ಆಯವ್ಯಯ 2020: ಜನಸಾಮಾನ್ಯರನ್ನು ಮತ್ತಷ್ಟು ಅತಂತ್ರತೆಗೆ ದೂಡುವ ಕಸರತ್ತು
ಸರಕಾರವು ತನ್ನ ಸಂಪನ್ಮೂಲ ಕ್ರೋಡೀಕರಣಕ್ಕೆ ಸಾರ್ವಜನಿಕ ಸಂಸ್ಥೆಗಳಲ್ಲಿರುವ ಸರಕಾರಿ ಹೂಡಿಕೆಗಳನ್ನು ವಾಪಾಸು ಪಡೆಯುವ ಇಲ್ಲವೇ ಸಾರ್ವಜನಿಕ ಸಂಸ್ಥೆಗಳನ್ನು ಪೂರ್ಣವಾಗಿ ಮಾರಾಟ ಮಾಡುವುದರ ಮೇಲೆ, ಸಾಲ ಪಡೆಯುವುದರ ಮೇಲೆ ನೆಚ್ಚಿಕೊಂಡಿದೆ. ಅದಕ್ಕಾಗಿ ಜೀವ ವಿಮಾ ನಿಗಮ, ಬಿಪಿಸಿಎಲ್ನ ತನ್ನ ಶೇರು ಬಂಡವಾಳವನ್ನು ಮಾರಾಟ ಮಾಡುವುದರ ಮೂಲಕ ಸುಮಾರು 2.1 ಲಕ್ಷ ಕೋಟಿ ರೂಪಾಯಿಗಳನ್ನು ಹೊಂದಿಸಿಕೊಳ್ಳುವ ಪ್ರಸ್ತಾವನೆಯನ್ನು ಆಯವ್ಯಯ ಹೊಂದಿದೆ. ರೈಲ್ವೆಯ ಸುಮಾರು 150ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳನ್ನು ಸಾರ್ವಜನಿಕ ಖಾಸಗಿ ಸಹಯೋಗದ ಹೆಸರಿನಲ್ಲಿ ಖಾಸಗೀಕರಿಸುವ ಗುರಿಯಿದೆ. ಅದೇ ವೇಳೆಯಲ್ಲಿ ಕಾರ್ಪೊರೇಟ್ ತೆರಿಗೆಯಲ್ಲಿ ಸುಮಾರು 1.5 ಲಕ್ಷ ಕೋಟಿ ರೂಪಾಯಿಗಳ ಕಡಿತವನ್ನು ಆಯವ್ಯಯ ಹೇಳುತ್ತದೆ. ಅಂದರೆ ಭಾರೀ ಕಾರ್ಪೊರೇಟ್ಗಳು ಪಾವತಿಸಬೇಕಾದ ತೆರಿಗೆಯನ್ನು ವಿನಾಯಿತಿಗೊಳಿಸುವ ಅಧಿಕೃತ ವಿಧಾನವಿದು.
2020ರ ಆಯವ್ಯಯ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮೂಲಕ ಮಂಡಿತವಾಗಿದೆ. ಅದಕ್ಕೂ ಒಂದೆರಡು ದಿನಗಳ ಮೊದಲು ಕೇಂದ್ರ ಸರಕಾರ ಇಂಡಿಯಾ ಆರ್ಥಿಕ ಸಮೀಕ್ಷೆಯೊಂದನ್ನು ಪ್ರಕಟಿಸಿತ್ತು. ಎರಡು ಭಾಗಗಳನ್ನು ಒಳಗೊಂಡಿರುವ ಈ ಆರ್ಥಿಕ ಸಮೀಕ್ಷೆಯಲ್ಲಿ ಪುರಾತನ ಇಂಡಿಯಾದ ಆರ್ಥಿಕತೆಯ ಬಗ್ಗೆ ಸಂಶೋಧಿತ ವಿಚಾರದ ಹೆಸರಲ್ಲಿ ಹಲವಾರು ಅತಿರಂಜಿತವಾಗಿರುವ, ಹುಸಿ ಪ್ರತಿಷ್ಠೆಯನ್ನು ಪ್ರಾಯೋಜಿಸುವ ವಿಚಾರಗಳನ್ನು ಹೇಳಲಾಗಿದೆ. ಪುರಾತನ ಇಂಡಿಯಾ (ಇಂಡಿಯಾ ಎಂಬ ದೇಶ ಆಗ ಇರಲಿಲ್ಲ ಎನ್ನುವುದನ್ನು ಮರೆಮಾಚಿ) ಇಡೀ ಜಗತ್ತಿಗೇ ಮಾದರಿಯಾಗಿ ಅಗ್ರಗಣ್ಯ ಸ್ಥಾನದಲ್ಲಿತ್ತು ಎಂದೆಲ್ಲಾ ಬಣ್ಣಿಸುತ್ತದೆ. ಆ ಸಮೀಕ್ಷೆಯ ಉದ್ದೇಶ ದಿವಾಳಿಯತ್ತ ಸಾಗುತ್ತಿರುವ ದೇಶದ ಆರ್ಥಿಕ ಸ್ಥಿತಿಯನ್ನು ಮರೆಮಾಚಿ ಸರಕಾರಕ್ಕೆ ಪೂರಕವಾಗಿ ಆಯವ್ಯಯಕ್ಕೆ ಪೂರ್ವಭಾವಿಯಾಗಿ ಜನಾಭಿಪ್ರಾಯ ರೂಪಿಸುವುದಾಗಿತ್ತು. ಆದರೆ ಏನೆಲ್ಲಾ ತಿಣಕಾಡಿದರೂ ಒಟ್ಟು ರಾಷ್ಟ್ರೀಯ ಉತ್ಪನ್ನದ ಬೆಳವಣಿಗೆ ಶೇ. 6ರಿಂದ 6.5ಕ್ಕೆ ಸೀಮಿತವಾಗಿಯೇ ನೋಡಬೇಕಾಗಿ ಬಂದಿದೆ. ದೇಶದ ಪ್ರಸ್ತುತ ಹೇಳಲಾಗುತ್ತಿರುವ 2.9ಟ್ರಿಲಿಯನ್ ಆರ್ಥಿಕತೆಯನ್ನು ಮುಂದಿನ ದಿನಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆಯತ್ತ ಕೊಂಡೊಯ್ಯುವ ಮಹದಾಂಕ್ಷೆಯ ಬಗ್ಗೆ ಬಹುರಂಜಿತವಾಗಿ ಹೇಳಿಕೊಳ್ಳಲು ಈ ಸಮೀಕ್ಷೆ ಪ್ರಯತ್ನಿಸಿದೆ. ಆದರೆ ಅದನ್ನು ಸಮರ್ಥಿಸಬಲ್ಲ ಅಂಶಗಳೇನು ಎನ್ನುವುದರತ್ತ ಗಮನ ಮಾತ್ರ ಹಾರಿಕೆಯದಾಗಿದೆ. ದೇಶ ಎದುರಿಸುತ್ತಿರುವ ಹಣಕಾಸು ಸಂಪನ್ಮೂಲ ಕೊರತೆಯ ಬಗ್ಗೆಯಾಗಲೀ, ಕೃಷಿ ಹಾಗೂ ಕೈಗಾರಿಕಾ ಬಿಕ್ಕಟ್ಟುಗಳ ನಿವಾರಣೆಗಳ ಬಗ್ಗೆಯಾಗಲೀ, ಪ್ರಸ್ತುತ ನಾಲ್ಕು ದಶಕಗಳ ದಾಖಲೆ ಮಟ್ಟದ ಸರಕಾರವೇ ಹೇಳುವಂತೆ ಶೇ 7.2ರಷ್ಟು ಪ್ರಮಾಣದ ನಿರುದ್ಯೋಗ ಸಮಸ್ಯೆಯ ಬಗ್ಗೆಯಾಗಲೀ, ದೇಶ ಈಗ ತಾಳಿಕೊಳ್ಳಲು ಹೆಣಗುತ್ತಿರುವ ಬಾಹ್ಯ ಹಾಗೂ ಆಂತರಿಕ ಸಾಲಗಳ ಹೊರೆಗಳನ್ನು ನಿವಾರಿಸಿಕೊಳ್ಳುವ ಬಗ್ಗೆಯಾಗಲೀ ಗಂಭೀರವಾಗಿ ನೋಡುವ ಪ್ರಯತ್ನ ಮಾಡುವುದಿಲ್ಲ.
ನಿರಂತರ ಇಳಿಮುಖ ಹಾಗೂ ನಕಾರಾತ್ಮಕವಾಗಿ ಸಾಗುತ್ತಿರುವ ದೇಶದ ಕೃಷಿ ಹಾಗೂ ಕೈಗಾರಿಕಾ ವಲಯಗಳ ಬೆಳವಣಿಗೆಗಳ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಮೀಕ್ಷೆ ತೇಪೆ ಸಾರಿಸುವ ಕಾರ್ಯ ಮಾಡಿದೆ. ಪ್ರಧಾನಿ ಮೋದಿ ಕೃಷಿ ವಲಯಕ್ಕೆ ಭಾರೀ ಕೊಡುಗೆಯೆಂಬಂತೆ ಬಿಂಬಿಸಿ ಹೇಳಿದ್ದ 2022ರ ವೇಳೆಗೆ ರೈತರ ತಲಾ ಆದಾಯ ದುಪ್ಪಟ್ಟು ಮಾಡಲಾಗುವುದು ಎನ್ನುವುದು ಸಾಕಾರವಾಗಬೇಕಾದರೆ ದೇಶದ ಆರ್ಥಿಕತೆಯಲ್ಲಿ ಎರಡಂಕಿಯ ಬೆಳವಣಿಗೆ ಆಗಬೇಕೆಂದು ಹಲವು ವರದಿಗಳು ಹೇಳುತ್ತವೆ. ಆದರೆ ಆರ್ಥಿಕ ಸಮೀಕ್ಷೆ 2019-20 ಕೃಷಿ ಬೆಳವಣಿಗೆಯನ್ನು ಪ್ರಸ್ತುತ ಇದೆಯೆಂದು ಈಗ ಹೇಳಲಾಗುತ್ತಿರುವ ಶೇ. 2.9ರ ಬೆಳವಣಿಗೆಗಿಂತಲೂ ಶೇ. 2.8ಕ್ಕೆ ಕಡಿತಗೊಳಿಸಿ ನೋಡುತ್ತದೆ. ಅಲ್ಲಿಗೆ ಕೃಷಿಕರ ಆದಾಯ ದುಪ್ಪಟ್ಟಾಗುವ ಮಾತಿರಲಿ ಈಗಿನದಕ್ಕಿಂತಲೂ ಕಡಿತವಾಗುತ್ತದೆ ಎಂದೇ ಆಯಿತು. ಇನ್ನು ಕೈಗಾರಿಕಾ ಉತ್ಪಾದನೆಯನ್ನು ಕುಸಿತದಿಂದ ಮೇಲೆತ್ತುವ ಮಾತಾಡುತ್ತದೆಯಾದರೂ ಅದಕ್ಕೆ ಪೂರಕವಾದ ದತ್ತಾಂಶಗಳನ್ನು ಒದಗಿಸಲು ತಿಣುಕಾಡುತ್ತದೆ. ಕೃಷಿ ಬೆಳವಣಿಗೆಗೂ ಕೈಗಾರಿಕಾ ಬೆಳವಣಿಗೆಗೂ ನೇರವಾದ ಸಂಬಂಧವಿದೆ. ಹಾಗಾಗಿ ಈ ಎರಡೂ ವಲಯಗಳ ಬೆಳವಣಿಗೆಯ ಮೇಲೆಯೇ ಇತರ ಎಲ್ಲಾ ವಲಯಗಳ ಬೆಳವಣಿಗೆಗಳು ನಿಂತಿವೆ. ಆಹಾರ ಉತ್ಪಾದನೆ, ಹೈನು ಉತ್ಪಾದನೆ, ಕೈಗಾರಿಕಾ ಕಚ್ಚಾವಸ್ತುಗಳ ಉತ್ಪಾದನೆ, ಉದ್ಯೋಗಾವಕಾಶಗಳ ಹೆಚ್ಚಳ, ಜನರ ಕೊಳ್ಳುವ ಶಕ್ತಿಯ ಬೆಳವಣಿಗೆ, ಹೆಚ್ಚುವ ವಸ್ತುಗಳ ಬೇಡಿಕೆ, ಜನರ ಉತ್ಪಾದನಾ ಸಾಮರ್ಥ್ಯದ ಹೆಚ್ಚಳ ಹೀಗೆ ಇವುಗಳು ಒಂದು ದೇಶದ ಆರ್ಥಿಕತೆಯ ಬೆಳವಣಿಗೆಯ ಪರಸ್ಪರ ಪೂರಕ ವಾಗುವ ಪ್ರಧಾನ ಅಂಶಗಳಾಗಿವೆ. ಇವುಗಳ ಮೂಲಭೂತ ಅಭಿವೃದ್ಧಿಯ ಬಗ್ಗೆ ಸ್ಪಷ್ಟವಾಗಿರುವ ಒಂದು ಮುನ್ನೋಟವನ್ನು ಈ ಸಮೀಕ್ಷೆ ಕೊಡುವುದಿಲ್ಲ.
ರೈತರು, ಕಾರ್ಮಿಕರು ಹಾಗೂ ಯುವ ಜನರ ಹತಾಷೆಗಳನ್ನು ಹಾಗೂ ಆತ್ಮಹತ್ಯೆಗಳನ್ನು ತಡೆದು ಅವರಲ್ಲಿ ಹೊಸ ಭರವಸೆಯನ್ನು ಮೂಡಿಸದೆ ಹೋಗುವ ಯಾವುದೇ ನಡೆಗಳು ಬೆಳವಣಿಗೆಗೆ ಪೂರಕವಾಗಿ ವರ್ತಿಸಲು ಸಾಧ್ಯವಿಲ್ಲ. ಆರ್ಥಿಕ ಸಮೀಕ್ಷೆ ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲ ಕಸರತ್ತಾಗಿಯೇ ಗೋಚರವಾಗುತ್ತದೆ.
ನಂತರ ಈಗ ಆಯವ್ಯಯದ ವಿಚಾರಕ್ಕೆ ಬರುವುದಾದರೆ ಅದು ಆರ್ಥಿಕ ಸಮೀಕ್ಷೆಯ ಮುಂದುವರಿದ ಭಾಗವಾಗಿಯೇ ಕಾಣ ತೊಡಗುತ್ತದೆ. ಈ ಆಯವ್ಯಯವನ್ನು ಆಶೋತ್ತರಗಳ, ಆರ್ಥಿಕ ಬೆಳವಣಿಗೆಯ, ಸಾಮಾಜಿಕ ಆರೈಕೆಯ ಆಯವ್ಯಯವೆಂದು ಕರೆದುಕೊಳ್ಳಲಾಗಿದೆ. ಆದರೆ ಅದು ಕೇವಲ ಬಾಯುಪಚಾರದ ಮಾತುಗಳೆನ್ನುವುದಕ್ಕೆ ಆಯವ್ಯಯವೇ ಉದಾಹರಣೆಯಾಗಿ ಎದ್ದುಕಾಣುತ್ತದೆ.
ಅದೇ 5 ಟ್ರಿಲಿಯನ್ ಡಾಲರ್ಗಳ ಅಂದರೆ 5 ಲಕ್ಷ ಕೋಟಿ ಡಾಲರ್ಗಳ ಆರ್ಥಿಕತೆಯನ್ನಾಗಿ ಮಾಡುವ ಘೋಷಣೆಯನ್ನು ಮುಂದುವರಿಸುತ್ತದೆ. ಅದೇ ವೇಳೆ ತನ್ನ ಹಿಂದಿನ ಆಯವ್ಯಯದ ಹಣಕಾಸು ಕೊರತೆಯನ್ನು ಕಡಿಮೆಗೊಳಿಸುವ ವಿಚಾರ ಹೋಗಲಿ ಮತ್ತೂ ಹೆಚ್ಚು ಮಾಡುವ ಪ್ರಸ್ತಾಪ ಇಟ್ಟಿದೆ. ಅದು ಕಳೆದ ಬಾರಿಯ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ 3.3ರಿಂದ ಇದೀಗ ಶೇ 3.8ಕ್ಕೆ ಏರಿಕೆ ಮಾಡಿಕೊಂಡಿದೆ. ಮತ್ತೊಂದು ವರದಿಯ ಪ್ರಕಾರ ಅದು ಸುಮಾರು ಶೇ 4.6ಕ್ಕೂ ಹೆಚ್ಚಿನ ಮಟ್ಟಕ್ಕೆ ತಲುಪಿದೆ. ಸುಮಾರು 4.99 ಲಕ್ಷ ಕೋಟಿಗಳನ್ನು ಸಾಲಗಳ ಮೂಲಕ ಹೊಂದಿಸಿಕೊಳ್ಳುವ ಪ್ರಸ್ತಾವನೆಯನ್ನು ಆಯವ್ಯಯ ಹೊಂದಿದೆ. ಈಗಾಗಲೇ ದೇಶ ಸಾಲಗಳ ಭಾರದಿಂದ ತತ್ತರಿಸತೊಡಗಿದೆ. ಸಾಲದ್ದಕ್ಕೆ ಒಟ್ಟು ರಾಷ್ಟ್ರೀಯ ಉತ್ಪನ್ನದ ಬೆಳವಣಿಗೆ ಕುಸಿಯುತ್ತಾ ಹೋಗಿ ಪಾಕಿಸ್ತಾನ, ಬಾಂಗ್ಲಾ ದೇಶಗಳಿಗಿಂತಲೂ ಹಿಂದಕ್ಕೆ ಸಾಗಿದೆ.
ಇನ್ನು ಕೆಲವು ಪ್ರಧಾನ ಅಂಶಗಳೆಂದರೆ ಇದುವರೆಗೆ ಇದ್ದ ಸಾಮಾಜಿಕ ಕಲ್ಯಾಣ ಯೋಜನೆಗಳ ಅನುದಾನಗಳಿಗೆ ಮಾಡಿರುವ ಕತ್ತರಿ ಪ್ರಯೋಗಗಳು. ಅದರಲ್ಲಿ ‘ಪ್ರಧಾನ ಮಂತ್ರಿ ಕಿಸಾನ್ ಯೋಜನಾ’ದಿಂದ ಸುಮಾರು 21 ಸಾವಿರ ಕೋಟಿಗಳಷ್ಟು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾದಿಂದ ಸುಮಾರು 5,000 ಕೋಟಿಗಳಷ್ಟು, ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೊಜನೆಯಿಂದ ಸುಮಾರು 9,500 ಕೋಟಿಗಳಷ್ಟು ಹಣವನ್ನು ಕಡಿತ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೆ ರಾಜ್ಯಗಳಿಗೆ ನೀಡಬೇಕಾದ ತೆರಿಗೆಯ ಪಾಲಿನಲ್ಲಿ ಸುಮಾರು 1 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಕಡಿತ ಮಾಡಲಾಗಿದೆ. ಇವೆಲ್ಲಾ ನೇರವಾಗಿ ರಾಜ್ಯಗಳನ್ನು ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ನೇರವಾಗಿ ಬಾಧಿಸುವ ಅಂಶಗಳಾಗಿವೆ. ಇದು ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳು ಹಾಗೂ ಒಕ್ಕೂಟ ವ್ಯವಸ್ಥೆಗೆ ಆಗುತ್ತಾ ಬಂದಿರುವ ಹಾನಿಗಳನ್ನು ಮತ್ತಷ್ಟು ಹೆಚ್ಚು ಮಾಡುವಂತಹ ಸಂಗತಿಗಳಾಗಿವೆ.
ಜೂನ್ 2019ರಲ್ಲಿ ಕೊನೆಯಾಗುವ ತ್ರೈಮಾಸಿಕದ ರಿಸರ್ವ್ ಬ್ಯಾಂಕಿನ ಅಂಕಿ ಅಂಶಗಳ ಪ್ರಕಾರ ದೇಶದ ಬಾಹ್ಯ ಸಾಲ 557.4 ದಶಲಕ್ಷ ಅಮೆರಿಕ ಡಾಲರ್ಗಳಾಗಿವೆ. ಕೇಂದ್ರ ಸರಕಾರದ ಆರ್ಥಿಕ ವ್ಯವಹಾರಗಳ ವಿಭಾಗದ ಪ್ರಕಾರ ಸೆಪ್ಟಂಬರ್ 2019ರ ವೇಳೆಗೆ ಬಾಹ್ಯ ಸಾಲದ ಪ್ರಮಾಣ 557.52 ದಶಲಕ್ಷ ಅಮೆರಿಕ ಡಾಲರ್ಗಳು. ಅಂದರೆ ಇಂಡಿಯಾದ ಬಾಹ್ಯ ಸಾಲವು ಸೆಪ್ಟಂಬರ್ 2019ರ ವೇಳೆಗೆ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ.20.1 ರಷ್ಟಾಗಿದೆ. ಈ ರೀತಿಯ ಗುರುತರವಾಗಿ ದೇಶವನ್ನು ಕಾಡುತ್ತಿರುವ ಪ್ರಧಾನ ಅಂಶಗಳತ್ತ ಆಯವ್ಯಯ ಒತ್ತು ನೀಡಿ ಗಮನ ಹರಿಸದೆ 5 ಲಕ್ಷ ಕೋಟಿ ಅಮೆರಿಕ ಡಾಲರ್ಗಳ (5 ಟ್ರಿಲಿಯನ್ ಅಮೆರಿಕ ಡಾಲರ್ಗಳ) ಆರ್ಥಿಕತೆಯ ಹೂವನ್ನು ದೇಶದ ಜನರ ಕಿವಿಗಳಿಗೆ ಇಟ್ಟು ಮೈಮರೆಯುವಂತೆ ಮಾಡಲು ಸರಕಾರ ಶ್ರಮಿಸುತ್ತಲೇ ಸಾಗುತ್ತಿದೆ. ಆ 5 ಟ್ರಿಲಿಯನ್ ಆರ್ಥಿಕತೆಯಲ್ಲಿ ದೇಶದ ಜನಸಾಮಾನ್ಯರ ತಲಾ ಆರ್ಥಿಕತೆಯ ಸುಧಾರಣೆ ಯಾವ ಮಟ್ಟಕ್ಕೆ ಆಗಲಿದೆ ಎನ್ನುವ ಬಗ್ಗೆ ಮಾತ್ರ ಚಕಾರವಿಲ್ಲ. ಆದರೆ ಆ ಐದು ಟ್ರಿಲಿಯನ್ ಆರ್ಥಿಕತೆಯಲ್ಲಿ ಕಳೆದ 2014ರಿಂದ 2019ರವರೆಗೆ ಸುಮಾರು ಶೇ. 118ರಷ್ಟು ಆಸ್ತಿ ಹೆಚ್ಳಳ ಮಾಡಿಕೊಂಡು 51.4 ಬಿಲಿಯನ್ ಅಮೆರಿಕ ಡಾಲರ್ಗಳನ್ನು ಹೊಂದಿರುವ ಮುಖೇಶ್ ಅಂಬಾನಿ, ಶೇ. 121ರಷ್ಟು ಆಸ್ತಿ ಹೆಚ್ಚಳ ಮಾಡಿಕೊಂಡು 15.5 ಬಿಲಿಯನ್ ಅಮೆರಿಕ ಡಾಲರ್ಗಳ ಗೌತಮ್ ಅದಾನಿ, ಶೇ. 143ರಷ್ಟು ಆಸ್ತಿ ಹೆಚ್ಚಳ ಮಾಡಿಕೊಂಡು 14.8 ಬಿಲಿಯನ್ ಅಮೆರಿಕ ಡಾಲರ್ಗಳ ಸಂಪತ್ತನ್ನು ಪೇರಿಸಿಕೊಂಡಿರುವ ಕೊಟಕ್ ಮಹೀಂದ್ರ ಬ್ಯಾಂಕಿನ ಉದಯ್ ಕೊಟಕ್, ಶೇ. 1330ರಷ್ಟು ಆಸ್ತಿ ಹೆಚ್ಚಳ ಮಾಡಿಕೊಂಡು 14.3 ಬಿಲಿಯನ್ ಅಮೆರಿಕ ಡಾಲರ್ಗಳಷ್ಟು ಸಂಪತ್ತು ಕ್ರೋಡೀಕರಿಸಿರುವ ರಾಧಾಕೃಷ್ಣ ದಮಾನಿಯಂತವರು ಸೇರಿ ದೇಶದ ಸಂಪತ್ತಿನಲ್ಲಿ ಮತ್ತಷ್ಟು ತಮ್ಮ ಕೈಗೆ ಎಳೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ದೇಶದ ಶೇ. 73ಕ್ಕೂ ಹೆಚ್ಚಿನ ಸಂಪತ್ತನ್ನು ಒಟ್ಟು ಜನಸಂಖ್ಯೆಯ ಕೇವಲ ಶೇ. 1ರಷ್ಟಿರುವ ಇಂತಹ ಕಾರ್ಪೊರೇಟ್ ಆಸ್ತಿವಂತರ ಕೈಗೆ ಸೇರಿಸಲಾಗಿದೆ.
ಆಯವ್ಯಯ ಮಂಡಿತವಾದ ದಿನವೇ ಶೇರು ಮಾರುಕಟ್ಟೆ ಸುಮಾರು 1,000 ಪಾಯಿಂಟ್ಗಳಷ್ಟು, ಶೇ. 2.43ರಷ್ಟು ಕುಸಿತ ಕಂಡು ಹೂಡಿಕೆದಾರರ ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿಗಳಷ್ಟು ಹಣ ನಷ್ಟವಾದ ವರದಿಯಿದೆ. ಇದು ಅಕ್ಟೋಬರ್ 24, 2008ರ ನಂತರದ ಅತೀ ದೊಡ್ಡ ಕುಸಿತವೆಂದು ಹೇಳಲಾಗುತ್ತಿದೆ. ಅಂದರೆ ಕಾರ್ಪೊರೇಟ್ ಬಂಡವಾಳ ಕ್ರೋಡೀಕರಣದ ವ್ಯವಹಾರಿಕ ವಲಯವಾದ ಶೇರು ಮಾರುಕಟ್ಟೆಯಲ್ಲಿ ಚೇತರಿಕೆ ಹುಟ್ಟುಹಾಕುವ, ಹೂಡಿಕೆದಾರರಿಗೆ ಭರವಸೆ ಮೂಡಿಸುವ ಸಾಮರ್ಥ್ಯ, ಕೇಂದ್ರ ಆಯವ್ಯಯಕ್ಕೆ ಇಲ್ಲ ಎಂಬುದು ನಿರೂಪಿತವಾಯಿತು. ಇನ್ನು ಭಾರೀ ಪ್ರಚಾರ ಕೊಡುತ್ತಿರುವ ವಿದೇಶಿ ಹೂಡಿಕೆ ಹೆಚ್ಚಿಸುವ ಮಾತು ಸಾಕಾರವಾಗಲು ಸಾಧ್ಯವೇ?. ಶಿಕ್ಷಣ ಕ್ಷೇತ್ರಕ್ಕೆ ಅನುದಾನ ರೂ. 99,300 ಕೋಟಿಗಳಷ್ಟು ಎಂದು ಆಯವ್ಯಯ ಹೇಳಿದೆ. ಆ ಹಣವನ್ನು ಶಿಕ್ಷಣ ಕ್ಷೇತ್ರದಲ್ಲಿ ವಿದೇಶಿ ನೇರಹೂಡಿಕೆಯನ್ನು ಮುಕ್ತಗೊಳಿಸುವ ಮೂಲಕ ಹೊಂದಿಸುವ ಯೋಜನೆ ಸರಕಾರದ್ದಾಗಿದೆ. ಇಂಡಿಯಾದ ಶಿಕ್ಷಣ ರಂಗವನ್ನು ಸಂಪೂರ್ಣವಾಗಿ ಕಾರ್ಪೊರೇಟ್ಗಳ ಲಾಭ ಹೊರೆಯವ ಆಡೊಂಬಲವಾಗಿಸಲು ಈ ರೀತಿ ವರಸೆಯನ್ನು ಕೇಂದ್ರ ಸರಕಾರ ಮುಂದಿಟ್ಟಿದೆ. ಇದರಲ್ಲಿ ಉನ್ನತ ಹಾಗೂ ಉತ್ಕೃಷ್ಟ ಮಟ್ಟದ ಶಿಕ್ಷಣ ದೇಶದ ಯುವಜನರಿಗೆ ದೊರೆಯಲಿದೆ ಎಂಬ ಹಸಿ ಸುಳ್ಳನ್ನು ಸೇರಿಸಿ ಯುವ ಸಮೂಹವನ್ನು ಮೈಮರೆಯುವಂತೆ ಮಾಡಲು ಪ್ರಯತ್ನಿಸಿದೆ. ಹಸಿ ಸುಳ್ಳು ಯಾಕೆಂದರೆ ಕಾರ್ಪೊರೇಟಿಕರಣಗೊಂಡಾಗ ಸಹಜವಾಗಿ ಸಾಮಾನ್ಯ ಯುವಜನರಿಂದ ಈಗಿರುವ ಶಿಕ್ಷಣ ಸೌಲಭ್ಯಗಳು ಕೂಡ ಕಸಿಯಲ್ಪಡುತ್ತವೆ.
ಕೇಂದ್ರದ ಆಯವ್ಯಯ 2020 ಕೃಷಿ ಉತ್ಪಾದನೆ ಇಲ್ಲವೇ ಕೈಗಾರಿಕಾ ಉತ್ಪಾದನೆಯ ಮೇಲೆ ಪ್ರಧಾನವಾಗಿ ಆಧರಿಸಿಲ್ಲ ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುವ ವಿಚಾರ. ಕೃಷಿ ಕ್ಷೇತ್ರಕ್ಕೆ ಕಳೆದ ಆಯವ್ಯಯದಲ್ಲಿ ತೆಗೆದಿರಿಸಿದ ಹಣದಲ್ಲಿ ಬಹುತೇಕ ಪಾಲು ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನಾ ಹೆಸರಿನಲ್ಲಿ ಭಾರೀ ಕಾರ್ಪೊರೇಟ್ ವಿಮಾ ಕಂಪೆನಿಗಳಿಗೆ ನೇರವಾಗಿ ಸೇರಿಸಲಾಗಿತ್ತು. ಈ ಬಾರಿಯ ಆಯವ್ಯಯದಲ್ಲಿ 2.83 ಲಕ್ಷ ಕೋಟಿ ರೂ.ಗಳನ್ನು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆಂದು ಹೇಳಲಾಗಿದೆ. ಅದರಲ್ಲಿ ಸುಮಾರು 20 ಲಕ್ಷ ರೈತರಿಗೆ ಸೌರ ಪಂಪುಗಳು, ಕೃಷಿ ರೈಲು, ಕೃಷಿ ವಿಮಾನದಂತಹ ಯೋಜನೆಗಳು ಸೇರಿವೆ. ಅಲ್ಲದೇ ಒಟ್ಟಾರೆ ಕೃಷಿ ಕ್ಷೇತ್ರವನ್ನು ಗುತ್ತಿಗೆಯ ಹೆಸರಿನಲ್ಲಿ ಭಾರೀ ಕಾರ್ಪೊರೇಟ್ಗಳ ಕೈಗೆ ನೇರವಾಗಿ ಹಾಗೂ ಪರೋಕ್ಷವಾಗಿ ಹಸ್ತಾಂತರಿಸುವ ಹುನ್ನಾರಗಳನ್ನು ಈ ಆಯವ್ಯಯ ಹೊಂದಿದೆ.
ಸರಕಾರವು ತನ್ನ ಸಂಪನ್ಮೂಲ ಕ್ರೋಡೀಕರಣಕ್ಕೆ ಸಾರ್ವಜನಿಕ ಸಂಸ್ಥೆಗಳಲ್ಲಿರುವ ಸರಕಾರಿ ಹೂಡಿಕೆಗಳನ್ನು ವಾಪಾಸು ಪಡೆಯುವ ಇಲ್ಲವೇ ಸಾರ್ವಜನಿಕ ಸಂಸ್ಥೆಗಳನ್ನು ಪೂರ್ಣವಾಗಿ ಮಾರಾಟ ಮಾಡುವುದರ ಮೇಲೆ, ಸಾಲ ಪಡೆಯುವುದರ ಮೇಲೆ ನೆಚ್ಚಿಕೊಂಡಿದೆ. ಅದಕ್ಕಾಗಿ ಜೀವ ವಿಮಾ ನಿಗಮ, ಬಿಪಿಸಿಎಲ್ನ ತನ್ನ ಶೇರು ಬಂಡವಾಳವನ್ನು ಮಾರಾಟ ಮಾಡುವುದರ ಮೂಲಕ ಸುಮಾರು 2.1 ಲಕ್ಷ ಕೋಟಿ ರೂಪಾಯಿಗಳನ್ನು ಹೊಂದಿಸಿಕೊಳ್ಳುವ ಪ್ರಸ್ತಾವನೆಯನ್ನು ಆಯವ್ಯಯ ಹೊಂದಿದೆ. ರೈಲ್ವೆಯ ಸುಮಾರು 150ಕ್ಕೂ ಹೆಚ್ಚು ಪ್ರಯಾಣಿಕ ರೈಲುಗಳನ್ನು ಸಾರ್ವಜನಿಕ ಖಾಸಗಿ ಸಹಯೋಗದ ಹೆಸರಿನಲ್ಲಿ ಖಾಸಗೀಕರಿಸುವ ಗುರಿಯಿದೆ. ಅದೇ ವೇಳೆಯಲ್ಲಿ ಕಾರ್ಪೊರೇಟ್ ತೆರಿಗೆಯಲ್ಲಿ ಸುಮಾರು 1.5 ಲಕ್ಷ ಕೋಟಿ ರೂಪಾಯಿಗಳ ಕಡಿತವನ್ನು ಆಯವ್ಯಯ ಹೇಳುತ್ತದೆ. ಅಂದರೆ ಭಾರೀ ಕಾರ್ಪೊರೇಟ್ಗಳು ಪಾವತಿಸಬೇಕಾದ ತೆರಿಗೆಯನ್ನು ವಿನಾಯಿತಿಗೊಳಿಸುವ ಅಧಿಕೃತ ವಿಧಾನವಿದು.
ಒಟ್ಟಿನಲ್ಲಿ ಈ ಆಯವ್ಯಯ ದೇಶದ ಜನಸಾಮಾನ್ಯರಿಗೆ ಮೂಲಭೂತವಾಗಿ ಆಯವಿಲ್ಲದೇ ವ್ಯಯ ಮಾಡುವ ಚೈತನ್ಯ ಕೂಡ ವರ್ಧಿಸದಂತೆ ಮಾಡುವ ಭಾರೀ ಕಾರ್ಪೊರೇಟ್ ಪರ ವ್ಯವಸ್ಥಿತ ಕಸರತ್ತಾಗಿ ಕಾಣುತ್ತದೆ.
ಮಿಂಚಂಚೆ: nandakumarnandana67gmail.com