ಸೋಯಾ ಹಾಲಿನ ಸೇವನೆಯ ಆರೋಗ್ಯಲಾಭಗಳಿವು…
ಸೋಯಾ ಹಾಲು ಸಸ್ಯಜನ್ಯವಾಗಿದ್ದು,ಸೋಯಾಬೀನ್ ನಿಂದ ತಯಾರಾಗುತ್ತದೆ. ಇದು ಡೇರಿ ಉತ್ಪನ್ನಗಳಿಗೆ ಆರೋಗ್ಯಕರ ಪರ್ಯಾಯವಾಗಿದೆ. ಬಿ-ವಿಟಾಮಿನ್‌ಗಳು, ವಿಟಾಮಿನ್ ಡಿ,ಫೈಟೊಈಸ್ಟ್ರೋಜನ್‌ಗಳು, ಮ್ಯಾಗ್ನೀಷಿಯಂ,ಒಮೇಗಾ 6 ಮತ್ತು 3 ಮೇದಾಮ್ಲಗಳನ್ನು ಸಮೃದ್ಧವಾಗಿ ಒಳಗೊಂಡಿರುವ ಸೋಯಾ ಹಾಲಿನಲ್ಲಿ ಡೇರಿ ಹಾಲಿಗೆ ಹೋಲಿಸಿದರೆ ಪೋಷಕಾಂಶಗಳಿಗೆ ಕೊರತೆಯಿಲ್ಲ. ಸೋಯಾ ಹಾಲಿನ ನಿಯಮಿತ ಸೇವನೆಯಿಂದ ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್‌ನ್ನು ತಡೆಯಬಹುದು ಎಂದು ಕೆಲವು ಅಧ್ಯಯನ ವರದಿಗಳು ಹೇಳಿವೆ. ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ನೆರವಾಗುವ ಜೊತೆಗೆ ಇತರ ಹಲವಾರು ಆರೋಗ್ಯಲಾಭಗಳನ್ನೂ ಸೋಯಾ ಹಾಲು ನೀಡುತ್ತದೆ.
ಸೋಯಾಬೀನ್‌ಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಮಿಕ್ಸರ್‌ನಲ್ಲಿ ಗ್ರೈಂಡ್ ಮಾಡಿದ ಬಳಿಕ ಅದನ್ನು ಹಿಂಡಿದರೆ ಸೋಯಾ ಹಾಲು ದೊರೆಯುತ್ತದೆ. ಸೋಯಾಬೀನ್‌ನಲ್ಲಿರುವ ಎಲ್ಲ ಪೌಷ್ಟಿಕಾಂಶಗಳೂ ಸೋಯಾ ಹಾಲಿನಲ್ಲಿರುವುದರಿಂದ ಇದೊಂದು ಆರೋಗ್ಯಕರ ಪೇಯವಾಗಿದೆ. * ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುತ್ತದೆ
ಪುರುಷ ಹಾರ್ಮೋನ್ ಟೆಸ್ಟೋಸ್ಟಿರೋನ್ ಅಧಿಕ ಮಟ್ಟದಲ್ಲಿರುವುದು ಪ್ರಾಸ್ಟೇಟ್ ಕ್ಯಾನ್ಸರ್‌ನೊಂದಿಗೆ ಗುರುತಿಸಿಕೊಂಡಿದೆ. ಸೋಯಾ ಹಾಲಿನಲ್ಲಿರುವ ಫೈಟೊಈಸ್ಟ್ರೋಜನ್‌ಗಳು ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುವ ಟೆಸ್ಟೋಸ್ಟಿರೋನ್‌ನ ಅಧಿಕ ಸ್ರವಿಸುವಿಕೆಯನ್ನು ತಡೆಯಲು ನೆರವಾಗುತ್ತವೆ.
►ಮಧುಮೇಹವನ್ನು ತಡೆಯುತ್ತದೆ
ಸೋಯಾ ಹಾಲಿನಲ್ಲಿ ಸಮೃದ್ಧವಾಗಿರುವ ನಾರು ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದು ಸಕ್ಕರೆಯ ಹೀರುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಪ್ರತಿಬಂಧಿಸುತ್ತದೆ. ರಕ್ತದಲ್ಲಿ ಗ್ಲುಕೋಸ್‌ನ ಪ್ರಮಾಣದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದರಿಂದ ಮಧುಮೇಹಿಗಳು ಸೋಯಾ ಹಾಲನ್ನು ನಿಯಮಿತವಾಗಿ ಸೇವಿಸಬಹುದು.
►ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ
ನಿಯಮಿತವಾಗಿ ಸೋಯಾ ಹಾಲಿನ ಸೇವನೆಯು ಶರೀರದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅದರಲ್ಲಿ ಅಧಿಕವಾಗಿರುವ ನಾರು ಇಂತಹ ಹಾನಿಕಾರಕ ಪದಾರ್ಥಗಳ ಪ್ರಮಾಣವನ್ನು ತಗ್ಗಿಸುತ್ತದೆ.
►ತೂಕ ಇಳಿಕೆಗೆ ನೆರವಾಗುತ್ತದೆ
ಸೋಯಾ ಹಾಲಿನಲ್ಲಿ ಸಾಮಾನ್ಯ ಹಾಲಿಗಿಂತ ಕಡಿಮೆ ಸಕ್ಕರೆ ಮತ್ತು ಅಧಿಕ ನಾರು ಇರುತ್ತದೆ. ನಾರು ತುಂಬ ಹೊತ್ತಿನವರೆಗೆ ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುವ ಮೂಲಕ ಶರೀರದ ತೂಕ ಇಳಿಕೆಗೆ ನೆರವಾಗುತ್ತದೆ.
►ರಕ್ತನಾಳಗಳನ್ನು ಬಲಗೊಳಿಸುತ್ತದೆ
ಸೋಯಾ ಹಾಲಿನಲ್ಲಿ ಒಮೇಗಾ 6 ಮತ್ತು 3 ಮೇದಾಮ್ಲಗಳು ಅಧಿಕ ಪ್ರಮಾಣದಲ್ಲಿದ್ದು,ಇವು ರಕ್ತನಾಳಗಳ ಭಿತ್ತಿಗಳನ್ನು ಬಲಗೊಳಿಸುತ್ತವೆ. ಇದರಿಂದ ರಕ್ತ ಪರಿಚಲನೆ ಉತ್ತಮಗೊಳ್ಳುವುದು ಮಾತ್ರವಲ್ಲ,ಹೃದಯ ರಕ್ತನಾಳಗಳಿಗೆ ಹಾನಿಯೂ ತಡೆಯಲ್ಪಡುತ್ತದೆ.
►ಅಸ್ಥಿರಂಧ್ರತೆಯ ವಿರುದ್ಧ ರಕ್ಷಣೆ ನೀಡುತ್ತದೆ
ಅಸ್ಥಿರಂಧ್ರತೆ ಸ್ಥಿತಿಯಲ್ಲಿ ಮೂಳೆಗಳು ದುರ್ಬಲ ಮತ್ತು ಶಿಥಿಲಗೊಳ್ಳುತ್ತವೆ. ಸೋಯಾ ಹಾಲು ಫೈಟೊಈಸ್ಟ್ರೋಜನ್‌ಗಳ ಉತ್ತಮ ಮೂಲವಾಗಿದ್ದು,ಇವು ಶರೀರವು ಕ್ಯಾಲ್ಸಿಯಂ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ನೆರವಾಗುತ್ತವೆ. ಕ್ಯಾಲ್ಸಿಯಂ ಮೂಳೆಗಳನ್ನು ಬಲಗೊಳಿಸುತ್ತದೆ. ಸೋಯಾ ಹಾಲಿನ ಪೌಡರ್‌ನ್ನು ಒಂದು ಗ್ಲಾಸ್ ನೀರಿನಲ್ಲಿ ಬೆರೆಸಿಕೊಂಡು ಸೇವಿಸಬಹುದಾಗಿದೆ.
►ಋತುಬಂಧದ ಸಮಸ್ಯೆಗಳನ್ನು ತಡೆಯುತ್ತದೆ
ಮಹಿಳೆಯರಲ್ಲಿ ಋತುಬಂಧವುಂಟಾಗುವ ಸಮಯದಲ್ಲಿ ಈಸ್ಟ್ರೋಜನ್ ಹಾರ್ಮೋನ್‌ನ ಮಟ್ಟ ಕಡಿಮೆಯಾಗುತ್ತದೆ,ಇದರ ಪರಿಣಾಮವಾಗಿ ಶರೀರದ ಉಷ್ಣತೆ ತ್ವರಿತವಾಗಿ ಹೆಚ್ಚಾಗುತ್ತದೆ. ಸೋಯಾ ಹಾಲಿನಲ್ಲಿರುವ ಫೈಟೊಈಸ್ಟ್ರೋಜನ್‌ಗಳು ಇದನ್ನು ತಡೆಯಲು ನೆರವಾಗುತ್ತವೆ.
►ಸೋಯಾ ಹಾಲಿನ ಪೌಷ್ಟಿಕಾಂಶಗಳು
ಸೋಯಾ ಹಾಲಿನಲ್ಲಿ ಪ್ರೊಟೀನ್ ಸಮೃದ್ಧವಾಗಿದ್ದು,ಮೂಳೆಗಳ ಆರೋಗ್ಯಕ್ಕಾಗಿ ಕ್ಯಾಲ್ಸಿಯಂ ಅನ್ನು ಒಳಗೊಂಡಿರುತ್ತದೆ. ಬಿ-ವಿಟಾಮಿನ್‌ಗಳು,ಕಬ್ಬಿಣ ಮತ್ತು ಆರೋಗ್ಯಕರ ಕೊಬ್ಬುಗಳ ಉತ್ತಮ ಮೂಲವಾಗಿರುವ ಜೊತೆಗೆ ಆರೋಗ್ಯಯುತ ಶರೀರಕ್ಕಾಗಿ ಅಗತ್ಯ ಅಮಿನೊ ಆ್ಯಸಿಡ್‌ಗಳನ್ನು ಒಳಗೊಂಡಿದೆ. ಒಳ್ಳೆಯ ಕೊಲೆಸ್ಟ್ರಾಲ್ (ಎಚ್‌ಡಿಎಲ್) ಮಟ್ಟವನ್ನು ಹೆಚ್ಚಿಸುವ ಮತ್ತು ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಮಟ್ಟವನ್ನು ತಗ್ಗಿಸುವ ಮೂಲಕ ಶರೀರದಲ್ಲಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ.