ದೇಶವನ್ನು ಛಿದ್ರಛಿದ್ರಗೊಳಿಸುತ್ತಿರುವ ಅಸಲಿ ‘ತುಕ್ಡೇ ತುಕ್ಡೇ ಗ್ಯಾಂಗ್’ ಯಾರು?
ಭಾಗ-1
‘‘ನಾವು ಹಿಂದೂ ರಾಷ್ಟ್ರವೊಂದನ್ನು ನಿರ್ಮಿಸುತ್ತೇವೆ ಎಂಬಿತ್ಯಾದಿ ಮಾತುಗಳನ್ನು ಕೇಳಿದಾಗ ಕೆಲವರಿಗೆ ತುಂಬ ಖುಷಿಯೆನಿಸಬಹುದು......ಆದರೆ......ಹಿಂದೂ ರಾಷ್ಟ್ರದ ಒಂದೇ ಅರ್ಥ ಏನೆಂದರೆ ಆಧುನಿಕ ಪಥವನ್ನು ತ್ಯಜಿಸಿ ಓಬೀರಾಯನ ಕಾಲದ ಸಂಕುಚಿತ ಚಿಂತನಾಕ್ರಮದಲ್ಲಿ ಮುಳುಗಿಸಿಕೊಂಡು ಭಾರತವನ್ನು ಛಿದ್ರಛಿದ್ರಗೊಳಿಸುವುದು......’’
-ಜವಾಹರಲಾಲ್ ನೆಹರೂ
ಭಾರತದಲ್ಲಿ ‘ತುಕ್ಡೇ ತುಕ್ಡೇ ಗ್ಯಾಂಗ್’ ಕುರಿತು ತನ್ನಲ್ಲಿ ಯಾವುದೇ ಮಾಹಿತಿ ಇಲ್ಲವೆಂದು ಗೃಹಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವುದಾಗಿ ವರದಿಯಾಗಿದೆ. ಹಾಗಾದರೆ ‘ತುಕ್ಡೇ ತುಕ್ಡೇ ಗ್ಯಾಂಗ್’ ಎಂದು ದಿನಾ ಬೊಬ್ಬಿಡುತ್ತಿರುವವರು ಯಾರು ಮತ್ತು ಅವರು ಯಾಕಾಗಿ ಬೊಬ್ಬಿಡುತ್ತಿದ್ದಾರೆ? ಹಿಂದಿಯಲ್ಲೊಂದು ಗಾದೆ ಮಾತಿದೆ. ‘ಉಲ್ಟಾ ಚೋರ್ ಕೊತ್ವಾಲ್ ಕೊ ದಾಂಟೆ’’. ಅಂದರೆ ಕಳ್ಳನೇ ಪೊಲೀಸನನ್ನು ಗದರಿಸುವ ಪರಿಸ್ಥಿತಿ. ದೇಶದಲ್ಲಿಂದು ಇಂತಹುದೇ ವಿಪರ್ಯಾಸಕರ ಪರಿಸ್ಥಿತಿ ಇದೆ. ಯಾವ ಪ್ರತಿಗಾಮಿ ಗುಂಪುಗಳು ಭಾರತವನ್ನು ಜಾತಿ, ಧರ್ಮಗಳ ಆಧಾರದಲ್ಲಿ ಒಡೆಯುತ್ತಿವೆಯೋ, ವರ್ಗಭೇದವನ್ನು ತೀವ್ರಗೊಳಿಸುತ್ತಿವೆಯೋ ಅದೇ ಗುಂಪುಗಳು ಇಂದು ಪ್ರಗತಿಪರ ವ್ಯಕ್ತಿಗಳು ಮತ್ತು ಸಂಘಟನೆಗಳ ಮೇಲೆ ಗೂಬೆಕೂರಿಸುವ ಕೆಲಸ ಮಾಡುತ್ತಿವೆ. ಸಂವಿಧಾನದ ಆಶಯದನುಸಾರ ಈ ನೆಲದ ಸರ್ವ ಧರ್ಮ, ಜಾತಿ, ಜನಾಂಗ, ಪಂಗಡ, ವರ್ಗಗಳು ಸ್ನೇಹ, ಸೌಹಾರ್ದಯುತ ಸಹಬಾಳ್ವೆ ನಡೆಸಬೇಕೆಂದು ಬಯಸುತ್ತಿರುವ, ಎಲ್ಲಾ ಪ್ರಜೆಗಳನ್ನು ಒಗ್ಗೂಡಿಸಿ ದೇಶವನ್ನು ಪ್ರಗತಿಪಥದಲ್ಲಿ ಮುನ್ನಡೆಸಲು ಶಕ್ತಿಮೀರಿ ಶ್ರಮಿಸುತ್ತಿರುವ ನೈಜ ದೇಶಪ್ರೇಮಿಗಳನ್ನೇ ‘‘ಲದ್ದಿಜೀವಿಗಳು, ತುಕ್ಡೇ ತುಕ್ಡೇ ಗ್ಯಾಂಗ್, ನಗರ ನಕ್ಸಲರು, ಸೆಕ್ಯೂಲರ್, ಲಿಬ್‌ಟಾರ್ಡ್’’ ಎಂದೆಲ್ಲ ಕರೆದು ಅವರು ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ಡಂಗುರ ಸಾರುತ್ತಾ ಆ ಮೂಲಕ ಜನರ ದಿಕ್ಕು ತಪ್ಪಿಸುವುದು ಈ ಹೊತ್ತಿನ ಬಹುದೊಡ್ಡ ವಿಪರ್ಯಾಸವಲ್ಲದೆ ಮತ್ತೇನು?
ಎಲ್ಲವೂ ತಲೆಕೆಳಗಾಗಿದೆ
ಭಾರತವನ್ನು ಜಾತಿ, ಮತ, ವರ್ಗಗಳ ಆಧಾರದಲ್ಲಿ ನಿಜವಾಗಿ ಒಡೆಯುತ್ತಿರುವುದು ತೀರಾ ಇತ್ತೀಚಿನ ವರೆಗೆ ಸ್ವತಂತ್ರ ಭಾರತದ ಸಂವಿಧಾನವನ್ನೂ ರಾಷ್ಟ್ರಧ್ವಜವನ್ನೂ ಒಪ್ಪದೆ ಈಗಷ್ಟೆ ಅದನ್ನು ಒಪ್ಪಿಕೊಂಡ ನಾಟಕವಾಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತದರ ನೂರಾರು ಸಹಸಂಘಟನೆಗಳ ಸಂಘಪರಿವಾರವೇ ಎನ್ನುವುದಕ್ಕೆ ದಾಖಲೆ, ಪುರಾವೆಗಳ ಕಂತೆಯೇ ಇದೆ. ಈ ನೆಲವನ್ನು ಇಬ್ಭಾಗಿಸುವ ‘ಹಿಂದೂ ರಾಷ್ಟ್ರ’ ಸಿದ್ಧಾಂತ ಮತ್ತು ಅದನ್ನು ವಿರೋಧಿಸುವವರ ದಮನ, ಹತ್ಯೆ ಮತ್ತಿತರ ವಿಧ್ವಂಸಕಾರಿ ಕೃತ್ಯಗಳೇ ಪರಿವಾರ ದೇಶಕ್ಕೆ ನೀಡಿರುವ ದೊಡ್ಡ ‘ಕೊಡುಗೆ’! ವಾಸ್ತವ ಹೀಗಿದ್ದರೂ ಇವತ್ತಿನ ದುರಂತ ಏನೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಸಕ್ಕಿಂತ ಕಡೆಯಾಗಿಸಿ ಮನುಸ್ಮತಿಯನ್ನೂ, ಧರ್ಮಾಧರಿತ ಸರ್ವಾಧಿಕಾರವನ್ನೂ ಜಾರಿಗೊಳಿಸಲು ಮುಂದಾಗಿರುವ ಸಂಘಪರಿವಾರಕ್ಕೆ ದೇಶಾದ್ಯಂತ ಮನಬಂದಂತೆ ಮಾತಾಡಲು, ಕಾನೂನುಬಾಹಿರವಾಗಿ ವರ್ತಿಸಲು ಮುಕ್ತ ಅನುಮತಿ ನೀಡಲಾಗಿದೆ. ಅದೇ ವೇಳೆ ಭಾರತದ ಬಹುಸಂಸ್ಕೃತಿಯನ್ನು, ಸಂವಿಧಾನವನ್ನು ಗೌರವಿಸುವ ಪ್ರಗತಿಪರರು ಸಂಘಪರಿವಾರ ಮತ್ತದರ ಸರಕಾರದ ದಮನಕಾರಿ ಶಕ್ತಿಯನ್ನು ಪೊಲೀಸ್ ದೌರ್ಜನ್ಯ ಮತ್ತು ಸೆರೆವಾಸದ ರೂಪದಲ್ಲಿ ಎದುರಿಸಬೇಕಾಗಿರುವ ದುಃಸ್ಥಿತಿ ನಿರ್ಮಾಣವಾಗಿದೆ. ಪರಿವಾರದ ಮೇಲ್ಮಟ್ಟದ ಮುಖಂಡರಿಂದ ಹಿಡಿದು ಕೆಳಗಿನ ತುಂಡು ನಾಯಕರವರೆಗೂ ಪ್ರಗತಿಪರ ಶಕ್ತಿಗಳನ್ನು ಹೋದಲ್ಲಿ ಬಂದಲ್ಲಿ ‘ತುಕ್ಡೇ ತುಕ್ಡೇ ಗ್ಯಾಂಗ್’ ಎಂದು ಕರೆಯತೊಡಗಿರುವುದರ ಹಿಂದೆ ಒಂದು ಸ್ಪಷ್ಟ ಉದ್ದೇಶ ಅಡಗಿದೆ. ಪರಿವಾರದ ಅಜೆಂಡಾದ ಒಂದು ಪ್ರಮುಖ ಅಂಶವೇ ಆಗಿರುವ ಈ ಉದ್ದೇಶವನ್ನು ಮುಂದೆ ವಿವರಿಸಲಾಗಿದೆ.
ಸಾವರ್ಕರ್‌ರಿಂದ ಪ್ರಾರಂಭವಾದ ದೇಶ ಒಡೆಯುವ ಕೃತ್ಯ ಅಂಡಮಾನ್‌ನಲ್ಲಿ ಕರಿನೀರಿನ ಜೀವಾವಧಿ ಶಿಕ್ಷೆಗೊಳಗಾಗಿದ್ದ ಸಾವರ್ಕರ್ ತನ್ನ ಬಿಡುಗಡೆಗೋಸ್ಕರ ಬ್ರಿಟಿಷ್ ಸರಕಾರಕ್ಕೆ ಹಲವು ದಯಾಭಿಕ್ಷೆ ಅರ್ಜಿಗಳನ್ನು ಕಳುಹಿಸಿದ್ದರು. ಕೊನೆಗೆ ಬ್ರಿಟಿಷ್ ಸರಕಾರಕ್ಕೆ ಎಲ್ಲಾ ಬಗೆಯ ಸಹಕಾರ ನೀಡುವುದಾಗಿ ವಾಗ್ದಾನ ಮಾಡಿ 1924ರ ಜನವರಿ 6ರಂದು ಸೆರೆಮನೆಯಿಂದ ಹೊರಬಂದ ನಂತರ ಈತ ಶುರುಮಾಡಿದ್ದೇ ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯುವ ಕೆಲಸ. ಬಿಡುಗಡೆಯ ವೇಳೆ ಆತನಿಗೆ ವಿಧಿಸಲಾಗಿದ್ದ ಎರಡು ಷರತ್ತುಗಳೆಂದರೆ ರತ್ನಗಿರಿ ಜಿಲ್ಲೆ ಬಿಟ್ಟು ಹೊರಗೆ ಹೋಗಬಾರದು ಮತ್ತು ಐದು ವರ್ಷಗಳ ಕಾಲ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಾರದು. ಆದರೆ ಆತ ಬ್ರಿಟಿಷ್ ಸರಕಾರದ ಪರೋಕ್ಷ ಬೆಂಬಲದಿಂದಲೇ ಎರಡೂ ಷರತ್ತುಗಳನ್ನು ಉಲ್ಲಂಘಿಸಿದ್ದರು. ಬ್ರಿಟಿಷ್ ಸರಕಾರದ ಅನುಮತಿ ಪಡೆದೇ ನಾಸಿಕಕ್ಕೆ ತೆರಳಿದ ಸಾವರ್ಕರ್ ಅಲ್ಲಿ ಬ್ರಿಟಿಷರ ಸಹಕಾರದಿಂದಲೇ ಹಲವಾರು ಊರುಗಳಲ್ಲಿ ಸುತ್ತಾಡಿ ಹಿಂದೂ ಸಂಘಟನಾವಾದಿ ಸಿದ್ಧಾಂತವನ್ನು ಪ್ರಚುರಪಡಿಸಿದರು. ರಾಜಕೀಯ ಚಟುವಟಿಕೆಗಳಿಗೆ ನಿಷೇಧವಿದ್ದರೂ ರತ್ನಗಿರಿ ಹಿಂದೂ ಮಹಾಸಭಾದಂತಹ ಸಂಸ್ಥೆಗಳನ್ನು ಸ್ಥಾಪಿಸುವಾಗ ಮತ್ತು ಮಹಾಸಭಾದ ಪ್ರಮುಖ ಸದಸ್ಯರಾಗಿದ್ದ ಡಾ ಹೆಡ್ಗೇವಾರ್, ಡಾ ಮೂಂಜೆ ಜೊತೆ ಸಭೆ ನಡೆಸಿದ ನಂತರ ಆರೆಸ್ಸೆಸ್ ಸ್ಥಾಪಿಸುವಾಗ ಬ್ರಿಟಿಷ್ ಸರಕಾರ ಕಣ್ಮುಚ್ಚಿಕೊಂಡಿತ್ತು.
ಬೆಳೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ ಹಿಂದೂ ಮುಸ್ಲಿಮ್ ಐಕ್ಯತೆ ಅವಶ್ಯಕವಾಗಿದ್ದ ಕಾಲದಲ್ಲಿ ಸಮುದಾಯಗಳ ನಡುವೆ ಬಿರುಕುಗಳನ್ನು ಹುಟ್ಟುಹಾಕುವುದಕ್ಕಾಗಿಯೇ ಬ್ರಿಟಿಷರು ಸಾವರ್ಕರ್‌ರನ್ನು ಬಳಸಿಕೊಂಡರು. ಮತಾಂತರದಿಂದ ರಾಷ್ಟ್ರೀಯತೆ ಬದಲಾಗುತ್ತದೆ, ಆದುದರಿಂದ ಕ್ರೈಸ್ತ ಮಿಶನರಿಗಳ ಚಟುವಟಿಕೆಗಳನ್ನು ಗಮನಿಸಬೇಕು; ಅವರ ಧಾರ್ಮಿಕ ಹಾಗೂ ರಾಷ್ಟ್ರೀಯ ದಾಳಿಯ ವಿರುದ್ಧ ಹೋರಾಡಬೇಕು; ಭಾರತವನ್ನು ಕ್ರಿಶ್ಚಿಯನ್‌ಸ್ತಾನ್‌ಗಳ ಹಾವಳಿಯಿಂದ ಬದುಕಿಸಬೇಕೆಂದು ಹಿಂದೂ ಮಹಾಸಭಾ, ಆರ್ಯಸಮಾಜ, ಆರೆಸ್ಸೆಸ್‌ಗಳಿಗೆ ಮೊದಲು ಕರೆನೀಡಿದವರೇ ಸಾವರ್ಕರ್. ಮರುಮತಾಂತರದ ಶುದ್ಧಿ ಕಾರ್ಯಕ್ರಮ ಮತ್ತು ಅದರೊಂದಿಗೆ ಮಸೀದಿಗಳ ಮುಂದೆ ಸಂಗೀತ ನುಡಿಸುವ ಕಾರ್ಯಕ್ರಮವನ್ನೂ ಮೊತ್ತಮೊದಲು ಆರಂಭಿಸಿದ್ದು ಇದೇ ಸಾವರ್ಕರ್‌ರ ರತ್ನಗಿರಿ ಹಿಂದೂ ಮಹಾಸಭಾ. ಮುಸ್ಲಿಮ್ ಮತ್ತು ಕ್ರೈಸ್ತರ ವಿರುದ್ಧದ ಇಂತಹ ಚಟುವಟಿಕೆಗಳು ಬ್ರಿಟಿಷರಿಗೆ ಅನುಕೂಲಕರವಾಗಿ ಪರಿಣಮಿಸಿ 1920ರ ದಶಕದ ಅಸಹಕಾರ ಚಳವಳಿಯ ವೈಫಲ್ಯಕ್ಕೆ ಕಾರಣವಾಯಿತು. ಆಮೇಲೆ ಸಾವರ್ಕರ್ ಬ್ರಿಟಿಷರೊಂದಿಗೆೆ ಸಹಕರಿಸಿ ಕ್ವಿಟ್ ಇಂಡಿಯಾ ಚಳವಳಿಗೆ ದ್ರೋಹಬಗೆದ ಕತೆಯೂ ಇತಿಹಾಸದ ಪುಟಗಳಲ್ಲಿ ದಾಖಲಿಸಲ್ಪಟ್ಟಿದೆ. ನಂಬಿದರೆ ನಂಬಿ, ಇಲ್ಲವಾದರೆ ಬಿಡಿ, ‘ಕ್ವಿಟ್ ಇಂಡಿಯಾ ಚಳವಳಿ’ಯನ್ನು ಬಗ್ಗುಬಡಿಯುವುದಕ್ಕೋಸ್ಕರ ಮುಸ್ಲಿಮ್ ಲೀಗ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೂ ಆತ ಹಿಂಜರಿದಿರಲಿಲ್ಲ. 1940ರ ದಶಕದಲ್ಲಿ ಹಿಂದೂ ಮಹಾಸಭಾವು ಮುಸ್ಲಿಮ್ ಲೀಗ್ ಜೊತೆ ಸೇರಿಕೊಂಡು ಸಿಂಧ್ ಹಾಗೂ ಬಂಗಾಳದಲ್ಲಿ ಸಮ್ಮಿಶ್ರ ಸರಕಾರ ರಚಿಸಿತ್ತು! ಅಷ್ಟೇ ಅಲ್ಲ, ಪಂಜಾಬ್‌ನಲ್ಲೂ ಸಮ್ಮಿಶ್ರ ಸರಕಾರ ರಚಿಸುವುದಕ್ಕಾಗಿ ಮುಸ್ಲಿಮ್ ಲೀಗ್‌ನ್ನು ಆಹ್ವಾನಿಸಲಾಗಿತ್ತು!
1942ರಲ್ಲಿ ಕಾನ್ಪುರದಲ್ಲಿ ನಡೆದ ಹಿಂದೂ ಮಹಾಸಭಾದ 24ನೇ ಅಧಿವೇಶನದ ವೇಳೆ ಇದನ್ನು ಸಮರ್ಥಿಸಿದ ಸಾವರ್ಕರ್, ‘‘ಸಕ್ರಿಯ ರಾಜಕಾರಣದಲ್ಲಿ ನಾವು ವಿವೇಚನೆಯಿಂದ ಸಂಧಾನ ಮಾಡಿಕೊಂಡು ಮುಂದುವರಿಯ ಬೇಕಾಗುತ್ತದೆ.......’’ ಎಂದು ಹೇಳಿದ್ದರು. ದ್ವಿರಾಷ್ಟ್ರ ಸಿದ್ಧಾಂತದ ಮೂಲಕ ದೇಶವನ್ನು ಇಬ್ಭಾಗಿಸುವ ಪರಿಕಲ್ಪನೆಯ ಪ್ರಮುಖ ಸಮರ್ಥಕರಲ್ಲೊಬ್ಬರಾದ ಸಾವರ್ಕರ್ ಅದಕ್ಕೆ ಸಾಕಷ್ಟು ಪ್ರಚಾರ ನೀಡಿದ್ದರು ಕೂಡ. ಭಾರತವನ್ನು ಎರಡು ತುಂಡುಗಳಾಗಿಸಿ ಪಾಕಿಸ್ತಾನ ರಚಿಸುವ ಕೂಗೆದ್ದಾಗ ಸಿಂಧ್‌ನ ಇದೇ ಸಮ್ಮಿಶ್ರ ಸರಕಾರ ಅದನ್ನು ಬೆಂಬಲಿಸುವ ನಿರ್ಣಯವೊಂದನ್ನು ಅನುಮೋದಿಸಿತ್ತು!