ಪೌರತ್ವ ಒಂದು ಅವಲೋಕನ
ಭಾಗ-2
ಕೇಂದ್ರ ಸರಕಾರ ಬಹಳ ಬುದ್ಧಿವಂತಿಕೆಯಿಂದಲೇ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಮತ ರಾಜಕಾರಣ ಮಾಡುತ್ತಿದೆ ಎಂದು ಹೇಳುತ್ತಲೇ ಅಸ್ಸಾಮಿನಲ್ಲಿ ಎನ್‌ಆರ್‌ಸಿಯಂತೆ 1971ರ ಗಡುವು ಇದ್ದರೂ ತಿದ್ದುಪಡಿ ಕಾಯ್ದೆಯಡಿ 2014ರವರೆಗಿನ ಅಕ್ರಮ ವಲಸಿಗರಿಗೆ ಪೌರತ್ವ ನೀಡುತ್ತಿದೆ.. ಇದು ಮತ ರಾಜಕಾರಣದೊಂದಿಗೆ, ದೇಶದ ಮೂಲನಿವಾಸಿಗಳು, ಅಲ್ಪಸಂಖ್ಯಾತರನ್ನು ಒಕ್ಕಲೆಬ್ಬಿಸುವ ಪ್ರಯತ್ನವಾಗಿದೆ.
ಮೂಲತಃವಾಗಿ 2019ರ ತಿದ್ದುಪಡಿ ಕಾಯ್ದೆಯು ಮೂಲ ಕಾಯ್ದೆಯ ವಿಸ್ತಾರಕ್ಕೆ ಮಿತಿಯನ್ನು ಹೇರುತ್ತದೆ. ಮೂಲ ಕಾಯ್ದೆಯಲ್ಲಿ ಭಾರತಕ್ಕೆ ಕಾನೂನಿಗೆ ವಿರುದ್ಧವಾಗಿ ಹಾಗೂ ಸಮರ್ಪಕವಾದ ದಾಖಲಾತಿಗಳಿಲ್ಲದೇ ಬರುವ ಜನರನ್ನು ಎಲ್ಲಾ ಧರ್ಮದ, ಎಲ್ಲಾ ದೇಶದ ವಾಸಿಗಳನ್ನೂ ಅಕ್ರಮ ವಲಸಿಗರು ಎಂದು ತೀರ್ಮಾನಿಸುತ್ತದೆ. ಆದರೆ ತಿದ್ದುಪಡಿ ಕಾಯ್ದೆಯು ಕೇವಲ ಮೂರು ರಾಷ್ಟ್ರಗಳಿಂದ ಬಂದಿರಬಹುದಾದ ಆರು ಸಮುದಾಯದ ಜನರಿಗೆ ಮಾತ್ರ ಅಕ್ರಮ ವಲಸಿಗರಲ್ಲ ಎಂಬ ಪಟ್ಟಿಯನ್ನು ನೀಡುತ್ತದೆ. ಭಾರತದ ಸಂವಿಧಾನದ ಮೂಲ ಆಶಯವಾದ ಭಾರತದ ನಾಗರಿಕರನ್ನು ಯಾವುದೇ ಜಾತಿ, ಧರ್ಮ, ಲಿಂಗದ ಆಧಾರದಲ್ಲಿ ವಿಂಗಡಿಸಬಾರದು ಎಂಬುದರ ಕಲ್ಪನೆಗೆ ವಿರುದ್ಧವಾದುದಾಗಿರುತ್ತದೆ. ಅಲ್ಲದೇ ತಿದ್ದುಪಡಿ ಕಾಯ್ದೆಯಲ್ಲಿ ವಿದೇಶದಿಂದ ಭಾರತಕ್ಕೆ ವಲಸೆ ಬಂದಿರಬಹುದಾದ ಮುಸ್ಲಿಮರನ್ನು, ಶ್ರೀಲಂಕಾದಿಂದ ಬಂದಿರಬಹುದಾದ ತಮಿಳಿಗರನ್ನು, ಮ್ಯಾನ್ಮಾರ್ ನಿಂದ ಬಂದಿರುವ ರೊಹಿಂಗ್ಯಾ ಅಕ್ರಮ ವಲಸಿಗರನ್ನು ಕಡೆಗಣಿಸಲಾಗಿದೆ. ಕೇಂದ್ರ ಸರಕಾರದ ಈ ನಡೆ ಸಂವಿಧಾನ ವಿರೋಧಿ ಧೋರಣೆಯಿಂದ ಕೂಡಿರುತ್ತದೆ ಹಾಗೂ ಮೂಲ ಪೌರತ್ವ ಕಾಯ್ದೆಯ ಆಶಯಕ್ಕೆ ಮಿತಿಯನ್ನೊಡ್ಡುತ್ತದೆ ಹಾಗೂ ಧರ್ಮದ ಹಿನ್ನೆಲೆಯಲ್ಲಿ ಯಾರು ಭಾರತದ ಪೌರರಾಗಬಹುದು ಎಂಬುದನ್ನು ನಿರ್ಧರಿಸುತ್ತದೆ.
2019ರ ಪೌರತ್ವ ತಿದ್ದುಪಡಿ ಕಾಯ್ದೆಯ ಕಲಂ 2 ಕ್ಕೆ ಬದಲಾವಣೆ ತಂದಿರುವಂತೆಯೇ ಕೇಂದ್ರ ಸರಕಾರ ಮೂಲ ಪೌರತ್ವ ಕಾಯ್ದೆಯ ಮೂರನೇ ಶೆಡ್ಯೂಲಿಗೂ ಸಹ ಬದಲಾವಣೆಯನ್ನು ತಂದಿದೆ. 1955ರ ಪೌರತ್ವ ಕಾಯ್ದೆಯ ಶೆಡ್ಯೂಲ್ 3 ರಲ್ಲಿ ಸ್ವಾಭಾವಿಕವಾಗಿ ಭಾರತದ ಪೌರತ್ವವನ್ನು ಹೇಗೆ ಪಡೆಯಬಹುದು ಎಂಬುದನ್ನು ವಿವರಿಸುತ್ತದೆ. ಅದರಲ್ಲಿ ವಿವರಿಸಿದಂತೆ ಯಾರು ಬೇರೆ ದೇಶದ ಪೌರರಾಗಿರುವುದಿಲ್ಲವೋ ಅಥವಾ ಭಾರತದ ಕಾನೂನಿನ ಮೂಲಕ ಅವರ ದೇಶದ ಪೌರತ್ವವನ್ನು ಕಳೆದುಕೊಂಡಿದ್ದಲ್ಲಿ, ಯಾರು ಒಂದು ನಿರ್ದಿಷ್ಟ ದೇಶದ ಪೌರನಾಗಿದ್ದು, ಭಾರತದ ಪೌರತ್ವ ಲಭ್ಯವಾದ ಕೂಡಲೇ ಆತನ ದೇಶದ ಪೌರತ್ವವನ್ನು ಬಿಟ್ಟುಕೊಡಲು ಒಪ್ಪಿರುತ್ತಾನೋ, ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ 12 ತಿಂಗಳಿಗೆ ಮುಂಚಿತವಾಗಿ ಯಾರು ಭಾರತದ ನಿವಾಸಿಯಾಗಿರುತ್ತಾನೋ ಅಥವಾ ಭಾರತ ಸರಕಾರದ ಸೇವೆಯಲ್ಲಿರುತ್ತಾನೋ, ಅರ್ಜಿ ಸಲ್ಲಿಸಿದ 12 ತಿಂಗಳ ನಂತರ ಕನಿಷ್ಠ 11 ವರ್ಷಕ್ಕೆ ಕಡಿಮೆಯಿಲ್ಲದಂತೆ ಯಾರು ಭಾರತದ ನಿವಾಸಿಯಾಗಿರುತ್ತಾನೋ ಅಥವಾ ಭಾರತ ಸರಕಾರದ ಸೇವೆಯಲ್ಲಿರುತ್ತಾನೋ, ಒಳ್ಳೆಯ ಗುಣ ಹೊಂದಿರುತ್ತಾನೋ, ಭಾರತದ ಸಂವಿಧಾನದ ಶೆಡ್ಯೂಲ್‌ನಲ್ಲಿ ವಿವರಿಸಲಾದ ಭಾಷೆಗಳ ಬಗ್ಗೆ ತಿಳುವಳಿಕೆಯಿರುವವರಿಗೆ ಸ್ವಾಭಾವಿಕವಾಗಿ ಪೌರತ್ವವನ್ನು ನೀಡಲಾಗುತ್ತದೆ. ಸದರಿ ಶೆಡ್ಯೂಲ್‌ನಂತೆ ಯಾರು 11 ವರ್ಷಗಳಿಗೆ ಕಡಿಮೆಯಿಲ್ಲದಂತೆ ಭಾರತದ ನಿವಾಸಿಯಾಗಿದ್ದರೆ ಅಥವಾ ಭಾರತ ಸರಕಾರದ ಸೇವೆಯಲ್ಲಿದ್ದರೆ ಅಂತಹವರಿಗೆ ಪೌರತ್ವ ಕಾಯ್ದೆಯ 3ನೇ ಶೆಡ್ಯೂಲ್‌ನಂತೆ ಪೌರತ್ವವನ್ನು ನೀಡಬಹುದಾಗಿರುತ್ತದೆ. ಆದರೆ ಕೇಂದ್ರ ಸರಕಾರ 2019ರ ತಿದ್ದುಪಡಿ ಕಾಯ್ದೆಯಂತೆ ‘‘ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನಕ್ಕೆ ಸೇರಿದ ಹಿಂದೂ, ಸಿಖ್ ಬೌದ್ದ, ಜೈನ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು ಯಾರು ಕನಿಷ್ಠ ಆರು ವರ್ಷಗಳಿಗೆ ಕಡಿಮೆಯಾಗದಂತೆ ಭಾರತದ ನಿವಾಸಿಯಾಗಿರುತ್ತಾರೋ ಅಥವಾ ಭಾರತ ಸರಕಾರದ ಸೇವೆಯಲ್ಲಿರುತ್ತಾರೋ ಅಂತಹ ವ್ಯಕ್ತಿಗಳು ಪೌರತ್ವ ಕಾಯ್ದೆಯ ಮೂರನೇ ಶೆಡ್ಯೂಲ್‌ನಂತೆ ಪೌರತ್ವನ್ನು ಪಡೆಯಬಹುದಾಗಿದೆ’’.
2019ರ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ ‘‘ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನಕ್ಕೆ ಸೇರಿದ ಹಿಂದೂ, ಸಿಖ್ ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯದವರಿಗೆ ಸಂಬಂಧಿಸಿದಂತೆ ಮೂಲ ಶೆಡ್ಯೂಲ್ ನಲ್ಲಿ ವಿವರಿಸಿರುವ 11 ವರ್ಷಗಳಿಗೆ ಬದಲಾಗಿ 6 ವರ್ಷಗಳ ಗಡಿಯನ್ನು ನಿಗದಿಪಡಿಸಲಾಗಿದೆ. ಕೇಂದ್ರ ಸರಕಾರದ ಈ ನಡೆಯೂ ಕೂಡ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುತ್ತದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನಕ್ಕೆ ಸೇರಿದ ಹಿಂದೂ, ಸಿಖ್ ಬೌದ್ದ, ಜೈನ, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯದವರಿಗೆ ಕೇವಲ 6 ವರ್ಷಗಳಿಗೆ ಸಿಗುವ ಪೌರತ್ವವು ಮೇಲ್ಕಂಡ ಸಮೂದಾಯಗಳನ್ನು ಹೊರತು ಪಡಿಸಿ ಬೇರೆ ಸಮುದಾಯ, ಧರ್ಮಕ್ಕೆ ಸೇರಿದವರು 11 ವರ್ಷಗಳು ಕಾಯಬೇಕಾಗುತ್ತದೆ. ಈ ತಿದ್ದುಪಡಿಯು ಸಂವಿಧಾನದ ಅನುಚ್ಛೇಧ 14 ರಲ್ಲಿ ವಿವರಿಸಲಾದ ಸಮಾನ ತತ್ವ ಹಾಗೂ ಸಮಾನ ರಕ್ಷಣೆಗೆ ವಿರುದ್ಧವಾಗಿರುತ್ತದೆ. ಹೇಗೆಂದರೆ, ತಿದ್ದುಪಡಿ ಕಾಯ್ದೆಯು ಭಾರತದ ಪೌರತ್ವವನ್ನು ಧರ್ಮದ ಆಧಾರದಲ್ಲಿ ನೀಡುತ್ತದೆ. ಅಲ್ಲದೇ ಮೂರು ದೇಶಗಳ ಆರು ಧರ್ಮೀಯರಿಗೆ ಮಾತ್ರ ಪೌರತ್ವವನ್ನು ನೀಡುವಲ್ಲಿನ ಸಕಾರಣಗಳನ್ನು ಸ್ಪಷ್ಟಪಡಿಸುವುದಿಲ್ಲ. ಭಾರತದ ಸಂವಿಧಾನದ ಮೂಲ ಆಶಯವಾದ ಭಾರತವು ಜಾತ್ಯತೀತ ರಾಷ್ಟ್ರ ಎಂಬುದಕ್ಕೆ ವಿರುದ್ಧವಾಗಿರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಕೇಂದ್ರ ಸರಕಾರದ 2019ರ ಪೌರತ್ವ ತಿದ್ದುಪಡಿ ಕಾಯ್ದೆಯು ಅಸಾಂವಿಧಾನಿಕವಾಗಿರುತ್ತದೆ.
ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿ ಆರ್)
ಕೇಂದ್ರ ಸರಕಾರ ಪೌರತ್ವ ಕಾಯ್ದೆಗೆ ತಂದಿರುವ 2019 ರ ತಿದ್ದುಪಡಿಯ ಜೊತೆ ಜೊತೆಗೇ ಕೇಳಿಬರುತ್ತಿರುವುದು ಎನ್‌ಆರ್‌ಸಿ ಹಾಗೂ ಎನ್‌ಪಿಆರ್. ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಬಗ್ಗೆ ತಿಳಿದುಕೊಳ್ಳದೇ ಅಥವಾ ಈ ಎರಡನ್ನೂ ಪೌರತ್ವ ತಿದ್ದುಪಡಿ ಕಾಯ್ದೆ 2019ರ ಜೊತೆಯಲ್ಲಿಟ್ಟು ನೋಡದೇ ಹೋದರೆ ಪೌರತ್ವ ತಿದ್ದುಪಡಿ ಕಾಯ್ದೆ ಉಂಟು ಮಾಡಲಿರುವ ಪರಿಣಾಮವನ್ನು ಅರಿಯಲು ಸಾಧ್ಯವಾಗುವುದಿಲ್ಲ.
ಏನಿದು ಎನ್‌ಆರ್‌ಸಿ? ರಾಷ್ಟ್ರೀಯ ನಾಗರಿಕ ನೋಂದಣಿಯ ಪರಿಕಲ್ಪನೆ ಹುಟ್ಟಿದ್ದೇ ಅಸ್ಸಾಮಿನಲ್ಲಿ. ಭಾರತದಲ್ಲಿ ಪೌರತ್ವ ನೀಡುವಿಕೆಯ ಸಂಬಂಧವಾಗಿ ಪೌರತ್ವ ಕಾಯ್ದೆ 1955 ಜಾರಿಯಲ್ಲಿದ್ದರೂ ಸಹ ಪ್ರತ್ಯೇಕ ಎನ್‌ಆರ್‌ಸಿಯ ಅಗತ್ಯವೇನಿತ್ತು? ಇದನ್ನು ಅರಿಯಬೇಕಾದರೆ ನಾವು ಇತಿಹಾಸದ ಕಡೆ ಮುಖಮಾಡಬೇಕಾಗುತ್ತದೆ. ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಅಸ್ಸಾಂ ಬೆಂಗಾಲ್ ಪ್ರಾಂತಕ್ಕೆ ಸೇರಿತ್ತು. ಬ್ರಿಟಿಷರು 1826 ರಿಂದ 1947ರವರೆಗೂ ಅಸ್ಸಾಮಿನ ಟೀ ತೋಟಗಳಲ್ಲಿ ಕಡಿಮೆ ಕೂಲಿಗೆ ಕೆಲಸ ಮಾಡಲು ಕೂಲಿಯಾಳುಗಳನ್ನು ವಲಸೆ ಮಾಡಿಸಿರುತ್ತಾರೆ. ಹಾಗೆಯೇ ಸ್ವಾತಂತ್ರದ ನಂತರ ಎರಡು ಮುಖ್ಯ ವಲಸೆಗಳಾಗುತ್ತವೆ. ಮೊದಲನೆಯದು ಪಾಕಿಸ್ತಾನ ಹಾಗೂ ಭಾರತ ವಿಭಜನೆಯಾದಾಗ ಅಂದಿನ ಪೂರ್ವ ಪಾಕಿಸ್ತಾನದಿಂದ ಅಂದರೆ ಇಂದಿನ ಬಾಂಗ್ಲಾದೇಶದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಅಸ್ಸಾಮಿಗೆ ವಲಸೆ ಬರುತ್ತಾರೆ ಹಾಗೂ ಎರಡನೆಯದಾಗಿ 1971ರಲ್ಲಿ ಬಾಂಗ್ಲಾ ಪಾಕಿಸ್ತಾನದಿಂದ ಸ್ವತಂತ್ರವಾದಾಗಲೂ ಸಹ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಅಸ್ಸಾಮಿಗೆ ವಲಸೆ ಬರುತ್ತಾರೆ. ಆ ಸಂದರ್ಭದಲ್ಲಿ ಮೂಲ ಅಸ್ಸಾಮಿಗರು ಅಕ್ರಮವಾಗಿ ವಲಸೆ ಬಂದಂತಹವರಿಗೆ ಭಾರತದ ಪೌರತ್ವ ನೀಡುವುದನ್ನು ಪ್ರಶ್ನಿಸಿದ್ದಲ್ಲದೇ, ಅಸ್ಸಾಮಿನ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟವು 1979-85ರವರೆಗೂ ಹೋರಾಟ ನಡೆಸಿ ಅಕ್ರಮ ವಲಸಿಗರನ್ನು ಗುರುತಿಸಿ, ಅವರನ್ನು ಅಸ್ಸಾಮಿನಿಂದ ಹೊರಹಾಕುವಂತೆ ಕೇಂದ್ರ ಸರಕಾರದ ಮುಂದೆ ಒತ್ತಡವನ್ನು ತರುತ್ತದೆ. ಅಲ್ಲದೇ ಭಾರತದ ಸುಪ್ರೀಂ ಕೋರ್ಟಿನ ಮುಂದೆ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಹೂಡಿ ಅಕ್ರಮ ವಲಸಿಗರಿಗೆ ಪೌರತ್ವ ನೀಡುವುದನ್ನು ಪ್ರಶ್ನಿಸಲಾಗುತ್ತದೆ. 1979 ರಿಂದ 1985ರವರೆಗೆ ನಡೆದ ವಿಧ್ಯಾರ್ಥಿ ಸಂಘಟನೆಯ ಒಕ್ಕೂಟದ ಹೋರಾಟದಿಂದಾಗಿ ಅವರೊಂದಿಗೆ ಅಂದಿನ ಕೇಂದ್ರ ಸರಕಾರವು 1985ರ ಆಗಸ್ಟ್ 15 ರಂದು ಅಸ್ಸಾಂ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ ಹಾಗೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಅಸ್ಸಾಮಿನಲ್ಲಿರುವ ಅಕ್ರಮ ಮತದಾರರನ್ನು ಪೌರತ್ವ ಕಾಯ್ದೆಯಡಿಯಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿಯ ಮೂಲಕ ಗುರುತಿಸಿ, ಮತದಾರ ಪಟ್ಟಿಯಿಂದ ಅಂತಹವರನ್ನು ತೆಗೆಯುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನವನ್ನು ನೀಡುತ್ತದೆ. ಹಾಗಾಗಿ 1985ರಲ್ಲಿ ಕೇಂದ್ರ ಸರಕಾರ ಹಾಗೂ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟಗಳ ನಡುವೆಯಾಗಿದ್ದ ಅಸ್ಸಾಂ ಒಪ್ಪಂದದಂತೆ 1955ರ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗುತ್ತದೆ. ಸದರಿ ತಿದ್ದುಪಡಿಯಂತೆ 1955ರ ಪೌರತ್ವ ಕಾಯ್ದೆಗೆ ಕಲಂ 6ಎ ಅನ್ನು ಸೇರ್ಪಡಿಸಲಾಗುತ್ತದೆ. 1985ರ ಅಸ್ಸಾಂ ಒಪ್ಪಂದದಂತೆ ಈ ಕೆಳಕಂಡಂತೆ ಅಸ್ಸಾಮಿನಲ್ಲಿ ನೆಲೆಸಿರುವವರಿಗೆ ಪೌರತ್ವ ನೀಡಲಾಗುತ್ತದೆ.
1. ಭಾರತದಲ್ಲಿ ಜನಿಸಿರುವ ಹಾಗೂ ಜನವರಿ 1, 1966ಕ್ಕೆ ಮೊದಲು ಬಾಂಗ್ಲಾದೇಶದಿಂದ ಅಸ್ಸಾಂಗೆ ವಲಸೆ ಬಂದಿರುವವರು.
2. ಜನವರಿ 1, 1966 ರಿಂದ ಮಾರ್ಚ್ 25, 1971 ರ ನಡುವೆ ಅಸ್ಸಾಮಿಗೆ ವಲಸೆ ಬಂದಿರುವವರೂ ಸಹ ಎನ್‌ಆರ್‌ಸಿಯಡಿಯಲ್ಲಿ ಅವರಾಗಿಯೇ ನೋಂದಣಿಮಾಡಿಕೊಂಡಿದ್ದು, 10 ವರ್ಷಗಳ ಕಾಲ ವಾಸಮಾಡಿರುವವರಿಗೆ
3. ಮಾರ್ಚ್ 25, 1971 ರ ನಂತರ ಅಸ್ಸಾಮಿಗೆ ವಲಸೆ ಬಂದಿರುವವರಿಗೆ ಪೌರತ್ವ ನಿರಾಕರಿಸಿ, ಅವರನ್ನು ಅಸ್ಸಾಮಿನಿಂದ ಹೊರಹಾಕುವುದು.
ಎನ್‌ಆರ್‌ಸಿಯಂತೆಯೇ ಚರ್ಚೆಯಾಗುತ್ತಿರುವುದು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್). ಎನ್‌ಪಿಆರ್ ಎಂಬುದು ಭಾರತದಲ್ಲಿರುವ ಸಾಮಾನ್ಯ ನಿವಾಸಿಗಳ ನೋಂದಣಿಯಷ್ಟೆ. ಈ ನೋಂದಣಿಯು ಭಾರತದ ಪೌರತ್ವ ಕಾಯ್ದೆ 1955 ಹಾಗೂ ನಾಗರಿಕರ ನೋಂದಣಿ ಹಾಗೂ ರಾಷ್ಟ್ರೀಯ ಗುರುತಿನ ಚೀಟಿ ಹಂಚಿಕೆ ನಿಯಮ 2003ರಡಿಯಲ್ಲಿ ಗ್ರಾಮ, ನಗರ, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪಡೆದ ಮಾಹಿತಿಯನ್ನು ಒಳಗೊಂಡಿರುತ್ತದೆ. ಅಲ್ಲದೇ ಮಾಹಿತಿಯು ಯಾವ ವ್ಯಕ್ತಿ ಆರು ತಿಂಗಳ ಅವಧಿಯಲ್ಲಿ ಎಲ್ಲಿ ವಾಸವಾಗಿದ್ದ ಹಾಗೂ ಮುಂದಿನ ಆರು ತಿಂಗಳಿನಲ್ಲಿ ಎಲ್ಲಿ ವಾಸವಾಗಲು ಇಚ್ಛಿಸುತ್ತಾನೆ ಎಂಬುದರ ಸಮಗ್ರ ಮಾಹಿತಿಯನ್ನು ಒಳಗೊಂಡಿರುತ್ತದೆ. ಒಟ್ಟಾರೆ ದೇಶದ ಪ್ರತಿ ಪ್ರಜೆಯ ಚಲನವಲನಗಳನ್ನು ಎನ್‌ಪಿಆರ್ ದಾಖಲೆ ಮಾಡುತ್ತದೆ. ಮೊದಲಿಗೆ 2010 ರಲ್ಲಿ ಈ ರೀತಿಯ ಮಾಹಿತಿಯನ್ನು ಸಂಗ್ರಹಿಸಲಾಯಿತು ಹಾಗೂ ಎರಡನೆಯ ಬಾರಿಗೆ 2015ರಲ್ಲಿ ಸಂಗ್ರಹ ಮಾಡಲಾಗಿದೆ. ಈ ರೀತಿ ಸಂಗ್ರಹಿಸಿದ ಮಾಹಿತಿಯನ್ನು ಆಧಾರ್ ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ. ಎನ್‌ಪಿಆರ್‌ಗೆ ಮಾಹಿತಿಯನ್ನು ಜನಗಣತಿ ಇಲಾಖೆ ಮಾಡುತ್ತಿದೆ. ಈ ನೋಂದಣಿಯಡಿಯಲ್ಲಿ ಒಬ್ಬ ವ್ಯಕ್ತಿಯ ಎಲ್ಲಾ ಖಾಸಗಿ ಮಾಹಿತಿಯನ್ನು ಕಲೆಹಾಕಲು ಈಗಿನ ಕೇಂದ್ರ ಸರಕಾರ ನಿರ್ಧರಿಸಿದ್ದು, 2020ರ ಜನಗಣತಿಯೊಂದಿಗೆ ಮಾಹಿತಿಯನ್ನು ಪಡೆಯಲು ತೀರ್ಮಾನಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ
2019 ಹಾಗೂ ಎನ್‌ಆರ್‌ಸಿ, ಎನ್‌ಪಿಆರ್ ನಡುವಿನ ಗೊಂದಲಗಳು
ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ 2019 ಬೆಳಕಿಗೆ ಬಂದ ನಂತರ ಭಾರತದಲ್ಲಿ ನಿರಂತರ ಪ್ರತಿಭಟನೆಗಳು, ಕಾಯ್ದೆಯ ಸಮರ್ಥನೆಯ ನಾಟಕಗಳು ಹಾಗೂ ಅಸ್ಸಾಮಿನಲ್ಲಿನ ಜನರ ಹೋರಾಟ ನಡೆಯುತ್ತಲೇ ಇವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಒಂದು ರೀತಿಯ ಯುದ್ಧದ ವಾತಾವರಣವಿದ್ದರೆ, ದೇಶದಾದ್ಯಂತ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಪೌರತ್ವ ತಿದ್ದುಪಡಿಯ ಕಾಯ್ದೆ 2019ರ ಅನುಷ್ಠಾನದಿಂದ ದೇಶದ ಜನರಿಗೆ ಯಾವ ರೀತಿಯ ಪರಿಣಾಮ ಆಗುತ್ತೆ ಹೇಳಿ ಎಂಬುದು ಕಾಯ್ದೆ ಪರ ಇರುವವರು ಎತ್ತುತ್ತಿರುವ ಪ್ರಶ್ನೆ. ಕೇವಲ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಮಾತ್ರ ಪರಿಗಣಿಸಿದರೆ ಮೇಲ್ನೋಟಕ್ಕೆ ಮುಸ್ಲಿಮ್ ವಲಸಿಗರನ್ನು ಈ ತಿದ್ದುಪಡಿಯಲ್ಲಿ ಹೊರಗಿಟ್ಟಿದ್ದಾರೆ ಎಂದೆನಿಸುತ್ತದೆ ಹಾಗೂ ದೇಶದ ನಿವಾಸಿ ಮುಸ್ಲಿಮರಿಗೆ ತೊಂದರೆ ಇಲ್ಲ ಎಂಬ ಕಾಯ್ದೆ ಪರ ಇರುವವರ ಹಸಿ ಸುಳ್ಳು ನಿಜವೆನಿಸದೇ ಇರದು. ಆದರೆ ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಇವೆರಡರ ಜೊತೆಯಾಗಿ ಪೌರತ್ವ ಕಾಯ್ದೆಯ ತಿದ್ದುಪಡಿ 2019ನ್ನು ಓದಿದಾಗ ಮಾತ್ರ ನಿಜವಾದ ತಾರತಮ್ಯ ಹಾಗೂ ಕೇಂದ್ರ ಸರಕಾರದ ಹಿಡನ್ ಅಜೆಂಡಾ ತಿಳಿಯುವುದು.
ಮೊದಲಿಗೆ ಭಾರತದ ಇಂದಿನ ಗೃಹಮಂತ್ರಿಗಳು ಚುನಾವಣಾ ಸಮಯದಲ್ಲಿ ಭಾಷಣ ಮಾಡುವಾಗ ನೀಡಿರುವ ಹೇಳಿಕೆಯನ್ನು ಗಮನಿಸಬೇಕಾಗುತ್ತದೆ. ಮೊದಲಿಗೆ ಪೌರತ್ವ ಕಾಯ್ದೆ ಬರುತ್ತದೆ ಆನಂತರ ಎನ್‌ಆರ್‌ಸಿ ಬರುತ್ತದೆ. ಆ ಮೂಲಕ ಕೆಲವು ಸಮುದಾಯದವರನ್ನು ದೇಶದಿಂದ ಹೊರಹಾಕುತ್ತೇವೆ ಎಂಬ ಮಾತನಾಡುತ್ತಾರೆ. ಅವರ ಚುನಾವಣಾ ಪ್ರಣಾಳಿಕೆಯಂತೆಯೇ ಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿಯಾಗಿದೆ. ಇನ್ನುಳಿದಿರುವುದು ಎನ್‌ಆರ್‌ಸಿ. ಜಾರಿಗೆ ತರುವುದು ಮಾತ್ರ. ಈಗಿನ ಚಳವಳಿ ತೀರ್ವಗೊಂಡಿರುವುದರಿಂದ ಎನ್‌ಆರ್‌ಸಿ ಜಾರಿ ಮಾಡುವುದು ಕೇಂದ್ರ ಸರಕಾರದ ಮುಂದಿಲ್ಲ ಎಂಬಿತ್ಯಾದಿ ಹೇಳಿಕೆ ನೀಡಿ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಆ ಮಾತಿನ ಹಿಂದೆ ಮತ್ತೊಂದು ಕಾರಣವೂ ಇದೆ, ಅದೇನೆಂದರೆ ಎನ್‌ಆರ್‌ಸಿ ಯನ್ನು ಅಸ್ಸಾಮಿಗೆ ಸೀಮಿತವಾಗಿ ಮಾತ್ರ ಜಾರಿಗೆ ತರಲಾಗಿದೆ ಹಾಗೂ ಏಕಾಏಕಿ ದೇಶದಾದ್ಯಂತ ಅನ್ವಯ ಮಾಡಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾದ ಮಾಹಿತಿಯ ಅಗತ್ಯವಿದೆ. ಹಾಗಾಗಿಯೇ 2020ರ ಜನವರಿಯಿಂದ ಸೆಪ್ಟಂಬರ್ ಅವಧಿಯಲ್ಲಿ ಎನ್‌ಪಿಆರ್ ಮೂಲಕ ಸಾಮಾನ್ಯ ನಿವಾಸಿಗಳಾರು, ಅಕ್ರಮ ವಲಸಿಗರಾರು ಎಂಬ ಮಾಹಿತಿಯನ್ನು ಕಲೆಹಾಕುವ ಪ್ರಯತ್ನದಲ್ಲಿದ್ದಾರೆ. ಆ ಮಾಹಿತಿಯ ಕ್ರೋಡೀಕರಣಕ್ಕೆ ಕಾಲಾವಕಾಶದ ಅಗತ್ಯವಿರುವುದರಿಂದ ಎನ್‌ಆರ್‌ಸಿಯ ಜಾರಿಯನ್ನು ಮುಂದೂಡಲಾಗುತ್ತಿದೆ.
ಹಲವರಿಗೆ ಒಂದು ಪ್ರಶ್ನೆಯೂ ಮೂಡಬಹುದು. ಎನ್‌ಆರ್‌ಸಿ ದೇಶದಾದ್ಯಂತ ಜಾರಿಗೆ ತಂದರೆ ಏನು ತೊಂದರೆ ಇದೆ, ಅವರು ಕೇಳುವ ದಾಖಲೆ ನೀಡಿದರೆ ಆಗಬಹುದಲ್ಲಾ ಅಂತ. ಆದರೆ ಅದು ಅಷ್ಟು ಸುಲಭವಾಗಿಲ್ಲ. ಅಸ್ಸಾಮಿನಲ್ಲಿ ಎನ್‌ಆರ್‌ಸಿ ನೋಂದಣಿಗೆ ನೀಡಬೇಕಿರುವ ದಾಖಲೆಗಳ ಕುರಿತು ನೋಡಬೇಕಾಗುತ್ತದೆ. ಅಸ್ಸಾಂ ಒಪ್ಪಂದದಂತೆ ಮಾರ್ಚ್ 25, 1971 ನ್ನು ಎನ್‌ಆರ್‌ಸಿಯ ಗಡುವಾಗಿ ನಿರ್ಧರಿಸಲಾಗಿದೆ. ಅದಕ್ಕೆ ಕಾರಣವನ್ನೂ ಸಹ ಮೇಲೆ ವಿವರಿಸಲಾಗಿದೆ. ಹಾಗಾಗಿ ಅಸ್ಸಾಮಿನಲ್ಲಿ ಯಾರಾದರೂ ನಾಗರಿಕ ಎಂದು ನೋಂದಣಿ ಮಾಡಬೇಕಾದರೆ ಆತ 1971ಕ್ಕಿಂತ ಮೊದಲೇ ಭಾರತದಲ್ಲಿ ಜನಿಸಿದ್ದೇನೆ ಎಂದು ತೋರಿಸಲು ಆತನ ಜನನ ಪ್ರಮಾಣಪತ್ರ ನೀಡಬೇಕಾಗುತ್ತದೆ. ಒಂದು ವೇಳೆ ಆತನ ಜನನ ಪ್ರಮಾಣಪತ್ರ ಇಲ್ಲದೇ ಇದ್ದರೆ ಆತನ ತಾಯಿ ಅಥವಾ ತಂದೆ ಅಲ್ಲಿನ ನಿವಾಸಿಗಳು ಅಂತ ತೋರಿಸಲು 1951ರ ಮತದಾರರ ಪಟ್ಟಿಯನ್ನು ನೀಡಬೇಕಾಗುತ್ತದೆ. ಇದು ನಿಜಕ್ಕೂ ಸಾಧ್ಯವಿದೆಯಾ? ಭಾರತದಲ್ಲಿ ಎಷ್ಟೋ ಜನರ ಬಳಿ ಇದುವರೆಗೂ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿಯೇ ಇಲ್ಲ. ಅಲ್ಲದೇ ಭಾರತದ ಜನಸಂಖ್ಯೆಯ 60 ಶೇ. ಜನರ ಬಳಿ ಯಾವುದೇ ಭೂಮಿಯೂ ಸಹ ಇಲ್ಲ. ಹೀಗಿರುವಾಗ ಅವರು ಕೇಳುವ ದಾಖಲೆಯನ್ನು ಒದಗಿಸುವುದಾದರೂ ಹೇಗೆ? ಹಾಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ 2019 ಕೇವಲ ಮುಸ್ಲಿಮರನ್ನು ಗುರಿಯಾಗಿರಿಸಿರುವುದಲ್ಲ, ಈ ದೇಶದ ಎಲ್ಲಾ ಸಮುದಾಯದ ಬಡವರು, ಆದಿವಾಸಿಗಳು, ಅಲೆಮಾರಿಗಳು, ದಲಿತರು, ಒಕ್ಕಲಿಗರು, ಲಿಂಗಾಯತರು ಇತ್ಯಾದಿ ಇತ್ಯಾದಿ. ಆ ಕಾರಣಕ್ಕಾಗಿಯೇ ನೀವೃತ್ತ ನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ನಾಗಮೋಹನ್ ದಾಸ್ ರವರು ಹೇಳಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ 2019 ದೇಶದ ಮೂಲ ನಿವಾಸಿಗಳ ವಿರುದ್ಧವಿದೆ ಎಂದು.
ಕೇಂದ್ರ ಸರಕಾರ ಬಹಳ ಬುದ್ಧಿವಂತಿಕೆಯಿಂದಲೇ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಮತ ರಾಜಕಾರಣ ಮಾಡುತ್ತಿದೆ ಎಂದು ಹೇಳುತ್ತಲೇ ಅಸ್ಸಾಮಿನಲ್ಲಿ ಎನ್‌ಆರ್‌ಸಿಯಂತೆ 1971ರ ಗಡುವು ಇದ್ದರೂ ತಿದ್ದುಪಡಿ ಕಾಯ್ದೆಯಡಿ 2014ರವರೆಗಿನ ಅಕ್ರಮ ವಲಸಿಗರಿಗೆ ಪೌರತ್ವ ನೀಡುತ್ತಿದೆ. ಇದು ಮತ ರಾಜಕಾರಣದೊಂದಿಗೆ, ದೇಶದ ಮೂಲನಿವಾಸಿಗಳು, ಅಲ್ಪಸಂಖ್ಯಾತರನ್ನು ಒಕ್ಕಲೆಬ್ಬಿಸುವ ಪ್ರಯತ್ನವಾಗಿದೆ. ಹಾಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ 2019ನ್ನು ಹಿಂಪಡೆಯುವಂತೆ ದೇಶದ ಎಲ್ಲಾ ನಾಗರಿಕರೂ ಜಾತಿ, ಧರ್ಮದ ಹಿತಾಸಕ್ತಿ ಬಿಟ್ಟು ಒಟ್ಟಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ತರದೇ ಹೋದ ಪಕ್ಷದಲ್ಲಿ ಮುಂದೊಂದು ದಿನ ನಮ್ಮ ನೆಲದಲ್ಲಿ ನಾವೇ ಅಕ್ರಮ ವಲಸಿಗರಾಗುತ್ತೇವೆ.