ದೇವಾಲಯದಲ್ಲಿ ಅರ್ಚಕನದ್ದೇ ಪ್ರತ್ಯೇಕ ಹುಂಡಿ: ತಿರುಗಿ ಬಿದ್ದ ಗ್ರಾಮಸ್ಥರು..!
ಎಫ್ಐಆರ್ ದಾಖಲಿಸಲು ಮುಂದಾದ ಧಾರ್ಮಿಕ ದತ್ತಿ ಇಲಾಖೆ
ಬೆಂಗಳೂರು, ಜ.23: ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿನ ದೇವಾಲಯದೊಳಗೆ ಅರ್ಚಕನೋರ್ವ ಪ್ರತ್ಯೇಕ ಹುಂಡಿ ಇಟ್ಟಿದ್ದಾನೆಂದು ಗಂಭೀರ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯೂ ಅರ್ಚಕನ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾಗಿದೆ.
ಬೆಂಗಳೂರಿನ ದಕ್ಷಿಣ ತಾಲೂಕಿನ ಬೇಗೂರು ಹೋಬಳಿ, ಬೀಳೆಕಹಳ್ಳಿ ಗ್ರಾಮದ ಸೋಮೇಶ್ವರ ದೇವಾಲಯದ ಅರ್ಚಕ ನಾರಾಯಣ್ ರಾವ್ ಎಂಬುವರ ವಿರುದ್ಧ ಪ್ರತ್ಯೇಕ ಹುಂಡಿ ಇಟ್ಟು, ಹಣ ವಸೂಲಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ, ಬೆಂಗಳೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು, ಆರೋಪಿ ಅರ್ಚಕನ ವಿರುದ್ಧ ಎಫ್ಐಆರ್ ದಾಖಲಿಸಲು ಮುಜರಾಯಿ ಇಲಾಖೆಗೆ ಪತ್ರ ಬರೆದಿದ್ದಾರೆ.
ತಿರುಗಿ ಬಿದ್ದ ಗ್ರಾಮಸ್ಥರು, ಆರೋಪ?: ಚಿಕ್ಕಬಳ್ಳಾಪುರ ಮೂಲದ ಅರ್ಚಕ ನಾರಾಯಣ್ ರಾವ್, ನಕಲಿ ದಾಖಲಾತಿಗಳನ್ನು ಸಲ್ಲಿಸಿ, ಬಿಳೇಕಹಳ್ಳಿ ಗ್ರಾಮಸ್ಥನೆಂದು ನಂಬಿಸಿ, ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿರುವ ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕನಾಗಿದ್ದಾನೆ ಎಂದು ಗ್ರಾಮಸ್ಥರೂ ಆಗಿರುವ ಬೊಮ್ಮನಹಳ್ಳಿ ನಗರಸಭೆ ಮಾಜಿ ಸದಸ್ಯ ಎಂ.ಕೃಷ್ಣಪ್ಪ ಆರೋಪಿಸಿದರು.
ದಿನೇ ದಿನೇ ದೇವಾಲಯಕ್ಕೆ ಭಕ್ತಾಧಿಗಳು ಹೆಚ್ಚಾಗಿ, ಕಾಣಿಕೆ ಸಲ್ಲಿಸುವುದನ್ನು ಗಮನಿಸಿದ ನಾರಾಯಣ್ ರಾವ್, ಪ್ರತ್ಯೇಕ ಹುಂಡಿಯೊಂದನ್ನು ಇಟ್ಟಿದ್ದ. ಇಲಾಖೆಯ ಹುಂಡಿ ಕಾಣದಂತೆ ಅದರ ಮೇಲೆ ಕೃತಕ ದೇವರ ಮೂರ್ತಿಯನ್ನಿಟ್ಟಿದ್ದ. ಅದೇ ರೀತಿ, ದೇವಾಲಯದ ಅಡಿಯಲ್ಲಿಯೇ ನಿರ್ಮಿಸಿರುವ ಸಭಾಂಗಣದ ಹೆಸರಿನಲ್ಲಿ ನಕಲಿ ರಶೀದಿ ಪುಸ್ತಕವನ್ನು ಮಾಡಿಕೊಂಡು, ಗ್ರಾಮಸ್ಥರಿಗೆ ತಿಳಿಯದಂತೆ ಬಾಡಿಗೆಗೆ ನೀಡಿ, ಹಣ ವಸೂಲಿ ಮಾಡುತ್ತಿದ್ದ ಎಂದು ಆರೋಪಿಸಿ ಗ್ರಾಮದ ಪ್ರಮುಖರು ಧಾರ್ಮಿಕ ದತ್ತಿ ಇಲಾಖೆ, ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು ಎಂದು ಎಂ.ಕೃಷ್ಣಪ್ಪ ದೂರಿದರು.
ನೋಟಿಸ್: ಅವ್ಯವಹಾರ ಆರೋಪ ಕೇಳಿಬಂದ ಹಿನ್ನೆಲೆ ನಾರಾಯಣ್ ರಾವ್ ಅವರಿಗೆ ಮೂರು ವರ್ಷಗಳ ಹಿಂದೆಯೇ ಬೆಂಗಳೂರು ದಕ್ಷಿಣ ತಾಲೂಕಿನ ತಹಸೀಲ್ದಾರ್ ಅವರು ನೋಟಿಸ್ ಜಾರಿಗೊಳಿಸಿ, ಸಮಜಾಯಿಷಿ ನೀಡುವಂತೆ ಸೂಚನೆ ನೀಡಿದ್ದರು ಎಂದು ಮತ್ತೋರ್ವ ಗ್ರಾಮಸ್ಥ ವಿ.ಗೋಪಾಲ್ ಆರೋಪಿಸಿದರು.
ಎಫ್ಐಆರ್ ?: ಮುಜರಾಯಿ ಕಾಮಗಾರಿ ವಿಭಾಗದ ಬೆಂಗಳೂರಿನ ಸಹಾಯಕ ಆಯುಕ್ತರಿಗೆ ಪತ್ರ ಬರೆದಿರುವ ಬೆಂಗಳೂರು ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ಅಪರ ಜಿಲ್ಲಾಧಿಕಾರಿಗಳ ಮತ್ತು ಉಪ ಆಯುಕ್ತರು, ಅರ್ಚಕ ನಾರಾಯಣ್ ರಾವ್ ಅವರು ಸೋಮೇಶ್ವರ ದೇವಾಲಯದ ಹಣವನ್ನು ದುರುಪಯೋಗ ಮಾಡಿರುವುದು ಕಂಡುಬಂದಿದೆ. ಈ ಸಂಬಂಧ ಅರ್ಚಕನ ಮೇಲೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯಿದತ್ತಿಗಳ ನಿಯಮಾವಳಿಗಳು 2002ರ ನಿಯಮ 17ರ ಅನ್ವಯ ಅರ್ಚಕನ ಮೇಲೆ ಎಫ್ಐಆರ್ ದಾಖಲಿಸಲು ಅನುಮತಿ ಕೋರಲಾಗಿದೆ. ಅದೇ ರೀತಿ, ಅರ್ಚಕನನ್ನು ಅಮಾನತು ಮಾಡಿ, ಸದ್ಯದ ಪರಿಸ್ಥಿತಿಯಲ್ಲಿ ಭಕ್ತಾಧಿಗಳ ಪೂಜೆ, ಕೈಂಕರ್ಯಗಳಿಗೆ ತೊಂದರೆಯಾಗದಂತೆ ಬದಲಿ ಅರ್ಚಕರನ್ನು ನೇಮಿಸುವಂತೆ ಪ್ರಕಟನೆಯೊಂದರಲ್ಲಿ ತಿಳಿಸಿದೆ.
‘ಜ.27ಕ್ಕೆ ಗ್ರಾಮಸ್ಥರ ಪ್ರತಿಭಟನೆ’
ಅರ್ಚಕ ನಾರಾಯಣ್ ರಾವ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಸೋಮವಾರ (ಜ.27) ಬಿಳೇಕಹಳ್ಳಿ ಗ್ರಾಮಸ್ಥರಿಂದ ಇಲ್ಲಿನ ಸೋಮೇಶ್ವರ ದೇವಾಲಯ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.