ಐದು ಗಂಟೆ ಕ್ಲಬ್ ಗೆ ಸೇರಿಕೊಳ್ಳಿ
ಬಸನಗೌಡ ಪಾಟೀಲ
ಚುಮು ಚುಮು ಚಳಿ ಹಾಸಿಗೆ ಬಿಟ್ಟು ಏಳದ ಹಾಗೇ ಮಾಡುತ್ತಿದೆ. ಕಿರ್ ಎನ್ನುವ ಅಲಾರಾಮ್ ಅನ್ನು ಆಮೇಲೆ ಚೀರು ಎಂದು ಮತ್ತೆ ಕೀ ಕೊಟ್ಟು ಮತ್ತೆ ಮಲಗುವ ನಮ್ಮನ್ನು ಹಾಸಿಗೆ ತುಂಬು ಪ್ರೀತಿಯಿಂದ ಮತ್ತೆ ನಿದ್ರಾ ಲೋಕಕ್ಕೆ ಎಳೆದ್ಯೊಯುತ್ತದೆ. ಅಮ್ಮನ ಮಂಗಳಾರತಿ ಇಲ್ಲದೆ ಹಾಸಿಗೆಯಿಂದ ಏಳದ ದಿನಗಳೇ ಕಡಿಮೆ. ಇನ್ನು ಎದ್ದ ಕೂಡಲೇ ನೆನಪಾಗುವುದು ನೆನ್ನೆ ಮೇಷ್ಟ್ರು ಹೇಳಿದ್ದ ಹೋಂ ವರ್ಕ್, ಬಾಸ್ ಮಾಡಲು ಹೇಳಿದ್ದ ಪೆಂಡಿಂಗ್ ವರ್ಕ್, ಕಸ್ಟಮರ್ ಇಂದು ಬೇಕೆಂದಿದ್ದ ಆರ್ಡರ್ ಎಲ್ಲವೂ ಒಮ್ಮೆಲೆ ರಪ್ಪನೆ ಕಣ್ಮುಂದೆ ಪಾಸಾಗಿ ಅವಸರಸರವಾಗಿ ಬ್ರಷ್ ಮಾಡಿ, ದೈನಂದಿನ ಕಾರ್ಯ ಮುಗಿಸಿ ಮತ್ತೆ ಎಂದಿನಂತೆ ಅದೇ ರೋಟಿನ್‌ನಲ್ಲಿ ಬಂದಿಯಾಗಿ ಬೀಡುತ್ತಿದ್ದೇವೆ. ಹೊಸತನವೇ ಕಾಣದಾಗಿದೆ.
ಖ್ಯಾತ ಲೇಖಕ ರಾಬಿನ್ ಶರ್ಮಾ ನೀವು ಸಾಧಕರಾಗಬೇಕೆಂದರೇ ಐದು ಗಂಟೆ ಕ್ಲಬ್ ಸೇರಿ ಎನ್ನುವರು. ಏನಿದು ಐದು ಗಂಟೆ ಕ್ಲಬ್ ಅಂದ್ರೇ ಏನು ಅಂತಾನಾ? ಇಲ್ಲಿದೇ ನೋಡಿ ರಾಬಿನ್ ತಮ್ಮ ಪುಸ್ತಕದಲ್ಲಿ ಅನೇಕ ಸಾಧಕರ ಜೀವನ ಚರಿತ್ರೆ ಎಳೆಯನ್ನು ಬಳಸಿ ಯುವ ಜನರಿಗೆ ಸಾಧನೆ ಹಾದಿಯಲ್ಲಿ ಎಡವಿದವರಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. ಅದುವೇ ನಿಮ್ಮ ಸಮಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತದೆ. ನಿದ್ರಿಸಿ ಸಮಯ ಹಾಳುಮಾಡಿಕೊಳ್ಳುವ ಮುನ್ನ ಬೆಳಗಿನ ಜಾವ ಐದು ಗಂಟೆಗೆ ಎದ್ದು ನಿಮಗಿಷ್ಟವಾದ ಕೆಲಸದಲ್ಲಿ ತೊಡಗಿ ಎಂದು.
ಪುಸಕ್ತ ಓದಿದ ಮೇಲೆ, ಮೋಟಿವೇಶನಲ್ ಭಾಷಣ ಕೇಳಿದ ಮೇಲೆ ಸ್ವಲ್ಪ ದಿನ ನಾನು ಬೆಳಗ್ಗೆ ಬೇಗ ಎಂದು ಹೇಳಿಕೊಳ್ಳುವ ಸಾಂಕೇತಿಕವಾಗಿ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಗುಡ್ ಮಾರ್ನಿಂಗ್ ಎಂದು ಹಾಕಿ ಅಂದು ಫುಲ್ ಹ್ಯಾಪಿ ಮೂಡಲ್ಲಿರುವ ನಾವು ಮರುದಿನ ಮತ್ತೆ ಹಾಸಿಗೆಯೊಂದಿಗಿನ ಯುದ್ಧದಲ್ಲಿ ಸೋತು ಅಲಾರಾಮ್ ಮೂಂದುಡುತ್ತಿದ್ದೇವೆ. ಅದು ಆರಂಭಿಕ ಶೌರ್ಯವಲ್ಲದೆ ಮತ್ತಿನ್ನೇನು?
ನೆನಪಿದೆಯಾ, ಕೆಲ ದಿನ ನಾವು ಮುಂಜಾನೆ ಐದು ಗಂಟೆಗೆ ಎದ್ದ ದಿನವೆಲ್ಲ ತಾಜಾತನದಿಂದ ಕೂಡಿರುತ್ತದೆ. ಅದೇ ಲೇಟಾಗಿ ಎದ್ದ ದಿನ ಸ್ವಲ್ಪ ಸೋಮಾರಿ ತನ ನಮ್ಮ ಬೆನ್ನ ಹತ್ತಿರುತ್ತದೆ. ಬೆಳಗ್ಗೆ ಬೇಗ ಏಳುವುದರಿಂದ ನಮ್ಮ ಸಮಯ ಉಳಿತಾಯದೊಂದಿಗೆ ನಮ್ಮ ಆ ದಿನ ತಾಜಾತನದಿಂದ ಕೂಡಿರುತ್ತದೆ. ಅಂದಿನ ಕೆಲಸವನ್ನೆಲ್ಲ ಫಟಾ ಫಟ್ ಅಂತಾ ಮುಗಿಸಿರುತ್ತೇವೆ. ಎಲ್ಲರೊಂದಿಗೂ ನಗುತ್ತಾ ಮಾತನಾಡಿರುತ್ತೇವೆ.
ಆ ಮುಂಜಾನೆಯ ಒಂದು ಸಣ್ಣ ವಾಕಿಂಗ್, ಆ ತಂಗಾಳಿಗೆ ಮೈಯೊಡ್ಡಿ, ಆಗ ತಾನೇ ಅರಳಿದ ಹೂವಿನ ಅಂದ ನೋಡಿ, ಅಡ್ಡ ಬರುವ ಮಂಜನ್ನು ಕೈಲಿ ಹಿಡಿಯಲು ಯತ್ನಿಸುವ ಆ ತುಂಟಾಟ, ಹೀಗೆ ರಸ್ತೆಯಲ್ಲಿ ಸಾಗುತ್ತಿದ್ದರೇ ಸ್ವರ್ಗಕ್ಕೆ ಮೂರೇ ಗೇಣು. ದುಡ್ಡಿಂದ ಎಲ್ಲವನ್ನೂ ಕೊಳ್ಳಬಹುದು ಆದರೆ ಸಮಯವೊಂದನ್ನು ಬಿಟ್ಟು ನೆನಪಿರಲಿ. ಸತ್ತ ಮೇಲೆ ಮಲಗುವುದು ಇದ್ದೆ ಇದೇ ಎದ್ದಿದ್ದಾಗ ಏನಾದ್ರೂ ಸಾಧಿಸು ಎಂದು ಶಂಕ್ರಣ್ಣ ಹೇಳಿಲ್ವಾ? ಎಲ್ಲರೊಳು ಒಬ್ಬನಾಗುವ ಬದಲು ನಮ್ಮದೇ ಹಾದಿಯಲ್ಲಿ ನಡೆದು ಸಾಧಕರಾಗಬೇಕು. ಐದು ಗಂಟೆಗೆ ಏಳುವ ಆ ಸುಖ ಅನುಭವುಸಿದವರಿಗೆ ಮಾತ್ರ ಗೊತ್ತು ಬಿಡಿ. ಸಾಧಕರಾರು ಸೂರ್ಯ ನೆತ್ತಿಯೇರುವ ತನಕ ಮಲಗಿದವರಿಲ್ಲ ಎಲ್ಲರೂ ಶ್ರಮ ಜೀವಿಗಳೇ. ಎಲ್ಲರೂ ಐದು ಗಂಟೆಯ ಕ್ಲಬ್‌ನ ಸದಸ್ಯರೇ..!