ಈ ವಿಮಾ ಪಾಲಿಸಿಯು ನಿಮ್ಮ ಸ್ವಂತ ವಾಹನಕ್ಕೆ ಹಾನಿಯ ವಿರುದ್ಧ ರಕ್ಷಣೆ ನೀಡುವುದಿಲ್ಲ
ಭಾರತದ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸಲು ಥರ್ಡ್ ಪಾರ್ಟಿ ಮೋಟರ್ ಇನ್ಶೂರನ್ಸ್ ಕಡ್ಡಾಯವಾಗಿದೆಯಾದರೂ ಅಪಘಾತವುಂಟಾದ ಸಂದರ್ಭದಲ್ಲಿ ಅದು ಪಾಲಿಸಿ ಹೊಂದಿರುವ ವ್ಯಕ್ತಿಯ ಸ್ವಂತ ಕಾರಿಗೆ ಯಾವುದೇ ವಿಮೆ ರಕ್ಷಣೆಯನ್ನು ಒದಗಿಸುವುದಿಲ್ಲ. ಆದರೆ ಮೋಟರ್ ವಾಹನಗಳ ಕಾಯ್ದೆ 1988ರಡಿ ಈ ಥರ್ಡ್ ಪಾರ್ಟಿ ವಿಮಾ ಪಾಲಿಸಿಯು ಭಾರತದಲ್ಲಿ ಎಲ್ಲ ವಾಹನಗಳಿಗೆ ಕಡ್ಡಾಯವಾಗಿದೆ.
ಹೆಸರೇ ಸೂಚಿಸುವಂತೆ ಥರ್ಡ್ ಪಾರ್ಟಿ ಇನ್ಶೂರನ್ಸ್ ಪಾಲಿಸಿಯು ಅಪಘಾತವುಂಟಾದರೆ ಥರ್ಡ್ ಪಾರ್ಟಿ ವಾಹನಕ್ಕೆ ಅಥವಾ ಥರ್ಡ್ ಪಾರ್ಟಿ ವ್ಯಕ್ತಿಗೆ ವಿಮೆ ಪರಿಹಾರವನ್ನು ನೀಡುತ್ತದೆ. ಅದು ಪಾಲಿಸಿಯನ್ನು ಹೊಂದಿರುವ ವ್ಯಕ್ತಿಗೆ ಯಾವುದೇ ವಿಮಾ ರಕ್ಷಣೆಯನ್ನು ಒದಗಿಸುವುದಿಲ್ಲ. ಆದರೆ ಪಾಲಿಸಿಯನ್ನು ಹೊಂದಿರುವ ವ್ಯಕ್ತಿಯು ಸ್ವಂತಕ್ಕೂ ವಿಮೆ ರಕ್ಷಣೆಯನ್ನು ಬಯಸಿದರೆ ಆತ/ಆಕೆ ಕಾಂಪ್ರಿಹೆನ್ಸಿವ್ ಇನ್ಶೂರನ್ಸ್ ಪಾಲಿಸಿ (ಸಿಐಪಿ) ಅಥವಾ ಸಮಗ್ರ ವಿಮಾ ಪಾಲಿಸಿಯನ್ನು ಆಯ್ದುಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಥರ್ಡ್ ಪಾರ್ಟಿ ಇನ್ಶೂರನ್ಸ್ ಅಥವಾ ಟಿಐಪಿ ಕಡ್ಡಾಯವಾಗಿದೆ,ಆದರೆ ಸಿಐಪಿ ಕಡ್ಡಾಯವಲ್ಲ.
ಟಿಐಪಿಯು ಥರ್ಡ್ ಪಾರ್ಟಿಗೆ ಮಾತ್ರ ವಿಮಾ ರಕ್ಷಣೆಯನ್ನೊದಗಿಸಿದರೆ ಸಿಐಪಿಯು ಥರ್ಡ್ ಪಾರ್ಟಿಗೆ ಮತ್ತು ವಾಹನದ ಮಾಲಿಕನ ಸ್ವಂತಕ್ಕೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಹೀಗಾಗಿ ಸಿಐಪಿಗೆ ಪ್ರೀಮಿಯಂ ಮೊತ್ತ ಟಿಐಪಿಯ ಪ್ರೀಮಿಯಂ ಮೊತ್ತಕ್ಕಿಂತ ಹೆಚ್ಚಾಗಿರುತ್ತದೆ. ಭಾರತದಲ್ಲಿ ಹೆಚ್ಚಿನ ವಾಹನ ಮಾಲಕರು ಸಿಐಪಿ ಬದಲು ಟಿಐಪಿಯನ್ನೇ ಮಾಡಿಸುವುದಕ್ಕೆ ಇದು ಪ್ರಮುಖ ಕಾರಣಗಳಲ್ಲೊಂದಾಗಿದೆ.
ಇದಿಷ್ಟೇ ಅಲ್ಲ,ಇನ್ನೂ ಹಲವಾರು ವಿಷಯಗಳು ಟಿಐಪಿಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಮತ್ತು ಸಾಮಾನ್ಯವಾಗಿ, ಅಪಘಾತವುಂಟಾದಾಗ ಪಾಲಿಸಿಯನ್ನು ಹೊಂದಿರುವ ವ್ಯಕ್ತಿಗೆ ಯಾವ ಲಾಭವನ್ನೂ ನೀಡುವುದಿಲ್ಲ.
ಕೇವಲ ಥರ್ಡ್ ಪಾರ್ಟಿ ವಿಮಾ ಪಾಲಿಸಿಯನ್ನು ಹೊಂದಿದ್ದರೆ ವಾಹನದ ಮಾಲಕ ಈ ಕೆಳಗಿನ ಲಾಭಗಳಿಂದ ವಂಚಿತನಾಗುತ್ತಾನೆ.
ಸ್ವಂತ ವಾಹನಕ್ಕೆ ಹಾನಿ
ಅಪಘಾತವಾದ ಸಂದರ್ಭದಲ್ಲಿ ಪಾಲಿಸಿ ಹೊಂದಿರುವ ವ್ಯಕ್ತಿಯ ಸ್ವಂತ ವಾಹನಕ್ಕೆ ಆಗುವ ಹಾನಿಯು ಟಿಐಪಿ ವ್ಯಾಪ್ತಿಯಲ್ಲಿ ಬರುವುದಿಲ್ಲ.
ಪಾಲಿಸಿದಾರನಿಗೆ ಗಾಯ
ಪಾಲಿಸಿದಾರನ ಕಾರಿಗೆ ಆಗಿರುವ ನಷ್ಟದಂತೆ ಆತನಿಗಾದ ಗಾಯಗಳೂ ಟಿಐಪಿಯ ವ್ಯಾಪ್ತಿಗೆ ಬರುವುದಿಲ್ಲ.
ವೆಯಕ್ತಿಕ ಸೊತ್ತುಗಳು
ಅಪಘಾತವಾದ ಸಂದರ್ಭದಲ್ಲಿ ಪಾಲಿಸಿದಾರನ ಕಾರಿನಲ್ಲಿದ್ದಿರಬಹುದಾದ ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್‌ನಂತಹ ಸಾಧನಗಳು,ಚಿನ್ನಾಭರಣಗಳು ಅಥವಾ ಲಗೇಜ್ ಅಥವಾ ನಗದು ಹಣದಂತಹ ವೈಯಕ್ತಿಕ ಸೊತ್ತುಗಳಿಗೆ ಟಿಐಪಿ ಯಾವುದೇ ವಿಮಾ ರಕ್ಷಣೆಯನ್ನು ಒದಗಿಸುವುದಿಲ್ಲ. ಆದರೆ ಸಿಐಪಿಯ ಜೊತೆಗೆ ಹೆಚ್ಚುವರಿ ಶುಲ್ಕವನ್ನು ತೆತ್ತು ವೈಯಕ್ತಿಕ ಸೊತ್ತುಗಳ ನಷ್ಟಕ್ಕೂ ವಿಮಾ ರಕ್ಷಣೆಯನ್ನು ಪಡೆದುಕೊಳ್ಳಬಹುದು.
ಟಿಐಪಿ ಅನ್ವಯವಾಗದ
ಇತರ ವಿಷಯಗಳು
ಪಾಲಿಸಿದಾರ ಮದ್ಯ/ಮಾದಕ ದ್ರವ್ಯ ಸೇವಿಸಿ ವಾಹನವನ್ನು ಚಲಾಯಿಸುತ್ತಿದ್ದರೆ,ವಾಹನ ಚಾಲನೆ ಪರವಾನಿಗೆಯನ್ನು ಹೊಂದಿರದಿದ್ದರೆ ಅಥವಾ ಸೂಚಿತ ಭೌಗೋಳಿಕ ಪ್ರದೇಶದ ಹೊರಗೆ ವಾಹನವನ್ನು ಚಲಾಯಿಸುತ್ತಿದ್ದರೆ ಇಂತಹ ಸಂದರ್ಭಗಳಲ್ಲಿ ಅಪಘಾತವುಂಟಾದರೆ ಟಿಐಪಿಯು ಯಾವುದೇ ವಿಮೆ ರಕ್ಷಣೆಯನ್ನು ನೀಡುವುದಿಲ್ಲ.
ಯುದ್ಧ, ನಾಗರಿಕ ಯುದ್ಧ, ಬಂಡಾಯ, ಕ್ರಾಂತಿ, ಪರಮಾಣು ವಸ್ತುಗಳು/ಅಣ್ವಸ್ತ್ರಗಳು, ಆಕ್ರಮಣ,ವಿದೇಶಿ ಶತ್ರುವಿನ ಕೃತ್ಯ, ಭಯೋತ್ಪಾದಕ ದಾಳಿ ಅಥವಾ ವಿಕಿರಣದಿಂದ ಹಾನಿಯುಂಟಾದ ಸಂದರ್ಭಗಳು ವಿಮೆಯ ವ್ಯಾಪ್ತಿಯಲ್ಲಿ ಒಳಗೊಂಡಿರುವುದಿಲ್ಲ.