ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿರುವುದೆಲ್ಲಿ?
ಬಿಜೆಪಿಯ ಅಜೆಂಡಾವಾದ ಎನ್‌ಆರ್‌ಸಿ ಮತ್ತು ಸಿಎಎ ಜಾರಿ ತರುವ ವಿಚಾರದಲ್ಲಿ ಹಿನ್ನಡೆ ಉಂಟಾಗುತ್ತಿರುವುದರಿಂದ, ಈ ವಿಚಾರದಿಂದ ದಿಕ್ಕುತಪ್ಪಿಸುತ್ತಿರುವ ಪ್ರಯತ್ನಗಳ ಭಾಗ ಏರ್‌ಪೋರ್ಟ್‌ನ ಸ್ಫೋಟಕ, ಬೆಂಗಳೂರಿನಲ್ಲಿ ಎಸ್‌ಡಿಪಿಐನ ಕಾರ್ಯಕರ್ತರು ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯ ಹತ್ಯೆಗೆ ಸ್ಕೆಚ್ ಹಾಕಿದ್ದು ಹಾಗೂ ಕೊಡಗಿನ ಅರಣ್ಯದಲ್ಲಿ ಉಗ್ರರ ತರಬೇತಿಗೆ ಸಿದ್ಧತೆಗಳು ಎನ್ನುವ ಸುದ್ದಿಯ ಹಿನ್ನೆಲೆ ಎನ್ನುವುದರಲ್ಲಿ ಸಂಶಯವಿಲ್ಲ.
ಎನ್‌ಆರ್‌ಸಿ ಹಾಗೂ ಸಿಎಎ ಮತ್ತು ಎನ್‌ಪಿಆರ್‌ನ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ಹೋರಾಟ ಬಿಜೆಪಿಗೆ ಮತ್ತು ಕೇಂದ್ರ ಸರಕಾರಕ್ಕೆ ತಲೆನೋವಾಗಿದೆ. ಆದರೆ ಈ ಹೋರಾಟದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ, ಉದ್ಯೋಗದ ದುಃಸ್ಥಿತಿ, ಮುಚ್ಚುತ್ತಿರುವ ಕೈಗಾರಿಕೆಗಳು, ಬಿಎಸ್‌ಎನ್‌ಎಲ್‌ನ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯದೇ ಇರುವುದು ಕೇಂದ್ರ ಸರಕಾರಕ್ಕೆ ಸಮಾಧಾನವನ್ನು ತಂದು ಕೊಟ್ಟಿದೆ. ಹಾಗಾಗಿ ವಿಷಯಾಂತರ ಮಾಡುವ ವಿಚಾರ ಈಗ ಕೇಂದ್ರ ಸರಕಾರಕ್ಕೆ ಬೇಕಿದೆ. ಸುಲಭವಾಗಿ ಜನರ ಲಕ್ಷ್ಯವನ್ನು ಬೇರೆಡೆಗೆ ಕೊಂಡೊಯ್ಯುವುದು ಇಸ್ಲಾಮೊಫೋಬಿಯಾ ಎಂಬುದು ಆಡಳಿತ ವರ್ಗಕ್ಕೆ ತಿಳಿದಿದೆ.
ಈಗ ಎನ್‌ಆರ್‌ಸಿ ಹಾಗೂ ಸಿಎಎಯ ವಿರುದ್ಧ ನಡೆಯುತ್ತಿರುವ ಹೋರಾಟದಿಂದ ಕಂಗೆಟ್ಟಿರುವ ಸರಕಾರ, ಮತ್ತೆ ವಿಷಯಾಂತರ ಮಾಡಲು ಪ್ರಯತ್ನ ನಡೆಸುತ್ತಿದ್ದು, ಮೊದಲಿಗೆ ಪತ್ರಿಕೆಯೊಂದರಲ್ಲಿ ‘‘ಬೆಂಗಳೂರಿಗೆ ಐಸಿಸ್ ಲಿಂಕ್’’ ಎಂಬ ವಿಷಯ ಪ್ರಕಟವಾಯಿತು. ಮುಂಬೈನಿಂದ ಬಸ್ ಮೂಲಕ ಸ್ಫೋಟಕ ಪಾರ್ಸಲ್‌ಗಳು ಬರುತ್ತಿದ್ದವು. ಗೋಣಿಕೊಪ್ಪಲಿನಲ್ಲಿ ಉಗ್ರರ ಶಿಬಿರ ಆರಂಭಿಸಲು ನಡೆದಿತ್ತು ಸಿದ್ಧತೆ ಎಂಬ ವರದಿಗಳು ಪ್ರಕಟವಾದವು. ಇದು ನಿರೀಕ್ಷಿತ ಪರಿಣಾಮ ಬೀರಲಿಲ್ಲ. ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಲಿಲ್ಲ.
ಜನವರಿ 12ರಂದು ಈ ಸುದ್ದಿ ಪ್ರಕಟವಾದರೆ, ಕೇವಲ ಎಂಟು ದಿನದ ಅಂತರದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ವಸ್ತುವನ್ನು ಇಟ್ಟ ಪ್ರಕರಣ ನಡೆಯಿತು. ಸ್ಫೋಟಕದ ಸುದ್ದಿಯನ್ನು ಸುದ್ದಿ ಮಾಡುವವರು ವಿವಿಧ ಆಯಾಮಗಳಲ್ಲಿ ಸ್ಫೋಟಿಸಿದರು. ಇದಕ್ಕೂ ಮಂಗಳೂರು ಗಲಭೆಗೂ ಸಂಬಂಧ ಕಲ್ಪಿಸಿದರು. ಆ ನಂತರ ಇದರ ಹಿಂದೆ ಇಸ್ಲಾಮಿಕ್ ಉಗ್ರಗಾಮಿಗಳ ಕೈವಾಡವಿದೆ ಎನ್ನುವ ರೀತಿಯಲ್ಲಿ ದೃಶ್ಯ ಮಾಧ್ಯಮಗಳಲ್ಲಿ ಹಾಗೂ ಇತರ ಮಾಧ್ಯಮಗಳಲ್ಲಿ ಸುದ್ದಿಗಳು ಪುಂಖಾನುಪುಂಖವಾಗಿ ಪ್ರಕಟಗೊಂಡವು.
ಬೆಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್ ಅವರ ವಿಶೇಷ ಪ್ರಯತ್ನದಿಂದ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯ ಹತ್ಯೆಗೆ ಸ್ಕೆಚ್ ಹಾಕುತ್ತಿದ್ದ ಆರು ಮಂದಿ ಎಸ್‌ಡಿಪಿಐನ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇದರ ಆಧಾರದಲ್ಲಿ ಎಸ್‌ಡಿಪಿಐಯನ್ನು ನಿಷೇಧಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ರಾಜ್ಯ ಸರಕಾರ ಚಿಂತನೆಯನ್ನು ನಡೆಸಿದೆ ಎಂಬ ವಿಚಾರವು ಬಂತು.
ಇವೆಲ್ಲವೂ ಕೇಂದ್ರ ಸರಕಾರದ ವಿರುದ್ಧ ಈಗ ನಡೆಯುತ್ತಿರುವ ಪ್ರತಿಭಟನೆಯ ದಿಕ್ಕುತಪ್ಪಿಸುವ ಯತ್ನ ಎನ್ನುವುದು ಈ ಸುದ್ದಿಗಳ ಆಳಕ್ಕೆ ಹೋದಾಗ ತಿಳಿಯುತ್ತದೆ.
ಪೊಲೀಸ್ ಕಮಿಷನರ್ ಭಾಸ್ಕರ್‌ರಾವ್ ಹೇಳಿದ ಕಥೆಯನ್ನು ‘ಒನ್ ಇಂಡಿಯಾ’ ಬಹಿರಂಗಪಡಿಸಿದೆ. ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಎಫ್‌ಐಆರ್‌ನಲ್ಲಿ ಅಥವಾ ಪೊಲೀಸ್ ಡೈರಿಯಲ್ಲಿ ತೇಜಸ್ವಿ ಸೂರ್ಯ ಹೆಸರಾಗಲಿ ಅಥವಾ ಚಕ್ರವರ್ತಿ ಸೂಲಿಬೆಲೆಯ ಹೆಸರಾಗಲಿ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಭಾಸ್ಕರ್‌ರಾವ್ ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ತಾನು ಸೋಮವಾರಪೇಟೆ ತಾಲೂಕಿಗೆ ಸೆಕ್ಷನ್ 144ನ್ನು ಹೇರಿದ್ದೇನೆ ಎಂಬ ಪತ್ರಿಕಾ ಪ್ರಕಟನೆೆಯನ್ನು ನೀಡಿದ್ದರು.
ಅಲ್ಲದೆ ಕೊಡಗಿನ ವೀರಾಜಪೇಟೆಯಲ್ಲಿ ಜೋಡಿ ಕೊಲೆಯೊಂದು ನಡೆದಾಗ ಸಾರ್ವಜನಿಕರು ಕೊಲೆಯ ಆರೋಪಿಗಳನ್ನು ತಮ್ಮ ಮುಂದೆ ಹಾಜರುಪಡಿಸಲು ಒತ್ತಾಯಿಸಿದಾಗ, ತಾನು ಹಾಜರುಪಡಿಸುತ್ತೇನೆ ಎಂದು ಹೇಳಿ, ಸಾವಿರಾರು ಜನರು ಸೇರುವಂತೆ ಮಾಡಿ, ಇತಿಹಾಸದಲ್ಲಿ ಮೊದಲ ಬಾರಿ ಫೈರ್ ಇಂಜಿನ್‌ಗೆ ಸಾರ್ವಜನಿಕರು ಬೆಂಕಿ ಕೊಡುವ ವಾತಾವರಣವನ್ನು ಸೃಷ್ಟಿಸಿ, ಕರ್ಫ್ಯೂ ಹೇರಲು ಕಾರಣಕರ್ತರಾಗಿದ್ದರೆನ್ನುವ ಆರೋಪವಿದೆ. ಇದು ಭಾಸ್ಕರ್‌ರಾವ್ ಅವರ ಪೂರ್ವ ಇತಿಹಾಸ.
ಮಂಗಳೂರಿನಲ್ಲಿ ಸ್ಫೋಟಕವನ್ನು ಇಟ್ಟ ಪ್ರಕರಣದಲ್ಲಿ ಕೂಡ, ಆರೋಪಿಯು ಆದಿತ್ಯರಾವ್ ಎಂಬುದು ಬಹಿರಂಗಗೊಳ್ಳುತ್ತಲೇ, ರಾಜ್ಯ ಸರಕಾರ, ಬಿಜೆಪಿ ಹಾಗೂ ಒಂದಷ್ಟು ದೃಶ್ಯ ಮಾಧ್ಯಮಗಳು ಮತ್ತು ಮುಖ್ಯವಾಹಿನಿಯ ಕೆಲವು ಮಾಧ್ಯಮಗಳು ಕೈ ಹಿಸುಕಿಕೊಂಡು ಕೂರುವಂತಹ ಪರಿಸ್ಥಿತಿ ಬಂದಿದೆ. ಆದಿತ್ಯರಾವ್‌ನನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸುವ ಯತ್ನ ನಡೆಯುತ್ತಿದೆ. ಸಂಘ ಪರಿವಾರವಂತೂ ಈ ಘಟನೆಯ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಮುಸ್ಲಿಮ್ ವ್ಯಕ್ತಿಯ ಹೆಸರು ಬಾರದಿರುವುದಕ್ಕೆ ಬಹಳಷ್ಟು ಉದ್ಯೋಗರಹಿತರಿಗೆ ನಿರಾಸೆಯಾಗಿದೆ.
ಕೊಡಗಿನ ಗೋಣಿಕೊಪ್ಪಲಿನಲ್ಲಿ ಉಗ್ರರ ಶಿಬಿರವನ್ನು ಆರಂಭಿಸುವ ಯತ್ನದ ಬಗ್ಗೆ ಸುದ್ದಿ ಮಾಡಲಾಗಿದೆ. ಕೊಡಗಿನಲ್ಲಿ ವಿಶೇಷವಾಗಿ ಗೋಣಿಕೊಪ್ಪಲಿನಲ್ಲಿ ಇರುವಂತಹ ಕಾಡಿನಲ್ಲಿ ಉಗ್ರರಿಗೆ ತರಬೇತಿ ನೀಡುವ ಕ್ಯಾಂಪ್‌ಗಳು ನಡೆಯುತ್ತಿದೆ ಎನ್ನುವ ಸುದ್ದಿಯ ಬೆನ್ನೇರಿ ಹೋದಾಗ, ಇವೆಲ್ಲವೂ ಕಪೋಲಕಲ್ಪಿತ ಮತ್ತು ಸುಳ್ಳು ಎನ್ನಲು ಹಲವು ವಿಚಾರಗಳು ಕಂಡು ಬರುತ್ತವೆೆ.
ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಸುಮನ್ ಪನ್ನೇಕರ್, ಕೊಡಗು ಜಿಲ್ಲೆಯಲ್ಲಿ ಉಗ್ರಗಾಮಿ ಚಟುವಟಿಕೆಯ ನೆಲೆ ಎಂಬುದು ಇಲ್ಲ ಎಂದು ತಿಳಿಸಿದ್ದಾರೆ. ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತಹ ಸುದ್ದಿಯು ಆಧಾರರಹಿತವಾಗಿದೆ. ತಾನು ಈ ಸುದ್ದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ನೆರೆ ಜಿಲ್ಲೆ ಹಾಗೂ ನೆರೆ ರಾಜ್ಯದ ಪೊಲೀಸರನ್ನು ಸಂಪರ್ಕಿಸಿದ್ದೇನೆ. ಇಂತಹ ಯಾವುದೇ ವಿಚಾರಗಳು ಇಲ್ಲ. ತನ್ನ ಸ್ಪಷ್ಟೀಕರಣವನ್ನು ಮಾಧ್ಯಮಗಳು ಸರಿಯಾದ ರೀತಿಯಲ್ಲಿ ಪ್ರಕಟಿಸುತ್ತಿಲ್ಲ. ಬದಲಿಗೆ ಉಗ್ರಗಾಮಿ ಚಟುವಟಿಕೆ ಇದೆ ಎಂಬ ಸುದ್ದಿ ಪ್ರಕಟವಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನು ಮೀಡಿಯಾ ಹೈಪ್ ಎಂದು ಅವರು ಹೇಳುತ್ತಾರೆ.
ಗೋಣಿಕೊಪ್ಪಲಿನಲ್ಲಿ ಅರಣ್ಯ ಪ್ರದೇಶವೆಂಬುದೇ ಇಲ್ಲ. ಅದೊಂದು ಸಣ್ಣ ಪ್ರಮಾಣದಲ್ಲಿ ವಾಣಿಜ್ಯ ಚಟುವಟಿಕೆ ಇರುವ ಪಟ್ಟಣ. ಗೋಣಿಕೊಪ್ಪಲಿನ ಹೊರ ಭಾಗದಲ್ಲಿ ಅಂದರೆ 10 ಕಿ.ಮೀ. ದೂರದಲ್ಲಿ ಅರಣ್ಯ ಪ್ರದೇಶವಿದೆ. ಈ ಹಿಂದೆ ಮೀಸಲು ಅರಣ್ಯವಾಗಿದ್ದಂತಹ ದೇವಮಾಚಿ ಅರಣ್ಯವೂ ಸೇರಿದಂತೆ, ಹಲವು ಅರಣ್ಯ ಪ್ರದೇಶವನ್ನು ಹುಲಿ ಯೋಜನೆಯ ಅಡಿಗೆ ತಂದು, ವನ್ಯಜೀವಿ ವಿಭಾಗವಾಗಿಸಲಾಗಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯಲು ಸಾಧ್ಯವಿಲ್ಲ. ವನ್ಯಜೀವಿ ವಿಭಾಗದ ಅರಣ್ಯದ ಪ್ರದೇಶದಲ್ಲಿ ನಿಯಂತ್ರಣಗಳು ಮೀಸಲು ಅರಣ್ಯಕ್ಕಿಂತಲೂ ಹೆಚ್ಚು ಇರುತ್ತವೆೆ.
ಹಾಗಿರುವಾಗ ಇಲ್ಲಿ ಶಸ್ತ್ರಾಸ್ತ್ರಗಳ ತರಬೇತಿ ಸಾಧ್ಯವೇ ಎಂಬ ಪ್ರಶ್ನೆಗೆ, ಸಾಧ್ಯವೇ ಇಲ್ಲ ಎಂಬ ಉತ್ತರ ಸಿಗುತ್ತದೆ. ಮದ್ದುಗುಂಡುಗಳನ್ನು ಮತ್ತು ಕೋವಿಯನ್ನು ಅರಣ್ಯದೊಳಗೆ ತೆಗೆದುಕೊಂಡು ಹೋಗುವುದಾದರೂ ಹೇಗೆ? ಈ ಅರಣ್ಯ ಪ್ರದೇಶಕ್ಕೆ ಅನುಮತಿ ಇಲ್ಲದೆ ಪ್ರವೇಶಿಸುವುದೇ ಅಪರಾಧ. ಹಾಗಿರುವಾಗ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವೇ?. ಎಲ್ಲರ ಕಣ್ಣು ತಪ್ಪಿಸಿ ಶಸ್ತ್ರಾಸ್ತ್ರಗಳನ್ನು ಅರಣ್ಯ ಪ್ರದೇಶದೊಳಗೆ ತೆಗೆದುಕೊಂಡು ಹೋದರೂ, ತರಬೇತಿ ಎಂದಾಗ ಗುಂಡು ಹೊಡೆಯಬೇಕಾಗುತ್ತದೆ. ಹಲವು ಸುತ್ತಿನ ಗುಂಡು ಹೊಡೆಯುವ ತರಬೇತಿ ನಡೆದಾಗ, ಅದರ ಸದ್ದು ಖಂಡಿತವಾಗಿಯೂ ಕಾಡು ಮತ್ತು ಅದರ ಸುತ್ತಮುತ್ತ ಕೇಳಲೇಬೇಕು. ಪ್ರತಿಧ್ವನಿಸಬೇಕು. ಈ ಸದ್ದು ಕೇಳಿದ ನಂತರವೂ, ಅರಣ್ಯ ಇಲಾಖೆಯವರು ತೆಪ್ಪಗಿರಲು ಸಾಧ್ಯವಿಲ್ಲ. ಅರಣ್ಯ ಪ್ರದೇಶದಲ್ಲಿ ಇಂತಹ ಪ್ರಕರಣ ನಡೆದಿರುವ ಬಗ್ಗೆ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.
ಜನವರಿ ತಿಂಗಳ ನಂತರ ಕಾಡಿಗೆ ಬೆಂಕಿ ಬೀಳುವ ಸಾಧ್ಯತೆಗಳು ಇರುವುದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ 24 ಗಂಟೆಗಳ ಕಾಲ ಕಟ್ಟೆಚ್ಚರದಿಂದ ಇರುತ್ತಾರೆ. ಜೊತೆಗೆ ಅವರು ಅರಣ್ಯದ ಗಡಿಭಾಗದಲ್ಲಿ ಬೆಂಕಿ ಹಾಕುವ ಮೂಲಕ ಫೈರ್ ಲೈನ್‌ನ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಹಾಗಿರುವಾಗ ಶಂಕಿತ ಉಗ್ರರು ಕಾಡಿಗೆ ಪ್ರವೇಶ ಮಾಡುವುದಾಗಲಿ ಅಥವಾ ಶಸ್ತ್ರಾಸ್ತ್ರ ತರಬೇತಿ ನೀಡುವುದಾಗಲಿ ಸಾಧ್ಯವೇ ಇಲ್ಲ. ಈ ಕಲ್ಪನೆಗಳೆಲ್ಲವೂ ಮಾನಸಿಕ ಅಸ್ವಸ್ಥರಿಂದ ಮಾತ್ರ ಸಾಧ್ಯ ಎನ್ನುವುದರಲ್ಲಿ ಸಂಶಯವಿಲ್ಲ.
ತಿತಿಮತಿ ಮತ್ತು ದೇವಮಾಚಿ ಅರಣ್ಯ ವಿಭಾಗದ ಅರಣ್ಯ ಅಧಿಕಾರಿಗಳಲ್ಲಿ ಇಂತಹ ಚಟುವಟಿಕೆಗಳ ಬಗ್ಗೆ ಪ್ರಶ್ನಿಸಿದರೆ, ಅರಣ್ಯ ಪ್ರದೇಶದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು, ಅದರಲ್ಲಿಯೂ ವಿಶೇಷವಾಗಿ ಉಗ್ರರ ಚಟುವಟಿಕೆಗಳು ನಡೆಯಲು ಸಾಧ್ಯವೇ ಇಲ್ಲ. ಶೇ.1ರಷ್ಟು ಸಂಶಯ ಬಂದರೂ ತಾವು ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು ಪೊಲೀಸ್ ಇಲಾಖೆಯ ಗಮನಕ್ಕೂ ಇದನ್ನು ತರುತ್ತೇವೆ ಎಂದು ಹೇಳುತ್ತಾರೆ. ಇತ್ತೀಚೆಗೆ ನಕ್ಸಲ್ ನಿಗ್ರಹ ದಳ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಹಾಡಿಗಳಲ್ಲಿ ಜಾಗೃತಿ ಶಿಬಿರಗಳನ್ನೂ ಕೂಡ ನಡೆಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ.
ಇದೇ ಪ್ರದೇಶದ ವರ್ತಕರು ಹಾಗೂ ಪೆಟ್ರೋಲ್ ಪಂಪ್ ಮಾಲಕರು ಆಗಿರುವ ಶ್ರೀನಿವಾಸ್‌ರ ಪ್ರಕಾರ ಇಂತಹ ಯಾವುದೇ ಚಟುವಟಿಕೆ ಇಲ್ಲಿ ನಡೆಯುತ್ತಿಲ್ಲ. ಸಂಶಯಾಸ್ಪದ ವ್ಯಕ್ತಿಗಳ ಚಲನವಲನಗಳು ತಮಗೆ ತಿಳಿಯದಿರಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಇದೆಲ್ಲಾ ಸುಳ್ಳು ಸುದ್ದಿ. ಅರಣ್ಯ ಇಲಾಖೆ ಎಷ್ಟೊಂದು ಕಠಿಣವಾದ ಕ್ರಮವನ್ನು ತೆಗೆದುಕೊಳ್ಳುತ್ತಿದೆ ಎಂದರೆ, ಕಳೆದ 10 ವರ್ಷಗಳಿಂದ ಇಲ್ಲಿಯ ಆದಿವಾಸಿಯೊಬ್ಬ ಒಂದು ಮಾತನಾಡುವ ಗಿಣಿಯನ್ನು ಸಾಕಿಕೊಂಡಿದ್ದ. ಅದರ ಆಕರ್ಷಣೆಯಿಂದ ಸಾಕಷ್ಟು ಮಂದಿ ಆತನ ಬಳಿ ಹೋಗುತ್ತಿದ್ದರು. ಗಿಣಿಯನ್ನು ಮಾತನಾಡಿಸಿ, ಒಂದಷ್ಟು ಹಣವನ್ನು ನೀಡುತ್ತಿದ್ದರು. ಆದರೆ ಈಗ ಆ ಪ್ರದೇಶವು ವನ್ಯಜೀವಿ ವಿಭಾಗಕ್ಕೆ ಸೇರಿರುವುದರಿಂದ, ಗಿಣಿಯನ್ನು ಸಾಕಿರುವುದರ ವಿರುದ್ಧ ಮೊಕದ್ದಮೆ ದಾಖಲಿಸಿ, ಆತನನ್ನು ಮೂರು ದಿನಗಳ ಕಾಲ ಅರಣ್ಯ ಇಲಾಖೆ ಜೈಲಿಗೆ ಅಟ್ಟಿತ್ತು. ಹೀಗಿರುವಾಗ ಯಾವ ಅಕ್ರಮ ಚಟುವಟಿಕೆ ಅಥವಾ ಉಗ್ರ ಚಟುವಟಿಕೆ ಇಲ್ಲಿ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ.
ಇದರ ಜೊತೆಯಲ್ಲಿ ಗೋಣಿಕೊಪ್ಪಲಿನ ವರ್ತಕರೊಬ್ಬರು ಈ ಚಟುವಟಿಕೆಗೆ ಆರ್ಥಿಕ ಸಹಾಯವನ್ನು ನೀಡಲು ಒಪ್ಪಿದ್ದರು ಎಂಬ ವಿಚಾರವು ಕೂಡ ಮಾಧ್ಯಮಗಳ ಮೂಲಕ ಚರ್ಚೆಯಾಗಿದೆ. ಗೋಣಿಕೊಪ್ಪಲಿನಲ್ಲಿ ಉಗ್ರರ ಚಟುವಟಿಕೆಗೆ ಆರ್ಥಿಕ ಸಹಾಯ ನೀಡುವಂತಹ ಆರ್ಥಿಕ ಚಟುವಟಿಕೆಯೂ ಇಲ್ಲ, ಅಂತಹ ಚೈತನ್ಯ ಇರುವ ಉದ್ಯಮಿಗಳೂ ಇಲ್ಲ. ಇದೂ ಕೂಡ ಮುಸ್ಲಿಮ್ ವರ್ತಕರನ್ನು ಟಾರ್ಗೆಟ್ ಮಾಡುವ ಯತ್ನ ಎಂದೇ ಹೇಳಬೇಕಾಗುತ್ತದೆ.
ಕೊಡಗಿನಲ್ಲಿ ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿದೆ ಎಂದು ಕೊಡಗು ಪ್ರತ್ಯೇಕ ರಾಜ್ಯ ಮತ್ತು ಕೊಡವರನ್ನು ಬುಡಕಟ್ಟು ಜನಾಂಗ ಎಂದು ಘೋಷಿಸಬೇಕು ಎಂದು ಹೋರಾಟ ಮಾಡುತ್ತಿರುವ ಸಿಎನ್‌ಸಿ ಸಂಘಟನೆಯ ಎನ್. ಯು. ನಾಚಪ್ಪಜಿಲ್ಲಾಡಳಿತಕ್ಕೆ ಎರಡು ವರ್ಷಕ್ಕೆ ಹಿಂದೆಯೇ ದೂರು ನೀಡಿದ್ದರು. ಅದು ಈಗ ಸತ್ಯವಾಗುತ್ತಿದೆ ಎಂದು ಕೂಡ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇವೆಲ್ಲವೂ ತಮಾಷೆಯಂತೆ ಕಂಡು ಬರುತ್ತದೆ. ವಾರಕ್ಕೊಂದು ಪ್ರತಿಭಟನೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ನೀಡುವ ಕಾರ್ಯಕ್ರಮ ನಡೆಸುವ ಸಂಘಟನೆ, ಆರೋಪಗಳನ್ನು ಮಾಡುವುದು, ಬೇನಾಮಿ ಹೆಸರಿನಲ್ಲಿ ಪತ್ರಗಳನ್ನು ಕಳುಹಿಸುವುದು ಮುಂತಾದ ಕಾಯಕದಲ್ಲಿ ಎತ್ತಿದ ಕೈಯಾಗಿದ್ದು, ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಸಂಘಟನೆ ಮಾಡಿಕೊಂಡು, ಕಾಲದಿಂದ ಕಾಲಕ್ಕೆ ಸಂಘಟನೆಯ ಹೆಸರನ್ನು ಬದಲಿಸಿ, ಈಗ ಕೊಡವರಿಗೆ ಸ್ವಾಯತತ್ತೆ ನೀಡಬೇಕು ಎಂಬ ಹೋರಾಟವನ್ನು ಮಾಡಿಕೊಂಡಿರುವ ಈ ಸಂಘಟನೆ, ಸಂಪೂರ್ಣವಾಗಿ ಸಂಘ ಪರಿವಾರದ ಕೈಗೊಂಬೆಯಾಗಿದೆ. ಟಿಪ್ಪುಜಯಂತಿಯನ್ನು ವಿರೋಧಿಸಿದ್ದು ಮಾತ್ರವಲ್ಲ, ಟಿಪ್ಪುಕೊಡಗಿನಲ್ಲಿ ನರಮೇಧ ಮಾಡಿದ್ದ ಎನ್ನುವ ಮೂಲಕ, ಮುಸ್ಲಿಮ್ ದ್ವೇಷವನ್ನು ಕೊಡಗಿನಲ್ಲಿ ಹುಟ್ಟು ಹಾಕಿದ್ದೇ ಅಲ್ಲದೆ, ಫ್ರೆಂಚರು ಕೊಡವರ ಕ್ಷಮೆಯನ್ನು ಯಾಚಿಸಬೇಕು ಎಂದು ಹೇಳುತ್ತಿರುವ ಈ ಸಂಘಟನೆ, ಜಿಲ್ಲಾಡಳಿತಕ್ಕೆ ಆಧಾರರಹಿತವಾಗಿ ಉಗ್ರರ ಚಟುವಟಿಕೆಯ ಬಗ್ಗೆ ಮನವಿಯನ್ನು ನೀಡುವುದು ಸಹಜವೇ ಎನ್ನುವುದರಲ್ಲಿ ಸಂಶಯವಿಲ್ಲ.
ಬಿಜೆಪಿಯ ಅಜೆಂಡಾವಾದ ಎನ್‌ಆರ್‌ಸಿ ಮತ್ತು ಸಿಎಎ ಜಾರಿ ತರುವ ವಿಚಾರದಲ್ಲಿ ಹಿನ್ನಡೆ ಉಂಟಾಗುತ್ತಿರುವುದರಿಂದ, ಈ ವಿಚಾರದಿಂದ ದಿಕ್ಕುತಪ್ಪಿಸುತ್ತಿರುವ ಪ್ರಯತ್ನಗಳ ಭಾಗ ಏರ್‌ಪೋರ್ಟ್‌ನ ಸ್ಫೋಟಕ, ಬೆಂಗಳೂರಿನಲ್ಲಿ ಎಸ್‌ಡಿಪಿಐನ ಕಾರ್ಯಕರ್ತರು ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯ ಹತ್ಯೆಗೆ ಸ್ಕೆಚ್ ಹಾಕಿದ್ದು ಹಾಗೂ ಕೊಡಗಿನ ಅರಣ್ಯದಲ್ಲಿ ಉಗ್ರರ ತರಬೇತಿಗೆ ಸಿದ್ಧತೆಗಳು ಎನ್ನುವ ಸುದ್ದಿಯ ಹಿನ್ನೆಲೆ ಎನ್ನುವುದರಲ್ಲಿ ಸಂಶಯವಿಲ್ಲ.