ಅರೆಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ದಂಡದ ಪಾಠ !
ಬೆಂಗಳೂರು, ಜ.22: ಅರೆಬೆತ್ತಲೆಗೊಳಿಸಿ ಹಲ್ಲೆ, ಅಮಾನೀಯವಾಗಿ ನಡೆದುಕೊಳ್ಳುವ ಆರೋಪದಡಿ ದಾಖಲಾಗುವ ಪ್ರಕರಣಗಳನ್ನು ನಿರ್ಲಕ್ಷ್ಯ ವಹಿಸಿ ಕ್ರಮಕ್ಕೆ ಮುಂದಾಗದ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ, ದಂಡ ವಿಧಿಸುವ ಮೂಲಕ ಪಾಠ ಕಲಿಸಲು ಮಾನವ ಹಕ್ಕುಗಳ ಆಯೋಗ ಮುಂದಾಗಿದೆ.
ಎರಡು ವರ್ಷಗಳ ಹಿಂದೆ, ವ್ಯಕ್ತಿಯೊಬ್ಬರನ್ನು ಸಾರ್ವಜನಿಕ ಪ್ರದೇಶದಲ್ಲಿ ಅರೆಬೆತ್ತಲೆಗೊಳಿಸಿ ಮುಖಕ್ಕೆ ಮಸಿ ಬಳಿದು ಅಮಾನೀಯವಾಗಿ ಥಳಿಸಿದ ಕುರಿತು ದೂರು ದಾಖಲಿಸಿದ 55 ದಿನಗಳ ಕಾಲ ಕ್ರಮಕ್ಕೆ ಮುಂದಾಗದ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆ ಮತ್ತು ಮಾರುಕಟ್ಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳಿಗೆ (ಪ್ರಕರಣ ನಡೆದ ಸಂದರ್ಭದಲ್ಲಿದ್ದ ಅಧಿಕಾರಿಗಳು) ತಲಾ 10 ಸಾವಿರ ರೂ.ಗಳ ದಂಡ ವಿಧಿಸಿ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ.
ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದಲ್ಲಿ ತನ್ನದೇ ಆದ ಗೌರವವಿರುತ್ತದೆ. ಅಂತಹ ಗೌರವಕ್ಕೆ ಧಕ್ಕೆಯಾಗುವುದನ್ನು ತಡೆಯುವುದು ಪೊಲೀಸರ ಕರ್ತವ್ಯವೂ ಆಗಿರುತ್ತದೆ. ಆದರೂ, ದೂರು ಬಂದ ಬಳಿಕ ಕ್ರಮಕ್ಕೆ ಮುಂದಾಗದಿರುವುದು ಕರ್ತವ್ಯ ಲೋಕವೆಸಗಿದಂತೆ ಆಗಲಿದೆ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳಿಗೆ ದಂಡ ವಿಧಿಸುತ್ತಿರುವುದಾಗಿ ಮಾನವ ಹಕ್ಕುಗಳ ಆಯೋಗ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಏನಿದು ಪ್ರಕರಣ?: 2018ರ ಮಾರ್ಚ್ 27 ರಂದು ಮುಹಮ್ಮದ್ ರಫೀಕ್ ಬಾಬಾಸಾಹೇಬ ದೇಸಾಯಿ ಎಂಬವರು ಹುಬ್ಬಳ್ಳಿಯ ಇಲ್ಲಿನ ಸಿವಿಲ್ ಆಸ್ಪತ್ರೆಯ ರೋಗಿಗಳಿಗೆ ಉಚಿತ ಉಪಾಹಾರ ತಲುಪಿಸಲು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿಗಳಾದ ತೌಸಿಫ್ ಅಲ್ವಾಡಕರ, ಅಬುಮುಲ್ಲಾ, ಇಮ್ತಿಯಾಝ್ ಅಹ್ಮದ್ ಮತ್ತು ಝಮೀಲಾಬಿ ನಬ್ಬುವಾಲೆ ಮತ್ತಿತರರು ಅಡ್ಡಗಟ್ಟಿದ್ದರು.
ಅಲ್ಲದೆ, ಮಹಿಳೆಯೊಬ್ಬರಿಗೆ ವಂಚನೆ ಮಾಡಿದ್ದೀಯ ಎಂದು ಆರೋಪಿಸಿ ಅರೆಬೆತ್ತಲೆಗೊಳಿಸಿದಲ್ಲದೆ, ಮುಖ ಮತ್ತು ಮೈಮೇಲೆ ಕಪ್ಪು ಬಣ್ಣ ಬಳಿದು, ಬೆದರಿಕೆ ಹಾಕಿದ್ದರು. ಜೊತೆಗೆ ಬಲವಂತದಿಂದ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದ ಮೂಲಕ ವಿಭಾಗೀಯ ಆಯುಕ್ತರ ಕಚೇರಿಯ ಕಾಂಪೌಡ್‌ವರೆಗೆ ಎಳೆದೊಯ್ಯುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದರು.
ಅವಮಾನಕ್ಕೊಳಗಾದ ವ್ಯಕ್ತಿ ಈ ಸಂಬಂಧ ಬೆಳಗಾವಿ ನಗರದ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ 21 ದಿನ ಕಳೆದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಬಳಿಕ ಠಾಣಾ ವ್ಯಾಪ್ತಿಗೆ ಬರುವುದಿಲ್ಲ ಎಂಬುದಾಗಿ ತಿಳಿಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ಪ್ರಕರಣ ವರ್ಗಾವಣೆ ಮಾಡಿದ 34 ದಿನಗಳಾದರೂ ಮಾರುಕಟ್ಟೆ ಪೊಲೀಸ್ ಠಾಣೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿರಲಿಲ್ಲ.
ಇದರಿಂದ ನೊಂದ ಮುಹಮ್ಮದ್ ರಫೀಕ್ ಬಾಬಾಸಾಹೇಬ ದೇಸಾಯಿ, ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಆಯೋಗದ ಸದಸ್ಯ ಕೆ.ಬಿ.ಚಂಗಪ್ಪ, ವಿನಾಕಾರಣ ಪ್ರಕರಣದ ವಿಚಾರಣೆಗೆ ವಿಳಂಬ ಅನುಸರಿಸಿದ ಅಧಿಕಾರಿಗಳಿಗೆ ತಲಾ 10 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದ್ದಾರೆ.
‘ಇನ್ಸ್‌ಪೆಕ್ಟರ್ ಹಣ ದೂರುದಾರನಿಗೆ’
ದಂಡದ ಮೊತ್ತವನ್ನು ನೊಂದ ಮುಹಮ್ಮದ್ ರಫೀಕ್ ಬಾಬಾಸಾಹೇಬ ದೇಸಾಯಿ ಅವರಿಗೆ ಪರಿಹಾರವಾಗಿ ನೀಡಬೇಕು. ಆ ಮೊತ್ತವನ್ನು ತಪ್ಪಿತಸ್ಥ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಜೊತೆಗೆ, ಆ ಆಧಿಕಾರಿಗಳ ವಿರುದ್ಧ ಇಲಾಖಾವಾರು ತನಿಖೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸರಕಾರದ ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಆಯೋಗದ ಸದಸ್ಯ ಕೆ.ಬಿ.ಚಂಗಪ್ಪ ಸೂಚಿಸಿದ್ದಾರೆ.