ಮುನಿಗಳ ಸುಳ್ಳು
ಅಜ್ಜಿ ಹೇಳಿದ ಕತೆ
ಅದೊಂದು ಕಾಡು. ಸುತ್ತಲೂ ದಟ್ಟವಾಗಿ ಬೆಳೆದ ಎತ್ತರವಾದ ಮರಗಳಿಂದ ತುಂಬಿತ್ತು. ಅದು ಮಧ್ಯಾಹ್ನದ ಸಮಯವಾಗಿದ್ದರೂ ಬಿಸಿಲೇ ಬಿದ್ದಿಲ್ಲವೇನೋ ಎಂಬಂತೆ ಸುತ್ತಲೂ ತಂಪೇ ತುಂಬಿತ್ತು. ಎತ್ತ ನೋಡಿದರೂ ಹಸಿರಿನಿಂದ ಕಂಗೊಳಿಸುತ್ತಿತ್ತು. ಹಸಿರು ಸಮೃದ್ಧಿ ತುಂಬಿತ್ತು. ಅಂತಹ ಒಂದು ಸುಂದರವಾದ ಕಾಡಿನಲ್ಲಿ ಅನಾಮಿಕನೊಬ್ಬ ಏಳುತ್ತಾ ಬೀಳುತ್ತಾ ತೇಕುತ್ತಾ ಓಡುತ್ತಾ ಬರುತ್ತಿದ್ದ. ಅವನು ಪದೇ ಪದೇ ಹಿಂದೆ ನೋಡುತ್ತಾ ಓಡಿ ಹೋಗುತ್ತಿದ್ದ. ಅದನ್ನು ನೋಡಿದರೆ ಅವನನ್ನು ಯಾರೋ ಬೆನ್ನಟ್ಟಿರುವಂತೆ ಕಾಣುತ್ತಿತ್ತು. ಅವನು ಪ್ರಾಣ ಭಯದಿಂದ ಓಡುತ್ತಿದ್ದ.
ಅವನು ಆ ಕಾಡಿನಲ್ಲಿ ಗೊತ್ತು ಗುರಿಯಿಲ್ಲದೇ ಓಡತೊಡಗಿದ್ದ. ತನ್ನ ಜೀವವನ್ನು ಕಾಪಾಡಿಕೊಳ್ಳಲು ಏನಾದರೊಂದು ಆಸರೆ ಸಿಗುವುದೇನೋ ಎಂದು ನಿರೀಕ್ಷಿಸುತ್ತಿದ್ದ. ಅವನು ಹಾಗೆ ಓಡುತ್ತಿರುವಾಗಲೇ ಎದುರಿಗೆ ಒಂದು ಗುಡಿಸಲಿನಂತಹದ್ದು ಏನೋ ಕಾಣಿಸಿತು. ಅವನಿಗೆ ಏನೋ ಒಂದು ಜೀವ ಕಳೆ ಸಿಕ್ಕಂತಾಯಿತು. ಕೂಡಲೇ ಅದರ ಹತ್ತಿರ ಓಡಿ ಹೋದ. ಹತ್ತಿರ ಹೋಗಿ ನೋಡಿದಾಗ ಅದೊಂದು ಆಶ್ರಮವಾಗಿತ್ತು. ಅದರ ಒಳಗಡೆ ಒಬ್ಬ ಮುನಿಯೊಬ್ಬರು ಏಕಾಗ್ರತೆಯಿಂದ ಧ್ಯಾನ ಮಾಡುತ್ತಿದ್ದ್ದರು. ಈಗ ಆತ ಸಂದಿಗ್ಧತೆಯಲ್ಲಿ ಸಿಕ್ಕಿ ಬಿದ್ದ. ತಾನೇನಾದರೂ ಮುನಿಗಳನ್ನು ಅವರ ಧ್ಯಾನದಿಂದ ಎಬ್ಬಿಸಿದರೆ ಅವರ ಸಿಟ್ಟಿಗೆ ಗುರಿಯಾಗಿ ಇಲ್ಲದ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ಎಚ್ಚರಿಸದೇ ಹೋದರೆ ತನ್ನ ಜೀವಕ್ಕೆ ಅಪಾಯವಿದೆ. ಎರಡೂ ರೀತಿಯಿಂದಲೂ ನೋಡಿದಾಗ ಜೀವಕ್ಕೆ ತೊಂದರೆಯೇ. ಆದರೆ ಇದ್ದುದರಲ್ಲಿಯೇ ಒಳ್ಳೆಯದೇನೆಂದರೆ ಮುನಿಗಳು ಎಚ್ಚರವಾಗಿ ನನ್ನ ಪರಿಸ್ಥಿತಿಯನ್ನು ಕೇಳಿ ತಿಳಿದುಕೊಂಡರೆ ಸಹಾಯ ಮಾಡಲೂಬಹುದು. ಹಾಗಾಗಿ ಅವರನ್ನು ಎಚ್ಚರಿಸುವುದೇ ಒಳ್ಳೆಯದು ಎಂದು ನಿರ್ಧರಿಸಿ, ಮುನಿಗಳೇ, ಈ ಬಡಪಾಯಿ ಮನುಷ್ಯನು ತಮ್ಮ ಸಹಾಯ ಹಸ್ತ ಬಯಸಿ ಬಂದಿದ್ದೇನೆ ಎಂದು ವಿನಮ್ರನಾಗಿ ಬೇಡಿಕೊಂಡ. ಆತನು ಹಾಗೆ ಹೇಳಿದ ಒಂದೆರಡು ಕ್ಷಣಗಳಲ್ಲಿ ಮುನಿಯು ದೀರ್ಘವಾದ ಧ್ಯಾನದಿಂದ ಎಚ್ಚೆತ್ತು, ಯಾರು ನೀನು? ಇಲ್ಲಿಗೇಕೆ ಬಂದಿರುವೆ? ಎಂದು ಕೇಳಿದರು. ಮುನಿಗಳು ಸಿಟ್ಟು ಮಾಡಿಕೊಳ್ಳದೇ ನಯವಾಗಿ ಕೇಳಿದ್ದರಿಂದ ಉಲ್ಲಾಸಿತನಾದ ಅವನು, ‘‘ಮುನಿಗಳೇ, ನನ್ನ ಹೆಸರು ವೀರಸುತ ಎಂದು. ಕಾಡಿನಲ್ಲಿ ಸೌದೆ ತರೋಣವೆಂದು ಬಂದಿದ್ದೆ’’ ಸೌದೆಗಳನ್ನೆಲ್ಲಾ ಸೇರಿಸಿ ಇನ್ನೇನು ಮನೆಯ ಕಡೆಗೆ ಒಯ್ಯಬೇಕೆಂದು ಸಿದ್ಧನಾಗುತ್ತಿರುವಾಗ ಐದಾರು ಸೈನಿಕರು ನನ್ನತ್ತ ಬಂದು ಕಾಡಿನಲ್ಲಿ ಜಿಂಕೆ ಮರಿಯೊಂದು ಸತ್ತು ಬಿದ್ದಿದೆ. ಅದನ್ನು ನೀನೇ ಕೊಂದಿದ್ದಿಯಾ ಎಂದು ರಾಜರ ಬಳಿ ನನ್ನನ್ನು ಎಳೆದು ಒಯ್ಯಲು ತಯಾರಾದರು. ಜಿಂಕೆಯನ್ನು ಕೊಲ್ಲಬಾರದೆಂಬ ನಿಯಮ ನನಗೂ ಗೊತ್ತು. ನಾನದನ್ನು ಕೊಂದಿಲ್ಲ. ಆದರೂ ನಾನು ಮಾಡದ ತಪ್ಪಿಗೆ ನನ್ನನ್ನು ರಾಜರ ಬಳಿ ಕರೆದುಕೊಂಡು ಹೋಗಿ ತಪ್ಪಿತಸ್ಥನನ್ನಾಗಿ ನಿಲ್ಲಿಸಲಿದ್ದಾರೆ. ಆದರೆ ಅರಮನೆಯಲ್ಲಿರುವ ರಾಜರಿಗೆ ರಾಜ ಸೈನಿಕರು ಏನು ಹೇಳಲಿದ್ದಾರೆಯೋ ಅದನ್ನೇ ನಿಜವೆಂದು ನಂಬಲಿದ್ದಾರೆ. ಅದರಿಂದ ನನಗೆ ಖಂಡಿತ ಶಿಕ್ಷೆಯಾಗಲಿದೆ. ಅದಕ್ಕೆ ದಯವಿಟ್ಟು ನನಗೆ ನಿಮ್ಮ ಆಶ್ರಮದಲ್ಲಿ ರಕ್ಷಣೆ ಕೊಡಬೇಕು ಮತ್ತು ಆ ಸೈನಿಕರು ಬಂದು ಕೇಳಿದರೆ ನಾನು ಇತ್ತ ಬಂದಿಲ್ಲವೆಂದು ಹೇಳಿ ನನ್ನನ್ನು ಕಾಪಾಡಬೇಕು. ನಾನು ತಮ್ಮನ್ನೇ ನಂಬಿ ಬಂದಿದ್ದೇನೆ ಎಂದು ಮುನಿಗಳ ಪಾದ ಹಿಡಿದುಕೊಂಡನು.
ವೀರಸುತನ ಮಾತುಗಳನ್ನು ಕೇಳಿ ಮುನಿಗಳು ನೋಡು ಒಟ್ಟಾರೆ ನೀನು ನನ್ನ ಮುಂದೆ ಎರಡು ಬೇಡಿಕೆಗಳನ್ನು ಇಟ್ಟಿದ್ದೀಯಾ. ಇವುಗಳಲ್ಲಿ ನಾನು ಒಂದನ್ನು ಮಾತ್ರ ನೆರವೇರಿಸಿ ಕೊಡಬಲ್ಲೆ. ನಿನಗೆ ರಕ್ಷಣೆಯನ್ನೇನೋ ಕೊಡಬಲ್ಲೆ. ಆದರೆ ನೀನು ಇಲ್ಲಿ ಇದ್ದರೂ ಇಲ್ಲವೆಂದು ಸುಳ್ಳನ್ನು ಹೇಗೆ ಹೇಳಲಿ. ಅದು ನನ್ನಿಂದ ಸಾಧ್ಯವಾಗದು. ಅದು ನನ್ನ ದೀಕ್ಷೆಗೆ ವಿರುದ್ಧವಾಗುತ್ತದೆ. ನಾನು ನನ್ನ ಗುರುಗಳ ಮುಂದೆ ಮಾಡಿದ ಪ್ರಮಾಣವನ್ನು ವಿರೋಧಿಸಿದಂತಾಗುತ್ತದೆ ಎಂದು ಬಿಟ್ಟರು. ಇದನ್ನು ಕೇಳಿದ ವೀರಸುತ ಕುಸಿದು ಹೋದ. ಮುನಿಗಳೇ ನೀವು ಏನು ಮಾಡುತ್ತಿರೋ ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಪ್ರಾಣ ರಕ್ಷಣೆ ನಿಮ್ಮದು ಎಂದು ಬೇಡಿಕೊಂಡ.
ಮುನಿ ಒಂದು ಕ್ಷಣ ವಿಚಾರಿಸತೊಡಗಿದರು. ನಾನು ವೀರಸುತ ಇಲ್ಲಿರುವುದನ್ನು ಹೇಳಿ ನನ್ನ ಪ್ರಾಮಾಣಿಕತೆಯನ್ನು, ನೀತಿ ಧರ್ಮವನ್ನು ಎತ್ತಿ ಹಿಡಿಯಬಹುದು. ಆದರೆ ಅದರಿಂದ ಅವನ ಪ್ರಾಣವು ಅನ್ಯಾಯವಾಗಿ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಒಬ್ಬ ವ್ಯಕ್ತಿಯ ಪ್ರಾಣಕ್ಕಿಂತ ನೀತಿ ಪರಿಪಾಲನೆ ಮುಖ್ಯವಲ್ಲ. ನಾನು ಸುಳ್ಳು ಹೇಳಿದರೂ ಪರವಾಗಿಲ್ಲ. ಇವನ ಪ್ರಾಣ ಉಳಿಸಬೇಕು. ಒಂದು ಒಳ್ಳೆಯ ಕಾರ್ಯವಾಗುತ್ತದೆ ಎಂದರೆ ಒಂದು ಸುಳ್ಳನ್ನು ಹೇಳಿದರೆ ತಪ್ಪೇನಿಲ್ಲ ಎಂದು ನಿರ್ಧರಿಸಿದರು. ವೀರಸುತನನ್ನು ಆಶ್ರಮದ ಒಳಗೆ ಕುಳಿತುಕೊಳ್ಳಲು ಹೇಳಿದರು. ಅದಾದ ಒಂದೆರಡು ಕ್ಷಣಗಳಲ್ಲಿ ಆರು ಜನರಿದ್ದ ಸೈನಿಕರ ದಂಡು ಅಲ್ಲಿಗೆ ಬಂದಿತು. ಅವರು ಮುನಿಗಳನ್ನು ಕಂಡು ಗೌರವದಿಂದಲೇ ವಂದಿಸಿ, ಪೂಜ್ಯರೆ, ಇತ್ತ ಕಡೆ ಒಬ್ಬ ಮನುಷ್ಯನೇನಾದರೂ ಓಡಿ ಹೋಗುವದನ್ನು ನೀವು ನೋಡಿದಿರಾ? ಎಂದು ಪ್ರಶ್ನಿಸಿದರು. ಮುನಿಗಳು ಒಂದಷ್ಟೂ ವಿಚಲಿತರಾಗದೇ ನೋಡಿದೆ ಆ ಮನುಷ್ಯ ಇತ್ತ ಕಡೆ ಓಡಿ ಹೋದ ಎಂದು ಬೇರೊಂದು ದಿಕ್ಕನ್ನು ತೋರಿಸಿದರು. ಮುನಿಗಳ ಮಾತನ್ನು ನಂಬಿದ ಆ ಸೈನಿಕರು ಅವರು ತೋರಿದ ದಿಕ್ಕನ್ನು ಅರಸಿ ಹೊರಟು ಹೋದರು. ಮುನಿಗಳ ಒಂದು ಸುಳ್ಳು ಒಬ್ಬ ಅಮಾಯಕನ ಪ್ರಾಣ ಉಳಿಸಿತು.
ನೀತಿ: ಒಂದು ಒಳ್ಳೆಯ ಕೆಲಸವಾಗುತ್ತದೆಯೆಂದರೆ ಸುಳ್ಳು ಹೇಳಿದರೆ ತಪ್ಪೇನಿಲ್ಲ.