ಕಿತ್ತಳೆಬಣ್ಣದ ಆಕಾಶ ಹಾಗೂ ಅಪಾಯದ ಮುನ್ಸೂಚನೆಗಳು
ಆಸ್ಟ್ರೇಲಿಯದಲ್ಲಿ ಹೊತ್ತಿಉರಿಯುತ್ತಿರುವ ಬೃಹತ್ ಕಾಡ್ಗಿಚ್ಚು, ಹವಾಮಾನ ಬಿಕಟ್ಟು ಎಂದರೇನೆಂಬುದನ್ನು ತೋರಿಸಿಕೊಡುತ್ತಿದೆ.
ಕಾಳ್ಗಿಚ್ಚೆಂಬುದು ಆಸ್ಟ್ರೇಲಿಯದ ಸಾಂಪ್ರದಾಯಿಕ ಕಥನಗಳ ಭಾಗವೇ ಆಗಿಬಿಟ್ಟಿದೆ. ಅಲ್ಲಿನ ಜಾನಪದದ ಕಥಾನಕಗಳ ಅವಿಭಾಜ್ಯ ಅಂಗವೂ ಆಗಿದೆ. ಆದರೆ ಹವಾಮಾನ ಬಿಕ್ಕಟ್ಟಿನಿಂದಾಗಿ ಆ ಸಹಜ ಕಥನಗಳು ಮರೆಯಾಗುತ್ತ ಕಾಡ್ಗಿಚ್ಚ್ಚುಗಳು ವಿನಾಶಕಾರಿ ಮತ್ತು ಪರಿಸರ ವ್ಯವಸ್ಥೆ ಮತ್ತೆ ಪುನರುಜ್ಜೀವನಗೊಳ್ಳದಷ್ಟು ಅನರ್ಥಕಾರಿ ಎಂಬ ಕಥನಗಳು ಕಾಣಿಸಿಕೊಳ್ಳುತ್ತಿವೆ. 2019ರ ಆಗಸ್ಟ್ ಪ್ರಾರಂಭದಿಂದಲೇ ಅಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ವೇಗ ಮತ್ತು ತೀವ್ರತೆಗಳೊಂದಿಗೆ ಕಾಡ್ಗಿಚ್ಚಿನ ಋತು ಪ್ರಾರಂಭವಾಗಿಬಿಟ್ಟಿತು. ಅದರ ಜೊತೆಗೆ ಈ ಬಾರಿ ಆಸ್ಟ್ರೇಲಿಯ ಅತ್ಯಂತ ಬಿಸಿ ಹಾಗೂ ಒಣ ವಾತಾವರಣವನ್ನೂ ಅನುಭವಿಸಿತು. ಜಗತ್ತಿನ ಉಳಿದ ಭಾಗಗಳು ಕೈಗಾರಿಕಾಪೂರ್ವ ಅವಧಿಯ ತಾಪಮಾನಕ್ಕಿಂತ ಸರಾಸರಿ 1.1 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಹೆಚ್ಚಿನ ತಾಪಮಾನವನ್ನು ಅನುಭವಿಸುತ್ತಿದ್ದರೆ ಕಾಡ್ಗಿಚ್ಚಿಗೆ ಮುಂಚೆ ಆಸ್ಟ್ರೇಲಿಯ 1.4 ಡಿಗ್ರಿಯಷ್ಟು ಹೆಚ್ಚಿನ ತಾಪಮಾನವನ್ನು ಎದುರಿಸಿತು.
ಆಸ್ಟ್ರೇಲಿಯದ ಬೇಸಿಗೆ ಕಾಲದ ಸರಾಸರಿ ತಾಪಮಾನ ಹೆಚ್ಚುತ್ತಿರುವಂತೆ ಇಡೀ ದೇಶದಲ್ಲಿ ಹೆಚ್ಚೆಚ್ಚು ಸಾರಿ ಮತ್ತು ಹೆಚ್ಚಿನ ತೀವ್ರತೆಗಳಲ್ಲಿ ಬಿಸಿಗಾಳಿ ಮತ್ತು ಬರಗಳು ಕೂಡಾ ಸಂಭವಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ದೇಶದ ಬಹುಭಾಗ ಬರವನ್ನು ಅನುಭವಿಸುತ್ತಿದೆ ಮತ್ತು ಸರಾಸರಿ ಮಳೆಯ ಪ್ರಮಾಣವೂ ಸಹ ದೇಶದಲ್ಲಿ ಇಳಿಕೆಯಾಗುತ್ತಿದೆ. ಇದರ ಜೊತೆಗೆ ಆಸ್ಟ್ರೇಲಿಯದ ಪಶ್ಚಿಮ ಭಾಗದಲ್ಲಿ ಹೆಚ್ಚಿದ ಸಮುದ್ರ ಮೇಲ್ಮೈ ತಾಪಮಾನವು ಬರಗಳಿಗೆ ಕಾರಣವಾಗುವಂತಹ ಹಾಗೂ ಪೂರ್ವ ಆಫ್ರಿಕಾದ ಕಡೆ ತಣ್ಣಗಿನ ಸಮುದ್ರ ಮೇಲ್ಮೈ ತಾಪಮಾನದಿಂದಾಗಿ ಪ್ರವಾಹವು ಉಂಟಾಗುವಂತಹ ತದ್ವಿರುದ್ಧ ಸಾಗರ ವಿದ್ಯಮಾನಗಳು 2019ರಲ್ಲಿ ಹಿಂದೆಂದಿಗಿಂತಲೂ ಬಲವಾಗಿ ಕಂಡುಬಂದಿತು.
ಈ ಪರಿಸ್ಥಿತಿಗಳು ಆಸ್ಟ್ರೇಲಿಯದ ಆಗ್ನೇಯ ಭಾಗದಲ್ಲಿ ಅದರಲ್ಲೂ ಪ್ರಧಾನವಾಗಿ ನ್ಯೂ ಸೌತ್ ವೇಲ್ಸ್ ಮತ್ತು ವಿಕ್ಟೋರಿಯಾಗಳಿಂದ ಹಿಡಿದು ಕ್ವೀನ್ಸ್‌ಲ್ಯಾಂಡ್ ವರೆಗೆ ನೂರಾರು ಕಾಡ್ಗಿಚ್ಚುಗಳಿಗೆ ಕಾರಣವಾಯಿತು. ಕೆಲವೊಮ್ಮೆ ಕಾಡ್ಗಿಚ್ಚಿನ ಜ್ವಾಲೆಯು 200 ಅಡಿಗಳಷ್ಟು ಎತ್ತರಕ್ಕೆ ವ್ಯಾಪಿಸುತ್ತಿತ್ತು. ಇದು ಆ ದೇಶದ ಒಂದು ಕೋಟಿ ಎಕರೆಗೂ ಹೆಚ್ಚು ಅರಣ್ಯಭೂಮಿಯನ್ನು ಸುಟ್ಟುಹಾಕಿದೆ. ಈ ಕಾರಣದಿಂದಾಗಿ ಸಾವಿರಾರು ಜನ ಸುರಕ್ಷಿತ ಪ್ರದೇಶಗಳನ್ನು ಅರಸುತ್ತಾ ಸಮುದ್ರದ ದಂಡೆಗಳಿಗೆ ತಲುಪಿದ್ದಾರೆ. ಅಂದಾಜು ನೂರು ಕೋಟಿಗೂ ಹೆಚ್ಚು ಕಾಡುಪ್ರಾಣಿಗಳು ಸತ್ತಿವೆ ಅಥವಾ ಸುಟ್ಟುಗಾಯಗಳಿಗೆ ಬಲಿಯಾಗಿವೆ. ಇದು ಪ್ರಳಯದಂತಹ ವಾತಾವರಣವನ್ನು ಅಲ್ಲಿ ಸೃಷ್ಟಿಸಿದೆ. ಕಾಂಗರೂ ದ್ವೀಪಗಳಂತಹ ಪ್ರದೇಶಗಳಲ್ಲಿ ಸುಟ್ಟುಕರಕಲಾದ ಸಾವಿರಾರು ಕಾಂಗರೂಗಳ ಚಿತ್ರಗಳು ಬರುತ್ತಲಿವೆ. ಈಗಾಗಲೇ ಅಳಿವಿನಂಚಿನಲ್ಲಿದ್ದ ಜೀವಜಂತುಗಳು ಸರ್ವನಾಶದ ಅಂಚಿಗೆ ತಲುಪಿದ್ದರೆ ಇನ್ನು ಕೆಲವು ಬಗೆಯ ಜೀವಜಂತುಗಳು ಅಳಿವಿನಂಚಿಗೆ ಬಂದು ತಲುಪಿವೆ. ಹಾಲಿ ಆಸ್ಟ್ರೇಲಿಯದ ಕಾಡ್ಗಿಚ್ಚು ಮಾಡಿರುವ ಅನಾಹುತದ ಪ್ರಮಾಣ ಮತ್ತು ತೀವ್ರತೆಗಳ ಮುಂದೆ ಈ ಹಿಂದೆ ಬ್ರೆಝಿಲ್‌ನ ಅಮೆಜಾನ್ ಕಾಡುಗಳಲ್ಲಿ ಮತ್ತು ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಅನಾಹುತಗಳು ಸಣ್ಣದೆನಿಸಿಬಿಟ್ಟಿವೆ.
ಈ ಕಾಡ್ಗಿಚ್ಚು ಹಲವಾರು ಬೆಲೆಬಾಳುವ ಹಣ್ಣಿನ ಮರಗಳಿದ್ದಂತಹ ನೂರಾರು ಹಣ್ಣಿನ ತೋಟಗಳನ್ನೂ ಒಳಗೊಂಡಂತೆ ಹಲವಾರು ಸಣ್ಣಪುಟ್ಟ ಉದ್ಯಮಗಳಿಗೂ, ಕೃಷಿ ಮತ್ತು ಪ್ರವಾಸೋದ್ಯಮಕ್ಕೂ ತೀವ್ರವಾಗಿ ಹಾನಿಯುಂಟು ಮಾಡಿದೆ. ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ ಸಂಭವಿಸಿದ ಈ ಕಾಡ್ಗಿಚ್ಚು ಒಂದು ಬಗೆಯ ವಿಷವೃತ್ತವನ್ನೇ ಸೃಷ್ಟಿಸಿದೆ. ಏಕೆಂದರೆ ಈ ಕಾಡ್ಗಿಚ್ಚಿನಿಂದಾಗಿ ಬಿಡುಗಡೆಯಾಗಿರುವ 40 ಕೋಟಿ ಮೆಟ್ರಿಕ್ ಟನ್‌ನಷ್ಟು ಇಂಗಾಲದ ಡೈಯಾಕ್ಸೈಡ್‌ನ್ನು ಮತ್ತೆ ನುಂಗುವಷ್ಟು ಕಾಡನ್ನು ಸೃಷ್ಟಿಸಿಕೊಳ್ಳಲು ಹಲವಾರು ದಶಕಗಳೇ ಬೇಕಾಗಬಹುದು. ಇದರ ಜೊತೆಗೆ ಈ ಕಾಡ್ಗಿಚ್ಚು ತನ್ನದೇ ಆದ ಅಪಾಯಕಾರಿ ವಾತಾವರಣ ವ್ಯವಸ್ಥೆಯನ್ನೂ ಸೃಷ್ಟಿಸಿಬಿಟ್ಟಿದೆ. ಕಾಡ್ಗಿಚ್ಚಿನಿಂದ ಹೊರಹೊಮ್ಮಿದ ಅಪಾರ ಹೊಗೆಮೋಡಗಳು ಗುಡುಗು-ಸಿಡಿಲು ಸಹಿತ ಮಳೆಗಳಿಗೆ ಕಾರಣವಾಗುತ್ತಿದ್ದು ಮತ್ತಷ್ಟು ಬೆಂಕಿ ಮತ್ತು ಉರಿಬೆಂಕಿಯ ಮಾರುತಗಳನ್ನು ಉಂಟುಮಾಡುತ್ತಿವೆ. ಜೊತೆಗೆ ಜನವರಿಯ ಮಧ್ಯಭಾಗದಿಂದ ಧೂಳಿನ ಬಿರುಗಾಳಿಗಳು, ಚೆಂಡುಗಾತ್ರದ ಆಲಿಕಲ್ಲು ಮಳೆ, ದಿಢೀರ್ ಪ್ರವಾಹಗಳೂ ಸಂಭವಿಸುತ್ತಿವೆ. ಕಾಡ್ಗಿಚ್ಚಿಗೆ ನೇರವಾಗಿ ಗುರಿಯಾಗದ ಪಟ್ಟಣಗಳ ಮೇಲೂ ದಪ್ಪ ಗಾತ್ರದ ಕೆಂಪುಧೂಳಿನಿಂದ ಕೂಡಿದ ಮೋಡಗಳು ಆವರಿಸುತ್ತಾ ಇಡೀ ದೇಶವನ್ನು ಮನುಷ್ಯರು ವಾಸಿಸಲು ಅಸಾಧ್ಯವಾದ ಪ್ರದೇಶವನ್ನಾಗಿ ಪರಿವರ್ತಿಸುತ್ತಿದೆ. ಈ ವಿನಾಶವು ಉಂಟುಮಾಡಿರುವ ತಾಪಕ್ಕೆ ಬಲಿಯಾಗಿ ಆಕ್ರೋಶಗೊಂಡಿರುವ ನಾಗರಿಕರು ‘‘ನಾವು ಬೆಂಕಿಗೆ ಬಲಿಯಾಗುತ್ತಿದ್ದೇವೆ. ಈಗಲಾದರೂ ಪಾಠ ಕಲಿಯುತ್ತೀರಾ’’ ಎಂಬ ಘೋಷಣೆಗಳನ್ನು ರಾಜಕಾರಣಿಗಳ ಮುಖಕ್ಕೆ ಹಿಡಿಯುತ್ತಿದ್ದಾರೆ. ಆ ಪ್ರಶ್ನೆಯನ್ನು ಇಡೀ ಜಗತ್ತೇ ಕೇಳಿಕೊಳ್ಳಬೇಕಿದೆ. ಜಾಗತಿಕ ತಾಪಮಾನ ಹೀಗೆ ಏರುತ್ತಾ ಹೋದಲ್ಲಿ ಈ ಭೂಗ್ರಹದ ಭವಿಷ್ಯವೇನು? ಪ್ಯಾರಿಸ್ ಒಪ್ಪಂದದ ಭಾಗವಾಗಿ ಒಂದು ವೇಳೆ ಇಡೀ ಜಗತ್ತೇ ಅದರ ಶರತ್ತನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತಂದರೂ ಜಾಗತಿಕ ತಾಪಮಾನದ ಏರಿಕೆಯನ್ನು 2 ಡಿಗ್ರಿ ಸೆಂಟಿಗ್ರೇಡಿಗೆ ಕಡಿತಗೊಳಿಸಿರುವುದು ಕಷ್ಟವಾಗಲಿದೆ. ಆಸ್ಟ್ರೇಲಿಯವನ್ನು ಒಳಗೊಂಡಂತೆ ಬಹುಪಾಲು ಶ್ರೀಮಂತ ದೇಶಗಳು ಈ ಒಪ್ಪಂದವನ್ನು ಪಾಲಿಸಲಾಗದು ಎಂದು ಘೋಷಿಸಿವೆ. ಈಗ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನ ಬಗ್ಗೆ ಈಗಾಗಲೇ ಹಲವಾರು ಮುನ್ಸೂಚನೆಗಳು ಕಂಡುಬಂದಿದ್ದರೂ ಈಗಲೂ ಜಗತ್ತಿನಲ್ಲೇ ಅತಿ ಹೆಚ್ಚು ತಲಾವಾರು ಮಾಲಿನ್ಯವನ್ನು ಹೊಂದಿರುವ ರಾಷ್ಟ್ರಗಳಲ್ಲಿ ಆಸ್ಟ್ರೇಲಿಯವು ಮುಂಚೂಣಿ ರಾಷ್ಟ್ರವಾಗಿಯೇ ಮುಂದುವರಿದಿದೆ.
ಹವಾಮಾನ ಬದಲಾವಣೆಯ ಕುರಿತಾದ ಸರಕಾರಗಳ ವೇದಿಕೆಯ ಹವಾಮಾನ ಬದಲಾವಣೆಯಿಂದಾಗಿ ಪದೇ ಪದೇ ಸಂಭವಿಸುತ್ತಿರುವ ಕಾಡ್ಗಿಚ್ಚುಗಳ ಬಗ್ಗೆ ಆಸ್ಟ್ರೇಲಿಯಗೆ 2007ರ ತನ್ನ ಅಂದಾಜು ವರದಿಗಳಿಂದಲೂ ಮೊದಲುಗೊಂಡು ಎಚ್ಚರಿಕೆ ಕೊಡುತ್ತಲೇ ಇತ್ತು ಎನ್ನಲಾಗಿದೆ. ಕ್ಯೋಟೊ ಒಪ್ಪಂದದಿಂದ ಪಡೆದುಕೊಂಡ ಕಾರ್ಬನ್ ಕ್ರೆಡಿಟ್‌ಗಳನ್ನು ಬಳಸಿಕೊಂಡು ಅಂತರ್‌ರಾಷ್ಟ್ರೀಯ ಹವಾಮಾನ ಒಪ್ಪಂದಗಳಿಗೆ ದ್ರೋಹ ಬಗೆದು ಅದನ್ನು ಹಾಳುಗೆಡೆವಿದ್ದಕ್ಕಾಗಿ 2019ರ ಡಿಸೆಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ 25ನೇ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಇತರ ದೇಶಗಳು ಆಸ್ಟ್ರೇಲಿಯವನ್ನು ತರಾಟೆಗೆ ತೆಗೆದುಕೊಂಡಿದ್ದವು. ಆದರೆ ಆಸ್ಟ್ರೇಲಿಯದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಹವಾಮಾನ ಬಿಕ್ಕಟ್ಟಿದೆ ಎಂಬುದನ್ನೇ ತಿರಸ್ಕರಿಸುತ್ತಾರಲ್ಲದೆ ಅದನ್ನು ತಡೆಗಟ್ಟುವುದಕ್ಕೆ ಪೂರಕವಾಗಿ ತಮ್ಮ ದೇಶದ ಪೆಟ್ರೋ ತೈಲ ಬಳಕೆಯನ್ನು ಕಡಿಮೆ ಮಾಡುವುದಕ್ಕೆ ಸಿದ್ಧರಿಲ್ಲ. ಮಾತ್ರವಲ್ಲ. ತಮ್ಮ ದೇಶದಲ್ಲಿ ಉದ್ಯೋಗವನ್ನು ಕಡಿತಗೊಳಿಸುವುದಕ್ಕೆ ಕಾರಣವಾಗುವ ಯಾವ ಆಗ್ರಹಕ್ಕೂ ತಾವು ಮಣಿಯುವುದಿಲ್ಲ ಎಂದು ವಾದಿಸುತ್ತಾ ಕಲ್ಲಿದ್ದಲು ಉದ್ಯಮಕ್ಕೆ ತಾವು ಕೊಡುತ್ತಿರುವ ಬೆಂಬಲವನ್ನು ಸಮರ್ಥಿಸಿಕೊಂಡಿದ್ದರು. ಆಸ್ಟ್ರೇಲಿಯವು ಜಗತ್ತಿನ ಅತಿದೊಡ್ಡ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲವನ್ನು ರಫ್ತು ಮಾಡುವ ದೇಶಗಳಲ್ಲಿ ಒಂದು. ಉದ್ಯೋಗಗಳನ್ನು ಸೃಷ್ಟಿಸುವ ಹೆಸರಿನಲ್ಲಿ ಹೊರಗಿನ ಹೂಡಿಕೆದಾರರ ಬೆಂಬಲದೊಂದಿಗೆ ಆಸ್ಟ್ರೇಲಿಯದಲ್ಲಿ ತಲೆ ಎತ್ತುತ್ತಿರುವ ಅತಿ ದೊಡ್ಡ ಕಲ್ಲಿದ್ದಲು ಗಣಿ ಯೋಜನೆಯನ್ನು ಕ್ಲೈಮೇಟ್ ಕೌನ್ಸಿಲ್ ಎಂಬ ಸ್ವತಂತ್ರ ಹವಾಮಾನ ಬದಲಾವಣೆಯ ಸಂವಹನ ಸಂಸ್ಥೆಯೊಂದು ಸತತವಾಗಿ ವಿರೋಧಿಸಿಕೊಂಡು ಬಂದಿದೆ. ಈ ಕ್ಲೈಮೇಟ್ ಕೌನ್ಸಿಲ್ ಸಂಸ್ಥೆಯ ಪ್ರಕಾರ ಈ ಯೋಜನೆಯು ಹವಾಮಾನ ಬದಲಾವಣೆಗೆ ತೋರಬೇಕಾದ ಜವಾಬ್ದಾರಿಗೆ ತದ್ವಿರುದ್ಧವಾದ ಕ್ರಿಯೆಯಾಗಿದ್ದು ಪ್ರತಿವರ್ಷ ಅಂದಾಜು 1,200 ಕೋಟಿ ಲೀಟರ್ ನೀರನ್ನು ಕಬಳಿಸುವುದರ ಜೊತೆಗೆ ದೇಶದ ಇಂಗಾಲದ ಡಯಾಕ್ಸೈಡ್ ಮಾಲಿನ್ಯವನ್ನು 1.3ರಷ್ಟು ಹೆಚ್ಚಿಸುವುದರಿಂದ ಅದು ಒಂದು ಕಾರ್ಬನ್ ಬಾಂಬೇ ಆಗಿದೆ. ಈ ಪೆಟ್ರೋ ತೈಲ ಯೋಜನೆಗಳು ಉದ್ಯೋಗವನ್ನು ಸೃಷ್ಟಿಸುತ್ತದಾದ್ದರಿಂದ ಆ ಯೋಜನೆಗಳನ್ನು ಮುಂದುವರಿಸಬೇಕೆಂಬ ವಾದವನ್ನು ಇನ್ನಷ್ಟು ಹತ್ತಿರದಿಂದ ಪರಿಶೀಲಿಸಬೇಕಿದೆ: ಪ್ರಕೃತಿಯನ್ನು ಈ ಬಗೆಯಲ್ಲಿ ಶೋಷಣೆ ಮಾಡುವುದರಿಂದಾಗಿ ಹಲವರ ಜೀವನೋಪಾಯಗಳು ಹಾಳಾಗುವುದಲ್ಲದೆ ಉದ್ಯೋಗಗಳನ್ನು ಗಳಿಸಬಹುದಾದ ಇತರ ಪರ್ಯಾಯ ಮೂಲಗಳೂ ಬಂದ್ ಆಗುತ್ತವೆ. ಇದೊಂದು ಆತ್ಮ ವಿನಾಶಕ ವಾದವಾಗಿದೆ ಹಾಗೂ ಹವಾಮಾನ ಬಿಕ್ಕಟ್ಟು ಬೇಡುವಂತಹ ಹೊಣೆಗಾರಿಕೆಯನ್ನು ದೇಶದೊಳಗೂ ಹಾಗೂ ಹೊರಗೂ ನಿಭಾಯಿಸಬೇಕಾದ ನೈತಿಕತೆಯ ನಿರಾಕರಣೆಯೂ ಆಗಿದೆ. ಉಪಭೋಗಿ ಪ್ರಜ್ಞೆಯಿಂದಾಗಿ ಹುಟ್ಟಿಕೊಂಡಿರುವ ಜಡತೆ ಮತ್ತು ಸಂವೇದನಾಶೂನ್ಯತೆಯಿಂದ ಹೊರಬಂದು ವಿಭಿನ್ನ ಹವಾಮಾನ ಕಥನಗಳನ್ನು ರಚಿಸುವ ಸಮಯ ಬಂದಾಗಿದೆ.
ಕೃಪೆ: Economic and Political Weekly