ನೀಲಿನಿಯ ಕರೆಗೆ ಓಗೊಟ್ಟ ಗಾಂಧೀಜಿ
ಒಂದು ಸಾಧಾರಣ ರಂಗಿನಗಿಡ, ಅದನ್ನು ಬೆಳೆಸುತ್ತಿದ್ದ ರೈತರ ಕಷ್ಟಗಳು ಭಾರತದಲ್ಲಿ ಸವಿನಯ ಕಾಯ್ದೆ ಭಂಗ ಮತ್ತು ಸತ್ಯಾಗ್ರಹಕ್ಕೆ ಮುನ್ನುಡಿ ಬರೆದವು. ಈ ಘಟನೆ ಇಡೀ ದೇಶಕ್ಕೆ ಸತ್ಯಾಗ್ರಹದ ಮೊದಲ ಪಾಠವಾಯಿತು. ಅದೇ ಚಂಪಾರಣ್ಯ ಸತ್ಯಾಗ್ರಹ...
2017ರ ಮೇ ತಿಂಗಳಿನಲ್ಲಿ ಒಂದು ಸಾಮಾನ್ಯ ನೀಲಿ ಬಣ್ಣ ಕೊಡುವ ಸಸ್ಯ ಗಾಂಧೀಜಿಯವರ ಚಂಪಾರಣ್ಯ ಸತ್ಯಾಗ್ರಹದೊಡನೆ ತಳಕು ಹಾಕಿಕೊಂಡು ಹೂವಿನೊಡನೆ ನಾರಿಗೂ ಸ್ವರ್ಗ ಎಂಬಂತೆ ತಾನೂ ಶತಮಾನೋತ್ಸವ ಆಚರಿಸಿಕೊಂಡಿತು. ಅದೇ ಇಂಡಿಗೊಫೆರಾಟಿಂಕ್ಟೋರಿಯಾ ಎಂಬ ಬೀನ್, ಹುರುಳಿ, ಕಡಲೆಗಳ ಜಾತಿಯ ಲೆಗ್ಯುಮಿನೋಸಿ ಸಸ್ಯ ಕುಟುಂಬಕ್ಕೆ ಸೇರಿದ ಸಸ್ಯ. ಈ ಸಸ್ಯದಿಂದ ತಯಾರಾಗುವ ‘ಇಂಡಿಗೊ’ ಎಂಬ ನೀಲಿ ರಂಗು ಇಂದಿಗೂ ವಸ್ತ್ರೋದ್ಯಮದಲ್ಲಿ ಪ್ರಸಿದ್ಧವಾಗಿದೆ.
ಇಂಡಿಗೊಫೆರಾಟಿಂಕ್ಟೋರಿಯಾ ಎಂಬ ನೀಲಿ ಬಣ್ಣವನ್ನು ಕೊಡುವ ಸಸ್ಯ. ಅದನ್ನು ಬೆಳೆವ ರೈತರ ದಾರುಣ ಪರಿಸ್ಥಿತಿ ಗಾಂಧೀಜಿಯವರ ಒಂದು ಬಹುಮುಖ್ಯ ಸತ್ಯಾಗ್ರಹಕ್ಕೆ ಹೇಗೆ ಕಾರಣವಾಯಿತು ಎಂಬುದನ್ನು ಮುಂದೆ ನೋಡೋಣ. 1833ರಲ್ಲಿ ಗುಲಾಮಗಿರಿಯನ್ನು ರದ್ದು ಮಾಡಿದ ಮೇಲೆ ಬಿಳಿಯರು ಗುಲಾಮಗಿರಿಗೆ ಬದಲಾಗಿ ಭಾರತೀಯರನ್ನು ಕರಾರುಬದ್ಧ ಕೂಲಿಗಳನ್ನಾಗಿ ತಮ್ಮ ವಸಾಹತು ದೇಶಗಳಲ್ಲಿ ಕೆಲಸ ಮಾಡಲು ಸಾಗಿಸುವ ಉಪಾಯವನ್ನು ಜಾರಿಗೆ ತಂದರು. ಕರಾರಿನ ಅವಧಿಯಲ್ಲಿ ಈ ಕೂಲಿಗಳ ಜೀವನ ಎಷ್ಟೇ ಕಷ್ಟಕರವಾಗಿದ್ದರೂ ಕೂಲಿಕಾರರು ಮಾಲಕರನ್ನು ಬಿಡುವ ಹಾಗಿರಲಿಲ್ಲ. ಈ ವಿಷಯವಾಗಿ ಗಾಂಧೀಜಿ ತಮ್ಮ ಹೋರಾಟವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಭಾರತದ ತೋಟಗಳಲ್ಲಿ ಮತ್ತೊಂದು ಹೀನಾಯವಾದ ಕೂಲಿ ಪದ್ಧತಿ ಇತ್ತು. ಗಾಂಧೀಜಿ ನೀಲಿ ಪೊಟ್ಟಣಗಳನ್ನು ಮಾತ್ರ ನೋಡಿದ್ದರು. ಆದರೆ ಆ ನೀಲಿ ರಂಗಿನ ಹಿಂದೆ ಬಿಹಾರದ ಚಂಪಾರಣ್ಯದ ಸಾವಿರಾರು ನಿಸ್ಸಹಾಯಕ ರೈತರ ಅಧಿಕ ಶ್ರಮ ಇತ್ತು ಎಂಬ ಸಂಗತಿ ಅವರಿಗೆ ತಿಳಿದಿರಲಿಲ್ಲ. ಆಗ ಬಿಹಾರ್‌ನ ರಾಜಕುಮಾರ್ ಶುಕ್ಲ ಎಂಬ ರೈತರು ನೀಲಿಯ ಕಲೆಯನ್ನು ತೊಡೆದು ಹಾಕುವ ಪ್ರಯತ್ನದಲ್ಲಿ 1861ರಲ್ಲಿ ಲಕ್ನೊದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯನ್ನು ಭೇಟಿ ಮಾಡಿ ಅಧಿವೇಶನದಲ್ಲಿ ನೀಲಿ ಬೆಳೆದ ರೈತರ ಬಗ್ಗೆ ಒಂದು ನಿರ್ಣಯವನ್ನು ಮಂಡಿಸಲು ಕೇಳಿಕೊಂಡರು. ಆದರೆ ಗಾಂಧೀಜಿ ವಸ್ತುಸ್ಥಿತಿಯನ್ನು ಕಣ್ಣಾರೆ ಕಂಡು ಮನವರಿಕೆ ಮಾಡಿಕೊಳ್ಳದೆ ನಾನೇನೂ ಮಾಡಲಾರೆ, ಆದರೆ ಮುಂದೆ ಕಲ್ಕತ್ತಾಗೆ ಬಂದಾಗ ಚಂಪಾರಣ್ಯಕ್ಕೆ ಬರುವ ಆಶ್ವಾಸನೆ ಕೊಟ್ಟರು. ಅದರಂತೆಯೇ ಗಾಂಧೀಜಿ ಚಂಪಾರಣ್ಯಕ್ಕೆ ಹೋದರು.
ಚಂಪಾರಣ್ಯ ಬಿಹಾರ ರಾಜ್ಯದ ಒಂದು ಮೂಲೆಯಲ್ಲಿದೆ. ಮೋತಿಹಾರಿ ಮತ್ತು ಬೆಟ್ಟಿಯಾ ಆ ಜಿಲ್ಲೆಯ ಮುಖ್ಯಪಟ್ಟಣಗಳು ಮತ್ತು ಹಿಂದಿಯ ಉಪಭಾಷೆಯಾದ ಭೋಜಪುರಿ ಅಲ್ಲಿನ ಜನರ ಆಡುಭಾಷೆ. ಗಾಂಧೀಜಿ ಮೊದಲು ಚಂಪಾರಣ್ಯದ ಮುಝಫ್ಫರ್‌ಪುರವನ್ನು ತಲುಪಿದರು.
ಚಂಪಾರಣ್ಯದಲ್ಲಿ ರೈತರು ಎರಡು ಶತಮಾನಗಳಿಂದ ನೀಲಿ ವ್ಯವಸಾಯ ಮಾಡುತ್ತಿದ್ದರು. ಕ್ರಮೇಣ ಯುರೋಪಿಯನ್ ಪ್ಲಾಂಟರುಗಳು ನೀಲಿ ಮತ್ತು ಕಬ್ಬಿನ ವ್ಯವಸಾಯವನ್ನು ಆಕ್ರಮಿಸಿಕೊಂಡರು. ಬಡ ವ್ಯವಸಾಯಗಾರರನ್ನು ಮೋಸ, ಬಲಾತ್ಕಾರಗಳಿಂದ ಅವರ ಜಮೀನಿನಲ್ಲಿ ನೀಲಿ ಬೆಳೆಯಲು ಒಪ್ಪುವಂತೆ ಮಾಡಿದರು. ಚಂಪಾರಣ್ಯದ ರೈತ ತಾನು ವ್ಯವಸಾಯ ಮಾಡುತ್ತಿದ್ದ ಒಂದು ಎಕರೆ ಜಮೀನಿನ ಮೂರು ಭಾಗಗಳಲ್ಲಿ ಪ್ಲಾಂಟರುಗಳಿಗಾಗಿ ನೀಲಿ ಬೆಳೆಯನ್ನು ಬೆಳೆಯಲೇಬೇಕಾಗಿತ್ತು. ಈ ಪದ್ಧತಿಗೆ ತೀನ್‌ಕಾತಿಯಾ ಎಂದು ಹೆಸರಾಗಿತ್ತು.
ಚಂಪಾರಣ್ಯದಲ್ಲಿ ಬಿಳಿಯ ಪ್ಲಾಂಟರುಗಳ ದಬ್ಬಾಳಿಕೆಯಿಂದ ರೈತರೂ, ಅಲ್ಲಿನ ವಿದ್ಯಾವಂತ ವಕೀಲರೂ ಸಹ ಭಯಭೀತರಾಗಿದ್ದರು. ನೀಲಿ ವ್ಯವಸಾಯಗಾರರ ಕಷ್ಟಕೋಟಲೆಗಳ ಅಧ್ಯಯನ ಮಾಡಿದ ಗಾಂಧೀಜಿ ಮೊದಲು ರೈತರು ಹಾಗೂ ಸಾರ್ವಜನಿಕರು ನಿರ್ಭೀತರಾಗಬೇಕೆಂದೂ, ನ್ಯಾಯಕ್ಕಾಗಿ ಕೋರ್ಟ್‌ಗೆ ಹೋಗುವುದು ವ್ಯರ್ಥವೆಂದೂ ಸ್ಪಷ್ಟಪಡಿಸಿದರು. ಬಿಹಾರ್‌ನಿಂದ ತೀನ್‌ಕತಿಯಾವನ್ನು ಓಡಿಸುವವರೆಗೆ ಸುಮ್ಮನೆ ಕುಳಿತಿರುವ ಹಾಗಿಲ್ಲ ಎಂದು ಗಾಂಧೀಜಿ ಹೇಳಿದರು.
ಗಾಂಧೀಜಿ ತಮ್ಮ ವಕೀಲ ಮಿತ್ರರಾದ ಬ್ರಜ್‌ಕಿಶೋರ್ ಬಾಬು, ರಾಜೇಂದ್ರ ಪ್ರಸಾದ್ ಇನ್ನಿತರರಿಗೆ ತಮ್ಮ ಮುಂದಿರುವ ಬೃಹತ್ ಕೆಲಸಕ್ಕಾಗಿ ಗುಮಾಸ್ತರೂ, ಭೋಜಪುರಿ ಭಾಷೆಯನ್ನು ಹಿಂದಿಗೆ ಅನುವಾದಿಸುವ ದುಬಾಷಿಗಳೂ ಬೇಕೆಂದು ಕೇಳಿಕೊಂಡರು ಮತ್ತು ಈ ಬೆಟ್ಟದಂತಹ ಕೆಲಸಗಳಿಗೆ ಕೊಡಲು ನಮ್ಮಲ್ಲಿ ಹಣವಿಲ್ಲ. ಅದರಿಂದ ಎಲ್ಲರೂ ಸೇವಾಬುದ್ಧಿಯಿಂದಲೂ, ಪ್ರೀತಿಯಿಂದಲೂ ಕಾರ್ಯೋನ್ಮುಖರಾಗಬೇಕೆಂದು ಕೇಳಿಕೊಂಡರು.
ನಂತರ ಗಾಂಧೀಜಿ ಬ್ರಿಟಿಷ್ ನೀಲಿ ಪ್ಲಾಂಟರುಗಳ ಕಾರ್ಯದರ್ಶಿ ಮಿ.ವಿಲ್ಸನ್‌ರಿಗೆ ತಮ್ಮ ಕಾರ್ಯದ ಉದ್ದೇಶವನ್ನು ಹೇಳಿದರು. ಆದರೆ ಆತ ಗಾಂಧಿ ಚಂಪಾರಣ್ಯಕ್ಕೆ ಹೊರಗಿನವರೆಂದೂ, ರೈತರಿಗೂ ಪ್ಲಾಂಟರುಗಳಿಗೂ ನಡುವೆ ಪ್ರವೇಶಿಸುವ ಹಕ್ಕು ಗಾಂಧಿಯವರಿಗೆ ಇಲ್ಲವೆಂದು ಹೇಳಿದರು. ಗಾಂಧೀಜಿ ಚಂಪಾರಣ್ಯದ ತಿರ್‌ಹಟ್ ವಿಭಾಗದ ಕಮೀಷನ್‌ರನ್ನು ಭೇಟಿಯಾದರು. ಕಮಿಷನರ್ ಗಾಂಧೀಜಿಯ ಆಗಮನವನ್ನು ಒಪ್ಪದೆ, ಸರಕಾರವೇ ಈ ವಿಚಾರವಾಗಿ ವಿಚಾರಣೆ ನಡೆಸುವುದೆಂದೂ, ಗಾಂಧೀಜಿ ಚಂಪಾರಣ್ಯವನ್ನು ಬಿಟ್ಟು ಹೋಗಬೇಕೆಂದು ಹೇಳಿಬಿಟ್ಟರು. ಆದರೆ ಗಾಂಧೀಜಿ ತಮಗೆ ಬಹುಕಾಲದಿಂದ ನೀಲಿ ಕೆಲಸಗಾರರ ಕಷ್ಟಗಳನ್ನು ವಿವರಿಸುವ ಪತ್ರಗಳು ಬರುತ್ತಿದ್ದವು. ಅದರಿಂದ ಪರಿಸ್ಥಿತಿಯನ್ನು ಕಣ್ಣಾರೆ ನೋಡಲು ಬಂದೆ ಎಂದು ಹೇಳಿದರು.
ಸರಕಾರದ ಅಸಹನೆ, ಅಸಹಕಾರಗಳನ್ನು ತಿಳಿದ ಗಾಂಧಿ ಮುಂದಿನ ಮಾರ್ಗೋಪಾಯವನ್ನು ಚಿಂತಿಸಿದರು. ಅಲ್ಲಿನ ವಕೀಲರು ಮತ್ತು ಇನ್ನಿತರರಿಗೆ ತಮ್ಮನ್ನು ಈ ಕೆಲಸದಲ್ಲಿ ಮುಂದುವರಿಯದಂತೆ ಸರಕಾರ ತಡೆಯಬಹುದು. ನನ್ನನ್ನು ಸೆರೆಮನೆಗೆ ಅಟ್ಟಬಹುದು. ನನ್ನ ಬಂಧನ ಚಂಪಾರಣ್ಯದ ಮೋತಿಹಾರಿ ಅಥವಾ ಬೆಟ್ಟಿಯಾದಲ್ಲೊ ಆಗುವುದಾದರೆ ಒಳ್ಳೆಯದು. ನೀವು ಮುಂದಿನ ಕೆಲಸಕ್ಕೆ ಸಜ್ಜಾಗಿರಬೇಕೆಂದು ಎಚ್ಚರಿಸಿದರು.
ಗಾಂಧೀಜಿ ಸುತ್ತಲಿನ ಹಳ್ಳಿಗಳ ಬಡರೈತರ ಗುಡಿಸಲುಗಳಿಗೆ ಹೋಗಿ, ಅಲ್ಲಿ ಹೆಂಗಸರು, ಮಕ್ಕಳೊಂದಿಗೆ ಮಾತಾಡಿ, ಈ ಜನಗಳ ಪರಿಸ್ಥಿತಿ ಉತ್ತಮವಾದಾಗ ಮಾತ್ರ ಭಾರತಕ್ಕೆ ಸ್ವರಾಜ್ಯ ಎಂದು ಉದ್ಗರಿಸಿದರು. ಗಾಂಧೀಜಿಯವರ ಆಗಮನದ ಸುದ್ದಿ ಚಂಪಾರಣ್ಯದಲ್ಲೆಲ್ಲಾ ಹರಡಿ, ಅವರನ್ನು ನೋಡಲು ಅಗಾಧ ಸಂಖ್ಯೆಯಲ್ಲಿ ಬಂದ ರೈತರು ತಮ್ಮ ಕಷ್ಟಗಳ ಬಗ್ಗೆ ಅನೇಕ ದೂರುಗಳನ್ನು ಗಾಂಧೀಜಿಗೆ ಕೊಟ್ಟರು. ಗಾಂಧೀಜಿ ತಮಗೆ ಸಿಕ್ಕ ಕಾಗದಪತ್ರಗಳನ್ನೆಲ್ಲಾ ಓದಿದರು. ಇದರಿಂದ ಗಾಂಧೀಜಿಯವರಿಗೆ ಚಂಪಾರಣ್ಯದ ಜನರ ಕರುಣಾಜನಕ ಸ್ಥಿತಿಯ ಅರಿವಾಗಿ ಈ ವಿಷಯವಾಗಿ ನಡೆಸಬೇಕಾದ ಹೋರಾಟದ ಬಗ್ಗೆ ಅವರ ನಿರ್ಧಾರ ಇನ್ನೂ ದೃಢವಾಯ್ತು.
ಮುಝಫ್ಫರ್‌ಪುರ್‌ನಿಂದ ಗಾಂಧೀಜಿ ರಾಮನವಮಿ ಪ್ರಸಾದ್ ಮತ್ತು ಧರಣಿಧರ್ ಎಂಬ ದುಬಾಷಿಗಳೊಂದಿಗೆ ಮೋತಿಹಾರಿಗೆ ಹೊರಟರು. ದಾರಿಯಲ್ಲಿ ಗಾಂಧೀಜಿಗೆ ಪೊಲೀಸ್ ಸೂಪರಿಂಟೆಂಡೆಂಟ್‌ರ ನೋಟಿಸ್ ತಲುಪಿತು. ಅದರಲ್ಲಿ ಗಾಂಧೀಜಿ ಕೂಡಲೇ ಚಂಪಾರಣ್ಯದಿಂದ ನಿರ್ಗಮಿಸಬೇಕೆಂಬ ಆಜ್ಞೆ ಇದ್ದಿತು. ಜೊತೆಗೆ ಚಂಪಾರಣ್ಯದ ಕಮಿಷನರ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟರಿಗೆ ಬರೆದ ಪತ್ರದ ನಕಲೂ ಇತ್ತು. ಅದರಲ್ಲಿ ಸರಕಾರವೇ ರೈತರ ಈ ಪ್ರಶ್ನೆಯನ್ನು ಬಗೆಹರಿಸಬೇಕೆಂದಿರುವಾಗ ಹೊಸಬರ ಪ್ರವೇಶದ ಅಗತ್ಯವಿಲ್ಲ. ತಕ್ಷಣ ಅವರನ್ನು ಚಂಪಾರಣ್ಯದ ಹೊರಹೋಗುವಂತೆ ನಿರ್ದೇಶಿಸಬೇಕೆಂದು ಇದ್ದಿತು. ಗಾಂಧೀಜಿಯವರು ಮೋತಿಹಾರಿ ತಲುಪಿದ ಕೂಡಲೇ, ‘‘ನಾನು ಸಾರ್ವಜನಿಕ ಕರ್ತವ್ಯದ ಜವಾಬ್ದಾರಿಯಿಂದ ವಿಮುಖನಾಗಿ ಜಿಲ್ಲೆಯನ್ನು ಬಿಡಲು ಸಾಧ್ಯವಿಲ್ಲ. ಸರಕಾರದ ಆಜ್ಞೆಯನ್ನು ಮೀರಿದುದಕ್ಕೆ ಕೊಡಬಹುದಾದ ಶಿಕ್ಷೆಯನ್ನು ಅನುಭವಿಸಲು ಸಿದ್ಧನಿದ್ದೇನೆ’’ ಎಂಬ ಉತ್ತರವನ್ನು ಮ್ಯಾಜಿಸ್ಟ್ರೇಟರಿಗೆ ಕಳಿಸಿದರು.
ಅನೇಕ ರೈತರು ಮೋತಿಹಾರಿಗೆ ಬಂದು ಗಾಂಧಿಯವರಲ್ಲಿ ತಮ್ಮ ಹೇಳಿಕೆ ಬರೆಸುವಾಗ ಒಬ್ಬ ಸಬ್‌ಇನ್‌ಸ್ಪೆೆಕ್ಟರ್ ಹಾಜರಿದ್ದು ರೈತರ ಹೆಸರುಗಳನ್ನು ಬರೆದುಕೊಂಡರು. ಆಗ ಗಾಂಧೀಜಿಗೆ ಸಬ್‌ಡಿವಿಷನ್ ಆಫೀಸರ್ ಮುಂದೆ ಹಾಜರಾಗಬೇಕೆಂಬ ಸಮನ್ಸ್ ಬಂದಿತು. ಗಾಂಧೀಜಿ ಜೈಲಿಗೆ ಹೊರಟಾಗ ಅವರ ಜೊತೆಗಾರರು ನಾವು ನಿಮ್ಮನ್ನು ಅನುಸರಿಸುತ್ತೇವೆ ಎಂದಾಗ, ಗಾಂಧೀಜಿ ಸಂತೋಷದಿಂದ ನಾವು ಖಂಡಿತ ಜಯಿಸುತ್ತೇವೆ ಎಂದರು. ದೇಶದ ದೃಷ್ಟಿಯೆಲ್ಲಾ ಈಗ ಚಂಪಾರಣ್ಯದತ್ತ ತಿರುಗಿತು.
ನ್ಯಾಯಾಲಯದ ಆವರಣದಲ್ಲಿ ಸೇರಿದ್ದ ಜನಸ್ತೋಮದ ನಿಯಂತ್ರಣಕ್ಕೆ ಪೊಲೀಸ್ ಪಡೆ ಬರಬೇಕಾಯಿತು. ಕೋರ್ಟಿನಲ್ಲಿ ಗಾಂಧೀಜಿ ಚಂಪಾರಣ್ಯವನ್ನು ಬಿಡಬೇಕೆಂಬ ಸರಕಾರಿ ಆಜ್ಞೆಯನ್ನು ನಾನು ಉಲ್ಲಂಘಿಸಿದ್ದೇನೆ. ಇದಕ್ಕೆ ಕಾರಣ ನಾನು ಮಾನವೀಯತೆ ಮತ್ತು ದೇಶಸೇವೆಯ ದೃಷ್ಟಿಯಿಂದ ಇಲ್ಲಿಗೆ ಬಂದಿದ್ದೇನೆ. ತಮ್ಮನ್ನು ನೀಲಿ ತೋಟಗಾರರು ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎನ್ನುವುದು ರೈತರ ಆಪಾದನೆ. ಪರಿಸ್ಥಿತಿಯ ಅಧ್ಯಯನ ಮಾಡದೆ ನಾನು ಅವರಿಗೆ ಯಾವ ಸಹಾಯವನ್ನೂ ಮಾಡುವಂತಿಲ್ಲ. ಆದ್ದರಿಂದ ಇಲ್ಲಿನ ಪರಿಸ್ಥಿತಿಯನ್ನು ಸರಕಾರ ಮತ್ತು ಪ್ಲಾಂಟರುಗಳ ಸಹಾಯದಿಂದ ಅಧ್ಯಯನ ಮಾಡಲು ಬಂದಿದ್ದೇನೆ. ನಾನಾಗಿಯೇ ಈ ಕೆಲಸದಿಂದ ನಿವೃತ್ತನಾಗುವಂತಿಲ್ಲ. ಆದರೆ ಕಾನೂನಿಗೆ ಅನುಸಾರವಾಗಿ ನಡೆಯುವ ಪ್ರಜೆಯಾದುದರಿಂದ ಸರಕಾರದ ಆಜ್ಞೆಗೆ ಬದ್ಧನಾಗಿದ್ದೇನೆ ಎಂದರು. ಈ ಮಾತುಗಳಿಂದ ಸಂದಿಗ್ಧತೆಗೆ ಸಿಲುಕಿದ ಮ್ಯಾಜಿಸ್ಟ್ರೇಟರು ನೀವು ಚಂಪಾರಣ್ಯವನ್ನು ಬಿಟ್ಟುಹೋಗುತ್ತೇನೆ ಪುನಃ ಹಿಂದಿರುಗುವುದಿಲ್ಲ ಎಂದು ವಾಗ್ದಾನ ಮಾಡಿದರೆ ನಿಮ್ಮ ಮೇಲಿನ ಮೊಕದ್ದಮೆಯನ್ನು ಹಿಂದೆಗೆದುಕೊಳ್ಳಲಾಗುವುದು ಎಂದರು. ಆಗ ಗಾಂಧೀಜಿ ‘‘ಈಗ ಹಿಂದಕ್ಕೆ ಹೋಗುವುದಿರಲಿ, ಜೈಲಿನಿಂದ ಹೊರ ಬಂದ ಮೇಲೂ ಚಂಪಾರಣ್ಯವನ್ನೇ ನನ್ನ ಮನೆ ಮಾಡಿಕೊಳ್ಳುತ್ತೇನೆ’’ ಎಂದಾಗ ಮ್ಯಾಜಿಸ್ಟ್ರೇಟರು ಸ್ವಂತ ಜಾಮೀನಿನ ಮೇಲೆ ಗಾಂಧೀಜಿಯನ್ನು ಬಿಡುಗಡೆ ಮಾಡಿದರು.
ಈ ಘಟನೆ ಇಡೀ ದೇಶಕ್ಕೆ ಸತ್ಯಾಗ್ರಹದ ಮೊದಲ ಪಾಠವಾಯಿತು. ಆನಂತರ ಗಾಂಧೀಜಿಯವರ ಮೇಲಿನ ಮೊಕದ್ದಮೆ ಹಿಂದೆಗೆದುಕೊಳ್ಳಲ್ಪಟ್ಟಿತು. ರೈತರು ಗುಂಪುಗುಂಪಾಗಿ ಬಂದು ಗಾಂಧೀಜಿ ಮತ್ತು ಅವರ ಅನುಯಾಯಿಗಳ ಹತ್ತಿರ ಹೇಳಿಕೆ ಕೊಡತೊಡಗಿದರು. ಕಲೆಕ್ಟರ್ ಗಾಂಧೀಜಿಗೆ ಅಧಿಕಾರಿಗಳ ಸಹಾಯ ಪಡೆದು ವಿಚಾರಣೆ ನಡೆಸಲು ಒಪ್ಪಿಗೆ ಕೊಟ್ಟರು. ಇಷ್ಟರಲ್ಲಿ ಗಾಂಧೀಜಿ ಹತ್ತಿರ ಸಾವಿರಾರು ರೈತರ ಹೇಳಿಕೆ ಇತ್ತು. ತಮ್ಮ ಅಧಿಕಾರದ ದರ್ಪ ಕಡಿಮೆಯಾಗುವುದೆಂದು ಅಧಿಕಾರಿಗಳು ಕ್ಷೋಭೆಗೊಂಡರು. ಗಾಂಧೀಜಿ ನೀಲಿ ಪ್ಲಾಂಟರುಗಳ ಸಭೆ ಏರ್ಪಡಿಸಿ ಮಾತಾಡಿದ್ದು ವಿಫಲವಾಯ್ತು. ಬಿಹಾರ್‌ನ ಯುರೋಪಿಯನ್ ಜನಾಂಗ ಸರಕಾರದ ಮೇಲೆ ಗಾಂಧೀಜಿ ವಿರುದ್ಧ ಪ್ರಭಾವ ಬೀರಲು ಯತ್ನಿಸಿದರು. ಗಾಂಧೀಜಿ ಸರಕಾರದ ಆದೇಶದಂತೆ ರೈತರ ಕಷ್ಟಗಳ ವಿಚಾರಣೆಯ ವರದಿಯನ್ನು ಮಿ.ಮಾಡ್ ಎಂಬವರಿಗೆ ಕಳಿಸಿದರು. ರೈತರು ತಮ್ಮ ಜಮೀನಿನಲ್ಲಿ ಪ್ಲಾಂಟರ್‌ಗಳಿಗಾಗಿ ನೀಲಿಗಿಡಗಳನ್ನು ಬೆಳೆಯಬೇಕಿತ್ತು. ಕೃತಕ ನೀಲಿಯ ಪ್ರವೇಶದಿಂದ ಸ್ಥಳದ ನೀಲಿಯ ಬೆಲೆ ಕಡಿಮೆಯಾದಾಗ ತೋಟಗಾರರು ಉಪಾಯವಾಗಿ ನಷ್ಟವನ್ನು ರೈತರ ಮೇಲೆ ಹೊರಿಸಿದರು. ರೈತ ತನ್ನ ಅತ್ಯುತ್ತಮ ಜಮೀನನ್ನು ಪ್ಲಾಂಟರ್‌ಗೆ ಬಿಟ್ಟುಕೊಡಬೇಕಾಗಿತ್ತು. ರೈತರ ನೇಗಿಲು, ಗಾಡಿಗಳನ್ನು ಬಲಾತ್ಕಾರದಿಂದ ತಮ್ಮ ನೀಲಿ ಕಾರ್ಖಾನೆಗಳೊಳಗೆ ಇಡುತ್ತಾರೆ. ಬಾಲಕರನ್ನು ಬಲಾತ್ಕಾರದಿಂದ ಕೆಲಸಕ್ಕೆ ಸೇರಿಸುತ್ತಾರೆ. ಇನ್ನೂ ಅನೇಕ ಶೋಷಣೆಗಳ ಬಗೆಗಿನ ವಿವರ ಆ ವರದಿಯಲ್ಲಿತ್ತು. ಆದರೂ ಇಷ್ಟೆಲ್ಲಾ ಕೆಲಸ ಮಾಡಿದ ಗಾಂಧೀಜಿ ಬಿಳಿಯರ ಬಗ್ಗೆ ಅಸಹನೆ ತೋರದೆ, ನಮ್ರತೆಯಿಂದ ಬಿಳಿಯ ಪ್ಲಾಂಟರುಗಳು ಎಲ್ಲ ಬಗೆಯ ವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸುತ್ತಿರುವಂತೆ ಚಂಪಾರಣ್ಯದ ರೈತರಿಗೂ ಆ ಸೌಲಭ್ಯ ಸಿಗಲಿ ಎಂದು ಹೇಳಿಕೆ ಕೊಟ್ಟರು.
ದಿನೇದಿನೇ ಗಾಂಧೀಜಿಯ ಜನಪ್ರಿಯತೆ ಹೆಚ್ಚಿ ಪ್ಲಾಂಟರುಗಳಿಗೆ ಕಿರಿಕಿರಿ ಉಂಟಾಯಿತು. ಗಾಂಧೀಜಿಯವರಿಗಿದ್ದ ಜನ ಬೆಂಬಲ ನೋಡಿ ಸರಕಾರ ಒಂದು ಸಮಿತಿ ರಚಿಸಿ, ಗಾಂಧಿಯವರೂ ಆ ಸಮಿತಿಯಲ್ಲಿ ಇರುವಂತಾಯಿತು. ಈ ಸಮಿತಿ ಅನೇಕ ಬಾರಿ ಮಾತುಕತೆ ನಡೆಸಿ, ಕಡೆಗೆ ಗೇಣಿದಾರರ ಪರವಾಗಿ ಮಸೂದೆ ಒಪ್ಪಿತವಾಯ್ತು. ಕ್ರಮೇಣ ಮಸೂದೆ ಕಾನೂನು ಆಯಿತು.
ಒಂದು ಸಾಧಾರಣ ರಂಗಿನಗಿಡ, ಅದನ್ನು ಬೆಳೆಸುತ್ತಿದ್ದ ರೈತರ ಕಷ್ಟಗಳು ಭಾರತದಲ್ಲಿ ಸವಿನಯ ಕಾಯ್ದೆ ಭಂಗ ಮತ್ತು ಸತ್ಯಾಗ್ರಹಕ್ಕೆ ಮುನ್ನುಡಿ ಬರೆದವು ಎನ್ನುವುದನ್ನು ನೆನೆದಾಗ ಮನಸ್ಸಿನ ತುಂಬಾ ಅಚ್ಚರಿ ತುಂಬಿಕೊಳ್ಳುತ್ತದೆ.