ಕಬ್ಬಿಣ ಸೇವನೆ ನೀಡುವ ಆರೋಗ್ಯಲಾಭಗಳು
ಕಬ್ಬಿಣ ಕೆಂಪು ರಕ್ತಕಣಗಳ ಉತ್ಪಾದನೆಗೆ ಅಗತ್ಯವಾಗಿರುವ ಖನಿಜವಾಗಿದೆ ಮತ್ತು ಅದು ಶರೀರದಲ್ಲಿ ಇತರ ಮಹತ್ವದ ಪ್ರಕ್ರಿಯೆಗಳಲ್ಲಿ ಪರಿಣಾಮಕಾರಿ ಪಾತ್ರವನ್ನು ಹೊಂದಿದೆ. ಆದರೆ ನಮ್ಮ ಶರೀರಕ್ಕೆ ಅಗತ್ಯವಾದಷ್ಟು ಕಬ್ಬಿಣಾಂಶ ದೊರಕದಿದ್ದರೆ ಏನಾಗುತ್ತದೆ? ಅದು ಅನೀಮಿಯಾ ಅಥವಾ ರಕ್ತಹೀನತೆಯನ್ನಂಟು ಮಾಡುತ್ತದೆ, ಅಂದರೆ ಶರೀರದಲ್ಲಿ ಆರೋಗ್ಯಕರ ಕೆಂಪು ರಕ್ತಕಣಗಳ ಕೊರತೆಯುಂಟಾಗುತ್ತದೆ.
ರಕ್ತಹೀನತೆಯನ್ನು ತಡೆಯುವುದರಿಂದ ಹಿಡಿದು ಶಕ್ತಿಯನ್ನು ಹೆಚ್ಚಿಸುವವರೆಗೆ ಹಲವಾರು ಆರೋಗ್ಯಲಾಭಗಳನ್ನು ಕಬ್ಬಿಣವು ನಮ್ಮ ಶರೀರಕ್ಕೆ ನೀಡುತ್ತದೆ. ಇಂತಹ ಕೆಲವು ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ.
♦ ರಕ್ತಹೀನತೆಯನ್ನು ತಡೆಯುತ್ತದೆ
ಹಿಮೊಗ್ಲೋಬಿನ್ ರಕ್ತದಲ್ಲಿ ಆಮ್ಲಜನಕವನ್ನು ಸಾಗಿಸುವ ಪ್ರೊಟೀನ್ ಆಗಿದ್ದು, ಇದರ ಉತ್ಪಾದನೆಯನ್ನು ಹೆಚ್ಚಿಸಲು ಮಾನವ ಶರೀರಕ್ಕೆ ಕಬ್ಬಿಣ ಅಗತ್ಯವಾಗಿದೆ. ಹಿಮೊಗ್ಲೋಬಿನ್ ಮಟ್ಟ ಕುಸಿದರೆ ಅದು ರಕ್ತಹೀನತೆಗೆ ಕಾರಣವಾಗುತ್ತದೆ. ಬಳಲಿಕೆ, ನಿರುತ್ಸಾಹ, ಉಸಿರಾಟಕ್ಕೆ ತೊಂದರೆ ಮತ್ತು ಹೃದಯ ಬಡಿತ ಹೆಚ್ಚಾಗುವುದು ಇತ್ಯಾದಿಗಳು ರಕ್ತಹೀನತೆಯ ಸಾಮಾನ್ಯ ಲಕ್ಷಣಗಳಾಗಿವೆ.
♦ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಶರೀರದಲ್ಲಿಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕಬ್ಬಿಣವು ಪ್ರಮುಖ ಪಾತ್ರವನ್ನು ಹೊಂದಿದೆ. ಹಾನಿಗೊಂಡ ಜೀವಕೋಶಗಳು, ಅಂಗಾಂಶಗಳು ಮತ್ತು ಅಂಗಗಳಿಗೆ ಹಿಮೊಗ್ಲೋಬಿನ್ ಪೂರೈಕೆಯ ಮಟ್ಟವನ್ನು ಹೆಚ್ಚಿಸುವ ಮೂಲಕ ಅವು ಸುಸ್ಥಿತಿಗೆ ಮರಳಲು ನೆರವಾಗುತ್ತದೆ. ಬಲವಾದ ರೋಗ ನಿರೋಧಕ ಶಕ್ತಿಯು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗಗಳನ್ನು ತಡೆಯಲು ನೆರವಾಗುತ್ತದೆ.
♦ ಏಕಾಗ್ರತೆಯನ್ನು ಹೆಚ್ಚಿಸುತ್ತದೆ
ಕಬ್ಬಿಣವು ನಮ್ಮ ಏಕಾಗ್ರತೆಯನ್ನು ಮತ್ತು ಗ್ರಹಣ ಶಕ್ತಿಯನ್ನು ಹೆಚ್ಚಿಸುತ್ತದೆ. ಶರೀರದಲ್ಲಿ ಕಬ್ಬಿಣದ ಮಟ್ಟ ಕಡಿಮೆಯಾದರೆ ಅದು ಗ್ರಹಣ ಶಕ್ತಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಇದರಿಂದ ಯಾವುದೇ ವಿಷಯದಲ್ಲಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ, ಜೊತೆಗೆ ನೆನಪಿನ ಶಕ್ತಿಯೂ ಕುಂಠಿತಗೊಳ್ಳುತ್ತದೆ.
♦ ಶಕ್ತಿಯನ್ನು ಹೆಚ್ಚಿಸುತ್ತದೆ
ಸಾಕಷ್ಟು ಕಬ್ಬಿಣ ಸೇವಿಸದಿದ್ದರೆ ಅದು ಬಳಲಿಕೆಗೆ ಕಾರಣವಾಗುತ್ತದೆ ಮತ್ತು ವ್ಯಕ್ತಿಯ ದೈನಂದಿನ ಚಟುವಟಿಕೆ ಗಳಿಗೆ ವ್ಯತ್ಯಯವುಂಟಾಗುತ್ತದೆ. ಹೀಗಾಗಿ ಶರೀರಕ್ಕೆ ಹೆಚ್ಚು ಕಬ್ಬಿಣ ದೊರಕಿದಷ್ಟ್ಟೂ ಅದು ಹೆಚ್ಚು ಶಕ್ತಿ, ಉತ್ಸಾಹವನ್ನು ಹೊಂದಿರುತ್ತದೆ. ಏಕೆಂದರೆ ಕಬ್ಬಿಣವು ಸ್ನಾಯುಗಳು ಮತ್ತು ಮಿದುಳಿಗೆ ಆಮ್ಲಜನಕವನ್ನು ಸಾಗಿಸುತ್ತದೆ ಮತ್ತು ಇದು ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಿಗೆ ಮುಖ್ಯವಾಗಿದೆ.
♦ ಗರ್ಭಿಣಿಯರಿಗೆ ಒಳ್ಳೆಯದು
ಗರ್ಭಾವಸ್ಥೆಯಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ಒದಗಿಸಲು ಮಹಿಳೆಯರಲ್ಲಿ ರಕ್ತದ ಪ್ರಮಾಣ ಮತ್ತು ಕೆಂಪು ರಕ್ತಕಣಗಳು ತ್ವರಿತವಾಗಿ ಹೆಚ್ಚಾಗುತ್ತವೆ. ಆದರೆ ಗರ್ಭಾವಸ್ಥೆಯಲ್ಲಿ ಕಬ್ಬಿಣದ ಕೊರತೆಯು ಅವಧಿಗೆ ಮೊದಲೇ ಹೆರಿಗೆಯಾಗುವ, ನವಜಾತ ಶಿಶು ಕಡಿಮೆ ದೇಹತೂಕವನ್ನು ಹೊಂದಿರುವ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಗ್ರಹಣ ಶಕ್ತಿಯ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ.
♦ ಸ್ನಾಯುಗಳನ್ನು ಸದೃಢಗೊಳಿಸುತ್ತದೆ
ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣ ಪೂರೈಕೆಯು ಸ್ನಾಯುಗಳ ಸದೃಢತೆಗೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಅಗತ್ಯವಾಗಿರುವ ಆಮ್ಲಜನಕವನ್ನು ಒದಗಿಸುತ್ತದೆ. ಶರೀರದಲ್ಲಿ ಕಬ್ಬಿಣಾಂಶ ಕಡಿಮೆಯಾದರೆ ಅದು ಸ್ನಾಯು ದುರ್ಬಲತೆಗೆ ಕಾರಣವಾಗುತ್ತದೆ.
♦ ಒಳ್ಳೆಯ ನಿದ್ರೆಯನ್ನು ನೀಡುತ್ತದೆ
ಶರೀರಲ್ಲಿ ಕಬ್ಬಿಣದ ಕೊರತೆಯಿದ್ದಾಗ ಅದು ನಿದ್ರೆಯ ಕೊರತೆಯನ್ನುಂಟು ಮಾಡುತ್ತದೆ ಮತ್ತು ಇನ್‌ಸೋಮ್ನಿಯಾ ಹಾಗೂ ಸ್ಲೀಪ್ ಆಪ್ನಿಯಾದಂತಹ ನಿದ್ರಾಸಮಸ್ಯೆಗಳಿಗೆ ಕಾರಣವಾಗುತ್ತದೆ.
ಅತಿಯಾಗಿ ಕಬ್ಬಿಣ ಸೇವನೆಯ ಅಪಾಯಗಳು: ಆಹಾರದ ಮತ್ತು ಕಬ್ಬಿಣ ಪೂರಕಗಳ ಸೇವನೆಯು ನಮ್ಮ ಶರೀರಕ್ಕೆ ಸಾಷ್ಟು ಪ್ರಮಾಣದಲ್ಲಿ ಕಬ್ಬಿಣ ದೊರೆಯುವಂತೆ ಮಾಡಲು ಅತ್ಯುತ್ತಮ ವಿಧಾನವಾಗಿದೆ. ಆದರೆ ಪೂರಕಗಳ ರೂಪದಲ್ಲಿ ಅತಿಯಾದ ಕಬ್ಬಿಣ ಸೇವನೆಯು ಹೊಟ್ಟೆಯಲ್ಲಿ ತೊಂದರೆ, ಅಂಗಾಂಗ ವೈಫಲ್ಯ, ಆಂತರಿಕ ರಕ್ತಸ್ರಾವ, ಸೆಳವು ಇತ್ಯಾದಿಗಳಿಗೆ ಕಾರಣವಾಗುತ್ತದೆ, ಸಾವಿಗೂ ಕಾರಣವಾಗಬಹುದು.