ಬ್ಯಾರಿ ಮನೆಗಳ ಕೋಳಿ ಸಾರು ಪುರಾಣ
ನವಿರು ಸಾಲು
ಅದೊಂದು ಕಾಲವಿತ್ತು. ಅಂದು ನಮಗೆ ಫಾರ್ಮ್ ಕೋಳಿ ಎಂಬ ಪದವೇ ಗೊತ್ತಿರಲಿಲ್ಲ. ಆಗ ಏನಿದ್ದರೂ ನಾಟಿ ಕೋಳಿಯೇ...
ಅದರ ರುಚಿಯಂತೂ ಹೇಳುವುದೇ ಬೇಡ. ಸವಿದವರಿಗೇ ಗೊತ್ತು ಅದರ ರುಚಿ. ನಮ್ಮ ಅಡುಗೆ ಮನೆಗಳಲ್ಲಿ ನಾಟಿ ಕೋಳಿ ಸಾರಿನ ಸ್ಥಾನಕ್ಕೆ ಫಾರ್ಮ್ ಕೋಳಿ ಬಂದ ಮೊದಮೊದಲೆಲ್ಲಾ ಇದನ್ನೂ ಕೋಳಿ ಸಾರು ಎನ್ನುತ್ತಾರಾ ಎಂದು ನಾನು ಮುಖ ಸಿಂಡರಿಸುತ್ತಿದ್ದೆ. ನಾಟಿ ಕೋಳಿ ಇಲ್ಲ ಎನ್ನುವಷ್ಟರ ಮಟ್ಟಿಗೆ ವಿರಳವಾದಾಗ ಅನಿವಾರ್ಯವಾಗಿ ನಾನೂ ಫಾರ್ಮ್ ಕೋಳಿಗೆ ಒಗ್ಗಿಕೊಳ್ಳಲೇಬೇಕಾಯಿತು.
ಆಗ ಹೆಚ್ಚಿನೆಲ್ಲಾ ಮನೆಗಳಲ್ಲಿ ಕಡಿಮೆ ಕಡಿಮೆಯೆಂದರೂ ನಾಲ್ಕೈದು ಕೋಳಿಗಳು ಇರುತ್ತಿತ್ತು. ಮನೆಗೆ ಯಾರಾದರೂ ನೆಂಟರು ಬಂದರೆ, ಮನೆಯಲ್ಲಿ ಏನಾದರೂ ಹರಕೆ ಕಾರ್ಯಕ್ರಮವಿದ್ದರೆ ಸಾಕಿದ ನಾಟಿ ಕೋಳಿಯನ್ನೇ ಕುಯ್ದು ಪದಾರ್ಥ ಮಾಡುತ್ತಿದ್ದರು.
ಆಗೆಲ್ಲಾ ಈಗಿನಂತೆ ವಾರಕ್ಕೆರಡು ಬಾರಿ, ಪದಾರ್ಥಕ್ಕೆ ಮೀನು ಸಿಗಲಿಲ್ಲ ಎಂಬೆಲ್ಲಾ ಕಾರಣಕ್ಕೆ ಕೋಳಿಸಾರು ಮಾಡುವ ಪರಿಪಾಠವಿರಲಿಲ್ಲ. ನನ್ನ ಬಾಲ್ಯದಲ್ಲಿ ಎರಡು ಪೆರ್ನಾಲ್ ಹಬ್ಬಕ್ಕೆ, ಒಂದು ರಬೀವುಲ್ ಅವ್ವಲ್ ಹರಕೆಗೆ (ಪ್ರವಾದಿಯವರ ಹೆಸರಲ್ಲಿ ನಡೆಸುವ ವಾರ್ಷಿಕ ಕೀರ್ತನಾ ಕಾರ್ಯಕ್ರಮ) ಒಂದು ರಾತೀಬಿಗೆ (ಸೂಫಿಗಳ ಸುಲ್ತಾನ ಶೇಖ್ ಮುಹಿಯುದ್ದೀನ್ ಅವರ ಕೀರ್ತನಾ ಕಾರ್ಯಕ್ರಮ), ಒಂದು ಶಬೇ ಬರಾಅತ್‌ಗೆ, ಮತ್ತೆ ಯಾವತ್ತಾದರೂ ವಿಶೇಷ ನೆಂಟರು ಮನೆಗೆ ಬಂದರೆ ಹೀಗೆ ಒಟ್ಟು ವರ್ಷಕ್ಕೆ ಆರು ಬಾರಿ ಕೋಳಿ ಪದಾರ್ಥ ಮಾಡಿದರೆ ಅದೇ ದೊಡ್ಡದು. ನನ್ನ ಹಿರಿಯರು ಹೇಳುತ್ತಿದ್ದರು ನಮ್ಮ ಬಾಲ್ಯದಲ್ಲಿ ವರ್ಷಕ್ಕೆ ಮೂರೇ ಬಾರಿ ಕೋಳಿಸಾರು. ಎರಡು ಹಬ್ಬಕ್ಕೆ ಮತ್ತು ಸ್ವಲ್ಪ ಅನುಕೂಲವಿದ್ದವರು ವರ್ಷಕ್ಕೊಮ್ಮೆ ನಡೆಸುವ ಹರಕೆ (ಮೌಲಿದ್)ಗೆ ಮಾತ್ರ ಕೋಳಿಸಾರು.
ಶಬೇ ಬರಾಅತನ್ನು ಬ್ಯಾರಿಗಳು ಬರಾತೆ ಎನ್ನುತ್ತಾರೆ. ಅದಕ್ಕೆ ಕೋಳಿ ಪದಾರ್ಥ ಮಾಡುವ ಕುರಿತಂತೆ ಒಂದು ಬ್ಯಾರಿ ಜಾನಪದ ಹಾಡೂ ಚಾಲ್ತಿಯಲ್ಲಿತ್ತು. ಬರಾತೆ ಜಾವು ಬರ್ಕತ್ತ್ ..... ಕೋಳಿರೆ ಕುಂಞಿ ಮೈಯತ್ತ್ .........
ಆಗೆಲ್ಲಾ ಈಗಿನಂತೆ ಎಲ್ಲರೂ ಕೋಳಿಯನ್ನು ಕೊಯ್ದು ಹಲಾಲ್ ಮಾಡುತ್ತಿರಲಿಲ್ಲ. ಆಗ ನಮ್ಮ ಹಿರಿಯರಲ್ಲಿದ್ದ ನಂಬಿಕೆಯ ಪ್ರಕಾರ ಕೋಳಿ ಹಲಾಲ್ ಮಾಡಲು ಐದು ವಕ್ತಿನ ನಮಾಝ್ ಸಮಯಕ್ಕೆ ಸರಿಯಾಗಿ ನಿರ್ವಹಿಸುವವನೇ ಆಗಬೇಕು. ಆದುದರಿಂದ ಕೋಳಿ ಹಲಾಲ್ ಮಾಡಲು ಬ್ಯಾರಿ ಮಕ್ಕಳು ಕೋಳಿಯನ್ನು ತಂಗೀಸಿನ ಚೀಲದಲ್ಲಿ ಹಾಕಿ ಮಸೀದಿಗೆ ಕೊಂಡೊಯ್ಯುತ್ತಿದ್ದರು. ಆ ಕೋಳಿ ಚೀಲದೊಳಗಿಂದ ಕೊಕ್ಕೊಕ್ಕೊ...ಎಂದು ಕೋಳಿ ಕೂಗುತ್ತಿತ್ತು. ಕೆಲವು ಗರ್ವದ ಹುಂಜಗಳು ಹುಡುಗರ ಕೈಯಿಂದ ತಪ್ಪಿಸಿ ಓಡುವುದೂ ಇತ್ತು. ನಾನು ಬಾಲಕನಾಗಿದ್ದಾಗೆಲ್ಲಾ ಕತ್ತಿನ ಸುತ್ತ ತುಪ್ಪಳವಿಲ್ಲದ ಬೋಳು ಕುತ್ತಿಗೆಯ ಕೋಳಿಗಳನ್ನು ಕಂಡಾಗ ಮುಕ್ರಿಕಾ ಹಲಾಲ್ ಮಾಡುವಾಗ ತಪ್ಪಿಸಿ ಓಡಿದ ಕೋಳಿ ಎಂದು ತಮಾಷೆ ಮಾಡಿ ನಗುತ್ತಿದ್ದೆವು.
ಹಬ್ಬಗಳು ಹರಕೆ ಇತ್ಯಾದಿಗಳೇನಾದರೂ ಇದ್ದರೆ ಮುಂಜಾನೆ ಕೋಳಿಗೂಡಿನ ಬಾಗಿಲು ತೆರೆಯುತ್ತಿರಲಿಲ್ಲ. ಅದು ಒಮ್ಮೆ ಗೂಡಿಂದ ಹೊರಹೋದರೆ ಅದನ್ನು ಮತ್ತೆ ಹಿಡಿಯುವುದು ಅಷ್ಟು ಸುಲಭದ ಕೆಲಸವೇನೆಲ್ಲ.
ಹಾಗೆ ಕೋಳಿಯನ್ನು ಮಸೀದಿಗೆ ತಂದು ಮುಅದ್ದಿನ್ (ಮುಕ್ರಿಕಾ) ಕೈಯಲ್ಲಿ ಹಲಾಲ್ ಮಾಡಿಸಲಾಗುತ್ತಿತ್ತು. ಮುಕ್ರಿಕಾ ಹಲಾಲ್ ಮಾಡಿದರೆ ಎರಡು ರೂಪಾಯಿ ಅಥವಾ ಐದು ರೂಪಾಯಿ ಸಂಭಾವನೆ ನೀಡುತ್ತಿದ್ದರು. ಈಗೆಲ್ಲಾ ಫಾರ್ಮ್ ಕೋಳಿಯನ್ನು ಕೊಯ್ಯುವವ ಎಡ ಕೈಯಲ್ಲಿ ಕೋಳಿಯನ್ನು ಹಿಡಿದು ಬಲಕೈಯಲ್ಲಿ ಕೊಯ್ದು ಹಲಾಲ್ ಮಾಡುತ್ತಾರೆ. ಅದರ ಕುತ್ತಿಗೆಗೆ ಕತ್ತಿಯಿಂದ ಮೆಲ್ಲಗೆ ಒಂದು ಗೆರೆ ಎಳೆದರೆ ಒಂದಿನಿತೂ ಮಿಸುಕಾಡದೇ ಆಗಲೇ ಪ್ರಾಣ ಬಿಡುತ್ತದೆ. ನಾಟಿ ಕೋಳಿ ಹಾಗಲ್ಲ. ಅದನ್ನು ಒಬ್ಬ ಬಲವಾಗಿ ಹಿಡಿಯಬೇಕು. ಹಿಡಿಯುವುದೆಂದರೆ ಹೇಗೋ ಹಿಡಿದರಾಗದು. ಅದಕ್ಕೊಂದು ಕ್ರಮವಿತ್ತು. ಕೋಳಿಯ ರೆಕ್ಕೆಗಳು ಮತ್ತು ಕಾಲುಗಳನ್ನು ಒಂದೇ ಕೈಯ ಮುಷ್ಟಿಯೊಳಗೆ ಅಮುಕಿ ಹಿಡಿಯಬೇಕು. ಇನ್ನೊಂದು ಕೈಯಲ್ಲಿ ಅದರ ಕುತ್ತಿಗೆಯ ಹಿಂಭಾಗವನ್ನು ಎಳೆದು ಹಿಡಿಯಬೇಕು. ಮುಕ್ರಿಕಾ ಅದರ ಕೊಕ್ಕನ್ನು ಬಿಡಿಸಿ ಒಂದೆರಡು ಗುಟುಕು ನೀರು ಕುಡಿಸಿ ಬಿಸ್ಮಿಲ್ಲಾಹ್...... ಎಂದು ಅದರ ಕತ್ತನ್ನು ಚೂಪಾದ ಚೂರಿಯಿಂದ ಕುಯ್ಯುತ್ತಿದ್ದರು.
ಕುಯ್ದು ಆದ ಮೇಲೆ ಅದನ್ನು ಹಿಡಿದವರು ಅದನ್ನು ನೆಲದ ಮೇಲೆ ಬಿಡಬೇಕು. ಅದು ಸ್ವಲ್ಪ ಹೊತ್ತು ಕೊಸರಾಡಿ ಪ್ರಾಣ ಬಿಡುತ್ತಿತ್ತು.
ಕೆಲವೊಮ್ಮೆ ಕೆಲವು ಗರ್ವದ ಹುಂಜಗಳ ಕತೆ ಕೇಳುವುದೇ ಬೇಡ.ಅವನ್ನು ನೆಲದ ಮೇಲೆ ಬಿಟ್ಟ ಕೂಡಲೇ ಎದ್ದು ಓಡುವುದೂ ಇತ್ತು. ಕೆಲವು ಸ್ವಲ್ಪ ದೂರ ಓಡಿ ಪ್ರಾಣ ಬಿಡುತ್ತಿದ್ದರೆ ಮತ್ತೆ ಕೆಲವು ಎಲ್ಲೆಲ್ಲೋ ಓಡಿ ತಪ್ಪಿಸುವುದು, ಅದನ್ನು ಹಿಡಿಯಲು ನಾವು ಅದರ ಹಿಂದೆ ಓಡುವುದೂ ಇತ್ತು. ಇನ್ನು ಕೆಲವು ಹುಂಜಗಳ ಪ್ರಾಣ ಅರ್ಧ ಗಂಟೆ ಕಳೆದರೂ ಹೋಗದೇ ಇರುವುದಿತ್ತು. ಇನ್ನು ಕೆಲವು ಕೊಸರಾಡಿ ನಿತ್ರಾಣವಾಗಿ ಬಿದ್ದದ್ದನ್ನು ಎತ್ತಿ ಚೀಲಕ್ಕೆ ಹಾಕಿ ಮನೆಗೆ ತಂದರೆ ಚೀಲವನ್ನು ತೆರೆಯುವಾಗ ಅಲ್ಲಿಂದ ತಪ್ಪಿಸಿದ್ದ ನಿದರ್ಶನ ನನಗೆ ಗೊತ್ತಿರುವಂತೆ ಇದೆ.
ಹೀಗೆ ಒಂದು ಕೋಳಿಯನ್ನು ಹಲಾಲ್ ಮಾಡಿಸಿ ತರುವಾಗ ನಮಗೆ ಸಾಕು ಸಾಕಾಗಿ ಹೋಗುತ್ತಿತ್ತು. ಒಂದರ್ಧ ದಿನ ಅದಕ್ಕೇ ಮುಗಿಯುತ್ತಿದ್ದುದೂ ಇದೆ. ಹಿಂದಿನ ಕಾಲದ ಬ್ಯಾರಿಗಳ ಮನೆಯ ಕೋಳಿ ಪದಾರ್ಥ ನೆನೆಯುವಾಗೆಲ್ಲಾ ನನಗೆ ಕನ್ನಡದ ಕೋಳಿಯನ್ನು ಕೇಳಿ ಮಸಾಲೆ ಅರೆಯುವುದುಂಟೇ... ಎಂಬ ಮಾತು ನೆನಪಿಗೆ ಬರುತ್ತದೆ. ಒಂದರ್ಥದಲ್ಲಿ ನಮ್ಮ ಬಾಲ್ಯದ ಕೋಳಿ ಪದಾರ್ಥದ ಕತೆ ಹಾಗೆಯೇ ಇತ್ತು.
ನಾನು ಬಾಲಕನಾಗಿದ್ದಾಗೊಮ್ಮೆ ಮನೆಗೆ ನೆಂಟರು ಬಂದರೆಂದು ಸಂಜೆಯ ಹೊತ್ತಿಗೆ ಅಮ್ಮ ಅಂಗಳಕ್ಕೆ ಅಕ್ಕಿ ಕಾಳುಗಳನ್ನೆಸೆದು ಕೋಳಿಗಳನ್ನು ಹತ್ತಿರ ಸೆಳೆಯುತ್ತಿದ್ದರು. ಅಕ್ಕಿ ಕಾಳುಗಳನ್ನು ತಿನ್ನಲೆಂದು ಕೋಳಿಗಳು ತನ್ನ ಎಂದಿನ ಬಿಂಕ ಬಿನ್ನಾಣಗಳೊಂದಿಗೆ ಬಂದವು. ಅವು ಅಕ್ಕಿ ಕಾಳು ಮೆಲ್ಲುವುದರಲ್ಲಿ ತಲ್ಲೀಣವಾಗಿದ್ದಾಗ ಅಮ್ಮ ಕೈಯಲ್ಲಿ ಬೆತ್ತದ ಬುಟ್ಟಿ ಹಿಡಿದುಕೊಂಡು ಮೆಲ್ಲ ಮೆಲ್ಲನೇ ಕಳ್ಳ ಹೆಜ್ಜೆಗಳನ್ನಿಡುತ್ತಾ ಹೋಗಿ ಒಂದು ಲಾಕಿ ಕೋಳಿಯನ್ನು (ಹೇಂಟೆ) ಬುಟ್ಟಿಯೊಳಗೆ ಮುಚ್ಚಿಯೇ ಬಿಟ್ಟರು. ಆ ಬಳಿಕ ಬುಟ್ಟಿಯ ಒಂದು ಬದಿಯನ್ನು ಒಂದೆರಡು ಇಂಚಿನಷ್ಟು ಮೇಲಕ್ಕೆತ್ತಿ ಕೈಯನ್ನು ಒಳತೂರಿ ಆ ಲಾಕಿಯನ್ನು ಹಿಡಿದು ತಂಗೀಸಿನ ಚೀಲವೊಂದಕ್ಕೆ ಹಾಕಿ ಚೀಲದ ಬಾಯಿಯನ್ನು ಗಂಟು ಹಾಕಿ ಹಿಡಿದು ಕಟ್ಟಿದರು.
ಬಳಿಕ ನನ್ನನ್ನು ಕರೆದು ‘‘ಮುಕ್ರಿಕನ ಬಳಿ ಕೊಯ್ಯಿಸಿ (ಹಲಾಲ್ ಮಾಡಿಸಿ) ಬಾ’’ ಎಂದು ಕೊಟ್ಟರು. ನಾನು ಕೋಳಿಯನ್ನು ಹಾಕಿದ್ದ ಚೀಲವನ್ನು ಹೆಗಲ ಮೇಲೊಮ್ಮೆ, ಬಲಗೈ ಯಲ್ಲಿ ನೇತಾಡಿಸುತ್ತಾ ಇನ್ನೊಮ್ಮೆ, ಚೀಲವನ್ನು ಬಲಗೈಯಿಂದ ಎಡಗೈಗೆ ವರ್ಗಾಯಿಸಿ ಮತ್ತೊಮ್ಮೆ.. ಹೀಗೆ ಆಟವಾಡುತ್ತಾ ಮಸೀದಿಯತ್ತ ಹೋಗಬೇಕಾದರೆ ಚೀಲ ಕೈಯಿಂದ ತಪ್ಪಿ ಕೆಳಬಿತ್ತು. ಚೀಲದ ಬಾಯಿಗೆ ಹಾಕಿದ್ದ ಗಂಟು ಬಿಚ್ಚಿತು. ಕೋಳಿಯೋ ಬದುಕುಳಿದರೆ ಎಲ್ಲಾದರೂ ಬೇಡಿ ತಿಂದೇನು ಎಂದು ಓಡಬೇಕೇ... ಹಾಗೆ ನನ್ನ ಕೈಯಿಂದ ತಪ್ಪಿಸಿ ಓಡಿದ ಕೋಳಿ ನಮ್ಮೂರಿನ ಅಚ್ಯುತ ಚೂತರರ ಗುಡ್ಡೆಯತ್ತ ಓಡಿತು. ನಾನು ಅದನ್ನು ಹಿಂಬಾಲಿಸುತ್ತಾ ಓಡಿ ಓಡಿ ಸುಸ್ತಾದೆ. ಆದರೂ ಹಟ ಬಿಡದೇ ಅಟ್ಟಿಸಿ ಕೊಂಡು ಹೋದೆ. ಕೋಳಿ ಹಾರಿ ಮರವೊಂದರ ಮೇಲೆ ಕೂತಿತು. ನಾನೂ ಮರವೇರಿದೆ. ಕೋಳಿ ಮರದ ಕೊಂಬೆಯಿಂದ ಜಿಗಿದು ಮತ್ತೆ ಓಡಿತು. ಓಡಿ ಓಡಿ ಸುಸ್ತಾಗಿದ್ದ ನಾನು ಅನ್ಯದಾರಿ ಕಾಣದೇ ಏದುಸಿರು ಬಿಡುತ್ತಾ ಅಳುತ್ತಾ ಮನೆಗೆ ಮರಳಿದೆ. ಅಮ್ಮ ಕೋಳಿ ಎಲ್ಲಿ ಮಾರಾಯ ಎಂದು ಕೇಳಿದಾಗ ಜೋರಾಗಿ ಅಳುತ್ತಾ ಕೋಳಿ ತಪ್ಪಿಸಿ ಓಡಿತು ಎಂದೆ. ನನ್ನ ಉಪಟಳ ಸಹಿಸಲಾರದೇ ಸದಾ ಪುಲಿರೆ ಅಡರಿನಲ್ಲಿ (ಹುಣಸೆ ಮರದ ಬೆತ್ತದಲ್ಲಿ ) ರಪ ರಪ ಬಾರಿಸುತ್ತಿದ್ದ ನನ್ನಮ್ಮ ಅಂದು ಮನೆಯಲ್ಲಿ ನೆಂಟರಿದ್ದುದರಿಂದ ಹಲ್ಲು ಕಡಿಯುತ್ತಾ ಸಿಟ್ಟನ್ನು ಕಷ್ಟಪಟ್ಟು ನುಂಗಿ ನೀನು ಅಟವಾಡುತ್ತಾ ಹೋಗಿರಬೇಕು ಎಂದು ಒಂದಷ್ಟು ಹೊತ್ತು ಪಿರಿ ಪಿರಿ ಮಾಡಿದರೇ ಹೊರತು ಹೊಡೆಯಲಿಲ್ಲ. ನಾನೂ ನಿರಾಶೆಯಿಂದ ಅಳುತ್ತಾ ಮನೆಯ ಹಿಂಬಾಗಿಲಿನತ್ತ ಬರಬೇಕಾದರೆ ಏನಾಶ್ಚರ್ಯ...!! ಕೋಳಿ ತೆರೆದಿದ್ದ ತನ್ನ ಗೂಡಿನತ್ತ ಸಾಗುತ್ತಿತ್ತು. ಅದನ್ನು ಕಂಡ ಅದರ ಸಂಗಾತಿಗಳು ಕೊಕ್ಕೊಕ್ಕೋ...ಎನ್ನುತ್ತಾ ಅದನ್ನು ಸ್ವಾಗತಿಸುತ್ತಿತ್ತು. ನಾನು ಒಂದೇ ಉಸಿರಿಗೆ ಜಗಲಿಯಿಂದ ಜಿಗಿದು ಆ ಕೋಳಿಯನ್ನು ಹಿಡಿದೇ ಬಿಟ್ಟೆ... ನನಗಾದ ಸಂತಸಕ್ಕೆ ಪಾರವೇ ಇರಲಿಲ್ಲ.
ಆಗಲೇ ನೇಸರ ಪಡುವಣದತ್ತ ಸಾಗುತ್ತಿದ್ದ.ಆದರೆ ನಾನು ಹೊತ್ತು ಲೆಕ್ಕಿಸದೇ ಕೋಳಿಯನ್ನು ಮತ್ತೆ ಚೀಲಕ್ಕೆ ತುಂಬಿಸಿ ಮಸೀದಿಯತ್ತ ಓಡಿಯೇ ಬಿಟ್ಟೆ.
ಹೀಗೆ ಬ್ಯಾರಿಗಳ ಕೋಳಿಸಾರಿನ ಪುರಾಣ ಹೇಳಿದಷ್ಟು ಮುಗಿಯದು.