ನಟ ಚೇತನ್-ಮೇಘ ವಿವಾಹ: ಮದುವೆ ಜೊತೆ ಮಕ್ಕಳಿಗೊಂದು ಸೂರು !
ಅನಾಥಶ್ರಮದ ಮಕ್ಕಳಲ್ಲಿ ಮಂದಹಾಸ ಮೂಡಿಸಿದ ನವ ಜೋಡಿ
ಬೆಂಗಳೂರು, ಫೆ.2: ಮದುವೆ ಎಂದರೆ, ಇಂದಿನ ಕಾಲಕ್ಕೆ ದುಬಾರಿ. ಒಂದಿಷ್ಟು ಹಣ ಉಳ್ಳವರು ಸಹ ಖರ್ಚು ಮಾಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇದರಿಂದ ಆಗುವ ಪ್ರಯೋಜನ ಲೆಕ್ಕಕ್ಕೆ ಇಲ್ಲದಿದ್ದರೂ, ಪ್ರಚಾರ ಮಾತ್ರ ದೊರೆಯುತ್ತದೆ. ಆದರೆ, ಇದರ ನಡುವೆ, ಚಿಂತಕ, ನಟ ಚೇತನ್ ಅಹಿಂಸಾ ಅವರ ಮದುವೆ ವಿಭಿನ್ನವಾದರೂ, ಮಕ್ಕಳಿಗೊಂದು ಗಟ್ಟಿಯಾದ ಸೂರು ಸಿಕ್ಕಿರುವುದು ಸುಳ್ಳಲ್ಲ.
ರವಿವಾರ(ಫೆ.2) ಬೆಂಗಳೂರಿನ ಕುಮಾರಕೃಪಾ ವ್ಯಾಪ್ತಿಯಲ್ಲಿನ ವಲ್ಲಭ ನಿಕೇತನ (ಅನಾಥಶ್ರಮ)ದ ಆವರಣದಲ್ಲಿ ವಿವಾಹದ ಸಂತೋಷ ಕೂಟವನ್ನು ಆಯೋಜಿಸಲಾಗಿತ್ತು. ಇದಕ್ಕಾಗಿ ಕಳೆದ ಇಪ್ಪತ್ತು ದಿನಗಳಿಂದ ಆವರಣದ ತಡೆಗೋಡೆ ನಿರ್ಮಾಣ ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸಲು ನವ ದಂಪತಿಗಳಾದ ಚೇತನ್-ಮೇಘ ಶ್ರಮಿಸಿದ್ದು, ಇಲ್ಲಿನ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿದೆ.
ತಡೆಗೋಡೆ-ಬಣ್ಣ: ವಲ್ಲಭ ನಿಕೇತನದ ಆವರಣದ ತಡೆಗೋಡೆ ಹಾಳಾಗಿದ್ದನ್ನು ಸರಿಪಡಿಸಿದ ನಂತರ, ಅದರ ಮೇಲೆ ಅಲೆಮಾರಿ ಸಮುದಾಯದ ಜೀವನ, ನಡೆದು ಬಂದ ಬಗೆ, ಹಳ್ಳಿಗಾಡಿನ ಸೊಗಡು, ಮಕ್ಕಳನ್ನು ಆಕರ್ಷಿಸುವ ಚಿತ್ರಗಳನ್ನು ಕಲಾವಿದರ ಜೊತೆಗೆ ದಂಪತಿ ರಚಿಸಿರುವುದು ನೋಡುಗರ ಗಮನ ಸೆಳೆಯುತ್ತಿವೆ.
ತಡೆಗೋಡೆ ಮಾತ್ರವಲ್ಲದೆ, ಅನಾಥಶ್ರಮದಲ್ಲಿ ನೆಲೆಸಿರುವ ನೂರಾರು ಮಕ್ಕಳಿಗೆ ಮಲಗುವ ಹಾಸಿಗೆಯನ್ನು ವಿತರಣೆ ಮಾಡಿದ್ದಾರೆ. ಅದೇ ರೀತಿ, ಹೊಸ ಬಟ್ಟೆಗಳು, ಆಟಿಕೆಗಳನ್ನು ಹಂಚಿದ್ದಾರೆ. ಇದೀಗ, ಈ ವಲ್ಲಭ ನಿಕೇತನ ಆವರಣವೂ ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ.
ಸಂವಿಧಾನ ಓದು: ಫೆ.1ರಂದು ಇಲ್ಲಿನ ಗಾಂಧಿನಗರದ ಉಪ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಚೇತನ್ ಮತ್ತು ಮೇಘ ವಿವಾಹವಾಗಿದ್ದರು. ಬಳಿಕ ‘ಸಂವಿಧಾನ ಪ್ರಸ್ತಾವನೆ’ ಓದು ಮೂಲಕ ಯಾವುದೇ ಆಡಂಬರ ಇಲ್ಲದೆ, ಸರಳವಾಗಿ ಬಾಳಬಂಧನಕ್ಕೆ ಒಳಗಾದರು.
‘ಬದಲಾವಣೆ ನಮ್ಮಿಂದ ಆಗಲಿ’
ಬದಲಾವಣೆ ಎನ್ನುವುದು ನಮ್ಮಿಂದ ಮೊದಲು ಶುರು ಆಗಬೇಕು ಎನ್ನುವುದೇ ನನ್ನ ಗಟ್ಟಿ ನಿಲುವು. ಹಲವು ಜನ ಗಣ್ಯರ ಮದುವೆಗಳನ್ನು ನೋಡಿ, ನಾವು ಇದೇ ಮಾದರಿಯಲ್ಲಿ ಮಾಡಬೇಕು ಎನ್ನುತ್ತಾರೆ. ಇನ್ನು, ಬಡವರು ಸಹ ಸಾಲ ಮಾಡಿಯಾದರೂ, ಅದ್ದೂರಿ ವಿವಾಹ ಮಾಡಬೇಕೆನ್ನುತ್ತಾರೆ. ಆದರೆ, ನಮ್ಮ ಮನೆಯ ಸುತ್ತಮುತ್ತಿನ ಸಮಸ್ಯೆಗಳಿಗೂ ವಿವಾಹದ ಹಣದಲ್ಲಿ ಪರಿಹಾರ ಒದಗಿಸಬೇಕು ಎನ್ನುವ ಅರಿವು ಇರುವುದಿಲ್ಲ. ಇದನ್ನು ಬದಲಾಯಿಸಬೇಕು. ಹೀಗಾಗಿಯೇ, ನಮ್ಮ ಮನೆಯ ಸಮೀಪದ ಅನಾಥಶ್ರಮದಲ್ಲಿ ವಿವಾಹವಾಗುತ್ತಿದ್ದು, ಇಲ್ಲಿನ ವಾತಾವರಣವನ್ನು ಬದಲಾವಣೆ ಮಾಡಲಾಗಿದೆ.
-ಚೇತನ್ ಅಹಿಂಸಾ, ನಟ, ಹೋರಾಟಗಾರ
‘ನೆನಪು ಉಳಿಸಿದ ಚೇತನ್’
ಬಳಷ್ಟು ಮಂದಿ ತಮ್ಮ ಹುಟ್ಟುಹಬ್ಬ ಅಥವಾ ಇತರೆ ವ್ಯಕ್ತಿಗಳ ನೆನಪಿನಲ್ಲಿ ಅನಾಥಶ್ರಮಕ್ಕೆ ಬರುತ್ತಿದ್ದರು. ಒಂದಷ್ಟು ಸಮಯ ಕುಳಿತು, ಮೊಬೈಲ್ನಲ್ಲಿ ಫೋಟೋ ತೆಗೆದುಕೊಂಡು ಒಂದು ಹೊತ್ತಿನ ಊಟ ನೀಡುತ್ತಿದ್ದರು. ಆದರೆ, ಚೇತನ್ ಅವರು ಇಲ್ಲಿಯೇ ವಿವಾಹ ಆಗುವ ಮೂಲಕ ಇಲ್ಲಿನ ವಾತಾವರಣವನ್ನೇ ಬದಲಾಯಿಸಿ ನೆನಪಿನಲ್ಲಿ ಇರುತ್ತಾರೆ.
-ಶರಣ್, ವಲ್ಲಭ ನಿಕೇತನ ಬಾಲಕ
ಗಮನ ಸೆಳೆದ ಸಂತೋಷ ಕೂಟ
ರವಿವಾರ ಇಲ್ಲಿನ ಕುಮಾರಕೃಪಾ ವ್ಯಾಪ್ತಿಯಲ್ಲಿನ ವಲ್ಲಭ ನಿಕೇತನ (ಅನಾಥಶ್ರಮ)ದ ಆವರಣದಲ್ಲಿ ನಡೆದ ಚೇತನ್ ಮತ್ತು ಮೇಘ ಮದುವೆಯ ಸಂತೋಷ ಕೂಟವು ಹಲವು ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು.
ವಚನ ಪಠಣ, ಸೂಫಿ ಗಾಯನ, ಸಿದ್ಧ ಜನಾಂಗದ ನೃತ್ಯ, ಲಂಬಾಣಿ ಸಮುದಾಯದ ಪಾರಂಪರಿಕ ನೃತ್ಯ, ಕೊರಗ ನೃತ್ಯವೂ ಅಥಿತಿಗಳ ಗಮನ ಸೆಳೆಯಿತು. ಅದೇ ರೀತಿ, ವಿವಿಧ ಪುಸ್ತಕಗಳ ಪ್ರದರ್ಶನ, ವಿವಿಧ ಗಣ್ಯರ ಮನದ ಮಾತುಗಳು ಬಹುತ್ವದ ಸಂದೇಶ ಸಾರಿತು.