‘‘ನಾವು ಈ ದೇಶದ ಜನ’’
ಸಾಮಾನ್ಯವಾಗಿ ಹೇಳುವುದಾದರೆ ‘ನಾವು’ ಎಂಬ ಪದವು ಸಂವಿಧಾನವು 1950ರ ಜನವರಿ 26ರಂದು ಘೋಷಿತವಾದಾಗ ಅದು ಈ ದೇಶಕ್ಕೆ ಸೇರಿದವರೆಲ್ಲರನ್ನೂ ಸೂಚಿಸಿತು ಎಂದು ಹೇಳಬಹುದು ಹಾಗೂ ಈ ‘ನಾವು’ ಎನ್ನುವ ಪದದಲ್ಲಿ ಸೂಚಿತರಾದವರ ಧರ್ಮ, ಪ್ರದೇಶ, ಜಾತಿ ಮತ್ತು ಲಿಂಗಗಳೇನೇ ಆಗಿದ್ದರೂ ಅವರೆಲ್ಲರೂ ಭಾರತಕ್ಕೆ ಸೇರಿದವರಾಗಿದ್ದಾರೆ ಎಂಬುದನ್ನೂ ಸಹ ಅದು ಸೂಚಿಸುತ್ತದೆ. ಆದರೆ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಬೇರೆಬೇರೆ ಧ್ವನಿಗಳೂ ಎದ್ದಿದ್ದವು ಎಂಬುದೂ ಸಹ ಐತಿಹಾಸಿಕವಾಗಿ ಸತ್ಯವಾದ ಸಂಗತಿಯೇ ಆಗಿದೆ. ಆದರೂ ಭಿನ್ನಭಿನ್ನ ಅಭಿಪ್ರಾಯಗಳನ್ನು ದಾಖಲಿಸಿದವರೂ ಸಹ ಅಂತಿಮವಾಗಿ ಸಂವಿಧಾನದ ಮುನ್ನುಡಿಯಲ್ಲಿ ಅಡಕವಾಗಿರುವ ಮೂಲ ಆಶಯಗಳಾಗಿ ಬದ್ಧ್ದರಾದರೆಂಬುದೂ ಸಹ ಇತಿಹಾಸ.
ದೇಶದಲ್ಲಿ ಹಾಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು ನಮ್ಮ ದೇಶದ ಸಂವಿಧಾನದ ಮುನ್ನುಡಿಯಲ್ಲಿ ಬರೆಯಲಾಗಿರುವ ಮೊದಲ ವಾಕ್ಯವಾದ ‘‘ನಾವು ಈ ದೇಶದ ಜನ’’ ಎಂಬ ಪದಗಳಿಗೆ ಕನಿಷ್ಠ ಎರಡು ಪರಿಕಲ್ಪನೆಗಳನ್ನು ಒದಗಿಸುತ್ತವೆ. ಮುನ್ನುಡಿಯಲ್ಲಿ ಈ ಪದಗಳು ಪ್ರಾರಂಭವಾಗುವ ರೀತಿಯನ್ನು ಗಮನಿಸಿದಾಗ ಅದು ಯಾವುದೇ ವ್ಯಕ್ತಿ ಅಥವಾ ಸಮಾಜದ ಗುಂಪುಗಳನ್ನು ಉದ್ದೇಶಿಸಿಲ್ಲ. ಬದಲಿಗೆ ಅದು ಒಂದು ಅಮೂರ್ತತೆಯನ್ನು ಪ್ರತಿಪಾದಿಸುತ್ತದೆ ಎಂದು ಕೂಡ ಹೇಳಬಹುದು. 1950ರ ಜನವರಿ 26ರಂದು ಪ್ರತಿಧ್ವನಿಸಿದ ಈ ಅಭಿವ್ಯಕ್ತಿಯು ಊಹಾತ್ಮಕವೂ ಆಗಿತ್ತು. ಏಕೆಂದರೆ ಆಯಾ ಸಮುದಾಯಗಳ ವಕ್ತಾರರ ಮಧ್ಯಪ್ರವೇಶದ ಮೂಲಕ ಈ ಸಂವಿಧಾನಕ್ಕೆ ಜನತೆಯ ಮನ್ನಣೆಯು ದಕ್ಕುತ್ತದೆ ಎಂದು ಪರಿಗಣಿಸಲಾಗಿತ್ತು. ಸಂವಿಧಾನದ ಮಹತ್ವದ ಅಭಿವ್ಯಕ್ತಿಯಾದ ‘‘ನಾವು ಈ ದೇಶದ ಜನತೆ’’ ಎಂಬುದು ಅನಿರ್ದಿಷ್ಟವಲ್ಲದಿದ್ದರೂ ಅಮೂರ್ತವಂತೂ ಹೌದು.
ಸಾಮಾನ್ಯವಾಗಿ ಹೇಳುವುದಾದರೆ ‘ನಾವು’ ಎಂಬ ಪದವು ಸಂವಿಧಾನವು 1950ರ ಜನವರಿ 26ರಂದು ಘೋಷಿತವಾದಾಗ ಅದು ಈ ದೇಶಕ್ಕೆ ಸೇರಿದವರೆಲ್ಲರನ್ನೂ ಸೂಚಿಸಿತು ಎಂದು ಹೇಳಬಹುದು ಹಾಗೂ ಈ ‘ನಾವು’ ಎನ್ನುವ ಪದದಲ್ಲಿ ಸೂಚಿತರಾದವರ ಧರ್ಮ, ಪ್ರದೇಶ, ಜಾತಿ ಮತ್ತು ಲಿಂಗಗಳೇನೇ ಆಗಿದ್ದರೂ ಅವರೆಲ್ಲರೂ ಭಾರತಕ್ಕೆ ಸೇರಿದವರಾಗಿದ್ದಾರೆ ಎಂಬುದನ್ನೂ ಸಹ ಅದು ಸೂಚಿಸುತ್ತದೆ. ಆದರೆ ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಬೇರೆಬೇರೆ ಧ್ವನಿಗಳೂ ಎದ್ದಿದ್ದವು ಎಂಬುದೂ ಸಹ ಐತಿಹಾಸಿಕವಾಗಿ ಸತ್ಯವಾದ ಸಂಗತಿಯೇ ಆಗಿದೆ. ಆದರೂ ಭಿನ್ನಭಿನ್ನ ಅಭಿಪ್ರಾಯಗಳನ್ನು ದಾಖಲಿಸಿದವರೂ ಸಹ ಅಂತಿಮವಾಗಿ ಸಂವಿಧಾನದ ಮುನ್ನುಡಿಯಲ್ಲಿ ಅಡಕವಾಗಿರುವ ಮೂಲ ಆಶಯಗಳಾಗಿ ಬದ್ಧ್ದರಾದರೆಂಬುದೂ ಸಹ ಇತಿಹಾಸ. ಮುನ್ನುಡಿಯ ಮೂಲ ಆಶಯವು ಈ ದೇಶವನ್ನು ಸಾರ್ವಭೌಮಿ, ಸಮಾಜವಾದಿ, ಧರ್ಮ ನಿರಪೇಕ್ಷ ಮತ್ತು ಪ್ರಜಾತಾಂತ್ರಿಕವಾಗಿ ನಿರ್ಮಿಸಬೇಕಾದುದರ ಮಹತ್ವವನ್ನು ಮನಗಾಣಿಸುತ್ತದೆ. ಹೀಗಾಗಿ ‘ನಾವು’ ಎಂಬುದು ಈ ಮೌಲ್ಯಗಳಿಗೆ ದೊರೆತ ಸರ್ವಜನರ ಸಮ್ಮತಿಯ ಭಾಗವಾಗಿಯೂ ಉಲ್ಲೇಖವಾಗಿದೆ. ‘‘ನಾವು ಈ ದೇಶದ ಜನ’’ ಎಂಬ ಪರಿಕಲ್ಪನೆಗೆ ಸರ್ವಸಮ್ಮತಿಯನ್ನು ರೂಢಿಸಿಕೊಂಡಿದ್ದು ಹೀಗೆ. ನಮ್ಮ ಸಂವಿಧಾನ ಕರ್ತೃಗಳು ‘‘ನಾವು ಈ ದೇಶದ ಜನ’’ ಎಂಬ ಪದವನ್ನು ಮುನ್ನುಡಿಗೆ ಸೇರಿಸುವಾಗ ಅದರ ಸರಿಯಾದ ನಿರ್ವಚನವನ್ನೇನೂ ಕೊಟ್ಟಂತೆ ಕಾಣುವುದಿಲ್ಲ. ಅದನ್ನು ನಿರ್ದಿಷ್ಟ ಗುರುತಿನ ನಿರ್ವಚನವಾದ ‘ನಾಗರಿಕ’ದಂಥ ಪರಿಕಲ್ಪನೆಯ ಮೂಲಕ ಪಡೆದುಕೊಳ್ಳಬೇಕಿದೆ. ‘ನಾಗರಿಕ’ ಎಂಬ ಪದದ ಉಲ್ಲೇಖವು ಮುನ್ನುಡಿಯಲ್ಲಿ ಕೇವಲ ತಾಂತ್ರಿಕವಾಗಿ ಪ್ರಸ್ತಾಪಿತವಾಗಿದ್ದು ಸಂವಿಧಾನದಲ್ಲಿ ನಿರ್ದಿಷ್ಟವಾದ ಜಾಗವನ್ನು ಪಡೆದುಕೊಂಡಿದೆ.
ಅದನ್ನು ಒಂದು ನಿರ್ದಿಷ್ಟ ಸಾಂವಿಧಾನಿಕ ಅವಕಾಶಗಳ ಪರಿಮಿತಿಯಲ್ಲಿ ನಾಗರಿಕರು ಪಡೆದುಕೊಳ್ಳುವ ಹಕ್ಕಿನ ರೀತಿಯಲ್ಲಿ ನಿರ್ವಚನ ಮಾಡಲಾಗಿದೆ. ಹೀಗಾಗಿ ಪೌರತ್ವವೆಂಬುದು ‘‘ನಾವು ಈ ದೇಶದ ಜನ’’ ಎಂಬ ವಿಶಾಲ ಮತ್ತು ಅಮೂರ್ತ ಅಭಿವ್ಯಕ್ತಿಯ ಪರಿಣಾಮದಿಂದ ಹುಟ್ಟಿಕೊಂಡಿರುವ ಪರಿಕಲ್ಪನೆಯಾಗಿದೆ. ಹೀಗಾಗಿಯೇ ಸಂವಿಧಾನದ ಮುನ್ನುಡಿಯಲ್ಲಿ ಪೌರರೆಂಬ ಪದವು ‘‘ನಾವು ಈ ದೇಶದ ಜನ’’ ಎಂಬ ಪದದ ನಂತರ ಕಾಣಿಸಿಕೊಳ್ಳುತ್ತದೆ. ಈ ಗಹನವಾದ ಅಭಿವ್ಯಕ್ತಿಯು ಸಂವಿಧಾನದ ಆದರ್ಶವಾದಿ ಮತ್ತು ಆ ಕಾರಣಕ್ಕಾಗಿ ಸಂವಿಧಾನದ ಮೂಲಭೂತ ತತ್ವಗಳ ಬಗ್ಗೆ ಒದಗಿಸಿಕೊಳ್ಳಲಾದ ಸಾರ್ವತ್ರಿಕ ಸಮ್ಮತಿಯ ಅಭಿವ್ಯಕ್ತಿಯೂ ಆಗಿದೆ. ಹೀಗಾಗಿ ‘‘ನಾವು ಈ ದೇಶದ ಜನ’’ ಎಂಬುದು ಸಂವಿಧಾನದ ಮೂಲ ಅರ್ಥದ ಅಭಿವ್ಯಕ್ತಿಯೂ ಆಗಿದೆ. ಈ ಸಂದರ್ಭದಲ್ಲಿ ಸಂವಿಧಾನಕ್ಕೆ ಈ ಅರ್ಥವು ಪ್ರಾಪ್ತವಾದದ್ದು ಸಂವಿಧಾನ ಕರ್ತರ ಉದ್ದೇಶದಿಂದಲ್ಲ, ಬದಲಿಗೆ ಜನರ ಜೀವಂತ ಅನುಭವಗಳ ಬಗ್ಗೆ ಅವರಿಗಿದ್ದ ಪ್ರಾಮಾಣಿಕ ತಿಳಿವಳಿಕೆಯಿಂದ ಎಂಬುದನ್ನು ಮರೆಯಬಾರದು.
ಜನರ ಜೀವಂತ ಅನುಭವಗಳು ಒಂದು ಕಡೆ ದಲಿತರ ಶೋಷಣೆ, ಮಹಿಳೆಯರ ದಾಸ್ಯ ಮತ್ತು ಆದಿವಾಸಿಗಳ ಪರಾಯೀಕರಣಗಳನ್ನು ಒಳಗೊಂಡು ದುರಂತಮಯವಾಗಿತ್ತು. ಮತ್ತೊಂದು ಕಡೆ ಅದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾನವಿಕ ವೈವಿಧ್ಯವನ್ನು ಪ್ರತಿನಿಧಿಸುವ ಮೂಲಕ ಚೇತೋಹಾರಿ ಮತ್ತು ಶಕ್ತಿದಾಯಕ ಅನುಭವವೂ ಆಗಿತ್ತು. ನಮ್ಮ ಸಂವಿಧಾನವು ಸೌಲಭ್ಯ ವಂಚಿತರಿಗೆ ಪುರೋಗಾಮಿ ಆದರ್ಶದ ಭರವಸೆಗಳನ್ನು ನೀಡಿದರೆ ಸೌಲಭ್ಯವಂತರಿಗೆ ಸಾಮಾಜಿಕ ಅವ್ಯವಸ್ಥೆಯ ಪ್ರತಿಯಾಗಿ ಭದ್ರತೆಯನ್ನು ಒದಗಿಸುತ್ತದೆ. ಇಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳಲ್ಲಿ ಮತ್ತೊಮ್ಮೆ ಮೊಳಗುತ್ತಿರುವ ‘‘ನಾವು ಈ ದೇಶದ ಜನ’’ ಎಂಬ ಪರಿಕಲ್ಪನೆಯು ಸಂವಿಧಾನದ ಮೂಲ ಅರ್ಥದ ತಾತ್ವಿಕ ಅಡಿಪಾಯಗಳ ಪುನರುಚ್ಚರಣೆ ಮಾತ್ರವಲ್ಲ ಮತ್ತದರ ಮಹತ್ವದ ಪುರಾವೆಯೂ ಆಗಿದೆ. ಈ ಪ್ರತಿಭಟನೆಗಳು ‘‘ನಾವು ಈ ದೇಶದ ಜನ’’ ಎಂಬುದರ ಮೂಲ ಪರಿಕಲ್ಪನೆಯ ಪುನರ್‌ಸ್ಥಾಪನೆಯೂ ಆಗಿದೆ. ಈ ಪ್ರತಿಭಟನೆಗಳನ್ನು ಸಂವಿಧಾನದ ಮೂಲ ಅರ್ಥ ಅಥವಾ ಸಂವಿಧಾನ ಮೂಲ ತತ್ವಗಳನ್ನು ರಕ್ಷಣೆಗಿರುವ ಗಣಾಧಿಕಾರದ ಪ್ರತಿಪಾದನೆಯಾಗಿಯೂ ನೋಡಬಹುದು. ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ: ‘‘ನಾವು ಈ ದೇಶದ ಜನ’’ ಎಂಬ ಘೋಷಣೆ ಮಾರ್ಮೊಳಗುತ್ತಿದೆ. ಇಂದಿನ ಸಂದರ್ಭದಲ್ಲಿ ‘ನಾವು’ ಎನ್ನುವ ಪದವು ಸಂವಿಧಾನದ ರಕ್ಷಣೆಗೆ ನಾವು ನಿಲ್ಲುತ್ತೇವೆಂಬ ನೈತಿಕ ಸ್ಥೈರ್ಯದ ಪ್ರತಿಪಾದನೆಯೂ ಆಗಿದೆ. ಅದು ಯಾವುದೇ ಸರ್ವಾಧಿಕಾರಕ್ಕೆ ಅಥವಾ ಪರಮಾಧಿಕಾರಕ್ಕೆ ಶರಣಾಗುವುದಿಲ್ಲವೆಂಬ ಘೋಷಣೆಯೂ ಆಗಿದೆ.
ಕೃಪೆ: Economic and Political Weekly