ರಾಶಿ ಗೋಪುರಗಳಂತೆ ಕಾಣುತ್ತವೆ. ರಸ್ತೆಯ ಇಕ್ಕೆಲಗಳಲ್ಲಿದ್ದ ಮರಗಳ ಟೊಂಗೆಗಳು ರಸ್ತೆಯ ತುಂಬಾ ಚಾಚಿಕೊಳ್ಳುತ್ತವೆ. ನಾವು ಅಂತರಿಕ್ಷಕ್ಕೆ ಕಳಿಸಿದ ಉಪಗ್ರಹಗಳೆಲ್ಲಾ ಮೂವತ್ತು ವರ್ಷಗಳ ನಂತರ ನಿರ್ವಹಣೆ ಇಲ್ಲದೇ ಮಾಹಿತಿ ಸಂಗ್ರಹಿಸುವುದನ್ನು ನಿಲ್ಲಿಸುತ್ತವೆ. ಅಂತರಿಕ್ಷದಲ್ಲೇ ಬಿಡಾಡಿ ದನಗಳಂತೆ ಮನಬಂದತೆ ತಿರುಗಾಡುತ್ತವೆ. ಮನೆಗಳು ಹಾಗೂ ಗಗನಚುಂಬಿ ಕಟ್ಟಡಗಳೆಲ್ಲ ಕುಸಿಯುತ್ತವೆ. ಕರಾವಳಿ ಪ್ರದೇಶದ ನಗರಗಳೆಲ್ಲ ಸಮುದ್ರದಲ್ಲಿ ಮುಳುಗುತ್ತವೆ. ಹಡಗುಗಳೆಲ್ಲ ಸಮುದ್ರದ ತಳ ಸೇರುತ್ತವೆ. ಹೊಸ ದಿಬ್ಬಗಳಾಗಿ ಪರಿವರ್ತನೆ ಹೊಂದುತ್ತವೆ. ನಮ್ಮ ಅನುಪಸ್ಥಿತಿಯ ಹೊರತಾಗಿಯೂ 40 ವರ್ಷಗಳವರೆಗೆ ಜಾಗತಿಕ ತಾಪಮಾನ ಏರಿಕೆಯು ಮುಂದುವರೆಯುತ್ತದೆ. ಭೂಮಿಯ ತಾಪವು 1.1 ಪ್ಯಾರನ್‌ಹೀಟ್ ನಷ್ಟು ಹೆಚ್ಚುತ್ತದೆ. ಆದರೂ ಪರಿಸರದಲ್ಲಿ ಯಾವುದೇ ಬದಲಾವಣೆಗಳು ಸಂಭವಿಸುವುದಿಲ್ಲ. 60 ವರ್ಷಗಳ ನಂತರ ಸಮುದ್ರದಲ್ಲಿ ಮೀನುಗಳ ಸಂಖ್ಯೆ ಹೆಚ್ಚಾಗುತ್ತದೆ. 150 ವರ್ಷಗಳ ನಂತರ ಎಲ್ಲಾ ಜನವಸತಿ ಪ್ರದೇಶಗಳು ಕಾಡುಗಳಾಗಿ ಪರಿವರ್ತನೆ ಹೊಂದುತ್ತವೆ. ವ್ಯಾಂಕೋವರ್‌ನಂತಹ ಹಿಮಚ್ಛಾದಿಕತ ಪ್ರದೇಶದ ಕಟ್ಟಡಗಳು ಅಸ್ಥಿಪಂಜರದಂತೆ ರೂಪಾಂತರಗೊಳ್ಳುತ್ತವೆ. ಲಾಸ್‌ವೇಗಾಸ್‌ನಂತಹ ಮರುಭೂಮಿ ನಗರಗಳು ದೈತ್ಯ ಮರಳಿನ ಕೋಟೆಗಳಂತೆ ಕಾಣುತ್ತವೆ.
230 ವರ್ಷಗಳ ನಂತರ ಭೂಮಿಯ ಮೇಲೆ ಸಸ್ಯವರ್ಗ ಅಧಿಕವಾಗುತ್ತದೆ. ಬೃಹತ್ ಕಾಡುಗಳು ನಿರ್ಮಾಣವಾಗುತ್ತವೆ. ಭೂಮಿಯ ಮೇಲೆ ಮಾನವ ನಿರ್ಮಿತ ಹೆಗ್ಗುರುತುಗಳೆಲ್ಲಾ ಕ್ರಮೇಣವಾಗಿ ನಾಶಹೊಂದುತ್ತವೆ. ಪ್ಲಾಸ್ಟಿಕ್ ಮತ್ತು ಕಬ್ಬಿಣದಂತಹ ಕೆಲವು ಲೋಹಗಳು ಮಾತ್ರ ಮಾನವ ಇದ್ದ ಎನ್ನುವುದಕ್ಕೆ ಸಾಕ್ಷಿಯಾಗುತ್ತವೆ.
500 ವರ್ಷಗಳ ನಂತರ ಕಾಡುಗಳೆಲ್ಲವೂ ಸಮೃದ್ಧವಾಗಿ 10,000 ವರ್ಷಗಳ ಹಿಂದಿನ ಆರೋಗ್ಯ ಪಡೆದುಕೊಳ್ಳುತ್ತವೆ. ನೈಸರ್ಗಿಕ ಪರಿಸರವು ಮಾನವನ ಎಲ್ಲಾ ಕುರುಹುಗಳನ್ನು ಅಂತಿಮವಾಗಿ ಅಳಿಸಿಹಾಕುವಲ್ಲಿ ಯಶಸ್ವಿಯಾಗುತ್ತದೆ. 25,000 ವರ್ಷಗಳ ನಂತರವೂ ನಮ್ಮ ಅಸ್ತಿತ್ವದ ಕುರುಹಾಗಿದ್ದ ಪ್ಲಾಸ್ಟಿಕ್ ವಸ್ತುಗಳು ಇನ್ನೂ ಹಾಗೆಯೇ ಉಳಿಯುತ್ತವೆ. ಈಗ ಹೇಳಿ 7.6 ಶತಕೋಟಿಯಲ್ಲಿ ಕನಿಷ್ಠ ನಾವೂ ಒಬ್ಬರಾಗಬೇಕೇ? ಮಾನವರು ಭೂಮಿಯ ಮೇಲೆ ಇದ್ದರು ಎಂಬ ಸತ್ಯವನ್ನು ಮರೆಮಾಚಲು 25,000ಕ್ಕಿಂತಲೂ ಹೆಚ್ಚು ವರ್ಷ ಬೇಕಾಗುತ್ತದೆ. ಹಾಗಾಗಿ ಇರುವಷ್ಟು ವರ್ಷಗಳಲ್ಲಿ ಭೂಮಿಗೆ ಯಾವ ಅಪಾಯವನ್ನೂ ಮಾಡದ ರೀತಿಯಲ್ಲಿ ಬದುಕೋಣ.
ಔಷಧ ರಹಿತ ಭಯಂಕರ ರೋಗ, ಕ್ಷಾಮ, ಹವಾಮಾನ ವೈಪರೀತ್ಯ ಮತ್ತು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳಿಂದ ಮಾತ್ರ ಭೂಮಿಯ ಮೇಲೆ ಮಾನವರನ್ನು ಇದ್ದಕ್ಕಿದ್ದಂತೆ ಮರೆಮಾಡಲು ಸಾಧ್ಯ. ಮಾನವನ ಅಳಿವಿನ ನಂತರ ಮಾತ್ರ ಜಾತಿ, ಧರ್ಮಗಳಂತಹ ಸಂಕೋಲೆಗಳು ಭೂಮಿಯಿಂದ ನಾಶವಾಗಲು ಸಾಧ್ಯ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯಿಂದ ಮಾನವ ಜೀವನ ವೇಗ ಪಡೆಯಿತು ಎಂಬುದನ್ನು ಬಿಟ್ಟರೆ ಉಳಿದ ಜೀವರಾಶಿಗೆ ಇದರಿಂದ ಯಾವುದೇ ಲಾಭವಾಗಲಿಲ್ಲ.
ಆರ್.ಬಿ. ಗುರುಬಸವರಾಜ