ಮರೆಯಲಾಗದ ಬದುಕಿನ ಪಾಠ ಕಲಿಸಿದ ಶಾಲೆ: ಹರೇಕಳ ಹಾಜಬ್ಬ
‘ಹಿತ್ತಲ ಗಿಡ ಮದ್ದಲ್ಲ’ ಇದು ‘ಅಕ್ಷರ ಸಂತ’ ಮತ್ತು ‘ಅಕ್ಕರೆಯ ಅವಧೂತ’ ಬಿರುದಾಂಕಿತ ‘ಪದ್ಮಶ್ರೀ’ ಪುರಸ್ಕೃತ ಹರೇಕಳ ಹಾಜಬ್ಬರ ಬಗ್ಗೆ ಹರೇಕಳದ ‘ನ್ಯೂಪಡ್ಪು’ವಿನ ಜನರಲ್ಲಿ ಅಡಗಿದ ಭಾವನೆ.
ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದ ಬಳಿಕ ನಾಡಿನ ಮೂಲೆ ಮೂಲೆಯ ಅಭಿಮಾನಿಗಳಿಂದ ಅಭಿನಂದನೆಯ ಸುರಿಮಳೆ ಬರುತ್ತಿವೆ. ಆದರೆ ಹಾಜಬ್ಬರ ತವರೂರಲ್ಲಿ ಮಾತ್ರ ಆ ಬಗ್ಗೆ ಸಡಗರವಿಲ್ಲ, ಸಂಭ್ರಮವಿಲ್ಲ. ಊರಲ್ಲಿ ತನಗಾಗುವ ಅವಮಾನದ ನೋವು ನುಂಗಿಕೊಳ್ಳುವ ಹಾಜಬ್ಬರು ಎಂದೂ ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡವರಲ್ಲ. ತೀರಾ ಆಪ್ತರ ಜೊತೆ ಮಾತ್ರ ಅವರು ಅದನ್ನು ಹಂಚಿಕೊಳ್ಳುತ್ತಾರೆ.
ಶನಿವಾರ ಬೆಳಗ್ಗೆ ಈ ವರದಿಗಾರ ಹಾಜಬ್ಬರ ಮನೆಗೆ ಭೇಟಿ ನೀಡಿ ಮರಳುವಾಗ ಸ್ಥಳೀಯರೊಬ್ಬರು ‘ನೀವೆಲ್ಲ ಸುಮ್ಮನೆ ಪ್ರಚಾರ ಕೊಡುತ್ತೀರಿ’ ಎಂದು ಹೇಳಿಕೊಂಡರು. ಆದರೆ ಅದೇ ದಿನ ಅವರು ‘ಪದ್ಮಶ್ರೀ’ ಪ್ರಶಸ್ತಿಗೆ ಪುರಸ್ಕೃತರಾಗಿ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದರು. ರವಿವಾರ ಮುಂಜಾನೆ ಈ ವರದಿಗಾರ ಹಾಜಬ್ಬರ ಮನೆಗೆ ಮತ್ತೆ ಭೇಟಿ ನೀಡಿದಾಗ ಚುಮುಚುಮು ಚಳಿಯನ್ನೂ ಲೆಕ್ಕಿಸದೆ ಹಾಜಬ್ಬ ತನ್ನ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮಾತುಕತೆ ನಡೆಸಿ ಸ್ಥಳೀಯರೊಂದಿಗೆ ಹಾಜಬ್ಬರ ಪ್ರಶಸ್ತಿಯ ಸವಿ ಹಂಚಿಕೊಳ್ಳಲು ಮುಂದಾದರೆ ಯಾರಲ್ಲೂ ಆ ಬಗ್ಗೆ ಸಂಭ್ರಮ ಎದ್ದು ಕಾಣಲಿಲ್ಲ. ಇಲ್ಲೇನೂ ಆಗಿಲ್ಲ ಎಂಬಂತೆ ಸುಮ್ಮನಿದ್ದರು. ಹಾಜಬ್ಬರಿಂದಾಗಿ ತಮ್ಮೂರ ಹೆಸರು ದೇಶ-ವಿದೇಶದಲ್ಲಿ ಗುರುತಿಸಲ್ಪಟ್ಟಿವೆ ಎಂಬ ಹೆಮ್ಮೆಯೂ ಯಾರಲ್ಲೂ ಕಾಣಿಸಲಿಲ್ಲ. ಹಾಜಬ್ಬ ಊರಲ್ಲಿ ‘ಹಿತ್ತಲಗಿಡ ಮದ್ದಲ್ಲ’... ಎಂಬಂತಿದ್ದರು.
ಹಾಜಬ್ಬರ ಜೊತೆ ‘ವಾರ್ತಾಭಾರತಿ’ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.
ತಾವು ಯಾವ ಪ್ರಶಸ್ತಿಯನ್ನೂ ಬಯಸಿದವರಲ್ಲ, ನಿರೀಕ್ಷಿಸಿದವರಲ್ಲ, ಲಾಬಿ ಮಾಡಿದವರಲ್ಲ. ಆದರೂ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಯು ನಿಮ್ಮನ್ನು ಅರಸಿಕೊಂಡು ಬಂದಿದೆ. ಈ ಪ್ರಶಸ್ತಿ ಘೋಷಣೆಯ ಮಾಹಿತಿಯು ತಮಗೆ ಯಾವಾಗ, ಹೇಗೆ ತಿಳಿಯಿತು? ಆವಾಗ ನಿಮಗೆ ಆದ ಅನುಭವ ಏನು?
ಹೌದು... ನೀವು ಹೇಳಿದಂತೆ ನಾನು ಯಾವ ಪ್ರಶಸ್ತಿಯನ್ನೂ ಬಯಸಿದವನಲ್ಲ. ಪ್ರಶಸ್ತಿಗಾಗಿ ಇದನ್ನೆಲ್ಲಾ ನಾನು ಮಾಡಿದ್ದೂ ಅಲ್ಲ. ಶನಿವಾರ ಪೂರ್ವಾಹ್ನ ನಾನು ಅಕ್ಕಿಗಾಗಿ ರೇಶನ್ ಅಂಗಡಿ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದೆ. ಅಷ್ಟರೊಳಗೆ ಒಂದು ಫೋನ್ ಕರೆ ಬಂತು. ಒಬ್ಬ ವ್ಯಕ್ತಿ ಹಿಂದಿಯಲ್ಲಿ ಏನೋ ಹೇಳುತ್ತಿದ್ದರು. ಅದು ಏನೆಂದು ನನಗೆ ಅರ್ಥ ಆಗಲಿಲ್ಲ. ಪಕ್ಕದಲ್ಲೇ ಒಬ್ಬರು ನಿಂತಿದ್ದರು. ಅವರಿಗೆ ಫೋನ್ ಕೊಟ್ಟೆ. ಹಾಗೇ ಪ್ರಶಸ್ತಿ ಬಂದುದು ಗೊತ್ತಾಯಿತು. ಆದರೆ ಯಾವ ಪ್ರಶಸ್ತಿ ಅಂತ ಗೊತ್ತಾಗಲಿಲ್ಲ. ಹಾಗೇ ಮಂಗಳೂರಿಗೆ ತೆರಳಿ ಪರಿಚಯಸ್ಥರಲ್ಲಿ ವಿಷಯ ತಿಳಿಸಿದೆ. ಆವಾಗಲೂ ಯಾವ ಪ್ರಶಸ್ತಿ ಅಂತ ಗೊತ್ತಾಗಲಿಲ್ಲ. ಸಂಜೆ ಬಸ್ಸಿನಲ್ಲಿ ಮರಳಿ ಊರಿಗೆ ಹೋಗುವಾಗ ಡಿಸಿ ಕಚೇರಿಯಿಂದ ಫೋನ್ ಕರೆ ಮಾಡಿ ಪ್ರಶಸ್ತಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು. ಒಂದೆಡೆ ಸಂತೋಷ, ಇನ್ನೊಂದೆಡೆ ಹೆದರಿಕೆಯೂ ಆಯಿತು. ಬಸ್ಸಿನಿಂದ ಇಳಿದು ಮನೆಗೆ ನಡೆದುಕೊಂಡು ಬರುವಾಗ ಫೋನ್ ಕರೆಗಳು ಬಂದಾಗಲೆ ದೊಡ್ಡ ಪ್ರಶಸ್ತಿ ಸಿಕ್ಕಿದೆ ಎಂದು ಅನಿಸಿತು. ಅಷ್ಟು ದೊಡ್ಡ ಪ್ರಶಸ್ತಿಗೆ ನಾನು ಅರ್ಹನೇ ಎಂದು ಈಗಲೂ ನನ್ನ ಮನಸ್ಸು ಕೇಳುತ್ತಿದೆ.
ಈ ಪ್ರತಿಷ್ಠಿತ ಪ್ರಶಸ್ತಿ ತಮಗೆ ತಡವಾಗಿ ಬಂತು ಅಂತ ನಿಮಗೆ ಅನಿಸಿದೆಯೇ?
ತಡವಾ...?. ಪ್ರಶಸ್ತಿಯ ನಿರೀಕ್ಷೆಯೇ ಇಲ್ಲದ ನನಗೆ ಯಾಕೆ ಹಾಗೇ ಅನಿಸಬೇಕು. ಎ.ಬಿ.ಇಬ್ರಾಹೀಂ ಇಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಈ ಪ್ರಶಸ್ತಿಗೆ ನನ್ನನ್ನು ಶಿಫಾರಸು ಮಾಡಿದ ಬಗ್ಗೆ ಮಾಹಿತಿ ಇತ್ತು. ಆ ಬಳಿಕ ನಾನು ಅದನ್ನು ಮರೆತುಬಿಟ್ಟಿದ್ದೆ. ನಿನ್ನೆ ಪ್ರಶಸ್ತಿ ಘೋಷಣೆಯಾದಾಗ ಇಬ್ರಾಹೀಂ ಸಹಿತ ನನಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರನ್ನೂ ನೆನಪಿಸಿಕೊಳ್ಳುತ್ತಿದ್ದೇನೆ.
ನಿಮ್ಮ ಶೈಕ್ಷಣಿಕ ಕ್ರಾಂತಿಯ ಹಿಂದೆ 20 ವರ್ಷಗಳ ಹೋರಾಟದ ಇತಿಹಾಸವಿದೆ. ಇದು ನಿಮಗೆ ಯಾವ ಪಾಠ ಕಲಿಸಿದೆ?
ನಾನೊಬ್ಬ ಬಡಪಾಯಿ. ನಾಲ್ಕಕ್ಷರ ಕಲಿಯುವ ಸೌಭಾಗ್ಯ ನನಗೆ ಸಿಗಲಿಲ್ಲ. ಪತ್ನಿ ಮತ್ತು ಮೂವರು ಮಕ್ಕಳನ್ನು ಸಾಕುವ ಸಲುವಾಗಿ ನಾನು ಮಂಗಳೂರಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುತ್ತಿದ್ದೆ. ಒಮ್ಮೆ ವಿದೇಶಿ ಗ್ರಾಹಕನ ಜೊತೆಗೆ ವ್ಯವಹರಿಸಲಾಗದೆ ಪೇಚಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಆವಾಗ ನನಗೆ ವಿದ್ಯೆಯ ಮಹತ್ವ ತಿಳಿಯಿತು. ನಾನು ಕಲಿಯಲಿಲ್ಲ, ನನ್ನ ಮಕ್ಕಳು-ಊರ ಮಕ್ಕಳು ಕಲಿಯಬೇಕು, ನಾಲ್ಕು ಜನರ ಮಧ್ಯೆ ಅವರು ಗುರುತಿಸಿಕೊಳ್ಳಬೇಕು ಎಂದು ಮನಸ್ಸು ಹೇಳತೊಡಗಿತು. ಆವಾಗ ಯು.ಟಿ.ಫರೀದ್ ಶಾಸಕರಾಗಿದ್ದರು. ಅವರ ಮನೆಬಾಗಿಲಿಗೆ ದಿನಾ ಅಳೆದು ನನ್ನಾಸೆ ವ್ಯಕ್ತಪಡಿಸಿದೆ. ಕೊನೆಗೂ 2001ರಲ್ಲಿ ಸ್ಥಳೀಯ ಮದ್ರಸದ ಕಟ್ಟಡದಲ್ಲೇ ಒಂದನೇ ತರಗತಿ ಆರಂಭಗೊಂಡಿತು. ಆ ಬಳಿಕ ಸರಕಾರಿ ಸ್ಥಳವನ್ನೇ ಕ್ರಯಕ್ಕೆ ಪಡೆದೆ. ಸರಕಾರ ಮತ್ತು ದಾನಿಗಳ ನೆರವಿನಿಂದ ಪ್ರಾಥಮಿಕ, ಪ್ರೌಢಶಾಲೆಯು ತಲೆ ಎತ್ತಿ ನಿಂತಿತು. 1ನೇ ತರಗತಿಗೆ ಶಾಸಕರಾಗಿದ್ದ ಯು.ಟಿ. ಫರೀದ್ ಚಾಲನೆ ನೀಡಿದರೆ, 8ನೆ ತರಗತಿಗೆ ಶಾಸಕ ಯು.ಟಿ.ಖಾದರ್ ಚಾಲನೆ ನೀಡಿದರು. 1ರಿಂದ 10ನೆ ತರಗತಿಯವರೆಗೆ ಶಾಲೆ ಮುನ್ನಡೆಸಲು ನಾನು ಎದುರಿಸಿದ ಸಂಕಷ್ಟಗಳನ್ನು ಹೇಳಿದರೆ ಅದೇ ದೊಡ್ಡ ಕಥೆಯಾದೀತು. ಇನ್ನು ನಿಮ್ಮ ಪ್ರಶ್ನೆಗೆ ಉತ್ತರಿಸುವುದಾದರೆ, ಈ 20 ವರ್ಷದಲ್ಲಿ ನಾನು ನನ್ನ ಬದುಕಿನಲ್ಲಿ ಮರೆಯಲಾಗದ ಅನೇಕ ಪಾಠಗಳನ್ನು ಕಲಿತೆ. ದೊಡ್ಡ ದೊಡ್ಡ ಗಣ್ಯರ, ಅಧಿಕಾರಿಗಳ, ಜನಪ್ರತಿನಿಧಿಗಳ ಪರಿಚಯ ಆಯಿತು. ಆದರೆ ಎಲ್ಲವೂ ಹಣದಿಂದ ಮಾತ್ರ ಆಗಲಿದೆ ಎಂಬ ಮಾತನ್ನು ಮಾತ್ರ ನಾನು ಸುಳ್ಳಾಗಿಸಿದೆ. ಆರಂಭದಲ್ಲಿ ಸ್ಥಳ ಖರೀದಿಸಲು ಹಣ ಕೇಳಿಕೊಂಡು ಹೋದಾಗಲೆಲ್ಲಾ ನನ್ನನ್ನು ತಳ್ಳಿದವರು ಬಳಿಕ ನನ್ನನ್ನು ಕರೆದು ಸಹಾಯ ಮಾಡತೊಡಗಿದರು. ಆ ಕ್ಷಣವನ್ನು ಮರೆಯಲು ನನಗೆ ಸಾಧ್ಯವಾಗುತ್ತಿಲ್ಲ.
ಬರಡು ಭೂಮಿಯಂತಿದ್ದ ನ್ಯೂಪಡ್ಪುವಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯು ನಿಮ್ಮ ಕನಸಿನಂತೆ ಅತೀ ಶೀಘ್ರದಲ್ಲಿ ತಲೆ ಎತ್ತಿ ನಿಂತಿತು. ಆದರೆ ಪಿಯುಸಿ (ಪದವಿ ಪೂರ್ವ ಕಾಲೇಜು) ತೆರೆಯಬೇಕು ಎಂಬ ಕನಸು ಇನ್ನೂ ನನಸಾಗಿಲ್ಲ. ಈ ವಿಳಂಬಕ್ಕೆ ಏನು ಕಾರಣ?
ಕಾರಣ ಏನೂಂತ ನನಗೂ ಗೊತ್ತಾಗುತ್ತಿಲ್ಲ. ನಿಮಗೆ ತಿಳಿದಂತೆ ಎಲ್ಲಾ ಕಡೆಯೂ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಅದಕ್ಕೆ ನಮ್ಮೂರ ಶಾಲೆಯೂ ಹೊರತಲ್ಲ. ಆದಾಗ್ಯೂ ನಾವು ಶಾಲೆಗೆ ಮಕ್ಕಳ ಸೇರ್ಪಡೆಗೆ ಪ್ರಯತ್ನ ಮಾಡುತ್ತಲೇ ಇದ್ದೇವೆ. ಮನುಷ್ಯನ ಆಸೆಗೆ ಒಂದು ಮಿತಿ ಬೇಕು ಎನ್ನುತ್ತಾರೆ. ಆದರೆ, ಶಾಲೆಯ ವಿಷಯಕ್ಕೆ ಬಂದಾಗ ನನ್ನಾಸೆಗೆ ಮಿತಿ ಇಲ್ಲ. ಪ್ರೈಮರಿ, ಹೈಸ್ಕೂಲ್ ಆದ ಬಳಿಕ ಸುಮ್ಮನಿರಲು ನನಗೆ ಸಾಧ್ಯವಾಗಲಿಲ್ಲ. ಕಳೆದ ಹಲವು ವರ್ಷದಿಂದ ಪಿಯುಸಿ ತರಗತಿ ಸ್ಥಾಪಿಸಲು ಪ್ರಯತ್ನಿಸಿರುವೆ. ನಮ್ಮ ಶಾಸಕರು, ಸಂಸದರು, ಉಸ್ತುವಾರಿ ಸಚಿವರು, ಅಧಿಕಾರಿಗಳು ಮನಸ್ಸು ಮಾಡಿದರೆ ಇಲ್ಲಿ ಪಿಯು ಕಾಲೇಜು ಆರಂಭಿಸಬಹುದು. ನನಗೆ ದೊರೆತ ಈ ಪ್ರಶಸ್ತಿಯ ನೆನಪಿನಲ್ಲಾದರು ಸರಿ, ಆ ದೊಡ್ಡ ದೊಡ್ಡ ವ್ಯಕ್ತಿಗಳು ಇಲ್ಲೊಂದು ಪಿಯು ಕಾಲೇಜು ಆರಂಭಿಸಲು ಅನುಮತಿ ನೀಡಿದರೆ ಒಳ್ಳೆಯದಿತ್ತು. ಮತ್ತೆ ನಾನು ಅವರಿಂದ ಬೇರೆ ಏನನ್ನೂ ಕೇಳುವುದಿಲ್ಲ.
ಈ ಶಾಲೆಯಿಂದ ಕಲಿತ ಮಕ್ಕಳು ಬೇರೆ ಬೇರೆ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದಾರಾ?
ನಮ್ಮಲ್ಲೇ ಕಲಿತ ಇಬ್ಬರು ಬಾಲಕರು ಮತ್ತು ಒಬ್ಬ ಬಾಲಕಿ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ಇನ್ನೂ ಹಲವರು ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆದ ಬಗ್ಗೆ ತಿಳಿದಿದೆ. ಅವರು ಎಲ್ಲೇ ಹೋಗಿ, ಏನೇ ಮಾಡಿದರೂ ಕೂಡ ನಮ್ಮ ಶಾಲೆಯಲ್ಲಿ ಕಲಿತ ಮಕ್ಕಳು ಎಂಬ ಹೆಮ್ಮೆ ನನಗೆ ಇದೆ.
ತಾವೇ ಕಟ್ಟಿ ಬೆಳೆಸಿದ ಶಾಲೆಗೆ ತಮ್ಮ ಹೆಸರಿಡಲು, ತಮ್ಮನ್ನು ಎಸ್‌ಡಿಎಂಸಿ ಅಧ್ಯಕ್ಷ ಸ್ಥಾನದಿಂದ ದೂರ ಸರಿಸಲು ಕೆಲವರು ಪ್ರಯತ್ನಿಸಿದ್ದು ಗುಟ್ಟಾಗಿ ಉಳಿದಿಲ್ಲ. ಈ ನೋವನ್ನು ನುಂಗಿ ಹೇಗೆ ಅದನ್ನು ಸವಾಲಾಗಿ ಸ್ವೀಕರಿಸಿದಿರಿ?
ನಾನು ಈವರೆಗೂ ಅದನ್ನು ಎಲ್ಲೂ, ಯಾರಲ್ಲೂ ಮುಕ್ತವಾಗಿ ಹೇಳಿದವನಲ್ಲ. ಹಾಗೇ ಹೇಳಿಕೊಂಡು ಅದೇ ದೊಡ್ಡ ಸುದ್ದಿಯಾಗಿ ‘ನಾನು ಸ್ಥಾನಕ್ಕಾಗಿ, ಹೆಸರಿಗಾಗಿ ಇದನ್ನೆಲ್ಲಾ ಮಾಡುತ್ತಿದ್ದೇನೆ’ ಎಂಬ ಆರೋಪ ಬರಬಹುದು. ಊರಲ್ಲಿ ನನ್ನವರು ನನ್ನನ್ನು ಗುರುತಿಸದಿದ್ದರೂ ಹೊರ ಊರವರು ನನ್ನ ಬಗ್ಗೆ ಇಟ್ಟಿದ್ದ ಪ್ರೀತಿ-ವಿಶ್ವಾಸಕ್ಕೆ ಚ್ಯುತಿ ತರಬಾರದು ಎಂದು ಎಲ್ಲಾ ನೋವನ್ನೂ ನುಂಗಿದ್ದೇನೆ. ಈಗಲೂ ನುಂಗುತ್ತಿದ್ದೇನೆ. ಈ ಶಾಲೆಗೆ ಹರೇಕಳ ಹಾಜಬ್ಬ ಎಂಬ ಹೆಸರಿಡಬೇಕು ಎಂದು ನಾನು ಆಸೆಪಟ್ಟವನಲ್ಲ. ನಿಮ್ಮಂತಹವರು ಮತ್ತು ಇಲ್ಲಿನ ಕೆಲವು ಶಿಕ್ಷಕಿಯರು ಆ ಬಗ್ಗೆ ಒಲವು ತೋರಿದ್ದರು. ನನ್ನ ಮಕ್ಕಳು ಪ್ರೈಮರಿಯಲ್ಲಿ ಕಲಿಯುವವರೆಗೂ ನಾನು ಎಸ್‌ಡಿಎಂಸಿ ಅಧ್ಯಕ್ಷನಾಗಿದ್ದೆ. ನನ್ನ ಮಕ್ಕಳ ಪ್ರೈಮರಿ ತರಗತಿ ಮುಗಿದ ಬಳಿಕ ನಾನು ಎಸ್‌ಡಿಎಂಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಕೆಲವರು ವಿರೋಧ ವ್ಯಕ್ತಪಡಿಸಿದರು. ಹಾಗೆ ಅವರು ವಿರೋಧಿಸಿದ್ದರಿಂದ ನನಗೆ ತುಂಬಾ ಬೇಸರವಾಯಿತು. ಆ ಬೇಸರದ ಮಧ್ಯೆಯೂ ಇದು ನಮ್ಮೂರ ಶಾಲೆ ಎಂಬ ಹೆಮ್ಮೆಯಿಂದ ನಾನು ಈಗಲೂ ಶಾಲೆಯ ಅಭಿವೃದ್ಧಿಗೆ ಪಣತೊಡುವ ಸಂಕಲ್ಪ ತೊಟ್ಟಿದ್ದೇನೆ.
ಹಾಜಬ್ಬರು ಶಾಲೆಯ ಹೆಸರಿನಲ್ಲಿ ಹಣ ಸಂಪಾದಿಸಿದರು, ಮನೆ ಕಟ್ಟಿಸಿದರು ಎಂಬ ಆರೋಪ ಈ ಹಿಂದೆಯೇ ಕೇಳಿ ಬಂದಿತ್ತು. ಈ ಪ್ರಶಸ್ತಿಯ ಬಳಿಕ ಆ ಆರೋಪ ಕಡಿಮೆಯಾದೀತಾ?
ಹೌದು... ಈ ಆರೋಪ ನನ್ನ ಕಿವಿಗೂ ಬಿದ್ದಿದೆ. ಶಾಲೆಗೆ ಕೊಟ್ಟ ಹಣ ಶಾಲೆಗೆ ಹಾಕಿದ್ದೇನೆ. ನನಗೆ ಕೊಟ್ಟ ಹಣವನ್ನೂ ಶಾಲೆಗೆ ಸುರಿದಿದ್ದೇನೆ. ಈ ಮಧ್ಯೆ ಕೆಲವರು ‘ಈ ಹಣ ಶಾಲೆಗೆ ಅಲ್ಲ. ನೀವು ವೈಯಕ್ತಿಕವಾಗಿ ಬಳಸಿ’ ಎಂದು ಹೇಳಿ ಕೊಟ್ಟರು. ಆವಾಗಲೂ ನನಗೆ ಅದನ್ನು ವೈಯಕ್ತಿಕವಾಗಿ ಬಳಸಲು ಮನಸ್ಸಾಗಲಿಲ್ಲ. ಈ ಶಾಲೆಯಿಂದಾಗಿ ಅಲ್ಲವೇ ನೀವೆಲ್ಲಾ ನನ್ನನ್ನು ಗುರುತಿಸಿದ್ದು ಮತ್ತು ಮಾತನಾಡಿಸಿದ್ದು?. ಕೊನೆಗೆ ನಿಮ್ಮಂತಹ ಕೆಲವರು ಸಲಹೆ ಕೊಟ್ಟರು. ಅವರ ಮಾತಿನಂತೆ ವೈಯಕ್ತಿಕವಾಗಿ ನನಗೆ ಕೊಟ್ಟದ್ದನ್ನು ಮಾತ್ರ ಸ್ವೀಕರಿಸುತ್ತಿರುವೆ. ನನಗೆ ಈಗ 70 ವರ್ಷ ಪ್ರಾಯವಾಗಿದೆ. ಮದುವೆಯ ಹರೆಯಕ್ಕೆ ಬೆಳೆದು ನಿಂತ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೆಂಡತಿಯ ಆರೋಗ್ಯವೂ ಚೆನ್ನಾಗಿಲ್ಲ. ಒಬ್ಬ ಮಗ ದುಡಿಯುತ್ತಾನೆ. ಅವನ ದುಡಿಮೆಯಿಂದಲೇ ಜೀವನ ಸಾಗುತ್ತಿದೆ. ಈ ಮಧ್ಯೆ ಒಬ್ಬ ಶಿಕ್ಷಕಿ ಪ್ರತೀ ತಿಂಗಳು ನನ್ನ ಮೊಬೈಲ್ ರಿಚಾರ್ಜ್ ಮಾಡಿಸುತ್ತಿದ್ದಾರೆ, ನಿವೃತ್ತ ಪ್ರೊಫೆಸರ್‌ವೊಬ್ಬರು ನಿಗದಿತ ಹಣ ಪ್ರತೀ ತಿಂಗಳು ಕಳುಹಿಸಿಕೊಡುತ್ತಿದ್ದಾರೆ. ಇದನ್ನು ಎಲ್ಲೂ ಹೇಳಬಾರದು ಅಂತ ಅವರು ಮೊದಲೇ ನನ್ನಲ್ಲಿ ಭಿನ್ನವಿಸಿಕೊಂಡಿದ್ದರು. ಆದರೆ ಇಂತಹ ಆರೋಪ ಬಂದಾಗ ಇದನ್ನೆಲ್ಲಾ ಹೇಳದೆ ನನಗೆ ನಿರ್ವಾಹವಿಲ್ಲ. ಏನೇ ಆಗಲಿ... ನನ್ನ ಮೇಲೆ ವೈಯಕ್ತಿಕ ಆರೋಪ ಮಾಡಿದವರಿಗೆ ಸತ್ಯ ಏನು ಅಂತ ಒಂದಲ್ಲೊಂದು ದಿನ ಗೊತ್ತಾದೀತು. ಈ ಶಾಲೆಯ ಅಭಿವೃದ್ಧಿಗೆ, ಇಲ್ಲೊಂದು ಪಿಯು ಕಾಲೇಜು ತೆರೆಯಲು ಊರವರೆಲ್ಲಾ ಕೈ ಜೋಡಿಸಲಿ ಎಂದಷ್ಟೇ ನಾನು ಪ್ರಾರ್ಥಿಸುತ್ತೇನೆ.