ಅತೀದೊಡ್ಡ ಪ್ರಜಾಪ್ರಭುತ್ವ ದೇಶ ಅಪಾಯದಲ್ಲಿ; ’ದಿ ಇಕನಾಮಿಸ್ಟ್’ ಪತ್ರಿಕೆಯ ವರದಿ
ಮೋದಿ ಸರಕಾರದ ಪೌರತ್ವ ಕಾಯ್ದೆ
ಹೊಸದಿಲ್ಲಿ, ಜ.24: ಪ್ರಧಾನಿ ನರೇಂದ್ರ ಮೋದಿ ಸರಕಾರ ಹಾಗೂ ಬಿಜೆಪಿ ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿಯ ಮೂಲಕ ಭಾರತ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಎಂಬ ಸ್ಫೂರ್ತಿದಾಯಕ ಕಲ್ಪನೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಲಂಡನ್‌ನಿಂದ ಪ್ರಕಟವಾಗುವ ‘ದಿ ಇಕನಾಮಿಸ್ಟ್’ ಪತ್ರಿಕೆಯ ಇತ್ತೀಚೆಗಿನ ಸಂಚಿಕೆಯ ಪ್ರಧಾನ ಲೇಖನದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ದಿ ಇಕನಾಮಿಸ್ಟ್ ಪತ್ರಿಕೆಯ ಮುಖಪುಟದಲ್ಲಿ ‘ಅಸಹಿಷ್ಣು ಭಾರತ’ ಎಂಬ ಶೀರ್ಷಿಕೆಯಡಿ ಲೇಖನ ಪ್ರಕಟವಾಗಿದೆ. ಭಾರತದ ಪ್ರಧಾನಿ ಹಾಗೂ ಅವರ ಪಕ್ಷವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಉಂಟುಮಾಡುತ್ತಿದೆ ಎಂದು ಗುರುವಾರ ಪತ್ರಿಕೆಯ ಮುಖಪುಟದ ಸಹಿತ ಟ್ವೀಟ್ ಮಾಡಲಾಗಿದೆ. ಪ್ರಧಾನಿ ಮೋದಿ ಹಿಂದು ರಾಷ್ಟ್ರವನ್ನು ನಿರ್ಮಿಸುತ್ತಿದ್ದಾರೆ ಎಂಬ ಭೀತಿ ಭಾರತದ 200 ಮಿಲಿಯನ್ ಮುಸ್ಲಿಮರಲ್ಲಿದೆ ಎಂದು ‘ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ವಿಭಜಿಸಿದ ನರೇಂದ್ರ ಮೋದಿ’ ಎಂಬ ಶೀರ್ಷಿಕೆಯ ಲೇಖನದಲ್ಲಿ ತಿಳಿಸಲಾಗಿದೆ.
1980ರ ದಶಕದಲ್ಲಿ ರಾಮಮಂದಿರ ಅಭಿಯಾನದ ಮೂಲಕ ಬಿಜೆಪಿ ಬಲಿಷ್ಟವಾಗಿ ಬೆಳೆಯಿತು. ಧರ್ಮದ ಮತ್ತು ರಾಷ್ಟ್ರೀಯ ಗುರುತಿನ ಮೂಲಕ ಒಡಕು ಉಂಟು ಮಾಡಿ ಬಿಜೆಪಿ ಮತ್ತು ಮೋದಿ ರಾಜಕೀಯ ಲಾಭ ಪಡೆಯುವ ಸಾಧ್ಯತೆಯಿದೆ ಎಂದು ಲೇಖನದಲ್ಲಿ ಅಭಿಪ್ರಾಯಪಡಲಾಗಿದೆ. ಅಕ್ರಮ ವಿದೇಶಿ ಒಳನುಸುಳುಕೋರರನ್ನು ಗುರುತಿಸುವ ಪ್ರಕ್ರಿಯೆಯ ಭಾಗವಾಗಿ ನೈಜ ಭಾರತೀಯರ ನೋಂದಣಿ ಪಟ್ಟಿ ರೂಪಿಸುವ ಯೋಜನೆ ದೇಶದ 1.3 ಬಿಲಿಯನ್ ಜನರ ಮೇಲೆ ಪರಿಣಾಮ ಬೀರಲಿದೆ. ಪಟ್ಟಿಯನ್ನು ಸಂಗ್ರಹಿಸುವುದು, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು, ಪರಿಷ್ಕರಿಸುವುದು - ಹೀಗೆ ಈ ಪ್ರಕ್ರಿಯೆ ಮುಕ್ತಾಯವಾಗಲು ಇನ್ನೂ ಸುಮಾರು 10 ವರ್ಷ ಹಿಡಿಯಬಹುದು . ಅಲ್ಲದೆ ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಬಳಿಕ ಕುಂಟುತ್ತಾ ಸಾಗಿರುವ ಆರ್ಥಿಕತೆಯಂತಹ ಪೇಚಿನ ವಿಷಯಗಳಿಂದ ಜನರ ಗಮನವನ್ನು ಬೇರಡೆಗೆ ಸೆಳೆಯಲು ಇದು ಸರಕಾರಕ್ಕೆ ಮತ್ತು ಬಿಜೆಪಿಗೆ ನೆರವಾಗಲಿದೆ ಎಂದು ಲೇಖನ ತಿಳಿಸಿದೆ.
ಲೇಖನದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ವಿದೇಶಿ ಕಾರ್ಯನೀತಿ ವಿಭಾಗದ ಮುಖ್ಯಸ್ಥ ವಿಜಯ್ ಚೌತಾಯಿವಾಲೆ, ಇದು ಇಕನಾಮಿಸ್ಟ್ ಪತ್ರಿಕೆಯ ವಸಾಹತುಶಾಹಿ ಮನಸ್ಥಿತಿ ಮತ್ತು ಅಹಂಕಾರ ಮನೋಭಾವದ ಪ್ರದರ್ಶನವಾಗಿದೆ ಎಂದು ಟೀಕಿಸಿದ್ದಾರೆ. ಬ್ರಿಟಿಷರು 1947ರಲ್ಲಿ ಭಾರತದಿಂದ ತೆರಳಿದ್ದಾರೆ ಎಂದು ನಾವು ಭಾವಿಸಿದ್ದೇವೆ. ಆದರೆ ‘ದಿ ಇಕನಾಮಿಸ್ಟ್’ ಪತ್ರಿಕೆಯ ಸಂಪಾದಕರು ಇನ್ನೂ ವಸಾಹತು ಯುಗದಲ್ಲೇ ಬದುಕುತ್ತಿದ್ದಾರೆ. ಮೋದಿಗೆ ಮತ ಹಾಕಬೇಡಿ ಎಂದು ತಾವು ನೀಡಿದ್ದ ಸ್ಪಷ್ಟ ಸೂಚನೆಯನ್ನು 600 ಮಿಲಿಯನ್ ಭಾರತೀಯರು ಅನುಸರಿಸಿಲ್ಲ ಎಂದು ಸಂಪಾದಕರು ಕ್ರೋಧಿತರಾಗಿದ್ದಾರೆ ಎಂದು ವಿಜಯ್ ಟ್ವೀಟ್ ಮಾಡಿದ್ದಾರೆ. ‘ದಿ ಇಕನಾಮಿಸ್ಟ್’ ಪತ್ರಿಕೆಯ ಸೋದರ ಸಂಸ್ಥೆ ‘ ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್’ ಈ ವಾರದ ಆರಂಭದಲ್ಲಿ ಪ್ರಕಟಿಸಿದ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಾಂಕ ಪಟ್ಟಿಯಲ್ಲಿ ಭಾರತ 10 ಸ್ಥಾನಗಳಷ್ಟು ಕುಸಿತ ಕಂಡು 165 ರಾಷ್ಟ್ರಗಳ ಪಟ್ಟಿಯಲ್ಲಿ 51ನೇ ಸ್ಥಾನ ಪಡೆದಿದೆ.