ಜಗದ ಚಲನೆ -ಶತಮಾನದ ದಾರಿ; ಒಂದು ಸಂವಾದ
ಭಾರತದಲ್ಲಿ 2010ರಲ್ಲಿ 25 ಗೇಮಿಂಗ್ ಕಂಪೆನಿಗಳಿದ್ದರೆ 2019ರಲ್ಲಿ ಈ ಪ್ರಮಾಣ 275ರ ಪ್ರಮಾಣಕ್ಕೇರುತ್ತದೆ. ಈ ಹೊಸ ಆಟಗಳನ್ನು ಡೌನ್ ಲೋಡ್ ಮಾಡುವ ಪ್ರಮಾಣ; ಭಾರತದಲ್ಲಿ ಸರಾಸರಿ 58, ಅಮೆರಿಕ 53, ಚೀನಾ 30, ಟರ್ಕಿ 21 ಇದೆ. ಪ್ರತಿ ಬಳಕೆದಾರನ ಮೇಲೆ ಟ್ವಿಟರ್ 8 ಡಾಲರ್‌ಗಳನ್ನು, ಫೇಸ್ ಬುಕ್ 19 ಡಾಲರ್, ಗೂಗಲ್ 27 ಡಾಲರ್, ಫೋರ್ಟನೈಟ್ ಗೇಮ್ 96 ಡಾಲರ್‌ಗಳನ್ನು ಖರ್ಚು ಮಾಡುತ್ತಿದೆಯಂತೆ. ಈ ಅಭ್ಯಾಸವು ಹೊಸ ತಲೆಮಾರಿನಲ್ಲಿ ನಿಷ್ಕ್ರಿಯತೆಯನ್ನು ಸೃಷ್ಟಿಸುತ್ತಿದೆಯಂತೆ. ಆರ್ಥಿಕತೆ ಮಂದಗತಿ ಬೆಳವಣಿಗೆಗೂ ಮೊಬೈಲ್ ಗೇಮಿಂಗಿಗೂ ಸಂಬಂಧವಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಹೊಸ ಆಹಾರ ಪದ್ಧತಿಯೂ ಹುಟ್ಟಿಕೊಳ್ಳುತ್ತಿದೆ. ಏಕ ಮುಖಿಯಾದ ವಿಚಾರಲಹರಿ, ಹಿಂಸಾ ಪ್ರವೃತ್ತಿ, ದ್ವೇಷ, ಅಸೂಕ್ಷ್ಮತೆಗಳನ್ನು, ಏಕಾಂಗಿತನ, ಖಿನ್ನತೆ, ಹತಾಶೆಯನ್ನು ಇವುಗಳು ಸೃಜಿಸುತ್ತಿವೆ.
ಮೊನ್ನೆ ಟಿವಿಯೊಂದರಲ್ಲಿ ದೇಶದ ಪ್ರಮುಖ ಪತ್ರಕರ್ತ ಪ್ರಣಯ್ ರಾಯ್ ಮತ್ತು ಜಾಗತಿಕ ಆರ್ಥಿಕ ತಜ್ಞರಾದ ರುಚಿರ್ ಶರ್ಮಾ ‘ಡೆಮಾಕ್ರಸಿ ಆನ್ ದ ರೋಡ್’ ಪುಸ್ತಕದ ಕರ್ತೃ ನಡುವಿನ ಮಾತುಕತೆ ಗಮನಿಸಿದೆ. ಜಗತ್ತಿನ ಆಗುಹೋಗುಗಳನ್ನು ಕುತೂಹಲದಿಂದ ಗಮನಿಸುತ್ತಿರುವವರು ಈ ಮಾತುಕತೆಯನ್ನು ಕೇಳುವುದು ಒಳ್ಳೆಯದು. ನೂರು ವರ್ಷಗಳಷ್ಟು ದೀರ್ಘವಾದ ಆರ್ಥಿಕ, ರಾಜಕೀಯ, ಸಾಮಾಜಿಕ ಸಂಗತಿಗಳನ್ನು ದಾಖಲೆಗಳ ಆಧಾರದ ಮೇಲೆ ಚರ್ಚಿಸುವುದರಿಂದ ಈ ಮಾತುಕತೆಗೊಂದು ಅಧಿಕೃತತೆ ದಕ್ಕುತ್ತದೆ. ಆರ್ಥಿಕತೆಯೆಂಬ ಮೂಲ ಸಂರಚನೆಯು ಸಮಾಜದ ಉಳಿದ ರಚನೆಗಳನ್ನು ಪ್ರಭಾವಿಸುತ್ತದೆ ಎಂಬ ತತ್ವವನ್ನು ಈ ಮಾತುಕತೆಯು ಇನ್ನಷ್ಟು ಬಲ ಪಡಿಸುತ್ತದೆ. ಈ ಸಂವಾದವು ದಶಕದ ಆರ್ಥಿಕ ಚಲನೆ ಮತ್ತು ಬದಲಾವಣೆಗಳನ್ನು ಆಧಾರವಾಗಿಟ್ಟುಕೊಂಡು ವಿಶ್ಲೇಷಿಸುವ ವಿಧಾನದ್ದಾಗಿದೆ.
ಸಾಮಾನ್ಯವಾಗಿ ಜನ ಅಮೆರಿಕ ವಿಪರೀತ ಸಂಕಷ್ಟದಲ್ಲಿದೆ. ಆ ದೇಶದ ಉದ್ಯೋಗ ಸೃಷ್ಟಿ ಪ್ರಮಾಣ 50ವರ್ಷಗಳಷ್ಟು ಹಿಂದಿನ ಮಟ್ಟಕ್ಕೆ ಕುಸಿದು ಹೋಗಿದೆ ಎಂದು ಮಾತನಾಡುತ್ತಾರೆ. ಇದು ಜನರ ಬದುಕಿನ ವಿಚಾರದಲ್ಲಿ ನಿಜವಾದರೂ ಅಲ್ಲಿನ ಬೃಹತ್ ಕಂಪೆನಿಗಳ ಆರ್ಥಿಕತೆಯ ವಿಚಾರ ಬೇರೆಯೇ ಇದೆ. ಇದನ್ನು ಸಮರ್ಥಿಸುವಂತೆ ಟ್ರಂಪ್ ‘ಅಮೆರಿಕ ಅಗೈನ್’ ಎಂಬ ಘೋಷಣೆಯನ್ನು ಮತ್ತೆ ಮತ್ತೆ ಕೂಗುತ್ತಾರೆ. ಹಿಂದಿನ ಅಧ್ಯಕ್ಷರುಗಳ ಅವಧಿಗಳಲ್ಲಿ ತೆಗೆದುಕೊಂಡ ತೀರ್ಮಾನಗಳಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ, ಅದನ್ನು ಸರಿಪಡಿಸಿ ಮತ್ತೆ ಜಗತ್ತಿನ ವೈಭವಯುತ ದೇಶವನ್ನಾಗಿಸೋಣ ಎಂಬುದು ಟ್ರಂಪ್ ಘೋಷಣೆಯ ಹಿಂದಿನ ಅರ್ಥ. ವಿಪರೀತ ಆಟೋಮೇಷನ್ ಕಡೆಗೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಡೆಗೆ ಸಾಗುತ್ತಿರುವ ಅಮೆರಿಕದ ಆರ್ಥಿಕ ವಾಸ್ತವ ಟ್ರಂಪ್ ಹೇಳುತ್ತಿರುವುದಕ್ಕಿಂತ ಬೇರೆ ಇದೆ. 2010ರಿಂದೀಚಿಗೆ ಜಗತ್ತಿನ ಆರ್ಥಿಕತೆಯಲ್ಲಿ ಅಮೆರಿಕದ ಪಾಲು 25 ಶೇ. ಹೆಚ್ಚಾಗಿದೆ. ಯುರೋಪಿಯನ್ ಒಕ್ಕೂಟ 15ರಷ್ಟು, ಚೀನಾ ಶೇ. 9ರಿಂದ 16, ಭಾರತದ್ದು ಶೇ 2.8 ರಿಂದ 3.4ರಷ್ಟು ಹೆಚ್ಚಾಗಿದೆ. ಸ್ಟಾಕ್ ಮಾರುಕಟ್ಟೆಯಲ್ಲಿ ಅಮೆರಿಕದ ಪಾಲು ಶೇ. 256ರಷ್ಟಿದೆ. 1950ರಿಂದೀಚೆಗೆ ನೋಡಿದರೂ 1960, 1990, 2010ರ ದಶಕಗಳು ಅಮೆರಿಕದ ದಶಕಗಳು. 80ರ ದಶಕವನ್ನು ತನ್ನದಾಗಿಸಿಕೊಂಡಿದ್ದ ಜಪಾನ್ 1989ರಲ್ಲಿ ಆರ್ಥಿಕ ಕುಸಿತಕ್ಕೆ ಸಿಕ್ಕ ನಂತರ ದೊಡ್ಡ ಪ್ರಮಾಣದಲ್ಲಿ ಚೇತರಿಸಿಕೊಳ್ಳಲಿಲ್ಲ. ಜಗತ್ತಿನ ಸ್ಟಾಕ್ ಮಾರುಕಟ್ಟೆಯಲ್ಲಿ ಅಮೆರಿಕದ ಪಾಲು ಶೇ. 56ರಷ್ಟಿದೆ.
ಪ್ರಸ್ತುತ ಸ್ಥಿತಿಯಲ್ಲಿ ಫ್ಯಾಂಗ್ಸ್ ಫೇಸ್ ಬುಕ್, ಆಲ್ಫಾಬೆಟ್, ನೆಟ್ ಫ್ಲಿಕ್ಸ್, ಗೂಗಲ್ ಎಂದು ಕರೆಸಿಕೊಳ್ಳುವ ಈ ಕಂಪೆನಿಗಳು 634 ಪಟ್ಟು ಸಂಪತ್ತನ್ನು ಷೇರು ಮಾರುಕಟ್ಟೆಯಲ್ಲಿ ಗಳಿಸಿಕೊಂಡಿವೆ. ಈ ದೈತ್ಯ ಕಂಪೆನಿಗಳಿಗೆ ಹೋಲಿಸಿದರೆ ಬ್ರಿಕ್ಸ್ ಬ್ರೆಝಿಲ್, ಇಂಡಿಯಾ, ಚೀನಾ, ಸೌತ್ ಆಫ್ರಿಕಾ ದೇಶಗಳ ಬೆಳವಣಿಗೆ ಶೇ. 34 ರಷ್ಟಿದೆ. ತಂತ್ರಜ್ಞಾನ ಮತ್ತು ಬಿಗ್ ಡೇಟಾದ ಯಜಮಾನಿಕೆಯನ್ನು ಸಾಧಿಸಿದ ಅಮೆರಿಕದ ಕಂಪೆನಿಗಳು ಕಳೆದ ದಶಕವನ್ನು ನಿಸ್ಸಂದೇಹವಾಗಿ ತಮ್ಮದನ್ನಾಗಿಸಿಕೊಂಡಿವೆ. ಅವುಗಳ ಸಂಪತ್ತು ಹಿಂದೆಂದಿಗಿಂತಲೂ ಬೃಹತ್ ಪ್ರಮಾಣದಲ್ಲಿ ವೃದ್ಧಿಸಿದೆ.
ಈ ನಡುವೆ ಆಸಕ್ತಿಯ ವಿಷಯವೊಂದಿದೆ; ಕಳೆದ ಮೂವತ್ತು ವರ್ಷಗಳ ದಾಖಲೆಗಳನ್ನು ಗಮನಿಸಿದರೆ ಒಂದು ದಶಕದಲ್ಲಿ ಜಗತ್ತಿನ ಮುಂಚೂಣಿ ಸ್ಥಾನದಲ್ಲಿದ್ದ ಶೇ. 90ರಷ್ಟು ಕಂಪೆನಿಗಳು ಮರು ದಶಕದಲ್ಲಿ ತಮ್ಮ ಮುಂಚೂಣಿ ಸ್ಥಾನವನ್ನು ಕಳೆದುಕೊಂಡಿವೆ.ವಾಲ್ ಮಾರ್ಟ್, ಮೈಕ್ರೋಸಾಫ್ಟ್, ಜೆನರಲ್ ಇಲೆಕ್ಟ್ರಿಕ್, ಕಂಪೆನಿಗಳು ಮಾತ್ರ ಎರಡು- ಮೂರು ಬಾರಿ ಪುನರಾವರ್ತನೆಗೊಂಡು ಮೊದಲ ಹತ್ತು ಕಂಪೆನಿಗಳಲ್ಲಿ ಸ್ಥಾನ ಉಳಿಸಿಕೊಂಡಿವೆ. ದಶಕವೊಂದರಲ್ಲಿ ಹೊಸದಾಗಿ ಮುಂಚೂಣಿಗೆ ಬಂದ ಕಂಪೆನಿಗಳು ಶೇ. 600ರಷ್ಟು ಪ್ರಗತಿ ಸಾಧಿಸಿದರೆ ಮರು ದಶಕದಲ್ಲಿ ಶೇ. 11ರಷ್ಟು ಕುಸಿತವಾಗಿರುವುದನ್ನು ಹಲವು ಅಂಕಿಅಂಶಗಳು ತೋರಿಸುತ್ತವೆ.
ಜಗತ್ತಿನಲ್ಲಿ ದೊಡ್ಡ ಕಂಪೆನಿಗಳ ಮಾರುಕಟ್ಟೆ ಬಂಡವಾಳದ ಪಾಲು 2010ರಲ್ಲಿ ಶೇ. 9ರಷ್ಟಿದ್ದರೆ, 2019ರ ಹೊತ್ತಿಗೆ ಶೇ. 14ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಮೊದಲ ಹತ್ತು ದೊಡ್ಡ ಕಂಪೆನಿಗಳ ಬಂಡವಾಳ ಪಾಲು ಶೇ. 55ಕ್ಕೆ ಏರಿಕೆಯಾಗಿದೆ.
ಅಮೆರಿಕದಲ್ಲಿ ದೊಡ್ಡ ಕಂಪೆನಿಗಳ ಬೆಳವಣಿಗೆ ಶೇ. 230 ಇದ್ದರೆ, ಸಣ್ಣ ಕೈಗಾರಿಕೆಗಳು ಶೇ. 110ರಷ್ಟು ಪ್ರಗತಿ ಸಾಧಿಸಿವೆ. ಭಾರತದಲ್ಲಿ ಇದು ಕ್ರಮವಾಗಿ ಶೇ. 115 ಮತ್ತು ಶೇ. 6 ಆಗಿದೆ. 2010ರಿಂದ 19ರವರೆಗೆ ತಂತ್ರಜ್ಞಾನ ಸಂಬಂಧಿ ಕಂಪೆನಿಗಳ ಮಾರುಕಟ್ಟೆ ಪಾಲು ಶೇ. 350ರಷ್ಟು. ಹಾಗಾಗಿ ಇಡೀ ದಶಕವನ್ನು ಈ ಕಂಪೆನಿಗಳೇ ಆಳಿವೆ. ತಾಮ್ರ, ಕಬ್ಬಿಣ, ಎಣ್ಣೆಯಂತಹ ಉಪಯೋಗಿ ಕಂಪೆನಿಗಳ ಪಾಲು ಕೇವಲ ಶೇ. 30ರಷ್ಟಿದೆ. ಹೊಸ ದಶಕದ ಪ್ರಾರಂಭದ ಹೊತ್ತಿಗೆ ನೋಡಿದರೆ ತಂತ್ರಜ್ಞಾನ ಸಂವಹನದ ಕಂಪೆನಿಗಳ ಕುಸಿತ ಕಾಣಲಾರಂಭಿಸಿವೆ. ಫೇಸ್‌ಬುಕ್ 2010ರಲ್ಲಿ ಕ್ರಿಯಾಶೀಲ ಬಳಕೆದಾರರ ಪ್ರಮಾಣ ಶೇ. 48ರಷ್ಟಿದ್ದರೆ 2019ರ ಹೊತ್ತಿಗೆ ಶೇ. 8ಕ್ಕೆ ಕುಸಿದಿದೆ. ಸ್ನಾಪ್ ಚಾಟ್ ಶೇ. 92ರಿಂದ ಶೇ. 16 ಕ್ಕಿಳಿದಿದೆ. ಟ್ವಿಟರ್ ಶೇ. 72ರಿಂದ 0ಗೆ ಇಳಿದಿದೆ. ಹಾಗೆಂದು ತಂತ್ರಜ್ಞಾನ ಸಂಬಂಧಿ ಕಂಪೆನಿಗಳೇನೂ ಮುಳುಗಿ ಹೋಗುವುದಿಲ್ಲ. ಮುಂದಿನ ದಿನಮಾನಗಳಲ್ಲಿ ಇವುಗಳ ಅಸ್ತಿತ್ವ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ಬಂಡವಾಳ ಮಾರುಕಟ್ಟೆಯ ನಾಯಕತ್ವವನ್ನು ಕಮಾಡಿಟಿ ವಲಯದ ಕಂಪೆನಿಗಳು ವಹಿಸಿಕೊಳ್ಳುತ್ತವೆ ಎಂಬುದು ಇವರ ಅಂದಾಜಾಗಿದೆ.
ಡಿ- ಗ್ಲೋಬಲೈಸೇಶನ್ ಮತ್ತು ಹೊಸ ರಾಷ್ಟ್ರವಾದದ ಉದಯ
ಇಡೀ ಜಗತ್ತಿನ ಹೊಸ ಬೆಳವಣಿಗೆ ಇದು. 80-90ರ ದಶಕವನ್ನು ಜಾಗತೀಕರಣ ಕುರಿತ ತೀವ್ರ ಚರ್ಚೆಯ ಕಾಲವೆನ್ನಬಹುದು. ಜಾಗತೀಕರಣದ ಫಲವಾಗಿ ಬೆಳವಣಿಗೆ ದರವು 2008ರಲ್ಲಿ ಶೇ. 60ಕ್ಕೆ ಏರಿಕೆ ಕಂಡಿದ್ದರೆ, 2018ರ ಹೊತ್ತಿಗೆ ಅದು ಶೇ. 56ರ ಮಟ್ಟಕ್ಕೆ ಇಳಿದಿದೆ. ಬದಲಾಗಿ ಬಹುರಾಷ್ಟ್ರೀಯ ಕಂಪೆನಿಗಳ ಮೇಲಿನ ಅಪನಂಬುಗೆ 2012ರಲ್ಲಿ ಶೇ. 30 ಇದ್ದರೆ 2017ರ ಹೊತ್ತಿಗೆ ಶೇ. 45ರಷ್ಟಕ್ಕೆ ಏರಿಕೆಯಾಗುತ್ತದೆ.ಇದೇ ಸಂದರ್ಭದಲ್ಲಿ ಭಾರತದಲ್ಲಿ ಸ್ಥಳೀಯ ಕಂಪೆನಿಗಳು ಉತ್ಪಾದಿಸಿದ ನೈಸರ್ಗಿಕ ಎಂಬ ಬ್ರಾಂಡ್‌ನಡಿ ಬಂದ ಉತ್ಪನ್ನಗಳು 2010ರಲ್ಲಿ ಶೇ. 8ರಷ್ಟಿದ್ದರೆ ದಶಕದ ಅಂತ್ಯದ ವೇಳೆಗೆ ಶೇ. 17ರ ಪ್ರಮಾಣಕ್ಕೆ ಏರಿಕೆಯಾಗಿದೆ. ಇದೇ ಹೊತ್ತಿನಲ್ಲಿ ಜಗತ್ತಿನಾದ್ಯಂತ ರಾಷ್ಟ್ರೀಯತೆಯ ಪ್ರಜ್ಞೆ ತೀವ್ರವಾಗಿರುವುದನ್ನು ಗುರುತಿಸಲಾಗಿದೆ.ಇದು ಹೇಳಿ ಕೇಳಿ ಬಿಗ್ ಡೇಟಾ ಯುಗವಾದ್ದರಿಂದ ಡೇಟಾವನ್ನು ಸಂಗ್ರಹಿಸಿ ನಿರ್ವಹಿಸುವವರು ಜಗತ್ತಿನ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ ಡೇಟಾ ಸಂಗ್ರಹಿಸುವ ಕುರಿತಾದ ನೀತಿಗಳು 45ರಿಂದ ವರ್ಷಾಂತ್ಯದ ವೇಳೆಗೆ 85ಕ್ಕೆ ಏರಿಕೆಯಾಗಿವೆ. ಜೊತೆಗೆ ದೇಶೀಯ ಸಣ್ಣ ಕಂಪೆನಿಗಳ ಪ್ರಾಬಲ್ಯ ಈ ಇಪ್ಪತ್ತರ ದಶಕದಲ್ಲಿ ದುಪ್ಪಟ್ಟಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ.
ಕಳೆದ ಶತಮಾನದ 30 ರಿಂದ 40ರ ದಶಕದ ಆಸುಪಾಸಿನಲ್ಲಿ ಎಡ -ಬಲ ಸಿದ್ಧಾಂತಗಳ ನಡುವಿನ ಧ್ರುವೀಕರಣ ಶೇ. 35ರಷ್ಟಾಗಿತ್ತು. ಇದು ನಾನೇ ಮೊದಲು, ಶ್ರೇಷ್ಠ ಎಂಬ ಮೇಲಾಟವನ್ನು ಸೃಷ್ಟಿಸಿ ಎರಡನೆಯ ಮಹಾಯುದ್ಧಕ್ಕೆ ಕಾರಣವಾಯಿತು. ಉಳಿದ ದಶಕಗಳಲ್ಲಿ ಈ ಪ್ರಮಾಣ ಶೇ. 10ರ ಒಳಗೇ ಇತ್ತು. ಮತ್ತೆ ಈಗ 2019ರ ವೇಳೆಗೆ ಹಳೆಯ ದಾಖಲೆಯಾದ ಶೇ. 35ನ್ನು ಮೀರಿ ಧ್ರುವೀಕರಣವಾಗುತ್ತಿದೆ. ಜಗತ್ತು ಒಂದರ್ಥದಲ್ಲಿ ಒಡೆದು ಹೋಗುತ್ತಿದೆ. ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿ ಡೆಮಾಕ್ರಟಿಕ್ ಪಕ್ಷದವರಾಗಿದ್ದರೂ ಅವರನ್ನು ಶೇ. 49ರಷ್ಟು ರಿಪಬ್ಲಿಕ್ಕನ್ನರು ಬೆಂಬಲಿಸಿದ್ದರಂತೆ. ಆ ನಂತರ ಅದು ನಿಧಾನಕ್ಕೆ ಕುಸಿಯುತ್ತಾ ಬಂದಿದೆ. ಈಗ ಟ್ರಂಪ್‌ಗೆ ಕೇವಲ ಶೇ. 6ರಷ್ಟು ಮಾತ್ರ ಬೆಂಬಲ ಸೂಚಿಸಿದ್ದಾರೆ. ಜನರು ಪಂಥಗಳ ವಿಚಾರದಲ್ಲಿ ಎಷ್ಟು ಕುರುಡಾಗಿ ಹೋಗಿದ್ದಾರೆಂಬುದಕ್ಕೆ ಶರ್ಮಾ ಕೆಲವು ಉದಾಹರಣೆಗಳನ್ನು ನೀಡುತ್ತಾರೆ. ಟ್ರಂಪ್ ಅಮೆರಿಕದ ಅಧ್ಯಕ್ಷರುಗಳಲ್ಲೇ ಕಡಿಮೆ ಜನಪ್ರಿಯತೆಯ ಅಧ್ಯಕ್ಷ. ಆದರೆ ಆತ ಆಯ್ಕೆಯಾದಾಗಿನಿಂದ ನಾಲ್ಕನೆ ವರ್ಷದವರೆಗೂ ಶೇ. 2-3ರಷ್ಟು ಬದಲಾವಣೆ ಬಿಟ್ಟರೆ ಅಷ್ಟೇ ಪ್ರಮಾಣದ ಸ್ಥಿರತೆಯನ್ನು ಉಳಿಸಿ ಕೊಂಡಿದ್ದಾರೆ. ಉಳಿದ ಅಧ್ಯಕ್ಷರುಗಳ ಪರಿಸ್ಥಿತಿ ಹೀಗಿರಲಿಲ್ಲ.ಅಮೆರಿಕ ಸುತ್ತಿದ ತಜ್ಞರು ಹೇಳುವ ಮಾತು 20-25 ಸಾವಿರ ಜನಸಂಖ್ಯೆಯುಳ್ಳ ಐದಾರು ರಾಜ್ಯಗಳನ್ನು ಬಿಟ್ಟರೆ ಉಳಿದಂತೆ ಎಲ್ಲ ರಾಜ್ಯಗಳಲ್ಲೂ 2015ರ ಚುನಾವಣೆಯ ಸಂದರ್ಭದ ಪರಿಸ್ಥಿತಿಯೇ ಇದೆ, ಹಾಗಾಗಿ ಯಾರು ಬೇಕಾದರೂ ಗೆಲ್ಲಬಹುದಾದ ವಾತಾವರಣ ಇದೆಯಂತೆ.
ಹೊಸ ತಲೆಮಾರಿನ ಉದಯ ಮತ್ತು ನವ ಉಪಯೋಗವಾದದ ಬೆಳವಣಿಗೆ
ಪ್ರಸ್ತುತ ಜಗತ್ತಿನಲ್ಲಿ 21 ವರ್ಷ ವಯಸ್ಸಿನೊಳಗಿರುವವರ ಜೆಡ್ ತಲೆಮಾರು ಸಂಖ್ಯೆ 2 ಬಿಲಿಯನ್ ಇದೆ. 22-37 ವಯಸ್ಸಿನೊಳಗಿನವರು ಮಿಲೇನಿಯಂ ತಲೆಮಾರು 1.9 ಬಿಲಿಯನ್ ರಷ್ಟಿದ್ದಾರೆ. 38-53 ವಯಸ್ಸಿನ ಜೆನ್ ಎಕ್ಸ್ ತಲೆಮಾರು 1.5 ಬಿಲಿಯನ್‌ರಷ್ಟಿದ್ದಾರೆ. ಈ ತಲೆಮಾರುಗಳ ಆದ್ಯತೆ ಬದಲಾಗಿ ಹೋಗಿದೆ. ತಿನ್ನುವ ಆಹಾರ, ಮನರಂಜನೆಯ ಆದ್ಯತೆಗಳೂ ಬದಲಾಗುತ್ತಿವೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸಂಗೀತ, ಸಿನೆಮಾ, ತಂತ್ರಜ್ಞಾನಾಧಾರಿತ ಆಟ ಮುಂತಾದವುಗಳನ್ನು ನಿರ್ವಹಿಸುವ ಕಂಪೆನಿಗಳು ಬೃಹತ್ ಪ್ರಮಾಣದ ವಹಿವಾಟು ನಡೆಸುತ್ತಿವೆ. ಇದರಿಂದಾಗಿ ಸಂಗೀತೋದ್ಯಮ ಸುಮಾರು 17 ಬಿಲಿಯನ್ ಡಾಲರ್, ಸಿನೆಮಾ 88 ಬಿಲಿಯನ್ ಡಾಲರ್, ಹೊಸ ಆಟೊಮೊಬೈಲ್ ಮುಂತಾದ ಇ ಸಾಧನಗಳನ್ನು ಬಳಸಿ ಆಡುವ ಆಟ 138 ಬಿಲಿಯನ್ ಡಾಲರ್‌ಗಳ ಬೃಹತ್ ಮಾರುಕಟ್ಟೆಯನ್ನು ಹೊಂದಿವೆ. ಭಾರತದಲ್ಲಿ 2010ರಲ್ಲಿ 25 ಗೇಮಿಂಗ್ ಕಂಪೆನಿಗಳಿದ್ದರೆ 2019ರಲ್ಲಿ ಈ ಪ್ರಮಾಣ 275ರ ಪ್ರಮಾಣಕ್ಕೇರುತ್ತದೆ. ಈ ಹೊಸ ಆಟಗಳನ್ನು ಡೌನ್ ಲೋಡ್ ಮಾಡುವ ಪ್ರಮಾಣ; ಭಾರತದಲ್ಲಿ ಸರಾಸರಿ 58, ಅಮೆರಿಕ 53, ಚೀನಾ 30, ಟರ್ಕಿ 21 ಇದೆ. ಪ್ರತಿ ಬಳಕೆದಾರನ ಮೇಲೆ ಟ್ವಿಟರ್ 8 ಡಾಲರ್‌ಗಳನ್ನು, ಫೇಸ್ ಬುಕ್ 19 ಡಾಲರ್, ಗೂಗಲ್ 27 ಡಾಲರ್, ಫೋರ್ಟನೈಟ್ ಗೇಮ್ 96 ಡಾಲರ್‌ಗಳನ್ನು ಖರ್ಚು ಮಾಡುತ್ತಿದೆಯಂತೆ. ಈ ಅಭ್ಯಾಸವು ಹೊಸ ತಲೆಮಾರಿನಲ್ಲಿ ನಿಷ್ಕ್ರಿಯತೆಯನ್ನು ಸೃಷ್ಟಿಸುತ್ತಿದೆಯಂತೆ. ಆರ್ಥಿಕತೆ ಮಂದಗತಿ ಬೆಳವಣಿಗೆಗೂ ಮೊಬೈಲ್ ಗೇಮಿಂಗಿಗೂ ಸಂಬಂಧವಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಹೊಸ ಆಹಾರ ಪದ್ಧತಿಯೂ ಹುಟ್ಟಿಕೊಳ್ಳುತ್ತಿದೆ. ಏಕ ಮುಖಿಯಾದ ವಿಚಾರಲಹರಿ, ಹಿಂಸಾ ಪ್ರವೃತ್ತಿ, ದ್ವೇಷ, ಅಸೂಕ್ಷ್ಮತೆಗಳನ್ನು, ಏಕಾಂಗಿತನ, ಖಿನ್ನತೆ, ಹತಾಶೆಯನ್ನು ಇವುಗಳು ಸೃಜಿಸುತ್ತಿವೆ.
ಈ ದಶಕಗಳ ಇನ್ನೊಂದು ಆತಂಕವೆಂದರೆ ವ್ಯಾಪಕವಾಗಿ ಬೆಳೆಯುತ್ತಿರುವ ಶತಕೋಟಿ ಡಾಲರ್‌ಗಳ ಅಧಿಪತಿಗಳ ಜೊತೆಯಲ್ಲಿ ಜನರ ಬಡತನವೂ ತೀವ್ರಗೊಳ್ಳುತ್ತಿದೆ. ಜಗತ್ತಿನಲ್ಲಿ 2010ರಲ್ಲಿ 1,011 ಜನ ಶತ ಕೋಟ್ಯಧಿಪತಿಗಳಿದ್ದರೆ 2019ರಲ್ಲಿ ಈ ಸಂಖ್ಯೆ 2,153ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಇದು ಕ್ರಮವಾಗಿ 49 ಇದ್ದದ್ದು 106 ಸಂಖ್ಯೆಗೆ ಏರಿಕೆಯಾಗಿದೆ. ಇದರ ಜೊತೆಯಲ್ಲಿ ನೈತಿಕ ಬಂಡವಾಳವಾದದ ಅಗತ್ಯ ಅಥವಾ ಬಂಡವಾಳಿಗರಲ್ಲಿ ಸಾಮಾಜಿಕ ಜವಾಬ್ದಾರಿಗಳು ಇರಬೇಕೆಂಬ ಒತ್ತಡವೂ ತೀವ್ರವಾಗುತ್ತಿದೆಯೆಂಬ ಪ್ರತಿಪಾದನೆ ಇದೆ. ಭಾರತದಲ್ಲಿ ಶತ ಕೋಟಿ ಡಾಲರ್‌ಗಳ ಅಧಿಪತಿಗಳ ತೀವ್ರ ಏರಿಕೆಯ ಜೊತೆಯಲ್ಲಿಯೇ ಭಾರತದ ಆರ್ಥಿಕತೆಯ ಕುಸಿತ ಕೂಡ ತೀವ್ರ ಪ್ರಮಾಣದಲ್ಲಿದೆಯೆಂದು ಶರ್ಮಾ ಹೇಳುತ್ತಾರೆ. ಅವರ ಪ್ರಕಾರ 2010ರಲ್ಲಿ ಜಗತ್ತಿನ 190 ರಾಷ್ಟ್ರಗಳಲ್ಲಿ 14ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕತೆಯು 2019 ರಲ್ಲಿ 44ನೇ ಸ್ಥಾನಕ್ಕೆ ಕುಸಿದಿದೆಯಂತೆ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಪತನ ಮತ್ತು ಐದನೇ ಅಂಗದ ಉದಯ
ಸಾಮಾಜಿಕ ಮಾಧ್ಯಮಗಳು ಕ್ರಿಯಾಶೀಲವಾಗಿರುವ ಈ ಕಾಲಘಟ್ಟವನ್ನು ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ‘‘ಐದನೇ ಅಂಗದ ಉದಯದ ಕಾಲ’’ ಎನ್ನುತ್ತಾರೆ. ಏಕೆಂದರೆ ಟಿವಿ ಮತ್ತು ಮುದ್ರಣ ಮಾಧ್ಯಮಗಳ ನೋಡುಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆಯಂತೆೆ. ಟಿವಿ ಮಾಧ್ಯಮ 2010 ರಲ್ಲಿ ಶೇ. 80ರಷ್ಟಿದ್ದದ್ದು 2018ರ ಹೊತ್ತಿಗೆ ಶೇ. 50ಕ್ಕೆ ಕುಸಿದು ಹೋಗಿದೆಯಂತೆೆ. ಅದರಂತೆಯೇ ಮುದ್ರಣ ಮಾಧ್ಯಮ ಕ್ರಮವಾಗಿ ಶೇ. 50ರಿಂದ ಶೇ. 15ಕ್ಕೆ ಕುಸಿದಿದೆ. ಬದಲಾಗಿ ಆನ್‌ಲೈನ್ ಸುದ್ದಿ ನೋಡುವವರ ಸಂಖ್ಯೆ 2000ದಲ್ಲಿ ಶೇ. 12 ಇದ್ದದ್ದು 2018ರ ಹೊತ್ತಿಗೆ ಶೇ. 52 ಕ್ಕೆ ಏರಿಕೆಯಾಗಿದೆ. ಸದ್ಯದ ಸ್ಥಿತಿಯಲ್ಲಿ ಭಾರತದಲ್ಲಿ 35 ವರ್ಷ ವಯಸ್ಸಿನ ಒಳಗಿನವರಲ್ಲಿ ಶೇ. 56ರಷ್ಟು ಜನ ಆನ್‌ಲೈನ್ ಸುದ್ದಿಯನ್ನು, ಶೇ. 26ರಷ್ಟು ಜನ ಟಿವಿ ಸುದ್ದಿಯನ್ನು, ಶೇ. 16ರಷ್ಟು ಜನ ಮುದ್ರಿತ ಸುದ್ದಿಯನ್ನೂ ಓದುತ್ತಿದ್ದಾರೆಂದು ಅಂಕಿ ಅಂಶಗಳು ಹೇಳುತ್ತಿವೆ. ಟ್ವಿಟರ್ ನ್ಯೂಸ್ ಮೂಲದ ಸುದ್ದಿಯನ್ನು ಜಗತ್ತಿನಾದ್ಯಂತ ನೋಡುಗರ ಪ್ರಮಾಣವು 2013ರಲ್ಲಿ ಶೇ. 52 ಇದ್ದದ್ದು 2018ರ ಹೊತ್ತಿಗೆ ಶೇ. 71ರಷ್ಟಕ್ಕೆ ಏರಿಕೆಯಾಗಿದೆಯಂತೆ. ಹೊಸ ಸಾಮಾಜಿಕ ಮಾಧ್ಯಮವು ಇಂದು ಇಬ್ಬಾಯಿ ಖಡ್ಗದಂತೆ ಕಾರ್ಯ ನಿರ್ವಹಿಸುತ್ತಿದೆ. ಅನೇಕ ಸಲ ಪ್ರಭುತ್ವದ ಅಂಕೆಗೆ ಸಿಗದಂತೆ ವರ್ತಿಸುತ್ತದೆ. ಅರಬ್ ವಸಂತದಂತಹ ಜನರ ಚಳವಳಿಯ ಹುಟ್ಟಿಗೂ ಕಾರಣವಾಗಬಲ್ಲುದು. ಜೊತೆಗೆ, ಸುಳ್ಳುಗಳನ್ನು, ಗಾಸಿಪ್‌ಗಳನ್ನು ಭಿತ್ತರಿಸುವ ಮಾಧ್ಯಮವಾಗಿಯೂ ಕೆಲಸ ಮಾಡಬಲ್ಲುದು.
ಅನೇಕ ಹೊಸ ಹೊಳಹುಗಳನ್ನೊಳಗೊಂಡ ಈ ಸಂವಾದವು ಆಸಕ್ತಿಕರವಾಗಿದೆ.