ನಮ್ಮ ಸಂವಿಧಾನದ ಮೂಲ
ಸಂವಿಧಾನಕ್ಕೆ 70
ಸಾಂವಿಧಾನಿಕ ಸಭೆಯಲ್ಲಿ ಅಂಬೇಡ್ಕರ್ ಅವರು ಹಲವು ವಿಷಯಗಳನ್ನೆತ್ತಿ ಅವುಗಳ ಅದ್ಭುತವಾದ ಚರ್ಚೆ ನಡೆಸಲು ಅವರಿಗೆ ಸೈಮನ್ ಕಮಿಷನ್‌ನ ಕಲಾಪಗಳಲ್ಲಿ ಹಾಗೂ ಮೂರು ದುಂಡುಮೇಜಿನ ಪರಿಷತ್ತುಗಳಲ್ಲಿ ಅವರು ಪಡೆದ ತಿಳಿವಳಿಕೆ ಮತ್ತು ಅನುಭವಗಳು ಬಹಳಷ್ಟು ನೆರವಾದವು.
70 ವರ್ಷಗಳಿಗಿಂತಲೂ ಹೆಚ್ಚು ಕಾಲ ಭಾರತದ ಸಂವಿಧಾನವು ವಿವಿಧತೆಯ ಒಂದು ದೇಶವನ್ನು ಹೇಗೆ ಒಂದಾಗಿ ಭದ್ರವಾಗಿ ನಿಲ್ಲಿಸಿದೆ ಎಂದು ಜಗತ್ತು ಆಶ್ಚರ್ಯ ಪಡುತ್ತದೆ. ಸಂವಿಧಾನದ ಅಂತಃಸತ್ವ ಹಾಗೂ ಬಾಳ್ವಿಕೆ ಅದರ ಒಳಗಡೆ ಇರುವ ಸುರಕ್ಷಾ ಕವಾಟಗಳನ್ನು ಆಧರಿಸಿ ನಿಂತಿದೆ ಈ ಸುರಕ್ಷಾ ಕ್ರಮಗಳು ನಾಗರಿಕರಿಗೆ ಸ್ವಾತಂತ್ರ್ಯ ಹಾಗೂ ನ್ಯಾಯ ಮತ್ತು ಸಮಾನತೆಯ ಹಕ್ಕುಗಳನ್ನು ನೀಡಿವೆ. ಈ ಹಕ್ಕುಗಳನ್ನು ಯಾವುದೇ ಸರಕಾರ ಅದೆಷ್ಟೇ ಪ್ರಬಲವಾಗಿರಲಿ, ಅಧಿಕಾರದಲ್ಲಿ ಎಷ್ಟೇ ಅವಧಿಗೆ ಇರಲಿ ನಾಗರಿಕರಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ.
ಆದರೆ ಇಂತಹ ಒಂದು ದೀರ್ಘವಾದ, ಶಕ್ತಿಯುತವಾದ ಭಾರತದ ಸಂವಿಧಾನವೆಂಬ ದಾಖಲೆ ಸಾಂವಿಧಾನಿಕ ಸಭೆಯೊಂದರಿಂದ ಕೇವಲ ಎರಡು ವರ್ಷ ಹನ್ನೊಂದು ತಿಂಗಳು ಹದಿನೇಳು ದಿನಗಳಲ್ಲಿ ರಚಿಸಲ್ಪಟ್ಟಿತು ಎಂದು ಬಹುತೇಕ ಜನ ತಪ್ಪಾಗಿ ತಿಳಿದಿದ್ದಾರೆ. ನಿಜ ಹೇಳಬೇಕೆಂದರೆ ನಮ್ಮ ಸಂವಿಧಾನವು ಅನುಷ್ಠಾನಕ್ಕೆ ಬರುವ ಮೊದಲು ನಲವತ್ತಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ರೂಪುಗೊಂಡ ಇತಿಹಾಸ ಹೊಂದಿದೆ. ಅದು 1919ರ ಇಂಡಿಯನ್ ಕೌನ್ಸಿಲ್ ಆ್ಯಕ್ಟ್‌ನಿಂದ ಆರಂಭಗೊಳ್ಳುತ್ತದೆ. ಮೊತ್ತ ಮೊದಲ ಬಾರಿಗೆ ಕೇಂದ್ರ ಮತ್ತು ಪ್ರಾಂತೀಯ ಮಟ್ಟಗಳಲ್ಲಿ ಭಾರತೀಯರನ್ನು ದೇಶದ ಆಡಳಿತದೊಳಕ್ಕೆ ತಂದ ಕಾಯ್ದೆ ಇದು.
1919ರ ದಿ ಗವರ್ನಮೆಂಟ್ ಇಂಡಿಯಾ ಆ್ಯಕ್ಟ್, ಇಂಡಿಯನ್ ಕೌನ್ಸಿಲ್ ಆ್ಯಕ್ಟ್‌ಗಿಂತ ಬಹಳ ಸುಧಾರಿತ ಕಾಯ್ದೆಯಾದರೂ ಅದು ಕೂಡ ಮತದಾರರನ್ನು ಕೋಮುವಾದಿ ನೆಲೆಯಲ್ಲಿ ಪರಿಗಣಿಸಿ ಭಾರತೀಯರಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ನೀಡಿದ ಕಾಯ್ದೆಯಾಗಿತ್ತು.
1930ರಲ್ಲಿ ತನ್ನ ವರದಿಯನ್ನು ಸಲ್ಲಿಸಿದ ಸೈಮನ್ ಕಮಿಷನ್ ಭಾರತೀಯರಿಗೆ ಆಡಳಿತದಲ್ಲಿ ಇನ್ನೂ ಹೆಚ್ಚಿನ ಪ್ರಾತಿನಿಧ್ಯ ಪಾಲುಗಾರಿಕೆ ದೊರೆಯಬೇಕೆಂದು ಶಿಫಾರಸು ಮಾಡಿತ್ತು. ಈ ವರದಿಯ ಪರಿಣಾಮವಾಗಿ ನಡೆದದ್ದೇ ಮೂರು ವಿಶೇಷವಾದ ದುಂಡುಮೇಜಿನ ಪರಿಷತ್ತುಗಳು- 1930, 1931 ಮತ್ತು 1932ರಲ್ಲಿ ಲಂಡನ್‌ನಲ್ಲಿ ನಡೆದ ಈ ಮೂರು ಪರಿಷತ್ತುಗಳ ಉದ್ದೇಶ ಭಾರತೀಯರು ಎಷ್ಟರ ಮಟ್ಟಿಗೆ, ಎಷ್ಟು ಚೆನ್ನಾಗಿ ತಮ್ಮನ್ನು ತಾವೇ ಆಳಿಕೊಳ್ಳಬಲ್ಲರೆಂಬುದನ್ನು ತಿಳಿಯುವುದೇ ಆಗಿತ್ತು.
ದುಂಡುಮೇಜಿನ ಈ ಪರಿಷತ್ತುಗಳ ಅಧಿವೇಶನಗಳಲ್ಲಿ ನಡೆದ ಚರ್ಚೆಗಳು ವಿವಿಧ ಸಮುದಾಯಗಳ, ವಿಶೇಷವಾಗಿ ದಮನಿತ ವರ್ಗಗಳ ಹಾಗೂ ಮುಸ್ಲಿಮರ ಕಾಳಜಿಗಳನ್ನು, ಆತಂಕಗಳನ್ನು ಪ್ರಕಟಪಡಿಸಿದವು. ಅಂಬೇಡ್ಕರ್ ದಮನಿತ ವರ್ಗಗಳ ನಾಯಕರಾಗಿದ್ದರು ಹಾಗೂ ಮುಹಮ್ಮದ್ ಅಲಿ ಜಿನ್ನಾ ಮುಸ್ಲಿಮರ ಧ್ವನಿಯಾಗಿದ್ದರು. ಗಾಂಧೀಜಿ ಭಾಗವಹಿಸಿದ್ದ ಎರಡನೇ ಅಧಿವೇಶನ ಹೊರತುಪಡಿಸಿ ಉಳಿದ ಎರಡನ್ನು ಕಾಂಗ್ರೆಸ್ ನಿಷೇಧಿಸಿತ್ತು.
ಈ ಅಧಿವೇಶನಗಳು 1935ರ ಭಾರತ ಸರಕಾರ ಕಾಯ್ದೆ ಜಾರಿಗೆ ಕಾರಣವಾದವು. ಅಧಿವೇಶನಗಳಲ್ಲಿ ನಡೆದ ಚರ್ಚೆಗಳು ಸಂವಾದಗಳು ಹಾಗೂ ವಾಗ್ವಾದಗಳು ಹಲವಾರು ವಿಷಯಗಳು ದಾಖಲೆಯಾಗಲು ಕಾರಣವಾದವು. ಉದಾಹರಣೆಗೆ ಫೆಡರಲಿಸಂ, ನಾಗರಿಕ ಸೇವೆಗಳು, ಪ್ರಾದೇಶಿಕ ಪ್ರಾತಿನಿಧ್ಯ ಮೂಲಭೂತ ಹಕ್ಕುಗಳು ಮತ್ತು ಸಾರ್ವತ್ರಿಕ ಮತದಾನದ ಹಕ್ಕು. ಮೂರು ದುಂಡು ಮೇಜಿನ ಅಧಿವೇಶನಗಳಲ್ಲೇ ಭಾಷಾವಾರು ಪ್ರಾಂತಗಳ ಪರಿಕಲ್ಪನೆ ಹಾಗೂ ಮೀಸ ಲಾತಿಯ ವಿಷಯ ಪ್ರಸ್ತಾಪವಾಗಿದ್ದವು.
ಮೂರು ದುಂಡು ಮೇಜಿನ ಅಧಿವೇಶನಗಳಲ್ಲಿ ನಡೆದ ಚರ್ಚೆಗಳ ವಿಸ್ತರಣಾ ರೂಪವಾಗಿಯೇ ಸಾಂವಿಧಾನಿಕ ಸಭೆಯಲ್ಲಿ ಚರ್ಚೆಗಳು ನಡೆದವೆಂದರೆ ಆಶ್ಚರ್ಯವಾಗದೆ ಇರದು. ಉದಾಹರಣೆಗೆ, ಸಾಂವಿಧಾನಿಕ ಸಭೆಯಲ್ಲಿ ಅಂಬೇಡ್ಕರ್ ಅವರು ಹಲವು ವಿಷಯಗಳನ್ನೆತ್ತಿ ಅವುಗಳ ಅದ್ಭುತವಾದ ಚರ್ಚೆ ನಡೆಸಲು ಅವರಿಗೆ ಸೈಮನ್ ಕಮಿಷನ್‌ನ ಕಲಾಪಗಳಲ್ಲಿ ಹಾಗೂ ಮೂರು ದುಂಡುಮೇಜಿನ ಪರಿಷತ್ತುಗಳಲ್ಲಿ ಅವರು ಪಡೆದ ತಿಳಿವಳಿಕೆ ಮತ್ತು ಅನುಭವಗಳು ಬಹಳಷ್ಟು ನೆರವಾದವು.
ದುಂಡು ಮೇಜಿನ ಅಧಿವೇಶನ ಗಳು ಭಾರತದ ಕುರಿತು ಬ್ರಿಟಿಷರ ಮನೋಭಾವ ಹಾಗೂ ಧೋರಣೆ ಬದಲಾಗುತ್ತಿರುವುದನ್ನು ಸೂಚಿಸಿದವು. ಭಾರತೀಯ ಉಪಖಂಡವನ್ನು ನಿಭಾಯಿಸು ವುದು, ಮ್ಯಾನೇಜ್ ಮಾಡುವುದು ದಿನೇದಿನೇ ಹೆಚ್ಚು ಹೆಚ್ಚು ಕಷ್ಟವಾಗುತ್ತಿದೆ ಮತ್ತು ಭಾರತಕ್ಕೆ ಒಂದು ರೀತಿಯ ಸ್ವಾಯತ್ತತೆಯನ್ನು ನೀಡದಿದ್ದಲ್ಲಿ ಸಶಸ್ತ್ರ ಹೋರಾಟ ಆರಂಭವಾಗಬಹುದು ಎಂದು ಬ್ರಿಟಿಷರು ತಿಳಿಯಲಾರಂಭಿಸಿದ್ದರು ಎನ್ನುವುದು ಈ ಅಧಿವೇಶನಗಳಿಂದ ವ್ಯಕ್ತವಾಯಿತು. ಎಪ್ಪತ್ತು ವರ್ಷಗಳ ಬಳಿಕ ನಾವು ನಮ್ಮ ಸಂವಿಧಾನದ ಮೂಲ ನೆಲೆಗಳ ಮೂಲ ಪ್ರೇರಣೆಗಳ ಬಗ್ಗೆ ಹೆಚ್ಚು ಪ್ರಾಮಾಣಿಕರಾಗಬೇಕು. ದುಃಖದ ಸಂಗತಿಯೆಂದರೆ ಈ ಮೂಲವನ್ನು ನಮ್ಮ ಸಾಮೂಹಿಕ ಜ್ಞಾಪಕ ಶಕ್ತಿಯಿಂದ ಅಳಿಸಲಾಗಿದೆ. ನಮ್ಮ ಸಂವಿಧಾನದ ವಸಾಹತು ಶಾಹಿ ಮೂಲಗಳನ್ನು ಬಯಲುಗೊಳಿಸಲು ನಮಗೇ ನಾಚಿಕೆ, ಅವಮಾನವಾಗುತ್ತಿದೆಯೋ ಏನೋ ಎನ್ನುವಂತೆ ನಾವು ವರ್ತಿಸುತ್ತಿದ್ದೇವೆ. ಇದಕ್ಕೆ ಬದಲಾಗಿ ನಮ್ಮ ಸಾಂವಿಧಾನಿಕ ಸಭೆಯ ಸದಸ್ಯರು ಅತ್ಯುತ್ತಮವಾದ ವಿಷಯಗಳು, ವಿಚಾರಗಳು, ಪರಿಕಲ್ಪನೆಗಳು ಎಲ್ಲಿಂದಲೇ ಬರಲಿ ಅದನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲು ಒಪ್ಪಿದ್ದರು, ಸಿದ್ಧರಿದ್ದರು ಎಂಬ ಬಗ್ಗೆ ನಾವು ಹೆಮ್ಮೆ ಪಡಬೇಕು ನಮ್ಮ ಹಿಂದಿನ ವಸಾಹತು ಶಾಹಿಗಳಿಂದ ಬಂದಿರುವ ವಿಚಾರಗಳಿರಲಿ ಅಥವಾ ಐರಿಷ್ ಸಂವಿಧಾನದಿಂದ ಪಡೆದಿರುವ ಡೈರೆಕ್ಟ್ ಪ್ರಿನ್ಸಿಪಲ್ ಆಫ್ ಸ್ಟೇಟ್ ಪಾಲಿಸಿ ಇರಲಿ ಇವುಗಳ ಕುರಿತು ನಾವು ನಾಚಿ ಕೊಳ್ಳಬೇಕಾಗಿಲ್ಲ.
(ಲೇಖಕರು ಐಐಎಸ್‌ಸಿ ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ)
ಕೃಪೆ: ದಿ ಹಿಂದೂ