ಲವ್ ಮಾಕ್ಟೇಲ್: ಪ್ರೇಮದಾಟದ ಬ್ಲೂವೇಲ್
ನಮ್ಮಲ್ಲಿ ಲವ್ ಸ್ಟೋರಿ ಸಿನೆಮಾ ಎಂದೊಡನೆ ಅದು ಸಾಮಾನ್ಯವಾಗಿ ಮದುವೆಗೆ ಮುಂಚಿತವಾಗಿ ನಡೆದಿರುವುದೇ ಆಗಿರುತ್ತದೆ. ಆದರೆ ಒಬ್ಬ ಯುವಕನ ಲವ್ ಪ್ರೌಢ ಶಾಲೆಯಿಂದ ಹಿಡಿದು ದಾಂಪತ್ಯದ ತನಕ ಹೇಗೆ ಬದಲಾಗುತ್ತ ಹೋಗುತ್ತದೆ ಎನ್ನುವುದನ್ನು ತಿಳಿಸುವ ಚಿತ್ರವೇ ಲವ್ ಮಾಕ್ಟೇಲ್.
ಆದಿತ್ಯ ಎಂಬ ಯುವಕ ಬೆಂಗಳೂರಿನಿಂದ ಉಡುಪಿಗೆ ಪ್ರಯಾಣ ಮಾಡುವ ಹಾದಿಯಲ್ಲಿ ಅದಿತಿ ಎಂಬ ಯುವತಿಗೆ ಹೇಳುವ ತನ್ನ ಬದುಕಿನ ಪ್ರೇಮಕತೆಯಾಗಿ ಒಟ್ಟು ಚಿತ್ರ ಇದೆ. ಹಾಗಾಗಿ ಇದು ಪ್ರೌಢಶಾಲೆಯ ನಾಸ್ಟಾಲ್ಜಿಕ್ ದಿನಗಳಿಂದ ಆರಂಭವಾಗುತ್ತದೆ. ಬಾಲ್ಯದ ಕ್ರಶ್, ಲವ್ ಮಾಡಬೇಕು ಎನ್ನುವ ಕಾರಣಕ್ಕೆ ಲವ್ ಮಾಡೋದು, ಕ್ರಿಕೆಟ್ ಹುಚ್ಚು ಮೊದಲಾದ ಸನ್ನಿವೇಶಗಳನ್ನು ತುಂಬ ನೈಜತೆಯಿಂದ ತೋರಿಸಲಾಗಿದೆ. ಆದರೆ ವರ್ಕೌಟ್ ಆಗದ ಲವ್; ಕಾಲೇಜ್ ದಿನಗಳಲ್ಲಿ ಹೇಗೆ ಮತ್ತೆ ಶುರುವಾಗುತ್ತದೆ ಮತ್ತು ಈ ಬಾರಿ ಅದರಲ್ಲಿ ಎಷ್ಟೊಂದು ಉದ್ವೇಗ, ಉತ್ಸಾಹ, ಉನ್ಮಾದ ಇರುತ್ತದೆ ಎನ್ನುವುದನ್ನು ಬಣ್ಣಿಸುತ್ತದೆ. ಆದರೆ ಅದು ಕೂಡ ತುಂಬ ದಿನ ಉಳಿಯುವುದಿಲ್ಲ. ಹಾಗಾದರೆ ನಾಯಕ ಕೊನೆಗೆ ಯಾರನ್ನು ವಿವಾಹವಾಗುತ್ತಾನೆ? ಆ ದಾಂಪತ್ಯ ಹೇಗಿರುತ್ತದೆ ಎನ್ನುವುದನ್ನು ಸ್ವಾರಸ್ಯಕರವಾಗಿ, ಸ್ವಾನುಭವದ ಹಾಗೆ, ಸಂಗೀತಮಯವಾಗಿ ತಿಳಿದುಕೊಳ್ಳಬೇಕಾದರೆ ಚಿತ್ರಮಂದಿರದಲ್ಲಿ ಲವ್ ಮಾಕ್ಟೇಲ್ ನೋಡಬೇಕು.
ಆದಿತ್ಯನಾಗಿ ಡಾರ್ಲಿಂಗ್ ಕೃಷ್ಣ ಅವರ ಪಾತ್ರ ಚಿತ್ರ ಮುಗಿದ ಮೇಲೆಯೂ ಮನದಲ್ಲಿ ಉಳಿಯುವ ಮಾದರಿಯಲ್ಲಿ ಮೂಡಿ ಬಂದಿದೆ. ಆದಿತ್ಯನ ಹೈಸ್ಕೂಲ್ ಪಾತ್ರವನ್ನು ನಿಭಾಯಿಸಿರುವ ಹುಡುಗ ನಿಜಕ್ಕೂ ಕೃಷ್ಣನನ್ನು ಹೋಲುವಂತಿರುವುದು ಪ್ಲಸ್ ಪಾಯಿಂಟ್. ಆದರೆ ಸ್ವತಃ ಕೃಷ್ಣನೇ ನಿಜವಾದ ಟೀನೇಜ್ ಹುಡುಗರ ಜತೆಗೆ ಕ್ಲಾಸ್ಮೇಟ್ ಆಗಿ ನಟಿಸಿದಾಗ ಆತನ ದೇಹವನ್ನು ಒಪ್ಪುವುದು ಕಷ್ಟ. ಹಾಗಿದ್ದರೂ ನಟನೆ ಮಾತ್ರ ಸಹಜತೆಯನ್ನೇ ಮೈಯೊಳಗೆ ತುಂಬಿಸಿಕೊಂಡಂತೆ ಕಾಣಿಸಿದ್ದಾರೆ. ಕಾಲೇಜ್ ದಿನಗಳಲ್ಲಿ ಆತನ ಪ್ರೇಯಸಿಯಾಗಿ ‘ಜ್ಯೋ’ ಎಂದು ಕರೆಸಿಕೊಳ್ಳುವ ಚೆಲುವೆಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಶ್ರೀಮಂತರ ಮನೆಯಲ್ಲಿ ಬೆಳೆದ ಮುದ್ದಾದ ಯುವತಿಯ ಬಿಂಕ, ಬಿನ್ನಾಣ, ಬೇಜವಾಬ್ದಾರಿಗಳನ್ನು ಬಿಂಬಿಸುವಲ್ಲಿ ಗೆದ್ದಿರುವ ಆಕೆ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ದಾಂಪತ್ಯದಲ್ಲಿ ಕೃಷ್ಣನಿಗೆ ಜೋಡಿಯಾಗಿ ನಟಿಸಿರುವ ಮಿಲನಾ ನಾಗರಾಜ್ ನಟನೆಯಲ್ಲಿ ಕೂಡ ಉತ್ತಮ ಪೇರ್ ಎನಿಸಿಕೊಳ್ಳುತ್ತಾರೆ. ಯಾಕೆಂದರೆ ಇಬ್ಬರೂ ಕಣ್ಣುಗಳ ಮೂಲಕವೇ ಭಾವವನ್ನು ಹೊರ ಹಾಕುವ ರೀತಿ ಅಮೋಘ.
ಕೃಷ್ಣ ಓರ್ವ ನಟರಾಗಿ ಮಾತ್ರವಲ್ಲ, ಬಾಲ್ಯದ ಪಾತ್ರಗಳನ್ನು ನಿರ್ದೇಶಿಸುವಲ್ಲಿಂದ ಹಿಡಿದು ಪೂರ್ತಿ ಕತೆಯನ್ನು ಆಲಿಸುವ ಅದಿತಿಯಾಗಿ ನಟಿಸಿರುವ ನವನಟಿ ರಚನಾ ವರೆಗಿನ ಪ್ರತಿಯೊಂದು ಪಾತ್ರಗಳನ್ನು ನಿರ್ದೇಶಿಸಿರುವ ರೀತಿಯಿಂದಲೂ ಮನ ಗೆಲ್ಲುತ್ತಾರೆ. ಹಾಡುಗಳು, ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಕೂಡ ಚಿತ್ರಕ್ಕೆ ಹೊಂದಿಕೊಂಡ ಹಾಗೆ ಇದೆ. ಒಂದೆರಡು ಕಡೆ ಕತೆ ಸಾಗುವ ರೀತಿ ನಿಧಾನವಾಗಿದೆ ಎನಿಸಿದರೂ ಜೀವನದಲ್ಲಿ ಒಮ್ಮೆಯಾದರೂ ಪ್ರೇಮಿಸಿದ ಪ್ರತಿಯೊಬ್ಬರು ಕೂಡ ತಮ್ಮ ಹಳೆಯ ದಿನಗಳನ್ನು ನೆನಪಿಸುವಂತಿದೆ. ಪ್ರೇಮಿಸದವರು ಯಾಕೆ ಪ್ರೇಮಿಸಿಲ್ಲ ಎಂದು ಹಪಹಪಿಸುವಂತಿದೆ. ಅದೇ ಈ ಚಿತ್ರದ ಗೆಲುವು.
ತಾರಾಗಣ: ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್
ನಿರ್ದೇಶನ: ಡಾರ್ಲಿಂಗ್ ಕೃಷ್ಣ
ನಿರ್ಮಾಣ: ಕೃಷ್ಣ ಟಾಕೀಸ್