ಕಸಾಪ-ಕನ್ನಡ ಶಾಲೆ ಪ್ರಾರಂಭಿಸುವುದು ಯಾವಾಗ?
ಕನ್ನಡ ಶಾಲೆಗಳನ್ನು ತೆರೆಯಬೇಕು, ಕನ್ನಡ ಶಾಲೆಗಳನ್ನು ಪೋಷಿಸಬೇಕೆಂಬ ಮುಖ್ಯ ಧ್ಯೇಯ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು, ನಿಜಕ್ಕೂ ಇಂತಹ ಆತಂಕದ ಸ್ಥಿತಿಯಲ್ಲಿ ಮಾಡಬೇಕಿರುವುದು ಕೋಟಿಗಟ್ಟಲೆ ಖರ್ಚಿನ ಸಮ್ಮೇಳನಗಳನ್ನಲ್ಲ! ಅದಕ್ಕೆ ಮಾಡುತ್ತಿರುವ ದುಂದುವೆಚ್ಚವನ್ನು ನಿಲ್ಲಿಸಿ, ಆ ಹಣವನ್ನೇ ವಿನಿಯೋಗಿಸಿ ಕನ್ನಡ ಶಾಲೆಗಳಿಲ್ಲದ ಹಳ್ಳಿಗಳಲ್ಲಿ ವ್ಯವಸ್ಥಿತ, ಸುಸಜ್ಜಿತ ಕನ್ನಡ ಶಾಲೆಗಳನ್ನು ಹೊಸದಾಗಿ ನಿರ್ಮಾಣ ಮಾಡಬೇಕು ಮತ್ತು ಅವನ್ನು ಮೂಲಮಟ್ಟದಿಂದ ನಿರ್ವಹಿಸುವ ಗುರುತರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಆಗ ಅದು ನಿಜಕ್ಕೂ ಕನ್ನಡದ ಕೆಲಸ. ಕನ್ನಡವನ್ನುಳಿಸುವ ಕೆಲಸ. ಕನ್ನಡದ ಅಸಹಾಯಕ ಮಕ್ಕಳ ಶೈಕ್ಷಣಿಕ ಹಕ್ಕುಗಳ ಪರವಾಗಿ ನಿಲ್ಲುವ ದಿವ್ಯ ಕಾರ್ಯವಾದೀತು.
ಈಗ ಮತ್ತೊಮ್ಮೆ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿಯಲ್ಲಿ ಅದ್ದೂರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಯಾರಾಗುತ್ತಿದೆ! ಅಕ್ಷರಶಃ ಶಾಲಾ ವಾರ್ಷಿಕೋತ್ಸವಗಳಂತೆ ಸಮ್ಮೇಳನವೂ ಶತಾಯಗತಾಯ ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜರುಗುವುದು ವಾಡಿಕೆ! ಆದರೆ ವರ್ಷದಿಂದ ವರ್ಷಕ್ಕೆ ಸಮ್ಮೇಳನದ ವೆಚ್ಚ ಕೋಟಿಗಟ್ಟಲೆಯಲ್ಲಿ ಏರುತ್ತಿದ್ದು, ಮೈಸೂರಿನ ಸಮ್ಮೇಳನದಲ್ಲಿ 8 ಕೋಟಿ, ಕಳೆದ ವರ್ಷ ಧಾರವಾಡ ಸಮ್ಮೇಳನಕ್ಕೆ 12 ಕೋಟಿ ವ್ಯಯಿಸಿ, ಈ ಬಾರಿ 14 ಕೋಟಿ ವ್ಯಯಿಸುವುದಾಗಿ ಅಂದಾಜಿಸಿದೆ! ಇದೆಲ್ಲವೂ ಸಾರ್ವಜನಿಕರ ತೆರಿಗೆ ಹಣವಾಗಿರುವುದರಿಂದ ಇದನ್ನು ಪ್ರಶ್ನಿಸುವ ಹಕ್ಕು ಜನಸಮುದಾಯಕ್ಕೆ ಸೇರಿದ್ದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರೆಲ್ಲರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವಂತಹದ್ದು. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿ ಪರಿಷತ್ತಿನ ಉದ್ದೇಶವಾಗಿರತಕ್ಕುದೆಂದು ನೂರು ವರ್ಷಗಳ ಹಿಂದೆಯೇ ರೂಪಿಸಿಕೊಂಡ ತನ್ನ ನಿಬಂಧನೆಯಲ್ಲಿ ಘೋಷಿಸಿಕೊಂಡಿದೆ. ಜೊತೆಗೆ, ಈ ಉದ್ದೇಶ ಈಡೇರಿಕೆಗಾಗಿ ಸಮ್ಮೇಳನ, ಸಾಹಿತ್ಯೋತ್ಸವ, ನಾಡಹಬ್ಬ, ಉಪನ್ಯಾಸ, ವಿಚಾರಸಂಕಿರಣ... ಇತ್ಯಾದಿಗಳ ಆಯೋಜನೆ ಮಾಡಬಹುದೆಂದಿದೆ. ಆದರೆ ಇದಕ್ಕಿಂತ ಮುಖ್ಯವಾಗಿ ಕನ್ನಡ ಶಾಲೆಗಳ ಸ್ಥಾಪನೆ, ಕನ್ನಡ ಶಾಲೆಗಳಿಗೂ ಮತ್ತು ಸಾಕ್ಷರತಾ ಪ್ರಚಾರಕ್ಕೂ ಪ್ರೋತ್ಸಾಹ ಬೆಂಬಲ ನೀಡುವ ಕಾರ್ಯದಲ್ಲಿ ತೊಡಗಬೇಕೆಂಬ ಆಶಯವನ್ನು ನಿಬಂಧನೆಯಲ್ಲಿ ಹೊಂದಿದ್ದು- ಕಸಾಪದ ಸಮ್ಮೇಳನದ ಅದ್ದೂರಿ, ಆರ್ಭಟದಲ್ಲಿ ಮಸುಕಾಗಿ ಹೋಗಿದೆ!
ಪರಿಷತ್ತು ತನ್ನ ಈ ಮೂಲ ಉದ್ದೇಶದಂತೆ ಪ್ರಸಾರದ ಕಾರ್ಯವನ್ನು ಮಾತ್ರ ಭರ್ಜರಿಯಾಗಿ ಮಾಡುತ್ತಿದೆ! ಅದಕ್ಕಾಗಿ ಲಕ್ಷ, ಕೋಟಿಗಟ್ಟಲೆ ಖರ್ಚು ಮಾಡುತ್ತಾ ಅಖಿಲ ಭಾರತ, ಜಿಲ್ಲಾ, ತಾಲೂಕು, ಹೋಬಳಿ ಸಮ್ಮೇಳನಗಳನ್ನು ವರ್ಷವಿಡೀ ರಾಜ್ಯಾದ್ಯಂತ ಮಾಡುವುದರಲ್ಲೇ ಕಳೆದು ಹೋಗುತ್ತಿದೆ. ಮೂಲ ಉದ್ದೇಶದ ಇನ್ನೊಂದು ಆಯಾಮವಾದ ರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಸಂಪೂರ್ಣ ಕುರುಡಾಗಿಬಿಟ್ಟಿದೆ! ಕನ್ನಡ ನಾಡು-ನುಡಿಗೆ ಒದಗಿರುವ ಈ ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲೂ ಪರಿಷತ್ತಿನ ಸಮ್ಮೇಳನಗಳ ಅದ್ದೂರಿತನ ನಿರ್ಲಜ್ಜತೆಯದೆನಿಸುತ್ತಿದೆ. ನಾಡು ನುಡಿಯ ಜ್ವಲಂತ ಸಮಸ್ಯೆಗಳೆಡೆಗೆ ಗಟ್ಟಿ ನಿಲುವು ತೆಗೆದುಕೊಳ್ಳದೆ, ಕನ್ನಡಿಗರೆಲ್ಲರ ಪರವಾಗಿ ನಿರ್ಣಾಯಕ ಪಾತ್ರವಹಿಸದೆ, ರಚನಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳದೆ, ಆಂದೋಲನವನ್ನು ಕಟ್ಟದೆ... ಕೇವಲ ತುಟಿ ಮರುಕ ತೋರುತ್ತಾ ಅದ್ದೂರಿ, ವೈಭವದ ಸಮ್ಮೇಳನಗಳಲ್ಲಿ ಪರಿಷತ್ತು ಮುಳುಗಿರುವುದು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆಯಂತೆ ತೋರುತ್ತಿದೆ.
ಭಾಷಾ ಮಾಧ್ಯಮದ ವಿರುದ್ಧವಾಗಿ ಸುಪ್ರೀಂಕೋರ್ಟಿನ ತೀರ್ಪು ಬಂದಾಗ, ಕಾಕತಾಳೀಯವೆಂಬಂತೆ ಸಾಹಿತ್ಯ ಪರಿಷತ್ತಿಗೆ ಶತಮಾನೋತ್ಸವದ ಸಂಭ್ರಮ! ಆಗಲೂ ಪ್ರತಿ ವರ್ಷಕ್ಕಿಂತ ಹೆಚ್ಚಿನ ಹಣ ವ್ಯಯಿಸಿ, ಅದ್ದೂರಿಯಾಗಿ ಸಮ್ಮೇಳನ ನಡೆದು ದಾಖಲೆ ನಿರ್ಮಿಸಿತು. ಶಿಕ್ಷಣದಲ್ಲಿ ಕನ್ನಡವೇ ಇಲ್ಲದಿದ್ದರೆ ಮುಂದೆ ಕನ್ನಡ ಉಳಿದೀತು ಹೇಗೆ? ಆಗ ತಾನು ಕನ್ನಡದ ಹೆಸರಿನಲ್ಲಿ ಸಮ್ಮೇಳನವನ್ನು ಮಾಡುವುದು ಹಾಸ್ಯಾಸ್ಪದವಲ್ಲವೇ? ಎಂದು ಆತ್ಮಾವಲೋಕನ ಮಾಡಿಕೊಂಡಿದ್ದು ಕಾಣಲಿಲ್ಲ. ಇದಕ್ಕಾಗಿ ಶಿಕ್ಷಣದಲ್ಲಿ ಕನ್ನಡವನ್ನು ಆಗುಮಾಡುವುದು ತನ್ನ ಉಸಿರು ಅಥವಾ ತನ್ನ ಪ್ರಾಣ ಎಂದುಕೊಳ್ಳಬೇಕಾದ ಕನ್ನಡ ಸಾಹಿತ್ಯ ಪರಿಷತ್ತು, ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿ, ಸರಕಾರಗಳಿಗೆ ಕಾಟಾಚಾರದ ಪತ್ರಗಳನ್ನು ಬರೆದು ಮತ್ಯಾವ ರಚನಾತ್ಮಕ ಪ್ರಯತ್ನವನ್ನೂ ಮಾಡದೇ, ಕೇವಲ ಸಮ್ಮೇಳನಗಳನ್ನು ಮಾಡಿ ಪ್ರತಿ ಬಾರಿ ಅಲ್ಲಿ ಕನ್ನಡ ನಾಡು, ಭಾಷೆ/ಶಾಲೆಯ ಪರವಾಗಿ ಪುಂಖಾನುಪುಂಖವಾಗಿ ಭಾಷಣ ಮಾಡಿಸಿ, ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕಷ್ಟೇ ಸೀಮಿತವಾಗಿರುವುದು ಕನ್ನಡ ನಾಡು, ನುಡಿಯ ಇಂದಿನ ಸ್ಥಿತಿಯ ಅಣಕದಂತೆ ತೋರುತ್ತಿದೆ!
ಮಹಾದಾಯಿ ಮತ್ತು ಕಾವೇರಿ ನೀರಿನ ಹಂಚಿಕೆ, ಗಡಿ ವಿವಾದ, ನಿರುದ್ಯೋಗ ಸಮಸ್ಯೆ, ತೀವ್ರ ಬರ, ಆನಂತರ ಉತ್ತರ ಕರ್ನಾಟಕಕ್ಕೆ ಬಡಿದ ರಾಕ್ಷಸ ಮಳೆ ಮತ್ತು ಪ್ರವಾಹ, ಸಾವಿರಾರು ಸಂಖ್ಯೆಯಲ್ಲಿ ರೈತರ ಆತ್ಮಹತ್ಯೆ, ಕೊಡಗು ಮತ್ತು ಮಲೆನಾಡಿನ ಹಲವು ಪ್ರದೇಶಗಳಲ್ಲಿ ಮೇಘಸ್ಫೋಟದಿಂದಾದ ಭಾರೀ ಮಳೆ, ಭೂಕುಸಿತ, ಅಪಾರ ಜೀವಹಾನಿ, ಆಸ್ತಿ ನಷ್ಟ ..... ಹೀಗೆ ನಾಡಿಗೊದಗಿರುವ ಹತ್ತು ಹಲವು ತೀವ್ರ ಜ್ವಲಿಸುವ ಸಂದರ್ಭಗಳಲ್ಲಿ ಕೂಡ ಸಾಹಿತ್ಯ ಪರಿಷತ್ತಿನದು ದಿವ್ಯ ನಿರ್ಲಕ್ಷ್ಯ! ಈ ಸಮಸ್ಯೆಗಳ ಪರವಾಗಿ ನಿಂತು ಹೋರಾಟ ಮತ್ತು ರಚನಾತ್ಮಕ ಕಾರ್ಯಯೋಜನೆ ರೂಪಿಸಿದ್ದಾಗಲೀ, ನಿರಂತರವಾಗಿ ತುಡಿದದ್ದಾಗಲೀ ಇಲ್ಲವೇ ಇಲ್ಲ!
ಹೀಗೆಂದೇ, ಹೋದ ವರ್ಷ ರಾಜ್ಯ ಸರಕಾರ 1,000 ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡುವುದಾಗಿ ಘೋಷಿಸಿದಾಕ್ಷಣ ಪರಿಷತ್ತು, ಈ ಆದೇಶ ಹಿಂದೆಗೆದುಕೊಳ್ಳದಿದ್ದರೆ ಗೋಕಾಕ್ ಮಾದರಿಯ ಆಂದೋಲನ ರೂಪಿಸುವುದಾಗಿ ಅಬ್ಬರಿಸಿದ್ದು ಹಾಸ್ಯಾಸ್ಪದವೆನಿಸಿತ್ತು! ಏಕೆಂದರೆ, ಸಮ್ಮೇಳನ ಆಯೋಜನೆ ಗಾಗಿಯೇ ಸರಕಾರದ ಮುಂದೆ ಸದಾ ಕೈಯೊಡ್ಡಿ ಭಿಕ್ಷೆಗೆ ನಿಂತಿರುವ ಪರಿಷತ್ತಿಗೆ ಅದರ ವಿರುದ್ಧವಾಗಿ ಆಂದೋಲನ ರೂಪಿಸುವ ತಾಕತ್ತಿದೆಯೇ? ದಶಕದಿಂದಲೇ ಕನ್ನಡ ಶಾಲೆಗಳು ಸಾವಿರಗಟ್ಟಲೆಯಂತೆ ಮುಚ್ಚಲ್ಪಡುತ್ತಿವೆ. ಉಳಿದಿರುವ ಶಾಲೆಗಳಲ್ಲೂ ಮೂಲ ಸೌಕರ್ಯದ ತೀವ್ರ ಕೊರತೆ! ಶಿಕ್ಷಕರ ಕೊರತೆ, ಶಾಲಾ ಕಟ್ಟಡ, ಶೌಚಾಲಯಗಳು ಅವನತಿಯ ಹಂತ ತಲುಪಿರುವ ಅವಸ್ಥೆ. ಮಕ್ಕಳಿಗೆ ಕುಳಿತುಕೊಳ್ಳಲೂ ಸರಿಯಾದ ಪೀಠೋಪಕರಣಗಳ ವ್ಯವಸ್ಥೆಯೂ ಇಲ್ಲ. ಈ ಎಲ್ಲಾ ಕಾರಣಗಳಿಂದ ಕೊಂಚ ಅನುಕೂಲತೆಯಿರುವ ಪೋಷಕರೂ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುತ್ತಾರೆಯೇ ಹೊರತು ಸರಕಾರಿ ಶಾಲೆಗಳಿಗಲ್ಲ. ಜೊತೆಗೆ ಖಾಸಗಿ ಶಾಲೆಗಳ ಸ್ಥಾಪನೆಗೆ ಎಗ್ಗಿಲ್ಲದಂತೆ ಪರವಾನಿಗೆ ನೀಡುತ್ತಿರುವುದರಿಂದ, ಅವು ಎಲ್ಲೆಂದರಲ್ಲಿ ತಲೆ ಎತ್ತಿ ಅನನುಕೂಲತೆಗಳ ಅಪರಾವತಾರವೆಂಬಂತಿರುವ ಬಡ ಸರಕಾರಿ ಕನ್ನಡದ ಶಾಲೆಗಳು ಮೂಲೆಗುಂಪಾಗುತ್ತಿವೆ.
ಇದರ ಮಧ್ಯೆಯೇ ವೈರುಧ್ಯವೆಂಬಂತೆ ಕರ್ನಾಟಕ ರಾಜ್ಯದ 5,272 ಗ್ರಾಮಗಳಲ್ಲಿ ಕನಿಷ್ಠ ಪ್ರಾಥಮಿಕ ಶಾಲೆಯೂ ಇಲ್ಲ ಎಂಬ ವಿಷಯವನ್ನು ಶಿಕ್ಷಣ ಇಲಾಖೆಯ ಉಪಗ್ರಹ ಆಧಾರಿತ ಮ್ಯಾಪಿಂಗ್ ಬಹಿರಂಗಪಡಿಸಿದೆ! ಹೀಗಾಗಿ ಮಕ್ಕಳು ಶಾಲೆಯಿಂದ ಹೊರಗುಳಿಯುವ ಪ್ರಮಾಣಕ್ಕೂ ಇದಕ್ಕೂ ನೇರ ಸಂಬಂಧವಿದೆ. ಶಿಕ್ಷಣ ಹಕ್ಕು ಕಾಯ್ದೆಯಂತೆ ಒಂದೂವರೆ ಕಿಲೋಮೀಟರ್ ವ್ಯಾಪ್ತಿಯಲ್ಲಿ ಶಾಲೆಯಿಲ್ಲದೇ ಇರುವುದು ಮಕ್ಕಳ ನ್ಯಾಯಯುತ ಶೈಕ್ಷಣಿಕ ಹಕ್ಕಿನ ಉಲ್ಲಂಘನೆಯೇ ಆಗಿದೆ. ಈ ಎಲ್ಲ ಸಂದರ್ಭದಲ್ಲೂ ದನಿಯೆತ್ತಲೇಬೇಕಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತು ಬಾಯ್ಮುಚ್ಚಿ ಕುಳಿತಿದ್ದು, ಒಮ್ಮೆ ಅಬ್ಬರಿಸಿ ಮತ್ತೆ ಬಾಯ್ಮಿಚ್ಚಿ ಕುಳಿತಿರುವುದು ತನ್ನನ್ನೇ ಅಪಹಾಸ್ಯಕ್ಕೀಡು ಮಾಡಿಕೊಳ್ಳುವಂತಿದೆ!
ಕನ್ನಡ ಶಾಲೆಗಳನ್ನು ತೆರೆಯಬೇಕು, ಕನ್ನಡ ಶಾಲೆಗಳನ್ನು ಪೋಷಿಸಬೇಕೆಂಬ ಮುಖ್ಯ ಧ್ಯೇಯ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು, ನಿಜಕ್ಕೂ ಇಂತಹ ಆತಂಕದ ಸ್ಥಿತಿಯಲ್ಲಿ ಮಾಡಬೇಕಿರುವುದು ಕೋಟಿಗಟ್ಟಲೆ ಖರ್ಚಿನ ಸಮ್ಮೇಳನಗಳನ್ನಲ್ಲ! ಅದಕ್ಕೆ ಮಾಡುತ್ತಿರುವ ದುಂದುವೆಚ್ಚವನ್ನು ನಿಲ್ಲಿಸಿ, ಆ ಹಣವನ್ನೇ ವಿನಿಯೋಗಿಸಿ ಕನ್ನಡ ಶಾಲೆಗಳಿಲ್ಲದ ಹಳ್ಳಿಗಳಲ್ಲಿ ವ್ಯವಸ್ಥಿತ, ಸುಸಜ್ಜಿತ ಕನ್ನಡ ಶಾಲೆಗಳನ್ನು ಹೊಸದಾಗಿ ನಿರ್ಮಾಣ ಮಾಡಬೇಕು ಮತ್ತು ಅವನ್ನು ಮೂಲಮಟ್ಟದಿಂದ ನಿರ್ವಹಿಸುವ ಗುರುತರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಆಗ ಅದು ನಿಜಕ್ಕೂ ಕನ್ನಡದ ಕೆಲಸ. ಕನ್ನಡವನ್ನುಳಿಸುವ ಕೆಲಸ. ಕನ್ನಡದ ಅಸಹಾಯಕ ಮಕ್ಕಳ ಶೈಕ್ಷಣಿಕ ಹಕ್ಕುಗಳ ಪರವಾಗಿ ನಿಲ್ಲುವ ದಿವ್ಯ ಕಾರ್ಯವಾದೀತು. ಮೂಲಸೌಕರ್ಯಗಳೂ ಇಲ್ಲದೇ ಸೊರಗಿ, ಬೀಳುವ ಹಂತ ತಲುಪಿರುವ ಕನಿಷ್ಠ ನೂರು ಬಡ ಕನ್ನಡ ಶಾಲೆಗಳನ್ನಾದರೂ ಪರಿಷತ್ತು, ದತ್ತು ತೆಗೆದುಕೊಂಡು ಅವುಗಳನ್ನು ಮೂಲಮಟ್ಟದಿಂದ ಬಲಗೊಳಿಸಿದರೆ ಬಹುಶಃ ಅದಕ್ಕಿಂತ ದೊಡ್ಡ ಕನ್ನಡದ ಕೆಲಸ ಇನ್ನೊಂದಿಲ್ಲ. ಇದಾದರೆ ಖಂಡಿತ ಕೆಲವೇ ವರ್ಷಗಳಲ್ಲಿ ರಾಜ್ಯದ ಸರಕಾರಿ ಶೈಕ್ಷಣಿಕ ಸ್ಥಿತಿಯೇ ಗುಣಾತ್ಮಕವಾಗಿ ಬದಲಾಗುವುದರಲ್ಲಿ ಸಂಶಯವೇ ಇಲ್ಲ.
ಆದರೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದನ್ನು ಮಾಡುವ ಧೀಶಕ್ತಿ ಮತ್ತು ಇಚ್ಛಾಶಕ್ತಿಯಿದೆಯೇ? ಈ ಕೆಲಸಕ್ಕಿಂತ ಸಮ್ಮೇಳನಗಳನ್ನು ಮಾಡುವುದು ಪರಿಷತ್ತಿಗೆ ಸುಲಭ ಮತ್ತು ಎಲ್ಲ ರೀತಿಯಲ್ಲೂ ಲಾಭದಾಯಕವಲ್ಲವೇ!? ಸಾರ್ವಜನಿಕರಿಂದ ಹಣ ವಸೂಲಿ ಮಾಡಿ, ಸರಕಾರದಿಂದ ಕೋಟಿಗಟ್ಟಲೆ ಅನುದಾನ ಪಡೆದು, ಕನ್ನಡದ ಹೆಸರಿನಲ್ಲಿ ಅದ್ದೂರಿ ಸಮ್ಮೇಳನಗಳನ್ನು, ಹಳ್ಳಿಯಿಂದ ದಿಲ್ಲಿಯವರೆಗೆ ಆಯೋಜಿಸುವ ಕೇಂದ್ರ ಸಾಹಿತ್ಯ ಪರಿಷತ್ತು ಮತ್ತದರ ಘಟಕಗಳು, ತಾನು ಮಾಡುತ್ತಿರುವ ದುಂದುವೆಚ್ಚದ ಲೆಕ್ಕವನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೂ ಮತ್ತು ತನ್ನ ಸದಸ್ಯರಿಗೂ ಬಿಡುಗಡೆ ಮಾಡಿ ತನ್ನ ಉತ್ತರದಾಯಿತ್ವವನ್ನು ಸಾಬೀತುಪಡಿಸಬೇಕಿರುವುದು ಬಹು ಮುಖ್ಯವಾದ ನೈತಿಕ ಜವಾಬ್ದಾರಿಯಾಗಿದೆ. ಸಮ್ಮೇಳನದ ಲೆಕ್ಕಪತ್ರವನ್ನು ತನ್ನೊಳಗೇ ಗುಟ್ಟಾಗಿಟ್ಟುಕೊಳ್ಳುವುದು ಪರಿಷತ್ತಿನ ಬಗೆಗಿನ ಅನುಮಾನವನ್ನು ದೃಢೀಕರಿಸುತ್ತದಷ್ಟೇ. ಮೂರು ದಿನಗಳ ಅದ್ದೂರಿತನಕ್ಕೆ ಕನಿಷ್ಠ 12-14 ಕೋಟಿ ರೂಪಾಯಿಗಳು ಯಾವ್ಯಾವ ಶೀರ್ಷಿಕೆಗೆ ಖರ್ಚಾಗುತ್ತದೆಂಬ ಲೆಕ್ಕಪತ್ರವನ್ನಾದರೂ ಸಮ್ಮೇಳನ ಮುಗಿದೊಡನೆ ಪರಿಷತ್ತು, ಬಿಡುಗಡೆ ಮಾಡಿ ಕನಿಷ್ಠ ಮಟ್ಟದ ನೈತಿಕತೆಯನ್ನಾದರೂ ಉಳಿಸಿಕೊಳ್ಳಲಿ.